New Book : ಅಚ್ಚಿಗೂ ಮೊದಲು ; ಡಾ. ಜ್ಯೋತ್ಸ್ನಾ ಕಾಮತರ ‘ಕಲಕತ್ತಾ ದಿನಗಳು’ ಇದೇ ಭಾನುವಾರ ಬಿಡುಗಡೆ

New Book : ಅಚ್ಚಿಗೂ ಮೊದಲು ; ಡಾ. ಜ್ಯೋತ್ಸ್ನಾ ಕಾಮತರ ‘ಕಲಕತ್ತಾ ದಿನಗಳು’ ಇದೇ ಭಾನುವಾರ ಬಿಡುಗಡೆ
ಹಿರಿಯ ಲೇಖಕಿ, ಸಂಶೋಧಕಿ ಡಾ. ಜ್ಯೋತ್ಸ್ನಾ ಕಾಮತ

Jyothsna Kamath : ‘ಕಾದಿಟ್ಟ ನೆನಪುಗಳ ನನ್ನ ಕೊನೆಯ ಹಂತದ ಈ ಕೊಡುಗೆಯನ್ನು ಕನ್ನಡಿಗರು ಗುರುತಿಸಿಯಾರೇ? ಈ ಕೃತಿಗೆ ಪ್ರಕಾಶಕರು ಸಿಗುವುದೇ ಕಷ್ಟವಾಗಿದೆ' ಎಂದು 85ರ ಡಾ. ಜೋತ್ಸ್ನಾ ಕಾಮತ ಅವರು ಹೇಳಿದಾಗ ಅಚ್ಚರಿಯಾಯಿತು. ಅವರಂತಹ ಹಿರಿಯ ಲೇಖಕಿ ಮತ್ತು ವಿದ್ವಾಂಸರ ಕೃತಿಗಳ ಪ್ರಕಟಣೆಗೂ, ಸಮಸ್ಯೆಗಳಿವೆ ಎಂಬುದೇ ವಿಸ್ಮಯ ಮತ್ತು ವಿಷಾದದ ವಿಷಯ.’ ನೇಮಿಚಂದ್ರ

ಶ್ರೀದೇವಿ ಕಳಸದ | Shridevi Kalasad

|

Jan 28, 2022 | 3:59 PM

Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ‘ಅಚ್ಚಿಗೂ ಮೊದಲು’ ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

*

ಕೃತಿ : ಕಲಕತ್ತಾ ದಿನಗಳು
ಲೇಖಕರು : ಡಾ. ಜ್ಯೋತ್ಸ್ನಾ ಕಾಮತ
ಪುಟ  : 296
ಬೆಲೆ : ರೂ. 295
ಮುಖಪುಟ ವಿನ್ಯಾಸ : ಅಪಾರ 
ಪ್ರಕಾಶನ : ಅಂಕಿತ ಪುಸ್ತಕ, ಬೆಂಗಳೂರು

*

ಇದೇ ಭಾನುವಾರ (ಜ.30) ಬೆಳಗ್ಗೆ 11ಕ್ಕೆ ಆನ್​ಲೈನ್​ ಮೂಲಕ ಈ ಕೃತಿ ಬಿಡುಗಡೆಯಾಗಲಿದೆ. ಜ್ಯೋತ್ಸ್ನಾ ಅವರ ನೆನಪುಗಳು ಕೃತಿರೂಪಕ್ಕೆ ಬರುತ್ತಿರುವ ಹಿನ್ನೆಲೆಯನ್ನು ಲೇಖಕಿ ನೇಮಿಚಂದ್ರ ಅತ್ಯಂತ ಮಾರ್ಮಿಕವಾಗಿ ಬಿಚ್ಚಿಟ್ಟಿದ್ದಾರೆ. ಹಾಗೆಯೇ ‘ಜುಡಿಥ್ ಪಾರ್ಕರ್​’ ಬಗ್ಗೆ ಜ್ಯೋತ್ಸ್ನಾ ಅವರು ಬರೆದ ಬರಹವನ್ನೂ ನೀವಿಲ್ಲಿ ಓದಬಹುದು.

*

ಕಲ್ಪಿಸಿಕೊಳ್ಳಿ, 1960ರ ದಶಕದಲ್ಲಿ ಓರ್ವ ಹೆಣ್ಣುಮಗಳು, ಕೇಂದ್ರ ಸರಕಾರದ ಕೆಲಸ ಹಿಡಿದು, ಪತಿ ಮತ್ತು ಪುತ್ರನನ್ನು ಬಿಟ್ಟು, ಎರಡು-ಮೂರು ವರ್ಷಕ್ಕೆ ವರ್ಗ ಮಾಡಿದಲ್ಲಿಗೆಲ್ಲ, ಭಾರತದ ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮಕ್ಕೆ ಹೋಗಿ, ಕೆಲಸ ನಿಭಾಯಿಸುತ್ತಾಳೆ. ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ಪದವಿ ಪಡೆದು, ಅಲ್ಲಿಯ ಅವಕಾಶಗಳನ್ನೆಲ್ಲ ತೊರೆದು, ಭಾರತದಲ್ಲಿಯೇ ನೆಲೆಸಬೇಕು ಎಂದು ಬಂದ ಆಕೆಯ ಪತಿ, ಪತ್ನಿಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ. ಸಾವಿರಾರು ಮೈಲಿಗಳ ಅಂತರದಲ್ಲಿ ಅಗಲಿ ನಿಂತ ಈ ದಂಪತಿಗಳ ನಡುವೆ, ದಿನಕ್ಕೊಂದು ಪತ್ರ ಹರಿದು ಬಂದು, ಪ್ರೀತಿಯ ಸೇತುವೆಯಾಗುತ್ತದೆ, ಬದುಕಿನ ದಾಖಲೆಯಾಗುತ್ತದೆ.

ಕನ್ನಡದ ಹಿರಿಯ ಲೇಖಕಿ, ಸಂಶೋಧಕಿ, ಆಕಾಶವಾಣಿಯ ನಿವೃತ್ತ ಕೇಂದ್ರ ನಿರ್ದೇಶಕಿ ಡಾ. ಜ್ಯೋತ್ಸ್ನಾ ಕಾಮತ ಅವರು, 1977ರಿಂದ 1980ರ ವರೆಗಿನ ವರ್ಷಗಳನ್ನು ಕಲಕತ್ತೆಯಲ್ಲಿ ಕಳೆದರು. ನಿಖರವಾಗಿ ದಾಖಲಿಸಿಟ್ಟ ದಿನಚರಿ ಮತ್ತು ಪತ್ರಗಳು, ಅವನ್ನು 40 ವರ್ಷಗಳಿಗೆ ಮೀರಿ ಕಾಪಿಟ್ಟದ್ದು, ಇಂದು ‘ಕಲಕತ್ತಾ ದಿನಗಳಾಗಿ’ ನಮ್ಮ ಕೈಯಲ್ಲಿದೆ. ಈ ಹೊತ್ತಿಗೆಯನ್ನು ಓದುತ್ತಿದ್ದಂತೆ, ಕಾಲಯಂತ್ರದಲ್ಲಿ ಕುಳಿತು ಇತಿಹಾಸಕ್ಕೆ ಭೇಟಿ ಇತ್ತ ರೋಮಾಂಚನದ ಅನುಭವ! ಬಂಗಾಲದ ನೆಲದಲ್ಲಿ ಅಪರೂಪದ ಸಾಧಕರನ್ನು ಭೆಟ್ಟಿಯಾದವರು ಇವರು. ವಿಸ್ಮೃತಿಗೆ ಸರಿದ ಘಟನೆಗಳನ್ನು, ಧೀಮಂತ ವ್ಯಕ್ತಿಗಳನ್ನು ಡಾ.ಜ್ಯೋತ್ಸ್ನಾ ಜೀವಂತವಾಗಿಸಿದ್ದಾರೆ. ಕಲಕತ್ತೆಯ ಸ್ಮಶಾನಗಳಲ್ಲೂ ಅಲೆದಾಡಿ, 18ನೇ ಶತಮಾನದ ಗೋರಿಗಳು ಹೇಳುವ ಕತೆಗಳನ್ನು ಸೆರೆಹಿಡಿದಿದ್ದಾರೆ. ಅಧ್ಯಯನಶೀಲ ಮನಸ್ಸಿನ ಸೂಕ್ಷ್ಮ ಅವಲೋಕನ, ಓರ್ವ ಸಂಶೋಧಕಿಯ ಕುತೂಹಲದ ನೋಟವನ್ನಷ್ಟೆ ಅಲ್ಲ, ಇಲ್ಲಿ ನಾವು ಅವರ ಸಿಹಿ ಮನಸ್ಸಿನ, ಸದಾ ನಗುವಿನ, ವಿನೋದ ಸ್ವಭಾವದ, ಲವಲವಿಕೆಯ ಅನುಭವ ಕಥನವನ್ನು ಕಾಣುತ್ತೇವೆ. ನಮ್ಮ ನಡುವಿನ ಹಿರಿಯ ಚೇತನ ಇವರು. ಕಳೆದು ಹೋದ ಚರಿತ್ರೆಗೆ ಕೊಂಡಿಯಾಗಿದ್ದಾರೆ.

Acchigoo Modhalu excerpt of Judith Parker from Kalakatta Dinagalu by Senior Writer Dr Jyothsna Kamath Published by Ankita Pustaka

ಡಾ. ಜ್ಯೋತ್ಸ್ನಾ ಕಾಮತ ಪತಿ ಕೃಷ್ಣಾನಂದ ಕಾಮತರೊಂದಿಗೆ

2021ರ ನವೆಂಬರ್ ತಿಂಗಳು, ಜ್ಯೋತ್ಸ್ನಾ ಅವರ ಆರೋಗ್ಯವನ್ನು ವಿಚಾರಿಸಲು ಅವರ ಮನೆಗೆ ಹೋಗಿದ್ದೆ. ಆಗಲೇ ಅವರು 1970ರ ದಶಕದಲ್ಲಿ, ಕಲಕತ್ತೆಯಲ್ಲಿ ಇದ್ದ ಸಮಯದಲ್ಲಿ ಡೈರಿ ಬರೆದಿಟ್ಟದ್ದು, ಪ್ರತಿ ದಿನ ಪತಿ-ಪತ್ನಿಯರ ನಡುವೆ ಸರಿದಾಡಿದ ಪತ್ರಗಳನ್ನು ಕಾದಿರಿಸಿದ್ದು ಅರಿವಾಯಿತು. ‘ಅವನ್ನು ಏನು ಮಾಡುವುದು, ನಾಶ ಮಾಡಲು ಮನಸ್ಸಾಗುವುದಿಲ್ಲ’ ಎಂದವರಿಗೆ, ‘ಮೇಡಂ, ಪುಸ್ತಕ ಬರೆಯಿರಿ’ ಎಂದು ಉತ್ಸಾಹದಿಂದ ಹೇಳಿದ್ದೆ. ಅದಾಗಲೇ ಅವರು ‘ಕಲಕತ್ತಾ ದಿನಗಳು’ ಬರೆದಿರುವುದು ತಿಳಿದು ಬಂದಿತು. ‘ಇಳಿವಯಸ್ಸು, ಕುಗ್ಗುತ್ತಿರುವ ಆರೋಗ್ಯದ ನಡುವೆ, ಕಲಕತ್ತೆಯಿಂದ ಹಿಂತಿರುಗಿ ಬಂದ ನಾಲ್ಕು ದಶಕಗಳ ನಂತರ, ಬಂಗಾಲದ ವಾಸ್ತವ್ಯದಲ್ಲಿ ಹೇರಳವಾಗಿ ದೊರೆತ ಬಿಡುವಿನಲ್ಲಿ, ಆಗಾಗ ಗೀಚಿ ಇಟ್ಟ ಬರಹಕ್ಕೊಂದು ಗ್ರಂಥರೂಪ ಕೊಟ್ಟಿದ್ದೇನೆ. ಕಾದಿಟ್ಟ ನೆನಪುಗಳ ನನ್ನ ಕೊನೆಯ ಹಂತದ ಈ ಕೊಡುಗೆಯನ್ನು ಕನ್ನಡಿಗರು ಗುರುತಿಸಿಯಾರೇ? ಈ ಕೃತಿಗೆ ಪ್ರಕಾಶಕರು ಸಿಗುವುದೇ ಕಷ್ಟವಾಗಿದೆ’ ಎಂದು ಅವರು ಹೇಳಿದಾಗ, ನನಗೆ ಅಚ್ಚರಿಯಾಯಿತು. ಡಾ. ಜೋತ್ಸ್ನಾ ಅವರಂತಹ ಹಿರಿಯ ಲೇಖಕಿ ಮತ್ತು ವಿದ್ವಾಂಸರ ಕೃತಿಗಳ ಪ್ರಕಟಣೆಗೂ, ಸಮಸ್ಯೆಗಳಿವೆ ಎಂಬುದೇ ವಿಸ್ಮಯ ಮತ್ತು ವಿಷಾದದ ವಿಷಯ.

ನೇಮಿಚಂದ್ರ, ಲೇಖಕಿ, 

*

ಜುಡಿಥ್ ಪಾರ್ಕರ್

ದಿನಾಂಕ 2, ಜುಲೈ 1978ರ ರವಿವಾರ, ನಿವಾಸದಲ್ಲಿ ವಿಶೇಷ ಊಟ ಇತ್ತು. ಪೂರಿ, ಆಮ್‌ರಸ, ಮಸಾಲಾ ಭಾತ್, ಕೋಸಂಬರಿ, ಆಲೂಪಲ್ಯಗಳ ಊಟ ಮುಗಿಸಿ ಅಡ್ಡಾಗಿದ್ದೆ. ಬಾಗಿಲು ತಟ್ಟಿದ ಸದ್ದಾಯಿತು. ಎದ್ದು ನೋಡಿದಾಗ, 30 ವರ್ಷ ದಾಟಿರಬಹುದಾದ ಪ್ರಯಾಣಿಕರ ಉಡುಪಿನಲ್ಲಿದ್ದ ತರುಣಿ, “ನೀವು ಶ್ರೀಮತಿ ಕಾಮತರೇ? ರೂಮು ಖಾಲಿಯಿಲ್ಲವಂತೆ. ಒಂದು ರಾತ್ರಿ ನಿಮ್ಮ ರೂಮಿನಲ್ಲಿರಲು ಮ್ಯಾನೇಜರ್ ಹೇಳಿದ್ದಾರೆ. ನಿಮಗೆ ಅಡ್ಡಿಯಿಲ್ಲವಷ್ಟೇ?” ಎಂದಳು. ‘ಖಂಡಿತ ಇಲ್ಲ’ವೆಂದೆ. ಖಾಲಿಯಿದ್ದ ಮಂಚಕ್ಕೆ ತನ್ನ ಸಾಮಾನು ವರ್ಗಾಯಿಸಿದಳು. ನೇಪಾಳವನ್ನು ಸುತ್ತಾಡಿ ಬಂದಿದ್ದಾಳೆ. ಮರುದಿನ ತನ್ನೂರಾದ ಮುಂಬೈಗೆ ಹಾರಲಿದ್ದಳು. ಅಲ್ಲಿ ಟಾಟಾ ಸಂಸ್ಥೆಯ ಎಮ್.ಎಸ್.ಡಬ್ಲ್ಯೂ ಮುಗಿಸಿದಾಕೆಯೆಂದು ತಿಳಿಯಿತು.

ಸ್ನಾನ ಮುಗಿಸಿ ಬಂದಾಕೆ ಪರಿಚಯಿಸಿಕೊಂಡಳು. ತಾನು ಭಾರತ ವಾಸಿಗಳಾದ ಯಹೂದಿ ವಂಶದವಳು. ಜುಡಿಥ್ ಪಾರ್ಕರ್ ಇಸ್ರೇಲಿನಲ್ಲಿ ಮೂರು ವರ್ಷ ಇದ್ದಳು. ‘ಅಲ್ಲಿಂದ ನ್ಯೂಯಾರ್ಕ್​ಗೆ ಹೋದೆ. ಇನ್ನೂ ಒಂದೆರಡು ರಾಜ್ಯಗಳಿಗೆ ಹೋಗಿ ಇದ್ದು, ಸರಿ ಬರದೇ ಇಸ್ರೇಲಿನಲ್ಲೇ ಇರುವುದೆಂದು ನಿಶ್ಚಯಿಸಿದೆ’ ಎಂದಳು. ತುಂಬ ಗೆಲುವಿನ ವ್ಯಕ್ತಿತ್ವ, ಅಂದವಾಗಿ ಇಂಗ್ಲೀಷ್ ಮಾತನಾಡುತ್ತಿದ್ದಳು. ಚರಿತ್ರೆಯ ವಿದ್ಯಾರ್ಥಿನಿಯಾಗಿ ಯಹೂದಿ ಜನರ ಇತಿಹಾಸ, ಬಹುಸಂಖ್ಯಾತ ಕ್ರೈಸ್ತರ ನಾಡುಗಳಲ್ಲಿ ಅವರ ಕುರಿತ ಅನಾದರ ಗೊತ್ತಿತ್ತು. ಅವರ ಉತ್ಕಟ ದೇಶಪ್ರೇಮ, ನಾಝಿಗಳ ಯಹೂದಿ ದ್ವೇಷದ ಈಗಲೂ ಘಾಸಿಗೊಳಿಸುವ ಸತ್ಯಕಥೆಗಳನ್ನು ಕೆಲಮಟ್ಟಿಗೆ ಬಲ್ಲವಳಾಗಿದ್ದೆ. ಹೀಗಾಗಿ ಸಮಕಾಲೀನ ಇಸ್ರೇಲ್ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಇದೊಂದು ಸುವರ್ಣಾವಕಾಶ! ಎಂದು ಖುಷಿಪಟ್ಟೆ. ಆಕೆ ಇದ್ದದ್ದು ಇಸ್ರೇಲಿನ ಟೆಲ್ ಆವೀವ್‌ದಿಂದ 65 ಮೈಲಿದೂರದ ಆರಾಧ್‌ದಲ್ಲಿ. ಮರಳುಗಾಡಿನ ಮಧ್ಯೆ ಹೊಸದಾಗಿ ಕಟ್ಟಿದ ಪುಟ್ಟನಗರ. ಅಲ್ಲಿಯ ಆರೋಗ್ಯಧಾಮದ ಮೇಲ್ವಿಚಾರಕಿಯ ಕೆಲಸ ಮಾಡುತ್ತಿದ್ದಳು. ‘ಅಮೇರಿಕೆಯಿಂದ, ಪೂರ್ವ ಯುರೋಪದಿಂದ ಬಂದು ನೆಲೆಸಿದ ಜ್ಯೂ (ಯಹೂದಿ) ಜನರೇ ಹೆಚ್ಚು ಸಂಖ್ಯೆಯಲ್ಲಿ ಇದ್ದಾರೆ. ಅರಬ್ ಬೆಡೊಯಿನ್‌ರೂ ಕಾಣಸಿಗುತ್ತಾರೆ. ಸ್ವಂತ ಪ್ರೇರಣೆಯಿಂದ ಸಕಲ ಸೌಕರ್ಯಗಳನ್ನು, ಸಿರಿವಂತಿಕೆಯನ್ನು ರೂಢಿಸಿಕೊಂಡವರೂ ಅಲ್ಲಿದ್ದಾರೆ!’ ನನ್ನ ಪ್ರಶ್ನೆಗೆ ಜುಡಿಥ್ ಉತ್ತರಿಸಿದಳು. ಅಲ್ಲಿ ನೆಲೆಸಿದ ಭಾರತೀಯ ಯಹೂದಿಗಳ ಬಗ್ಗೆ ನನಗೆ ಹೆಚ್ಚು ಕುತೂಹಲವಿತ್ತು. ಆಗಲೇ 30 ಸಾವಿರಕ್ಕೂ ಮಿಕ್ಕಿದ ಯಹೂದಿಗಳು, ಮಹಾರಾಷ್ಟ್ರ ಮತ್ತು ಕೇರಳಗಳಿಂದ ತಮ್ಮ ಪ್ರಾಚೀನ ನಾಡಿನಲ್ಲಿ ನೆಲೆಸಿದ್ದರಂತೆ! ಅವರೆಲ್ಲರ ಪರಸ್ಪರ ಹೊಂದಾಣಿಕೆಯ ಬಗ್ಗೆ ವಿಚಾರಿಸಿದೆ.

“ಜೀ, ಅವರೆಲ್ಲ ಭಾರತೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡವರಲ್ಲವೇ? ಎಷ್ಟೊಂದು ಸಂಪ್ರದಾಯ ಪ್ರಿಯರೆಂದರೆ ಈ ಹೊಸನಾಡಿನಲ್ಲೂ ತಮ್ಮದೇ ವಸಾಹತುಗಳನ್ನು ನಿರ್ಮಿಸಿಕೊಂಡು, ಮರಾಠೀ ಅಥವಾ ಮಲಯಾಳಂ ಮಾತನಾಡುತ್ತಾರೆ. ತಮ್ಮದೇ ಊಟ-ತಿಂಡಿ ವಾಸ್ತವ್ಯದ ವೈಶಿಷ್ಟ್ಯಗಳನ್ನು ಪಾಲಿಸುತ್ತಾರೆ. ಮಸಾಲೆಯಡಿಗೆ, ಭಾರತೀಯ ಚಿತ್ರಪಟ, ಸಂಗೀತಗಳು ಇಲ್ಲದೇ ಬೆಳಗಾಗದು! ಭಾರತೀಯ ಆಗಂತುಕರಿಂದಾಗಿ ಇಸ್ರೇಲಿಗಳು ಭಾರತೀಯ ಅಡಿಗೆ ಇಷ್ಟಪಡಲಾರಂಭಿಸಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಕೊತ್ತಂಬರಿ ಸೊಪ್ಪು, ಕರಬೇವು ಕೂಡ ಬೆಳೆಯಲಾರಂಭಿಸಿದ್ದಾರೆ! ಆದರೆ ನೋಡಿ, ಭಾರತೀಯ ಮತ್ತು ಪೋಲಿಷ್ ಅಥವಾ ಟ್ಯೂನಿಷಿಯದ ಯಹೂದಿಗಳ ನಡುವೆ ವಿವಾಹ ಸುಲಭವಾಗಿ ನಡೆಯದು. ಅಷ್ಟೇ ಏಕೆ? ಭಾರತೀಯ ಜ್ಯೂಗಳಲ್ಲೂ ಕೂಡ ಅಂತರ್‌ವಿವಾಹ ವಿರಳ. ಭಾಷೆ ಊಟ ಉಡಿಗೆ ತೀರ ಬೇರೆ. ಹೊಂದಾಣಿಕೆ ಸಾಧ್ಯವಿಲ್ಲ!” ಜುಡಿಥ್ ನಿಟ್ಟುಸಿರು ಬಿಟ್ಟಳು.

ಇದು ನನಗೆ ವಿಚಿತ್ರವೆನಿಸಲಿಲ್ಲ. ಧರ್ಮ, ಊಟ, ಭಾಷೆ, ದೇವರ ಪೂಜಾವಿಧಿಗಳು ಒಂದೇ ಇದ್ದು, ಶಿಕ್ಷಣ, ವೃತ್ತಿ, ಒಲವು-ನಿಲುವುಗಳು ಒಂದೇ ಆಗಿದ್ದರೂ, ಮಹಾನಗರಗಳ ಭಾರತೀಯ ಸಮೂಹಗಳ ನಡುವೆಯೂ ಮಿಶ್ರವಿವಾಹಗಳು ಅಪರೂಪ! ಹೀಗಿದ್ದಾಗ, ಕೇವಲ ಧರ್ಮಮಾತ್ರ ಒಂದೇ ಆಗಿ, ಭಾಷೆ, ಊಟತಿಂಡಿ, ರೀತಿರಿವಾಜುಗಳಲ್ಲಿ ಶತಶತಮಾನಗಳಿಂದ ಬೇರ್ಪಟ್ಟ ಹಲವು ಗುಂಪುಗಳು, ತಮ್ಮ ನಾಡು, ತಮ್ಮ ಧರ್ಮ, ಇತ್ತೀಚೆಗಷ್ಟೆ ಇಸವಿ 1948ರಲ್ಲಿ ರೂಪಗೊಂಡ ನೆಲದಲ್ಲಿ ಒಟ್ಟಾಗಿ ಬಾಳುವುದು ಕಷ್ಟದ್ದೇ!

Acchigoo Modhalu excerpt of Judith Parker from Kalakatta Dinagalu by Senior Writer Dr Jyothsna Kamath Published by Ankita Pustaka

ಜ್ಯೋತ್ಸ್ನಾ ಅವರ ಕೃತಿಗಳು

ಪಾಶ್ಚಾತ್ಯರಿಗೆ ಅರ್ಥವಾಗದ ವೈವಿಧ್ಯದಲ್ಲಿ ಏಕರೂಪತೆ ಅಥವಾ ಸ್ವಂತಿಕೆ ಸಾಧಿಸಿದ್ದು ಭಾರತೀಯರು ಮಾತ್ರ ಎಂದು ನಾವಿಬ್ಬರೂ ಒಪ್ಪಿಕೊಂಡೆವು! “ಒಮ್ಮೊಮ್ಮೆ ಅನಿಸುತ್ತದೆ, ಧರ್ಮದ ಒಂದೇ ಬಂಧನ ದೀರ್ಘಕಾಲ ಭಿನ್ನ ವಾತಾವರಣದಲ್ಲಿ ಬೆಳೆದವರನ್ನು ಆಕಸ್ಮಿಕವಾಗಿ ಬೆಸೆಯಲಾರದು. ಸುಮಾರು 30 ದೇಶಗಳಿಂದ (ಆಗಿನ್ನೂ ಸೋವಿಯಟ್ ರಷ್ಯ ವಿಭಜಿಸಲ್ಪಟ್ಟಿರಲಿಲ್ಲ) ತನ್ನ ನಾಡು, ತನ್ನ ಜನ ಎಂದು ಹಂಬಲಿಸಿ ಬಂದ ಜನರೆಲ್ಲ ಸೇರಿಕೊಂಡು ಹೊಸನಾಡನ್ನು ಕಟ್ಟಿದ್ದಾರಲ್ಲ, ಅದು ವಿರಳ. ಅತ್ಯಂತ ವಿರಳವಾದ ವಿಶ್ವಘಟನೆ” ನಾನೆಂದೆ.

“ಇಲ್ಲಿಂದ ಹೋದ ಭಾರತೀಯರು ಸುಖವಾಗಿದ್ದಾರೆಯೇ?” ಕೇಳಿದೆ.

“ಎಳೆಯರು, ವಲಸೆ ಹೋದ ಬಳಿಕ ಹುಟ್ಟಿದ ತರುಣ ಜನಾಂಗದವರೆಲ್ಲ, ಇತರ ಇಸ್ರೇಲಿಗಳಂತೆಯೇ ಬೆಳೆಯುತ್ತಿದ್ದಾರೆ. ಹೀಬ್ರೂ ಭಾಷೆ ರೂಢಿಸಿಕೊಂಡಿದ್ದಾರೆ. ಆದರೆ ಹಳಬರು, ಹಿರಿಯರು ಅಲ್ಲಿಯ ನೆಲದ ಗುಣ-ಹವಾಗಳಿಗೆ ಹೊಂದಿಕೊಳ್ಳಲಾಗದೇ ಕಷ್ಟಪಡುತ್ತಿದ್ದಾರೆ. ನಮ್ಮ ಕೊಂಕಣ ಕರಾವಳಿಯಿಂದ ವಲಸೆ ಹೋದವರೇ ಇದ್ದಾರಲ್ಲ, ಅವರೆಲ್ಲ ಮುಖ್ಯತಃ ಕೃಷಿಕರಿದ್ದರು. ಅವರೆಲ್ಲರ ನೆಲ-ಜಲಕ್ಕೆ ಸಹಸಾ ಸಂಬಂಧಬಾರದ ಮರಳುಗಾಡಿನ ಪ್ರದೇಶ ಅದು! ಅಲ್ಲಿ ಏನು ವೃತ್ತಿ ತಾನೆ ಕೈಕೊಳ್ಳಲು ಸಾಧ್ಯವಿತ್ತು? ಆದರೆ ದೈಹಿಕ ಶ್ರಮಕ್ಕೆ ಇಸ್ರೇಲ್‌ನಲ್ಲಿ ಬೇಡಿಕೆ ಬಹಳ! ಕೈಗೆಲಸವನ್ನು ಗೌರವಿಸುತ್ತಾರೆ. ಪ್ರತಿಫಲವೂ ಬೇಕಾದಷ್ಟಿದೆ. ಡೊಕ್‌ನಲ್ಲಿ, ಯಾರ್ಡ್​ಗಳಲ್ಲಿ ಬೇರೆಬೇರೆ ಕಾರ್ಮಿಕ ರಂಗದವರು, ತೋಳ ಬಲದಿಂದ ಬದುಕುವವರು, ಬಲುಬೇಗ ಹಣಗಳಿಸುತ್ತಾರೆ. ಕೆಲವೇ ವರ್ಷಗಳಲ್ಲಿ ಕೂಡಿಟ್ಟ ಹಣದಿಂದ ಜಮೀನು, ಮನೆ ಕೊಂಡು, ಸಾಧ್ಯವಿದ್ದಲ್ಲಿ, ಕೃಷಿಯನ್ನೂ ಮಾಡುತ್ತಲೋ, ಇತರ ಸ್ವಂತ ಉದ್ಯೋಗ ಮಾಡುತ್ತಲೋ ಮುಂದುವರಿಯುತ್ತಿದ್ದಾರೆ. ಭಾರತಕ್ಕಿಂತ ಅಲ್ಲಿ ಇಂಥ ವರ್ಗಕ್ಕೆ ಉದ್ಯೋಗಾವಕಾಶಗಳು ಬಹಳ” ಜುಡಿಥ್ ವಿವರಿಸಿದಳು.

“ಆದರೆ ಹಳೆ ತಲೆಮಾರಿನವರು ಅಲ್ಲಿ ಒಂಟಿತನ ಅನುಭವಿಸುತ್ತಾರೆ. ಶತಶತಮಾನ ಗಳ ವಾಸದಿಂದ ಭಾರತೀಯ ಯಹೂದಿಗಳು, ಭಾರತೀಯತೆಯ ಮುಖ್ಯ ಅಂಗವಾದ ಕೂಡುಕುಟುಂಬ ಪದ್ಧತಿಯನ್ನು ತಮ್ಮದಾಗಿಸಿಕೊಂಡು ಬಿಟ್ಟಿದ್ದರು! ಹಿರಿಯರನ್ನು ಕುರಿತ ಗೌರವ, ಮನ್ನಣೆಗಳು ಈ ಹೊಸ ನಾಡಿನ ಸಂಸ್ಕೃತಿಯಲ್ಲಿ ಬಲುಬೇಗ ಕಣ್ಮರೆಯಾದವು. ನನ್ನ ಪರಿಚಯದ ಸಾಕಷ್ಟು ಹಳಬರು ಭಾರತಕ್ಕೆ ಹಿಂದಿರುಗಲು ಹಲುಬುತ್ತಿರುತ್ತಾರೆ. ವೃಥಾ ಯತ್ನಿಸುತ್ತಾರೆ. ಆದರೆ ಯುವಜನಾಂಗ ಅಲ್ಲಿ ಚೆನ್ನಾಗಿ ಹೊಂದಿಕೊಂಡಿದೆ!”

“ಭಾರತದಲ್ಲಿ ಯಾವ ಕಾಲದಲ್ಲೂ ನಮ್ಮ ಜನರನ್ನು ಯಾವ ಪ್ರದೇಶದವರೂ ಭೇದಭಾವದಿಂದ ನಡೆಸಿಕೊಳ್ಳಲಿಲ್ಲ! ನಮ್ಮ ಜನಾಂಗ ಎಂದೂ, ಇತರ ಖಂಡಾಂತರಗಳ ಜನರಂತೆ ಹಿಂಸೆಯನ್ನು ಎದುರಿಸಬೇಕಾಗಿ ಬರಲಿಲ್ಲ. ಈ ನೆಲದೊಂದಿಗೆ ಒಂದಾಗಿ ಬದುಕಿದೆವು” ಜುಡಿಥ್ ಮನದುಂಬಿ ನುಡಿದಳು. ನಿಜ! ಐತಿಹಾಸಿಕ ಸತ್ಯವನ್ನು ಹೆಮ್ಮೆಯಿಂದ ನೆನಪಿಸಿಕೊಂಡೆ!

“ಆದರೆ ಭಾರತದಲ್ಲಿ ಈಗ ಪರಿಸ್ಥಿತಿ ಬದಲಾಗಿದೆ! ಇಲ್ಲಿಯವರಿಗೇ ಸರಿಯಾದ ನೌಕರಿಗಳು ಸಿಗುತ್ತಿಲ್ಲ. ಇನ್ನು ಇಸ್ರೇಲಿಗೆ, ತಾವಾಗಿ ಹೋಗಿ ಈಗ ಭಾರತಕ್ಕೆ ವಾಪಸ್ಸಾಗಲು ಬಯಸುವ ನಿರ್ವಾಸಿ ಆಗಂತುಕರಿಗಂತೂ ಯಾವ ಸೌಕರ್ಯಗಳೂ ದೊರೆಯುವದು ಸಾಧ್ಯವಿಲ್ಲ. ಇನ್ನು ದಿನಗಳೆದ ಇಸ್ರೇಲ್‌ನಲ್ಲಿ ಹಳಬರಿಗಂತೂ ಹೊಸ ಮೌಲ್ಯಗಳನ್ನು ರೂಢಿಸಿಕೊಳ್ಳುವದು ಬಲು ಕಷ್ಟ!” ಜುಡಿಥ್ ನುಡಿದಳು.

ನಾನು ಪ್ರಶ್ನಾರ್ಥಕವಾಗಿ ನೋಡಿದೆ.

“ನಮ್ಮ ಕುಟುಂಬದವರನ್ನೇ ನೋಡಿ! ನಾನು, ನಮ್ಮಕ್ಕ, ನನ್ನ ಸಹೋದರ, ಮೂವರೂ ಇಸ್ರೇಲಿನಲ್ಲಿ ಕೆಲಸದಲ್ಲಿದ್ದೆವು. ನಾನು ಮೊದಲಿಗೆ ರಾಷ್ಟ್ರೀಯ ವಿಮಾ ಯೋಜನೆಯಲ್ಲಿ ಸೇರಿಕೊಂಡೆ. ಅದರ ಭಾಗವಾಗಿ ಸಾಮಾಜಿಕ ಕಾರ್ಯಕರ್ತೆಯಾಗಿ ದೇಶದಾದ್ಯಂತ ತಿರುಗಿದೆ. ನಮ್ಮಕ್ಕ ಕೂಡ ಇದೇ ಇಲಾಖೆಯಲ್ಲಿದ್ದಾಳೆ. ಸೋದರ ಇಂಜಿನಿಯರ್, ಇಸ್ರೇಲಿನಲ್ಲಿ ತರುಣರಿಗೆಲ್ಲ ಕಡ್ಡಾಯವಾಗಿರುವ ಸೈನ್ಯದ ತರಬೇತಿ ಮುಗಿಸಿ ಈಗ ಮಿಲಿಟರಿಯಲ್ಲಿ ಇದ್ದಾನೆ.

ನಮ್ಮ ವೃದ್ಧ ತಾಯ್ತಂದೆಯರು ಇಲ್ಲಿ ಭಾರತದಲ್ಲಿ ಇದ್ದಾರೆ. ಅವರು ಇಸ್ರೇಲಿಗೆ ಬರಲು ಉತ್ಸುಕರಿಲ್ಲ. ನಾವು ಅವರಿಬ್ಬರನ್ನೇ ಇಲ್ಲಿ ಬಿಡಲು ತಯಾರಿಲ್ಲ! ನಮ್ಮ ತಂದೆ ಕೆಮಿಸ್ಟ್ ಆಗಿ ಒಳ್ಳೆಯ ಕಂಪನಿಯೊಂದರಲ್ಲಿ ಉನ್ನತ ಸ್ಥಾನದಲ್ಲಿದ್ದವರು. ಇಸ್ರೇಲಿನಲ್ಲಿ, ಅಮೇರಿಕ ಯುರೋಪ್, ರಷ್ಯಗಳಿಂದ ಬಂದ ಈ ವೃತ್ತಿಯ ಅನೇಕ ಜನ ಸಿಗುತ್ತಾರೆ. ಹೀಗಾಗಿ ನಮ್ಮ ತಂದೆಯವರಿಗೆ ಬೇಡಿಕೆ ಇರದಿರಬಹುದು. ಅವರು, ಅಲ್ಲಿ ಹೋದರೆ ಗಾರ್ಡನಿಂಗ್ ಅಥವಾ ಹಗುರವಾದ ಇತರ ಕೈ ಕೆಲಸಗಳನ್ನು ಮಾಡಬೇಕಾಗುತ್ತದೆ. ಹೇರಳ ದಿನಗೂಲಿಯೇನೋ ಲಭ್ಯ. ಆದರೆ ಸ್ವತಃ ನಾವೇ ನಮ್ಮ ತಂದೆ ಆ ಕೆಲಸಗಳನ್ನು ಮಾಡುವದನ್ನು ಸಹಿಸಲಾರೆವು! ಇದು ನಮ್ಮ ಸಂಸ್ಕಾರ ದೋಷವಿರಬಹುದು! ನಮ್ಮ ತಂದೆ, ನಿವೃತ್ತಿಯ ಬಳಿಕ ಬೇರೊಂದು ಕೆಲಸವನ್ನು ಮುಂಬೈಯಲ್ಲಿ ಹಿಡಿದಾಗ, ನಾನೂ ಇಸ್ರೇಲಿನ ನೌಕರಿ ಬಿಟ್ಟು ಇಲ್ಲಿ ಬಂದೆ. ಈಗ ಇನ್ನೂ ಕೆಲಸ ಹುಡುಕುತ್ತಲೇ ಇದ್ದೇನೆ!” ವಿಷಾದದ ನಗೆಯೊಂದಿಗೆ ಜುಡಿಥ್ ನುಡಿದಳು.

Acchigoo Modhalu excerpt of Judith Parker from Kalakatta Dinagalu by Senior Writer Dr Jyothsna Kamath Published by Ankita Pustaka

ಜ್ಯೋತ್ಸ್ನಾ ಅವರ ಕೃತಿಗಳು

ಈ ಹಿಂದೆ, ಇಸ್ರೇಲಿ ಜನರ ಸಾಮೂಹಿಕ ಜೀವನದ ಕೇಂದ್ರಗಳಾಗಿದ್ದ ಕೀಬೂತ್‌ಗಳ ಬಗ್ಗೆ ಓದಿದ್ದೆ. ಸುಮಾರು 1920ರಿಂದ ಆ ಮರುಭೂಮಿಯಲ್ಲಿ ಪ್ರಾಯೋಗಿಕವಾಗಿ ಸಹಕಾರಿ ವಸತಿ ಯೋಜನೆ, ಉದ್ಯೋಗ-ಊಟ-ಉಡಿಗೆ ಇತರ ಸಾಂಘಿಕ ಚಟುವಟಿಕೆ ಗಳ ಕೇಂದ್ರವಾಗಿದ್ದವು, ಕೀಬೂತ್‌ಗಳು. ಅವುಗಳ ಬಗ್ಗೆ ವಿಚಾರಿಸಿದಾಗ, ‘ಈಗಲೂ ಅವು ಜನಪ್ರಿಯವಿವೆ!’ ಎಂದಳು.

“ಇಸ್ರೇಲ್​ನಲ್ಲಿ ಹೊರಗಿನಿಂದ ಯಹೂದಿಗಳು ದೊಡ್ಡ ಪ್ರಮಾಣದಲ್ಲಿ ಬಂದು ನೆಲೆಸಿ, ಅಲ್ಲಿಯ ಮೂಲನೆಲಸಿಗರನ್ನು, ನಿರಾಶ್ರಿತರನ್ನಾಗಿಸಿ ಹೊರಗೆ ಹೋಗುವಂತೆ ಮಾಡಿದ್ದು ಅನ್ಯಾಯವಲ್ಲವೇ?” (ಮುಖ್ಯವಾಗಿ ನೆರೆನಾಡು ಪ್ಯಾಲೆಸ್ಟಾಯಿನ್ ಮತ್ತು ಇಸ್ರೇಲ್‌ಗಳಲ್ಲಿ ನೆಲೆಸಿದ ಅರಬ್ ಜನಾಂಗ) ಕೊರೆಯುತ್ತಲೇ ಇದ್ದ ಪ್ರಶ್ನೆಯನ್ನು ಹಿಂಜರಿಯುತ್ತಲೇ ಕೇಳಿದೆ.

ಜುಡಿಥ್ ಗಂಭೀರಳಾದಳು. “ರಾಜಕಾರಣವೆಂಬುದು ಜನಜೀವನದಿಂದ ತೀರ ಭಿನ್ನವಾಗಿದೆಯಲ್ಲವೆ? ಭಾರತದಲ್ಲಿ ಹರಿಜನ, ದಲಿತಜನ ಸಮಸ್ಯೆ, ಅಲ್ಪಸಂಖ್ಯಾತರ ಸಮಸ್ಯೆಗಳೆಲ್ಲ ವಿದೇಶಿ ಮಾಧ್ಯಮಗಳಲ್ಲಿ ವಿಕೃತರೂಪ ತಳೆಯುವುದನ್ನು ನಾವು ನೋಡುತ್ತಿಲ್ಲವೇ? ಇಡೀ ಜಾಗತಿಕ ರಾಜಕಾರಣ ಅದಕ್ಕೆ ಅಪವಾದವಾಗಿಲ್ಲ! ಅರಬ್ ದೇಶಗಳು ನಿರಾಶ್ರಿತ ಅರಬರನ್ನು ಧಾರಾಳವಾಗಿ ಉಪಯೋಗಿಸುತ್ತಿದ್ದಾರೆ! ಈ 30 ವರ್ಷಗಳಲ್ಲಿ ವಿಶ್ವಸಂಸ್ಥೆಯು ಈ ಅರಬ್ ನಿರಾಶ್ರಿತರಿಗೆ ಮಾಡಿದ ಸಹಾಯ ಅಲ್ಪವಾಗಿದೆಯೇ? ಅದರ ಸರಿಯಾದ ಬಳಕೆಯೇ ಆಗಲಿಲ್ಲ! ಇಸ್ರೇಲ್ ವಿರುದ್ಧ ಪ್ರಚಾರಕ್ಕೆ ಧಾರಾಳವಾಗಿ ಬಳಸಲಾಯ್ತು. ಈ ನಿರಾಶ್ರಿತರ ಬಲವನ್ನು, ಹೊಸನಾಡು ಕಟ್ಟಿ ಹೊರದೇಶಗಳ ಯಹೂದಿ ನಿರಾಶ್ರಿತರು ಬರುತ್ತಿದ್ದಾಗ, ಜೋರ್ಡನ್, ಪ್ಯಾಲೆಸ್ಟಾಯಿನ್ ಗಳಲ್ಲಿ ಈ ಕೆಲ ಸಹಸ್ರ ಜನರನ್ನು ಸ್ಥಾಯಿಯಾಗಿಸುವುದು ಆಗ ಅಂಥ ಸಮಸ್ಯೆ ಆಗಿರಲಿಲ್ಲ. ಆದರೆ ಎಷ್ಟೋ ಕಾಲದ ಬಳಿಕ ಪ್ಯಾಲೆಸ್ಟಾಯಿನ್‌ದವರು ಈಗ ಇಸ್ರೇಲಿನ ಭಾಗವನ್ನು ತಮ್ಮದೆಂದು ಹೋರಾಟ ನಡೆಸುತ್ತಿದ್ದಾರೆ! ಹಿಂದೆಂದಿನ ನಿರಾಶ್ರಿತರನ್ನು ಪ್ರತ್ಯೇಕಿಸಿ ದಾಳವಾಗಿಸಿದ್ದಾರೆ, ಎಂಬುದು ಸ್ಪಷ್ಟ!”.

ಈ ಪುಸ್ತಕದ ಖರೀದಿಗೆ ಸಂಪರ್ಕಿಸಿ :  9019190502

*

ಡಾ. ಜ್ಯೋತ್ಸ್ನಾ ಕಾಮತ : ಲೇಖಕಿ, ಸಂಶೋಧಕಿ, ಆಕಾಶವಾಣಿಯ ನಿವೃತ್ತ ಕೇಂದ್ರ ನಿರ್ದೇಶಕಿ, ಡಾ. ಜ್ಯೋತ್ಸ್ನಾ ಕಾಮತ ಹುಟ್ಟಿದ್ದು 1937ರಲ್ಲಿ. ಬಿ.ಎ. (ಆನರ್ಸ್), ಡಿ.ಎಡ್., ಎಂ.ಎ. ಮತ್ತು ಇತಿಹಾಸ ದಲ್ಲಿ ಪಿಎಚ್.ಡಿ ಮಾಡಿದ ಇವರ ಸಂಶೋಧನೆಯ ಮಹಾಪ್ರಬಂಧ, ‘ಸೋಶಿಯಲ್ ಲೈಫ್ ಇನ್ ಮಿಡಿವಲ್ ಕರ್ನಾಟಕ’ ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ.

ಆ ಕಾಲದಲ್ಲಿಯೇ ಕೇಂದ್ರ ಸರಕಾರದ ಹುದ್ದೆಯಲ್ಲಿ, ಭಾರತದ ನಾನಾ ಮೂಲೆಗಳಿಗೆ, ವರ್ಗವಾದಲ್ಲಿಗೆಲ್ಲ ಹೋಗಿ ನಿಭಾಯಿಸಿದ ಈ ಉದ್ಯೋಗಸ್ಥ ಮಹಿಳೆಗೆ ಬೆನ್ನೆಲುಬಾಗಿ ನಿಂತವರು ಅವರ ಪತಿ ಡಾ. ಕೃಷ್ಣಾನಂದ ಕಾಮತರು. ಕನ್ನಡ, ಕೊಂಕಣಿ ಮತ್ತು ಇಂಗ್ಲಿಷ್ ಮೂರೂ ಭಾಷೆಯಲ್ಲಿ, ಇತಿಹಾಸ ಮತ್ತು ಮಹಿಳಾ ಅಧ್ಯಯನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಬರೆದ ಲೇಖಕಿ, ತಮ್ಮ ವಿನೋದ ಲೇಖನಗಳಿಗೂ ಹೆಸರಾದವರು. ಒಟ್ಟು 19 ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಶ್ರೀ ಕೆ. ಶಾಮರಾವ್ ದತ್ತಿನಿಧಿ ಪುರಸ್ಕಾರ, ಅ.ಸು.ಕೃಷ್ಣರಾವ್ ಸ್ಮಾರಕ ಬಹುಮಾನ, ಶಾಶ್ವತಿ ಪ್ರತಿಷ್ಠಾನದ ‘ಸದೋದಿತಾ ಪ್ರಶಸ್ತಿ’, ಮೈಕೊ ಕನ್ನಡ ಸಂಘದ ಕಿಟ್ಟೆಲ್ ಪ್ರಶಸ್ತಿ, ಟಿ.ಎಂ.ಎ. ಫೌಂಡೇಶನ್ ಪ್ರಶಸ್ತಿ, ಎಂ. ಚಿದಾನಂದಮೂರ್ತಿ ಪ್ರಶಸ್ತಿಗಳಿಂದ ಪುರಸ್ಕೃತರಾದ ಇವರು, ಕರ್ನಾಟಕ ಇತಿಹಾಸ ಅಕಾಡೆಮಿಯ 15ನೇ ವಾರ್ಷಿಕ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು.

*

ಇದನ್ನೂ ಓದಿ : Short Stories : ಅಚ್ಚಿಗೂ ಮೊದಲು ; ಚಿದಾನಂದ ಸಾಲಿಯವರ ‘ಹೊಗೆಯ ಹೊಳೆಯಿದು ತಿಳಿಯದು’ ಇಂದು ಸಂಜೆ ನಿಮ್ಮ ಓದಿಗೆ

Follow us on

Most Read Stories

Click on your DTH Provider to Add TV9 Kannada