ಪ್ರತಿಯೊಬ್ಬ ವ್ಯಕ್ತಿಯು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢತೆಯನ್ನು ಕಾಯ್ದುಕೊಳ್ಳಲು ಆತ ಸೇವಿಸುವ ಆಹಾರ ಎಷ್ಟು ಆರೋಗ್ಯಕರವಾಗಿದೆ ಎಂಬುದು ಅತ್ಯಂತ ಪ್ರಮುಖವಾಗಿರುತ್ತದೆ. ಆದ್ದರಿಂದ ಸುರಕ್ಷಿತ ಆರೋಗ್ಯವನ್ನು ಪಡೆಯಲು ಯಾವುದೇ ಕಲಬೆರಕೆ ಇಲ್ಲದ ಆಹಾರ ಅತ್ಯಂತ ಅಗತ್ಯ. ಇಂದು ನಗರಗಳನ್ನು ಕೇಂದ್ರೀಕರಿಸಿದ ಅಭಿವೃದ್ಧಿಯತ್ತ ಜಗತ್ತು ಸಾಗುತ್ತಿದ್ದರೆ ಗ್ರಾಮೀಣ ಬದುಕು, ಸುಂದರ ಕೃಷಿ ಜೀವನ , ಹಚ್ಚಹಸಿರಿನ ಪರಿಸರ, ತಾವೇ ನೆಟ್ಟು ಬೆಳೆಸಿದ ಹಣ್ಣು-ತರಕಾರಿಗಳು, ಸಾವಿರಾರು ವರ್ಷಗಳ ಹಿಂದಿನ ಬೃಹತ್ ಮರಗಳು ಕಣ್ಮರೆಯಾಗುತ್ತಿದೆ. ಇದರಿಂದಾಗಿ ಸುರಕ್ಷಿತ ಆಹಾರ ಬಿಡಿ, ಉಸಿರಾಡಲು ಶುದ್ಧಗಾಳಿಯೇ ಇಲ್ಲದಂತಾಗಿದೆ. ಕೊರೊನ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಲಕ್ಷಗಟ್ಟಲೆ ಜನ ಸಾವನ್ನಪ್ಪಿರುವ ಅದೆಷ್ಟೋ ಕಹಿ ನೆನಪುಗಳು ಇನ್ನೂ ಹಾಗೆಯೇ ಇದೆ.
ವಿಶ್ವ ಆಹಾರ ಸುರಕ್ಷತಾ ದಿನವನ್ನು ಜೂನ್ 7 ರಂದು ಪ್ರತಿವರ್ಷ ಆಚರಿಸಲಾಗುತ್ತದೆ. ಈ ದಿನವನ್ನು ಏಕೆ ಆಚರಿಸಬೇಕು? ಇದರ ಪ್ರಮುಖ ಉದ್ದೇಶವೇನೆಂದರೆ ಜನರಿಗೆ ಶುದ್ಧ, ಸುರಕ್ಷಿತ ಮತ್ತು ಪೌಷ್ಟಿಕ ಆಹಾರದ ಮಹತ್ವದ ಬಗ್ಗೆ ಅರಿವು ಮೂಡಿಸುವುದಾಗಿದೆ. ಈ ದಿನವನ್ನು 2019ರಲ್ಲಿ ವಿಶ್ವಸಂಸ್ಥೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಪ್ರಾರಂಭಿಸಿತು. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಪ್ರತಿವರ್ಷ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳು ಆಹಾರದಿಂದ ಹರಡುವ ರೋಗಗಳಿಗೆ ಬಲಿಯಾಗುತ್ತಿದ್ದಾರೆ ಹಾಗು ವರ್ಷಕ್ಕೆ ಸುಮಾರು 600 ಮಿಲಿಯನ್ ಮಂದಿ ಆಹಾರದಿಂದ ಹರಡುವ ರೋಗಗಳಿಗೆ ತುತ್ತಾಗುತ್ತಿದ್ದಾರೆ ಅಂದರೆ 10ರಲ್ಲಿ ಒಬ್ಬರು ಕಲುಷಿತ ಆಹಾರ ಸೇವಿಸಿ ಸಾವನ್ನಪ್ಪುತ್ತಿದ್ದಾರೆ.
ಸಾಮಾನ್ಯವಾಗಿ ನಾವು ಯಾವುದೇ ಒಂದು ಅಂಗಡಿಗಳು ಅಥವಾ ಮಾಲ್ ಗಳಲ್ಲಿ ತರಕಾರಿ ಹಣ್ಣುಗಳನ್ನು ಖರೀದಿಸುವಂತ ಸಂದರ್ಭದಲ್ಲಿ ಅದನ್ನು ಪ್ಲಾಸ್ಟಿಕ್ ನಲ್ಲಿ ಸಂಗ್ರಹಿಸಿಡಲಾಗುತ್ತದೆ. ಆದರೆ ಪ್ಲಾಸ್ಟಿಕ್‌ನಲ್ಲಿರುವ ಕೆಲವೊಂದು ವಿಷಕಾರಿ ರಾಸಾಯನಿಕಗಳು ದೀರ್ಘಕಾಲದ ಸಂಪರ್ಕದಲ್ಲಿ ಆಹಾರ ಪದಾರ್ಥಗಳೊಂದಿಗೆ ವರ್ತಿಸುವ ಸಾಮರ್ಥ್ಯವನ್ನು ಹೊಂದಿವೆ. ತೇವಾಂಶವಿರುವ ಆಹಾರ ಪದಾರ್ಥಗಳು ದೀರ್ಘಕಾಲ ಪ್ಲಾಸ್ಟಿಕ್‌ನೊಂದಿಗೆ ಇದ್ದಾಗ ಅಲ್ಲಿ ರಾಸಾಯನಿಕ ಪ್ರಕ್ರಿಯೆ ಉಂಟಾಗಿ ಅವು ವಿಷವಾಗಿ ಪರಿವರ್ತನೆಗೊಳ್ಳುತ್ತವೆ.
ಆ ಪದಾರ್ಥಗಳನ್ನು ನಾವು ಸೇವಿಸುವುದರಿಂದ ಅನೇಕ ರೋಗಗಳಿಗೆ ತುತ್ತಾಗಲು ಅವಕಾಶ ಕಲ್ಪಿಸಿದಂತಾಗುತ್ತದೆ. ಮಕ್ಕಳಿಗೆ ಆಕರ್ಷಕವಾಗಿ ಕಾಣುವಂತಹ ಪ್ಲಾಸ್ಟಿಕ್ ಟಿಫನ್ ಬಾಕ್ಸ್ ಗಳು ನೀರಿನ ಬಾಟಲ್ ಗಳು ದಿನನಿತ್ಯ ಬಳಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.
ವಿಶ್ವ ಆಹಾರ ಸುರಕ್ಷತಾ ದಿನದಂದು ನಾವೆಷ್ಟು ಸ್ವಚ್ಛತೆಯನ್ನು ಕಾಪಾಡಿಕೊಳ್ಳುತ್ತೇವೆ ಎಂಬುದು ಕೂಡ ಯೋಚಿಸಬೇಕಾದ ವಿಷಯ. ಯಾಕೆಂದರೆ ಯಾವುದೇ ಒಂದು ಆಹಾರವನ್ನು ಸೇವಿಸುವುದಕ್ಕಿಂತ ಮೊದಲು ನನ್ನ ಕೈಗಳನ್ನು ಸ್ವಚ್ಛವಾಗಿ ತೊಳೆಯುವುದು ತುಂಬಾ ಅಗತ್ಯವಾಗಿರುತ್ತದೆ. ಹಾಗೆ ಮಾರುಕಟ್ಟೆಗಳಿಂದ ತಂದಂತಹ ತರಕಾರಿ, ಹಣ್ಣು, ಮಾಂಸ ಮುಂತಾದವುಗಳನ್ನು ಚೆನ್ನಾಗಿ ತೊಳೆದು ಉಪಯೋಗಿಸುವುದು ಅಗತ್ಯ..
ನಮ್ಮ ಆರೋಗ್ಯ ನಮ್ಮ ಕೈಯಲ್ಲಿ, ಎನ್ನುತ್ತಾ ಯಾರು ತಮ್ಮ ದೈನಂದಿನ ಜೀವನದಲ್ಲಿ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತಾರೋ ಅವರಿಗೆ ಆರೋಗ್ಯ ಅಭಿವದ್ದಿ ಹೊಂದುತ್ತದೆ. ಹಾಗೆಯೇ ಸುರಕ್ಷಿತ ಆಹಾರದ ಬಗ್ಗೆ ಜನರಲ್ಲಿ ಅರಿವು ಮೂಡಿಸುವದು ಅವಶ್ಯಕವಾಗಿದೆ. ಕಡಿಮೆ ಗುಣಮಟ್ಟದ ಆಹಾರ ಪದಾರ್ಥಗಳು , ಬಿಸಿಲಿನಲ್ಲಿ ಮಾರುವ ಕೊಳೆತ ಹಣ್ಣು ತರಕಾರಿಗಳನ್ನು ಖರೀದಿಸುವಾಗ ಎಚ್ಚರ ವಹಿಸುವುದು ಅತ್ಯಗತ್ಯ. ಆಹಾರವನ್ನು ಸುರಕ್ಷಿತವಾಗಿಟ್ಟುಕೊಳ್ಳುವ ಹವ್ಯಾಸಗಳನ್ನು ಬೆಳೆಸಿಕೊಂಡು ತಮ್ಮ ಉತ್ತಮ ಆರೋಗ್ಯಕ್ಕಾಗಿ ಉತ್ತಮ ಆಹಾರ ಪದಾರ್ಥಗಳನ್ನು ಸೇವಿಸೋಣ ಅದರೊಂದಿಗೆ ಇತರರಿಗೂ ಅರಿವು ಮೂಡಿಸೋಣ…..
ಅಕ್ಷತಾ ವರ್ಕಾಡಿ