Poetry : ಅವಿತಕವಿತೆ ; ಪರ್ವತದಿಂದ ಜಾರಿ ಪ್ರಪಾತಕ್ಕೆ ಬೀಳುವಾಗ ಅಚಾನಕ್ಕಾಗಿ ಅಂಗೈಗೆ ಸಿಲುಕಿದ ಹುಲ್ಲುಗರಿಕೆ
Writing : ‘ಓದು, ಬಾಲ್ಯದಿಂದಲೂ ಹಚ್ಚಿಕೊಂಡ ಗೀಳು. ಕೆಲವೊಮ್ಮೆ ಆ ಕ್ಷಣಕ್ಕೆ ನನ್ನ ಓದಿಗೆ ಬೇಕಾದದ್ದು ಸಿಗದೇ ಪರಿತಪಿಸುವಾಗಿನ ಅಮೂರ್ತವೇ ಕಾವ್ಯವಾಗಿ ಹೊಮ್ಮಿತೇನೋ. ಆದರೆ, ಚಿತ್ರಕಲಾವಿದನಾಗಬೇಕೆಂಬ ಬಯಕೆ ತೇನೆದೂಗಿತ್ತೆ ಹೊರತು, ಕವಿ ಅಥವಾ ಲೇಖಕನಾಗಬೇಕೆಂದು ಕನಸು ಕಂಡವನಲ್ಲ. ಆ ನಿಟ್ಟಿನಲ್ಲಿ ಪ್ರಯತ್ನಿಸಿದವನೂ ಅಲ್ಲ.‘ ಜಬೀವುಲ್ಲಾ ಎಂ. ಅಸದ್
Kannada Poetry : ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’ (AvithaKavithe) ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ; ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನ ಜಬೀವುಲ್ಲಾ ಎಂ. ಅಸದ್ ಪದವಿಯಲ್ಲಿ ಇಂಗ್ಲಿಷ್ ಸಾಹಿತ್ಯವನ್ನು ಐಚ್ಛಿಕ ವಿಷಯವ್ನಾಗಿ ಆಯ್ಕೆ ಮಾಡಿಕೊಂಡು ನಂತರ ವೈದ್ಯಕೀಯ ವಿಷಯಗಳೆಡೆ ಆಸಕ್ತಿ ತಳೆದರು. ಬಳ್ಳಾರಿಯಲ್ಲಿ ಡಿಪ್ಲೊಮಾ ಇನ್ ಜನರಲ್ ನರ್ಸಿಂಗ್ ಮಿಡ್ವೈಫ್ರೀ ಮುಗಿಸಿ, ಅಲ್ಲಿಯೇ ಕೆಲವರ್ಷಗಳ ಕಾಲ ಸಹಾಯಕ ಶಸ್ತ್ರಚಿಕಿತ್ಸಕರಾಗಿದ್ದರು. ಪ್ರಸ್ತುತ ಬೆಂಗಳೂರಿನಲ್ಲಿ ಕರುಣಾ ಟ್ರಸ್ಟ್ ವೈದ್ಯಕೀಯ NGO ದಲ್ಲಿ ಆರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕವಿತೆಯ ತೀವ್ರ ವ್ಯಾಮೋಹಿಯಾದ ಇವರು ಮುಖಪುಟ ವಿನ್ಯಾಸ, ರೇಖಾಚಿತ್ರಗಳನ್ನು ಅಭಿವ್ಯಕ್ತಿಯನ್ನಾಗಿಸಿಕೊಂಡಿದ್ದಾರೆ. ಈಗಿಲ್ಲಿ ಇವರ ಕವಿತೆಗಳು ನಿಮ್ಮ ಓದಿಗೆ.
*
ಇದು ತಾರುಣ್ಯಕ್ಕೆ ಸೇರಿದ ಯುಗಧರ್ಮ. ಬದುಕಿನ ಎಲ್ಲ ಅಭಿವ್ಯಕ್ತಿ ವೇದಿಕೆಗಳಲ್ಲೂ ತಾರುಣ್ಯದ್ದೇ ಕುಹೂ, ಕಲರವ, ಸಮೂಹಗಾನ. ಜಬೀವುಲ್ಲ ಅಸದ್, ಈ ಯುಗಧರ್ಮಕ್ಕೆ ಸೇರಿದ ಕಬ್ಬಿಗ. ಸಾಮಾಜಿಕ ಮಾಧ್ಯಮದಲ್ಲಿ ನಿರಂತರ ಕಾವ್ಯಕಟ್ಟೋಣದಲ್ಲಿ ತೊಡಗಿರುವ ಅದಮ್ಯ ಕಾವ್ಯೋತ್ಸಾಹಿ. ಆದಿರೂಪಕದ ಮೂಲಕ ವಿವರಿಸುವುದಾದರೆ, ‘ಕಾವ್ಯಪ್ರಯೋಗ ಪರಿಣತಮತಿ’. ಮುಕ್ತಛಂದದ ಪದ್ಯಗಳು, ಗಜ಼ಲ್, ದ್ವಿಪದಿ, ಚೌಪದಿ, ಹಾಡಿನ ಮಟ್ಟುಗಳು… ಹೀಗೆ ವಿವಿಧ ರೂಪಗಳಲ್ಲಿ ಜಬೀ ಅವರ ಕಾವ್ಯ ಪ್ರತ್ಯಕ್ಷಗೊಳ್ಳುತ್ತದೆ. ಆ ಕ್ಷಣಕ್ಕೆ ಆಯ್ದಕೊಂಡಿರುವ ಮಾಧ್ಯಮ ಯಾವುದೇ ಆದರೂ, ಎದ್ದು ಕಾಣುವ ಹಾಗೂ ಮೆಚ್ಚುಗೆ ಗಳಿಸುವ ಅಂಶವೆಂದರೆ ಅವರ ದಣಿವರಿಯದ ಕಾವ್ಯಪ್ರೀತಿ. ಆದರೂ ಇವರು ಕ್ರಮಿಸಬೇಕಾದ ಕಾವ್ಯದ ದಾರಿ ಗಾವುದವಿದೆ. ಈಗ ಈಡಾಡಿದ ಪದ-ಅಕ್ಕರಗಳನ್ನು ಹೆಕ್ಕಿ, ಹಳ್ಳು ಮಾಡಿ, ಸೋಸಿ ಸಮಪಾಕದ ಕಾವ್ಯವನ್ನು ಕಟ್ಟುವ ಸಾಮರ್ಥ್ಯ ಅವರಿಗಿದೆ. ಆ ಹದವನ್ನು ಸಾಧಿಸಲು ಈ ಪ್ರಯೋಗಗಳು ಅವರಿಗೆ ಬಹುಮುಖ್ಯ ಆಕರಗಳಾಗಲಿವೆ.
ಕೇಶವ ಮಳಗಿ, ಲೇಖಕರು
ಇವರ ಕವಿತೆಗಳಲ್ಲಿ ಸಮಷ್ಟಿಯ ಧ್ವನಿಯಿದೆ, ಸತ್ವಪೂರ್ಣ ಅಭಿವ್ಯಕ್ತಿಯಿದೆ, ಕವಿ ಕಾವ್ಯಾಂಶಗಳನ್ನೆಲ್ಲ ಕೂಡಿಸಿ, ಜೋಡಿಸಿ, ತಮ್ಮ ಕಲ್ಪನಾಶಕ್ತಿಯ ಮುಖಾಂತರ ಕವಿತೆಗಳಿಗೆ ಮೆರುಗನ್ನೀಯ್ದಿದ್ದಾರೆ. ತೀವ್ರಗ್ರಾಹಿಯಾಗಿ, ತೀವ್ರಸ್ಪಂದಿಯಾಗಿ, ಈ ಲೋಕದ ಅಲೌಕಿಕತೆಯನ್ನು, ವೈಶಿಷ್ಟತೆಯನ್ನು, ಕಾವ್ಯಪ್ರತಿಭೆಯ ಮುಖಾಂತರ ಅವರ್ಣನೀಯ ವರ್ಣಮಯ ಜಗತ್ತನ್ನು ನಮ್ಮೆದುರಿಗೆ ತೆರೆದಿಡುತ್ತಾರೆ. ಲೌಕಿಕ ಸೌಂದರ್ಯದ ಅಗಾಧತೆ, ದೈವಿಕತೆ, ವೈಭವಗಳನ್ನು ತಮ್ಮ ಕಲ್ಪನಾ ಚಾತುರ್ಯದಿಂದ ವಾಸ್ತವಕ್ಕಿಳಿಸಿದ್ದಾರೆ. ಮನುಜರ ಕಾಣುವ ಕನಸುಗಳನ್ನೂ, ಆಶೋತ್ತರಗಳನ್ನೂ, ಸುಖ – ದುಃಖಗಳನ್ನೂ, ಬಂಡಾಯದ ಧ್ವನಿಯನ್ನೂ ತಮ್ಮ ಪ್ರತಿಭಾನ ಧೀಮಂತಿಕೆಯಿಂದ ಓದುಗರಿಗೆ ಹತ್ತಿರವಾಗಿ ಆತ್ಮೀಯವಾಗುವಂತೆ ವ್ಯಕ್ತಪಡಿಸಿದ್ದಾರೆ.
ಪೀರಸಾಬ್ ನದಾಫ್, ಲೇಖಕ
ಕಲೆ : ಜಬೀವುಲ್ಲಾ
ನಾವಾಗಲೇ ಸತ್ತಿದ್ದೇವೆ ಸ್ವಾಮಿ
ಸತ್ತ ಬದುಕಿಗೆ ಸಲಾಂ ಹೊಡೆದು ಗುಲಾಮರಾಗಿದ್ದೇವಲ್ಲ ಸ್ವಾಮಿ ಬದುಕೇ ಇಡಿಯಾಗಿ ದಿನ ಕೊಲ್ಲುತ್ತಿರುವಾಗ ನೀವ್ಯಾರೂ ಹೊಸದಾಗಿ ಕೊಡಲಿ ತಂದವರು? ಕತ್ತಿ, ಮಚ್ಚು, ಪಂಜುಗಳ ಪಿಡಿದು ನಮ್ಮನ್ನು ಕೊಲ್ಲಲು ಬಂದವರು ನಾವಾಗಲೇ ಸತ್ತಿದ್ದೇವೆ ಸ್ವಾಮಿ!
ಹಸಿವಿನ ಬೇಗೆಯಲಿ ಮೆರೆದು ಬಿಸಿಲಿನ ಬಯಲಲಿ ಉರಿದು ಒಣಗುದುರಿ ಇಳೆಗೆ ಮಳೆ ಸುರಿವುದೆಂದು ಒಮ್ಮೆ ಕಾರ್ಮೋಡ ಹಾದು ಹೊಲದಿ ಬಿತ್ತ ಬೀಜ ಇಂದಿಲ್ಲದಿರೆ ನಾಳೆ ಮೊಳಕೆಯಾಗುವುದೆಂದು ಕಾದು ನಾವಾಗಲೇ ಸತ್ತಿದ್ದೇವೆ ಸ್ವಾಮಿ!
ಹೊಟ್ಟೆಗೆ ಹಿಡಿ ಹಿಟ್ಟಿಲ್ಲ ನಮ್ಮಲ್ಲಿ ನಿಮ್ಮ ಜುಟ್ಟಿಗೆ ಮಲ್ಲಿಗೆ ಎಲ್ಲಿಂದ ತಂದೆವು? ಭೂಮಿಲಿ ಬಿತ್ತ ಬೀಜವ ನೆಲವೆ ನುಂಗಿ 'ಅಯ್ಯೋ! ಇನ್ನೂ ಹಸಿವು' ಎಂದು ಚೀರಿಡುವಾಗ ನಿಮ್ಮ ಕಣಜಗಳನ್ನು ನಾವು ಹೇಗೆ ತುಂಬುವುದು? ನಮ್ಮಿಂದಾಗದು ಕ್ಷಮಿಸಿ ನಾವಾಗಲೇ ಸತ್ತಿದ್ದೇವೆ ಸ್ವಾಮಿ!
ಸದ್ದಿಲ್ಲದೆ ಕಾಲಭೂತ ಸರಿದಂತೆ
ಉಳುವ ಎತ್ತು ಸತ್ತು ನಾರುತಿದೆ
ಬೋಳಾದ ಮರದ ನೆರಳ ಕೆಳಗೆ
ನೇಗಿಲನು ಎಂದೋ ದಿವಕ ತಿಂದಾಗಿದೆ
ಕಿರಣ ತೂರುವ ಸೂರಿನ ಒಳಗೆ
ನಾವಾಗಲೇ ಸತ್ತಿದ್ದೇವೆ ಸ್ವಾಮಿ!
ಬೆಳ್ಳಿ ಮುಗಿಲನು, ಬಂಗಾರದ ಬಿಸಿಲ ಬಯಲನು
ಮುದ್ದು ಕಂದಮ್ಮಗಳ ನಗುವನು,
ನಮ್ಮ ದನಿ, ನೀತಿ, ನೆತ್ತರನು
ಮೋಜು, ಮೇಜು, ಕುರ್ಚಿ, ಮಂಚಗಳನ್ನು
ಸೌದೆ, ಒಲೆ, ಪಾತ್ರೆ ಮತ್ತು ಸೂರುಗಳನ್ನು
ನಮ್ಮದೆನ್ನುವುದನ್ನೆಲ್ಲ ಈಗಾಗಲೇ ಕಸಿದಾಗಿದೆ
ನಾವಾಗಲೇ ಸತ್ತಿದ್ದೇವೆ ಸ್ವಾಮಿ!
ನಾವೆಲ್ಲ ಜೀವ ಬೆವರ ತೊಯ್ದು, ಭುವಿಯ ಕುಯ್ದು
ಹನಿ ಹನಿಗೂ ತತ್ತರಿಸುತ್ತಿರುವಾಗ
ಇನ್ನಷ್ಟು ಮದ ಏರಿಸಿ, ನಶೆಲಿ ತೇಲಲು
ನಿಮ್ಮ ಮದಿರೆಗೆ, ಕಟುಕ ಮತಿದೇಹಗಳಿಗೆ
ನೀರು ಬೇಕೆಂದು ಧಿಮಾಕು ತೋರುವಿರಲ್ಲ
ನಿಮ್ಮ ಬೇಡಿಕೆಗಳ ಪೂರೈಸಲು ನಮ್ಮಿಂದಾಗದು
ನಾವಾಗಲೇ ಸತ್ತಿದ್ದೇವೆ ಸ್ವಾಮಿ!
ನಮ್ಮೀ ಬರಿಗೈಗಳು ಕಾಣುತ್ತಿಲ್ಲವೆ ನಿಮಗೆ?
ಕಂಬನಿ ಸೆರೆ ಬತ್ತುಹೋದ ನಮ್ಮ ಕಂಗಳೊಳಗೆ
ಒಮ್ಮೆಯಾದರೂ ಇಣುಕಿ ನೋಡಿ
ಅಲ್ಲೂ ಶೂನ್ಯ ಕವಿದು ಎಲ್ಲಾ ಖಾಲಿ.. ಖಾಲಿ...
ಇನ್ನೂ ನಮ್ಮಲ್ಲೇನೂ ಉಳಿದಿಲ್ಲ
ಕೊಡಲು - ಬಿಡಲು ಈ ಪ್ರಾಣದ ಹೊರತು; ಆದರೂ
ನಾವಾಗಲೇ ಸತ್ತಿದ್ದೇವೆ ಸ್ವಾಮಿ!
ಮಣ್ಣು ಮಾಡಿಲ್ಲ ಅಷ್ಟೇ!
*
ಪ್ರೇಮವೆಂದರೆ…
ಪರ್ವತದಿಂದ ಜಾರಿ ಪ್ರಪಾತಕ್ಕೆ ಬೀಳುವಾಗ
ಅಚಾನಕ್ಕಾಗಿ ಅಂಗೈಗೆ ಸಿಲುಕಿದ ಹುಲ್ಲುಗರಿಕೆ-
ಪ್ರೇಮವೆಂದರೆ.
ಸೂರ್ಯನ ಕಿರಣಕೆ ಶರಣಾಗಿ ಕರಗಿ
ಕಳೆದು ಹೋಗುವ ಮಂಜಿನ ಕನಸು -
ಪ್ರೇಮವೆಂದರೆ.
ಸಂತೆಯ ನಡುವೆ ನಿಂತು, ಲೋಕದ ಚಿಂತೆ ಮರೆತು
ಕೇಳುವ ಕೊಳಲಿನ ನಾದ -
ಪ್ರೇಮವೆಂದರೆ.
ಸಾವಿನ ಸೂತಕದ ಶೋಕದ ನಡುವೆ
ಭರವಸೆಯ ವಚನ ಕೊಡುವ ಹಣತೆಯ ಬೆಳಕು -
ಪ್ರೇಮವೆಂದರೆ.
ಕಾಡುವ ಕತ್ತಲಲಿ, ಅಮ್ಮನ ಕುಂಕಳಲಿ ಕೂತ
ಮಗುವಿನ ಕಣ್ಣಲಿ ತೇಲುವ ಚಂದಿರನ ಚೂರು -
ಪ್ರೇಮವೆಂದರೆ.
ಶಿಲೆಯ ಕಡೆಯುವ ಕರಕಮಲದ ಹೃದಯದಲ್ಲಿ
ಹೆಪ್ಪುಗಟ್ಟಿದ ಬಿಸಿ ನೆತ್ತರು -
ಪ್ರೇಮವೆಂದರೆ.
ಕಡಲ ಮರಳ ಕಿನಾರೆಯಲಿ, ಎಂದಿಗೂ ಮರಳಿ ಬಾರದ ಹಡಗಿಗೆ
ಕಾದು ಕುಳಿತ ಲಂಗರು - ಪ್ರೇಮವೆಂದರೆ. ಹಸಿದ ಕರುಳಿನ ಕಂಬನಿಗಳ ಅರ್ತನಾದಕೆ ಮಿಡಿವ ರೊಟ್ಟಿಯ ಚೂರಿನ ಸಾಂತ್ವಾನ - ಪ್ರೇಮವೆಂದರೆ. ಭೂಮಿಯ ಎದೆಗೆ ಬಿದ್ದ ಮಳೆಗೆ ಪುಟಿದೆದ್ದ ಅನಾಮಿಕ ಹಸಿರು ಮೊಳಕೆಯ ನಗು - ಪ್ರೇಮವೆಂದರೆ. ಕಾಣದೆ, ತಾಕದೆ, ಮಾತಾಗದೆ, ಅನುಭವಿಸದೆ ಹೃದಯದ ಹಾದಿಯಲ್ಲಿ ಕೈಪಿಡಿದು ಸಾಗುವ ಸಂಭ್ರಮ - ಪ್ರೇಮವೆಂದರೆ.
*
ಓದು, ಬಾಲ್ಯದಿಂದಲೂ ಹಚ್ಚಿಕೊಂಡ ಗೀಳು. ಕೆಲವೊಮ್ಮೆ ಆ ಕ್ಷಣಕ್ಕೆ ನನ್ನ ಓದಿಗೆ ಬೇಕಾದದ್ದು ಸಿಗದೇ ಪರಿತಪಿಸುವಾಗಿನ ಅಮೂರ್ತವೇ ಕಾವ್ಯವಾಗಿ ಹೊಮ್ಮಿತೆನ್ನುವುದು ಕಾಲಾಂತರದಲ್ಲಿ ಅರಿವಾಗುತ್ತಾ ಹೋಯಿತು. ಆದರೆ, ಚಿತ್ರಕಲಾವಿದನಾಗಬೇಕೆಂಬ ಬಯಕೆ ತೇನೆದೂಗಿತ್ತೆ ಹೊರತು, ಕವಿ ಅಥವಾ ಲೇಖಕನಾಗಬೇಕೆಂದು ಕನಸು ಕಂಡವನಲ್ಲ. ಆ ನಿಟ್ಟಿನಲ್ಲಿ ಪ್ರಯತ್ನಿಸಿದವನೂ ಅಲ್ಲ. ಎಂಟನೆಯ ತರಗತಿಯಲ್ಲಿದ್ದಾಗ ಮೊದಲು ಕವಿತೆ ಬರೆದೆ. ಆಮೇಲೇ ಕವಿತೆಯ ಬೆನ್ನಿಗೆ ಬಿದ್ದೆ. ಹಿರಿಯ ಜನಪದ ವಿದ್ವಾಂಸರಾದ ಡಾ. ಮೀರಾಸಾಬಿಹಳ್ಳಿ ಶಿವಣ್ಣನವರ ಒತ್ತಾಸೆಯಿಂದ 2015 ರಲ್ಲಿ “ಏಕಾಂಗಿಯ ಕನವರಿಕೆಗಳು” ಚೊಚ್ಚಲ ಕವನ ಸಂಕಲನ ಲೋಕಾರ್ಪಣೆಯಾಯಿತು. ಹತ್ತಾರು ಪ್ರಶಸ್ತಿ, ಪುರಸ್ಕಾರಗಳು ಲಭಿಸಿದವು.
ಕವಿತೆಗಳ ಜೊತೆಗೆ ಪ್ರಬಂಧ, ಕಥೆ, ಲೇಖನ, ಸಂಶೋಧನೆ ಹೀಗೆ ಗದ್ಯದ ಎಲ್ಲಾ ಪ್ರಕಾರಗಳಲ್ಲೂ ತೊಡಗಿಸಿಕೊಂಡಿರುವೇನಾದರೂ ಕವಿತೆಗಳಿಂದ ಸಿಗುವ ಆತ್ಮ ತೃಪ್ತಿ, ಸಂತಸ ಮತ್ತೆ ಯಾವುದರಲ್ಲೂ ಅನುಭವಿಸಲು ಸಾಧ್ಯವಾಗಿಲ್ಲ. ಕವಿತೆ ನನ್ನ ಬಲ ಮತ್ತು ಬಲಹೀನತೆಯೂ ಹೌದು. ಒಂದು ವಿಚಾರವನ್ನು ಕಥಾನಕದ ಮೂಲಕ ಕಟ್ಟಿಕೊಡುವುದಕ್ಕಿಂತ ಉತ್ಕಟವಾಗಿ, ಮನಮುಟ್ಟುವಂತೆ ಕೆಲವೇ ಪದಗಳಲ್ಲಿ ಹೇಳಲು ನನಗೆ ಹೆಚ್ಚು ಸಾಧ್ಯವಾಗುತ್ತದೆ ಎಂಬುದು ನನ್ನ ನಂಬಿಕೆ. ಕೆಲವೊಮ್ಮೆ ನನ್ನ ರಚನೆಗಳು ಕವಿತೆಗಳೊ ಅಲ್ಲವೋ ಎಂಬ ಸಂದೇಹವೂ ಕಾಡುವುದಿದೆಯಾದರೂ, ಸ್ಪರ್ಧೆಗಳಲ್ಲಿ ಗೆದ್ದಾಗ, ಪ್ರಕಟವಾದಾಗ, ಮೆಚ್ಚುಗೆ ಬಂದಾಗ ಆತ್ಮವಿಶ್ವಾಸ ಇಮ್ಮಡಿಯಾಗುವುದಂತೂ ನಿಜ.
ಕವಿತೆಯೆಂದರೆ ನನಗೆ ಅದೊಂದು ಬಿಡುಗಡೆಯ ಆಯಾಮ. ಬದುಕಿನ ಜಂಜಾಟಗಳಿಂದ, ತುಮುಲ-ತಲ್ಲಣಗಳಿಂದ, ಒತ್ತಡ, ನಿರಾಸೆ, ಹತಾಶೆ ಮತ್ತು ಅಸಹಾಯಕತೆಯಿಂದ ಬಿಡುಗಡೆಗೊಳ್ಳುವ ಕ್ರಮ. ನನ್ನ ನಾನು ಅರಿಯುವ, ವಿಮರ್ಶಿಸಿಕೊಳ್ಳುವ, ತಿದ್ದಿ ನಡೆಯುವ ಒಂದು ಪರಿವಿಧಿ. ಬದುಕನ್ನು ಅರ್ಥಪೂರ್ಣವಾಗಿ ಕಂಡುಕೊಳ್ಳುವ, ಪರಿಪೂರ್ಣವಾಗಿ ಬಾಳುವ, ಸಾರ್ಥಕತೆಯತ್ತ ಹೆಜ್ಜೆ ಹಾಕುವ ಒಂದು ಪ್ರಯತ್ನ. ಸಮಾಜದ ಸಂಗತಿಗಳಿಗೆ ಸ್ಪಂದಿಸುವ, ನನ್ನ ಸೈದ್ಧಾಂತಿಕ-ಬೌದ್ಧಿಕ ವಿಚಾರಗಳನ್ನು ತಲುಪಿಸುವ, ವಾಸ್ತವದ ನೆಲೆಗಟ್ಟಿನ ಮೇಲೆ ವಿಸ್ತರಿಸುವ, ಅವುಗಳನ್ನು ಚರ್ಚಿಸುವ, ಆ ಮೂಲಕ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ, ಅಸ್ಮಿತೆಯನ್ನು ಭವಿಷ್ಯತ್ಕರಿಸುವ ಒಂದು ಪ್ರಯೋಗ. ಹಾಗಾಗಿಯೇ ಕಾವ್ಯ ಎಂದರೆ ನನ್ನ ಮಟ್ಟಿಗೆ ಬಿಡುಗಡೆ!
ಬಿಳಿ ನೆರಳ ಸಾವು
ಸಾವೆಂದರೆ,
ಆಗತಾನೆ ಅರಳಿ ನಿಂತ ಕೆಂದಾವರೆಯ ಮೇಲೆ
ಹಾರುವ ಹಂಸದ ಬಿಳಿ ನೆರಳು
ಸಾವೆಂದರೆ,
ಕೊಳದಲಿ ಬಿದ್ದ ಹುಣ್ಣಿಮೆ ಚಂದಿರನ
ಸುಂದರ ಬಿಂಬದ ಒಡಪು
ಸಾವೆಂದರೆ,
ದೇವರ ಪೂಜೆಗೆ ಕಾಯ್ದಿರಿಸಿದ
ಬಾಡಿದ ಸುಮಗಳ ಸುಗಂಧ
ಸಾವೆಂದರೆ,
ಬಿದಿರ ಮೇಳೆಲಿ ಸಿಕ್ಕಿಹಾಕಿಕೊಂಡ
ಕೊಳಲ ಗಾನದ ಸುಮಧುರ ಹೊನಲು
ಸಾವೆಂದರೆ,
ಬೆಳೆದ ಮರವ ಸಿಗಿದು ಮಾಡಿದ
ನಾಲ್ಕು ಕಾಲ್ಗಳ ಮಲಗುವ ಮಂಚ
ಸಾವೆಂದರೆ,
ಬಯಲಿನ ಭೀಕರ ಬಿರುಗಾಳಿಗೆ ಸಿಲುಕಿ
ಹಗುರ ತೇಲುವ ಚಿಟ್ಟೆಯ ರೆಕ್ಕೆ.
ಸಾವೆಂದರೆ,
ಹಾರುವ ಹಕ್ಕಿಯ ಕೊಕ್ಕಿನಿಂದ ಜಾರಿದ
ಕೆಂಪು ಚಿಗುರೆಲೆ.
*
*
ಎಲ್ಲಿಯೂ ಸಲ್ಲದವರು
ಒಂದು ಹೊತ್ತಿನ ತುತ್ತನು
ನೀಡಲಾಗದ ನಿಮ್ಮ ಧರ್ಮಗಳನ್ನು
ನೀವೇ ಇಟ್ಟುಕೊಳ್ಳಿ ಜನಾಬ್
ಅನ್ನವೇ ನಮ್ಮ ದೇವರು
ಹಸಿವೆಯೇ ನಮ್ಮ ಧರ್ಮ
ರೋಜಾ ಮತ್ತು ನಮಾಜು
ಸುರಿವ ಕಂಬನಿಗಳೇ
ನಾವು ಬೆಳಗುವ ದೀಪಗಳು
ಅರ್ತನಾದವೇ ವೇದ-ಶ್ಲೋಕ-ಮಂತ್ರಗಳು
ಮುಂಜಾವಿಗೆ ಅರಳದ
ಸಂಜೆಗೆ ಬಾಡದ
ಶೋಕ ಪುಷ್ಪಗಳು ನಾವು!
ಇಮಾನ್ ಇಲ್ಲದ ಇಬಾದತ್ ನಿಮ್ಮದು
ತೋರಿಕೆಯ ಭಕ್ತಿ ಭಾವ
ಪರವಶತೆಯ ನಾಟಕವದು
ಖಾಲಿ ಕರಗಳ ಪ್ರಾರ್ಥನೆ ನಮ್ಮದು
ಬಯಕೆಗಳಿಲ್ಲದ ಬದುಕಿನ ವೇದನೆಯದು
ಸಾವಿರ-ಲಕ್ಷಗಳ ವೆಚ್ಚ ಮಾಡುತ್ತಾ
ಹೊರಡುವಿರಿ ನೀವು
ಮೈ-ಮನಸ್ಸಿನ ತುಂಬಾ ಕಲ್ಮಶ ಹೊತ್ತು
ದ್ವೇಷ-ಅಸೂಯೆಗಳ ಭಾವನೆಗಳ ಬಿತ್ತು
ಕಾಶಿ-ವಾರಣಾಸಿ, ಮೆಕ್ಕಾ-ಮದೀನಾ,
ಜೆರುಸಲೇಂ-ವ್ಯಾಟಿಕನ್ ಅಂತೆಲ್ಲಾ...
ತೀರ್ಥಯಾತ್ರೆಯ ಹೆಸರಿನಲಿ
ಅನುವಾಗುವ ನೀವೆಲ್ಲಾ...
ಹೋಗುವಾಗ ಎರಡಿದ್ದ ಬ್ಯಾಗು
ಮರಳುವಾಗ ನಾಲ್ಕು ಆಗುವುವಲ್ಲ!
ಹೋದಲ್ಲಿಗೆ ಬಿಟ್ಟು ಬರುವ ಬದಲಿಗೆ
ಅಲ್ಲಿಂದ ಹೊತ್ತು ತಂದದ್ದೆ ಹೆಚ್ಚು ಇರುವಲ್ಲಿಗೆ
ನಿಮ್ಮ ಸ್ವಾರ್ಥಕ್ಕೆ!
ಬಯಕೆಗಳ ಹಸಿವಿಗೆ, ಹವಿಸ್ಸಿಗೆ!
ನಮಗೆ ಕೊಡಲಿಕ್ಕೆ ನಿಮ್ಮಲ್ಲಿ ಬಹಳಷ್ಟಿದೆ
ಆದರೂ ಕೊಡರು
ನಮ್ಮಲ್ಲಿ ಕಳೆದುಕೊಳ್ಳಲಿಕ್ಕೆ
ಏನೆಂದರೆ ಏನೂ ಇಲ್ಲ
ಜೀವದ ಹೊರತು
ಸಾಯಲು ಬಿಡರು
ನಮ್ಮ ಬದುಕು ನಿತ್ಯ ಬದರ್
ಕುರುಕ್ಷೇತ್ರದ ಮಣ್ಣಿನ ಚಾದರ್
ನಮಗಾಗಿ ನಿಮ್ಮ ರುದ್ರಭೂಮಿಯಲ್ಲಿಲ್ಲ
ಒಂದೂ ಖಬರ್
ದುರ್ಗಂಧ ಬೀರುವ
ಚಂದನದ ಕಟ್ಟಿಗೆಗಳು ನೀವು
ಕೊಳಚೆ ನಾಲೆಯ
ಪವಿತ್ರ ಕಮಲಗಳು ನಾವು
ದೇವರನು ಗುತ್ತಿಗೆ ಪಡೆದಿರುವ
ಮುಲ್ಲಾ-ಸ್ವಾಮಿ-ಪಾದ್ರಿಗಳು ನೀವು
ದೇಹವನ್ನೆ ದೇಗುಲವಾಗಿಸಿಕೊಂಡು
ಅಂತರಂಗದ ಬೆಳಕನ್ನೆ
ದೇವನನ್ನಾಗಿಸಿಕೊಂಡು
ಹೆಗಲಿಗೆ ಖಾಲಿ ಜೋಳಿಗೆ ಹಾಕಿಕೊಂಡು
ಖಾಲಿ ಕರಗಳ, ಬದುಕಿಗೆ ವರಗಳಿಲ್ಲದ
ಸೂಫಿ-ಸಾಧು, ಸಂತ-ಫಕೀರರು ನಾವು
ಕೇವಲ ಮನುಜರು!
ಸ್ವರ್ಗದ ವಿಳಾಸ ತಿಳಿದವರು ನೀವು
ನರಕದ ಬಾಗಿಲು ತಟ್ಟುವ ಹುಚ್ಚರು ನಾವು
ಅಲ್ಲಿಯೂ, ಇಲ್ಲಿಯೂ
ಎಲ್ಲಿಯೂ ಸಲ್ಲದವರು
*
ಭಾವ ತರಂಗ
ಮನಸ್ಸಿಗೆ ರೆಕ್ಕೆ ಕಟ್ಟಿ ಹಾರಲು ಬಿಡಿ
ಮುಗಿಲನ್ನು ಸೇರಿಕೊಳ್ಳಲಿ...
ಮನಸ್ಸನ್ನು ನದಿಯಾಗಿ ಹರಿಯಲು ಬಿಡಿ
ಕಡಲನ್ನು ಹುಡುಕಿಕೊಳ್ಳಲಿ...
ಮನಸ್ಸನ್ನು ಅಲೆಮಾರಿ ಆಗಲು ಬಿಡಿ
ಗುರಿಯನ್ನು ಆಯ್ದುಕೊಳ್ಳಲಿ...
ಮನಸ್ಸಿಗೆ ಕಣ್ಣುಗಳನ್ನು ಕೊಟ್ಟು ಬಿಡಿ
ಕಾಣದಿರುವುದನ್ನು ಕಂಡುಕೊಳ್ಳಲಿ...
ಮನಸ್ಸನ್ನು ಪರವಶಗೊಳ್ಳಲು ಬಿಡಿ
ಅನುಭವ ದಕ್ಕಿಸಿಕೊಳ್ಳಲಿ...
ಮನಸ್ಸನ್ನು ಕತ್ತಲಲ್ಲಿ ಕಳೆಯಲು ಬಿಡಿ
ತನ್ನನ್ನು ತಾ ಹುಡುಕಿಕೊಳ್ಳಲಿ...
ಮನಸ್ಸನ್ನು ಏಕಾಂತಕ್ಕೆ ಮಾರಿ ಬಿಡಿ
ಲಾಭ ತಂದುಕೊಡಲಿ...
ಮನಸ್ಸಿನ ಜೊತೆಕೂತು ಮಾತನಾಡಿ ಬಿಡಿ
ನೋವು ಹಂಚಿಕೊಂಡು ಹಗುರಾಗಲಿ...
ಮನಸ್ಸನ್ನು ಧ್ಯಾನಶೂನ್ಯದಲಿ ಕರಗಲು ಬಿಡಿ
ಜ್ಞಾನೋದಯವನ್ನು ಪಡೆದುಕೊಳ್ಳಲಿ...
*
ಅವನು ಬರಬಹುದು
ತೆರೆದ ಬಾಗಿಲು ತೆರೆದೆ ಇರಲಿ ಮುಚ್ಚುವುದು ಬೇಡ ಅವನು ಬರಬಹುದು... ಹೂ ಬಾಡುವ ಸಮಯಕ್ಕೆ ಮುಡಿಯಲ್ಲಿ ಮೊಲ್ಲೆಯೊಂದು ಬಿರಿಯುತ್ತಿದೆ ಅವನು ಬರಬಹುದು... ಮುರಿದ ಕನಸುಗಳಲ್ಲಿ ಹಕ್ಕಿ ಗೂಡು ಹೆಣೆಯುತ್ತಿದೆ ಅವನು ಬರಬಹುದು... ಎಲ್ಲಿಂದಲೋ ಬಂದ ಚಿಟ್ಟೆ ಗಲ್ಲಕೆ ಅರಿಶಿಣ ಹಚ್ಚಿ ಹೋಗಿದೆ ಅವನು ಬರಬಹುದು... ಸುಮ್ಮನೆ ಕೂತಿದ್ದರು ಕಾಲ್ಗೆಜ್ಜೆ ಘಲ್ ಎಂದು ಸದ್ದು ಮಾಡುತ್ತಿದೆ ಅವನು ಬರಬಹುದು... ಸುಡುವ ಬಿಸಿಲಲ್ಲಿ ಮಳೆ ಸುರಿದು ಭೂಮಿ ಘಮ್ ಎನ್ನುತ್ತಿದೆ ಅವನು ಬರಬಹುದು... ವಸಂತವಲ್ಲದಿದ್ದರು ಮಾಮರವೇರಿ ಕೋಗಿಲೆ ಕೂಹೂ ಕೂಗುತ್ತಿದೆ ಅವನು ಬರಬಹುದು... ಕಡಲ ಅಲೆಗಳೆಲ್ಲ ಸೇರಿ ಒಟ್ಟಾಗಿ ನಾವೆಯನ್ನು ತೀರ ಮುಟ್ಟಿಸುತ್ತಿವೆ ಅವನು ಬರಬಹುದು... ಇಳೆಯ ಎದೆಗೆ ಬಿದ್ದ ಇಬ್ಬನಿಗಳಿಗೆ ಬಯಲಲ್ಲಿ ಗರಿಕೆ ಮೊಳೆಯುತ್ತಿವೆ ಅವನು ಬರಬಹುದು... ಇರುಳು ಸುಳಿವ ಮುನ್ನವೇ ಚಂದ್ರ ಚುಕ್ಕಿಗಳೆಲ್ಲ ಮಿನುಗುತ್ತಿವೆ ಅವನು ಬರಬಹುದು... ಬೀಸಿದ ಗಾಳಿಗೆ ಉನ್ಮಾದಗೊಂಡು ತರುಲತೆಗಳೆಲ್ಲ ತೂಗುತ್ತಿವೆ ಅವನು ಬರಬಹುದು... ಮುಗಿಲ ಮಹಡಿಯ ಮೇಲೆ ಮೇಘಗಳು ಸೇರಿ ಪಿಸುಗುಟ್ಟುತ್ತಿವೆ ಅವನು ಬರಬಹುದು... ಕಣ್ಣಿಂದ ಮಿಡಿದ ಕಂಬನಿಗಳು ಕರಗಿ ಕಾಣೆಯಾಗುತ್ತಿವೆ ಅವನು ಬರಬಹುದು... ನಗೆಯ ದುಂಬಿ ಝೇಂಕರಿಸಿ ಕುಣಿದು ಹಾಡುತ್ತಿದೆ ಅವನು ಬರಬಹುದು... ಕೊಳಲಿಂದ ಹರಿದ ನಾದ ಸುಧೆ ವನವನ್ನು ರಮಿಸುತ್ತಿದೆ ಅವನು ಬರಬಹುದು... ಎಂದೂ ಇಲ್ಲದ ಮನವಿಂದು ದಾರಿ ಕಾಯುತ್ತಿದೆ ಅವನು ಬರಬಹುದು... ಮೊಹಬ್ಬತ್ತಿಗೆ ರೆಕ್ಕೆಗಳ ವರ ದಕ್ಕಿ ಮತ್ತೆ ಹಾರಲು ಹಾತೊರೆಯುತ್ತಿದೆ ಅವನು ಬರಬಹುದು... ನೆನಪಿಡು! ಅವನು ಬಂದ ಮೇಲೆ ಮತ್ತೆ ಕದವ ಮುಚ್ಚುವುದನ್ನು ಮರೆಯದಿರು ಮರಳಿ ಹೋಗಲು ಬಿಡದಿರು ಈಗಾಗಲೇ, ಅವನು ಹೊರಟಿರಬಹುದು ಬರುತ್ತಿರಬಹುದು...
*
ಜಬೀವುಲ್ಲಾ ಎಂ. ಅಸದ್ : ಇವರ ‘ಏಕಾಂಗಿಯ ಕನವರಿಕೆಗಳು’ ಕವನ ಸಂಕಲನಕ್ಕೆ 2020ರಲ್ಲಿ ಕರುನಾಡ ಕವಿ ಹಣತೆ ಬಳಗ(ರಿ)ದ ವಾರ್ಷಿಕ ಸಮ್ಮೇಳನದಲ್ಲಿ ಸಾಹಿತ್ಯ ಸಿರಿ ರತ್ನ ಪ್ರಶಸ್ತಿ ಲಭಿಸಿದೆ. 2020ರಲ್ಲಿ ಡಾ. ಅಶೋಕ್ ಪೈ ಸ್ಮರಣಾರ್ಥ ಆಯೋಜಿಸಲಾಗಿದ್ದ ಮನೋವೈಜ್ಞಾನಿಕ ಕಥಾ ಸ್ಪರ್ಧೆಯಲ್ಲಿ ಪ್ರಶಸ್ತಿ, ಗುರುಕುಲ ಕಲಾ ಕುಸುಮ ಪ್ರಶಸ್ತಿ, ಮೈಸೂರಿನ ಫೀನಿಕ್ಸ್ ಬುಕ್ಹೌಸ್ನ ರಾಜ್ಯಮಟ್ಟದ ನ್ಯಾನೋ ಕಥಾ ಸ್ಪರ್ಧೆಯಲ್ಲಿ ಪೀನಿಕ್ಸ್ ಪುರಸ್ಕಾರ, ಗುರುಕುಲ ಕಲಾ ಪ್ರತಿಷ್ಠಾನದ ವತಿಯಿಂದ ಗುರುಕುಲ ಶಿರೋಮಣಿ ಪ್ರಶಸ್ತಿ, 2021 ರಲ್ಲಿ ಕನ್ನಡ ನಗರ ಸಾಹಿತ್ಯ ಪರಿಷತ್ನಿಂದ ಕನ್ನಡ ಸೇವಾ ರತ್ನ ಪ್ರಶಸ್ತಿ ಲಭಿಸಿವೆ. ‘ಈ ತನಕ ತತ್ವಜ್ಞಾನ’ ಎಂಬ ಅಪ್ರಕಟಿತ ಕವನ ಸಂಕಲನದ ಹಸ್ತಪ್ರತಿ 2021 ನೇ ಸಾಲಿನ ಗುರುಕುಲ ಸಾಹಿತ್ಯ ಕೇಸರಿ ಪ್ರಶಸ್ತಿಗೆ ಆಯ್ಕೆಯಾಗಿದೆ.
ಪ್ರತಿಕ್ರಿಯೆಗಳಿಗಾಗಿ : tv9kannadadigital@gmail.com
*
ಇದನ್ನೂ ಓದಿ : Poetry : ಅವಿತಕವಿತೆ ; ಈ ಕೊಡದಿಂದ ಆ ಕೊಡಕ್ಕ ಜಿಗಿ ಅಂತೀ ಅದನ ಕ್ರಾಂತಿ ಅಂತ ಹ್ಯಾಂಗ್ ನಂಬಲಿ?