ನೆರೆನಾಡ ನುಡಿಯೊಳಗಾಡಿ |NereNaada Nudiyolagaadi : “ನಿನ್ನನ್ನು ಬೇಡಿ ಕೇಳ್ತೇನೆ ಕಣೊ, ಸೆಲ್ವಿ ಮುಖವನ್ನು ಒಂದು ಬಾರಿ ನೋಡ್ಬಿಟ್ಟು ಹೋಗು. ಹದಿನೆಂಟು ವಯಸ್ಸಿನ ಬಂಗಾರದ ಗಿಳಿ ಕಣೋ ಇವಳು’’ ಸುಂದರ ತಿರುಗಿ ನಿಂತು, ದುರುಗುಟ್ಟಿ ನೋಡಿದನು. “ಅನಗತ್ಯವಾಗಿ ನನ್ನ ಸಮಯವನ್ನು ವ್ಯರ್ಥ ಮಾಡ್ಬೇಡಿ. ಹೊರಡುವ ಮುಂಚೆ ಒಂದು ಹೇಳಲು ಇಚ್ಛಿಸುತ್ತೇನೆ. ಈ ಆಸ್ತಿ – ಸುಖ ಎಲ್ಲ ನನ್ನ ತಾತ ಸೇರಿಸಿ ಇಟ್ಟದ್ದು – ಇದರ ವಾರಸುದಾರ ನಾನೇ. ಆದ್ದರಿಂದ ಯಾವ್ಯಾವಾಗ ಹಣ ಬೇಕಾಗುತ್ತೋ ಆಗಾಗ ಆಳನ್ನು ಕಳುಹಿಸುತ್ತೇನೆ. ಕೇಳಿದುದನ್ನು ಮರ್ಯಾದೆಯಾಗಿ ಕೊಡಿ ಆಯ್ತಾ?’’, “ಏ ಏನ್ ಹೇಳಿದ್ಯೋ? ನಿಮ್ಮಪ್ಪನ್ನ ಮೂರ್ಖ ಅಂತಾ ತಿಳ್ಕೊಂಡ್ಯಾ? ಆಸ್ತಿಯಲ್ಲಿ ಒಂದು ಬಿಡಿಗಾಸೂ ಕೂಡ ಸಿಗೋಲ್ಲ. ಸೆಲ್ವಿಯೊಂದಿಗೆ ನೀ ಚೆನ್ನಾಗಿ ಸಂಸಾರ ಮಾಡಲು ಶುರು ಮಾಡಿದ ಮೇಲೆ ಮಾತ್ರ ಈ ಮನೆಯ ಹೊಸ್ತಿಲನ್ನು ಹತ್ತಬಹುದು. ಅದನ್ನು ನೆನಪಲ್ಲಿ ಇಟ್ಕೊಳ್ಳೊ ಪಾಪಿ’’
ಕಥೆ : ಒಂದು ಮಾತು | ತಮಿಳು ಮೂಲ : ಶಿವಶಂಕರಿ ಚಂದ್ರಶೇಖರನ್ | ಕನ್ನಡಕ್ಕೆ : ಡಾ. ಮಲರ್ ವಿಳಿ ಕೆ.
*
ಭಾಗ 6
ಭುಜವನ್ನು ಕುಲುಕುತ್ತಲೆ ಮೆಟ್ಟಿಲಿಂದ ಇಳಿದು ನಡೆದ ಸುಂದರ ಏನನ್ನೋ ಜ್ಞಾಪಿಸಿಕೊಂಡಂತೆ ಹಿಂತಿರುಗಿ ಬಂದನು. ಕಂಗಳಲಿ ವಿರಸ ವ್ಯಂಗ್ಯ ಕಾಣುವಂತೆ ಕ್ರೂರವಾಗಿ ಮುಗುಳ್ನಕ್ಕನು.
“ಸೆಲ್ವಿಯ ಬಾಳು ವ್ಯರ್ಥವಾಗಿಬಿಡ್ತು. ಅವಳು ಮಹಾಲಕ್ಷ್ಮೀ. ಮುಖದಲ್ಲಿ ಮುಗ್ಧತೆ ತಾಂಡವವಾಡುತ್ತದೆ ಅಂತೆಲ್ಲಾ ಹಲುಬುತ್ತೀರಲ್ಲಾ, ಒಂದು ಹೇಳಲಾಪ್ಪಾ? ನಿಮಗೇನೂ ಅಂಥಾ ವಯಸ್ಸಾಗಿಲ್ಲ. ಏನು ಐವತ್ತರೊಳಗೆ ತಾನೇ? ಸುಮ್ನೆ ನೀವೇ ಅವಳನ್ನು… ಅಮ್ಮನಿಗೂ ವಯಸ್ಸಾಯ್ತು ಅರ್ಥವಾಯ್ತೊ ?’’ ಕಣ್ಣುಗಳನ್ನು ಮಿಟುಕಿಸಿದರು.
ತಂದೆಯು ದಿಗ್ಭ್ರಮೆಯಿಂದ ಹೊರಬಂದು ಕೈಯೆತ್ತಿ ಬೀಸಿ ಹೊಡೆಯುವಷ್ಟರಲ್ಲಿ ವೇಗವಾಗಿ ನಡೆದು ಕಾರಿನಲ್ಲಿ ಹತ್ತಿ ಹೊರಟೇಬಿಟ್ಟನು.
ಅಂದೇ ತನ್ನ ತವರಿಗೆ ಸೆಲ್ವಿ ಬಂದುಬಿಟ್ಟಳು. ಈ ಮೂರು ವರ್ಷಗಳಿಂದಲೂ ಸುಂದರನ ಬಳಿ ಸಂಧಾನಕ್ಕಾಗಿ ಹಲವು ಬಾರಿ ಹೆತ್ತವರೂ, ಉಳಿದವರೂ, ಹೋದಾಗಲೂ ಸರಿ. ಅಕಾಲ ಮೃತ್ಯುವಿಗೀಡಾಗಿ ಅತ್ತೆ ಸತ್ತಾಗಲೂ ಸರಿ, ಮನೆಯನ್ನು ಬಿಟ್ಟು ಹೊರಬಂದವಳಲ್ಲ.
ಅವಮಾನ ಸಹಿಸದೆ ಸೆಲ್ವಿ ಕುಗ್ಗಿ ಹೋದಳು ಎಂಬುದಾಗಿಯೂ ಗಂಡನನ್ನು ಅಗಲಿದುದರಿಂದ ಆಕೆಗೆ ಆಘಾತ ಉಂಟಾಗಿದೆ ಎಂಬಂತೆಯೂ ಇನ್ನೂ ಹಲವು ಬಗೆಗಳಲ್ಲಿ ಊರಿನ ಜನರು ತಾವೇ ಒಂದು ನಿರ್ಧಾರಕ್ಕೆ ಬಂದು ಅವಳಿಗಾಗಿ ಅನುಕಂಪ ಪಟ್ಟಾಗಲೂ ಸಹ ಬಾಯ್ತೆರೆದು ಒಂದು ಮಾತು ಸಹ ಏನು ನಡೆಯಿತು, ತನ್ನ ಮಾನಸಿಕ ಸ್ಥಿತಿ ಏನೆಂದು ಮಾತನಾಡಿದವಳಲ್ಲ.
ಎರಡು ದಿನಗಳಿಂದ ಬಿಡದೆ ಆಲೋಚನೆ ಮಾಡಿದ ಮೇಲೆ ಸೆಲ್ವಿ ಒಂದು ನಿರ್ಧಾರವನ್ನು ತಳೆದಿದ್ದಳು. ಗುರುವಾರ ಬೆಳಿಗ್ಗೆ ಇನ್ನೂ ತಡ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಹೆತ್ತವರ ಮುಂದೆ ಹೋಗಿ ನಿಂತಳು.
ಅಳಿಯನಿಗಾಗಿ ತೆಗೆದುಕೊಂಡು ಬಂದಿದ್ದ ಹೊಸ ಬಟ್ಟೆಗಳು, ಹುಲಿನಖ ಪೋಣಿಸಿದ ಸರವನ್ನು ನೆಂಟರಿಗೆ ತೆಗೆದು ತೋರಿಸುತ್ತಿದ್ದ ವೇದಗಿರಿ ಮಗಳನ್ನು ಕಂಡೊಡನೆ ಕಣ್ಣಗಲಿಸಿ ಬೆರಗಾದರು.
ಸ್ವಾಭಾವಿಕವಾಗಿ ನಾಲ್ಕು ಜನ ಗಂಡಸರು ಇರುವ ಸ್ಥಳಕ್ಕೆ ಎಟುಕಿ ಸಹ ನೋಡದ ಸೆಲ್ವಿ ಇಂದು ಮುಂಭಾಗದ ಕೋಣೆಗೆ ಬಂದು ಬಾಗಿಲ ಸಮೀಪ ನಿಂತ ಕೂಡಲೆ, ತಕ್ಷಣ. “ಏನಮ್ಮಾ ?” ಎಂದರು.
ಸೆಲ್ವಿ ಸಣ್ಣ ದನಿಯಲಿ ಮಾತನಾಡಿದಳು. “ನಿಮ್ಮ ಹತ್ರ ಸ್ವಲ್ಪ ಮಾತಾಡಬೇಕಪ್ಪಾ.’’
“ಹ್ಞಾಂ ?’’
ವೇದಗಿರಿ ದಿಗ್ಭ್ರಮಿತರಾದರು.
“ಮಾತಾಡಮ್ಮಾ..”
“ಅಂದಹಾಗೆ ಅಂದರೆ . . .”
“ಏನಮ್ಮಾ ? ಅಳಿಯನಿಗೆ ಇನ್ನೂ ಏನಾದ್ರೂ ತೆಗೆದುಕೊಳ್ಳಬೇಕೂಂತಾ ಇದೆಯಾ? ಉಡುಗೊರೆ ಏನಾದ್ರೂ ದೊಡ್ಡದಾಗಿ ಮಾಡ್ಬೇಕೂಂತಾ ಇಚ್ಛಿಸ್ತೀಯಾ?’’
‘‘ಹೇಳಮ್ಮಾ… ಮುಜುಗರ ಪಡಬೇಡ. ಇಷ್ಟೂ ನಿನ್ನೊಬ್ಬಳಿಗೆ ಅಲ್ವೆನಮ್ಮಾ?’’
ಸೆಲ್ವಿ ತಡವರಿಸಿದಳು. ದನಿ ಇನ್ನೂ ಸಣ್ಣಗೆ ಮಾಡಿಕೊಂಡಳು.
ಭಾಗ 3 : Literature: ನೆರೆನಾಡ ನುಡಿಯೊಳಗಾಡಿ; ಬೇತಾಳ ಮತ್ತೆ ಮರ ಹತ್ತಿ ಕುಳಿತುಬಿಟ್ಟಿತೋ, ಮಾರಿಯಮ್ಮ ಕಣ್ಣು ತೆರೆದಳೋ
“ಸ್ವಲ್ಪ ಮಹಡಿಯ ಕೋಣೆಯವರೆಗೂ ಬರಲು ಸಾಧ್ಯವಾಪ್ಪಾ? ಅಲ್ಲಿಗೆ ಹೋಗಿ ಪ್ರತ್ಯೇಕವಾಗಿ ಮಾತನಾಡೋಣ’’
ಮಹಡಿ ಕೋಣೆಯ ಮಂಚ-ಗಿಂಚ ಸರಿಯಾಗಿಲ್ಲವೋ? ಅಪರಿಚಿತರ ಎದುರಿಗೆ ಹೇಳಲು ಸಂಕೋಚ ಪಡುತ್ತಿದ್ದಾಳೋ?
“ಅದ್ಕೇನಂತೆಮ್ಮಾ.. ಬಾ, ಹೋಗೋಣಾ..’’
ಮಗಳು ಹಿಂಬಾಲಿಸಲು, ಇದ್ದದ್ದನ್ನು ಇದ್ದಹಾಗೆ ಬಿಟ್ಟು, ವೇದಗಿರಿ ಮಹಡಿಗೆ ಹೋದರು. ಕಿಟಕಿಗಳಿಗೆ ಹೊಸ ಸ್ಕ್ರೀನ್ಗಳನ್ನು ಹಾಕುತ್ತಿದ್ದ ಕಂದಪ್ಪನನ್ನು “ಲೋ.. ನೀ ಕೆಳಗೆ ಇರೋ’’ ಎಂದು ಕಳುಹಿಸಿದರು.
ಸೆಲ್ವಿಯನ್ನು ದಿಟ್ಟಿಸಿ ವಾತ್ಸಲ್ಯದಿಂದ “ಏನಮ್ಮಾ.. ಹೇಳು.. ?’’ ಎಂದರು.
ಸೆಲ್ವಿ ತುಟಿಗಳನ್ನು ಒದ್ದೆ ಮಾಡಿಕೊಂಡಳು. ನಿಧಾನವಾಗಿ ಮಾತನಾಡಿದಳು.
“ನಾನು ಹೇಳುವುದನ್ನು ಕೇಳಿ ಬೇಸರಿಸಬೇಡೀಪ್ಪಾ. ಆತುರದಲ್ಲಿಯೋ, ಅವಸರದಿಂದಲೋ ಮಾತನಾಡುವವಳು ನಾನಲ್ಲ ನಿಮಗ್ಗೊತ್ತು.’’
“ಏನಮ್ಮಾ? ಏತಕ್ಕೆ ದೊಡ್ಡದಾಗಿ ಪೀಠಿಕೆ ಹಾಕ್ತಿದೀಯಾ’’
“ದೊಡ್ಡ ವಿಷಯವೇಪ್ಪಾ, ದಯಮಾಡಿ ತಾಳ್ಮೆಯಿಂದ ಕೇಳಿ. ನನ್ನನ್ನು ಖಂಡಿತವಾಗಿಯೂ ಅರ್ಥ ಮಾಡಿಕೊಳ್ತೀರಾ ಎಂಬ ನಂಬಿಕೆ ನನಗೆ ಇದೆ.’’
“ಏನ್ ವಿಷಯ ಹೇಳು ಸೆಲ್ವಿ.’’
“ಅವರೊಡನೆ ಕೂಡಿ ಬಾಳಲು ನಂಗೆ ಇಷ್ಟ ಇಲ್ಲಾಪ್ಪಾ’’
“ಏ..ಏನದು?’’
“ಹೌದು. ದಯವಿಟ್ಟು ಈ ಏರ್ಪಾಡನ್ನೆಲ್ಲಾ ನಿಲ್ಲಿಸಿ. ಅವರೆಲ್ಲ ಇಲ್ಲಿ ಬರಲಿಕ್ಕೆ ಮುಂಚಿತವಾಗಿಯೇ ಬರಬೇಡೀಂತಾ ಸುದ್ದಿ ಹೇಳಿ ಕಳುಹಿಸ್ಬಿಡಿ’’
“ಏನಮ್ಮಾ..ಏನಮ್ಮಾ..’’
“ಯಾಕಮ್ಮ..’’
“ಗಾಬರಿಯಾಗಬೇಡೀಪ್ಪಾ. ಎರಡು ದಿನದಿಂದ ನನ್ನ ಹತ್ರ ಒಂದು ಬಾರಿಯಾದ್ರೂ ನಿನಗೆ ಈ ಏರ್ಪಾಡಿನಲ್ಲಿ ತೃಪ್ತಿ ಇದೆಯಾಂತ ಕೇಳ್ತೀರಾಂತ ನಿರೀಕ್ಷಿಸಿದೆ. ನಿನಗೆ ಒಪ್ಪಿಗೆ ಅಂತ ಒಂದು ಮಾತು ಹೇಳಮ್ಮಾ ಅಂತ” ಕೇಳ್ತೀರಾಂತ ನಿರೀಕ್ಷಿಸಿದೆ. ಆದರೆ…’’
ವೇದಗಿರಿ ಗಾಬರಿಯಿಂದ ಮಂಚದ ಮೇಲೆ ಕುಳಿತರು. ಕೈಗಳಲ್ಲಿ ತಲೆಯನ್ನು ಆನಿಸಿಕೊಂಡು ಮುರುಗ ನನ್ನಪ್ಪಾ ಮುರುಗ ಎಂದು ಕಿರುಚಿದರು. ಅರ್ಧ ನಿಮಿಷದ ಮೌನದ ನಂತರ ಸೆಲ್ವಿ ಮಾತನಾಡಿದಳು.
“ಮೂರು ವರ್ಷದಿಂದ ಯಾರು ಏನು ಕೇಳಿದರೂ ಹೇಳದ ಸಂಗತಿಗಳನ್ನು ನಿಮ್ಮ ಹತ್ರ ಮಾತ್ರ ಈಗ ನಾನು ಹೇಳ್ತಿನೀಪ್ಪಾ. ನನ್ನನ್ನು ಬಿಟ್ಬಿಟ್ಟು ಅವರು ಆ ನಾಟ್ಯಗಾರ್ತಿ ಹಿಂದೆ ಹೋದರು ಅನ್ನೋದು ನನ್ನ ಮನಸ್ಸನ್ನು ಚೂರು ಮಾಡಲಿಲ್ಲ.
ಭಾಗ 4 : Literature: ನೆರೆನಾಡ ನುಡಿಯೊಳಗಾಡಿ; ಸಡಗರದ ಮಧ್ಯೆ ಸೆಲ್ವಿ ತನಗೂ ನಡೆಯುತ್ತಿರುವುದಕ್ಕೂ ಸಂಬಂಧವಿಲ್ಲವೆಂಬಂತಿದ್ದಳು
ಆದರೆ ಅದಕ್ಕೆ ಮುಂಚೆಯೇ ಅವರು ಮಾತನಾಡಿದ ಮಾತುಗಳು, ನಡೆಸಿಕೊಂಡ ವಿಧ ನನ್ನನ್ನು ತುಂಡು ತುಂಡಾಗಿ ಕತ್ತರಿಸಿ ಹಾಕಿತಪ್ಪಾ. ಅಸಹ್ಯವಾಗಿ ದೇಹ ಕಾಣುವ ದಿರಿಸುಗಳನ್ನು ಹಾಕಿಕೊಳ್ಳಲು ಹೇಳಿ ‘ರತ್ನಾ ರೀತಿ ಕುಣಿ’ ಅಂತ ಕಟ್ಟಳೆಯಿಡುತ್ತಿದ್ದರು. ಆ ನಂತರ ’ನಿನಗೆ ನಂದಿನಿ ರೀತಿ ತೊಡೆ ಇಲ್ಲ – ನಳಿನಾ ರೀತಿ ಸೊಂಟ ಇಲ್ಲ. ಗೀತಾ ರೀತಿ ಎದೆ ಇಲ್ಲಾಂತಾ..’ ಮುಂದುವರಿಸಲಾಗದೆ ಗಂಟಲು ಗದ್ಗದವಾಯಿತು.
“ತಾನು ಇದುವರೆಗೂ ಅನುಭವಿಸಿದ ಹೆಂಗಸರ ಅಂಗ ಲಾವಣ್ಯಗಳನ್ನು ಅಣುಅಣುವಾಗಿ ವರ್ಣಿಸಿ ನನ್ನನ್ನು ಒಂದು ಹುಳುವಿನಂತೆ ಒದ್ದಾಡಿಸಿ ಗೆಳೆಯರೆಲ್ಲಾ ನನ್ನನ್ನು ಬಿಟ್ಟ ಕಣ್ಣು ಬಿಟ್ಟ ಹಂಗೆ ನೋಡಿ, ಮುಟ್ಟಿದರೂ ಅದರಿಂದೇನಂತೆ ಅಂತ ನನ್ನನ್ನೇ ಬಯ್ದು ಇದೆಲ್ಲವನ್ನೂ ಸಹ ಸಹಿಸಿಕೊಂಡೆನಪ್ಪಾ – ಆದರೆ, ಅವಳ ಬಳಿ ಹೋಗೋ ದಿನ ತಂದೆಯನ್ನು ನೋಡಿ, ತಾಯಿಯ ಎದುರಿಗೇ… ಬೇಕಾದ್ರೆ ನೀವೇ ಇವಳನ್ನು ಇಟ್ಕೊಳ್ಳಿ ಎಂಬ ಮಾತು!’’
ಸೆಲ್ವಿ ಬಿಕ್ಕಿ ಬಿಕ್ಕಿ ಅಳಲು ತೊಡಗಿದಾಗ ‘ಸಾಕು ಕಣಮ್ಮಾ – ಅಮ್ಮಣ್ಣಿ ನಿಲ್ಲಿಸಮ್ಮಾ’ ಎಂದು ವೇದಗಿರಿ ಗಾಬರಿಗೊಳಗಾದರು.
“ಇಷ್ಟೊಂದು ಸಂಕಟವನ್ನು ಒಳಗೊಳಗೆ ಇಟ್ಟುಕೊಂಡು ಒಂಟಿಯಾಗಿ ಕಷ್ಟಪಟ್ಟು – ಏನಮ್ಮಾ ಆಗಲೇ ‘ಒಂದು ಮಾತು’ ಹೇಳಿರಕೂಡದೇ’’
ಸೆಲ್ವಿ ಕಣ್ಣುಗಳನ್ನು ಒರೆಸಿಕೊಂಡಳು.
“ಆಗ ಹೇಳದ ಒಂದು ಮಾತನ್ನು ಈಗ ಹೇಳ್ಬಿಡ್ತಿನೀಪ್ಪಾ ನನಗೆ ಅವರ ಜೊತೆ ಬಾಳಲು ಸಮ್ಮತಿಯಿಲ್ಲ. ಹೆಂಡತಿಯ ಬಳಿ ಪ್ರೀತಿ ತೋರಿಸಲು ತಿಳಿಯದವರ ಜೊತೆ ಮುಖ್ಯವಾಗಿ ಅವಳನ್ನು ಅವಳ ಭಾವನೆಗಳನ್ನು ಮಾನವೀಯತೆಯಿಂದ ಗೌರವಿಸಲು ನಿರಾಕರಿಸುವವರನ್ನು ನನ್ನ ಗಂಡ ಅಂತಾ ಸ್ವೀಕರಿಸಲು ನಾನು ಒಪ್ಪುವುದಿಲ್ಲ. ಅವಳನ್ನು ಬಿಟ್ಟುಬಿಡೋಲ್ಲಾಂತ ನೆಮ್ಮದಿಯಾಗಿದ್ದೆ. ಆದರೆ ಆ ನೆಮ್ಮದಿಯೂ ಹೊರಟುಹೋದ ನಂತರ ನಿಜವನ್ನು ಎದುರಿಸಲಾರದೆ ಓಡಿ ತಪ್ಪಿಸಿಕೊಳ್ಳುವುದು ಹೇಡಿಯ ಲಕ್ಷಣಾಂತ ಅರ್ಥವಾಯಿತು. ದಯವಿಟ್ಟು ನಾನು ಮುಂದೆ ಓದಬೇಕು ಸಮ್ಮತಿಸಿ. ನನ್ನನ್ನು ಇನ್ನು ಮೇಲೆ ನಿಮ್ಮ ಮಗನಂತೆ ತಿಳಿದುಕೊಳ್ಳಿ ಅಪ್ಪಾ. ಏನಪ್ಪಾ ನನ್ನನ್ನು ಅರ್ಥ ಮಾಡಿಕೊಳ್ತೀರಾ ತಾನೇ?’’
ಭಯಮಿಶ್ರಿತ ನಿರೀಕ್ಷೆಯಲ್ಲಿ ಮಾತನಾಡಿದವಳನ್ನು ವೇದಗಿರಿ ಒಂದು ನಿಮಿಷ ಹಾಗೇ ನಿಂತು ದಿಟ್ಟಿಸಿ ನೋಡಿದರು.
ನಂತರ ಪ್ರತ್ಯುತ್ತರಿಸದೆ, ವೇಗವಾಗಿ ಕೆಳಗೆ ಇಳಿದು ಬಂದವರು ನಡುಮನೆಯಲ್ಲಿ ನಿಂತು ಯಾರ್‌ಲಾ ಅಲ್ಲಿ? ಹೋಗಿ ಆರ್ಮುಗಮ್ನನ್ನು ಕರೆದುಕೊಂಡು ಬಾ. “ಮಗಳಿಗೆ ಮದುವೆ ನಿಶ್ಚಯ ಮಾಡ್ಬಿಟ್ಟು, ವರೋಪಚಾರ ಉಡುಗೊರೆ ಅದು ಇದೂ ಕೊಡಲು ನಾಕಾಣೆ ಇಲ್ಲಾ ಅಂತ ಅಳ್ತಿದ್ದಿಯಲ್ಲಾ ಚಿಂತಿಸಬೇಡ – ತಗೋ. ಹುಲಿನಖ ಕುಂದಣಿಸಿದ ಸರ. ಝರಿ ಪಂಚೆ, ರೇಷ್ಮೆ ಸೀರೆ ತೆಗೆದುಕೊಂಡು ಹೋಗಿ ವೈಭವದಿಂದ ಮದುವೆಯನ್ನು ನಡೆಸು ಅಂತ ಆಶೀರ್ವಾದ ಮಾಡಿಕೊಡಬೇಕು. ಓಡು. ತಕ್ಷಣ ಕರೆದುಕೊಂಡು ಬಾ’’ ಎಂದು ಜೋರಾಗಿ, ಮನೆ ಪೂರ್ತಿ ಕೇಳುವಂತೆ ಕೂಗಿದರು.
(ಮುಗಿಯಿತು)
ಭಾಗ 5 : Literature: ನೆರೆನಾಡ ನುಡಿಯೊಳಗಾಡಿ; ‘ನಾ ಗಂಡಸು, ನೂರು ಹೆಂಗಸರ ಬಳಿ ಹೋಗ್ತೇನೆ ಬರ‍್ತೇನೆ, ನೀ ಯಾರು ಕೇಳಲು?’
ಈ ಕಥೆಯ ಎಲ್ಲ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/nerenaada-nudiyolagaadi
Published On - 5:58 pm, Fri, 11 February 22