Kannada Poetry : ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಕವಿ ಸ್ಮಿತಾ ಅಮೃತರಾಜ್ ಸಂಪಾಜೆ ಅವರ ಕವಿತೆಗಳು ನಿಮ್ಮ ಓದಿಗೆ.
*
ಬಂಟಮಲೆಯೆಂಬ ನಿಗೂಢ ಕಾಡಿನ ಬುಡದಲ್ಲಿ ಹುಟ್ಟಿ ಬೆಳೆದ ಸ್ಮಿತಾ ಕಾವ್ಯವನ್ನು ಎದೆಯ ಹಾಡೆಂಬಂತೆ ರಕ್ಷಿಸಿಕೊಂಡು ಬಂದವರು. ಗದ್ಯ ಬರೆದಾಗಲೂ ಅದು ಕವಿತೆಯ ಭಾಗವೇ ಆಗಿರುವುದನ್ನು ಕಂಡಾಗ ಕವಿತೆಯೇ ಅವರ ಮುಖ್ಯ ಅಭಿವ್ಯಕ್ತಿ ಮಾಧ್ಯಮ ಎಂಬುದು ಸ್ಪಷ್ಟವಾಗುತ್ತದೆ. ಅವರು ಏನೇ ಬರೆದರೂ ಕವಿತೆಗಳ ಗುಣ ಮೈದೋರುತ್ತದೆ. ಅದು ಮಧುರ ಭಾವದ ಸೂಕ್ಷ್ಮ ಅಭಿವ್ಯಕ್ತಿಯೂ ಹೌದು, ಕಾವ್ಯಶಕ್ತಿಯೂ ಹೌದು, ದೌರ್ಬಲ್ಯವೂ ಹೌದು. ಹೆಣ್ಣಿನ ಬದುಕಿನ ಕಾಠಿಣ್ಯಗಳ ಬಗ್ಗೆ ನೇರವಾಗಿ ಬರೆಯಲಾರರು, ಆದರೆ ಬೇರಾವುದೋ ಒಂದರ ಬಗೆಗೆ ಬರೆಯುತ್ತಲೇ ಅದನ್ನು ಮೃದುವಾಗಿ ಧ್ವನಿಸಬಲ್ಲರು. ಈ ಘೋಷಣೆಯನ್ನು ಸ್ಮಿತಾ ಎಂದೂ ಕೂಗಿ ಹೇಳಲಾರರು, ಆದರೆ ಓದುಗರು ಸೂಕ್ಷ್ಮಮತಿಯಾಗಿದ್ದರೆ ಆ ಘೋಷಣೆಯನ್ನು ಕೇಳಿಸಿಕೊಳ್ಳಬಲ್ಲರು. ಈ ಅರ್ಥದಲ್ಲಿ ಇವರ ಕಾವ್ಯ ಓದುಗರನ್ನು ಇನ್ನಷ್ಟು ಸೂಕ್ಷ್ಮಗೊಳಿಸಬಲ್ಲದು. ಜಿ. ಎಸ್. ಶಿವರುದ್ರಪ್ಪ, ಚನ್ನವೀರ ಕಣವಿಯಂತಹ ಹಿರಿಯರು ಹಿಡಿದ ಮಾರ್ಗವದು.
ಡಾ. ಪುರುಷೋತ್ತಮ ಬಿಳಿಮಲೆ, ಲೇಖಕ
ಸ್ಮಿತಾ ಅಮೃತರಾಜ್ ನನ್ನ ಕಣ್ಣೆಳೆವೆಯಲ್ಲಿ ಬೆಳೆದ ಕವಿ. ಕೃಷಿಯ ಅವಿರತ ದುಡಿವ ದೈನಿಕದಲ್ಲಿಯೂ ಕಾವ್ಯದ ಒರತೆಯನ್ನು ಕಾಪಿಟ್ಟುಕೊಂಡವರು. ತನ್ನ ಸುತ್ತಮುತ್ತಲಿನ ಸಾಂಸ್ಕೃತಿಕ ಬದುಕನ್ನು ಬಲು ಅನುಕಂಪದಿಂದ ಪ್ರಬಂಧವಾಗಿಸಬಲ್ಲರು. ಒಂದರ್ಥದಲ್ಲಿ ಅವರ ಕಾವ್ಯವೂ ಅದೇ perspective ನಿಂದ ಅರಳುತ್ತದೆ. ತಾನಿದ್ದಲ್ಲೇ ಬೇರೂರಿ ಹೊರ ಜಗತ್ತಿನ ಜೊತೆ ಕೊಡು-ಕೊಳು ಸಂವಾದವನ್ನು ಕಟ್ಟಿಕೊಡುವ ಬಗೆಯೇ ಆದರೂ ಕಾವ್ಯವನ್ನು ಆರಿಸಿಕೊಂಡಾಗ ಅದರ ಸವಾಲುಗಳು ಬೇರೆಯೇ. ಅದು ಲಯವನ್ನು, ನುಡಿಗಟ್ಟನ್ನು, ನಿರಂತರ ನಾವೀನ್ಯತೆಯ ಬೆಳವಣಿಗೆಯನ್ನು ಬೇಡುತ್ತಾ ಹೋಗುತ್ತದೆ. ಸ್ಮಿತಾ ಈ ಸವಾಲನ್ನು ಎದುರಿಸಿದ್ದಾರೆ. ಕಾವ್ಯಕ್ಕೆ ಬೇಕಾದ ಆತ್ಮಸ್ಥೈರ್ಯ, ನಿರೀಕ್ಷಣೆ ಈ ಕವಿಗಿದೆ. ಕನ್ನಡದ ಕಾವ್ಯಾಸಕ್ತರು ಗಂಭೀರವಾಗಿ ಪರಿಗಣಿಸಬೇಕೆನ್ನುವಷ್ಟು ಗಟ್ಟಿ ಕವನಗಳು ಇವರವು.
ಸುರೇಶ ಕಂಜರ್ಪಣೆ, ಲೇಖಕ
*
ಆ ಎರಡು ಹಕ್ಕಿಗಳು
ಯಾವುದೋ ಒಂದು ವಸಂತದಲ್ಲಿ
ಆ ಕಡಲ ಹಕ್ಕಿ,ಈ ಬಯಲ ಹಕ್ಕಿ
ಮುಖಾಮುಖಿಯಾಗದೇ ಬೆಸೆದುಕೊಂಡು
ಅದರ ಸ್ವರ ಇದಕೆ ಕೊಟ್ಟು, ಇದರ ಸ್ವರ
ಅದಕೆ ತೆತ್ತು
ಅದೆಷ್ಟು ಸಂತಸಗಳನ್ನು ರೆಕ್ಕೆಗಳಡಿಯಲ್ಲಿ
ಬಚ್ಚಿಟ್ಟುಕೊಂಡು ಪೊರೆದವು
ತೆರೆ ಉಬ್ಬರಗಳ ನಡುವೆ ಏಗುತ್ತಾ
ಹಾರುವ ಅದರ ಗೊಡವೆ ಅದಕೆ
ಅಲ್ಲಿ ಇಲ್ಲಿ ಗುಟುಕು ಹೆಕ್ಕಿ ಇಷ್ಟಗಲ
ಕಣ್ಗಾವಲಿನಲ್ಲಿ ರೆಕ್ಕೆ ಬೀಸಿ ಗೂಡು ಸೇರುವ
ಅನಿವಾರ್ಯತೆ ಇದಕೆ
ಅದೆಷ್ಟು ಚೈತ್ರ, ಗ್ರೀಷ್ಮ, ಶಿಶಿರ, ಹೇಮಂತಗಳು
ರೆಕ್ಕೆ ಬಗಲಿಂದ ಹಾರಿ ಹೋದವು
ಒಣ ಎಲೆ ಉದುರಿ ಹಸಿರು ಮುಕ್ಕಳಿಸಿಕೊಂಡವು
ಆಗೆಲ್ಲಾ ಚಿಗುರು ಕುಕ್ಕಿ, ಒಗರು ಕಕ್ಕಿ
ಇವುಗಳು ದ್ವನಿ ಸರಿಪಡಿಸಿಕೊಂಡವು
ಅಲ್ಲಿ ಸೂರ್ಯ ಕಂತುವ ಹೊತ್ತಲ್ಲಿ
ಇಲ್ಲಿ ಬಯಲಿಗೆ ಮಂಕು ಕವಿಯುತ್ತದೆ
ಅಸಹನೀಯ ನೀರವತೆಯಲ್ಲಿ
ನೆನಪುಗಳು ವೀಣೆ ಮೀಟತೊಡಗುತ್ತವೆ
ಆ ಕಡಲು ಈ ಬಯಲು ನಾದದಲ್ಲಿ
ನೆನೆದುಕೊಳ್ಳುತ್ತವೆ
ಕವಲೊಡೆದ ಹಾದಿಯ ಕವಲು
ಕೊಂಬೆಯ ಮೇಲೆ ಕುಳಿತ
ಎಂದೂ ಸಂಧಿಸದ ಹಕ್ಕಿಗಳೆರಡೂ
ಹಾಡಿನ ಮೂಲಕವೇ ಮುಟ್ಟಿಕೊಳ್ಳುತ್ತವೆ
ವಸಂತಗಳ ಬಗಲಲ್ಲಿ ಕಟ್ಟಿಕೊಂಡು
ಮರುಜನ್ಮ ಪಡೆದುಕೊಳ್ಳುತ್ತವೆ.
*
ಗಾಳಿ ಸೋಕುವುದೆಂದರೆ
ಅಲ್ಲಿ ಇಲ್ಲಿ ಎಡತಾಕಿ
ದೋಷ ಪರಿಹಾರಕ್ಕೆಂದೇ
ಮುರಿದು ಕಟ್ಟಿದ ಹೊಸಮನೆ
ಎದುರು ಖುಲ್ಲಾಂ .. ಖುಲ್ಲಾಂ.. ತೆರೆದಂತೆ
ಖಾಲಿಯೇ ಇರಬೇಕೆಂಬ
ಅಣತಿಯಂತೆ ಅಡುಗೆ ಮನೆಯ ಕಿಟಕಿ
ನೇರ ಪೂರ್ವದಿಕ್ಕಿಗೇ.
ಚಟಾಪಟ್, ಪಟಾಪಟ್
ಏಸೊಂದು ರುಚಿ, ಏಸೊಂದು ಬಗೆ
ಪರಿಮಳ ಹಬ್ಬುವ ವೇಗಕ್ಕೆ
ಸೂರ್ಯನಿಗೂ ಮಂದಗತಿ.
ಹೊಸ ಅಡುಗೆ ಮನೆಯಾ?
ವಾಸ್ತು ಪ್ರಭಾವವಾ?
ಇರಲಿ ಬಿಡಿ, ಬದಲಾವಣೆಯಂತೂ
ಖರೇ ತಾನೇ?
ದಿನಕಳೆದಂತೆ ನೆನಪಿಗೂ ಮರೆಗುಳಿ
ಮುಖಕ್ಕೆ ರಾಚುತ್ತಿದೆ ಬಿಸಿಲು
ಬಳಲಿ ಬೆಂಡಾಗುವಷ್ಟು ಸುಸ್ತು
ವ್ಯಯಿಸಲಾರೆ ಅಡುಗೆ ಮನೆಯೊಳಗೇ
ಪೂರಾ ಆಯಸ್ಸು.
ಅಚಾನಕ್ ವಾಸ್ತುವಿನ ಕಂಬದ
ನಡುವಲ್ಲೊಂದು ಬಿರುಕು
ಹೊಸ ಘೋಷಣೆಗೆ.
2.
ಹುಕಿಗೆ ಬಿದ್ದ ಒಂದು ಗಳಿಗೆ
ನಿಯಮ ಮೀರಿ
ಕತ್ತಿ ತುದಿಯಲ್ಲೇ ಮಣ್ಣ ಒಕ್ಕಿ
ಇಷ್ಟೇ ಅಗಲ ಜಾಗದಲ್ಲಿ ಆಕೆ
ಪೂರ್ವಕ್ಕೆ ಇದಿರಾಗಿ ಸಾಲಾಗಿ ಊರಿದ್ದು
ಚಿಕ್ಕು, ಗೇರು, ಮಾವು, ಪೇರಳೆ.
ಒತ್ತೊತ್ತಿನಲ್ಲಿ ಬೆಳೆದರೆ
ನೆಗೆಯಲಾರದು ಚಿಗುರು ಮುಗಿಲಿಗೆ
ನಾಲ್ಕು ಹನಿ ಬಿದ್ದಾಗಲೇ ಕಿತ್ತೆರಡು
ವರ್ಗಾಯಿಸಲೇಬೇಕು ಈ ಸಲವೇ
ಹಿತ್ತಲಿಗೆ…
ಕೇಳಿಸಿಕೊಂಡಿತು ಏನೋ
ಒಂದರ ಟೊಂಗೆಯೊಳಗೊಂದು ಸಸಿ ನುಸುಳಿ
ಆಕಾಶಕ್ಕೇ ಲಗ್ಗೆಯಿಟ್ಟು ಕುಡಿಯುತ್ತಿದೆ
ಬಿಸಿಲು.
ತಳಕ್ಕೆ ತಳವೂರಿ ಬುಡ ಕಾಯುತ್ತಾ
ಮಾತಿಗಿಳಿದಿದೆ ಬೇರು.
ಮೈನಾ, ಜುಟ್ಟಿನ ಹಕ್ಕಿ, ಹಸಿರುಗಿಳಿ,
ದಕ್ಕಿಸಿಕೊಂಡಿದೆ ಇಲ್ಲೇ ಖಾಯಂ ವಿಳಾಸ
ಚೊಗರುಕಾಯಿ, ಹಣ್ಣು ಬಿಟ್ಟ ಸಂಭ್ರಮಕ್ಕೆ
ಮತ್ತಷ್ಟು ಸಂಸಾರಕ್ಕೂ ಹೋಗಿದೆ ಆಹ್ವಾನ.
ಬಿರಬಿರನೆ ಬೆಳೆಯುತ್ತಿದೆ ಇಲ್ಲೀಗ
ಕಿಟಕಿಯಡ್ಡಕ್ಕೆ ನೆಟ್ಟ ಸಸಿ
ಅಂಕೆಯಿಲ್ಲದೆ ಒಳಗೂ-ಹೊರಗೂ
ಪುರ್ರನೆ ಹಾರಿ ಹೋಗುತ್ತಿದೆ ಹಕ್ಕಿ.
3.
ಅಡುಗೆ ಮನೆಯಿಂದ ಹಿತ್ತಲು
ಹಿತ್ತಲಿನಿಂದ ಅಂಗಳದಲ್ಲಷ್ಟೆ ನಡೆಯುವ
ಬಿಡುವಿಲ್ಲದ ಅವಳ ನಡಿಗೆಯಲ್ಲೂ
ಇತ್ತೀಚೆಗೆ ಅದೆಂತ ಲಾಸ್ಯ
ಸೋಕಿದ ಬಯಲ ಗಾಳಿ
ಏನು ಅರುಹಿತು ಏನೋ
ಗಾಳಿ ಸೋಕುವುದೆಂದರೆ
ಇದುವೆನಾ?
ಅನುಮಾನ ನನಗೆ
*
ನಾನು ಏನನ್ನು ಬರೆಯಬೇಕು? ಯಾಕಾಗಿ ಬರೆಯಬೇಕು? ಯಾರಿಗಾಗಿ ಬರೆಯಬೇಕು? ಈ ಯಾವುದರ ಕುರಿತು ಸ್ಪಷ್ಟ ತಿಳಿವಳಿಕೆ ಇಲ್ಲದ ಹೊತ್ತಿನಲ್ಲಿಯೇ ಬರೆಯಲು ಶುರು ಮಾಡಿದವಳು ನಾನು. ಬಿಡುವು ಸಿಕ್ಕಾಗಲೆಲ್ಲಾ ಅಷ್ಟಿಟ್ಟು ಓದಿಕೊಳ್ಳುವ ಅಭ್ಯಾಸ ಇತ್ತು. ಆಗೆಲ್ಲ ನಾನು ಈ ರೀತಿ ಬರೆಯಬಹುದಲ್ಲ ಅನ್ನಿಸಿ ಹುಕಿಗೆ ಬಿದ್ದು ಬರೆಯಲು ತೊಡಗಿದೆನೇ ಬಿಟ್ಟರೆ, ಬೇರೆ ಯಾವ ಉದ್ದೇಶವೂ ನನ್ನೊಳಗೆ ಇಳಿದಿರಲಿಲ್ಲ. ತದನಂತರ, ನನಗೊಂದು ಹವ್ಯಾಸ ಬೇಕಿತ್ತು. ಹಾಗಾಗಿ ಬರವಣಿಗೆ ಅನ್ನುವುದು ಯಾವುದೇ ಖರ್ಚಿಲ್ಲದೆ, ಗುರುಗಳ ನೆರವಿಲ್ಲದೆ, ಹೊರಗೆ ಹೋಗಿ ಕಲಿಯುವ ಗೊಡವೆಯೇ ಇಲ್ಲದೇ ಇದೊಂದು ಸುಲಭಕ್ಕೆ ದಕ್ಕುವ ಮಾಧ್ಯಮ ಅನ್ನಿಸಿದ ಕಾರಣ ಬರೆಯಲು ಶುರು ಮಾಡಿದೆ.
ಆಗೆಲ್ಲಾ ನನ್ನ ಓರಗೆಯವರು ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಮುಂದೆ ಹೋಗಿದ್ದರು, ಹೆಸರು ಮಾಡಿದ್ದರು. ನಾನೂ ಅವರಂತಾಗಬೇಕು ಅನ್ನುವ ಕನಸ ನೇಯ್ದಕೊಂಡೆ. ಕವಿತೆ ನಿರಾಪಾಯಕಾರಿ ಮಾಧ್ಯಮ ಅನ್ನಿಸಿ ಸುಮ್ಮಗೆ ತೋಚಿದ್ದು, ಯೋಚನೆಗೆ ಬಂದದ್ದು ಎಲ್ಲ ಗೀಚಿದೆ. ಎಲ್ಲೋ ಒಂದೆರಡು ಪತ್ರಿಕೆಯಲ್ಲಿ ಬಂದಾಗ ಅದೆಂತಾ ಕುಶಿ! ಕವಿತೆ ಕೊಡುವ ಸುಖ ಮತ್ತು ಅನುಭೂತಿ ಎಷ್ಟು ಚೆಂದ ಅಲ ಅನಿಸಿತು. ಬರೆಯುತ್ತಾ ಹೋದಂತೆಲ್ಲ ಇದಲ್ಲ ಕವಿತೆ, ನಾನು ಇನ್ನೇನೋ ಬರೆಯಬೇಕು, ಇನ್ನೇನೋ ಹೇಳಬೇಕು ಅನ್ನುವ ತುಡಿತ ಶುರುವಾಯಿತು. ಒಳಗೊಂದು ಗುದ್ದಿ ಬರುವ ನೋವು, ನಲಿವು, ಸುಖ, ಸಂಕಟ… ಎಲ್ಲದಕ್ಕೂ ಕವಿತೆ ಎಷ್ಟು ಚೆಂದದ ಸಖ್ಯ ಒದಗಿಸಿಕೊಟ್ಟಿತು. ಈಗ ಬರವಣಿಗೆ ಎಂದರೆ ನನಗೆ ಆತ್ಮಸಖನಂತೆ, ಆತ್ಮಸಖಿಯಂತೆ . ಎಲ್ಲವನ್ನೂ ಮುಕ್ತವಾಗಿ ಹೇಳಿಕೊಂಡು ಹಗುರವಾಗುವ ಈ ಪರಿಯ ಬೆಡಗನ್ನು ದಕ್ಕಿಸಿಕೊಟ್ಟ ಅಕ್ಷರಗಳ ಮಹಿಮೆ ನನಗಿನ್ನೂ ಸೋಜಿಗವೇ.
ನಾನೊಬ್ಬಳು ಗೃಹಿಣಿ ಮತ್ತು ಕೃಷಿಕ ಮಹಿಳೆ ಆದ ಕಾರಣ ನನ್ನ ಪ್ರಪಂಚ ತೀರಾ ಚಿಕ್ಕದು. ಹಳ್ಳಿಯ ಇತರ ಮಹಿಳೆಯರಂತೆ ಒಂದಷ್ಟು ಸುತ್ತಮುತ್ತಲಿನ ಮದುವೆ, ನಾಮಕರಣಗಳಿಗೆ ಹೋಗಿ ಬರುವಷ್ಟೇ ಬಿಡುಗಡೆ. ಇಂತಹ ಹೊತ್ತಿನಲ್ಲಿ ನಿಂತಲ್ಲೇ ಕವಿತೆಯೊಂದು ಎಷ್ಟೋ ಊರುಗಳನ್ನು, ಎಷ್ಟೋ ಮನಸುಗಳನ್ನು ನನ್ನ ಅಡುಗೆಮನೆಯ ಕಿಟಕಿಯಿಂದಲೆ ಬೆಸೆದುಕೊಟ್ಟಿತು. ಕವಿತೆಯ ತೆಕ್ಕೆಗೆ ಬಿದ್ದಮೇಲೆ ಬದುಕು ತುಂಬಾ ಸುಂದರವಾಗಿದೆ ಅನ್ನಿಸುತ್ತಿದೆ. ಎಲ್ಲ ನೋವುಗಳಿಗೂ ಕವಿತೆ ಮುಲಾಮು ಹಚ್ಚಿ ಮಾಯಿಸಬಲ್ಲದು ಅನ್ನಿಸುತ್ತಿದೆ. ಮೊದಲೆಲ್ಲ ಏನು ಬರೆಯಲಿ ಅಂತ ತಡಕಾಡುತ್ತಿದ್ದವಳಿಗೆ ಈಗ ಕುದಿಯುವ ಅನ್ನದೊಳಗೂ, ಸೋಪಿನ ಬುರುಗಿನೊಳಗೂ, ದನದ ನೊರೆ ಹಾಲಿನಲ್ಲೂ ಕವಿತೆ ಪ್ರತಿಫಲಿಸುತ್ತದೆ. ನೆರೆಮನೆಯ ಗೆಳತಿಯ ನೋವಿಗೆ ಸ್ಪಂದಿಸುತ್ತದೆ, ಜಗದ ನೋವಿಗೆ ಕಿವಿಯಾಗುತ್ತದೆ ಕವಿತೆ. ಎಲ್ಲರ ಸಂಕಟವೂ ನನ್ನದೇ ಆಗಿಬಿಡುವ ಭಾವವನ್ನು ಬಿತ್ತಿದ ಕವಿತೆಯೆನ್ನುವುದು ಈಗ ನನ್ನ ಬದುಕಿನ ಒಂದು ಭಾಗದಂತೆ ಅನ್ನಿಸುತ್ತಿದೆ. ಆದರೆ ಏನೇ ಬರೆದರೂ ಎಷ್ಟೇ ಹೇಳಿದರೂ ನಾನು ಹೇಳ ಬೇಕಾದದ್ದು ಇದಲ್ಲ, ಕವಿತೆಯೊಳಗೆ ಹಿಡಿದಿಡಲಾಗುತ್ತಿಲ್ಲ ಅನ್ನುವ ಒಂದು ಅತೃಪ್ತಿಯೊಂದಿಗೆ ಕವಿತೆಯನ್ನು ಬಗಲಲ್ಲಿ ಕಟ್ಟಿಕೊಂಡು ಬದುಕುತ್ತಿರುವೆ.
*
ನಾನಿನ್ನೂ…
ಕವಿತೆಯೇ… ಇಲ್ಲಿ ಕೇಳು,
ನಾನಿನ್ನು ಕಾಡಲಾರೆ
ಕಾಯಲಾರೆ
ನೋಯಲಾರೆ
ಬೇಯಲಾರೆ ಯಾವುದಕ್ಕೂ.
ಅಸ್ಪಷ್ಟ ಕನಸಿಗೊಂದು
ರೆಕ್ಕೆ ಕಟ್ಟಲಾರೆ
ನಡುರಾತ್ರಿಯ ನೀರವತೆಗೆ
ಕಲ್ಲು ಹಾಕಿ ಬೆಳಕಿನ ಗದ್ದಲಕ್ಕೆ
ಬೀಳಲಾರೆ.
ನೇವರಿಸಿ ಹೋದ ತಂಪು ಗಾಳಿಯ
ಜೊತೆಗೆ ಗುದ್ದಾಡಲಾರೆ
ಕಾಡಿದ ಒಂದು ಸಾಲಿನ ಪದಪದದೊಳಗೆ
ಅನೇಕಾರ್ಥ ಹುಡುಕುತ್ತಾ ತ್ರಾಸ ಪಡಲಾರೆ.
ಅಷ್ಟಕ್ಕೂ ದಕ್ಕಿದ ಕವಿತೆಯೊಂದು ಎಲ್ಲ
ಸಂಕಟಗಳಿಂದ ಮುಕ್ತಿ ದೊರಕಿಸಿ
ಕೊಡುತ್ತದೆಯೆಂಬ ಭ್ರಮೆಗಂತೂ ಬೀಳಲಾರೆ.
ಕನಸುಗಳೇ ಹುಟ್ಟದ ರಾತ್ರೆಯ
ಚಾದರವೊಂದನ್ನು ಹೊದ್ದುಕೊಂಡು
ಈ ರಾತ್ರೆ ಹಾಗೆ ನಿದ್ದೆಯ ತೆಕ್ಕೆಗೆ ಬೀಳುವೆ.
ಇಂತಹ ಸುಖಕ್ಕೆ ತಾರೆ ನಿಹಾರಿಕೆಗಳೂ
ಕರುಬುವಂತಾಗಲಿ.
*
ನೆನಪುಗಳು ಬದುಕಿಸುವುದೆಂದರೆ
ಎಲ್ಲವನ್ನೂ ಮರೆವಿಗೆ ನೂಕಲು
ಯತ್ನಿಸುವುದು ಅಥವಾ ಮರೆತಂತೆ
ನಟಿಸುವುದು ಎಲ್ಲರಿಗೂ ಸರಿದೂಗುವ
ಸಂಗತಿಯೇ ಇದು?
ಹಾಗೆಯೇ ತೇಲಿಬಂದ ಪ್ರತಿ ಸಂಜೆಯ
ಮಂದ ಬೆಳಕಿನ ಏಕಾಂತದುದ್ದಕ್ಕೂ
ಒಕ್ಕಲಾಗುತ್ತವೆ ನೆನಹುಗಳು
ಮಿಣುಕು ಹುಳದಂತೆ
ಜೊಂಪೆ ಜೊಂಪೆ ಮಿಣ ಮಿಣ
ಮಿಣುಕು ನೆನಪು ಒಮ್ಮೆ ಬಿಕ್ಕಿ, ಒಮ್ಮೆ ನಕ್ಕು
ಎದ್ದು-ಬಿದ್ದು ಒಂದಕ್ಕೊಂದು ಹಾದು
ಮೌನದೊಳಗೂ ಗದ್ದಲ
ಕ್ಷಣಗಳು ಕರಗುವ ಧಾವಂತಕ್ಕೆ
ಮರೆಗುಳಿಯಾಗಬೇಕೆನ್ನುವ ನೈರಾಶ್ಯ
ಹೊಕ್ಕು… ಅಚಾನಕ್
ನಿಟ್ಟುಸಿರೊಂದು ಹೊಮ್ಮಿ ಬಯಲ
ತುಂಬಿಕೊಳ್ಳುತ್ತದೆ.
ಪುಪ್ಪುಸದೊಳಗೊಂದು ಬೀಡುಬಿಟ್ಟ
ಕಾಡುವ ದನಿಯ ಗಂಧವ ಇಲ್ಲಿತನಕ ಕಿತ್ತು
ಬಿಸುಟಲಾಗಲಿಲ್ಲ ಯಾಕೆ?
ಹೊರಹಾಕಿದಷ್ಟು ಮತ್ತೆ ಒಳಗೆಳೆದುಕೊಳ್ಳುವ
ಕ್ರಿಯೆ ನಮ್ಮ ಅರಿವಿಗೂ ಮೀರಿದ್ದೇ,
ಅಥವ ಇದೊಂದು ಉಸಿರಾಟದ
ಸಹಜ ಗತಿಯೇ?
ನವಿರು ನೆನಪಿನ ಶ್ವಾಸ ಎದೆಗೂಡ ಹೊಕ್ಕಾಗ
ನರ ನಾಡಿಗಳು ಚುರುಕಾಗುತ್ತವೆ
ಕೆನ್ನೆಗೆ ರಕ್ತ ನುಗ್ಗುತ್ತದೆ
ಮತ್ತೆ ಮತ್ತೆ ಮುರಿದ ಕನಸೊಂದು
ಮರುಜೀವ ಪಡೆದುಕೊಳ್ಳುತ್ತಲೇ ಇರುತ್ತದೆ
ನೆನಪುಗಳೂ ಬದುಕಿಸುತ್ತದೆಯೆನ್ನುವುದು
ಹೌದೇ ಇರಬೇಕು.
ಸತ್ತಂತಾಗುವಾಗಲೆಲ್ಲ ಮತ್ತೆ
ಬದುಕಬೇಕು
ಅದಕ್ಕಾಗಿಯಾದರೂ ಕಲ್ಮಶವಲ್ಲದ
ನೆನಹಿನ ಉಸಿರ ಕುರುಹುವೊಂದು
ಬಗಲಲ್ಲಿ ಅಡ್ಡಾಡುತ್ತಿರಬೇಕು.
*
ಸ್ಮಿತಾ ಅಮೃತರಾಜ್ : ಗೃಹಿಣಿ ಮತ್ತು ಕೃಷಿಕ ಮಹಿಳೆಯಾಗಿ ಕೊಡಗಿನ ಸಂಪಾಜೆ ಬಳಿಯ ಚೆಂಬುವಿನಲ್ಲಿ ವಾಸ. ಓದು ಮತ್ತು ಬರವಣಿಗೆ ಆಸಕ್ತಿಯ ವಿಷಯಗಳು. ಮೂರು ಕವನ ಸಂಕಲನ, ಮೂರು ಲಲಿತ ಪ್ರಬಂಧ ಸಂಕಲನ, ಒಂದು ಪುಸ್ತಕ ಪರಿಚಯ ಸಂಕಲನ ಪ್ರಕಟಗೊಂಡಿದೆ.
*
ಇದನ್ನೂ ಓದಿ : Poetry : ಅವಿತಕವಿತೆ ; ಕಾವಲಿ ಉರಿಗೆ ಕಾಯಬೇಕು ಎಣ್ಣೆಯ ತೇವ ಬಸಿರಿಗೆ ಕಲಸಿದ ಹಿಟ್ಟು ಆಕಾರಗೊಳ್ಳಬೇಕು
ಇದನ್ನೂ ಓದಿ : Poetry : ಅವಿತಕವಿತೆ : ನಾವೂ ದೇವರ ಹೂರೂಪ ಎಂಬುದ ಮರೆತು, ಮುಳ್ಳನ್ನೂ ಮುಚ್ಚಿಟ್ಟುಕೊಳ್ಳುತ್ತೇವೆ
Published On - 9:44 am, Sun, 2 January 22