Vaidehi‘s Birthday : ವೈದೇಹಿ ಎಂಬ ‘ಇರುವಂತಿಗೆ’ ಅರಳಿದ ಕಥೆ ಇಲ್ಲಿದೆ, ಓದಿ ಸವಿತಾ ನಾಗಭೂಷಣ ಬರಹ

|

Updated on: Feb 12, 2022 | 1:00 PM

Kannada Writer Vaidehi : ‘ಮನೆವಾರ್ತೆ, ಸಂಸಾರ, ಗಂಡ-ಮಕ್ಕಳು, ಬಸಿರು-ಬಾಣಂತನಗಳ ನಡುವೆ ನವೆದುದನ್ನೇ ನಾದಿ ನಾದಿ ನವಪಾಕವನ್ನು ಉಣಬಡಿಸಿದ ವೈದೇಹಿಯ ಬಗ್ಗೆ ಮೆಚ್ಚುಗೆ ಮೂಡಿ ವೈದೇಹಿಗೊಂದು ಗೌರವಗ್ರಂಥ ಕೊಟ್ಟರೆ ಹೇಗೆ ಎಂಬ ಸಣ್ಣ ಆಲೋಚನೆಯೊಂದು ಮೂಡಿತು. ಆವರು ಒಪ್ಪುವರೋ ಬಿಡುವರೋ ಕೇಳಿ ನೋಡೋಣ ಎನಿಸಿತು.’ ಸವಿತಾ ನಾಗಭೂಷಣ

Vaidehi‘s Birthday : ವೈದೇಹಿ ಎಂಬ ‘ಇರುವಂತಿಗೆ’ ಅರಳಿದ ಕಥೆ ಇಲ್ಲಿದೆ, ಓದಿ ಸವಿತಾ ನಾಗಭೂಷಣ ಬರಹ
ಕವಿ, ಕಥೆಗಾರ್ತಿ ವೈದೇಹಿ
Follow us on

ವೈದೇಹಿ | Vaidehi : 2017 ಆಗಸ್ಟ್​ ಎಂದು ತೋರುತ್ತದೆ. ನಾನು ಎಂ. ಕೆ. ಇಂದಿರಾ ಜನ್ಮ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಲು ತಯಾರಿ ನಡೆಸಬೇಕಿತ್ತು. ಫಣಿಯಮ್ಮ ಪುಸ್ತಕಕ್ಕಾಗಿ ನಮ್ಮ ಮನೆಯ ಪುಸ್ತಕದ ಕಪಾಟಿಗೆ ಕೈಹಾಕಿದೆ. ಲೇಖಕಿಯರ ಪುಸ್ತಕಗಳನ್ನೆಲ್ಲಾ ಒಂದೆಡೆ ಜೋಡಿಸಿದ್ದೆನಷ್ಟೇ. ತಿರುಮಲಾಂಬಾ, ಕಲ್ಯಾಣಮ್ಮ, ಶ್ಯಾಮಲಾ ಬೆಳಗಾಂವಕರ, ದೇವಾಂಗನಾ ಶಾಸ್ತ್ರಿ, ಕೊಡಗಿನ ಗೌರಮ್ಮ, ತ್ರಿವೇಣಿ, ರಾಜಲಕ್ಷ್ಮೀ ಎನ್. ರಾವ್, ಸರಸ್ವತಿಬಾಯಿ ರಾಜವಾಡೆ, ವೀಣಾ ಶಾಂತೇಶ್ವರ, ಸಾರಾ ಅಬೂಬಕರ್, ಉಮಾ ರಾವ್, ರೇಖಾರಾಣಿ, ನೇಮಿಚಂದ್ರ, ಬಿ.ಟಿ.ಜಾಹ್ನವಿ, ಎಚ್. ನಾಗವೇಣಿ ಯಾರೆಲ್ಲಾ ಸಿಗುತ್ತಾ ಹೋದರು. ಈ ಲೇಖಕಿಯರದ್ದು ಒಂದೊಂದು ಪುಸ್ತಕವಾದರೆ ವೈದೇಹಿಯವರದ್ದು ನಾಲ್ಕೈದು ಸಂಗ್ರಹಗಳು ಸಿಕ್ಕವು. ಅಯ್ಯೋ ಎಷ್ಟು ದಿನ ಆಯ್ತು ಕಥೆ ಓದಿ ಎಂದು ಸುಮ್ಮನೆ ಅಲ್ಲೊಂದು ಇಲ್ಲೊಂದು ಪುಟ ಮಗುಚುತ್ತಾ ಹೋದೆ. ಕನ್ನಡದ ಕಥಾ ಸಾಹಿತ್ಯವನ್ನು ವಿಸ್ತರಿಸಿದ ನಮ್ಮ ಲೇಖಕಿಯರ ಬಗ್ಗೆ ಹೆಮ್ಮೆ ಉಕ್ಕಿ ಬಂತು.

ಸವಿತಾ ನಾಗಭೂಷಣ, ಕವಿ, ಲೇಖಕಿ (Savitha Nagabhushana)

*

ಭಾಗ 1

ವೈದೇಹಿ ಹೆಚ್ಚು ಕಡಿಮೆ ನನ್ನ ತಾಯಿಯ ವಯಸ್ಸಿನವರು. ಆದರೆ ಹನಿದು ಹಳ್ಳವಾಗಿ ನದಿಯಾಗಿ ಹರಿದು ಜೀವಜಲದ ಜಾಲ ವಿಸ್ತರಿಸುವ ತವಕದಲ್ಲಿರುವವರು. ನನ್ನ ತಾಯಿಯೋ ಗಂಡ ಮಕ್ಕಳ ಮೊಮ್ಮಕ್ಕಳ ಸೇವೆ ಮಾಡುತ್ತಾ ನಾಕು ಗೋಡೆಯ ನಡುವಿನ ಈ ಬದುಕು ವ್ಯರ್ಥವೋ-ಸಾರ್ಥಕವೋ ಎಂದು ಅಂದಾಜು ಮಾಡಲಾಗದೆ ದಿನ ದೂಡುತ್ತಿರುವವರು. ನಾನು ಶಾಲೆಗೆ ಹೋಗಬೇಕಿತ್ತು ಎಂದು ಸದಾ ಕೊರಗುತ್ತಿದ್ದ ನನ್ನ ಅಜ್ಜಿ ಗುಲಾಬಿ, ನಾನಾದರೂ ಒಂದು ಕೆಲಸಕ್ಕೆ ಸೇರಿಕೊಳ್ಳುವಷ್ಟು ಓದಿ -ಬರೆದು ಮಾಡಿದಿದ್ದರೆ ಈ ಗಂಡಸರ ಸೊಕ್ಕು ಮುರಿಯುತ್ತಿದ್ದೆ ಎಂದು ವಟಗುಟ್ಟುತ್ತಿದ್ದ ನನ್ನ ತಾಯಿ, ನಾನು ವೈದೇಹಿಯವರ ಅಂತರಂಗದ ಪುಟ-ಪುಟಗಳನ್ನು ಮಗುಚುತ್ತಿರುವಂತೆಯೇ ಕಣ್ಣ ಮುಂದೆ ಬಂದರು.

ನನಗೆ ನೆನಪಿರುವ ಹಾಗೆ ಅರುವತ್ತು ಎಪ್ಪತ್ತರ ದಶಕದಲ್ಲಿ ಪ್ರತಿಯೊಬ್ಬ ಮಧ್ಯಮ ವರ್ಗದ ತರುಣಿ/ಗೃಹಿಣಿಯ ಕೈಯಲ್ಲಿ ಒಂದು ಕಾದಂಬರಿ ಇರುತ್ತಿತ್ತು. ಎಸ್ ಎಸ್ ಎಲ್ ಸಿ ಗೆ ಓದಿಗೆ ಮಂಗಳ ಹಾಡಿ ಮನೆಯಲ್ಲಿ ಕಸೂತಿ ಹಾಕುತ್ತಾ, ಅಡಿಗೆ ಕೆಲಸದಲ್ಲಿ ನೆರವಾಗುತ್ತಾ ಮುಂದೆ ಮದುವೆ ಯಾವಾಗ ಎಂದು ಆತಂಕದಲ್ಲಿ ಕಾಯುತ್ತಾ, ಬೆಳಗಿನಿಂದ ಸಂಜೆಯ ತನಕ ಗಾಣದೆತ್ತಿನಂತೆ ದುಡಿದು ಸಂಜೆ ಮುಖ ತೊಳೆದು, ತಲೆ ಬಾಚಿ ಹೂ ಮುಡಿದು ಕೈಯ್ಯಲ್ಲಿ ಒಂದು ಪುಸ್ತಕ ಹಿಡಿದು ಪುಸ್ತಕ ಪ್ರಪಂಚದಲ್ಲಿ ಕಳೆದು ಹೋಗುತ್ತಿದ್ದ ಹೆಣ್ಣು ಮಕ್ಕಳು ನೆನಪಾಗಿ, ಮನೆವಾರ್ತೆ, ಸಂಸಾರ, ಗಂಡ-ಮಕ್ಕಳು, ಬಸಿರು-ಬಾಣಂತನಗಳ ನಡುವೆ ನವೆದುದನ್ನೇ ನಾದಿ ನಾದಿ ನವಪಾಕವನ್ನು ಉಣಬಡಿಸಿದ ವೈದೇಹಿಯ ಬಗ್ಗೆ ಮೆಚ್ಚುಗೆ ಮೂಡಿ ವೈದೇಹಿಗೊಂದು ಗೌರವಗ್ರಂಥ ಕೊಟ್ಟರೆ ಹೇಗೆ ಎಂಬ ಸಣ್ಣ ಆಲೋಚನೆಯೊಂದು ಮೂಡಿತು. ಆವರು ಒಪ್ಪುವರೋ ಬಿಡುವರೋ ಕೇಳಿ ನೋಡೋಣ ಎನಿಸಿತು.

ಇದನ್ನೂ ಓದಿ : Poetry : ಅವಿತಕವಿತೆ ; ಒದ್ದವನ ಕಾಲ ನಮಿಸುವೆ ಬಿದ್ದವನ ಎತ್ತಿ ನಿಲಿಸುವೆ

‘ಎಂಥ ನಗುವೋ’ ಲೇಖಕಿಯರಾದ ವೈದೇಹಿ ಮತ್ತು ಸವಿತಾ ನಾಗಭೂಷಣ

ಮನಸ್ಸಿಗೇನೋ ಬಂತು. ಕೇಳುವುದು ಹೇಗೆ? ಮನಸ್ಸು ಹೊಯ್ದಾಡಿತು. ಯಾಕೆಂದರೆ ವೈದೇಹಿ ನನಗೆ ಬರಹದ ಮೂಲಕ ಆಪ್ತರಾಗಿದ್ದರೇ ಹೊರತು ವೈಯಕ್ತಿಕವಾಗಿ ಅಷ್ಟು ಪರಿಚಿತರಾಗಿರಲಿಲ್ಲ. ನೀನಾಸಂ ಸಂಸ್ಕೃತಿ  ಶಿಬಿರಗಳಲ್ಲಿ ಭಾಗವಹಿಸಿದಾಗ ಅವರು ಎದುರಾದ ಸಂದರ್ಭಗಳಲ್ಲಿ ಐದು ಆರು ನಿಮಿಷ ಅವರೊಂದಿಗೆ ಮಾತಾಡಿದ್ದು ಬಿಟ್ಟರೆ ಹೆಚ್ಚಿನ ಸಂಪರ್ಕವಿರಲಿಲ್ಲ. ನಾನು ಇಪ್ಪತ್ತೈದು ವರ್ಷ ಶಿವಮೊಗ್ಗೆಯಲ್ಲಿ ಕಳೆದರೂ ಒಮ್ಮೆಯಾದರೂ ಯಾವುದೇ ಸಾಹಿತ್ಯ ಸಮಾರಂಭದಲ್ಲಿ ಎಂ.ಕೆ. ಇಂದಿರಾ ಅವರನ್ನಾಗಲೀ, ವೈದೇಹಿಯವರನ್ನಾಗಲೀ ನೋಡಿರಲಿಲ್ಲ. ನಮ್ಮ ಶಾಲೆ ಕಾಲೇಜಿಗೂ ಅವರನ್ನು ಕರೆಸಿದ್ದು ನೆನಪಿಲ್ಲ. ಶಿವಮೊಗ್ಗೆಯ ಕರ್ನಾಟಕ ಸಂಘದಲ್ಲೂ ಆವರನ್ನು ನೋಡಿದ್ದು ನೆನಪಿಲ್ಲ.

ನಾನು ಸಣ್ಣಪುಟ್ಟ ಬರವಣಿಗೆ ಮಾಡುವ ಹೊತ್ತಿಗೆ ಎಂ. ಕೆ. ಇಂದಿರಾ ವಯಸ್ಸಾಗಿ ಬೆಂಗಳೂರಿನಲ್ಲಿದ್ದರು. ಮನಸ್ಸು ಮಾಡಿದ್ದರೆ ಭೇಟಿಯಾಗಲು ಸಾಧ್ಯವಿತ್ತು, ಆದರೆ ಆಗಲಿಲ್ಲ. ವೈದೇಹಿಯವರು 1981ರ ಹೊತ್ತಿಗೆ ಶಿವಮೊಗ್ಗೆ ತೊರೆದು ಉಡುಪಿಯಲ್ಲಿ ನೆಲೆಸಿದ್ದರು. ನಾನು ಶಿವಮೊಗ್ಗೆಯವಳಾದರೂ 1981ರ ತನಕ ವೈದೇಹಿಯವರು ಶಿವಮೊಗ್ಗೆಯಲ್ಲಿ ಇದ್ದರು ಎಂಬುದೇ ನನಗೆ ಗೊತ್ತಿರಲಿಲ್ಲ. ಆದಾಗ್ಯೂ ಸುಧಾ ವಾರಪತ್ರಿಕೆ- ಪ್ರಜಾವಾಣಿ ವಿಶೇಷಾಂಕಗಳಲ್ಲಿ ಅವರ ಕಥೆಗಳನ್ನು ಓದುತ್ತಾ ನಂತರ ಸತತವಾಗಿ ಲಂಕೇಶ್ ಪತ್ರಿಕೆಯಲ್ಲಿ ಅವರ ಬರಹಗಳನ್ನು ಗಮನಿಸುತ್ತಾ, ಅವರ ಬರಹಗಳ ಜೊತೆ ಒಂದು ರೀತಿಯ ಆಪ್ತತೆಯನ್ನು ಬೆಳೆಸಿಕೊಂಡಿದ್ದೆನು. ಒಂದೆರಡು ಬಾರಿ ಪತ್ರಿಕೆಗಳಲ್ಲಿ ಅವರ ಕಥೆ ಕವನಗಳನ್ನು ಓದಿ ಅವರಿಗೆ ಪತ್ರ ಬರೆದದ್ದು ಉಂಟು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಇದನ್ನೂ ಓದಿ : ಪ್ರೇಕ್ಷಕ ಮಹಾಶಯರೇ ದಯವಿಟ್ಟು ಗಮನಿಸಿ