ಮಾನವನು ಬುದ್ದಿವಂತನಾಗುತ್ತಿದ್ದಂತೆ ಪರಿಸರವನ್ನು ಹಾಳು ಮಾಡುವ ಕೆಲಸಕ್ಕೆ ಕೈ ಹಾಕಿದ್ದಾನೆ. ಹೌದು, ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಮಾರಕ ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ಬಳಕೆ ಮಾಡುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಬಳಕೆ ಮಾಡುವುದಲ್ಲದೆ ಸಿಕ್ಕ ಸಿಕ್ಕಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಎಸೆದು ಪರಿಸರವನ್ನು ಹಾಳು ಮಾಡುತ್ತಿದ್ದಾರೆ. ಆದರೆ ಈ ಪ್ಲಾಸ್ಟಿಕ್ ಗಳು ಮಣ್ಣಿನಲ್ಲಿ ಕರಗಲು ನೂರಾರು ವರ್ಷಗಳೇ ಬೇಕಾಗುತ್ತದೆ. ಹೀಗಾಗಿ ಪ್ರಕೃತಿ ಕಲುಷಿತಗೊಳ್ಳುವುದಲ್ಲದೇ, ಮಾನವನ ಆರೋಗ್ಯದ ಮೇಲೂ ನಾನಾ ರೀತಿಯ ಪರಿಣಾಮ ಬೀರುತ್ತದೆ. ಆದರೆ ಈ ಪೇಪರ್ ಬ್ಯಾಗ್ ಗಳು ಪರಿಸರ ಸ್ನೇಹಿಯಾಗಿರುವುದರಿಂದ ಮರುಬಳಕೆ ಮಾಡಬಹುದಾಗಿದ್ದು ಪರಿಸರಕ್ಕೆ ಯಾವುದೇ ರೀತಿಯ ಹಾನಿಯಿಲ್ಲ. ಪ್ಲಾಸ್ಟಿಕ್ ಚೀಲದ ಬಳಕೆಯನ್ನು ತಪ್ಪಿಸಿ, ಪೇಪರ್ ಬ್ಯಾಗ್ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಪ್ರತಿ ವರ್ಷ ವಿಶ್ವ ಪೇಪರ್ ಬ್ಯಾಗ್ ದಿನವನ್ನು ಆಚರಿಸಲಾಗುತ್ತದೆ.
ವಿಲಿಯಂ ಗುಡೆಲ್ ರಚಿಸಿದ ಪೇಪರ್ ಬ್ಯಾಗ್ ಯಂತ್ರಕ್ಕೆ ಪೇಟೆಂಟ್ ಸಿಕ್ಕ ದಿನವಾಗಿದೆ. ವಿಲಿಯಂ ಗುಡೆಲ್ ಅವರ ಈ ಪೇಪರ್ ಬ್ಯಾಗ್ ತಯಾರಿಸುವ ಯಂತ್ರಕ್ಕೆ 12 ನೇ ಜುಲೈ 1859 ರಂದು ಪೇಟೆಂಟ್ ನೀಡಲಾಯಿತು. ಈ ಸವಿನೆನಪಿಗಾಗಿ ಪ್ರತಿವರ್ಷವೂ ಈ ದಿನದಂದು ವಿಶ್ವ ಪೇಪರ್ ಬ್ಯಾಗ್ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.
ಪೇಪರ್ ಬ್ಯಾಗ್ ಯಂತ್ರದ ಆರಂಭವನ್ನು 1852 ರಲ್ಲಿ ಅಮೇರಿಕಾದ ಫ್ರಾನ್ಸಿಸ್ ವೋಲ್ ಎಂಬವರು ಪ್ರಾರಂಭಿಸಿದರು. ಮತ್ತೆ 1871 ರಲ್ಲಿ ಮಾರ್ಗರೇಟ್ ಇ ನೈಟ್ ಎಂಬವರು ಕಾಗಗದ ಚೀಲದ ಉತ್ಪಾದನಾ ಯಂತ್ರವನ್ನು ಸ್ಥಾಪಿಸಿ, ಈ ಯಂತ್ರದಿಂದ ಫ್ಲಾಟ್-ಬಾಟಮ್ ಪೇಪರ್ ಬ್ಯಾಗ್ಗಳನ್ನು ತಯಾರಿಸಲಾಯಿತು. ಈ ಬ್ಯಾಗ್ ಜನಪ್ರಿಯತೆಯನ್ನು ಪಡೆದುಕೊಂಡ ಕಾರಣ ನೈಟ್ ಅವರನ್ನು ‘ದಿನಸಿ ಚೀಲಗಳ ತಾಯಿ’ ಎಂದು ಕರೆಯಲಾಯಿತು. ಆದಾದ ಬಳಿಕ 1883 ರಲ್ಲಿ ಚಾರ್ಲ್ಸ್ ಸ್ವಿಲ್ವೆಲ್ ಚೌಕಾಕಾರದ ತಳಭಾಗದ ಚೀಲಗಳನ್ನು ತಯಾರಿಸಿದರು. 1912 ರಲ್ಲಿ, ವಾಲ್ಟರ್ ಬಬ್ನರ್ ಎಂಬವರು ಚೀಲಗಳನ್ನು ಕೈಯಲ್ಲಿ ಹಿಡಿದುಕೊಂಡು ಹೋಗಲು ಸುಲಭವಾಗುವಂತೆ ಹ್ಯಾಂಡಲ್ ಹೊಂದಿರುವ ಕಾಗದದ ಚೀಲವನ್ನು ಸಿದ್ಧಪಡಿಸಿದರು. ಆದರೆ ಇದೀಗ ಈ ಪೇಪರ್ ಬ್ಯಾಗ್ ಗಳಲ್ಲಿ ಹಲವಾರು ಮಾರ್ಪಾಡುಗಳನ್ನು ಹೊಂದಿದ್ದು, ವಿವಿಧ ವಿನ್ಯಾಸದ ಪೇಪರ್ ಬ್ಯಾಗ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಇದನ್ನೂ ಓದಿ: World Population Day 2024 : ದೇಶದ ಅಭಿವೃದ್ಧಿಗೆ ಹೊರೆಯಾಗದಿರಲಿ ಜನ ಸಂಖ್ಯೆ ಹೆಚ್ಚಳ
ಪ್ಲಾಸ್ಟಿಕ್ ಚೀಲಗಳ ಬಳಕೆ ಕಡಿಮೆಯಾಗಿದೆಯೇ ಹೊರತು ಸಂಪೂರ್ಣವಾಗಿ ನಿಂತಿಲ್ಲ. ಹೀಗಾಗಿ ಈ ದಿನದಂದು ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಕಡಿಮೆಗೊಳಿಸಿ ಪೇಪರ್ ಬ್ಯಾಗ್ ಬಳಸಲು ಉತ್ತೇಜಿಸುವುದಾಗಿದೆ. ಅದಲ್ಲದೇ ಈ ಪ್ಲಾಸ್ಟಿಕ್ ಚೀಲಗಳ ಬಳಕೆಯು ಪರಿಸರಕ್ಕೆ ಎಷ್ಟು ಹಾನಿಕಾರಕ ಎಂಬುದರ ಕುರಿತು ಜಾಗೃತಿ ಕಾರ್ಯಕ್ರಮಗಳು, ಅಭಿಯಾನಗಳು ಹಾಗೂ ಜಾಥಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ