National Broadcasting Day 2021 : ಯುದ್ಧಭೀತಿ ಅಳಿಸಲೆಂದೇ ಹೆಚ್ಚೆಚ್ಚು ಪ್ರಸಾರವಾಗುತ್ತಿದ್ದ ರೂಪಕಗಳು ನಾಟಕಗಳು

|

Updated on: Jul 23, 2021 | 5:16 PM

AIR : ಮೈಸೂರಿನಲ್ಲಿ ಡಾ. ಎಂ. ವಿ. ಗೋಪಾಲಸ್ವಾಮಿಯುವರ ಮನೆಯ ಮಹಡಿಯ ಮೇಲೆ ಸ್ವಂತ ಖರ್ಚಿನಲ್ಲಿ ಸ್ಥಾಪಿಸಿದ್ದ ರೇಡಿಯೋ ಪ್ರೇಷಕದಿಂದ ಮೊದಲ ಕಾರ್ಯಕ್ರಮ ಬಿತ್ತರವಾಯಿತು. ಮನೆಯ ಮುಂದೆ ಧ್ವನಿವರ್ಧಕ ಹಾಕಿ ಸಾರ್ವಜನಿಕರು ರೇಡಿಯೋ ಕೇಳುವ ವ್ಯವಸ್ಥೆ ಮಾಡಲಾಗಿತ್ತು. ಎರಡನೇ ಮಹಾಯುದ್ಧದ ಕಾಲದಲ್ಲಿ ಅಲ್ಲಿನ ಜನ ಸುದ್ದಿಗಳನ್ನು ಕೇಳಲು ಆಸಕ್ತಿ ತೋರಿದ್ದರಿಂದ ಮೈಸೂರು ಪುರಸಭೆ ಹಾಗೂ ಮೈಸೂರು ಸಂಸ್ಥಾನ ಹಣ ಸಹಾಯ ಮಾಡಿತು.’ ನೂತನ ದೋಶೆಟ್ಟಿ

National Broadcasting Day 2021 : ಯುದ್ಧಭೀತಿ ಅಳಿಸಲೆಂದೇ ಹೆಚ್ಚೆಚ್ಚು ಪ್ರಸಾರವಾಗುತ್ತಿದ್ದ ರೂಪಕಗಳು ನಾಟಕಗಳು
ಲೇಖಕಿ, ಆಕಾಶವಾಣಿ ಕಾರ್ಯ ನಿರ್ವಾಹಕಿ ನೂತನ ದೋಶೆಟ್ಟಿ
Follow us on

National Broadcasting Day 2021 : ಇಂದು ರಾಷ್ಟ್ರೀಯ ಪ್ರಸಾರ ದಿನ. ಇದೇ ದಿನ ಅಂದರೆ 1927ರ ಜುಲೈ 23ರಂದು ಮುಂಬೈನ ವರ್ಲಿಯಲ್ಲಿ ಆಕಾಶವಾಣಿ ಪ್ರಸಾರವನ್ನು ಉದ್ಘಾಟಿಸಿದ ಆಗಿನ ಬ್ರಿಟಿಷ್ ವೈಸರಾಯ್ ಲಾರ್ಡ್ ಇರ್ವಿನ್ ಅವರು, ‘ವಿಜ್ಞಾನದ ಈ ಸೋಜಿಗದ ಉಪಯೋಗಕ್ಕೆ ಭಾರತದಲ್ಲಿ ಉತ್ತಮ ಭವಿಷ್ಯವಿದೆ ಎಂದಿದ್ದರು. ಇಂಥ ವಿಶ್ವದ ಅತಿ ದೊಡ್ಡ ಪ್ರಸಾರ ಸಂಸ್ಥೆಯಾದ ಆಕಾಶವಾಣಿಯಂಥ ಬೃಹತ್ ಸಂಸ್ಥೆಯಲ್ಲಿ ಕೆಲಸ ಮಾಡುವುದು ನನಗೆ ಹೆಮ್ಮೆಯ ವಿಷಯ. ಈ ಸಂಸ್ಥೆಯ ಅಗಾಧತೆ, ವ್ಯಾಪ್ತಿ, ವಿಸ್ತಾರ, ಪ್ರಭಾವ, ಧ್ಯೇಯಗಳು, ಇಲ್ಲಿರುವ ಜ್ಞಾನ ಭಂಡಾರ ಪರಿಚಿತವಾದಂತೆ ಇದು ನನಗೆ ಹತ್ತಿರವಾಯಿತು. ದಿನವೂ ಕಲಿಕೆಗೆ ಅವಕಾಶವಿರುವ ಇದು ಒಂದು ವಿಶ್ವವಿದ್ಯಾನಿಲಯವೇ ಸರಿ. ನಾನು ನಿರ್ವಹಿಸುವ ಎಲ್ಲ ಕೆಲಸಗಳಿಂದಲೂ ಹೊಸದನ್ನು ಕಲಿಯುತ್ತೇನೆ. ನಿರ್ವಹಿಸಿದ ಎಲ್ಲ ವಿಭಾಗಗಳೂ ನನಗೆ ಕೇವಲ ಕಾರ್ಯಕ್ರಮ ಪ್ರಸಾರದ ಭಾಗವಾಗಿಲ್ಲ. ಬದುಕಿನಲ್ಲಿ ಅಗತ್ಯವಾಗಿ ಕಲಿಯಲೇಬೇಕಾದ , ಅರಿಯಲೇಬೇಕಾದ, ಪಡೆಯಲೇಬೇಕಾದ ಜ್ಞಾನದ ಬೆಳಕಾಗಿದೆ.
ನೂತನ ದೋಶೆಟ್ಟಿ, ಕಾರ್ಯಕ್ರಮ ನಿರ್ವಾಹಕರು, ಆಕಾಶವಾಣಿ ಹಾಸನ

*

ಭಾರತದಲ್ಲಿ ರೇಡಿಯೋ ಪ್ರಸಾರ ಹವ್ಯಾಸಿ ಕೂಟ (ಅಮೆಚೂರ್ ಕ್ಲಬ್) ಗಳಿಂದ ಆರಂಭವಾಯಿತು. 1924ರ ಮೇ 6ರಂದು ಮದ್ರಾಸ್ ಪ್ರೆಸಿಡೆನ್ಸಿ ರೇಡಿಯೋ ಕ್ಲಬ್ ಅಲ್ಲಿನ ಕೆಲವು ಉತ್ಸಾಹಿಗಳಿಂದ ಅಸ್ತಿತ್ವಕ್ಕೆ ಬಂದಿತು. ಮುಂದೆ ಜುಲೈ 31ರಂದು ಅದರ ಪ್ರಸಾರ ಕಾರ್ಯ ಆರಂಭವಾದಾಗ 5 ಮೈಲುಗಳಷ್ಟು ದೂರದವರೆಗೆ ಅದನ್ನು ಆಲಿಸಬಹುದಾಗಿತ್ತು. ಇದು ಮೂರು ವರ್ಷಗಳ ಕಾಲ ಪ್ರಸಾರ ಕಾರ್ಯವನ್ನು ಮಾಡಿ 1927ರಲ್ಲಿ ಹಣಕಾಸಿನ ಮುಗ್ಗಟ್ಟಿನಿಂದ ಸ್ಥಗಿತಗೊಂಡಿತು.

ರೇಡಿಯೋ ಪ್ರಸಾರ ಯುರೋಪಿನಲ್ಲಿ ಹಣ ಮಾಡಿದ್ದನ್ನು ಕಂಡು ಅದೇ ವರ್ಷ ಮುಂಬೈನ ಕೆಲ ವ್ಯಾಪಾರಿಗಳು ಇಂಡಿಯನ್ ಬ್ರಾಡ್​ಕಾಸ್ಟಿಂಗ್ ಕಂಪನಿಯನ್ನು ಪ್ರಾರಂಭಿಸಿದರು. ಅದು ಅಸ್ತಿತ್ವಕ್ಕೆ ಬಂದ ನಂತರ ಅದುವರೆಗೂ ಹವ್ಯಾಸಿಯಾಗಿದ್ದ ಪ್ರಸಾರ ಕಾರ್ಯ ನಿಯಮಿತವಾಗಿ ಶುರುವಾಯಿತು. ಅದರ ಕೇಂದ್ರಗಳು ಮುಂಬೈ ಹಾಗೂ ಕಲ್ಕತ್ತಾದಲ್ಲಿ ಪ್ರಾರಂಭವಾದವು. ಇವುಗಳಿಂದ ಹೇರಳ ಆದಾಯ ಕೂಡ ದೊರೆಯಿತು.

1927ರ ಹೊತ್ತಿಗೆ ಭಾರತದಲ್ಲಿ 1000ಕ್ಕಿಂತ ಕಡಿಮೆ ಇದ್ದ ರೇಡಿಯೋಗಳ ಸಂಖ್ಯೆ ಮುಂದಿನ ಮೂರು ವರ್ಷಗಳಲ್ಲಿ 7000ಕ್ಕೆ ಏರಿತು. ನಂತರ ಮತ್ತೆ ಎದುರಾದ ಆರ್ಥಿಕ ತೊಂದರೆಯಿಂದಾಗಿ ಆ ಕಂಪನಿಯೂ ವಿಫಲವಾಯಿತು. ಮುಂಬೈ ಕೇಂದ್ರವನ್ನು ಮುಟ್ಟುಗೋಲು ಹಾಕಲು ಅದರ ಮಾಲೀಕರು ನಿರ್ಧರಿಸಿದರು. ಆದರೆ ಸರ್ಕಾರ 1932ರಲ್ಲಿ ಜನತೆಯ ಒತ್ತಾಯದಿಂದ ಹಾಗೂ ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಲಾಭದ ದೃಷ್ಟಿಯಿಂದ ಅದರ ಸ್ವಾಮ್ಯವನ್ನು ತೆಗೆದುಕೊಂಡು ‘ದ ಇಂಡಿಯನ್ ಸ್ಟೇಟ್ ಬ್ರಾಡ್ಕಾಸ್ಟಿಂಗ್ ಸರ್ವಿಸ್’ ಎಂದು ಮರುನಾಮಕರಣ ಮಾಡಿತು. ತಾನು ಆಶೀರ್ವದಿಸಿದ್ದ ಕೇಂದ್ರ ಆರ್ಥಿಕವಾಗಿ ಸೊರಗಿ ಮುಚ್ಚಲು ಅವಕಾಶ ಕೊಡಬಾರದೆಂದು ವೈಸ್ ರಾಯ್, ಸರ್ಕಾರದಲ್ಲಿ ಒಂದು ವಿಭಾಗವನ್ನು ಅದಕ್ಕಾಗಿ ಸ್ಥಾಪಿಸಿ ಕೇಂದ್ರಗಳು ಉಸ್ತುವಾರಿಯನ್ನು ನೀಡಿದರು. ಕೇವಲ 15ಲಕ್ಷ ಬಂಡವಾಳದಲ್ಲಿ ದ ಇಂಡಿಯನ್ ಬ್ರಾಡ್​ಕಾಸ್ಟಿಂಗ್ ಕಂಪನಿ ಆರಂಭವಾಯಿತು. ಇದರಲ್ಲಿ 4.5ಲಕ್ಷ ಹಣ ಬಾಂಬೆ ಮತ್ತು ಕಲ್ಕತ್ತಾ ಕೇಂದ್ರಗಳ ಸ್ಥಾಪನೆಗೆ ವೆಚ್ಚವಾಯಿತು. ನಂತರ 1936ಜೂನ್ 8ರಂದು ಅದು ‘ಆಲ್ ಇಂಡಿಯಾ ರೇಡಿಯೋ’ ಎಂದು ಪುನರ್ ನಾಮಕರಣಗೊಂಡಿತು. ದೆಹಲಿಯಲ್ಲಿ ದೇಶದ ಮೂರನೇ ಕೇಂದ್ರ ಹುಟ್ಟಿಕೊಂಡಿತು. ರೇಡಿಯೋ ಲೈಸೆನ್ಸ್ ಗಳು ಮೂರು ಪಟ್ಟು ಹೆಚ್ಚಿದವು.

ಎರಡನೇ ಜಾಗತಿಕ ಯುದ್ಧದ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ರೇಡಿಯೋ ಅದಕ್ಕೆ ಸಿದ್ಧವಾಗಬೇಕಾಯಿತು. ಇತರ ಕೇಂದ್ರಗಳಿಗೆ ಮಾಹಿತಿ ಹಾಗೂ ಸುದ್ದಿಯನ್ನು ನಿರಂತರವಾಗಿ ನೀಡಲು ಕೇಂದ್ರ ಸುದ್ದಿ ವಿಭಾಗವು ತೆರೆಯಲ್ಪಟ್ಟಿತು. ಜನರಲ್ಲಿ ಯುದ್ಧ ಭೀತಿಯನ್ನು ಅಳಿಸಲು ಹಾಗೂ ಯುದ್ಧಕ್ಕೆ ಅವರು ಸಹಾನುಭೂತಿ ಇರುವಂತೆ ಮಾಡಲು ಭಾಷಣಗಳು ಹಾಗೂ ರೂಪಕಗಳನ್ನು ರೂಪಿಸಿ ಹೆಚ್ಚು ಹೆಚ್ಚು ಪ್ರಸಾರ ಮಾಡಲಾಯಿತು. ಭಾರತದಿಂದ ಪೂರ್ವ ಹಾಗೂ ಆಗ್ನೇಯ ಏಷ್ಯಾ, ಮಧ್ಯ ಪ್ರಾಚ್ಯ ಹಾಗೂ ಯುರೋಪ್ ದೇಶಗಳಿಗೆ ಆಯಾ ಭಾಷೆಗಳಲ್ಲಿ ಮಾಹಿತಿಯನ್ನು ಬಿತ್ತರಿಸಲಾಗುತ್ತಿತ್ತು. ಇದು ಆಲ್ ಇಂಡಿಯಾ ರೇಡಿಯೋದ ವಿದೇಶಿ ಸೇವಾ ವಿಭಾಗದ ಮೊದಲ ಹೆಜ್ಜೆ ಎನ್ನಬಹುದು. ಯುದ್ಧದಲ್ಲಿ ಭಾರತೀಯರು ನೀಡಬಹುದಾದ ಸಹಾಯ ಹಾಗೂ ಶತೃ ನಾಶ ಮುಂತಾದ ವಿಷಯಗಳು ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದವು. ರೇಡಿಯೋದಲ್ಲಿ ಕಾಲಕಾಲಕ್ಕೆ ವಾಯುದಾಳಿಯ ಮುನ್ನೆಚ್ಚರಿಕೆಯನ್ನು ಪ್ರಕಟಿಸಲಾಗುತ್ತಿತ್ತು. ಅಂದಿನ ಪ್ರಸಿದ್ಧ ಉದ್ಘೋಷಕ ಮೆಲ್ವಿಲ್ ಡಿ ಮೆಲ್ಲೊ 1944ರ ಜೂನ್ 6ರಂದು ಮಧ್ಯಾಹ್ನದ ಹೊತ್ತಿಗೆ ಕಾರ್ಯಕ್ರಮ ಪ್ರಸಾರವೊಂದನ್ನು ಮೊಟಕುಗೊಳಿಸಿ ಯುದ್ಧದ ಆರಂಭದ ಪ್ರಕಟಣೆಯನ್ನು ಮಾಡಿದರು. 11 ತಿಂಗಳ ನಂತರ ಅವರೇ ಯುದ್ಧ ವಿರಾಮದ ಘೋಷಣೆಯನ್ನೂ ಮಾಡಿದರು.

ಯುದ್ಧಾನಂತರ ದೇಶದ ಅಭಿವೃದ್ಧಿಯತ್ತ ದೃಷ್ಟಿ ಹಾರಿಸಲಾಯಿತು. ಆಗ ದಶಕದ ಹೊಸ್ತಿಲಲ್ಲಿ ನಿಂತಿದ್ದ ಆಕಾಶವಾಣಿ 9 ಕೇಂದ್ರಗಳು ಮೂಲಕ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಅದೇ ಸಂದರ್ಭದಲ್ಲಿ ಭಾರತದ ರಾಜಕೀಯ ಚಿತ್ರಣ ತೀವೃ ಗತಿಯಲ್ಲಿ ಬದಲಾಗತೊಡಗಿತು. ಜಾಗತಿಕ ಯುದ್ಧದ ಸಂದರ್ಭದಲ್ಲಿ ಹಿನ್ನಡೆ ಕಂಡ 1942ರ ಕ್ವಿಟ್ ಇಂಡಿಯಾ ಚಳವಳಿ ಮತ್ತೆ ಬಿರುಸಾಗಿ ಆರಂಭವಾಯಿತು. ಇದರ ಬೆನ್ನಲ್ಲೇ ವಿಭಜನೆಯ ಹಿನ್ನೆಲೆಯಲ್ಲಿ ದೇಶದ ಅನೇಕ ಕಡೆಗಳಲ್ಲಿ ಹಿಂಸಾಚಾರವನ್ನು ಪ್ರಚೋದಿಸಲಾಗುತ್ತಿತ್ತು. ಬೆದರಿದ ಜನತೆ‌ಜೀವ ಮತ್ತು ಗೌರವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡುತ್ತಿತ್ತು. ಹೀಗೆ ಬಂಧುಗಳಿಂದ ದೂರವಾದವರಿಗೆ ಸಂದೇಶಗಳನ್ನು, ಮಾಹಿತಿಯನ್ನು ಆಕಾಶವಾಣಿ ವಿಶೇಷ ಪ್ರಸಾರಗಳಲ್ಲಿ ಪ್ರಸಾರ ಮಾಡಿ ಅವರ ನಡುವಿನ ಸೇತುವೆಯಾಗಿ ಕೆಲಸ ಮಾಡಿತು. 1947, ಅಗಸ್ಟ್ 15ರ ಮಧ್ಯೆ ರಾತ್ರಿ ಭಾರತಕ್ಕೆ ಬ್ರಿಟಿಷ್ ಸರ್ಕಾರ ಅಧಿಕಾರ ಹಸ್ತಾಂತರವನ್ನು ಮಾಡಿದೆ ಐತಿಹಾಸಿಕ ಸಮಾರಂಭದ ಪ್ರಸಾರವನ್ನು ಆಕಾಶವಾಣಿ ಮಾಡಿತು. ಅಲ್ಲಿಂದ ಅಭಿವೃದ್ಧಿಯ ಏರುಗತಿಯನ್ನು ಕಂಡ ಆಕಾಶವಾಣಿಯ ಜಾಲದಲ್ಲಿ ಅನೇಕ ಮೈಲಿಗಲ್ಲುಗಳು ದಾಖಲಾಗಿವೆ.

1935ರ ಸಪ್ಟಂಬರ್ 10ರಂದು ಕರ್ನಾಟಕದ ಮೈಸೂರಿನಲ್ಲಿ ಡಾ. ಎಂ. ವಿ. ಗೋಪಾಲಸ್ವಾಮಿಯವರ ನಿರ್ದೇಶನದಲ್ಲಿ ಅವರು ತಮ್ಮ ಮನೆಯ ಮಹಡಿಯ ಮೇಲೆ ಸ್ವಂತ ಖರ್ಚಿನಲ್ಲಿ ಸ್ಥಾಪಿಸಿದ್ದ ರೇಡಿಯೋ ಪ್ರೇಷಕದಿಂದ ಮೊದಲ ಕಾರ್ಯಕ್ರಮ ಬಿತ್ತರವಾಯಿತು. ಆನಂತರ ಪ್ರತಿದಿನ ಕಾರ್ಯಕ್ರಮಗಳು ಸಾಯಂಕಾಲ 6ರಿಂದ 7.30ರವರೆಗೆ , ಕೆಲದಿನ 8.30 ರವರೆಗೆ ಪ್ರಸಾರವಾಗುತ್ತಿದ್ದವು. ಮನೆಯ ಮುಂದೆ ಧ್ವನಿವರ್ಧಕ ಹಾಕಿ ಸಾರ್ವಜನಿಕರು ಕೇಳುವ ವ್ಯವಸ್ಥೆ ಮಾಡಲಾಗಿತ್ತು. ಎರಡನೇ ಮಹಾಯುದ್ಧದ ಕಾಲದಲ್ಲಿ ಅಲ್ಲಿನ ಜನ ಸುದ್ದಿಗಳನ್ನು ಕೇಳಲು ಆಸಕ್ತಿ ತೋರಿದ್ದರಿಂದ ಮೈಸೂರು ಪುರಸಭೆ ಹಾಗೂ ಮೈಸೂರು ಸಂಸ್ಥಾನ ಹಣ ಸಹಾಯ ಮಾಡಿತು. ಅದನ್ನು ಪಡೆದು 1941 ರವರೆಗೂ ಈ ಕೇಂದ್ರವನ್ನು ಖಾಸಗಿಯಾಗಿ ಮೇ ನಡೆಸಿಕೊಂಡು ಬರಲಾಯಿತು. 1942ರಲ್ಲಿ ಮೈಸೂರು ಸಂಸ್ಥಾನ ಈ ಕೇಂದ್ರದ ಆಡಳಿತವನ್ನು ವಹಿಸಿಕೊಂಡಿತ್ತು. ಮುಂದೆ 1950 ಏಪ್ರಿಲ್ 1ರಂದು ಅದು ಸರ್ಕಾರದೊಂದಿಗೆ ವಿಲೀನವಾಗಿ ರಾಷ್ಟ್ರೀಯ ಪ್ರಸಾರ ಜಾಲದ ಭಾಗವಾಯಿತು.

ಆ ಕೇಂದ್ರದ ಕಾರ್ಯಕ್ರಮಗಳು ಉಸ್ತುವಾರಿ ಹೊತ್ತಿದ್ದ ನಾ. ಕಸ್ತೂರಿಯವರನ್ನು ಗೋಪಾಲಸ್ವಾಮಿಯವರು, ತಮ್ಮ ಪ್ರಸಾರ ಸಂಸ್ಥೆಗೆ ಒಳ್ಳೆಯ ಹೆಸರನ್ನು ಸೂಚಿಸಲು ಕೇಳಿದ್ದರು. ಕಸ್ತೂರಿಯವರು ತಾವು ಕೆಲಸ ಮಾಡುತ್ತಿದ್ದ ಮಹಾರಾಜಾ ಕಾಲೇಜಿನ ತಮ್ಮ ಮಿತ್ರವರ್ಗದೊಂದಿಗೆ ಲೋಕಾಭಿರಾಮವಾಗಿ ಚರ್ಚಿಸಿದಾಗ ಅಲ್ಲೇ ಆಕಾಶವಾಣಿ ಅಭಿಯಾನದ ಮೊದಲ ಉಗಮವಾಯಿತು. ನಾ. ಕಸ್ತೂರಿಯವರು ಅದನ್ನು ಮೊದಲು ಸೂಚಿಸಿದರು. ಉಳಿದವರು ಅದನ್ನು ಸ್ವಾಗತಿಸಿದರು. ಮುಂದೆ ಈ ಹೆಸರೇ ರಾಷ್ಟ್ರೀಯ ಜಾಲಕ್ಕೆ ಶಾಶ್ವತವಾಯಿತು. (ರವೀಂದ್ರನಾಥ ಟಾಗೋರರು ಈ ಪದವನ್ನು ಮೊದಲು ಬಳಸಿದ್ದರು ಎಂಬ ಇನ್ನೊಂದು ಅಭಿಪ್ರಾಯ ಇದೆ.)

ಸ್ವಾತಂತ್ರ್ಯಾನಂತರ ನಡೆದ ಆರೋಗ್ಯ, ಔದ್ಯೋಗಿಕ, ಆಹಾರ ಕ್ರಾಂತಿಗಳಲ್ಲಿ ಆಕಾಶವಾಣಿ ಸರ್ಕಾರಕ್ಕೆ ಹೆಗಲು ಕೊಟ್ಟು ದುಡಿದಿದೆ. ಹಸಿರು ಕ್ರಾಂತಿ, ಬಿಳಿ ಕ್ರಾಂತಿ, ನೀಲಿ ಕ್ರಾಂತಿ. ಮೊದಲಾದ ಸರ್ಕಾರದ ಮಹತ್ತರ ಯೋಜನೆಗಳಿಗೆ ಆಕಾಶವಾಣಿಯೇ ದೊಡ್ಡ ವೇದಿಕೆಯಾಗಿದೆ. ಜನಸಂಖ್ಯೆ ನಿಯಂತ್ರಣ, ಕುಟುಂಬ ಯೋಜನೆ, ಲಸಿಕಾ ಅಭಿಯಾನಗಳು, ಕುಷ್ಟ ರೋಗ, ಪೋಲಿಯೋ ನಿವಾರಣೆ ಅಭಿಯಾನಗಳು, ಏಡ್ಸ್ ನಿಯಂತ್ರಣ ಮೊದಲಾದ ಅನೇಕ ಮಹತ್ತರ ಯೋಜನೆಗಳ ಯಶಸ್ಸಿನಲ್ಲಿ ಆಕಾಶವಾಣಿಯದು ಸಿಂಹಪಾಲು ಎಂಬುದನ್ನು ಮರೆಯಬಾರದು.

ಆರಂಭದಲ್ಲಿ 300-400 ರೂಪಾಯಿಗಳಷ್ಟು ಬೆಲೆಯಿದ್ದ ರೇಡಿಯೋ ಸಿರಿವಂತರಿಗೆ ಮಾತ್ರ ದಕ್ಕುತ್ತಿತ್ತು. ನಂತರ ಅದು ಸಾರ್ವಜನಿಕರ ಮನೋಭಿಲಾಷೆಯಾಗಿ ಬೆಳೆಯಿತು. ಆಕಾಶವಾಣಿಯ ಈ ಪಯಣ ಭಾರತದ ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಇತಿಹಾಸದ ಭಾಗವೂ ಹೌದು ಎಂಬುದನ್ನು ವಿಶೇಷವಾಗಿ ಗಮನಿಸಬೇಕು. ಭಾರತದ ಪ್ರಸಾರ ಸಂಸ್ಥೆ ಆಕಾಶವಾಣಿ ಕಾರ್ಯಕ್ರಮ ಪ್ರಸಾರಕ್ಕಾಗಿ ಮಾತ್ರ ಇರುವುದಲ್ಲ. ಅದು ಅಭಿವೃದ್ಧಿ ಹಾಗೂ ಸಾಂಸ್ಕೃತಿಕ ಹರಿಕಾರ. ಹಲವು ಸಂಘ-ಸಂಸ್ಥೆಗಳು ಸೇರಿ ನಾಡು ನುಡಿಗಾಗಿ ಮಾಡುವ ಸೇವೆಯನ್ನು ಆಕಾಶವಾಣಿಯೊಂದೇ ಮಾಡುತ್ತಿದೆ‌. ಹಲವು ವಿದ್ಯಾಸಂಸ್ಥೆಗಳ ಕೆಲಸವನ್ನೂ ಏಕೈಕವಾಗಿ ನಿರ್ವಹಿಸುತ್ತಿದೆ. ಇಂದಿನ ಶೃವ್ಯ ಹಾಗೂ ದೃಶ್ಯ ಮಾಧ್ಯಮಗಳಿಗೆ ಆಕಾಶವಾಣಿಯ ಕಾರ್ಯವೈಖರಿಯೇ ಮಾದರಿ.

ಇದನ್ನೂ ಓದಿ : National Broadcasting Day 2021 : ‘ಕಾರಂತ. ಬರೆದಿದ್ದೇ ಕನ್ನಡ’ ಆ ದಿನ ಆಕಾಶವಾಣಿಯಲ್ಲಿ

Published On - 5:03 pm, Fri, 23 July 21