World Malaria Day 2024: ವಿಶ್ವ ಮಲೇರಿಯಾ ದಿನದ ಆಚರಣೆ ಏಕೆ ಮಾಡಲಾಗುತ್ತದೆ? ರೋಗವನ್ನು ತಡೆಗಟ್ಟುವುದು

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 24, 2024 | 5:39 PM

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮಲೇರಿಯಾವು ತಡೆಗಟ್ಟಬಹುದಾದ ರೋಗವಾಗಿದ್ದು ಚಿಕಿತ್ಸೆಗೆ ಅರ್ಹವಾಗಿದೆ, ಆದರೆ ಇದು ಪ್ರಪಂಚದಾದ್ಯಂತದ ಜನರ ಆರೋಗ್ಯ ಮತ್ತು ಜೀವನದ ಮೇಲೆ ಪರಿಣಾಮ ಬೀರುತ್ತಲೇ ಇರುವುದು ಸಮಸ್ಯೆಯಾಗಿದೆ. ಆದ ಕಾರಣ ಇದನ್ನು ತಡೆಗಟ್ಟುವ ಕ್ರಮ ಸರಿಯಾದ ನಿಟ್ಟಿನಲ್ಲಿ ಸಾಗಬೇಕಾಗಿದೆ.

World Malaria Day 2024: ವಿಶ್ವ ಮಲೇರಿಯಾ ದಿನದ ಆಚರಣೆ ಏಕೆ ಮಾಡಲಾಗುತ್ತದೆ? ರೋಗವನ್ನು ತಡೆಗಟ್ಟುವುದು
Follow us on

ವಿಶ್ವ ಮಲೇರಿಯಾ ದಿನವನ್ನು ರೋಗದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮಾರಣಾಂತಿಕ ಕಾಯಿಲೆಯನ್ನು ತಡೆಯಲು ಮಾಡಿರುವ ಪ್ರಯತ್ನವಾಗಿದೆ. ಇದನ್ನು ಪ್ರತಿವರ್ಷ ಎ. 25 ರಂದು ಆಚರಣೆ ಮಾಡಲಾಗುತ್ತದೆ. ಈ ಜಾಗತಿಕ ಆರೋಗ್ಯ ಸವಾಲನ್ನು ಎದುರಿಸಲು ಮತ್ತು ನಿರ್ಮೂಲನೆ ಮಾಡುವಲ್ಲಿ ಈ ದಿನ ಪ್ರಮುಖ ಪಾತ್ರ ವಹಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮಲೇರಿಯಾವು ತಡೆಗಟ್ಟಬಹುದಾದ ರೋಗವಾಗಿದ್ದು ಚಿಕಿತ್ಸೆಗೆ ಅರ್ಹವಾಗಿದೆ, ಆದರೆ ಇದು ಪ್ರಪಂಚದಾದ್ಯಂತದ ಜನರ ಆರೋಗ್ಯ ಮತ್ತು ಜೀವನದ ಮೇಲೆ ಪರಿಣಾಮ ಬೀರುತ್ತಲೇ ಇರುವುದು ಸಮಸ್ಯೆಯಾಗಿದೆ. ಆದ ಕಾರಣ ಇದನ್ನು ತಡೆಗಟ್ಟುವ ಕ್ರಮ ಸರಿಯಾದ ನಿಟ್ಟಿನಲ್ಲಿ ಸಾಗಬೇಕಾಗಿದೆ.

ಮಲೇರಿಯಾ ರೋಗ ಎಂದರೇನು?

ಮಲೇರಿಯಾವು ಪ್ಲಾಸ್ಮೋಡಿಯಂ ಎಂಬ ಪರಾವಲಂಬಿಯಿಂದ ಉಂಟಾಗುವ ಕಾಯಿಲೆಯಾಗಿದೆ. ಇದು ಸೋಂಕಿತ ಅನಾಫಿಲಿಸ್ ಹೆಣ್ಣು ಸೊಳ್ಳೆಗಳ ಕಡಿತದ ಮೂಲಕ ಮನುಷ್ಯರಿಗೆ ಹರಡುತ್ತದೆ. ಮಲೇರಿಯಾ ವಿರೋಧಿ ಔಷಧಿಗಳು, ಕೀಟನಾಶಕಗಳು ಮತ್ತು ಸೊಳ್ಳೆ ಪರದೆಗಳ ಬಳಕೆಯ ಮೂಲಕ ರೋಗವನ್ನು ತಡೆಗಟ್ಟಬಹುದು. ಸೊಳ್ಳೆ ಬಾರದಂತೆ ಕಾಪಾಡಿಕೊಳ್ಳುವುದರಿಂದ ಮಲೇರಿಯಾದಿಂದ ದೂರ ಇರಬಹುದು.

2022 ರ ವಿಶ್ವ ಮಲೇರಿಯಾ ವರದಿ ಪ್ರಕಾರ, 2021 ರಲ್ಲಿ ಮಲೇರಿಯಾ ಪ್ರಕರಣಗಳು ಅಂದಾಜು 6,19,000 ಜನರನ್ನು ಬಲಿ ತೆಗೆದುಕೊಂಡಿದೆ, 2020ಕ್ಕೆ ಹೋಲಿಸಿದರೆ 2021 ರಲ್ಲಿ ಸುಮಾರು 247 ಮಿಲಿಯನ್ ಹೊಸ ಮಲೇರಿಯಾ ಪ್ರಕರಣಗಳು ದಾಖಲಾಗಿವೆ. ಆಫ್ರಿಕಾದಲ್ಲಿ, ಇದು ಪ್ರಾಣಹಾನಿಗೆ ಕಾರಣವಾಗಿರುವ ರೋಗವಾಗಿದ್ದು ವಿಶೇಷವಾಗಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಂಡುಬರುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಆಫ್ರಿಕನ್‌ ದೇಶಗಳಲ್ಲಿ ವಾಸಿಸುವ 5 ವರ್ಷದ ಒಳಗಿನ ಮಕ್ಕಳಲ್ಲಿ ಮೂರನೇ ಎರಡಷ್ಟು ಮಕ್ಕಳು ಮಲೇರಿಯಾದಿಂದ ಸಾವನ್ನಪ್ಪುತ್ತಿದ್ದಾರೆ.

ಈ ದಿನದ ಇತಿಹಾಸವೇನು?

ವರ್ಲ್ಡ್‌ ಹೆಲ್ತ್‌ ಅಸೆಂಬ್ಲಿಯು 2007ರಲ್ಲಿ ಏಪ್ರಿಲ್ 25 ಅನ್ನು ವಿಶ್ವ ಆರೋಗ್ಯ ದಿನವೆಂದು ಗೊತ್ತುಪಡಿಸಿತು. 2008ರ ಎ. 25 ರಂದು ಮೊದಲ ಬಾರಿಗೆ ವಿಶ್ವ ಮಲೇರಿಯಾದ ದಿನವನ್ನು ಆಚರಣೆ ಮಾಡಲಾಯಿತು. ಪ್ರತಿ ವರ್ಷವೂ ಈ ರೋಗವನ್ನು ನಿರ್ಮೂಲನೆ ಮಾಡಲು ನಿಗದಿಪಡಿಸಿದ ಗುರಿಗಳು ಮತ್ತು ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಆಚರಣೆ ನಡೆಯುತ್ತದೆ.

ಮಹತ್ವವೇನು?

ವಿಶ್ವ ಮಲೇರಿಯಾ ದಿನವು ರೋಗದ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಈ ರೋಗದ ಹರಡುವಿಕೆಯನ್ನು ನಿಯಂತ್ರಿಸಲು ಹಾಗೂ ಅದನ್ನು ತಡೆಗಟ್ಟುವ ಪ್ರಯತ್ನಗಳ ಬಗ್ಗೆ ಜಾಗೃತಿ ಮೂಡಿಸಲು ಒಂದು ಅವಕಾಶವಾಗಿದೆ. ಮಲೇರಿಯಾ ವಿರುದ್ಧದ ಈ ಹೋರಾಟದಲ್ಲಿ ಸರ್ಕಾರ ಮತ್ತು ಸಂಸ್ಥೆಗಳು ಒಗ್ಗೂಡಲು ಇದು ಒಂದು ಅವಕಾಶ ಮಾಡಿಕೊಡುತ್ತದೆ. ಹಾಗಾಗಿ ಈ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡುವ ಮೂಲಕ ಈ ರೋಗವನ್ನು ನಿಯಂತ್ರಣ ಮಾಡಬೇಕಿದೆ.

ಇದನ್ನೂ ಓದಿ: ಶುದ್ಧ ಚಿನ್ನ ಯಾವುದು? 24 ಕ್ಯಾರಟ್, 22 ಕ್ಯಾರಟ್, 18 ಕ್ಯಾರಟ್ ಯಾವ ಚಿನ್ನ ಬೆಸ್ಟ್? 

ಮಲೇರಿಯಾ ರೋಗವನ್ನು ತಡೆಗಟ್ಟುವುದು ಹೇಗೆ?

ರೋಗವನ್ನು ಗುಣಪಡಿಸುವುದಕ್ಕಿಂತ ತಡೆಗಟ್ಟುವುದು ಉತ್ತಮ ಎನ್ನುವುದನ್ನು ನೀವು ಕೇಳಿರಬಹುದು. ಹಾಗಾಗಿ ರಾತ್ರಿಯಲ್ಲಿ ಹೊರಗೆ ಬರುವಾಗ ಉದ್ದನೆಯ ತೋಳು, ಪ್ಯಾಂಟ್ ಹೊಂದಿರುವ ಉಡುಪುಗಳನ್ನೇ ಧರಿಸಿ. ರಾತ್ರಿ ಸಮಯದಲ್ಲಿ ಮಲುಗುವ ಜಗದಲ್ಲಿ ಸೊಳ್ಳೆ ಪರದೆಗಳನ್ನು ಬಳಸಿ. ಮನೆಯ ಪರಿಸರದಲ್ಲಿ ನೀರು ನಿಲ್ಲಲು ಎಂದಿಗೂ ಅವಕಾಶ ಕೊಡಬೇಡಿ. ಯಾವಾಗಲೂ ನೀರಿನ ತೊಟ್ಟಿಗಳಿಗೆ ಮುಚ್ಚಳ ಮುಚ್ಚುವುದನ್ನು ಮರೆಯಬೇಡಿ. ಮಾನ್ಸೂನ್ ಅಥವಾ ಬೇಸಿಗೆಯಲ್ಲಿ ನಿಮ್ಮನ್ನು ಚೆನ್ನಾಗಿ ಹೈಡ್ರೇಟ್ ಆಗಿರಿಸಿಕೊಳ್ಳಿ ಇದರಿಂದ ಮಲೇರಿಯಾ ರೋಗವನ್ನು ತಡೆಯಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ