Kannada Play : ‘ಗಂಡನನ್ನೇ ಕೊಲೆ ಮಾಡುವುದೆ?’ ಇಂದು ಸಂಜೆ ಧಾರವಾಡದಲ್ಲಿ ಬಯಲು ಮಾಡಲಿದೆ ‘ಆಟಮಾಟ’

|

Updated on: Sep 03, 2021 | 10:56 AM

Corona : ‘ಉಸಿರುಗಟ್ಟಿಸುವಂಥ ಈ ವಾತಾವರಣದಲ್ಲಿ ಜನಕ್ಕೆ ಸಮಾಧಾನ, ರಂಜನೆ ಬೇಕು. ಹಾಗಾಗಿ ತಿಳಿಹಾಸ್ಯ, ಅಧ್ಯಾತ್ಮ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಕೇಂದ್ರಿತ ನಾಟಕಗಳನ್ನು ಪ್ರಸ್ತುತಪಡಿಸುತ್ತ ಬಂದಿದ್ದೇವೆ. ರಂಗಮಂದಿರಗಳಿಗೆ ಜನ ಮರಳಲಿ ಎಂಬ ಸದಾಶಯ ಈಡೇರುತ್ತಿದೆ.’ ಮಹಾದೇವ ಹಡಪದ

Kannada Play : ‘ಗಂಡನನ್ನೇ ಕೊಲೆ ಮಾಡುವುದೆ?’ ಇಂದು ಸಂಜೆ ಧಾರವಾಡದಲ್ಲಿ ಬಯಲು ಮಾಡಲಿದೆ ‘ಆಟಮಾಟ’
ರಂಗನಿರ್ದೇಶಕ ಮಹಾದೇವ ಹಡಪದ ಮತ್ತು ನಾಟಕ ರಚನೆಕಾರ ಲೋಹಿತ ನಾಯ್ಕರ
Follow us on

Birthday Gift : ಧಾರವಾಡದ ಅಭಿನಯ ಭಾರತಿ ತಂಡದ ರಂಗವರ್ಷಾ ನಾಟಕೋತ್ಸವದಲ್ಲಿ ಇಂದು ಸಂಜೆ ಆರು ಗಂಟೆಗೆ ಧಾರವಾಡದ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯದಲ್ಲಿ ‘ಬರ್ತಡೇ ಗಿಫ್ಟ್’ ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ಧಾರವಾಡದ ‘ಆಟಮಾಟ’ ತಂಡವು ಅಭಿನಯಿಸಲಿದೆ. ಇದ ಕಥಾವಸ್ತು ಈ ನಾಟಕವು ಮರ್ಡರ್ ಮಿಸ್ಟ್ರಿ ವಸ್ತುವನ್ನಾಧರಿಸಿದ್ದು, ಕುತೂಹಲ ಕೆರಳಿಸುವ ಕಥಾ ಹಂದರವನ್ನು ಹೊಂದಿದೆ. ಲೋಹಿತ್ ನಾಯ್ಕರ್ ಅವರ ರಚನೆಯ ನಾಟಕವನ್ನು ಮಹಾದೇವ ಹಡಪದ ನಿರ್ದೇಶಿಸಿದ್ದಾರೆ.  

ಚಂಚಲ್ ಶೆಟ್ಟಿ : ನಾನು ಆಧುನಿಕ ಕಾಲದ ಆಧುನಿಕ ವಿಚಾರವಂತಿಕೆಯ ಸ್ವಾಭಿಮಾನಿ ಹೆಣ್ಣು, ನನ್ನ ಬದುಕು ಹೇಗಿರಬೇಕು, ಹೇಗೆ ನಿಯಂತ್ರಿಸಿಕೊಳ್ಳಬೇಕು ಎಂಬುದನ್ನ ಅರಿತವಳು. ನನ್ನ ಹಕ್ಕು, ನನ್ನ ಆಯ್ಕೆಗಳನ್ನ ತಿಳಿದುಕೊಂಡ ಹೆಣ್ಣು. ಐ‌ ನೋವ್ ವಾಟ್ ಆ ಆ್ಯಮ್, ಐ ನೋವ್ ವಾಟ್ ಐ ಶುಡ್ ಬಿ. ಸಿರಿವಂತ ಹೆಣ್ಣನ್ನು ಮದುವೆಯಾಗಿ ಅವಳನ್ನು ಸರಿಯಾಗಿ ಸಾಕಲು ಬಾರದಿದ್ದರೆ ಅವನೆಂಥ ಗಂಡ ಹೇಳಿ…? ಕರ್ತವ್ಯಗಳಲ್ಲಿ ವಿಫಲನಾಗಿದ್ದ ನನ್ನ ಗಂಡ. ನೋಡಿ ವಕೀಲರೆ. ನಾನೇನೂ ಅವನ ಸಾವು ಬಯಸಿರಲಿಲ್ಲ ವಿಚ್ಛೇದನ ಪಡೆಯಬೇಕೆಂದು ತಯಾರಿ ನಡೆಸಿದ್ದೆ.

ವಕೀಲ : ಅದಕ್ಕೆ

ಚಂಚಲ್ : ಅದಕ್ಕೆ ಅಂದರೆ

ವಕೀಲ : ಗಂಡನನ್ನೇ ಕೊಲೆ ಮಾಡುವುದೇ…

ಹೀಗೆ ವಕೀಲ ಮತ್ತು ಫಿರ್ಯಾದಿ ಇಬ್ಬರ ನಡುವಿನ ಪಾಟಿಸವಾಲಿನ ಕಲ್ಪನಾಶೀಲತೆಯನ್ನು ಈ ನಾಟಕ ವಿಸ್ತರಿಸುತ್ತದೆ. ಇಲ್ಲಿ ಪ್ರೇಕ್ಷಕರೇ ನ್ಯಾಯಾಧೀಶರು. ವಕೀಲರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಒಂದು ಹಂತದಲ್ಲಿ ಚಂಚಲ್ ಶೆಟ್ಟಿ ಸ್ಫೋಟಗೊಳ್ಳುವಾಗಿನ ಸಂದರ್ಭವಿದು.

ಒಂದು ಕೊಲೆಯ ಸುತ್ತ ನಡೆಯುವ ರೋಚಕ ಸಂಗತಿಗಳನ್ನು, ನಾಟಕೀಯ ರೀತಿಯಲ್ಲಿ ಬೆಳೆಯುವ ಕತೆಯಲ್ಲಿ ಬರುವ ಕೊನೆಯ ಟ್ವಿಸ್ಟ್ ಸಸ್ಪೆನ್ಸ್. ಮೂರನೇ ಅಲೆಯ ನಂತರ ಧಾರವಾಡದಲ್ಲಿ ಏರ್ಪಟ್ಟಿರುವ ಮೊದಲ ನಾಟಕೋತ್ಸವವಿದು. ಈ ಉತ್ಸವದಲ್ಲಿ ನಿನ್ನೆ ಮೊನ್ನೆ ನಡೆದಿರುವ ನಾಟಕಗಳು ಹೌಸ್​ಫುಲ್!

‘ಕೊರೊನಾದಂಥ ಉಸಿರುಗಟ್ಟಿಸುವ ವಾತಾವರಣದಲ್ಲಿ ಜನಕ್ಕೆ ಸಮಾಧಾನ, ಮನೋರಂಜನೆ ಬೇಕಾಗುವುದು ಸಹಜ. ಜನರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಕಲಾಪ್ರದರ್ಶನ ನೀಡುವುದು ನಮ್ಮ ಜವಾಬ್ದಾರಿ. ಒಂದು ತಿಳಿಹಾಸ್ಯ ಇನ್ನೊಂದು ಅಧ್ಯಾತ್ಮ ಮತ್ತೊಂದು ಸಸ್ಪೆನ್ಸ್​ ಥ್ರಿಲ್ಲರ್ ಈ ಮೂರು ಪ್ರಕಾರದ ನಾಟಕಗಳನ್ನು ಜನರು ನೋಡಲು ಬಯಸುತ್ತಿದ್ದಾರೆ. ಮೊದಲನೇ ಅಲೆಯ ನಂತರ ಗುಲಬರ್ಗಾದಲ್ಲಿ ನಮ್ಮ ಆಟಮಾಟ ತಂಡದಿಂದ ‘ಸಿರಿಪುರಂದರ’ ನಾಟಕ ಪ್ರದರ್ಶಿಸಿದ್ದೆವು. ಎರಡನೇ ಅಲೆಯ ನಂತರ ಧಾರವಾಡದಲ್ಲಿ ‘ಕಾರ್ಪೋರೇಟರ್​ ಕೊಟ್ರಯ್ಯ’ ಹಾಸ್ಯಪ್ರಧಾನ ನಾಟಕ. ಈಗ ಸಸ್ಪೆನ್ಸ್​ ಥ್ರಿಲ್ಲರ್ ‘ಬರ್ತಡೇ ಗಿಫ್ಟ್’ ಪ್ರದರ್ಶನಗೊಳ್ಳುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ರಂಗಾಸಕ್ತರು ರಂಗಮಂದಿರಗಳಿಗೆ ಮರಳಲಿ ಎನ್ನುವ ಪ್ರಯತ್ನ ನಮ್ಮದು. ನಿನ್ನೆ ಮೊನ್ನೆ ನಡೆದ ನಾಟಕಗಳಿಗಾಗಿ ರಂಗಮಂದಿರ ಭರ್ತಿಯಾಗಿತ್ತು ಎನ್ನುವುದೇ ಸದ್ಯದ ಮಟ್ಟಿಗಿನ ಸಂತೋಷ’ ರಂಗನಿರ್ದೇಶಕ ಮಹಾದೇವ ಹಡಪದ ತಮ್ಮ ಆಶಯವನ್ನು ಹೀಗೆ ವ್ಯಕ್ತಪಡಿಸುತ್ತಾರೆ.

‘ಬರ್ತಡೇ ಗಿಫ್ಟ್’ ನಾಟಕದ ಲೇಖಕರು ಲೋಹಿತ್ ನಾಯ್ಕರ್. ಹದಿನೈದು ವರ್ಷಗಳ ಹಿಂದೆ ಪ್ರಕಟಿಸಿದ ‘ನಾ ಬದಕ್ಲಿಕ್ಕೇ ಒಲ್ಲ್ಯಪ್ಪಾ’ ಏಳು ನಾಟಕಗಳ ಸಂಗ್ರಹದಿಂದ ಸದ್ಯದ ನಾಟಕವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. 2011ರಲ್ಲಿಯೂ ಈ ನಾಟಕ ಪ್ರದರ್ಶನಗೊಂಡಿತ್ತು. ಈಗ ಮಹಾದೇವ ಇದನ್ನು ಮರುನಿರ್ದೇಶಿಸಿದ್ದಾರೆ. ಪ್ರವೇಶ ದರ ರೂ.50.

ಇದನ್ನೂ ಓದಿ : Kannada New Movie : ‘ಮ್ಯೂಸಿಯಂನಲ್ಲಿಟ್ಟ ವಸ್ತುವಿನಂತೆ ಅವರೆಲ್ಲ ನನ್ನನ್ನು ನೋಡುತ್ತಿದ್ದರು’

Published On - 10:52 am, Fri, 3 September 21