Forest Stories: ಕಾಡೇ ಕಾಡತಾವ ಕಾಡ; ‘ಖುದಾ ಕೀ ಕಸಮ್ ಸಾ ಈ ಸಾವು ಸುಳ್ಳ ಹೇಳಾಕಿಲ್ಲ, ಬರ್ಕಳಿ ಲಾರಿ ನಂಬರ್ 7434’

|

Updated on: Feb 12, 2022 | 11:21 AM

Hungry : ’ಸಾರ್‌, ಬೆಳಿಗ್ಗೆ 8.30ಕ್ಕೆ ಐದು ಚಪಾತಿ, ಒಂದ್‌ ಬಟ್ಲ್‌ ಅನ್ನ ತಿಂದ್‌ ಬಂದವ್ನೇ, ಹನ್ನೊಂದ್‌ ಗಂಟೆಗೆ ಟೀ ಕುಡಿತಾ 2 ಪರೋಟ ತಿಂದ್ವನೇ, ಹನ್ನೆರಡೂವರೆಗೆ ಮತ್ತೆ ಮನೆಯಿಂದ ತಂದಿದ್ದ 6 ಚಪಾತಿ ಒಂದ್‌ ಬಟ್ಲ್‌ ತುಂಬಾ ಅನ್ನ ಉಂಡವ್ನೇ ಸಾ.. ಈಗ ಪುನ ಹಸೀತದೆ ಅಂತಾನೆ ಸಾ’ ವಿ. ಕೆ. ವಿನೋದ್​ಕುಮಾರ್

Forest Stories: ಕಾಡೇ ಕಾಡತಾವ ಕಾಡ; ‘ಖುದಾ ಕೀ ಕಸಮ್ ಸಾ ಈ ಸಾವು ಸುಳ್ಳ ಹೇಳಾಕಿಲ್ಲ, ಬರ್ಕಳಿ ಲಾರಿ ನಂಬರ್ 7434’
ಫೋಟೋ : ವಿ. ಕೆ. ವಿನೋದ್​ಕುಮಾರ್
Follow us on

ಕಾಡೇ ಕಾಡತಾವ ಕಾಡ | Kaade Kaadataava Kaada : ‘ಹೇಯ್‌ ಲಕ್ಷ್ಮಣ, ಬಾರೋ ಇಲ್ಲಿ’, ಬಂದೆ ಅನ್ನುತ್ತಾ ಓಡಿ ಬಂದ ಲಕ್ಷ್ಮಣ. ‘ತಗೋ ಈ ಲಿಸ್ಟ್‌, ತಗಂಡೋಗಿ ಕರೆಕ್ಟಾಗಿ ಹ್ಯಾಮರಿಂಗ್‌ ಮಾಡ್ಸು, ಹುಷಾರು’ ಅನ್ನುತ್ತಾ ಒಂದು ಚೀಟಿ ಕೊಟ್ಟರು ಆಫೀಸರು. ಚೀಟಿ ಪಡೆದುಕೊಂಡ ಲಕ್ಷ್ಮಣ, ‘ಸಾರ್‌, ನೀವ್‌ ಕರೆಕ್ಟಾಗಿ ನೋಡಿದಿರ ತಾನೆ? ಮತ್ತೆ ಇದ್ರಲ್ಲಿ ಒಂದ್ಸಲ ರೆಡ್‌ ಇಂಕಲ್ಲಿ ಟಿಕ್‌ ಮಾಡ್ಬುಡಿ ಸಾ, ಇಲ್ಲಾಂದ್ರೆ ಫೀಲ್ಡಿಗೋಗಿದ್ದೇ ಬೇರೆ ಯಾವ್ದ್ಯಾವ್ದೋ ಲಾಗ್‌ ತೋರಿಸ್ತಾನೆ ಇವ, ಬಾಳಾ ಡೇಂಜರ್ರು ಸಾ’ ಅನ್ನುತ್ತಾ ಪಕ್ಕದಲ್ಲಿದ್ದವನ ಕಡೆ ಬೆರಳು ತೋರಿಸಿದ. ಹೌದೇನೋ? ಅನ್ನುತ್ತಾ ಅವನ ಕಡೆ ನೋಡಿದರು ಆಫೀಸರ್. ‘ಹೇ.. ಹಂಗೇನಿಲ್ಲ ಸಾಬ್‌, ಸುಮ್ಕೇ ಇವ್ರೆಲ್ಲಾ ನಮ್ದು ಮೇಲೆ ಏನೇನೋ ಹೇಳ್ತಾರೆ. ನೀವ್‌ ನಂಬಬೇಡಿ. ನಾನು ಬೀಸ್‌ ವರ್ಷಾಯ್ತು ಯಾಪಾರ ಶುರು ಮಾಡಿ, ನನ್‌ ಬಗ್ಗೆ ಯಾರೂ ಬೆರಳ್‌ ತೋರ್ಸಂಗಿಲ್ಲ ಸಾ. ನಮ್ದೂ ಖುರಾನಲ್ಲಿ ಏನೇಳೈತೋ ಹಂಗೇ ಬದ್ಕದೂ ಸಾ ನಾನು. ಯಾರ್ಗೂ ಮೋಸ ಮಾಡಂಗಿಲ್ಲ ಸಾ. ನಮ್ದೂ ಮಸೀದಿಗೆ ಶುಕ್ರವಾರ ಹೋಗ್ತೀವಲ್ಲ.. ಆವಾಗಾ..’ ಲೇಯ್‌, ನಿಲ್ಸೋ ನಿನ್‌ ಪುಂಗೀ.. ಕರ್ಮಕಾಂಡ.

ವಿ. ಕೆ. ವಿನೋದ್​ಕುಮಾರ್, ಕುಶಾಲನಗರ (V. K. Vinodkumar)

*

(ಕಥೆ 3)

ಸಾರ್‌ ಇವ ಹಿಂಗೇ ಸಾ.. ಬಾಯ್‌ ಬುಟ್ರೇ.. ಏನೇನೋ ಸುರ ಹಚ್ಕತಾನೆ. ಬರೀ ಓಳು.. ಅನ್ನುತ್ತಾ ನಕ್ಕ ಲಕ್ಷ್ಮಣ.

ಏನಪ್ಪಾ ನಿನ್‌ ಹೆಸ್ರು ಅನ್ನುತ್ತಾ ಆ ವ್ಯಕ್ತಿ ಕಡೆ ತಿರುಗಿದರು ಆಫೀಸರು.

ಸಾವು ಸರ್‌ ಅಂದ ಅವ

ಏನು? ಸಾವಾ? ಆಶ್ಚರ್ಯಚಕಿತರಾಗಿ ಕೇಳಿದರು ಆಪೀಸರ್ರು

ಅದಕ್ಕೆ ಜೋರಾಗಿ ನಗುತ್ತಾ ಲಕ್ಷಣ, ‘ಸಾಹು ಅಂತಿರ್ಬೇಕು ಸಾ.. ಇವ ಯಾವಾಗ್ಲೂ ಸಾವು ಅಂತಿರ್ತಾನೆ. ಎಲ್ಲಾ ಕಡೆ ಹಂಗೇ ಬರ್ಸಿದಾನೆ ಸಾ, ದೊಡ್‌ ಸಾಹೇಬ್ರು ಬಂದಾಗ್ಲೂ ಹಿಂಗೇ ಅಂದಿದ್ದಾ’ ಅನ್ನುತ್ತಾ ಮತ್ತೂ ಜೊರಾಗಿ ನಕ್ಕ.

‘ಹುಂ  ಸರಿ ಆಯ್ತ್‌ ಕರ್ಕಂಡೋಗು, ಹುಷಾರಾಗಿ ಲಾಗ್​ಗಳನ್ನು ನೋಡಿ ಹ್ಯಾಮರ್‌ ಮಾಡು’ ಅಂದರು ಆಫೀಸರು.

‘ಟ್ಯಾಂಕ್ಸ್‌ ಸಾ’ ಅನ್ನುತ್ತಾ ನಮಸ್ಕರಿಸಿ, ‘ನಾನ್ಯಾರಿಗೂ ಮೋಸ ಮಾಡಂಗಿಲ್ಲ ಸಾ.. ನಮ್ದೂ ದೇವ್ರನ ನಂಬಿ ಬದ್ಕೋ ಜನ ಸಾ. ಯಾಪಾರದಲ್ಲಿ ಮೋಸ ಮಾಡಬಾರ್ದು ಸುಳ್‌ ಹೇಳ್ಬಾರ್ದು ಅಂತ ನಂದು ಮಸೀದಿಲಿ.’

ಅವನ ಮಾತು ಮುಗಿಯೋದ್ರೊಳಗೆ, ‘ಹೇಯ್‌ ಸಾಕು ಬಾಪ್ಪಾ’ ಅನ್ನುತ್ತಾ ಲಕ್ಷಣ ಸಾಹುವನ್ನು ಕೈಹಿಡಿದು ಎಳೆದುಕೊಂಡೇ ಹೊರನಡೆದ.

ಅದೊಂದು ಸರ್ಕಾರಿ ನಾಟಾ ಸಂಗ್ರಹಾಲಯದ ಕಚೇರಿ, ಡಿಪೋ ಆಫೀಸ್. ಹೊಸದಾಗಿ ರೇಂಜರ್‌ ಪೋಸ್ಟಿಗೆ  ಹಾಜರಾಗಿ ವಾರ ಕಳೆದಿತ್ತಷ್ಟೇ ಆ ಆಫೀಸರ್​ಗೆ.

ಏನೋ ಕರ್ಮ ನಿಂದು ಅನ್ನುತ್ತಾ ಸಾಹುವನ್ನು ಕರೆದುಕೊಂಡು ಫೀಲ್ಡಿನ ಕಡೆ ಹೊರಟ ಲಕ್ಷ್ಮಣ. ಅವ ಟೆಂಪರರಿ ಕೆಲಸಗಾರ, ಖರೀದಿದಾರರು ಖರೀದಿಸಿದ ನಾಟಾಗಳಿಗೆ ಸರ್ಕಾರದ ಗುರುತಿನ ಹ್ಯಾಮರ್‌ ಹೊಡೆದು ಅವುಗಳನ್ನು ಖರೀದಿದಾರರ ವಾಹನಗಳಿಗೆ ಲೋಡ್‌ ಮಾಡಿಸುವುದು ಅವನ ಕೆಲಸ. ಸಾಹುವನ್ನು ಕರೆದುಕೊಂಡು ಫೀಲ್ಡಿಗೆ ಹೋಗುತ್ತಾ, ದಾರೀ ಮಧ್ಯದಲ್ಲಿ ತೇಗದ ಸರಗಳ ಲಾಟುಗಳ ಮದ್ಯೆ ಕುಳಿತು ಊಟ ಮಾಡುತ್ತಿದ್ದ ಮತ್ತೊಬ್ಬ ನೌಕರ ಕಾಣಿಸಿದ.

‘ಹೇಯ್‌ ಶಿವಗಂಗಾ, ಇದೇನ್ಲಾ ಈಗಿನ್ನೂ ಹನ್ನೆರಡೂವರೆ, ಆಗ್ಲೇ ಉಣ್ಣಕ್‌ ಕೂತಿದಿಯಾ?’ ಅನ್ನುತ್ತಾ ಆ ಕಡೆ ನಡೆದ. ಹತ್ತಿರ ಹೋಗುತ್ತಿದ್ದಂತೇ,‘ ಯಾಕೋ ಬೇಗ ಹೊಟ್ಟೆ ಹಸೀತು ಕಣೋ, ಅದಿಕ್ಕೇ ತಿಂತಿದಿನಿ ಅಂದ.’

‘ಹೊಟ್ಟೆ ಹಸೀತಾ? ಅಲ್ವೋ, ಆಗ್ಲೇ ತಾನೆ ಹನ್ನೊಂದ್‌ ಗಂಟೆಗೆ ಟೀ ಕುಡೀತಾ ಎರಡು ಪರೋಟ ತಿಂದಲ್ಲ?’ ಅಂದ

‘2 ಪರೋಟ ತಿಂದಿದ್ದು 11 ಗಂಟೆಗೆ ತಾನೆ? ಈಗ ಹನ್ನೆರಡೂವರೆ’ ಅಂದ.

‘ಬೆಳಿಗ್ಗೆ ಮನೇಲಿ ಹೊರಡುವಾಗ ತಡವಾಗಿತ್ತಲಾ? ಅದಿಕ್ಕೆ ಬರೀ 5 ಚಪಾತಿ ತಿನ್ಕಂಡು ಚೂರ್‌ ಅನ್ನ ಉಣ್ಕಂಡು ಬಂದೆ. ಅದೂ 8.30ಕ್ಕೆ. ಮತ್ತೆ ಹೊಟ್ಟೆ ಹಸಿಯಕಿಲ್ವಾ? ಅಂದ’ ಶಿವಗಂಗಾ.

ಇದನ್ನೂ ಓದಿ : World Elephant Day 2021: ಆನೆಗಳು ಕಾಡಿನಿಂದ ನಾಡಿಗೆ ಬರುವುದು ಏತಕ್ಕೆ?

ಫೋಟೋ : ವಿ. ಕೆ. ವಿನೋದ್​ಕುಮಾರ್

‘ಸರಿ ತಿನ್ನಪ್ಪಾ.. ತಿಂದಾದ್ಮೇಲೆ ಆ ಕಡೆ ಬಾ’ ಅನ್ನುತ್ತಾ ಸಾಹುವನ್ನು ಕರೆದುಕೊಂಡು ಲಾಟಿನ ಕಡೆ ಹೊರಟ ಲಕ್ಷ್ಮಣ. ಲಾಟಿನ ಬಳಿ ಹೋಗಿ ಸಾಹುಗೆ ತೋರಿಸುತ್ತಾ, ಅವನ ಕೈಗೆ ಚಾಕ್​ಪೀಸ್​ ಕೊಟ್ಟು, ‘ತಗೋ ನಾನ್‌ ತೋರಿಸ್ತೀನಿ ನೀನೇ ಮಾರ್ಕ್​ ಮಾಡು, ನಾನ್‌ ನೋಡ್ಕತೀನಿ’ ಅಂದ.

ಸರಿ ಅನ್ನುತ್ತಾ, ಲಕ್ಷ್ಮಣ ತೋರಿಸಿದ ನಾಟಾಗಳ ಒಂದು ತುದಿಗೆ, ಚಾಕ್​ಪೀಸಿನಿಂದ ಮಾರ್ಕ್​ ಮಾಡತೊಡಗಿದ ಸಾಹು.  ಅಷ್ಟರಲ್ಲಿ ಅಲ್ಲಿಗೆ ಶಿವಗಂಗಾ ಬಂದ. ‘ಸರೀಯಾಗ್‌ ನೋಡ್‌ ಹೇಳಲೇ ಲಕ್ಷ್ಮಣ, ಬರೀ ಕಾಸಿಸ್ಕಂಡ್ರೇ ಸಾಕಾ? ಜೋರಾಗ್‌ ಹೊಡಿ, ಸೀಲ್‌ ಮಾರ್ಕು ಕರೆಕ್ಟಾಗಿ ಬೀಳ್ಬೇಕು’ ಅಂದ.

‘ಬಾಪ್ಪಾ… ಗಂಟೆಗೊಂದ್ಸಲ ಊಟ ಮಾಡೋನು ನೀನ್‌ ತಾನೆ? ನೀನೇ ಹೊಡಿ ಬಾ’ ಅನ್ನುತ್ತಾ ಅವನ ಕೈಗೆ ಹ್ಯಾಮರ್‌ ಕೊಡಲು ಬಂದ ಲಕ್ಷ್ಮಣ.

‘ನಂಗೇನ್‌ ಹೇಳ್ತಿಯಾ? ನಾನು ನೈಂಟೀನ್‌ ನೈಂಟೀಟೂನಲಿ ಕೆಲ್ಸ ಮಾಡ್ತಿದ್ದಾಗಿಂದ ಸೀಲಿಂಗ್‌ ಮಾಡಿದಿನಿ’ ಅಂದ ಅವ. ‘ನಾವ್‌ ನೈಂಟೀಸ್‌ ಲಿ ಕೆಲ್ಸ ಮಾಡ್ವಾಗ ಹೆಂಗಿತ್‌ ಗೊತ್ತಾ?’ ಅನ್ನುತ್ತಾ ಕಥೆ ಶುರು ಮಾಡಿದ ಶಿವಗಂಗಾ.

‘ಥೋ ನಿಲ್ಸಪ್ಪಾ. ಇವ ಬಾಯ್ಬುಟ್ರೆ ಸಾಕು, ನಮ್ದೂ ಮಸೀದಿ, ದೇವ್ರೂ ಅಂತ ಶುರು ಮಾಡ್ತಾನೆ. ನೀನ ನೋಡಿದ್ರೆ ನೈಂಟೀಸ್‌ ಕತೆ ಅಂತಿಯಾ… ಸುಮ್ನೇ ಸೀಲಿಂಗ್‌ ಮಾಡಿ ಆಫೀಸತ್ರ ಬಾ’ ಅನ್ನುತ್ತಾ ಹ್ಯಾಮರ್‌ ಅವನ ಕೈಗೆ ಕೊಟ್ಟು ಆಪೀಸಿನ ಕಡೆ ಹೊರಟ ಲಕ್ಷ್ಮಣ.

ಆಫೀಸಿಗೆ ತಲುಪಿದವನೇ, ಸಾರ್‌ ಮಧ್ಯಾಹ್ನ ಊಟಕ್ಕಿರ್ತೀರಾ? ಆಫೀಸರ್​ನ ಕೇಳಿದ.

‘ಇರ್ತೀನಿ ಕಣಪಾ ಏನಡುಗೆ?’

‘ಇನ್ನೇನ್‌ ಸಾರ್?‌ ಕುಸಲಕ್ಕಿ ಗಂಜಿ, ಒಣಗಿದ ಮೀನು ಜೊತೆಗೆ ಸುಟ್ಟ ಹಪ್ಪಳ’ ಅಂದ ಲಕ್ಷ್ಮಣ.

‘ದಿನಾ ಅದೇ ಮಾಡ್ತೀಯಲ್ಲಪಾ, ಇವತ್ತು ಚಿಕ್ಕನ್‌ ಏನಾದ್ರು ಮಾಡು’ ಅನ್ನುತ್ತಾ ಲಕ್ಷ್ಮಣನ ಕೈಗೆ ಹಣ ಕೊಟ್ಟರು

‘ಆಯ್ತು ಸಾರ್‌, 3 ಕೇಜಿ ಚಿಕ್ಕನ್‌ ತರ್ಸಿ ಫ್ರೈ ಮಾಡ್ತಿನಿ, ಚೂರು ಗಸಿ ಇರೋತರ, ಅದ್ರಲ್ಲೇ ಊಟ ಮಾಡಣ’ ಅಂದ ಲಕ್ಷ್ಮಣ. ಸರಿ ಹಾಗೆ ಮಾಡು ಅನ್ನುತ್ತಾ ಫೀಲ್ಡಿನ ಕಡೆ ನಡೆದರು ಆಫೀಸರ್‌.

ಒಂದ್‌ ರೌಂಡ್‌ ಫೀಲ್ಡಿನಲ್ಲಿ ಲೋಡಿಂಗ್‌ ಆಗುತ್ತಿದ್ದ ಲಾರಿಗಳನ್ನೆಲ್ಲಾ ನೋಡಿ ವಾಪಾಸ್‌ ಕಚೇರಿಗೆ ಬಂದರು. ಅಷ್ಟರಲ್ಲಿ ಲಕ್ಷ್ಮಣ ಊಟಕ್ಕೆ ರೆಡಿ ಮಾಡಿದ್ದ.

ಇದನ್ನೂ ಓದಿ : Earth Day 2021 : ಎಲ್ಲಿದ್ದೀಯೋ? ಇಲ್ಲಿ ಯಾವುದೂ ಹರಿಯುವ ಕಡೆ ಹರಿಯುತ್ತಿಲ್ಲ ನನ್ನ ಗೂಗಲ್​ ತೋಲಣ್ಣ

ಫೋಟೋ : ವಿ. ಕೆ. ವಿನೋದ್​ಕುಮಾರ್

‘ಸಾರ್‌ ನಿಮ್ಗೆ ಊಟ ಅಲ್ಲೇ ರೂಮಿಗೇ ತಂದುಕೊಡಲಾ?’

‘ಬೇಡ ಬಿಡೋ.. ನಾನೇ ಮುಂದೆ ಹಾಲ್​ಗೆ ಬರ್ತೀನಿ ಎಲ್ಲಾ ಒಟ್ಟಿಗೇ ಊಟ ಮಾಡುವ’ ಅಂದ್ರು.

ಕಛೇರಿಯ ಇತರೆ ಕ್ಷೇತ್ರ ಸಿಬ್ಬಂದಿಗಳೂ ಸೇರಿ ಮಧ್ಯಾಹ್ನ ಊಟದ ಸಮಯಕ್ಕೆ 10-12 ಜನ ಒಟ್ಟಾಗಿ ಕುಳಿತು ಊಟ ಮಾಡುವುದು ವಾಡಿಕೆ. ಅವತ್ತು ಅಧಿಕಾರಿಯೂ ಸೇರಿಕೊಂಡಿದ್ದು ಅವರಿಗೆಲ್ಲಾ ವಿಶೇಷವೇ ಆಗಿತ್ತು. ಕುಸಲಕ್ಕಿ ಗಂಜಿಯನ್ನೇ ಅದರ ನೀರು ತೆಗೆದು ಬರೀ ಅನ್ನವನ್ನೇ ಬಡಿಸಿಕೊಂಡರೆ ಅನ್ನವಾಗಿಯೂ, ನೀರಿನ ಜೊತೆ ಸೇರಿಸಿ ಬಡಿಸಿಕೊಂಡರೆ ಕುಸಲಕ್ಕಿ ಗಂಜಿಯಾಗಿಯೂ ತಿನ್ನುತ್ತಿದ್ದರು ಅವರೆಲ್ಲಾ. ಆಫೀಸರ್​ಗೆ ಕುಸಲಕ್ಕಿ ಅನ್ನ ಮತ್ತು ಚಿಕನ್ ಸಾರು ಬಡಿಸಿದ ಲಕ್ಷ್ಮಣ.

‘ಒಂದು ತುತ್ತು ಬಾಯಿಗೆ ಹಾಕಿದವರೇ, ಇದೇನು ಇಷ್ಟ್‌ ಖಾರ ಮಾಡಿದ್ದೀಯಾ?’ ಅಂದು ನೀರು ಕುಡಿದದರು.

‘ಸಾರ್?!‌ ಇದು ಖಾರಾನ? ನಮ್ಗೆ ಕಡಿಮೆಯಾಯ್ತು ಸಾರ್‌’ ಅಂದರು ಇತರೆ ಕ್ಷೇತ್ರ ಸಿಬ್ಬಂದಿಗಳು.

ಸರಿ ತಿನ್ರಪ್ಪಾ ಅನ್ನುತ್ತಾ ಎಲ್ಲರೂ ಊಟ ಮಾಡಲು ಶುರು ಮಾಡುತ್ತಿದ್ದಂತೇ, ಲಾರಿ ಲೋಡೀಂಗ್‌ ಮುಗಿಸಿ ಸಾಹು ಆಫೀಸಿನ ಹತ್ತಿರ ಬಂದ.

‘ಸಾರ್‌ ಗಾಡಿ ಲೋಡಾಗೈತೆ, ಪರ್ಮಿಂಟ್‌ ಕೊಡಿ ಸಾ ಹೋಯ್ತಿನಿ’ ಅನ್ನುತ್ತಾ ಮುಂದೆ ಬಂದ.

‘ಲೇಯ್‌ ಸಾಹೇಬ್ರು ಊಟ ಮಾಡ್ತಿರೋದ್‌ ಕಾಣ್ತಿಲ್ವಾ?’ ಅನ್ನುತ್ತಾ ಗುಡುಗಿದ ಲಕ್ಷ್ಮಣ.

‘ಆಯ್ತು ಸಾರ್‌ ಮಾಡಿದ್ಮೇಲೆ ಕೊಡಿ’ ಅಂದ ಸಾಹು.

‘ಹೇಯ್‌ ಬಾರಪ್ಪಾ ಇಲ್ಲಿ, ಊಟ ಮಾಡು’ ಸಾಹುವನ್ನು ಕರೆದರು ಆಫೀಸರು.

‘ಛೆ ನಾನ್‌ ತಿನ್ನದಿಲ್ಲ ಸಾ.. ನಮ್ದೂ ಹಲಾಲ್ ಮಾಡಿಲ್ಲಾಂದ್ರೆ ನಾವ್‌ ತಿನ್ನಂಗಿಲ್ಲ ಸಾ.. ನಮ್ದೂ ಮಸೀದಿಲಿ ನಮ್ಗೆ’ ಅನ್ನುತ್ತಾ ಮಾತು ಶುರುಮಾಡದ ಕೂಡಲೇ,

‘ಲೇಯ್..‌ ಇದ್‌ ನಿಮ್ಮ ಸಾಬ್ರ್‌ ಅಂಗ್ಡೀಲೇ ತಂದಿದ್‌ ಚಿಕ್ಕನ್​. ಸುಮ್ನೆ ಬಂದ್‌ ತಿನ್ನು’ ಅನ್ನುತ್ತಾ ಲಕ್ಷ್ಮಣ ಗುಡುಗಿದ.

‘ಹೌದಾ ಸಾ.. ಹಂಗಾರ್‌ ನಂಗೂ ಸ್ವಲ್ಪ ಕೊಡಿ’ ಅನ್ನುತ್ತಾ ಸಾಹು ಒಳನಡೆದ.

ಅಷ್ಟರಲ್ಲೇ ಶಿವಗಂಗನೂ ಅಲ್ಲಿಗೆ ಬಂದ. ‘ಏನ್ಸಾರ್‌ ಊಟ? ನಂಗೇಳ್ಲೇ ಇಲ್ಲ, ಚಿಕ್ಕನ್‌ ಮಾಡ್ಸಿದಿರಿ. ನಂಗ್‌ ಅಲ್ಲಿಗೇ ಘಮ್‌ ಘಮಾ ಅಂತಿತ್ತು ಸಾ ಅದಿಕ್ಕೆ ಬಂದೆ’ ಅನ್ನುತ್ತಾ ತಲೆಕೆರೆದುಕೊಂಡು ನಿಂತ.

ಲಕ್ಷ್ಮಣ, ’ಸಾರ್., ಅವಂದ್‌ ಆಗ್ಲೇ ಆಯ್ತು ಸಾ’ ಅಂದ, ಅಸಮಾಧಾನದಿಂದ.

ಶಿವಗಂಗ, ‘ಸಾರ್‌ ಅದ್‌ ಹನ್ನೆರಡೂವರೆಗೆ ತಿಂದಿದ್‌ ಸಾ ಈಗ ಗಂಟೆ 2 ಆಗದೆ’ ಅಂದ.

ಇದನ್ನೂ ಓದಿ : Forest Stories : ಕಾಡೇ ಕಾಡತಾವ ಕಾಡ ; ಛಾಯಾಗ್ರಾಹಕ ವಿನೋದ್ ಕುಮಾರರ ಹೇಳದೆ ಉಳಿದ ಕಾಡಕಥನಗಳು

ಫೋಟೋ : ವಿ.ಕೆ. ವಿನೋದ್​ಕುಮಾರ್

ಅಷ್ಟರಲ್ಲಿ ಲಕ್ಷ್ಮಣ, ’ಸಾರ್‌, ಬೆಳಿಗ್ಗೆ 8.30ಕ್ಕೆ ಐದು ಚಪಾತಿ, ಒಂದ್‌ ಬಟ್ಲ್‌ ಅನ್ನ ತಿಂದ್‌ ಬಂದವ್ನೇ, ಹನ್ನೊಂದ್‌ ಗಂಟೆಗೆ ಟೀ ಕುಡಿತಾ 2 ಪರೋಟ ತಿಂದ್ವನೇ, ಹನ್ನೆರಡೂವರೆಗೆ ಮತ್ತೆ ಮನೆಯಿಂದ ತಂದಿದ್ದ 6 ಚಪಾತಿ ಒಂದ್‌ ಬಟ್ಲ್‌ ತುಂಬಾ ಅನ್ನ ಉಂಡವ್ನೇ ಸಾ.. ಈಗ ಪುನ ಹಸೀತದೆ ಅಂತಾನೆ ಸಾ’ ಅನ್ನುತ್ತಾ ಮುಖ ಸಣ್ಣಗೆ ಮಾಡಿಕೊಂಡ.

ಒಂದರೆಕ್ಷಣ ಶಾಕ್‌ ಆದ ಆಫೀಸರು, ಶಿವಗಂಗನ ಕಡೆ ನೋಡಿದರು, ಹೊಟ್ಟೆ ಮಾತ್ರ ಗುಢಾಣದಂತೆ ದಪ್ಪವಿತ್ತು, ಬಾಕಿ ಯಾವ ಕಡೆಯೂ ಮಾಂಸವೇ ಇಲ್ಲವೇನೋ ಅನ್ನುವಂತೆ ಸುಮಾರಾಗಿದ್ದ ಅವ. ‘ಅದೆಲ್ಲಿಗೋಗುತ್ತಪ್ಪಾ ಈ ವಯ್ಯ ತಿನ್ನೋದು? ಇರ್ಲಿ ಬಿಡೋ, ಅವ್ನಿಗೂ ಊಟ ಕೊಡು’ ಅಂದರು.

‘ಹೆ ಹೆ  ಟ್ಯಾಂಕ್ಸ್‌’ ಅನ್ನುತ್ತಾ ಆಫೀಸರ್‌ ಟೇಬಲ್‌ ಪಕ್ಕಕ್ಕೆ ಬಂದವನೇ, ಸಾರ್‌ ನಾನು ನೈಂಟೀಸ್‌ ಲಿ ಕೆಲ್ಸ ಮಾಡ್ತಿದ್ದಾಗ ಅನ್ನುತ್ತಾ ಮಾತು ಶುರು ಮಾಡಿದ.

‘ಲೇಯ್‌, ನಿನ್‌ ಕಥೆ ಬೇಡ, ಹೋಗ್‌ ಉಣ್ಣು’ ಅನ್ನುತ್ತಾ ಮತ್ತೊಬ್ಬ ಸಿಬ್ಬಂದಿ ಗುಡುಗಿದರು.

ಹತ್‌ ನಿಮಿಷ ಊಟ ಮುಗಿಸಿದವರೇ, ಸಾಹುವನ್ನು ಕರೆದು ಲೋಡ್‌ ಮಾಡಲಾಗಿದ್ದ ಗಾಡಿ ಕಡೆಗೆ ನಡೆದು, ‘ಎಲ್ಲಾ ಸರಿ ಇದೆಯೇನಪ್ಪಾ?’ ಅಂದರು.

ಸಾ.. ನಮ್ದು ಬೀಸ್‌ ವರ್ಷ ಸಾರ್‌ ಯಾಪಾರ ಶುರು ಮಾಡಿ, ನಮ್ದೂ ಮಸೀದಿಲಿ ಏನೆಳ್ತಾರೋ ಅದ್ನೇ ಮಾಡದು ನಾನು. ಯಾರ್ಗೂ ಮೋಸ ಮಾಡ್ಬಾರ್ದು, ಸುಳ್‌ ಹೇಳ್ಬಾರ್ದು ಅಂತ ಹೇಳವ್ರೆ ಸಾ.. ಅನ್ನುತ್ತಾ ರಾಗ ಎಳೆದ.

ಸರಿ ಬಿಡು, ಎಲ್ಲಾ ಸರಿ ಉಂಟಲ್ವಾ ಲಕ್ಷ್ಮಣ, ಅನ್ನುತ್ತಾ ಮತ್ತೊಮ್ಮೆ ಕನ್​ಫರ್ಮ್​ ಮಾಡಿಕೊಂಡರು. ಅವರು ಸರಿ ಇದೆ ಎಂದಮೇಲೆ, ಪರ್ಮಿಟ್‌ ಸಹಿ ಹಾಕುತ್ತಾ, ಲಾರಿ ನಂಬರ್‌ ಹೇಳಪ್ಪಾ ಅನ್ನುತ್ತಾ ಸಾಹು ಕಡೆ ತಿರುಗಿದರು.

‘ಸಾ, 7434 ಬರ್ಕಳೀ ಸಾ’ ಅಂದ ಸಾಹು. ಬರೆದು ಸಹಿ ಮಾಡಿ ಪರ್ಮಿಟ್‌ ಕೊಟ್ಟು ಕಳಿಸಿದರು ಆಫೀಸರು.

ಲಾರಿ ಹೊರಟಿತು..

ಹೊಟ್ಟೆ ತುಂಬಾ ಊಟ ಮಾಡಿದ ಸುಸ್ತಿಗೆ ಎಲ್ಲರೂ ಹಾಗೇ ಕುಳಿತು ಅದೂ ಇದೂ ಮಾತಾಡ್ತಿದ್ದರು. ಲಾರಿ ಹೊರಟು 10-15 ನಿಮಿಷ ಕಳೆದಿರಬಹುದು. ಹೈವೇಯಲ್ಲಿರುವ ಇಲಾಖಾ ಚೆಕ್‌ ಪೋಸ್ಟಿಂದ ಫೋನ್‌ ಕರೆಬಂತು, ‘ಸಾರ್‌ ನೀವ್‌ ಸಾಹು ಗಾಡಿ ಕಳ್ಸಿದಿರಲ್ಲಾ? ಅದರಲ್ಲಿ ಲಾರಿ ನಂಬರ್‌ ಬರ್ದಿರೋದು ತಪ್ಪಾಗಿದೆ. ಏನ್ಮಾಡ್ಲಿ?’

ಕಥೆ 1 : Forest Stories : ತಿಂಗಳ ಕೊನೆಯ ಅಕ್ಕಿಯೂ, ಕೋಳಿ ಗೊಜ್ಜೂ, ಢಂ ಢಮಾರ್ ಎನ್ನುವ ಆ ಗುಂಡಿನ ಶಬ್ದವೂ

ಫೋಟೋ : ವಿ. ಕೆ. ವಿನೋದ್​ಕುಮಾರ್

‘ಲಾರಿ ನಂಬರ್‌ ತಪ್ಪಾಗಿದೆಯಾ? ಅಯ್ಯೋ’ ಗಾಬರಿಯಾದರು.

‘ತೊಂದ್ರೆ ಇಲ್ಲ ಸಾ, ಅವ್ನೇ ವಾಪಾಸ್‌ ಕಳಿಸ್ತಿನಿ’ ಅಂದರು ಆ ಕಡೆಯಿಂದ.

‘ಸರಿ ಕಳ್ಸಿ ಅನ್ನುತ್ತಾ, ಲಕ್ಷ್ಮಣ ಬಾರೋ ಇಲ್ಲಿ’ ಎಂದು ಕರೆದರು.

ಲಕ್ಷ್ಮಣ ಬಂದವನೇ ಏನ್ಸಾರ್‌ ಅನ್ನುತ್ತಿದ್ದಂತೇ, ‘ಥೋ ನಿಮ್ಮನ್‌ ನಂಬಿ ನಾನ್‌ ಕೆಟ್ನಲ್ರೋ? ನೀನೂ ಸರಿ ನೋಡಿ ಹೇಳ್ಲಿಲ್ಲ, ಅವ ನೋಡಿದ್ರೆ ತಪ್‌ ನಂಬರ್‌ ಕೊಟ್ಟವ್ನೇ, ಏನ್‌ ಕಥೆನೋ ನಿಮ್ದೆಲ್ಲಾ?’ ಅನ್ನುತ್ತಾ ಕೂಗಾಡಿದರು.

‘ಸಾರ್‌, ಅವ ಹಂಗೇ ಸಾ, ಬರೀ ಏನೇನೋ ಕಥೆ ಹೇಳಿ ಮಂಕ್‌ ಬೂದಿ ಹಾಕ್ಬುಡ್ತಾನೆ, ನಂಬಂಗಿಲ್ಲ ಸಾ ಅವ್ನ’ ಅಂದ.

‘ಹೌದ್‌ ಸಾ, ಸಾಬ್ರ್‌ ಬೇರೆ. ನಂ ಹುಷಾರೀಲಿ ನಾವಿರ್ಬೇಕು, ನಾವು ನೈಂಟೀಸ್‌ ಲಿ ಒಂದ್ಸಲ ಹಿಂಗೇ ಆಗಿತ್ತು ಸಾ, ಏನಾಗಿತ್ತೂಂದ್ರೆ…’ ಅನ್ನುತ್ತಾ ಶಿವಗಂಗಾ ರಾಗ ಎಳೆಯುತ್ತಾ ಆಫೀಸರ್‌ ಹತ್ತಿರ ಬಂದ.

‘ಮುಚ್ಕಂಡ್‌ ಹೋಗೋ ಆ ಕಡೆ’ ಕೂಗಾಡಿದರು ಆಫೀಸರ್.‌

ಎಲ್ಲರೂ ಅರೆಕ್ಷಣ ದಂಗಾಗಿಹೋದರು. ಅಷ್ಟರಲ್ಲಿ ಆಟೋದಲ್ಲಿ ಸಾಹು ಬಂದಿಳಿದ. ಅವನನ್ನು ಕಂಡೊಡನೆ ಆಫೀಸರ್ ಕೋಪ ನೆತ್ತಿಗೇರಿದಂತಾಗಿ, ‘ಹೇಯ್‌ ಈಡಿಯಟ್‌ ಏನೋ ನಿನ ಲಾರಿ ನಂಬರ್?‌ ನಿನ್‌ ನಂಬಿ ಪರ್ಮಿಟ್‌ ಬರೆದ್‌ ಕೊಟ್ರೆ ನನ್ನ ಹತ್ರನೇ ತಪ್‌ ನಂಬರ್‌ ಬರೆಸಿದಿಯಲ್ಲಾ? ಇದೇ ಏನೋ ನೀನ್‌ ಕಲ್ತಿರೋದು, ಇದೇ ಏನೋ ನಿನ್‌ ಮಸೀದಿಲಿ ಹೇಳ್ಕೊಡೋದು?’ ಅನ್ನುತ್ತಾ ಕೂಗಾಡಿದರು.

‘ಅಯ್ಯೋ ಸಾರ್..‌ ನಾನ್‌ ಕುದಾ ಕಿ ಕಸಮ್‌ ಸುಳ್‌ ಹೇಳದಿಲ್ಲ ಸಾ. ನಂದು ಬೀಸ್‌ ವರ್ಷಾಯ್ತು ಸಾ ಯಾಪಾರು ಶುರು ಮಾಡಿ’ ಅನ್ನುತ್ತಾ ಶುರು ಮಾಡಿದ.

‘ಹೇಯ್‌ ಲಕ್ಷ್ಮಣ, ಗೇಟಿಗೆ ಫೋನ್‌ ಮಾಡು ಲಾರಿ ನಂಬರ್‌ ಕೇಳು’ ಅಂದರು.

ಅವ ಕಾಲ್‌ ಮಾಡಿದ, ಸಾರ್‌ ಲಾರಿ ನಂಬರ್‌ 7343 ಅಂದ

ಹೇಯ್‌, ಕತ್ತೆ ಬಡವ..ನೋಡೋ ಇಲ್ಲಿ ನೀನೇಳಿದ್ದು 7434’ ಅನ್ನುತ್ತಾ ತೋರಿಸಿದರು.

ಸಾಹು ಆಫೀಸರ್‌ ಬರೆದಿರೋ ಪೇಪರ್‌ ನೋಡಿದ. ಮನಸ್ಸಿನಲ್ಲೇ ಏನೇನೋ ಗುಣುಗುತ್ತಾ ‘ಹೇ.. ಎಲ್ಲಾ ಸರಿ ಉಂಟಲ್ಲ ಸಾ.. ನಾನೇಳಿದ್ದು ಇದೇ ನಂಬರ್. ಒಂದ್‌ ನಂಬರ್‌ ಆಕಡೆ ಈ ಕಡೆ ಆಗ್ಬುಟ್ಟದೆ ಅಷ್ಟೇ, ನಾನೇಳಿದ್‌ ನಂಬರ್‌ ಎಲ್ಲಾ ಅಲ್ಲೇ ಉಂಟಲ್ಲಾ ಸಾ. ಇಷ್ಟಕ್ಕೇ ನೀವ್‌ ಹಿಂಗ್‌ ಬೈದ್‌ ಬಿಡದಾ ಸಾ. ನಾನ್ಯವಾತ್ತೂ ಮೋಸ ಮಾಡಲ್ಲ ಸಾ, ಸುಳ್‌ ಹೇಳಲ್ಲ ಸಾ ನಮ್ದು ಮಸೀದಿಲಿ…’

ಆಫೀಸರ್‌ ತಲೆ ಕೆಟ್ಟು ಹೋದಂತಾದರೂ ಅವನ ಪೆದ್ದುತನ, ಅಮಾಯಕತೆಗೆ ಅಜ್ಞಾನಕ್ಕೆ ನಗಬೇಕೋ ಅಥವಾ ಅವರ ಬೇಜವಾಬ್ದಾರಿತನಕ್ಕೆ ಸ್ವತ ತನ್ನನ್ನೇ ಬೈದುಕೊಳ್ಳಬೇಕೋ ಅರಿಯದಂತಾಗಿ, ಪರ್ಮಿಟ್​ನಲ್ಲಿ ನಂಬರ್‌ ಬದಲಾಯಿಸಿ, ಸಾಹುವಿಗದನ್ನು ಕೊಟ್ಟು ಫೀಲ್ಡಿನ ಕಡೆ ಹೊರಟರು.

(ಮುಂದಿನ ಕಥೆ : 26.2.2022)

ಹಿಂದಿನ ಕಥೆ : Forest Stories : ಕಾಡೇ ಕಾಡತಾವ ಕಾಡ ; ಅಪ್ಪನ ಎಚ್ಎಂಟಿ ವಾಚು, ಬಾಲ್ಯದ ಗೆಳತಿ, ಬೂದಿ ಮೆತ್ತಿದ ಮೀನು, ಕಾಡಿಗೆ ಬಿದ್ದ ಬೆಂಕಿ