Joladarashi Doddanagowdaru : ಇಂದು ನಾಟಕಕಾರ, ಕವಿ ಗಮಕಿ ಜೋಳದರಾಶಿ ದೊಡ್ಡನಗೌಡರು ಹುಟ್ಟಿದ ದಿನ (27.7.1910-10.5.1994). ಬಳ್ಳಾರಿ ಜಿಲ್ಲೆಯ ಜೋಳದರಾಶಿಯಲ್ಲಿ ಇವರು ಹುಟ್ಟಿದ್ದು. ತಂದೆ ಪಂಪನಗೌಡರು, ತಾಯಿ ರುದ್ರಮ್ಮ. ಜೈಮಿನಿ ಭಾರತ, ಹರಿಶ್ಚಂದ್ರ ಕಾವ್ಯ, ಪ್ರಭುಲಿಂಗಲೀಲೆ ಮುಂತಾದ ಕಾವ್ಯಗಳ ಮಡಿಲಲ್ಲೇ ಇವರ ವಿದ್ಯಾಭ್ಯಾಸ ಅರಳತೊಡಗಿತು. ಬಯಲಾಟದ ಕಲಾವಿದರಾಗಿದ್ದ ಇವರಿಗೆ ನಾಟಕ ಕಂಪೆನಿ ಕಟ್ಟಬೇಕೆಂಬ ಹಂಬಲ ಉಂಟಾಯಿತು. ನಂತರ ಅದು ಸ್ಥಗಿತಗೊಂಡರೂ ತೆಲುಗು, ಕನ್ನಡ ನಾಟಕಗಳಲ್ಲಿ ಅಭಿನಯ ಮುಂದುವರಿಸಿದರು. ಕನಕದಾಸ, ಬಸವೇಶ್ವರ, ಕಬೀರದಾಸ, ನಾರದ, ಕೃಷ್ಣ ಮುಂತಾದ ಪಾತ್ರಗಳಲ್ಲಿ ನಟಿಸಿ ಜನಮಾನಸಲ್ಲಿ ಉಳಿದರು. ಕನ್ನಡ, ತೆಲುಗಿನಲ್ಲಿ ಸುಮಾರು ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದರು. ರಸವರ್ಷ, ಯಾತ್ರಿಕ, ನಮ್ಮ ಹಂಪೆ, ಗೌಡತಿ ಬರಲಿಲ್ಲ, ರಾಮೇಶನ ವಚನಗಳು ಮುಂತಾದವು. ನಾಟಕಗಳು : ನೋಡ್ರವ್ವ ನಾಟಕ, ಅಭಯ, ಸಾಯದವನ ಸಮಾಧಿ, ಕ್ರಾಂತಿ ಪುರುಷ, ಕನಕದಾಸ ಪ್ರಮುಖವಾದವುಗಳು. ಇವರ ಕಂಠಸಿರಿಯಿಂದ ಹೊಮ್ಮುತ್ತಿದ್ದ ನಾಟ್ಯಗೀತೆಗಳು ಅದ್ಭುತವಾಗಿರುತ್ತಿದ್ದವು.
ಸಂಘಟಕರಾಗಿದ್ದ ಇವರು ಬಳ್ಳಾರಿ ಜಿಲ್ಲಾ ಕನ್ನಡ ಕಲಾ ಪರಿಷತ್ತನ್ನು ಸ್ಥಾಪಿಸಿದರು. ಗರೂಡ ಸದಾಶಿವರಾಯರು, ಆರ್. ನಾಗೇಂದ್ರರಾಯರು, ಅ.ನ.ಕೃ ರವರ ಅಧ್ಯಕ್ಷತೆಯಲ್ಲಿ ನಾಟಕ ಮತ್ತು ಕಲೆಯ ಬಗ್ಗೆ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿ ಆ ಭಾಗದ ಜನರಲ್ಲಿ ಕಲಾಸಕ್ತಿ ಮೂಡಲು ಕಾರಣೀಕರ್ತರಾದರು. ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ‘ನಂದೇ ನಾನೋದಿದೆ’ ಇವರ ಆತ್ಮಕಥನದಿಂದ ಆಯ್ದ ಭಾಗ ‘ಮಧ್ಯಂತರ ಚುನಾವಣೆಗಳು ಹಾಗೂ ಅವುಗಳ ಹಿನ್ನೆಲೆ’ ನಿಮ್ಮ ಓದಿಗೆ.
*
ರಾಜಕೀಯವಿಲ್ಲದೆ ರಾಜ್ಯ, ರಾಷ್ಟ್ರಗಳ, ಆಡಳಿತ ನಡೆಯಲಾರದು. ಸುಖಶಾಂತಿಗಳು ಆ ರಾಷ್ಟ್ರದಲ್ಲಿ ನೆಲೆಸಲಾರವು. ಜನತೆಯ ಸಾಮಾಜಿಕ ನೈತಿಕ, ಧಾರ್ಮಿಕ, ಆರ್ಥಿಕ ಪ್ರಗತಿಗಳು ಸಮಾಧಾನಗೊಂಡು ಸಾಗಲಾರವು. ಪ್ರಜಾರಾಜ್ಯದಲ್ಲಿ ಆಡಳಿತವನ್ನು ರೂಪಿಸುವ ಮೂಲಹಕ್ಕು ಬಾಧ್ಯತೆಗಳು, ಆ ರಾಜ್ಯದ ಪ್ರಜರದೇ ಆಗಿದೆ. ಪ್ರತೀ ಐದು ವರ್ಷಗಳಿಗೊಮ್ಮೆ ಚುನಾವಣೆಗಳ ಮೂಲಕ ಪ್ರಜರು ಸರಕಾರವನ್ನು ನಿರ್ಮಾಣ ಮಾಡಬೇಕಾಗಿದೆ. ಸ್ವಾತಂತ್ರ್ಯಾನಂತರ ನಮ್ಮ ದೇಶದ ಪಾರಂಗತರು, ಪ್ರಜಾಧಿಕಾರ ರೂಪಿತ ಪ್ರಜಾರಾಜ್ಯದ ಘಟನೆಗಳನ್ನು, ಶಾಸ್ತ್ರೋಕ್ತ ರೀತಿಯಿಂದ ರಾಜ್ಯಕ್ಕೆ ಸುಖ-ಶಾಂತಿಗಳ ಪಾಲನೆಯು ಲಭ್ಯವಾಗಲೆಂದು ಬಯಸಿ ರೂಪಿಸಿದರು. ಅದರಂತೆಯೇ ದೇಶದ ಮುಖಂಡರು, ಸರಕಾರದ ರಚನಾಕಾರ್ಯವನ್ನು ಪ್ರಜಾಂಕಿತಗೊಳಿಸಿ, ಚುನಾವಣೆಗಳಿಂದ ರೂಪಿತವಾಗುತ್ತಿರುವ, ಸರಕಾರಗಳಿಂದ ದೇಶಾಭ್ಯುದಯಕ್ಕಾಗಿ ಪಾಲನೆಯನ್ನು ಮುಂದುವರಿಸಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ತ್ಯಾಗದ ಸ್ಥಾನದಲ್ಲಿದ್ದ ಕಾಂಗ್ರೆಸ್ ಸಂಸ್ಥೆಗೆ, ದೇಶದ ಜನಾಂಗ ತಮ್ಮ ತನು-ಮತ-ಧನಗಳಿಂದ ನೆರವಿತ್ತುದರ ಫಲವಾಗಿ, ಆಂಗ್ಲೇಯರ ಅಧಿಕಾರದಿಂದ ಪಾರಾಗಿ, ಸ್ವಾಧಿಕಾರದ ಸ್ವಾತಂತ್ರ್ಯವನ್ನು ಪಡೆಯಲಾಯಿತು. ಮಹಾತ್ಮ ಗಾಂಧಿಯವರು ಅರ್ಜಿಸಿದ ತಮ್ಮೆಲ್ಲ ಪುಣ್ಯದ ಫಲವನ್ನು ಈ ಸ್ವಾತಂತ್ರ್ಯಕ್ಕಾಗಿ ಧಾರೆ ಎರೆದರು. ಇವರ ಅನುಯಾಯಿಗಳಲ್ಲಿ ಕೆಲವರು ಆತ್ಮಾಹುತಿಗಳನ್ನಿತ್ತರು. ಸ್ವಾತಂತ್ರ್ಯಾಮೃತವು ನಮ್ಮ ಕೈಗೆ ಬರುವಷ್ಟರಲ್ಲಿಯೇ ಪಾಕಿಸ್ತಾನದ ವಿಷಮಿಶ್ರಿತವಾಗಿ ಗಾಂಧೀಜಿ ಗುಂಡಿಗೆ ಬಲಿಯಾಗಬೇಕಾಯಿತು.
ರೂಪಿತವಾದ ರಾಜ್ಯಾಂಗದಲ್ಲಿ ದಿನದಿನಕ್ಕೆ ತ್ಯಾಗವು ಮರೆಯಾಗುತ್ತ ಭೋಗಲಾಲಸೆಗಳು ತಲೆದೋರಿದವು. ತ್ಯಾಗಮಯ ಸ್ವಾತಂತ್ರ್ಯ ಸ್ಫೂರ್ತಿಗೆ ನೆಲೆಯಾಗಿ ನಿಂತ ಗಾಂಧಿಯ ಮಾತುಗಳು ರಾಷ್ಟ್ರದ ಅಧಿಕಾರ ವಹಿಸಿದ ನಾಯಕರಿಗೆ ಕಹಿಯಾದವು. ಗಾಂಧೀಜಿಯವರ ರಾಮರಾಜ್ಯ, ರಾವಣ ರಾಜ್ಯಕ್ಕೆ ತಿರುಗುತ್ತಿರುವುದು ನೋಡಿ, ಕೆಲವರಿಗೆ ವಿಷಾದವಾಯಿತು. ಇಂದಿನ ಸ್ವಾತಂತ್ರ್ಯವನ್ನು ಗಾಂಧಿ ಬಯಸಿರಲಿಲ್ಲ. ತನ್ನ ಅನುಯಾಯಿಗಳೇ ತನ್ನನ್ನು ತನ್ನ ತತ್ವವನ್ನು ಉದಾಸೀನ ಮಾಡುವರೆಂದು ತಿಳಿದಿರಲಿಲ್ಲ. ನೂರಿಪ್ಪತ್ತು ವರ್ಷ ಬಾಳಬೇಕೆಂಬ ತಮ್ಮ ಆಶೆ, ನಿರಾಶೆಯಾಗಿ ಪರಿಣಮಿಸಿದ್ದರಿಂದ, ಗಾಂಧಿಯವರು ಮೃತ್ಯು ಮುಖದತ್ತ ತಿರುಗಿದರು. ಗೋಡಸೆಯ ರೂಪದಿಂದ ಮೃತ್ಯುವು ಅವರನ್ನು ತನ್ನ ಗರ್ಭದಲ್ಲಿಟ್ಟುಕೊಂಡಿತು.
ಅವರ ಉತ್ತರಾಧಿಕಾರಿ ಮುಖ್ಯ ಶಿಷ್ಯ, ಪಂಡಿತ ಜವಾಹರಲಾಲ್ ಅವರ ಅಧಿಪತ್ಯದತ್ತ, ಇಡೀ ದೇಶಕ್ಕೆ ಜನತೆ ದೈನ್ಯದಿಂದ, ಆಶೋತ್ತರಗಳ ಹಂಬಲದಿಂದ ನೋಡತೊಡಗಿತು. ಪಂಡಿತ ಜವಾಹರಲಾಲರು ದೊಡ್ಡ ಮನೆತನದ, ಮಹಾ ಭಾರತದ ನಿಸ್ವಾರ್ಥ ಮಹಾವ್ಯಕ್ತಿ. ಪ್ರಪಂಚದಲ್ಲಿ ಅವರ ಮುಖಂಡತ್ವದ ವ್ಯಾಪಕತ್ವತೆಯು, ಪ್ರತಿಭಾಮಯ ಜೀವನವು, ಚರಿತ್ರಾರ್ಹವಾದುದು. ರಾಷ್ಟ್ರದ ದುರ್ದೈವದಿಂದ, ನೆಹರು ಅವರ ಹದಿನೇಳು ವರ್ಷಗಳ ಅವಧಿಯಲ್ಲಿ ಪ್ರಾರಂಭವಾದ ಭಾರತ ರಕ್ಷಣೆಯ ಆರ್ಥಿಕದ ತೊಡಕುಗಳು, ಆಡಳಿತ ಲೋಪದೋಷಗಳು, ಪಾಕಿಸ್ತಾನದ ಕೀಟಲೆಗಳು, ಭಾರತಾಂತರ್ಗತವಾದ ಎಸ್ಟೇಟುಗಳ ಸಮಸ್ಯೆಗಳು, ವಿರುದ್ಧ ಪಾರ್ಟಿಗಳ ಭಿನ್ನಾಭಿಪ್ರಾಯಗಳು ಹೀಗೆ ನೂರಾರು ಅಡೆತಡೆಗಳನ್ನು ನಿಗ್ರಹಿಸಿ ಒಂದು ವ್ಯವಸ್ಥೆಗೆ ದೇಶದ ಆಡಳಿತೆಯನ್ನು ತರುವ ಕ್ರಮದಲ್ಲಿ, ಪರದೇಶಗಳ ಅಪಾರವಾದ ಸಾಲುಗಳಿಗೆ ನಮ್ಮ ದೇಶ ಬಲಿಯಾಯಿತು. ಸಾಂಘಿಕ, ಧಾರ್ಮಿಕ, ನೈತಿಕ ಆರ್ಥಿಕ ರಂಗಗಳು ಕೃಶವಾದವು. ದೇಶ ಯಾವ ಮುಖವಾಗಿಯೂ ಪ್ರಗತಿಯನ್ನು ಸಾಧಿಸಲಿಲ್ಲ. ಏನಾದರೂ ಪ್ರಗತಿಯಾಗಿದ್ದರೆ ಅದು ಅಪಾರ ಸಾಲದಿಂದಾದದ್ದು ಮಾತ್ರ. ಪ್ರಗತಿಯಾದುದೆಂದರೆ ಯಾವ ಪಂಚವಾರ್ಷಿಕಗಳಿಲ್ಲದೆ, ನಿರಾತಂಕವಾಗಿ ಬೆಳೆದಿದ್ದು, ಬೆಳೆಯುತ್ತಿರುವುದು ಜನಸಂತತಿ ಸಾಲ ಸಂತತಿ ಸ್ಪರ್ಧೆಯಿಂದ ಧಾರಾಳವಾಗಿ ಯಾರ ಅಂಕಿತಕ್ಕೂ ಸಿಲುಕದೆ ಬೆಳೆದವು.
ನೆಹರು ಅವರ ಘನೋದ್ದೇಶ, ರಾಷ್ಟ್ರದ ಪ್ರಗತಿಪರವಾಗಿಯೇ ಇತ್ತು. ಯಾರೂ ಎಂದೂ ಅವರ ಕಡೆ, ಬೆರಳು ತೋರಿಸುವಂಥ ದೋಷಗಳಾಗಿರಲಿಲ್ಲ. ರಾಷ್ಟ್ರ ಪ್ರಗತಿಗೆ ವಿದೇಶಿಯರ ಅನುಕರಣ ಮಾಡಿದ್ದೇ, ನಮ್ಮ ದೇಶಕ್ಕೆ ಸರಿಹೊಂದಿಲ್ಲವೆಂದು, ರಾಜ್ಯಶಾಸ್ತ್ರಜ್ಞರ ಅಭಿಪ್ರಾಯ. ಮಹಾತ್ಮಾಗಾಂಧೀಜಿಯವರ ಅಭಿಪ್ರಾಯ, ಮೂಲ ಹಳ್ಳಿಗಳಿಂದಲೇ ಪ್ರಗತಿಯು ಸಾಗಿ ಬರಬೇಕೆಂದು, ಅನೇಕ ಸಲ ಹೇಳಿದ್ದರು. ಭಾರತದಲ್ಲಿ ಮೂಲ ವ್ಯವಸಾಯ ಕೃಷಿ. ಬ್ರಿಟೀಷರ ಕಾಲದಲ್ಲಿ ಅದಕ್ಕೆ ಪ್ರೋತ್ಸಾಹವಿಲ್ಲದ್ದರಿಂದ, ಕ್ಷೀಣಸ್ಥಿತಿಗಿಳಿದಿತ್ತು. ಅದರ ಪುನರೋದ್ಧಾರದೊಂದಿಗೆ, ಆಹಾರೋತ್ಪತ್ತಿಯನ್ನು ಹಳ್ಳಿಯ ಕೈಗಾರಿಕೆಗಳನ್ನು ಇತರ ಸುಧಾರಣೆಗಳನ್ನು, ಆಹಾರೋತ್ಪತ್ತಿಯನ್ನು, ಹಳ್ಳಿಯ ಕೈಗಾರಿಕೆಗಳನ್ನು ಇತರ ಸುಧಾರಣೆಗಳನ್ನು, ಹಳ್ಳಿಗಳ ಮೂಲಕ ರಾಷ್ಟ್ರಕ್ಕೆ ಪ್ರಗತಿಯ ಭದ್ರತೆಯನ್ನು ಸೂಚಿಸಿದ್ದರು. ಪಂಡಿತ ನೆಹರು ಅವರು ಪಾಶ್ಚಾತ್ಯ ಸಂಸ್ಕೃತಿಯಲ್ಲಿಯೇ ಬೆಳೆದು ಬಂದವರು. ಹಾಗೂ ವಿಹಂಗಮ ದೃಷ್ಟಿಯುಳ್ಳವರು. ಉತ್ಸಾಹ ಉದ್ರೇಕ ಸ್ವಭಾವವುಳ್ಳವರು. ಉನ್ನತೋದ್ದೇಶ, ವಿಶಾಲಭಾವ ಪ್ರಪಂಚದಲ್ಲಿ, ವಿಸ್ತಾರವಾಗಿ ಸುಳಿಯುವ ಅವರ ಸ್ವಭಾವಕ್ಕೆ ಗಾಂಧೀಜಿಯವರು ಇತ್ತ, ಸೂಚನೆ, ಮಂದಪ್ರಗತಿದಾಯಕವೆಂದು, ಆ ಮಾರ್ಗದಲ್ಲಿ ಅಷ್ಟೊಂದು ಆಸಕ್ತಿ ತೋರದೆ, ಶೀಘ್ರಗಾಮಿಗಳಾಗಿ, ದೇಶವು ಆರ್ಥಿಕ ಸಂಪನ್ನತೆಯನ್ನು ಗಳಿಸಿಕೊಳ್ಳಬೇಕಾದರೆ, ಪ್ರಗತಿಯಿಂದ ತಲೆಯೆತ್ತಿ ನಿಂತ ಪಾಶ್ಚಾತ್ಯ ರಾಷ್ಟ್ರಗಳೊಂದಿಗೆ, ಸಮಾನತೆ ಧುರೀಣತೆಯಿಂದ ಭಾರತವು ಬೆಳಗಬೇಕಾದರೆ, ದೊಡ್ಡ ದೊಡ್ಡ ಕಾರ್ಖಾನೆಗಳನ್ನು ಸ್ಥಾಪಿಸುವುದೇ ಶೀಘ್ರ ಫಲಕಾರಿಯೆಂದು ಪಂಚವಾರ್ಷಿಕ ಯೋಜನೆಗಳನ್ನು ಬಳಕೆಗೆ ತಂದರು.
ದೇಶ ಜನತೆ ಇದನ್ನು ಗಮನಿಸುವ, ಆಚರಣೆಗೆ ತಂದುಕೊಳ್ಳುವ ಪರಿಜ್ಞಾನವುಳ್ಳವರಾಗಿರಲಿಲ್ಲ. ಹಲವಾರು ಸ್ವಾರ್ಥಿಗಳ ಉನ್ನತೋದ್ಯೋಗಿಗಳ ಕೈಗೆ ಈ ಯೋಜನೆಗಳು ಸಿಕ್ಕು, ಮೂಲವಾದ ಹಳ್ಳಿಗಳ ಪ್ರಗತಿಗೆ, ಈ ಯೋಜನೆಗಳು ಕುಂಠಿತವಾದವು. ಇತ್ತ ಹಳ್ಳಿಗಳಿಗೂ ದಾರಿದ್ರದಿಂದ ಮುಕ್ತವಾಗಲಿಲ್ಲ. ಅತ್ತ ಆರ್ಥಿಕ ಚೈತನ್ಯದೊಂದಿಗೆ ದೇಶವೂ ಮೇಲೇಳಲಿಲ್ಲ. ಸಾಲ ಮಾತ್ರ ಬೇತಾಳನಂತೆ ಎದ್ದು ನಿಂತಿತು. ನೆಹರು ಆ ನಂತರ ಬಂದ ಲಾಲ್ ಬಹದ್ದೂರ್ ಶಾಸ್ತ್ರೀಗಳ ದಕ್ಷತೆಯ ಆಳ್ವಿಕೆ, ಆಶಾದಾಯಕವಾಗಿ ಮಿಂಚಿನಂತೆ ಸುಳಿದು ರಷ್ಯಾ ದೇಶದ ತಾಷ್ಕೆಂಟಿನಲ್ಲಿ ಸಮಾಪ್ತಿಯಾಯಿತು. ಜನತೆ ಇವರ ಬಗ್ಗೆ ಆಸೆಯಿಂದ ನಿರೀಕ್ಷಿಸಿದ ಫಲ ವಿಫಲವಾಯಿತು.
ತಂದೆಯ ಮೇಲಿನ ಅಭಿಮಾನದಿಂದ ಕಾಂಗ್ರೆಸ್ ನಾಯಕರು, ಜವಹರಲಾಲ್ ಅವರ ಮಗಳಾದ ಇಂದಿರಾಗಾಂಧಿಯವರನ್ನು, ರಾಷ್ಟ್ರದ ಗದ್ದುಗೆಗೇರಿಸಿದರು. ತಂದೆಯೊಂದಿಗೆ ವಿದೇಶಿಗಳ ಪರಿಚಯ ಪಡೆದವರು, ಇಂದಿನ ದೇಶದ ಆರ್ಥಿಕ ಸ್ಥಿತಿಗೆ ಸಹಾಯಕವೂ ಆಗಬಹುದೆಂದು ತಿಳಿದು, ಆ ದೊಡ್ಡ ಸ್ಥಾನವನ್ನು ಆ ಹೆಣ್ಣುಮಕ್ಕಳಿಗೆ ನೀಡಿದರು. ಹಿರಿಯರು ಆ ಸ್ಥಾನವನ್ನು ಸುತ್ತಿಕಟ್ಟಿ ರಕ್ಷಣೆ ನೀಡಿದರು. ಕಾಲವೈಪರೀತ್ಯ ಕೆಲವು ದಿನಗಳು ಕಳೆಯುತ್ತಾ, ನಾಯಕರು ಭಾವಿಸಿದಂತೆ ನಡೆಯಲಿಲ್ಲ. ಇಂದಿರಾಗಾಂಧಿಯವರು ಹೆಣ್ಣಾದರೂ, ಅಧಿಕಾರವು ಗಂಡಾಗಿತ್ತು. ಹಳೆಯತನದ ನಾಯಕರ ಯಾಜಮಾನ್ಯವೂ, ಕೊಂಚ ಮೇರೆ ಮೀರಿತ್ತು. ನಾವು ನಿಲ್ಲಿಸಿದ ಹೆಣ್ಣೆಂಬ ಉದಾಸೀನತೆಯು ತೋರಿದಾಗ ಸ್ಪರ್ಧೇಯುಂಟಾಯಿತು. ಕಾಂಗ್ರೆಸ್ ನಾಯಕರು ತಮ್ಮ ಹಳೆಯ ಶಸ್ತ್ರ ಪ್ರಯೋಗ ಮಾಡಿದರು. ಅದಕ್ಕೆ ಬೆದರದ ಹೆಣ್ಣು, ಪ್ರತಿಶಸ್ತ್ರ ಪ್ರಯೋಗ ಮಾಡಿತು. ದೇಶದಲ್ಲಿ ಸ್ವಯೂಧ ಕಲಹದ ಹಾಲಾಹಲವೆದ್ದು, ಶಾಂತಿಭಂಗಕ್ಕೆ ಗುರಿಯಾಗಿ ಕಾಂಗ್ರೆಸ್ ಜೋಡೆತ್ತಿನ ನೊಗ ತುಂಡಾಯಿತು.
ದೇಶ ದೌರ್ಭಾಗ್ಯದಿಂದ ತುಂಡಾದರೂ, ಆ ತುಂಡುಗಳು ಕಾದಾಡುತ್ತ ದೇಶ ಜನ ರಕ್ಷಣೆ ಗೊಡವೆಗಳನ್ನು ಮರೆತು, ನಿಜದರಿವಿಲ್ಲದ, ಪ್ರಜಾರಕ್ಷಣೆಯ ಶಕ್ತಿಯಿಲ್ಲದ, ಆ ತುಂಡುಗಳು ನಾವೇ ನಿಜವಾದ ಕಾಂಗ್ರೆಸ್, ನಾವೇ ಅಧಿಕೃತ ಕಾಂಗ್ರೆಸ್ ಎಂದು ದೇಶದ ಶಾಂತಿಗೆ ಕಾರಕಗಳಾದವು. ಈ ಎರಡೂ ನಿಸ್ಸತ್ವ ತುಂಡುಗಳ ಮಧ್ಯದಲ್ಲಿರುವ ದುರ್ಬಲ ವಿರೋಧ ಪಾರ್ಟಿಗಳು ರಾಮಾಯಣದ ದ್ವಿಜಿಹ್ವನಂತೆ, ‘ರಾಮಾಯಸ್ವಸ್ತಿ ರಾವಣಾಯಸ್ವಸ್ತಿ’ ಎನ್ನುತ್ತಾ ಬಿರುಗಾಳಿಗೆದ್ದ ತರಗೆಲೆಗಳಂತೆ ಹಾರಾಡಿದವು.
ಕಾಂಗ್ರೆಸ್ಸಿನಲ್ಲಿ ಇತರ ಪಾರ್ಟಿಗಳಲ್ಲಿ ಎಂತಹ ಬಿರುಗಾಳಿಗೂ ಬೀಳದೆ ಆ ಗಾಳಿಯನ್ನು ತಡೆಯಬಲ್ಲ ಮಹಾಶಕ್ತಿಯ ವೃಕ್ಷಗಳಿಗೆ. ಆದರೆ ಆ ಬಿರುಗಾಳಿಯ ಧೂಳು ಮಾತ್ರ ಆ ವೃಕ್ಷಗಳನ್ನು ಮುಸುಕುವಂತಾಯಿತು. ನಾನಾಮುಖವಾಗಿ ಇಂದೆದ್ದ ಅಶಾಂತಿಯು, ಅನೇಕ ಅನುಭವಿಗಳನ್ನು ವಿಚಲಿತಗೊಳಿಸಿತು. ಬ್ರಿಟಿಷರು ಈ ದೇಶಕ್ಕೆ ಬರುವ ಮುಂಚೆ, ಯಾವ ಅನಾಯಕ ದುರಂತವಿತ್ತೋ, ಆ ದುರಂತಕ್ಕೆ ಇಂದು ದೇಶ ಸಮೀಪವಾಗುತ್ತದೆಂಬ ಭಯಾವರಣ ಮುಸುಕಿತು. ಕಾಂಗ್ರೆಸ್ಸಿನ ಎರಡು ತುಂಡುಗಳು, ಈ ಭಯಾನಕ ಅವ್ಯವಸ್ಥೆಗೆ ಕಾರಣಗಳೆಂದು ಕೂಡ, ಜನರು ಧೈರ್ಯವಾಗಿ ಹೇಳುವಂತಿಲ್ಲ. ಆಡಳಿತೆಯು ಕಾಂಗ್ರೆಸ್ಸೇ ಅನಾಹುತಕ್ಕೆಲ್ಲ ಕಾರಣವೆಂದು ಸಂಸ್ಥಾಕಾಂಗ್ರೆಸ್ಸು ಘೋಷಿಸುತ್ತದೆ. ನಾವಲ್ಲ, ಸಂಸ್ಥಾ ಕಾಂಗ್ರೆಸ್ಸೇ ಇದಕ್ಕೆಲ್ಲ ಕಾರಣವೆಂದು ಆಡಳಿತ ಕಾಂಗ್ರೆಸ್ಸು ಬೊಬ್ಬೆ ಹಾಕುತ್ತದೆ. ಕಂಗೆಟ್ಟ ದೇಶ ಈ ಎರಡೂ ತುಂಡುಗಳ ವಿಪರೀತ ಘರ್ಷಣೆಯ ದುಃಸ್ಥಿತಿಗೆ ಕಣ್ಣೀರಿಡುವಂತಾಯಿತು.
ಏನಾಯಿತೋಯೇನೋ ಪ್ರಧಾನಿಯವರು ಲೋಕಸಭೆಯನ್ನು ವಿಸರ್ಜಿಸಿ ಮಧ್ಯಂತರ ಚುನಾವಣೆಯನ್ನು ಸಾರಿದರು. ಇನ್ನೂ ಒಂದು ವರ್ಷ ಆಯುಷ್ಯವಿರುವಾಗಲೇ ಆಡಳಿತೆಯ ಕೂಸಿನ ಕುತ್ತಿಗೆಯನ್ನು ಹಿಚುಕಿಬಿಟ್ಟು ತಾವೂ ಸತ್ತರು. ಈ ಸಾವಿಗೆ ತುತ್ತಾಗದೆ ಉಳಿದ ಮಕ್ಕಳೆಂದರೆ ಗುಜುರಾತು-ಮೈಸೂರು. ಇವುಗಳ ಕುಟುಂಬಕ್ಕೆ ಸೇರಿದ ಹಿರಿಯ ಮಕ್ಕಳು ಕೇಂದ್ರಕ್ಕೆ ಬಲಿಯಾದರೂ, ಅಕಾಲಸಾವಿಗೀಡಾದ ಇವರಿಗೆಲ್ಲಾ, ಪ್ರಾಣದಾನ ಮಾಡುವ ಚುನಾವಣೆಗಳು ರಾಷ್ಟ್ರಾದ್ಯಂತ ವ್ಯಾಪಿಸಿದವು. ತುಂಡು ಕಾಂಗ್ರೆಸ್ಸುಗಳು ವಿರುದ್ಧ ಪಾರ್ಟಿಗಳ ಸಹಕಾರಗಳ ಯೋಚನೆಯಲ್ಲಿ, ಚುನಾವಣೆಗೆ ನಿಲ್ಲುವ ಸಿದ್ಧತೆಗಳು, ರಂಗಭೂಮಿಗೆ ಬರುವ ಮಂಚೆ ಬಣ್ಣದ ರೂಮಿನಲ್ಲಿ ಸಿದ್ಧವಾಗುವ ನಾಟಕದ ವೇಷಗಳಂತೆ ಮಾಡಿಕೊಳ್ಳುತ್ತಿದ್ದವು.
ಚುನಾವಣೆಗಳ ಘೋಷಣೆ ಏನೇ ಇರಲಿ, ಅವೆಲ್ಲಾ ಸುಳ್ಳಿನ ಸರಪಳಿಯೆಂಬುದು, ಮೂರು ಚುನಾವಣೆಗಳ ಅನುಭವಗಳು ಜನರಿಗೆ ಸಾಕಷ್ಟು ನೀಡಿದ್ದವು. ಸುಪ್ರೀಂ ನ್ಯಾಯಾಲಯದ ದಕ್ಷತೆಯ ತೀರ್ಮಾನದಂತೆ ಚುನಾವಣೆಯ ಚಿನ್ಹವಾಗಿ, ಜೋಡೆತ್ತುಗಳು ಈ ಎರಡೂ ತುಂಡುಗಳಿಗೂ ಲಭ್ಯವಾಗಲಿಲ್ಲ. ಮಾಡಿದ್ದುಣ್ಣೋ ಮಾರಾಯಾ ಯಾವ ಪಾರ್ಟಿಗಳೆಂತಾದರೂ, ಈ ಚುಣಾವಣೆಗಳು ಹಳ್ಳಿಯ ಜೀವನಕ್ಕೆ ಧೂಮಕೇತುಗಳಾಗಿವೆ. ಈಗಾಗಲೇ ಸಾಕಷ್ಟು ಹದಗೆಟ್ಟ ಹಳ್ಳಿಗಳ ಕಿಡಿಗೇಡಿಗಳಿಗೆ ಸುವರ್ಣಸಂಧಿ. ಇವರ ರಾಜಕಾರಣಿಗಳು ಮಹಾ ಮೇಧಾವಿಗಳೆಂದು ಅಂತರರಾಷ್ಟ್ರಖ್ಯಾತಿವೆತ್ತ ರಾಜಕಾರಣಿಗಳಿಗೂ ತಿಳಿಯಲಾರವು. ಇತ್ತೀಚೆಗೆ ನಡೆಯುವ ನಮ್ಮ ದೇಶದ ರಾಜಕೀಯ, ರಾಜ್ಯಕ್ಷೇಮಕ್ಕಾಗಿ ಅಲ್ಲ. ಪಕ್ಷ, ಗದ್ದುಗೆಗಳ ಸ್ವಲಾಭಗಳ ಉಪಯೋಗಕ್ಕಾಗಿ ಮೀಸಲಾಗಿದೆ. ದೇಶ ಸ್ವಾತಂತ್ರ್ಯಕ್ಕಾಗಿ ಬಡಿದಾಡಿದ ಕಾಂಗ್ರೆಸ್ಸು ಇಂದು ಪಕ್ಷಕ್ಕಾಗಿ ಬಡಿದಾಡುತ್ತಿದೆ.
ರೈಲು, ಬಸ್ಸು, ಹೋಟಲು, ಸಿನಿಮಾಗಳಲ್ಲಿ ಜನರ ಮುಖ್ಯವಾದ ಚರ್ಚೆಗಳು ಚುನಾವಣೆಯನ್ನು ಕುರಿತೇ ಮಾತಾಡುವುದಾಗಿದೆ. ಹಳ್ಳಿಗಳಲ್ಲಿ ಈ ಚುನಾವಣೆಯ ವಿಷಗಾಳಿ ವ್ಯಾಪಿಸಿ, ಪಕ್ಷಪಂಗಡಗಳಿಗೆ ಭಾಷಾ ಭೇದಗಳಿಗೆ, ಜಾತಿಮತ ಪಂಥಗಳಿಗೆ, ಆಸ್ತಿಭಾರಗಳನ್ನು ಹಾಕಲಾಗುತ್ತಿದೆ. ಶತ್ರುಗಳು ಮಿತ್ರರಾಗುತ್ತಿದ್ದಾರೆ; ಮಿತ್ರರು ಶತ್ರುಗಳಾಗುತ್ತಿದ್ದಾರೆ. ಕೋಲಾಹಲ ಸನ್ನಿವೇಶ, ಬಾಯಿ ಮುಚ್ಚಿಕೊಂಡವರ ಬಾಯಿಗಳನ್ನು ತೆರೆಯಿಸುವ ಘಟನೆ, ನಸುಗುನ್ನಿಸುವ ಹುಡಿಯಂತೆ ಚುನಾವಣೆಯ ತುರಿಕೆ.
ಈ ರಾಣಕಾರಣವನ್ನು ಕುರಿತು ಇಷ್ಟೊಂದು ವಿಸ್ತಾರವಾಗಿ ಹೇಳುತ್ತಿರುವುದು ರಾಜಕಾರಣಿಯಾಗಿ ಅಲ್ಲ. ನನ್ನ ಜೀವನದಲ್ಲಿ ಎಂದೂ ರಾಜಕಾರಣವನ್ನು ಪ್ರೇಮಿಸಲಿಲ್ಲ. ಇನ್ನೊಬ್ಬರ ಪ್ರೇರಣೆಗೆ ಒಳಗಾಗಿ ರಾಜಕೀಯಕ್ಕಿಳಿಯಲಿಲ್ಲ. ಹೆಚ್ಚಾಗಿ ರಾಜಕಾರಣವನ್ನು ತಿಳಿಯುವ ಅಥವಾ ವ್ಯಾಸಂಗ ಮಾಡುವ ಇಚ್ಛೆಯೂ ನನಗಿಲ್ಲ. ಆದರೂ ಸಮಕಾಲೀನತೆಯಲ್ಲಿ ನಡೆಯುವ, ಯಾವುದೇ ರಂಗದ ಆಗುಹೋಗುಗಳನ್ನು ಕವಿಯಾದವನು, ನಾಟಕಕಾರನಾದವನು ಅಲಕ್ಷಿಸುವುದಿಲ್ಲ. ಲೋಕವೃತ್ತವನ್ನು ತನ್ನ ಕಾವ್ಯ ನಾಟಕಗಳಲ್ಲಿ ರಸವತ್ತಾಗಿ ಚಿತ್ರಿಸಿ, ಜನತೆಗೆ ನೀಡಬೇಕಾದ ಕರ್ತವ್ಯ ಅವನದು. ಅಂತಹ ಕರ್ತವ್ಯದ ಹೊಣೆಗಾರಿಕೆಯಿಂದ, ಆಗಾಗ ನನ್ನಲ್ಲುಂಟಾದ ಸ್ಪೂರ್ತಿಯು, ರಾಜಕೀಯವನ್ನು ವಿಮರ್ಶಿಸುವುದುದೂ ಉಂಟು. ಈ ವಿಮರ್ಶೆಗಳು ಪತ್ರಿಕೆಗಳ ಮುಖಾಂತರ ನನ್ನ ಪ್ರಸಿದ್ಧಿಗಾಗಿ ಪ್ರಕಟಿಸುವ ಯತ್ನವು ನನ್ನದಲ್ಲ. ಗಡುಚಾಗಿ ವಿಷಯ ನನ್ನಲ್ಲಿ ಜೀರ್ಣವಾಗಿ, ಮತ್ತೊಂದು ರೀತಿಯಿಂದ ರಸವಾಗಿ ಹೊರ ಹೊಮ್ಮಿದಾಗ, ಕಾವ್ಯವೂ ಆಗಬಹುದು. ನಾಟಕವೂ ಆಗಬಹುದು. ಇಂತಹ ರಚನೆಯಲ್ಲಿ ನಾನು ಪ್ರಕಟಿಸಿದ್ದು ಬಹಳ ಸ್ವಲ್ಪ. ನನ್ನಿಂದ ಪ್ರಕಟವಾದ ‘ದೇಶಿಯ ವಚನ’ಗಳಲ್ಲಿ ಕೆಲವು ವಿಷಯಗಳನ್ನು ಮಾತ್ರ ಚರ್ಚಿಸಿರುವೆ.
ಮುಖ್ಯವಾಗಿ ಹೇಳುತ್ತಿರುವುದು ನನ್ನ ಜಿಲ್ಲೆಯ ಎಂ.ಪಿ. ಚುನಾವಣೆಗಳ ವಿಪರ್ಯಾಸಗಳನ್ನು, ವಿಪರೀತಗಳನ್ನು. ನಮ್ಮ ಜಿಲ್ಲೆಗಾದ ಅನಾನುಕೂಲ ನ್ಯಾಯಗಳನ್ನು, ರಾಜಕೀಯಕ್ಕೆ ಹೊರತಾಗಿ ಒಂದು ಮೂಲೆಯ ಹಳ್ಳಿಯಲ್ಲಿ ಕುಳಿತು ಸಮೀಕ್ಷಿಸಿದ, ನಿಷ್ಪಕ್ಷಪಾತವಾದ ವಿಚಾರಗಳನ್ನು ಚಿತ್ರಿಸುವ ಮುನ್ನ, ಈ ಹಿಂದಿನದೆಲ್ಲ ಹೇಳಿಕೊಂಡು ಬರಬೇಕಾಯಿತು. ಹೇಳದಿದ್ದರೂ ನಡೆಯುತ್ತಿತ್ತು. ಆದರೆ ನನ್ನ ವಯಸ್ಸು ಅನುಭವ ಬರೆಯಿಸಿತು.
ಇದನ್ನ ಓದಿ : Arunima Sinha‘s Birthday : ಆಕೆಯ ಎಡಗಾಲಿನ ಮೇಲೆ ನಲವತ್ತಕ್ಕೂ ಹೆಚ್ಚು ರೈಲುಗಳು ಹಾದು ಹೋದವು
Published On - 1:01 pm, Tue, 27 July 21