New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.
ಟಿವಿ9 ಕನ್ನಡ ಡಿಜಿಟಲ್ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್ ನಂಬರ್ ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com
*
ಕೃತಿ : ಮಾರ್ಗಾನ್ವೇಷಣೆ
ಲೇಖಕರು: ಪ್ರೊ. ನಿತ್ಯಾನಂದ ಬಿ. ಶೆಟ್ಟಿ
ಪುಟ : 304
ಬೆಲೆ : ರೂ. 350
ಮುಖಪುಟ ವಿನ್ಯಾಸ : ಸಿದ್ಧಲಿಂಗಸ್ವಾಮಿ ಹಿರೇಮಠ
ಪ್ರಕಾಶನ: ಬೆಸುಗೆ ಪ್ರಕಾಶನ
*
ತುಮಕೂರು ವಿಶ್ವವಿದ್ಯಾನಿಲಯದ ಡಿವಿಜಿ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿರುವ ಪ್ರೊ. ನಿತ್ಯಾನಂದ ಬಿ. ಶೆಟ್ಟಿ ಅವರ ‘ಮಾರ್ಗಾನ್ವೇಷಣೆ’ ಪುಸ್ತಕವು ನಾಳೆ, ಆಗಸ್ಟ್ 7 ರಂದು ಲೋಕಾರ್ಪಣೆಗೊಳ್ಳಲಿದೆ.
ಸಾಹಿತ್ಯ ಸಂಶೋಧನೆಯ ಮುಖ್ಯ ಮಾದರಿಗಳನ್ನು ಮತ್ತು ಆ ದಾರಿಯ ಆಳ-ಅಗಲಗಳನ್ನು ವಿವರವಾಗಿ ಮತ್ತು ವಿಮರ್ಶಾತ್ಮಕವಾಗಿ ಈ ಕೃತಿಯಲ್ಲಿ ಚರ್ಚಿಸಲಾಗಿದೆ. ‘ಸಂಶೋಧನೆಯ : ಹೆಜ್ಜೆ-ಜಾಡು’, ‘ಸಂಶೋಧನೆ : ವಿಧಾನ- ವಿಧಾನಕ್ರಮ’, ‘ಕನ್ನಡ ಸಂಶೋಧನೆಯ: ಆರಂಭದ ದಾರಿಗಳು’, ‘ಕನ್ನಡ ಸಾಹಿತ್ಯ ಸಂಶೋಧನೆ: ವಿಭಿನ್ನ ನೆಲೆಗಳು’, ‘ಸಾಹಿತ್ಯ ಸಂಶೋಧನೆ- ಸಂಶೋಧನಾ ಸಂಸ್ಕೃತಿ’ ಎಂಬ ಅಧ್ಯಾಯಗಳನ್ನು ಒಳಗೊಂಡಿರುವ ಈ ಪುಸ್ತಕವು ‘ಸಂಶೋಧನಾಸಕ್ತ’ ಮತ್ತು ‘ಮಾರ್ಗದರ್ಶಕ’ ಎಂಬ ಎರಡು ಪಾತ್ರಗಳ ನಡುವೆ ನಡೆಯುವ ಸಂವಾದದ ಸ್ವರೂಪದಲ್ಲಿದೆ. ಈ ಪುಸ್ತಕದ ಒಂದು ಅಧ್ಯಾಯದ ಆಯ್ದ ಭಾಗ ಇಲ್ಲಿದೆ.
ಮಾರ್ಗದರ್ಶಕ: ಕುವೆಂಪು, ಮಾಸ್ತಿ, ಬೇಂದ್ರೆ, ಕಾರಂತ ಮತ್ತು ಪುತಿನರಂಥವರ ಸಾಹಿತ್ಯವನ್ನು ಅಧ್ಯಯನ ಮಾಡುವಾಗ ಈ ಧೀಮಂತರ ಸೃಜನಶೀಲ ನಿರೂಪಣೆಯನ್ನು, ಅವರ ಕಥನಕ್ರಮವನ್ನು, ಅವರುಗಳ ಸಾಹಿತ್ಯದ ರಸಮೀಮಾಂಸೆಯನ್ನು ವಿವರಿಸುವುದು ಒಂದು ಬಗೆಯ ಸಂಶೋಧನೆ. ಅವರು ಕಂಡರಿಸಿದ ದಾರ್ಶನಿಕತೆಯನ್ನು, ಮುಪ್ಪುರಿಗೊಳಿಸಿದ ಲೋಕಜ್ಞಾನವನ್ನು, ಅನುಭವವನ್ನು ಅನುಭಾವವಾಗಿಸಿದ ಅವರ ಕಲೆಗಾರಿಕೆಯನ್ನು ಅಧ್ಯಯನ ಮಾಡುವುದು ಇನ್ನೊಂದು ಬಗೆಯ ಸಂಶೋಧನೆ. ನೆಪ ಮಾತ್ರಕ್ಕೆ ಪಠ್ಯವನ್ನು ಪರಿಗಣಿಸುವ ಅಂದರೆ ಪಠ್ಯವನ್ನು ಆಕರವಾಗಿ ಮಾತ್ರ ಪರಿಗಣಿಸುವ ಸಂಸ್ಕೃತಿ ಅಧ್ಯಯನಕ್ಕಿಂತಲೂ; ಪಠ್ಯವನ್ನು ಕೇಂದ್ರವಾಗಿರಿಸಿಕೊಂಡು ಮತ್ತು ಪಠ್ಯ ವಿಶ್ಲೇಷಣೆಯ ಮೂಲಕ ಸಂಸ್ಕೃತಿ ಅಧ್ಯಯನ ನಡೆಸುವ ಸಂಶೋಧನೆಯ ದಾರಿ ಬಹಳ ಮುಖ್ಯವಾದುದು. ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ನಾಂದೀ ವಾಕ್ಯವಾಗಿರುವ ಈ ಸಾಲುಗಳನ್ನು ಗಮನಿಸಿ:
ಇಲ್ಲಿ
ಯಾರೂ ಮುಖ್ಯರಲ್ಲ;
ಯಾರೂ ಅಮುಖ್ಯರಲ್ಲ;
ಯಾವುದೂ ಯಃಕಶ್ಚಿತವಲ್ಲ!
ಇಲ್ಲಿ
ಯಾವುದಕ್ಕೂ ಮೊದಲಿಲ್ಲ;
ಯಾವುದಕ್ಕೂ ತುದಿಯಿಲ್ಲ;
ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ;
ಕೊನೆಮುಟ್ಟುವುದೂ ಇಲ್ಲ!
ಇಲ್ಲಿ
ಅವಸರವೂ ಸಾವಧಾನದ ಬೆನ್ನೇರಿದೆ!
ಇಲ್ಲಿ
ಎಲ್ಲಕ್ಕೂ ಇದೆ ಅರ್ಥ;
ಯಾವುದೂ ಅಲ್ಲ ವ್ಯರ್ಥ;
ನೀರೆಲ್ಲ ಊ ತೀರ್ಥ!
-ಇವು ಕುವೆಂಪು ಅವರ ಸಾಲುಗಳಲ್ಲ. ಇವು ಇಡಿಯ ನವೋದಯದ ಸಾಲುಗಳು. ಕನ್ನಡದ ನವೋದಯದ ಮೌಲಿಕ ನೆಲೆಯನ್ನು ತನ್ನ ಗರ್ಭದಲ್ಲಿ ಧರಿಸಿದ ಬೀಜವಾಕ್ಯದಂತಿರುವ ಈ ಮಾತುಗಳು ಸಾಹಿತ್ಯದ ಮಾತುಗಳು ಮಾತ್ರವಾಗಿರದೆ, ಭಾರತೀಯ ಸಮಾಜವಾದವನ್ನು ಉಜ್ವಲಗೊಳಿಸಿ, ಚಲನಶೀಲಗೊಳಿಸಿ ಆಧ್ಯಾತ್ಮಿಕ ಸಮಾಜವಾದೀ ದರ್ಶನವನ್ನಾಗಿಸುವ ಮಾತುಗಳೂ ಹೌದು.
ಈ ದಾರ್ಶನಿಕತೆಯನ್ನು ಕಾಣುವ ಮತ್ತು ಅದರ ಬಗ್ಗೆ ಚಿಂತನೆ ನಡೆಸುವ ಶಕ್ತಿಯನ್ನು ಸಾಹಿತ್ಯ ಸಂಶೋಧಕರು ಸಿದ್ಧಿಸಿಕೊಳ್ಳದಿದ್ದರೆ ಅವರು ಮಾಹಿತಿ ಜಡರಾಗುತ್ತಾರೆ. ಇದರ ಜೊತೆಗೆ ನಮ್ಮ ಕಾಲದ ಸಂಶೋಧಕರನ್ನು ಇನ್ನೊಂದು ಸಮಸ್ಯೆ ಬಾಧಿಸುತ್ತಿದೆ. ಅದೇನೆಂದರೆ ನಾವು ಬದುಕುವ ಕಾಲ-ದೇಶಗಳ ಚಾರಿತ್ರಿಕ ಒತ್ತಡಗಳಿಂದಲಾಗಿ, ಸಂಶೋಧಕರು ಓದುವ ಕಣ್ಣುಗಳಲ್ಲಿ ವಕ್ರತೆಯನ್ನೂ ಮತ್ತು ಗ್ರಹಿಸುವ ಮನಸ್ಸಿನಲ್ಲಿ ವ್ಯಗ್ರತೆಯನ್ನೂ ತುಂಬಿಸಿಕೊಂಡಿದ್ದಾರೆ. ಇದು ಇವರ ಸಮಸ್ಯೆಯಲ್ಲ. ಇವರು ನಂಬಿದ ಸಿದ್ಧಾಂತಗಳಲ್ಲಿರುವ ಸಮಸ್ಯೆ. ಕರ್ಮಠ ಐಡಿಯಾಲಜಿಗಳ ಬಲಿಪಶುಗಳಾಗಿರುವ ಈ ಬಗೆಯ ಸಂಶೋಧಕರು ಇದರಿಂದ ಬಿಡಿಸಿಕೊಳ್ಳದೆ ಇದ್ದರೆ ಅವರಿಗೆ ವಿಧಾನಕ್ರಮ ಪ್ರಾಪ್ತವಾಗದು.
ಸಂಶೋಧಕ: ಕರ್ಮಠ ಐಡಿಯಾಲಜಿಗಳು ಆಧುನಿಕ ಕಾಲದಲ್ಲಿ ಮಾತ್ರ ಇದ್ದುವೇ ಮೇಷ್ಟ್ರೆ ವಸಾಹತುಪೂರ್ವ ಭಾರತದಲ್ಲೂ ಇರಲಿಲ್ಲವೇ?
ಮಾ: ಇತ್ತು. ಖಂಡಿತಾ ಇತ್ತು. ಕರ್ಮಠತೆ ಎಲ್ಲಿದ್ದರೂ ಹೇಗಿದ್ದರೂ ತಪ್ಪೇ. ಅದರಲ್ಲಿ ಎರಡು ಮಾತಿಲ್ಲ. ಕಳೆದ ದಶಕದಲ್ಲಿ ಕನ್ನಡದ ಸಂಶೋಧನ ಲೋಕವನ್ನು ಪ್ರವೇಶಿಸಿದ ಎಸ್ ಎನ್ ಬಾಲಗಂಗಾಧರ ಅವರು ‘ವಸಾಹತುಪೂರ್ವದ ಭಾರತದಲ್ಲಿ ಎಂಥ ಮಾನವೀಯತೆ ಇತ್ತು, ಪಾರಂಪರಿಕ ಮೌಲ್ಯಗಳು ಅಂತ ನಾವು ಕರೆಯಲು ಇಷ್ಟಪಡುವಂಥವೆಲ್ಲವೂ ಬಹಳ ನ್ಯಾಯಯುತವಾದ ಮೌಲ್ಯಗಳನ್ನು ಎತ್ತಿಹಿಡಿಯುತ್ತಿದ್ದವು’ – ಎಂದೆಲ್ಲ ಪ್ರತಿಪಾದಿಸುವುದು ಕೂಡ ಕರ್ಮಠತೆಯೇ. ಇಂಥವುಗಳೆಲ್ಲ ನಮ್ಮಲ್ಲಿ ಬಲು ನಾಜೂಕಾಗಿ, ಸಂಸ್ಕೃತಿ ಶೋಧದ ನೆಪದಲ್ಲಿ ಮತ್ತು ಸಂಸ್ಕೃತಿ ರಸಗವಳ ಮೆಲ್ಲುವ ಶೋಕಿಯಲ್ಲಿ ನಡೆಯುತ್ತವೆ. ಅದು ಕ್ರೌರ್ಯವನ್ನು ಬಹಳ ನಯವಾದ ಮತ್ತು ರುಚಿಕಟ್ಟಾದ ಮಾತುಗಳ ಮೂಲಕ ಮರೆ ಮಾಡುತ್ತದೆ. ಹಿಂದಿನ ಕಾಲದ ಕ್ರೌರ್ಯ ಇಂದು ಇತಿಹಾಸದ ಭಾಗವಾಗಿ ಹೋಗಿದೆಯೆನ್ನುವುದೇನೋ ಸರಿ, ಆದರೆ ನಮ್ಮ ತಗಾದೆ ಇರಬೇಕಾಗಿರುವುದು ಹಿಂದಿನದ್ದನ್ನು ರೊಮಾಂಟಿಸೈಸ್ ಮಾಡುತ್ತ, ಇಂದಿನ ಕ್ರೌರ್ಯ ಮತ್ತು ಯಜಮಾನಿಕೆಗೆ ಸಮಜಾಯಿಷಿ ಒದಗಿಸಿಕೊಳ್ಳುವವರ ವಿರುದ್ಧ.
ಸಂ: ಮೇಷ್ಟೇ ನೀವು ಸಿನಿಮಾದ ಒಂದು ಉದಾಹರಣೆಯನ್ನೂ ಕೊಡುತ್ತೇನೆಂದು ಹೇಳಿದಿರಿ.
ಮಾ: ಕೆ ಎಸ್ ಎಲ್ ಸ್ವಾಮಿ ಮತ್ತು ಎಂ ಪಿ ಶಂಕರ್ ಅವರು ರಾಮಲಕ್ಷ್ಮಣ ಎಂಬ ಕನ್ನಡ ಸಿನಿಮಾದಲ್ಲಿ (೧೯೮೦) ಹಾವು ಮತ್ತು ಮುಂಗುಸಿಯ ಒಂದು ಕಥನ ಕವನವನ್ನು ದೃಶ್ಯಕಾವ್ಯವಾಗಿ ಕಟ್ಟಿಕೊಡುತ್ತಾರೆ. ಅದರಲ್ಲಿ ಬರುವ ಹಾಡಿನ ಕೊನೆಯ ಸಾಲು ಇದು. ‘ನೋಡಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು’.
ಸಂ: ಇದರಲ್ಲೇನಿದೆ ಅಂತಹ ವಿಶೇಷ?
ಮಾ: ಹಾಡಿನ ಈ ಸಾಲುಗಳೂ ಇಂದ್ರಿಯಾನುಭವದ ಬಗ್ಗೆ ಸಂದೇಹ ತಾಳಿವೆ. ಪ್ರತ್ಯಕ್ಷ್ಯವಾಗಿ ಕಂಡದ್ದಷ್ಟೇ ಪೂರ್ಣಸತ್ಯವಲ್ಲ. ಪ್ರತ್ಯಕ್ಷವಾಗಿರುವುದನ್ನೂ ಪ್ರಮಾಣ ಎಂದು ಅಂಗೀಕರಿಸಲು ಸಾಧ್ಯ ಇಲ್ಲ ಎಂಬುದನ್ನು ಇದು ಹೇಳುತ್ತದೆ. ನಮ್ಮ ಅನುಭವಗಳೇ ನಮಗೆ ಸತ್ಯವನ್ನು ದೊರಕಿಸಿಕೊಡಲಾರವು. ನಮ್ಮ ಅನುಭವಗಳನ್ನು ಒರೆಗೆ ಹಚ್ಚಿ ನೋಡುವುದೇ ಸಂಶೋಧನೆ. ಅಷ್ಟು ಮಾತ್ರವಲ್ಲ. ಆ ಹಾಡಿನಲ್ಲಿ ‘ನಿಧಾನಿಸಿ ಯೋಚಿಸಿದಾಗ’ ಎಂಬ ಒಂದು ಪದವೂ ಬರುತ್ತದೆ. ನಾವು ಸಂಶೋಧನೆಯನ್ನು ನಡೆಸಬೇಕಾದುದೇ ನಿಧಾನಗತಿಯ ಯೋಚನೆಯ ಮೂಲಕ. ಜಗತ್ತಿನಲ್ಲಿ ಇಂದು ಅತ್ಯಂತ ತ್ವರಿತಗತಿಯಲ್ಲಿ; ಅಂದರೆ ಎರಡು ನಿಮಿಷದಲ್ಲಿ ತಯಾರಾಗುವ ಸಾರು-ಅನ್ನ-ಇಡ್ಲಿ-ನೂಡಲ್ಸ್ ಮೊದಲಾದ ಸಿದ್ಧ ಆಹಾರಗಳು ಬಂದಿವೆ. ದೇಹದ ಹಸಿವನ್ನು ಅತ್ಯಂತ ವೇಗವಾಗಿ ತೀರಿಸಿಕೊಳ್ಳಬೇಕೆಂದು ಮನುಷ್ಯ ಬಯಸುತ್ತಾನೆ. ಅದಕ್ಕಾಗಿ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ್ದಾನೆ. ಆದರೆ ಲೈಂಗಿಕ ಸುಖವನ್ನು ಮಾತ್ರ ಅತ್ಯಂತ ನಿಧಾನಗತಿಯಲ್ಲಿ ತೀರಿಸಿಕೊಳ್ಳಬೇಕೆಂದು ಬಯಸುತ್ತಾನೆ. ಈ ನಿಧಾನಗತಿಯ ರತಿಕ್ರಿಯೆಗೂ ಅನೇಕ ಬಗೆಯ ಉಪಕರಣಗಳನ್ನು ಅಭಿವೃದ್ಧಿ ಪಡಿಸಿದ್ದಾನೆ. ಎಲ್ಲದಕ್ಕೂ ತಂತ್ರಜ್ಞಾನಗಳನ್ನು ಅಭಿವೃದ್ಧಿಗೊಳಿಸಬಹುದು. ಆದರೆ ಚಿಂತನೆಯನ್ನು ನೀವು ವೇಗವರ್ಧಕ ಯಂತ್ರದ ಮೇಲೆ ಮಲಗಿಸಲು ಸಾಧ್ಯವಿಲ್ಲ. ಅದು ನಿಧಾನವಾಗಿಯೇ ಸಂಭವಿಸುವುದು. ಸಂಭವಿಸುವುದು ಎನ್ನುವುದು ಅತ್ಯಂತ ಅರ್ಥವತ್ತಾದ ಪದ. ಹಾಗಾಗಿ ಸಂಶೋಧನೆ ಅದರಲ್ಲೂ ಸಮಾಜವಿಜ್ಞಾನದವರ/ಮಾನವಿಕದವರ ಅಧ್ಯಯನ ಮತ್ತು ಚಿಂತನೆ ಎರಡೂ ಅತ್ಯಂತ ನಿಧಾನಗತಿಯಲ್ಲೇ ನಡೆಯಬೇಕಾಗಿರುವುದು. ನಿಧಾನ ಗತಿಯೇ ಅವುಗಳ ಸ್ಥಾಯಿ.
ನಾವು ಈಗಾಗಲೇ ಚರ್ಚಿಸಿದ ಎಲ್ಲ ಬಗೆಯ ಸಿದ್ಧಾಂತಗಳ ಬಗೆಗೂ ಚಿಂತನೆ ನಡೆಸಿದಾಗ ಒಂದು ವಿಷಯ ಖಾತರಿಯಾಗುತ್ತದೆ. ಅದೇನೆಂದರೆ ಎಲ್ಲ ಸಿದ್ಧಾಂತಗಳೂ ಕಾಲಬದ್ಧ ಮತ್ತು ದೇಶಬದ್ಧವಾಗಿವೆ. ಹಾಗಾಗಿ ಈ ಯಾವ ಸಿದ್ಧಾಂತಗಳನ್ನು ನಾವು ‘ಅನ್ವಯ’ ಮಾಡಿಕೊಳ್ಳಲು ಸುತಾರಾಂ ಆಗುವುದಿಲ್ಲ. ಈ ಸಿದ್ಧಾಂತಗಳನ್ನು ನಮ್ಮನಮ್ಮ ಸಂಶೋಧನೆಯ ಸಂದರ್ಭದಲ್ಲಿ, ನಮ್ಮನಮ್ಮ ಅನುಭವಗಳ ಹಿನ್ನೆಲೆಯಲ್ಲಿ ಪರಿಶೋಧಿಸಿ ನಾವು ನಮ್ಮನಮ್ಮವೇ ಆದ ಚಿಂತನೆಯ ಮೂಲಕ ಯೋಚನಕ್ರಮದ ಚೌಕಟ್ಟುಗಳನ್ನು ಕಟ್ಟಿಕೊಳ್ಳಬೇಕಾಗಿದೆ. ಈ ಪ್ರಕ್ರಿಯೆಯನ್ನೇ ತಾತ್ತ್ವಿಕತೆ ಎಂದು ಕರೆಯುವುದು. ಯಾವ ಯೋಚನೆಯ ಕ್ರಮವನ್ನು ನೆಚ್ಚಿಕೊಂಡು ನಾವು ಸಂಶೋಧನೆ ನಡೆಸಿರುತ್ತೇವೋ ಅದಕ್ಕೆ ಪ್ರತಿಯಾಗಿ ಯೋಚನೆಯ ಮೂಲಕವೇ ತಾತ್ತ್ವಿಕ ಪ್ರತಿಕ್ರಿಯೆಯನ್ನೂ ಕೊಡುವುದಕ್ಕೆ ನಾವು ಶಕ್ತರಾದಾಗ ನಿಜವಾದ ಅರ್ಥದಲ್ಲಿ ಸಂಶೋಧಕರಾಗುತ್ತೇವೆ.
(ಪುಸ್ತಕಕ್ಕಾಗಿ ಸಂಪರ್ಕಿಸಿ : 8970162207)
ಇದನ್ನೂ ಓದಿ : New Book : ಅಚ್ಚಿಗೂ ಮೊದಲು ; ‘ಆಲಿವ್ ಗಿಡದಿಂದ ಮೊಳಕೆಯೊಡೆದು ವ್ಯಾಪಾರಿಗಳು ರಸ್ತೆಯಲ್ಲಿ ಬಿಸಾಕಿದ ಬೀಜ ನಾನು’
Published On - 3:29 pm, Fri, 6 August 21