World Rainforest Day 2026: ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಹಚ್ಚ ಹಸಿರ ಮಳೆಕಾಡುಗಳ ಪಾತ್ರ ಅಪಾರ
ಮಳೆಕಾಡುಗಳು ಭೂಮಿಯ ಮೇಲಿನ ಅತ್ಯಂತ ರೋಮಾಂಚಕ ಸ್ಥಳಗಳಲ್ಲಿ ಒಂದಾಗಿದೆ. ವಿವಿಧ ರೀತಿಯ ಮರಗಳ, ಔಷಧೀಯ ಸಸ್ಯಗಳು, ಪ್ರಾಣಿಗಳು ಮತ್ತು ಕೀಟಗಳ ನೆಲೆಯಾಗಿರುವ ಮಳೆಕಾಡುಗಳು ಜಗತ್ತಿಗೆ ಬೇಕಾದ ಶೇ. 28 ರಷ್ಟು ಆಮ್ಲಜನಕವನ್ನು ಉತ್ಪಾದಿಸುತ್ತವೆ. ಜೊತೆಗೆ ಇವು ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು ನಿರ್ಣಾಯಕವಾಗಿದೆ. ಆದರೆ ಇಂದು ಮಳೆಕಾಡುಗಳು ಸಾಕಷ್ಟು ಬೆದರಿಕೆಗಳನ್ನು ಎದುರಿಸುತ್ತಿವೆ. ಆದ್ದರಿಂದ ಮಳೆಕಾಡುಗಳನ್ನು ರಕ್ಷಣೆ ಮಾಡಬೇಕೆಂಬ ಸಲುವಾಗಿ ಪ್ರತಿವರ್ಷ ಜೂನ್ 22 ರಂದು ವಿಶ್ವ ಮಳೆಕಾಡು ದಿನವನ್ನು ಆಚರಿಸಲಾಗುತ್ತದೆ.

ಮಳೆಕಾಡು (Rainforest) ಎಂದ ತಕ್ಷಣ ಮೊದಲಿಗೆ ನೆನಪಿಗೆ ಬರೋದೇ ಆಮೆಜಾನ್ ಕಾಡು. ಇದು ವಿಶ್ವದ ಅತೀ ದೊಡ್ಡ ಮಳೆಕಾಡು. ಈ ಮಳೆಕಾಡುಗಳನ್ನು ಸಾಮಾನ್ಯವಾಗಿ ಭೂಮಿಯ ಶ್ವಾಸಕೋಶಗಳು ಎಂದು ಕರೆಯಲಾಗುತ್ತದೆ. ಇವುಗಳು ಇಂಗಾಲದ ಡೈ ಆಕ್ಸೈಡನ್ನು ಹೀರಿಕೊಳ್ಳುತ್ತವೆ ಮತ್ತು ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಶುದ್ಧ ನೀರು, ಗಾಳಿ ಮತ್ತು ಆಮ್ಲಜನಕ ನಮ್ಮನ್ನು ತಲುಪುತ್ತಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಅದು ಮಳೆಕಾಡುಗಳು. ಈ ದಟ್ಟ ಕಾನನಗಳು ಜಗತ್ತಿಗೆ ಬೇಕಾದ ಶೇ. 28 ರಷ್ಟು ಆಮ್ಲಜನಕವನ್ನು ಉತ್ಪಾದಿಸುತ್ತವೆ. ಅಲ್ಲದೆ ಪರಿಸರ ಸಮತೋಲನವನ್ನು ಕಾಪಾಡುವಲ್ಲೂ ಇವು ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಆದರೆ ಇಂದು ಅರಣ್ಯ ನಾಶ, ಹವಾಮಾನ ಬದಲಾವಣೆ ಮಳೆಕಾಡುಗಳಿಗೆ ಬೆದರಿಕೆಯಾಗಿ ಪರಿಣಮಿಸಿದ್ದು, ಇವುಗಳ ರಕ್ಷಣೆಯ ಅಗತ್ಯತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಜೂನ್ 22 ರಂದು ವಿಶ್ವ ಮಳೆಕಾಡು ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮತ್ತು ಮಹತ್ವವನ್ನು ತಿಳಿಯಿರಿ.
ವಿಶ್ವ ಮಳೆಕಾಡು ದಿನದ ಇತಿಹಾಸವೇನು?
ಪ್ರತಿ ವರ್ಷ ಜೂನ್ 22 ಅನ್ನು ವಿಶ್ವ ಮಳೆಕಾಡು ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನವನ್ನು ರೇನ್‌ಫಾರೆಸ್ಟ್ ಪಾರ್ಟ್‌ನರ್‌ಶಿಪ್ ಎಂಬ ಸಂಸ್ಥೆ ಮಳೆಕಾಡುಗಳನ್ನು ರಕ್ಷಿಸುವ ಉದ್ದೇಶದಿಂದ ಪ್ರಾರಂಭಿಸಿತು. ಇದರ ನಂತರ, 2017 ರಲ್ಲಿ ಮೊದಲ ಬಾರಿಗೆ ಈ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಮಳೆಕಾಡುಗಳ ಮಹತ್ವ ಮತ್ತು ಅವುಗಳ ರಕ್ಷಣೆ ಎಷ್ಟು ಮುಖ್ಯ ಎಂದು ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ವಿಶ್ವ ಮಳೆಕಾಡು ದಿನದ ಮಹತ್ವವೇನು?
- ನಮ್ಮ ಪರಿಸರ ಮತ್ತು ಭವಿಷ್ಯಕ್ಕೆ ಮಳೆಕಾಡುಗಳ ಸಂರಕ್ಷಣೆ ಎಷ್ಟು ಮುಖ್ಯ ಎಂಬುದನ್ನು ವಿಶ್ವ ಮಳೆಕಾಡು ದಿನವು ನಮಗೆ ನೆನಪಿಸುತ್ತದೆ. ಭವಿಷ್ಯದ ಪೀಳಿಗೆಗಳು ಸಹ ಅವುಗಳ ಪ್ರಯೋಜನವನ್ನು ಪಡೆದುಕೊಳ್ಳಲು ಮತ್ತು ಆರೋಗ್ಯಕರ ವಾತಾವರಣದಲ್ಲಿ ಬದುಕಲು ಸಾಧ್ಯವಾಗುವಂತೆ ಮಳೆಕಾಡುಗಳನ್ನು ರಕ್ಷಿಸಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.
- ಮಳೆಕಾಡುಗಳ ದಿನವು ಪರಿಸರ ಸಂರಕ್ಷಣೆಯ ಶಿಕ್ಷಣವನ್ನು ಉತ್ತೇಜಿಸುತ್ತದೆ, ಇದರ ಮೂಲಕ ಜನರು ಪ್ರಕೃತಿಯ ಮಹತ್ವವನ್ನು ಅರ್ಥಮಾಡಿಕೊಳ್ಳಬಹುದು ಮತ್ತು ಪರಿಸರವನ್ನು ರಕ್ಷಿಸುವ ಬಗ್ಗೆ ಜಾಗೃತರಾಗಬಹುದು.
- ಈ ವಿಶೇಷ ದಿನದಂದು ಮಳೆಕಾಡು ಸಂರಕ್ಷಣೆಯನ್ನು ಉತ್ತೇಜಿಸಲು ಪ್ರಪಂಚದಾದ್ಯಂತ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಮಳೆಕಾಡುಗಳ ಮಹತ್ವ, ಅವುಗಳು ಎದುರಿಸುತ್ತಿರುವ ಬೆದರಿಕೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತದೆ.
ಇದನ್ನೂ ಓದಿ: ಬರಡಾಗುತ್ತಿರುವ ಭೂಮಿಯ ರಕ್ಷಣೆ ನಮ್ಮೆಲ್ಲರ ಹೊಣೆ
ಮಳೆಕಾಡುಗಳ ಪ್ರಾಮುಖ್ಯತೆ ಮತ್ತು ಪ್ರಯೋಜನಗಳು:
- ಮಳೆಕಾಡುಗಳು ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುವ ಮೂಲಕ ಭೂಮಿಯ ಮೇಲಿನ ಆಮ್ಲಜನಕದ ಮಟ್ಟವನ್ನು ಕಾಯ್ದುಕೊಳ್ಳುತ್ತವೆ, ಹೀಗಾಗಿ ಭೂಮಿಯ ಹವಾಮಾನ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಮತ್ತು ಜಾಗತಿಕ ತಾಪಮಾನ ಏರಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.
- ಮಳೆಕಾಡುಗಳು ನೀರಿನ ಚಕ್ರವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ, ನದಿಗಳು, ಸರೋವರಗಳು ಮತ್ತು ಅಂತರ್ಜಲ ಮೂಲಗಳನ್ನು ಮರುಪೂರಣ ಮಾಡಲು ಸಹಾಯ ಮಾಡುತ್ತವೆ, ಕುಡಿಯುವ ನೀರಿನ ಲಭ್ಯತೆಯನ್ನು ಹೆಚ್ಚಿಸುತ್ತವೆ.
- ಈ ದಟ್ಟಾರಣ್ಯದಲ್ಲಿರುವ ಮರಗಳ ಬೇರುಗಳು ಮಣ್ಣನ್ನು ಹಿಡಿದಿಟ್ಟುಕೊಳ್ಳುತ್ತವೆ, ಮಣ್ಣಿನ ಸವೆತವನ್ನು ಕಡಿಮೆ ಮಾಡುತ್ತವೆ, ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ ಮತ್ತು ಪ್ರವಾಹದ ಅಪಾಯವನ್ನು ಕಡಿಮೆ ಮಾಡುತ್ತವೆ.
- ಮಳೆಕಾಡುಗಳು ಸಾಂಪ್ರದಾಯಿಕ ಮತ್ತು ಆಧುನಿಕ ಔಷಧದಲ್ಲಿ ಬಳಸಲಾಗುವ ವಿವಿಧ ಔಷಧೀಯ ಸಸ್ಯಗಳಿಗೆ ನೆಲೆಯಾಗಿದ್ದು, ಅನೇಕ ರೋಗಗಳಿಗೆ ಚಿಕಿತ್ಸೆ ನೀಡಲು ಸಹಾಯಕವಾಗಿವೆ.
- ಪ್ರಪಂಚದಾದ್ಯಂತ 1.6 ಶತಕೋಟಿ ಜನರು ಆಹಾರ, ಆಶ್ರಯ, ಔಷಧಕ್ಕಾಗಿ ನೇರವಾಗಿ ಅಥವಾ ಪರೋಕ್ಷವಾಗಿ ಮಳೆ ಕಾಡುಗಳ ಮೇಲೆ ಅವಲಂಬಿತರಾಗಿದ್ದಾರೆ. ಬ್ರೆಜಿಲ್, ಇಂಡೋನೇಷ್ಯಾ ಮತ್ತು ಕಾಂಗೋದಲ್ಲಿನ ಸ್ಥಳೀಯ ಸಮುದಾಯಗಳ ಸಾಂಪ್ರದಾಯಿಕ ಜ್ಞಾನ ಮತ್ತು ಸಂಸ್ಕೃತಿಯು ಈ ಕಾಡುಗಳೊಂದಿಗೆ ಸಂಬಂಧ ಹೊಂದಿದೆ.
- ಮಳೆಕಾಡುಗಳು ಜೀವವೈವಿಧ್ಯತೆಯ ನೆಲೆಯಾಗಿದ್ದು, ಇವು ಪಕ್ಷಿ-ಪ್ರಾಣಿ ಸಂಕುಲಗಳಿಗೆ ಆಶ್ರಯ ತಾಣವಾಗಿದೆ. ಅಮೆಜಾನ್ ಮಳೆಕಾಡು ಸುಮಾರು 40,000 ಸಸ್ಯ ಪ್ರಭೇದಗಳು, 1,300 ಪಕ್ಷಿ ಪ್ರಭೇದಗಳು ಮತ್ತು 430 ಸಸ್ತನಿ ಪ್ರಭೇದಗಳಿಗೆ ನೆಲೆಯಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




