Forest Stories : ಕಾಡೇ ಕಾಡತಾವ ಕಾಡ ; ಅಪ್ಪನ ಎಚ್ಎಂಟಿ ವಾಚು, ಬಾಲ್ಯದ ಗೆಳತಿ, ಬೂದಿ ಮೆತ್ತಿದ ಮೀನು, ಕಾಡಿಗೆ ಬಿದ್ದ ಬೆಂಕಿ
Forest Officer : ಸಾರ್ ಸರೀ ಬಡೀರಿ ಸಾರ್, ಬೆಂಕಿ ಕೆಲ್ಸ ಅಂದ್ರೆ ಸುಮ್ನೇನಾ? ಅನ್ನುತ್ತಾ ಕಿಚಾಯಿಸತೊಡಗಿದರು. ಯಾರೋ ಒಬ್ಬ.. ಸಾರ್, ಮೀನು ತಿನ್ನುವಾಗಲೇ ನಾನಂದ್ಕಂಡೆ, ಈ ಯಪ್ಪಾ ಬೆಂಕಿ ಕೆಲ್ಸಕ್ಕೆಲ್ಲಾ ಆಗಲ್ಲ, ಬರೀ ಆಫೀಸಿಗಷ್ಟೇ ಅಂತ ಅಂದು ನಕ್ಕ.
ಕಾಡೇ ಕಾಡತಾವ ಕಾಡ | Kaade Kaadataava Kaada : ಕುಳಿತ ಜಾಗದಿಂದ ಕೆಳಗಿಳಿದವನೇ, ಎದುರಿನ ಮಣ್ಣಿನ ರಸ್ತೆಯ ಮುಖಾಂತರ ಬೆಂಕಿ ಬಿದ್ದ ಗುಡ್ಡದ ಕಡೆಗೆ ಓಡಿದ. ಸ್ವಲ್ಪವೇ ದೂರದಲ್ಲಿ ಬೆಂಕಿಯಿಂದ ಬರುತ್ತಿರುವ ಹೊಗೆ ಕಾಣಿಸಿತು. ಹೋ ಅದೇ ಗುಡ್ಡ! ಅದರ ಒಂದು ಬದಿಯಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸಲಾಗಿತ್ತು, ಮತ್ತೊಂದು ಬದಿಯಲ್ಲಿ ತೇಗದ ನೆಡುತೋಪು. ಯಾವ ಕಡೆ ಹರಡಿದರೂ ಕಷ್ಟವೇ. ಬೆಂಕಿ ಹರಡಲೇಬಾರದು. ಓಡುತ್ತಾ ಗುಡ್ಡ ಹತ್ತಲು ಶುರು ಮಾಡಿದ. ಬೇರೆಯವರೆಲ್ಲರೂ ಇವನಿಗಿಂತ ಸಾಕಷ್ಟು ಮುಂದಿದ್ದರು, ಲೆದರ್ ಶೂ ಧರಿಸಿ ಕಿಲೋಮೀಟರ್ಗಟ್ಟಲೆ ನಡೆದಿದ್ದ ಇವನಿಗೆ ಓಡುವ ಕಷ್ಟದ ಅರಿವಾಯ್ತು. ಅಲ್ಲಲ್ಲಿ ಮುಗ್ಗರಿಸುತ್ತಾ, ತಡಡವರಿಸುತ್ತಾ ಆ ಗುಡ್ಡದ ಕಡೆಗೆ ಓಡಿದ. ಹಸಿವು, ಟೆನ್ಷನ್ ಎಲ್ಲಾ ಸೇರಿ ಎದೆಬಡಿತ ಇವನಿಂತಲೂ ವೇಗವಾಗಿ ಓಡುತ್ತಿತ್ತು. ಬೆಂಕಿ ಗುಡ್ಡದ ಮೇಲಿಂದ ಭರ್ರನೇ ಎರಡೂ ಕಡೆಗೆ ಹರಡುತ್ತಾ ಕೆಳಗಿಳಿಯುತ್ತಿತ್ತು. ಗುಡ್ಡದ ತುಂಬಾ ಮೀಟರ್ ಎತ್ತರ ಬೆಳೆದ ಹುಲ್ಲು ಮತ್ತು ಕುರುಚಲು ಕಾಡು. ಅದ್ಯಾರು ಬೆಂಕಿ ಇಟ್ಟರೋ? ಅನ್ನುತ್ತಾ ಮನಸ್ಸಿನಲ್ಲೇ ಬೈದುಕೊಂಡು, ಎಲ್ಲಿಂದ ಕೆಲಸ ಶುರು ಮಾಡಲಿ? ಯೋಚಿಸುತ್ತಾ ನಿಂತ!
ವಿ. ಕೆ. ವಿನೋದ್ ಕುಮಾರ್, ಕುಶಾಲನಗರ (V. K. Vinod Kumar)
*
(ಕಥೆ – 2)
‘ಏನಾರ ಕಷ್ಟ ಆಗ್ಲಿ ನಾ ಓದುಸ್ತೀನಿ, ನೀ ಡಿಗ್ರಿ ಮಾಡ್ಬೇಕು ನೋಡು’ ಅನ್ನುತ್ತಿದ್ದ ಅಪ್ಪ. ಇವನಿಗೋ ಹೇಗಾದರೂ ಮಾಸ್ಟರ್ ಡಿಗ್ರೀ ಮಾಡಿ ಬೆಂಗಳೂರಿಗೆ ಹೋಗಿ ವಿದೇಶೀ ಕಂಪನಿಯಲ್ಲಿ ಲಕ್ಷಲಕ್ಷ ಸಂಬಳ ಸಿಗುವ ಕೆಲಸ ಸೇರಬೇಕು ಅನ್ನುವ ಕನಸು. ಆದರೆ ‘ಲಕ್ಷ ಸಂಬಳಕ್ಕಿಂತ ಜಾಬ್ ಸೆಕ್ಯುರಿಟಿಯೇ ಮುಖ್ಯ. ಸೋ, ನೀ ಸರ್ಕಾರಿ ನೌಕ್ರಿನೇ ಹಿಡಿಬೇಕು’ ಅನ್ನುವ ಆಸೆ ಹುಟ್ಟಿಸಿದ್ದು ಮಾತ್ರ ಅವನ ಅಮ್ಮ ಮತ್ತು ಬಾಲ್ಯದ ಗೆಳತಿ. ಸರ್ಕಾರಿ ನೌಕ್ರಿ ಸೇರಿ ಸಲ್ಯೂಟ್ ಹೊಡೀತಾ ಅವರಿವರಿಗೆ ಬಕೆಟ್ ಹಿಡಿಯೋದು ನಂಗಾಗಲ್ಲಪ್ಪ ಅನ್ನುತ್ತಿದ್ದ ಅವ. ಆದರೂ ಡಿಗ್ರಿ ಮುಗಿಯುತ್ತಿದ್ದಂತೇ, ಅರಣ್ಯ ಇಲಾಖೆಯಲ್ಲಿ ಕರೆಯಲಾದ ಫಾರೆಸ್ಟರ್ ಪೋಸ್ಟಿಗೆ ಅರ್ಜಿ ಹಾಕಲು ಹೇಳಿ, ಅದರ ಎಲ್ಲಾ ವಿವರಗಳನ್ನೂ ತಂದು ಕೊಟ್ಟಿದ್ದೂ ಗೆಳತಿಯೇ.
ಅವಳ ಮೇಲಿನ ಪ್ರೀತಿಗೆ ಅರೆಮನಸ್ಸಿನಂದಲೇ ಅಪ್ಲೈ ಮಾಡಿದ. ಕಷ್ಟಕರವಾದ ಆಯ್ಕೆ ಪ್ರಕ್ರಿಯೆ ನಡೆದರೂ, ಯಾವುದೇ ಲಂಚ, ರುಷುವತ್ತು ಇಲ್ಲದೇ ಫಾರೆಸ್ಟರ್ ಪೋಸ್ಟಿಗೆ ನೇಮಕಾತಿಯಾದ. ಅವನಿಗೆ ಸರ್ಕಾರಿ ನೌಕ್ರಿ ಸಿಕ್ಕಿದ ಖುಷಿಯನ್ನು ಅವನಿಗಿಂತ ಹೆಚ್ಚಾಗಿ ಅವನಪ್ಪ ಅನುಭವಿಸಿದ. ಖುಷಿಯಲ್ಲಿ ಕುಣಿದಾಡಿದ. ಊರಿಗೆಲ್ಲಾ ನನ್ನ ಮಗ ಸರ್ಕಾರಿ ನೌಕ್ರಿ ಹಿಡಿದಿದ್ದಾನೆ… ಅದೂ ಫಾರೆಸ್ಟ್ ಆಫೀಸರ್ ಪೋಸ್ಟ್ ಅನ್ನುತ್ತಾ ಹೆಮ್ಮೆಯಿಂದ ಮೀಸೆ ತಿರುವುತ್ತಾ ಓಡಾಡಿದ. ನೇಮಕಾತಿಯಾಗಿದ್ದೇ 9 ತಿಂಗಳ ತರಬೇತಿಗೆ ಕಳುಹಿಸಲಾಯ್ತು. ಕಠಿಣ ತರಬೇತಿ ಮುಗಿಸಿ, ಮುಂದಿನ ಕರ್ತವ್ಯಕ್ಕೆ ನೇಮಿಸುವ ಮೊದಲು 10 ದಿನಗಳ ರಜೆಯಲ್ಲಿ ಮನೆಗೆ ಬಂದ.
ವಾಪಾಸು ಹೊರಡುವ ಹಿಂದಿನ ರಾತ್ರಿ ಅವನಪ್ಪ, ‘ಮಗಾ, ಸರ್ಕಾರಿ ಕೆಲಸ, ದೇವರ ಕೆಲಸ. ಯಾರಿಗೂ ಅನ್ಯಾಯ ಮಾಡಬೇಡ, ಯಾರಿಗೂ ಹೆದರಿಸಿ ಏನನ್ನೂ ಕಿತ್ಕೋಬೇಡ, ಅಧಿಕಾರದ ದರ್ಪದಲ್ಲಿ ಮಾತಾಡಬೇಡ. ಎಲ್ಲರನ್ನೂ ಪ್ರೀತಿ ಗೌರವದಿಂದ ಕಾಣು ಮಗಾ, ಅಧಿಕಾರಕ್ಕಿಂತ ಪ್ರೀತಿ, ಮಾನವೀಯತೆಯೇ ಶಾಶ್ವತ’ ಅನ್ನುವ ಮಾತನ್ನು ಹೇಳಿ ಹರಸಿದ್ದರು.
ಮರುದಿನವೇ ಕರ್ತವ್ಯಕ್ಕೆ ಹೋಗಿ ಸೇರಿಕೊಂಡ. ಅವನ ಅಧಿಕಾರ ವ್ಯಾಪ್ತಿಗೆ ಬರುವ ಅರಣ್ಯ ಪ್ರದೇಶ ಬಹು ವಿಸ್ತಾರವಾಗಿದ್ದಲ್ಲದೇ, ನೂರಾರು ವರ್ಷಗಳ ಹಿಂದಿನ ಬೆಲೆಬಾಳುವ ತೇಗದ ನೆಡುತೋಪನ್ನೂ ಒಳಗೊಂಡಿತ್ತು. ಅವುಗಳನ್ನು ಕಾಪಾಡುವುದೇ ಇವನ ಅತೀ ದೊಡ್ಡ ಜವಾಬ್ದಾರಿಯಾಗಿತ್ತು. ಇವನ ಜೊತೆಗೆ ಇಬ್ಬರು ಗಾರ್ಡ್‌ಗಳಲ್ಲದೇ ಇತರೇ ನಾಲ್ಕು ಸಿಬ್ಬಂದಿಗಳೂ ಇದ್ದರು. ಕೋವಿ, ಮದ್ದುಗುಂಡು ಎಲ್ಲವೂ ಇತ್ತು. ಇವನಿಗೋ ಹೆಮ್ಮೆ! ಇಷ್ಟು ಬೆಲೆಬಾಳುವ ಕಾಡಿಗೆ, ತೇಗದ ನೆಡುತೋಪಿಗೆ ನಾನೇ ರಾಜ! ಅನ್ನುವ ಖುಷಿ ಇತ್ತು ಅವನಿಗೆ. ಆಗಿಂದಾಗ್ಗೆ ನೆಡುತೋಪಿನ ಮಧ್ಯದಲ್ಲಿ ಇದ್ದ ದೊಡ್ಡದೊಡ್ಡ ತೇಗದ ಮರಗಳನ್ನು ನೋಡುತ್ತಾ ಗರ್ವದಿಂದ ಕಾಲ ಕಳೆಯುತ್ತಿದ್ದ. ಜೊತೆಗಾರ ಸಿಬ್ಬಂದಿಯವರೊಂದಿಗೂ, ಮೇಲಾಧಿಕಾರಿಯವರೊಂದಿಗೂ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದ ಅವನು ಸರ್ಕಾರಿ ನೌಕರಿಯಲ್ಲಿ ಸುಖವಿದೆ, ನೆಮ್ಮದಿಯಿದೆ ಅನ್ನುವ ಅವನ ಗೆಳತಿಯ ಮಾತನ್ನು ನೆನೆಸಿಕೊಳ್ಳುತ್ತಿದ್ದ.
ಹಳೆಯದಾದರೂ ವಾಸ ಮಾಡಲು ತೊಂದರೆ ಇಲ್ಲದ ಕ್ವಾರ್ಟರ್ಸ್ ಇತ್ತು. ನೀರು ಕರೆಂಟಿಗೆ ತೊಂದರೆ ಇರಲಿಲ್ಲ. ಮೊಬೈಲ್ ನೆಟ್ವರ್ಕ್ ಮಾತ್ರ ಅಷ್ಟೇನೂ ಸರಿಯಾಗಿ ಸಿಗುತ್ತಿರಲಿಲ್ಲ. ಕ್ವಾರ್ಟರ್ಸಿಗೆ ಬಂದವನೇ ಅಡುಗೆ ಮಾಡಿಕೊಂಡು ಉಂಡ ನಂತರ ತೇಜಸ್ವೀ, ಕಾರಂತ, ಕುವೆಂಪು… ಪುಸ್ತಕಗಳ ಮೊರೆ ಹೋಗುತ್ತಿದ್ದ.
ಹೀಗೇ ದಿನಗಳು ಕಳೆಯುತ್ತಿದ್ದಂತೇ, ಬೇಸಿಗೆ ಆರಂಭವಾಯ್ತು. ಬೇಸಿಗೆ ಶುರು ಆಗುತ್ತಿದ್ದಂತೇ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಕೆಲಸದ ಒತ್ತಡ ಹೆಚ್ಚು. ಅರಣ್ಯವನ್ನು ಬೆಂಕಿಯಿಂದ ಕಾಪಾಡುವ ಅತೀ ದೊಡ್ಡ ಜವಾಬ್ದಾರಿ ಅವರದ್ದು. ಆ ಸಲವೂ ಮೇಲಾಧಿಕಾರಿಗಳು ಸಭೆ ಕರೆದು ಬೆಂಕಿ ಕಾಲ ಆರಂಭವಾಗುತ್ತಿದ್ದು ಯಾವುದೇ ರೀತಿಯ ದುರ್ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಬಗ್ಗೆ ತಿಳಿಹೇಳಿದರು ಜೊತೆಗೆ ಎಚ್ಚರಿಸಿದ್ದರು ಕೂಡ. ವಲಯದ ಎಲ್ಲಾ ಸಿಬ್ಬಂದಿಗಳನ್ನು ಸೇರಿಸಿ ಬೆಂಕಿ ಕಾರ್ಯಾಗಾರ, ಬೆಂಕಿ ನಂದಿಸುವ ಪ್ರಾತ್ಯಕ್ಷಿಕೆ ಎಲ್ಲವನ್ನೂ ತೋರಿಸಲಾಯ್ತು. ಅಗ್ನಿಶಾಮಕ ದಳದವರಿಂದ ಬೆಂಕಿ ನಂದಿಸುವ ಸಮಯದ ಚಾಲೆಂಜ್ಗಳ ಬಗ್ಗೆ ಮಾಹಿತಿ ನೀಡಲಾಯ್ತು. ಹೆಚ್ಚುವರಿಯಾಗಿ ತಾತ್ಕಾಲಿಕ ಸಿಬ್ಬಂದಿಯನ್ನೂ ನೇಮಿಸಿಕೊಳ್ಳುವ ಬಗ್ಗೆ ಭರವಸೆ ಕೂಡಾ ನೀಡಿದರು ಮೇಲಾಧಿಕಾರಿಗಳು. ಇನ್ನೇನು? ಯಾವುದಕ್ಕೆ ತೊಂದರೆ? ಬೆಂಕಿ ಬೀಳದಂತೆ ಆರಾಮಾಗಿ ನೋಡಿಕೊಳ್ಳಬಹುದು ಅಂದುಕೊಂಡ.
ಅದೊಂದು ದಿನ ಇಡೀ ದಿನ ಬೆಂಕಿ ಗಸ್ತು ಸುತ್ತಿ, ಸುಸ್ತಾಗಿ ಕ್ವಾರ್ಟರ್ಸಿಗೆ ಬಂದವನೇ ಮಂಚದ ಮೇಲೆ ಬಿದ್ದುಕೊಂಡ. ಬೇಸಿಗೆ ಬಿಸಿಲಿಗೆ ಸಮವಸ್ತ್ರ ಧರಿಸಿ ಸುತ್ತುವ ಸಂಕಟ ಬಲ್ಲವರೇ ಬಲ್ಲರು. ಲೆದರ್ ಬೂಟಿನ ಬಿಸಿಗೆ ಕಾಲಿನೊಳಗೆ ಬೆಂಕಿ ಹಾಕಿದ ಹಾಗೆ ಸುಟ್ಟು ಉರಿಯುತ್ತಿತ್ತು. ಕಾಲಿನ ಮೀನಖಂಡವನ್ನು ಯಾರೋ ಕತ್ತಿಯಿಂದ ಕಡಿದಿದ್ದಾರೇನೋ ಅನ್ನುವಂತಾ ನೋವು. ಅವನಿಗರಿವಿಲ್ಲದೇ ನಿದ್ರೆ ಆವರಿಸಿಕೊಂಡಿತ್ತು. ಮಧ್ಯರಾತ್ರಿ ಕಳೆದಿರಬಹುದು, ಫೋನಿನ ಶಬ್ದಕ್ಕೆ ಎಚ್ಚರವಾಗಿ, ಪ್ರಯಾಸದಿಂದಲೇ ರಿಸೀವ್ ಮಾಡಿ ಹಲೋ ಅನ್ನುತ್ತಿದ್ದಂತೇ, ಆ ಕಡೆಯಿಂದ ಅಮ್ಮ. ಜೋರಾಗಿ ಅಳುತ್ತಿರುವ ಅವಳ ಧ್ವನಿ. ಗಾಬರಿಯಿಂದ ಕಾರಣ ಕೇಳುತ್ತಿದ್ದಂತೆ ‘ನಿಮ್ಮಪ್ಪ ಹೋಗ್ಬಿಟ್ರು ಕಣಪ್ಪಾ’ ಅನ್ನುವ ಹೃದಯವಿದ್ರಾವಕ ಧ್ವನಿ. ಎದೆ ಒಡೆದುಹೋಯ್ತು ಇವನಿಗೆ. ಅಪ್ಪ ತೀರಿಕೊಂಡ್ರಾ? ಹೇಗೆ ನಂಬುವುದು? ತಕ್ಷಣ ಎದ್ದವನೇ ಮೇಲಧಿಕಾರಿಗೆ ಕರೆ ಮಾಡಿ ವಿಷಯ ತಿಳಿಸಿ, ಇಲಾಖೆಗೆ ಪರಿಚಯ ಇರುವ ಕಂಟ್ರಾಕ್ಟರನನ್ನು ಕರೆದು ಒಂದು ಟ್ಯಾಕ್ಸಿ ಮಾಡಿಕೊಂಡು ಕೂಡಲೇ ಊರಿಗೆ ಹೊರಟ.
ರಾತ್ರಿ ಊಟ ಮಾಡಿದ ಮೇಲೆ ಮನೇ ಪಕ್ಕದಲ್ಲೇ ಏನೋ ಕೆಲಸ ಮಾಡುತ್ತಿದ್ದ ಅಪ್ಪ ಹೃದಯಸ್ಥಂಬನವಾಗಿ ಕೊನೆಯುಸಿರಿಳೆದಿದ್ದ. ಅಪ್ಪ ತೀರಿಕೊಂಡರು ಅನ್ನುವ ಸುದ್ದಿಯನ್ನು ಅರಗಿಸಿಕೊಳ್ಳುವುದೇ ಕಷ್ಟವಾಯ್ತು ಅವನಿಗೆ.
ಸರ್ಕಾರಿ ಕೆಲಸ ಸಿಕ್ಕಿದೆ, ಇನ್ನು ಕೆಲ ವರ್ಷಗಳು ಕಳೆದಿದ್ದೇ ಲೋನ್ ಮಾಡಿ ಊರಿನಲ್ಲಿ ಜಮೀನು ಖರೀದಿಸಿ, ಇರುವ ಮನೆಯನ್ನು ಚಂದಗಾಣಿಸಿಕೊಂಡು ಅಪ್ಪನಿಗೆ ಖುಷಿಪಡಿಸಬೇಕು ಅನ್ನುವ ಕನಸಿನಲ್ಲಿದ್ದ. ಈಗ ಅಪ್ಪನನ್ನೇ ಕಳೆದುಕೊಂಡಿದ್ದ.
5 ದಿನಗಳು ಕಳೆದವು, ಕಚೇರಿಯಿಂದ ಕರೆಗಳು. ‘ಸರ್, ಬೆಂಕಿ ಸೀಸನ್ ಬರ್ಲೇಬೇಕಂತೆ, ಸಾಹೇಬ್ರು ಬೈತಿದಾರೆ, ಪ್ಲೀಸ್ ಬಂದ್ಬಿಡಿ ಸಾರ್’ ಸಿಬ್ಬಂದಿಗಳ ಕೋರಿಕೆ. ಜೊತೆಗೆ ಇವನ ಜವಾಬ್ದಾರಿಯ ತೇಗದ ನೆಡುತೋಪು, ಎಲ್ಲವನ್ನೂ ನೆನೆದು 6ನೇ ದಿನಕ್ಕೆ ಒಲ್ಲದ ಮನಸ್ಸಿನಿಂದ ಕರ್ತವ್ಯಕ್ಕೆ ಹಾಜರಾದ. ಹೊರಡುವ ಮುನ್ನ ಅಪ್ಪನ ನೆನಪಿಗೆ ಅಪ್ಪ ಕಟ್ಟಿಕೊಳ್ಳುತ್ತಿದ್ದ ಹಳೆಯ ಎಚ್.ಎಂ.ಟಿ. ವಾಚ್ ಎತ್ತಿ ಕಟ್ಟಿಕೊಂಡ. ಅಪ್ಪನ ನೆನಪಿಗೆ ಅವನ ಬಳಿ ಉಳಿದುಕೊಂಡ ಏಕೈಕ ವಸ್ತು ಅದು!
ಅದೊಂದು ದಿನ…
ಬೆಂಕಿ ಕಾವಲು ಕೆಲಸಕ್ಕೆ ಸೇರಿಕೊಂಡಿದ್ದ ತಂಡದವರೊಂದಿಗೆ ಸೇರಿ ಎಲ್ಲರೂ ಒಂದೆಡೆ ಊಟಕ್ಕೆ ಕುಳಿತಿದ್ದರು. ಕುಸಬಲಕ್ಕಿ ಗಂಜಿ, ಬೆಂಕಿಯಲ್ಲಿ ಸುಟ್ಟ ಒಣಗಿದ ಮೀನಿನ ತುಂಡು, ಸುಟ್ಟ ಮೆಣಸಿನಕಾಯಿ ಮತ್ತು ಉಪ್ಪಿನಕಾಯಿ. ತಂಡದ ಹಿರಿಯ ಸಿಬ್ಬಂದಿಯೊಬ್ಬ ಇವನನ್ನು ಮಾತಿಗೆಳೆದ. ಏನ್ಸಾರ್? ಏನನ್ನಿಸ್ತಿದೆ ಫೈರ್ ಸೀಸನ್ನು? ಈ ವರುಷ ಬೆಂಕಿ ಬೀಳ್ಬಹುದಾ? ಅಂದ.
ನಂಗೇನೋ ಬೀಳಲ್ಲ ಅನ್ನಿಸ್ತಿದೆ ಅಂದ ಇವನು.
ನಂ ಟೈಂ ಸರಿ ಇರ್ಬೇಕು ಸಾರ್… ಅಷ್ಟೇ. ಟೈಂ ಸರಿಯಿಲ್ಲಾಂದ್ರೆ ಯಾರೋ ಏನೂ ಮಾಡಕ್ಕಾಗಲ್ಲ ಅಂದ ಅವ.
ಸರಿ ಊಟ ಮಾಡಿ ಸಾರ್. ಓಣಗಿದ ಮೀನು ಫ್ರೈ ತಿಂದಿದೀರಾ? ಅಂದ, ಇವ ಇಲ್ಲಾ, ಇದೇ ಮೊದಲು ಅಂದ.
ಹುಷಾರಾಗಿ ತಿನ್ನಿ, ಮುಳ್ಳು ಚುಚ್ಚುತ್ತೆ ಅಂದ. ಇವ ಒಂದು ತುತ್ತು ಗಂಜಿ ತೆಗೆದು ಬಾಯಿಗಿಟ್ಟುಕೊಂಡವನೇ, ಅದನ್ನು ಅಗಿಯುತ್ತಾ ಮೀನನ್ನು ತೆಗೆದುಕೊಂಡ. ಮೀನಿನ ತುಂಬಾ ಬೂದಿಯೇ ಇತ್ತು. ನಿಧಾನವಾಗಿ ಉಫ್ ಅನ್ನುತ್ತಾ ಅದನ್ನು ಕ್ಲೀನ್ ಮಾಡಲು ನೋಡಿದ. ಅಷ್ಟರಲ್ಲಿ ಅವ, ಹೇಯ್, ಸಾರ್ಗೆ ಮೀನ್ ಕ್ಲೀನ್ ಮಾಡಿ ಕೊಡೋದಲ್ವಾ? ಆಫೀಸರ್ಗೆ ಹೇಗೆ ಊಟ ಕೊಡಬೇಕು ಅನ್ನುವ ಕಾಮನ್ ಸೆನ್ಸಿಲ್ಲ ನಿಮ್ಗೆ ಅನ್ನುತ್ತಾ ಕೂಗಾಡಿದ. ಯಾರೋ ಒಬ್ಬ ಬಂದು ‘ಕೊಡಿ ಸಾರ್ ಕ್ಲೀನ್ ಮಾಡಿಕೊಡ್ತೀನಿ’ ಅನ್ನುತ್ತಾ, ಮೀನನ್ನು ತೆಗೆದುಕೊಂಡು ಅಲ್ಲೇ ಇದ್ದ ಕಲ್ಲಿನ ಮೇಲೆ ಉಜ್ಜಿ ಮೀನಿನ ಮೇಲಿನ ಬೂದಿ ಮತ್ತು ಸಿಪ್ಪೆಯನ್ನು ಕ್ಲೀನ್ ಮಾಡಿಕೊಟ್ಟ.
ಇವ ಮೀನಿನ ತುಂಡನನ್ನು ಬಾಯಿಗಿಟ್ಟು ಕಚ್ಚಿದವನೇ, ಹಾ! ಎಂದು ನರಳಿದ. ಮೀನಿನ ಮುಳ್ಳು ನೇರವಾಗ ನಾಲಿಗೆಗೇ ಚುಚ್ಚಿತ್ತು!.. ಹುಷಾರು ಸಾರ್ ಅಂದು ನಕ್ಕರು ಅವರೆಲ್ಲಾ.
ಇದೇನಪ್ಪಾ? ಈ ತರಹ ಗಟ್ಟಿ ಮುಳ್ಳಿದೆ? ಅಂದ ಇವ.
ಸಾರ್ ನಿಧಾನವಾಗಿ ತಿಂದರೆ ಮುಳ್ಳನ್ನೂ ತಿನ್ನಬಹುದು. ನಿಧಾನವಾಗಿ ತಿನ್ನಿ ಅಂದು ನಕ್ಕ!
ಸರಿ ಅನ್ನುತ್ತಾ, ನಿಧಾನವಾಗಿ ಬಿಸಿ ಬಿಸಿ ಗಂಜಿ, ಉಪ್ಪುಪ್ಪು ಮೀನು ನೆಂಚಿಕೊಳ್ಳುತ್ತ ಊಟ ಮಾಡತೊಡಗಿದ ಅವನು.
ಅಷ್ಟರಲ್ಲಿ, ಎದುರುಗಡೆಯ ರಸ್ತೆಯಲ್ಲಿ ಓಡೋಡಿ ಬಂದ ಬೆಂಕಿ ಕಾವಲುಗಾರ ಕೂಗಿಕೊಂಡ, ‘ಸಾರ್, ಮೇಲೆ ಗುಡ್ಡದ್ ಮೇಲೆ ಬೆಂಕಿ ಕೊಟ್ಬುಟ್ಟವರೇ, ಜೋರ್ ಉರೀತಿದೆ..’ ಬೇಗ ಬನ್ನಿ.
ಅಯ್ಯೋ… ಉಣ್ಣಕ್ ಬಿಡವಲ್ದಲ್ಲಪಾ ಈ ಬೆಂಕಿ… ಅನ್ನುತ್ತಾ ತಂಡದ ಸದಸ್ಯರೆಲ್ಲರೂ ಅಲ್ಲೇ ಬೆಂಕಿ ನಂದಿಸಲು ಬಳಸುವ ಕೋಲು ಎತ್ತಿಕೊಂಡು ಓಡಿದರು. ಉದ್ದನೆಯ ಬಿದಿರು ಅಥವಾ ಬೇರೆ ಗಟ್ಟಿ ಮರದ ಕೋಲಿನ ತುದಿಗೆ ಹಸಿರು ಸೊಪ್ಪುಗಳನ್ನು ಒಟ್ಟು ಮಾಡಿ ಸೇರಿಸಿ ಕಟ್ಟಿದರೆ, ಅದೇ ಬೆಂಕಿ ನಂದಿಸುವ ಅತೀ ದೊಡ್ಡ ಸಾಧನ, ಹಸಿರು ಸೊಪ್ಪಿನಲ್ಲಿ ಬೆಂಕಿಯ ಮೇಲೆ ನೇರ ರಭಸವಾಗಿ ಅಪ್ಪಳಿಸಿದಾಗ, ಬೆಂಕಿ ಕೆಡುತ್ತದೆ, ಇದು ಹಳೇಯ ಕಾಲದ ಪದ್ದತಿ, ಈಗಲೂ ಮುಂದುವರೆದಿದೆ.
ಇವನೂ ಓಡಿದ.
ಕುಳಿತ ಜಾಗದಿಂದ ಕೆಳಗಿಳಿದವನೇ, ಎದುರಿನ ಮಣ್ಣಿನ ರಸ್ತೆಯ ಮುಖಾಂತರ ಬೆಂಕಿ ಬಿದ್ದ ಗುಡ್ಡದ ಕಡೆಗೆ ಓಡಿದ. ಸ್ವಲ್ಪವೇ ದೂರದಲ್ಲಿ ಬೆಂಕಿಯಿಂದ ಬರುತ್ತಿರುವ ಹೊಗೆ ಕಾಣಿಸಿತು. ಹೋ ಅದೇ ಗುಡ್ಡ! ಅದರ ಒಂದು ಬದಿಯಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸಲಾಗಿತ್ತು, ಮತ್ತೊಂದು ಬದಿಯಲ್ಲಿ ತೇಗದ ನೆಡುತೋಪು. ಯಾವ ಕಡೆ ಹರಡಿದರೂ ಕಷ್ಟವೇ. ಬೆಂಕಿ ಹರಡಲೇಬಾರದು.
ಓಡುತ್ತಾ ಗುಡ್ಡ ಹತ್ತಲು ಶುರು ಮಾಡಿದ. ಬೇರೆಯವರೆಲ್ಲರೂ ಇವನಿಗಿಂತ ಸಾಕಷ್ಟು ಮುಂದಿದ್ದರು, ಲೆದರ್ ಶೂ ಧರಿಸಿ ಕಿಲೋಮೀಟರ್ಗಟ್ಟಲೆ ನಡೆದಿದ್ದ ಇವನಿಗೆ ಓಡುವ ಕಷ್ಟದ ಅರಿವಾಯ್ತು. ಅಲ್ಲಲ್ಲಿ ಮುಗ್ಗರಿಸುತ್ತಾ, ತಡಡವರಿಸುತ್ತಾ ಆ ಗುಡ್ಡದ ಕಡೆಗೆ ಓಡಿದ. ಹಸಿವು, ಟೆನ್ಷನ್ ಎಲ್ಲಾ ಸೇರಿ ಎದೆಬಡಿತ ಇವನಿಂತಲೂ ವೇಗವಾಗಿ ಓಡುತ್ತಿತ್ತು.
ಬೆಂಕಿ ಗುಡ್ಡದ ಮೇಲಿಂದ ಭರ್ರನೇ ಎರಡೂ ಕಡೆಗೆ ಹರಡುತ್ತಾ ಕೆಳಗಿಳಿಯುತ್ತಿತ್ತು. ಗುಡ್ಡದ ತುಂಬಾ ಮೀಟರ್ ಎತ್ತರ ಬೆಳೆದ ಹುಲ್ಲು ಮತ್ತು ಕುರುಚಲು ಕಾಡು. ಅದ್ಯಾರು ಬೆಂಕಿ ಇಟ್ಟರೋ? ಅನ್ನುತ್ತಾ ಮನಸ್ಸಿನಲ್ಲೇ ಬೈದುಕೊಂಡು, ಎಲ್ಲಿಂದ ಕೆಲಸ ಶುರು ಮಾಡಲಿ? ಯೋಚಿಸುತ್ತಾ ನಿಂತ!
ಸಾರ್… ತಗಳಿ ಸಾರ್.. ಬಡೀರಿ, ನಿಂತ್ಕಂಡ್ರೆ ಆಯ್ತದಾ? ಅನ್ನುತ್ತಾ ಒಂದು ಸೊಪ್ಪು ಕಟ್ಟಿದ್ದ ಬಡಿಗೆ ಕೊಟ್ಟ ಒಬ್ಬ. ಇವ ಅದನ್ನು ತೆಗೆದುಕೊಂಡವನೇ ಬೆಂಕಿಯ ಕಡೆ ಹೊರಟ. ಅವರಿವರು ಬಡಿಯುತ್ತಿದ್ದುದ್ದನ್ನು ನೋಡಿ, ಕೋಲನ್ನು ಎತ್ತಿ ಅದರ ಸೊಪ್ಪಿನ ತುದಿಯಿಂದ ಉರಿಯುತ್ತಿದ್ದ ಬೆಂಕಿಯ ಮೇಲೆ ಬಡಿದ. ಕ್ಷಣಕಾಲ ಬೆಂಕಿ ಆರಿತು. ಹೋ ಸುಲಭ! ಅಂದುಕೊಳ್ಳುತ್ತಾ ಅಲ್ಲಲ್ಲಿ ಬೆಂಕಿ ಕಾಣುವಲ್ಲೆಲ್ಲಾ ಹೀಗೇ ಬಡಿಯತೊಡಗಿದ.
ಇತರೆ ಸಿಬ್ಬಂದಿಗಳೂ ಅಲ್ಲಲ್ಲಿ ಒಂದೇ ಸಮವಾಗಿ ಬೆಂಕಿಯ ಮೇಲೆ ಬಡಿಯುತ್ತಾ ಒಂದೇ ನೇರಕ್ಕೆ ಬೆಂಕಿಯನ್ನು ತಡೆಹಿಡಿದು ಮುಂದಿನ ಅರಣ್ಯ ಪ್ರದೇಶಕ್ಕೆ ಹರಡದಂತೆ ಕಂಟ್ರೋಲ್ ಮಾಡತೊಡಗಿದರು. ಆದರೆ ಉರಿಬಿಸಲು ಮತ್ತು ಗಾಳಿಯಿಂದಾಗಿ ಬೆಂಕಿಯ ತೀವ್ರತೆ ಹೆಚ್ಚಾಗತೊಡಗಿತು. ಗಾಳಿ ಬೀಸುತ್ತಿದ್ದಂತೇ ಬೆಂಕಿಯ ಉರಿ ನೇರವಾಗಿ ಮುಖಕ್ಕೇ ಬರತೊಡಗಿತು. ಒಮ್ಮೆಯಂತೂ ನೇರ ಮುಖವೇ ಹೊತ್ತಿಕೊಳ್ತೇನೋ ಅನ್ನುವಂತೆ ಮುಖ ಉರಿದು ಹೋಯ್ತು. ಜೊತೆಗೆ ಹೊಗೆ ಮೂಗಿನೊಳಗೆ ಸೇರಿಕೊಂಡು ಉಸಿರು ಕಟ್ಟಿತು. ಜೋರು ಕೆಮ್ಮು, ಬಾಯಿ ತೆರೆದರೂ ಕೆಮ್ಮಲು ಸಾಧ್ಯವಾಗಲಿಲ್ಲ. ಕಣ್ತುಂಬಾ ನೀರು! ಪ್ರಯಾಸದಿಂದ ಬೆಂಕಿಯಿಂದ ಹೊರ ನಡೆದ. ಸುಸ್ತಾಗಿ ಇನ್ನೇನು ಬಿದ್ದೆ ಅನ್ನುವ ಹಾಗಾಯ್ತು ಅವನಿಗೆ.
‘ಹುಷಾರು ಸಾರ್, ಬೆಂಕಿ ಮಧ್ಯಕ್ಕೆ ಹೋಗ್ಬೇಡಿ, ದೂರದಿಂದ ಬಡೀರಿ’ ಅನ್ನುತ್ತಾ ಎಚ್ಚರಿಸಿದ ಮತ್ತೊಬ್ಬ. ಬೆಂಕಿ ಕೆಡಿಸುವ ಕಷ್ಟ ಗೊತ್ತಾಗಿದ್ದೇ ಆಗ ಅವನಿಗೆ. ಅಷ್ಟರಲ್ಲಾಗಲೇ ಬೆಂಕಿ ಬಿದ್ದ ವಿಷಯ ಮೇಲಧಿಕಾರಿಗೆ ಗೊತ್ತಾಗಿ, ಇವನಿಗೆ ಕರೆ ಬಂತು.
‘ಅದೇನ್ ಕತ್ತೆ ಕಾಯ್ತಿದ್ರೇನೋ? ಬೆಂಕಿ ಹರಡೋತನಕ ಏನ್ ಮಾಡ್ತಿದ್ರಿ? ಬೆಂಕಿ ಏನಾರ ಮೆಡಿಸಿನಲ್ ಪ್ಲ್ಯಾಂಟ್ಸ್ ಡ್ಯಾಮೇಜ್ ಮಾಡಿದ್ರೆ, ನೀನ್ ಪಕ್ಕಾ ಸಸ್ಪೆಂಡ್ ಆಗ್ತಿಯಾ ಹುಷಾರು’ ಅನ್ನುತ್ತಾ ಎಗರಾಡಿದರು ಅಧಿಕಾರಿ. ಅವರ ಅಬ್ಬರಕ್ಕೆ ಇವನೂ ನಲುಗಿಹೋದ. ಇವನು ನಿಂತಿದ್ದ ಸ್ಥಳದಿಂದ ಹಿಂದೆ 2-3 ಮೀಟರ್ ದೂರದಲ್ಲಿ ತೇಗದ ನೆಡುತೋಪು!
ಇಲ್ಲಾ ಮೆಡಿಸಿನಲ್ ಪ್ಲ್ಯಾಂಟ್ ಇನ್ನೂ ದೂರ ಇದೆ, ಅಂದುಕೊಳ್ಳುತ್ತಾ ಬೆಂಕಿಯ ಕಡೆ ನಡೆದ. ಇತರೆ ಸಿಬ್ಬಂದಿಗಳು ಒಂದು ಕಡೆಯಿಂದ ಬೆಂಕಿಯನ್ನೂ ನಿಯಂತ್ರಿಸಿದ್ದರು. ಇವನು ಕೆಡಿಸುತ್ತಿದ್ದ ಭಾಗ ಮಾತ್ರ ಇನ್ನೂ ಕಂಟ್ರೋಲಿಗೆ ಬಂದಿರಲಿಲ್ಲ. ಆವೇಷದಿಂದ ಮತ್ತೆ ಬಡಿಗೆ ತೆಗೆದುಕೊಂಡು ಅಲ್ಲಿಲ್ಲಿ ಬಡಿಯತೊಡಗಿದ. ಬೆಂಕಿ ಕೆನ್ನಾಲಗೆ ಮುಖದ ಮೇಲೆ ಬರುತ್ತಾ ಕಣ್ ರೆಪ್ಪೆ, ಮೀಸೆ, ತಲೆಗೂದಲನ್ನೆಲ್ಲಾ ಸುಟ್ಟು ಉಸಿರು ಕಟ್ಟುತ್ತಿತ್ತು ಇವನಿಗೆ. ಅಷ್ಟರಲ್ಲಿ ಇತರರೂ ಈ ಕಡೆಗೇ ಬಂದರು.
ಸಾರ್ ಸರೀ ಬಡೀರಿ ಸಾರ್, ಬೆಂಕಿ ಕೆಲ್ಸ ಅಂದ್ರೆ ಸುಮ್ನೇನಾ? ಅನ್ನುತ್ತಾ ಕಿಚಾಯಿಸತೊಡಗಿದರು. ಯಾರೋ ಒಬ್ಬ.. ಸಾರ್, ಮೀನು ತಿನ್ನುವಾಗಲೇ ನಾನಂದ್ಕಂಡೆ, ಈ ಯಪ್ಪಾ ಬೆಂಕಿ ಕೆಲ್ಸಕ್ಕೆಲ್ಲಾ ಆಗಲ್ಲ, ಬರೀ ಆಫೀಸಿಗಷ್ಟೇ ಅಂತ ಅಂದು ನಕ್ಕ.
ಇವನಿಗೆ ಉರಿದುಹೋಯ್ತು. ಅಪ್ಪನ ಜೊತೆ ಅದೆಷ್ಟು ವರ್ಷ ಹೊಲದ ಕೆಲಸ ಮಾಡಿಲ್ಲ ನಾನು ಅಂದುಕೊಳ್ಳುತ್ತಾ ಮತ್ತೆ ಪುನಾ ಬೆಂಕಿಯ ಕಡೆ ನಡೆದ. ಅಲ್ಲೊಂದು ಕಡೆ ಬೆಂಕಿ ಎತ್ತರಕ್ಕೆ ಜೋರು ಉರಿಯುತ್ತಿತ್ತು, ಅದರ ಮೇಲೆ ಕೈಲಿದ್ದ ಬಡಿಗೆಯನ್ನು ಮೇಲೆತ್ತಿ ಜೋರು ಬಡಿದ. ಇವನ ಬಡಿತದ ರಭಸಕ್ಕೆ ಕೋಲಿನ ತುದಿ ಅರ್ಧ ಮುರಿದು ಹೋಯ್ತು, ಬಡಿದು ಪುನಾ ಕೋಲನ್ನು ಮೇಲೆತ್ತುವಾಗ ಅರ್ಧ ಮುರಿದ ತುದಿಯಿಂದ ಬೆಂಕಿ ಹೊತ್ತಿದ್ದ ಸಣ್ಣ ಕಡ್ಡಿಯೊಂದು ಸಿಕ್ಕಿಕೊಂಡಿತ್ತು, ಇವ ಮೇಲೆತ್ತಿದೊಡನೇ ತುದಿಯ ಭಾಗದಿಂದ ಸಿಡಿದು ಇವನ ತಲೆಯ ಹಿಂಭಾಗದದಿಂದ ಹಾರಿ ಹಿಂದಿದ್ದ ನೆಡುತೋಪಿನ ಮೇಲೆ ಬಿತ್ತು! ಬಿಸಿಲಿಗೆ ಒಣಗಿದ ತೇಗದ ಎಲೆಗಳು, ಕುರುಚಲು ಗಳು, ಹೋಮ ಕುಂಡಕ್ಕೆ ತುಪ್ಪ ಸುರಿದಂತೆ, ಒಂದೇ ಸಮನೆ ಫರಫರನೆ ಹೊತ್ತಿಕೊಂಡುಬಿಟ್ಟವು.
ಅಯ್ಯೋ ಪ್ಲ್ಯಾಂಟೇಷನ್ಗೆ ಹೊತ್ತಿಕೊಳ್ತು ಬನ್ರೋ ಅನ್ನುತ್ತಾ ಒಬ್ಬ ಕಿರುಚಿದ.
ಇವನು ಗಾಬರಿಯಿಂದ ಹಿಂದೆ ನೋಡಿದ. ಹೌದು, ಪ್ಲಾಂಟೇಷನಲ್ಲಿ ಬೆಂಕಿ, ಇವನ ಉಸಿರೇ ನಿಂತಂತಾಯ್ತು.
ಸಾರ್ ಓಡಿ ಸಾರ್… ಬೇಗ ಬಡೀರಿ.. .ಬನ್ರೋ ಈ ಕಡೆ ಒಬ್ಬ ಕಿರುಚಿದ.
ಇವ ಗಾಬರಿಯಲ್ಲಿನಿಂತ ಜಾಗದಿಂದ ಕೆಳಗೆ ಪ್ಲ್ಯಾಂಟೇಷನ್ ಕಡೆಗೆ ಓಡಿದ. ನಾಲ್ಕು ಹೆಜ್ಜೆ ಹಾಕಿದ್ದೇ, ಯಾವುದೋ ಕೊರಕಲಿಗೆ ಕಾಲು ಸಿಕ್ಕಿಕೊಂಡು ಮುಗ್ಗರಿಸಿ ಬಿದ್ದ, ಉರುಳಾಡುತ್ತಾ ನೇರವಾಗಿ ಬೆಂಕಿ ಉರಿಯುತ್ತಿದ್ದ ಪಕ್ಕಕ್ಕೇ ಹೋಗಿ ಬಿದ್ದ. ಅಮ್ಮಾ ಅನ್ನುತ್ತಾ ಕಿರುಚಿದ.
ಸಾರ್... ಅನ್ನುತ್ತಾ ಹುಡುಗರು ಓಡಿ ಬಂದು ಎಬ್ಬಿಸಿದರು. ಮುಖ ಎಲ್ಲಾ ತರಚಿ, ಹಣೆ ಒಡೆದು, ತುಟಿ ಜಜ್ಜಿಹೋಗಿ ರಕ್ತ ಸುರಿಯುತ್ತಿತ್ತು. ಕೂತ್ಕಳೀ ಸಾರ್ ಅಂದ. ಉರಿಯುತ್ತಿದ್ದ ಬೆಂಕಿ ನೋಡುತ್ತಿದ್ದಂತೇ ಇವನಿಗೆ ಕೂರಲು ಮನಸಾಗಲಿಲ್ಲ. ಮೊದ್ಲು ಬೆಂಕಿ ಕೆಡಿಸ್ರೋ ಅನ್ನುತ್ತಾ ಅವನ ಕೈಯಿಂದ ಬಡಿಗೆ ಕಿತ್ತುಕೊಂಡವನೇ ಬೆಂಕಿಯ ಕಡೆ ನಡೆದ. ಅಷ್ಟರಲ್ಲಾಗಲೇ ಪ್ಲ್ಯಾಂಟೇಷನ್ಗೆ ಬೆಂಕಿ ಹರಡತೊಡಗಿತ್ತು. ನೋಡನೋಡುತ್ತಿದ್ದಂತೇ ಬೆಂಕಿಯ ಕೆನ್ನಾಲಗೆ ಪ್ಲ್ಯಾಂಟೇಷನ್ನಲ್ಲಿ ಹರಡುತ್ತಾ ಇವನನ್ನು ಅಣಕಿಸತೊಡಗಿದಂತೆ ಭಾಸವಾಯ್ತು. ಮೇಲಿಂದ ಓಡಿ ಬಂದ ಹುಡುಗರು ಏನ್ಸಾರ್ ಇದು? ಈ ತರಹ ಬಿದ್ದಿದಿರಾ? ಅನ್ನುತ್ತಾ ಗಾಬರಿಯಾದರು.
ಇನ್ನಾಗಲ್ಲ ಸಾ! ಅನ್ನುತ್ತಾ ಕೈ ಚೆಲ್ಲಿದರು ಬೆಂಕಿ ಹುಡುಗರು. ಪುಣ್ಯಕ್ಕೆ ಯಾರೋ ಫೈರ್ ಇಂಜಿನ್ಗೆ ಕರೆ ಮಾಡಿದ್ದರಿಂದ ದೂರದಲ್ಲಿ ವಾಹನ ಬರುವ ಸದ್ದು ಕೇಳತೊಡಗಿತು. ಅವರು ಬಂದು ನೀರು ಸುರಿಸಿ ಬೆಂಕಿ ನಿಯಂತ್ರಿಸುವಷ್ಟರಲ್ಲಿ ಅರ್ಧ ಪ್ಲ್ಯಾಂಟೇಷನ್ನ ಅಡಿಕಾಡು ಸುಟ್ಟುಹೋಗಿತ್ತು.
ಸಂಜೆಯಾಯ್ತು. ಒಂದು ಹೆಜ್ಜೆ ಇಡಲೂ ಅಸಾಧ್ಯ ಅನ್ನುವಂತಹ ಸ್ಥಿತಿಯಲ್ಲಿ ನಿಧಾನವಾಗಿ ಗುಡ್ಡದಿಂದ ಕೆಳಗಿಳಿಯತೊಡಗಿದ. ಕೆಳಗೆ ರಸ್ತೆ ಬದಿಯಲ್ಲೇ ಮೇಲಧಿಕಾರಿಗಳ ದಂಡು ನೆರೆದಿತ್ತು.
ಇವನನ್ನು ಕಂಡೊಡನೇ, ಏನಪ್ಪಾ ಇದು? ಹಿಂಗಾ ಕೆಲ್ಸ ಮಾಡೋದು? ಈ ರೀತಿ ಆದ್ರೆ ಹೆಂಗಯ್ಯಾ ನೀನು ಕಾಡ್ ಕಾಯ್ತೀಯಾ? ಅನ್ನುತ್ತಾ ಕಣ್ಣು ಕೆಂಪಗಾಗಿಸಿಕೊಂಡರು. ಆಗಿರೋ ಲಾಸ್ ಬಗ್ಗೆ ಇವನನ್ನು ಹೊಣೆಯನ್ನಾಗಿಸಿ ರಿಪೋರ್ಟ್ ಮಾಡ್ರೀ ಅನ್ನುತ್ತಾ ಇವನ ಮೇಲಾಧಿಕಾರಿಗೆ ಹೇಳಿ, ಅರ್ಧಗಂಟೆ ಸಹಸ್ರ ನಾಮಾರ್ಚನೆ ಎಲ್ಲಾ ಮುಗಿಸಿ ಜೀಪು ಹತ್ತಿ ಹೊರಟರು.
ಇತರೆ ಕಾವಲುಗಾರರೆಲ್ಲಾ, ಅಯ್ಯೋ ಬನ್ನೀ ಸಾರ್. ಇದು ಈ ವರ್ಷದ ಮೊದಲ ಬೆಂಕಿ. ಇನ್ನೂ ಬಾಕಿ ಇದೆ! ಮುಂದಿನ್ಸಲ ಹುಷಾರಾಗಿ ಕೆಡ್ಸೋರಂತೆ, ನಡೀರಿ ಈಗ ಕ್ವಾರ್ಟರ್ಸಿಗೆ ಅಂದ.
ಸಹೋದ್ಯೋಗಿಯ ಜೊತೆ ಬೈಕ್ನಲ್ಲಿ ಕ್ವಾರ್ಟರ್ಸ್ ತಲುಪಿದವನೇ, ಕನ್ನಡಿ ಮುಂದೆ ನಿಂತ. ಮುಖವೇ ಗುರುತು ಹಿಡಿಯಲಾಗದಂತೆ, ಅಲ್ಲಲ್ಲಿ ಚರ್ಮ ಸುಟ್ಟು, ಮೀಸೆ, ಕಣ್ರೆಪ್ಪೆ ಎಲ್ಲಾ ಸುಟ್ಟು, ಮುಂದಲೆ ಸಂಪೂರ್ಣ ಸುಟ್ಟು.. ಹೊಗೆ ಮಸಿ ಎಲ್ಲಾ ಮೆತ್ತಿಕೊಂಡ ಮುಖ ವಿಕಾರವಾಗಿ ಕಾಣತೊಡಗಿತ್ತು.
ಡಿಗ್ರೀ ಓದುತ್ತಿದ್ದ ಕಾಲದಲ್ಲಿ ಹೊಲದಲ್ಲಿ ದುಡಿದು ಹೀಗೇ ಸುಸ್ತಾಗಿ ಮನೆಗೆ ಬರುತ್ತಿದ್ದ ಅಪ್ಪನ ನೆನಪಾಯ್ತು. ನಿಧಾನವಾಗಿ ಎಡಗೈ ಎತ್ತಿ ಟೈಂ ನೋಡಿದ.
ಅರೆ! ವಾಚ್ ಎಲ್ಲಿ? ಅಪ್ಪನ ನೆನಪಿಗೆ ಇದ್ದ 50 ವರ್ಷಕ್ಕೂ ಹಿಂದಿನ ವಾಚು. ಕೈಲಿ ಕಾಣ್ತಿಲ್ಲ. ಆ ಗುಡ್ಡದಲ್ಲಿ, ಪ್ಲ್ಯಾಂಟೇಷನ್ನಲ್ಲಿ ಎಲ್ಲಿ ಬಿದ್ದೋಯ್ತು? ಕಣ್ಣು ತುಂಬಿಕೊಂಡವು. ಅಪ್ಪ, ಸುಟ್ಟು ಹೋದ ಪ್ಲ್ಯಾಂಟೇಷನ್, ಮೇಲಾಧಿಕಾರಿಗಳ ಆದೇಶ ಎಲ್ಲವೂ ಕಣ್ಮುಂದೆ ಬಂದು ಜೋರಾಗಿ ಅಳಬೇಕು ಅನ್ನಿಸಿತು.
‘ನಮ್ ಟೈಂ ಸರಿ ಇರ್ಬೇಕು ಸಾರ್ ಅಷ್ಟೇ…’ ಕಣ್ಣೀರಿಡುತ್ತಾ ಕುಸಿದು ಕುಳಿತ.
(ಮುಂದಿನ ಕಥೆ : 12.2.2022)
ಪ್ರತಿಕ್ರಿಯೆಗಳಿಗಾಗಿ : tv9kannadadigital@gmail.com
*
ಹಿಂದಿನ ಕಥೆ : Forest Stories : ತಿಂಗಳ ಕೊನೆಯ ಅಕ್ಕಿಯೂ, ಕೋಳಿ ಗೊಜ್ಜೂ, ಢಂ ಢಮಾರ್ ಎನ್ನುವ ಆ ಗುಂಡಿನ ಶಬ್ದವೂ