Kannada Poetry : ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಹಿರಿಯ ಸಾಹಿತಿ ಡಾ. ಬಸವರಾಜ ಸಾದರ ಅವರ ಹತ್ತು ‘ತೊಟ್ಟು’ಗಳು ನಿಮ್ಮ ಓದಿಗೆ.
ತೊಟ್ಟುಗಳ ಪ್ರಾರಬ್ಧ ಹೀಗಿರುತ್ತದೆ. ತಟ ಪಟ ಸಿಡಿಯುತ್ತ ಹುಟ್ಟಿದ್ದು, ರಪ್ ರಪ್ ಎಂದು ಮಣ್ಣಿನ ದೇಹಕ್ಕೊಂದು ಪುಳಕ ಹುಟ್ಟಿಸಿ, ಧೋ ಧೋ ಸುರಿದು, ಸುರಿದು, ಸುರತದ ಕೊನೆಗೆ ಸುರಿವ ಘರ್ಮಜಲದಂತೆ ಇಳೆಯ ಮೈ ತುಂಬಾ ಹರಿದು, ಪಕ್ಕಕ್ಕೆ ದಣಿದು, ತಣಿದು, ಮಣಿದು, ಉರುಳಿ ಬಿಡುವ ಮಳೆಯ ಈ ಆಲಾಪ, ಮಧ್ಯಲಯ, ಧೃತ್, ತರಾನಾಗಳೆಲ್ಲ ಮುಗಿದಾಗ, ನಾಲ್ಕನೇ ದಿನ ಎರೆದುಕೊಂಡ ವಧು ಹೊಂಬಿಸಲ ಟರ್ಕಿಶ್ ಟಾವೆಲ್ಲಿನಿಂದ ಒದ್ದೆ ಕೂದಲನ್ನು ಒಣಗಲು ಒರೆಸಿಕೊಳ್ಳಲು, ನೀಳಜಡೆಯನ್ನು ಜಾಡಿಸಿಕೊಂಡಾಗ ಟಪಕ್ಕನೆ ಸಿಡಿವ ತೊಟ್ಟು ನಿಜವಾದ ಸಂಸಾರವನ್ನು ಅನುಭವಿಸಿ ಹುಟ್ಟಿದ ತೊಟ್ಟು. ಮೈ ನೆರೆದ ಮರಗಳು ಕೂಡಾ ಮಳೆ ನಿಂತ ಮೇಲೆ ಹನಿ ಹನಿ ತೊಟ್ಟಿಕ್ಕುತ್ತವೆ. ಅದು ಸಂಸಾರ ಪೂರ್ವದ ಪರ್ಣಚೇಷ್ಟೆ. ನಿಮ್ಮ ತೊಟ್ಟುಗಳು ಕಾವ್ಯಪ್ರೆಮಿಗಳನ್ನು, ಅವರು ಸಿದ್ಧರಿದ್ದರೆ ಅವರ ಅಂತಃಕರಣವನ್ನು ತೊಯ್ಯಿಸಲಿ.
ಆನಂದ ಝುಂಜರವಾಡ, ಹಿರಿಯ ಸಾಹಿತಿ
ಚುಟುಕು, ಹನಿ, ಹಾಯ್ಕು, ಮಿನಿ ಕವಿತೆ ಹೀಗೆ ಹಲವು ಹೆಸರುಗಳಲ್ಲಿ ಕರೆಯುತ್ತಿರುವ ಕವಿತೆಗಳಿಗೆ ಅವುಗಳದ್ದೇ ಆದ ಸ್ವಾದವಿದೆ. ಇವುಗಳ ಮುಖ್ಯ ಗುಣ ಓದಿದ, ಕೇಳಿದ ತಕ್ಷಣ ಮನಸೆಳೆಯುವ ಪದಮೈತ್ರಿ, ತೀಕ್ಷ್ಣ ವ್ಯಂಗ್ಯ, ಹ್ರಸ್ವದಲ್ಲಿ ಅಪಾರವನ್ನು ಧ್ವನಿಸುವ ಕಲೆಗಾರಿಕೆ. ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಜನ ಚುಟುಕು ರಚನೆಕಾರರು ಇದ್ದಾರೆ. ಅದು ಬೇರೆ ವಿಷಯ. ಆದರೆ ಈಗ “ತೊಟ್ಟು” ಹೆಸರಿನಲ್ಲಿ ಬಸವರಾಜ ಸಾದರ ಅವರು ವಿಶಿಷ್ಟ ಬಗೆಯಲ್ಲಿ ಬರೆಯತೊಡಗಿದ್ದಾರೆ. ತೊಟ್ಟು ಅಚ್ಚಕನ್ನಡ ಪದ. ತೊಟ್ಟು ಅಂದರೆ ಹನಿ, ಕಾಯಿಯನ್ನು ಕಾಂಡವನ್ನು ಬೆಸೆದ ಭಾಗ ಎಂಬ ಅರ್ಥಗಳಿವೆ. ಸಾದರ ಅವರ ರಚನೆಗಳನ್ನು ಗಮನಿಸಿದರೆ ಅವು ಕಾವ್ಯಬಳ್ಳಿಯಲ್ಲಿ ಬಿಟ್ಟ ತೊಟ್ಟುಗಳು. ಅವರ ಶೈಲಿಯ ಅನನ್ಯತೆಯಲ್ಲಿ ಅವುಗಳ ಮಿಂಚು ಮನಸೆಳೆಯುತ್ತದೆ. ಚಿಂತನೆಗೆ ಹಚ್ಚುತ್ತದೆ. ಪ್ರಾಸದ ತ್ರಾಸವಿಲ್ಲದ ಈ ಬರಹಕ್ಕೆ ಭಾವ ಬುದ್ಧಿಗಳ ವಿದ್ಯುದಾಲಿಂಗನ ಶಕ್ತಿಯಿದೆ.
ಪ್ರೊ. ಎಸ್. ಜಿ. ಸಿದ್ಧರಾಮಯ್ಯ, ಹಿರಿಯ ಸಾಹಿತಿ
ತೊಟ್ಟು-1
ಜಗದೆಲ್ಲ
ಕತ್ತಲೆಯ
ಕಳೆಯಲಿಕ್ಕಿಲ್ಲ
ಪುಟ್ಟ ಹಣತೆ,
ತನ್ನ ಕಣ್ಣಳತೆಯ
ಕತ್ತಲೋಡಿಸುವುದೇ
ಅದರ ಘನತೆ.
*
ತೊಟ್ಟು-2
ನಾವೆಲ್ಲರೂ
ದೇವರ
ಕೊಂದಿದ್ದೇವೆ ಅಂದರೆ,
ಬಹಳ ಜನರಿಗೆ ಸಿಟ್ಟು!
ಅವ ಎಲ್ಲಿದ್ದಾನೆ
ಎಂಬುದನ್ನೇ ಅರಿಯರು
ನಮ್ಮೊಳಗನ್ನೇ ಬಿಟ್ಟು.
*
ತೊಟ್ಟು-3
ನಿತ್ಯ ಕಲಿತು
ಕಲಿಸುವವ
ಗುರು;
ನಿನ್ನೆ ಮೊನ್ನೆಯ
ಹಳಸಲನ್ನೇ
ಕಲಸುವವ
ಲಘು.
*
ತೊಟ್ಟು-4
ಕುರಿಗಳ
ಹಿಂಡಿಗೆ
ತೋಳಗಳ
ಕಾವಲು;
ಇದೆಯೇ
ಪ್ರಜಾಪ್ರಭುತ್ವಕ್ಕೆ
ಇದಕ್ಕಿಂತ
ದೊಡ್ಡ ಸವಾಲು?
*
ಅನುಭವಗಳ ಮೂಲಕ ಗ್ರಹೀತವಾಗುವ ನಿಸರ್ಗದ ಮತ್ತು ಲೋಕದ ಸತ್ಯಗಳನ್ನು ಓದುಗರಿಗೆ ಅರ್ಥವಾಗುವ ಭಾಷೆಯಲ್ಲಿ ಹಿಡಿದು, ಮತ್ತೆ ಲೋಕಕ್ಕೇ ತಲುಪಿಸುವ ಕಾವ್ಯವು ನನ್ನ ಅಭಿಪ್ರಾಯದಲ್ಲಿ ಹಣತೆ ಇದ್ದಂತೆ. ಹಲವು ಪರಿಕರಗಳು ಕೂಡಿ ಒಂದಾಗಿ ಬೆಳಕು ಕೊಡುವ ಜ್ಯೋತಿಯಂತೆಯೇ ಶಬ್ದ, ಅರ್ಥ, ಧ್ವನಿ, ಲಯವೇ ಮೊದಲಾದ ಪರಿಕರಗಳ ದ್ವಾರಾ ಸಮುದಾಯದ ಅರಿವನ್ನು ವಿಸ್ತರಿಸುವ ಅದು, ಅಲ್ಲಿರುವ ಕತ್ತಲನ್ನು ಬೆಳಕನ್ನಾಗಿ ಪರಿವರ್ತಿಸುವ ಸಶಕ್ತ ಮಾಧ್ಯಮ. ಓದಿನ ಮೂಲಕ ಸಂತೋಷ ಕೊಡುವುದರ ಜೊತೆಗೇ ಬದಲಾವಣೆಯ ಪ್ರಕ್ರಿಯೆಗೂ ಕಾವ್ಯ ಪೂರಕವಾಗಬಲ್ಲುದು.
ತೊಟ್ಟು-5
ನಿನ್ನ ಸೇರಿ
ಉಪ್ಪಾಗಲಾರೆ
ಎಂದಿತು
ತನ್ನೆಡೆ ಹರಿದುಬಂದ ನದಿ,
ಅಯ್ಯೋ ಪಾಪ,
ಹಾಗೋ,
ಮರಳಿ ಹೋಗಿಬಿಡು
ಎಂದು ಕೈ ಮುಗಿಯಿತು,
ಮಹಾಸಾಗರ.
*
ತೊಟ್ಟು -6
ಕಾಳೊಂದರಲ್ಲಿ
ಲಕ್ಷ-ಕೋಟಿ
ಕಾಳುಗಳುಂಟು,
ನೂರಕ್ಕೆ ನೂರು ಸತ್ಯ,
ಅದನ್ನೊಡೆದು
ಲಕ್ಷ-ಕೋಟಿ ಕಾಳುಗಳ
ತೋರಿಸುವುದು
ಅಸಾಧ್ಯ,
ಸಾವಿರದ ಸತ್ಯ.
*
ತೊಟ್ಟು-7
ನುಡಿವ ಶಬ್ದಗಳಿಗೆ
ನಾಲಗೆಯೇ
ನಾಚುತ್ತಿದೆ
ಇಂದು,
ತಮ್ಮ ದ್ವೇಷಕ್ಕಾಗಿ
ಈ ಮನುಷ್ಯರು
ನನ್ನನ್ನೇ ದೋಷಿಯನ್ನಾಗಿ
ಮಾಡುತ್ತಿದ್ದಾರೆ
ಎಂದು.
*
ತೊಟ್ಟು-8
ಹುತ್ತ ಕಟ್ಟುತ್ತವೆ
ಗೆದ್ದಲು ಹುಳುಗಳು
ಮಣ್ಣ ಕಣ ಕಣ ಹೆಕ್ಕಿ ತಂದು,
ಹಾವು ಬಂದು
ವಾಸಿಸುತ್ತದೆ ಅದರಲ್ಲಿ
ಅದು ತನ್ನದೇ ಮನೆಯೆಂದು,
ಮೇಲೆ ಹೆಕ್ಕಿ ತಿನ್ನುತ್ತದೆ
ಗೆದ್ದಲುಗಳ ಒಂದೊಂದೂ,
ಬೆವರ ಬಸಿಯುವವರ
ಬವಣೆಯೇ ಹೀಗೆ,
ತಪ್ಪದು ಎಂದೆಂದೂ.
*
ತೊಟ್ಟು-9
ಏನು ಹೇಳೋದು
ಕಣಿ ಹೇಳುವ
ಗಿಣಿರಾಮನ
ಹಣೇಬಾರದ ಕತಿ?
ಹಾರುವ ಶಕ್ತಿ
ತೀರುವ ತನಕ
ಪಂಜರದ ವಾಸವೇ
ಅದಕ್ಕೆ ಗತಿ!
*
ತೊಟ್ಟು-10
ಬಟ್ಟೆ
ಬಿಟ್ಟರೆ
ಆಗುವನೆ
ಸಂತ?
ಬಟ್ಟೆ
ಬಿಡದೆ, ತೊಟ್ಟೇ
ಸಾಗಬೇಕು
ಜೀವನ
ಪರ್ಯಂತ.
ಪರಿಚಯ : ಆಕಾಶವಾಣಿ ಕೇಳುಗರಿಗೆ ‘ಗಾಂಧೀ ಸ್ಮೃತಿ’ ಇನ್ನೂ ಮನಃಪಟಲದಲ್ಲಿ ಧ್ವನಿಸಮೇತ ಅಚ್ಚೊತ್ತಿದೆ. ಅದನ್ನು ಪ್ರಸ್ತುತಪಡಿಸುತ್ತಿದ್ದವರು ಡಾ. ಬಸವರಾಜ ಸಾದರ. ಇವರು ಕವಿ, ಕಥೆಗಾರ ವಿಮರ್ಶಕ ಹಾಗೂ ಪ್ರಸಾರತಜ್ಞ. ಹುಟ್ಟಿದ್ದು 1955 ರ ಜುಲೈ 20 ರಂದು, ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ. ಕಲಘಟಗಿ ತಾಲೂಕಿನ ಹುಲ್ಲಂಬಿಯವರಾದ ಇವರು ‘ಬಸವರಾಜ ಕಟ್ಟೀಮನಿಯವರ ಕಾದಂಬರಿಗಳು’ ವಿಷಯ ಕುರಿತ ಅಧ್ಯಯನಕ್ಕೆ ಪಿಎಚ್.ಡಿ ಪಡೆದಿದ್ದಾರೆ. 1984ರಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿ ಆಕಾಶವಾಣಿಯಲ್ಲಿ ವೃತ್ತಿ ಆರಂಭಿಸಿ, ಬೆಂಗಳೂರು ನಿಲಯದ ಕೇಂದ್ರ ನಿರ್ದೇಶಕ ಹಾಗೂ ಆಕಾಶವಾಣಿಯ ದಕ್ಷಿಣ ವಲಯದ ಉಸ್ತುವಾರಿ ನಿರ್ದೇಶಕರಾಗಿ ಬಡ್ತಿ ಹೊಂದಿ, 2015 ರ ಜುಲೈನಲ್ಲಿ ನಿವೃತ್ತರಾಗಿದ್ದಾರೆ.
ತಪ್ದಂಡ (ಕಥಾಸಂಕಲನ), ಸಿಸಫಸ್‍ರ ಸುತು, ಬುದ್ಧನ ಭಿಕ್ಷಾಪಾತ್ರೆ (ಕವನ ಸಂಕಲನ), ಅನುಮಿತಿ (ಸಾಹಿತ್ಯ ವಿಮರ್ಶೆ), …ರೂಪಗಳನು ದಾಟಿ (ಬಾನುಲಿ ರೂಪಾಂತರಗಳು), ಹೊಸ ಆಲೋಚನೆ, ತಮಂಧಕ್ಕೆ ಬೆಳಗು, ಕಾಯಕ ದಾಸೋಹ, ಮೀರುವ ಘನ, ವರ್ತಮಾನಕ್ಕೂ ವಚನ (ವಚನ ಸಂಶೋಧನೆ), ಮೃದುವಾಗಿ ಮುಟ್ಟು (ಚಿಂತನ), ದಿನಕ್ಕೊಂದು ನುಡಿಮುತ್ತು (ವೈಚಾರಿಕ), ಬಸವರಾಜ ಕಟ್ಟೀಮನಿ (ವ್ಯಕ್ತಿಚಿತ್ರ)-ಮೊದಲಾದ ಸ್ವತಂತ್ರ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಚಿನಾರ್ ವೃಕ್ಷದ ಅಳು’ ಅವರ ಅನುವಾದಿತ ಕಥೆಗಳ ಸಂಕಲನ. ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಘಟ್ಟಗಳು, ನೂರೊಂದು ಚಿಂತನ, ಪ್ರಸಾರ ಹಾಸ್ಯ, ಬದುಕು ನನ್ನ ದೃಷ್ಟಿಯಲ್ಲಿ, ಆಧುನಿಕ ಕನ್ನಡ ಮಹಾಕಾವ್ಯಗಳು, ಬಾನುಲಿದ ಮಾತುಗಳು, ಕನ್ನಡ ಸಾಹಿತ್ಯ ಸಮೀಕ್ಷೆ, ಮೇಘ ಮಂದಾರ, ಕಾವ್ಯಯಾನ, ವಚನ ವರ್ಷ-ಸಂಪಾದಿತ ಕೃತಿಗಳು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಡಾ. ಡಿ.ಎಸ್.ಕರ್ಕಿ ಕಾವ್ಯ ಪ್ರಶಸ್ತಿ, ಗೊರೂರು ಪ್ರತಿಷ್ಠಾನದ ಕಾವ್ಯ ಪ್ರಶಸ್ತಿ, ಭಾರತಿಸುತ ಪ್ರಶಸ್ತಿ, ಕಲಬುರ್ಗಿ ವಿ.ವಿ.ಯ ಜಯತೀರ್ಥ ರಾಜಪುರೋಹಿತ ಸ್ಮಾರಕ ಬಂಗಾರದ ಪದಕ ಹಾಗೂ ಬಹುಮಾನ, ಪ್ರೊ.ಸ.ಸ.ಮಾಳವಾಡ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ಬೆಂಗಳೂರಿನ ರಂಗಚೇತನದ ನಾಡಚೇತನ ಪ್ರಶಸ್ತಿ, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ, ಆಕಾಶವಾಣಿಯ ರಾಷ್ಟ್ರೀಯ ಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿ, ಗೊ.ರು.ಚ. ದತ್ತಿ ಶರಣ ಪ್ರಶಸ್ತಿ ಸಂದಿವೆ.
ಇದನ್ನೂ ಓದಿ : Poetry : ಅವಿತಕವಿತೆ ; ವಠಾರದ ಕಮಾನು ಬಾಗಿಲಿನಲಿ ನಿಂತು ಬಾನ ಜಡೆಗೆ ಹೂ ಮುಡಿಯುತ್ತಿದ್ದವಳು
Published On - 9:30 am, Sun, 19 September 21