Literature : ಅಭಿಜ್ಞಾನ ; ಪಾದರಸದಂತೆ ಹಗೂರ ತೇಲಿ ಬಂದ ಆ ಹೆಣ್ಣು, ಆ ಸುವಾಸನೆ ಅವನ ನಿರ್ಧಾರಕ್ಕೆ ಮೂಲ ಕಾರಣವಾಯಿತು

Literature : ಅಭಿಜ್ಞಾನ ; ಪಾದರಸದಂತೆ ಹಗೂರ ತೇಲಿ ಬಂದ ಆ ಹೆಣ್ಣು, ಆ ಸುವಾಸನೆ ಅವನ ನಿರ್ಧಾರಕ್ಕೆ ಮೂಲ ಕಾರಣವಾಯಿತು
ಲೇಖಕ, ಅನುವಾದಕ ಗೋಪಾಲಕೃಷ್ಣ ಪೈ

The Chinese Story : “ನಿಮ್ಮ ಬೊಂಬೆಗಳು. ನೀವು ಸಿಂಗರಿಸುವ ಬೊಂಬೆಗಳು ಎಷ್ಟು ಚೆನ್ನಾಗಿ ಕಾಣುತ್ತವೆಂದರೆ ಜನರು ಮುಗಿಬಿದ್ದು ಅಲ್ಲಿಗೆ ಖರೀದಿ ಮಾಡಲು ಬರುತ್ತಾರೆ” ಶ್ಯುಜೆನ್ ಆಕೆ ಚೀನೀ ಭಾಷೆಯಲ್ಲಿ ನೀನು ಅಂತ ಇರುವುದನ್ನು ನೀವು ಅಂತ ಬದಲಾಯಿಸಿದ್ದನ್ನು ಸ್ಪಷ್ಟವಾಗಿ ಗಮನಿಸಿದ.

ಶ್ರೀದೇವಿ ಕಳಸದ | Shridevi Kalasad

|

Jan 29, 2022 | 2:51 PM

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ನಾಡು-ನುಡಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡವರ ಬದುಕಿನ ಸಂದರ್ಭಗಳು, ಪ್ರಸಂಗಗಳು, ಕಥೆ-ಕಾದಂಬರಿ-ನಾಟಕ- ಪ್ರಬಂಧಗಳ ಆಯ್ದ ಭಾಗ್ಗ ಕಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com

*

‘ಆಧುನಿಕ ಚೀನೀ ಸಣ್ಣಕಥೆಗಳು’ ಇದು ಗೋಪಾಲಕೃಷ್ಣ ಪೈ ಅವರು ಅನುವಾದಿಸಿದ ಚೀನಿ ಕಥಾಸಂಕಲನ. ನೈ ಶಿನ್​ಸೆನ್​ ಅವರ ‘ಬೊಂಬೆಗಳು’ ಕಥೆಯ ಆಯ್ದ ಭಾಗ ಇಲ್ಲಿದೆ.

*

ಶ್ಯುಜೆನ್‌ಗೆ ಐವತ್ತು. ಆದರೂ ಅವನು ತುಂಬ ವಯಸ್ಸಾದವನಂತೆ ಕಾಣುತ್ತಿದ್ದ. ಬೆಳ್ಳಗಾದ ತಲೆಗೂದಲು, ಆಳಕ್ಕಿಳಿದ ಕಣ್ಣುಗಳು. ಆದರೆ ದಷ್ಟಪುಷ್ಟನಾಗಿ ಸಟಪಟ ನಡೆಯುವುದನ್ನವನು ರೂಢಿಮಾಡಿಕೊಂಡಿದ್ದ. ಖುಷಿಯ ಒಂದು ಮುಗುಳ್ಳಗೆ ಅವನ ಮುಖದ ಮೇಲೆ ಯಾವಾಗಲೂ ಅರಳಿರುತ್ತಿತ್ತು. ಅದೂ ಅವನು ‘ಶೋಕೇಸಿನ’ ಬೊಂಬೆಗಳನ್ನು ಸಿಂಗರಿಸುತ್ತಿರುವಾಗ ಸ್ಪಷ್ಟವಾಗಿ ಮೂಡುವುದು.

ಆ ಫ್ಯಾಶನ್ ಅಂಗಡಿ ಊರಿನಲ್ಲೇ ಒಂದು ವಿಶಿಷ್ಟ ಸ್ಥಳ. ಹೆಣ್ಣುಮಕ್ಕಳ ಉಡುಪು ಮತ್ತು ಇತರ ದಿನಬಳಕೆಯ ಅರಿವೆಗಳಿಗೆ ಅದಕ್ಕೆ ದೊಡ್ಡ ಹೆಸರಿತ್ತು. ಶ್ಯುಜೆನ್ ಅಲ್ಲದೇ ಅಂಗಡಿಯ ಇತರ ಕೆಲಸದವರೆಲ್ಲ ಹೆಣ್ಣುಮಕ್ಕಳಾಗಿದ್ದು ಅಂಗಡಿಗೆ ಒಂದು ಹೆಣ್ಣನದ ರೂಪ ಬಂದಿತ್ತು. ಶ್ಯುಜೆನ್ ಒಬ್ಬನೇ ಆ ಅಂಗಡಿಯ ಪೌರುಷತನದ ಸಂಕೇತವಾಗಿದ್ದ. ಸಾಮಾನ್ಯವಾಗಿ ಅಂಗಡಿಯ ಬಾಗಿಲು ತೆರೆಯುವ ಎರಡು ತಾಸು ಮೊದಲು ಅವನು ತನ್ನ ಕೆಲಸ ಆರಂಭಿಸಿ, ರೂಪದರ್ಶಿ ಬೊಂಬೆಗಳನ್ನು ಸಿಂಗರಿಸಿ, ಕನ್ನಡಿಯ ಗೂಡಿನೊಳಗೆ ಅವುಗಳಿಗೆ ತಕ್ಕ ತಕ್ಕ ಜಾಗದಲ್ಲಿ ಕೂರಿಸುವ ಹೊತ್ತಿಗೆ ಅದು ತೆರೆಯಲಾಗುತ್ತಿತ್ತು. ತನಗೆಂದು ಮೀಸಲಿಟ್ಟ ಅಂಗಡಿಯ ಎರಡನೆಯ ಮಹಡಿಯ ಮೇಲಿನ ತನ್ನ ಕೋಣೆಯಿಂದ ಹೊರಗಿಳಿದು ಅವನು ಬರುವಾಗ, ಅಂಗಡಿಯ ಉಳಿದ ಕೆಲಸಗಾರರೆಲ್ಲ, ಅಂದರೆ, ಅಂಗಡಿಯ ಮಾಲೀಕಳಾದ ಹುವಾರೂಯಿ ಮತ್ತು ಇತರ ಹುಡುಗಿಯರು ಇನ್ನೂ ನಿದ್ರೆಯ ಮಂಪರಿನಲ್ಲಿ ಹೊರಳಾಡುತ್ತಿದ್ದರು. ಆದುದರಿಂದ ಯಾವುದೇ ಮುಜುಗರವಿಲ್ಲದೇ ಶ್ಯುಜೆನ್ ತನ್ನ ಸಿಂಗರಿಸುವ ಕೆಲಸವನ್ನು ಸಲೀಸಾಗಿ ಮಾಡುತ್ತಾ ಹೋಗುತ್ತಿದ್ದ. ತನ್ನ ಸೃಜನಶೀಲ ವ್ಯಕ್ತಿತ್ವದ ಅಭಿವ್ಯಕ್ತಿಗೆ ಅವನಿಗೆ ಸಾಕಷ್ಟು ಸಮಯ ದೊರೆಯುತ್ತಿತ್ತು.  ಬೇಕಾದಷ್ಟು ಸ್ವಾತಂತ್ರ್ಯವೂ ಲಭಿಸುತ್ತಿತ್ತು. ಅವನ ಈ ಅಭಿವ್ಯಕ್ತಿ ಎಷ್ಟೊಂದು ಲಾಭದಾಯಕವಾಗಿತ್ತೆಂದರೆ ಅವನು ಸಿಂಗರಿಸಿದ ಆ ಬೊಂಬೆಗಳನ್ನು ನೋಡಿಯೇ ಅಂಗಡಿಯ ವ್ಯಾಪಾರ ಹತ್ತು ಪಟ್ಟು ಹೆಚ್ಚಾಗಿತ್ತು. ಅದಕ್ಕಾಗಿ ಅವನ ಮಾಲಿಕಳ ಮೆಚ್ಚುಗೆಯ ನಗು ಅವನಿಗೆ ದೊರೆಯುತ್ತಿತ್ತು. ಶ್ಯುಜೆನ್‌ಗೆ ತನ್ನ ಕೆಲಸದ ಬಗ್ಗೆ ಯಾವಾಗಲೂ ಹೆಮ್ಮೆ ಮತ್ತು ತೃಪ್ತಿ.

ಐದು ವರ್ಷಗಳ ಹಿಂದೆ ಶ್ಯುಜೆನ್ ಉಡುಪುಗಳ ಒಂದು ಸರಕಾರೀ ಮಳಿಗೆಯಲ್ಲಿ ಶೋಕೇಸುಗಳನ್ನು ನಿಭಾಯಿಸುವ, ಒಳಗಿನ ಬೊಂಬೆಗಳನ್ನು ಆಕರ್ಷಕವಾಗಿ ಪ್ರದರ್ಶನಕ್ಕಿಡಲು ಸಹಾಯ ಮಾಡುವ ಕೆಲಸದಲ್ಲಿದ್ದ. ಅವನ ಹೆಂಡತಿ ಅವನಿಗೆ ಮಕ್ಕಳನ್ನೂ ಕೊಡದೇ ತೀರಿಕೊಂಡಿದ್ದರಿಂದ ಅವನೊಬ್ಬ ಸ್ವತಂತ್ರ ವಿಧುರನಾಗಿದ್ದ. ಇದ್ದಕ್ಕಿದ್ದಂತೆ, ಯಾವ ಸುಳಿವನ್ನೂ ಕೊಡದೇ ಆ ಪತ್ರ ಬಂದ ದಿನ ಅವನಿಗಿನ್ನೂ ಚೆನ್ನಾಗಿ ನೆನಪಿದೆ-ಸರಿಯಾಗಿ ವಿವರಿಸಿ ಹೇಳಬೇಕೆಂದರೆ ಅದು ಮೇಲ್ತರಗತಿಯ ಒಂದು ಸಿನೆಮಾ ಟಿಕೇಟು-ಅದೂ ಒಂದಲ್ಲ ಎರಡು! ಹೆಚ್ಚೇನೂ ಯೋಚಿಸದೆ ಶ್ಯುಜೆನ್ ಸಿನೆಮಾ ನೋಡಲು ಹೋಗಿ ಕೂತ. ಸಿನೆಮಾ ಪ್ರಾರಂಭವಾದ ಐದು ನಿಮಿಷಗಳ ನಂತರ ಎತ್ತರದ, ಆದರೆ ಹೆಚ್ಚೇನೂ ಎಳೆಯಳಲ್ಲದ ಹೆಣ್ಣೂಬ್ಬಳು ಒಳಗೆ ಬಂದಳು. ದೀಪಗಳ ಮಂಕಾದ ಬೆಳಕಿನಲ್ಲಿ ಅವಳ ಮುಖದ ರೂಹು ಮತ್ತು ಮುತ್ತುಗಳಂತೆ ಹೊಳೆಯುವ ಕಣ್ಣುಗಳು ಮಾತ್ರ ಶ್ಯುಜೆನ್‌ಗೆ ಕಂಡವು. ಅವಳು ಹಾಕಿಕೊಂಡ ಸುವಾಸನೆ ಮಾತ್ರ ಅವನ ಮೂಗಿನಲ್ಲಿಳಿದು ಅಲ್ಲಿಯೇ ಶಾಶ್ವತವಾಗಿ ನೆಲಸಿಬಿಟ್ಟಿತು. ಶ್ಯುಜೆನ್ ಸಂಕೋಚದಿಂದ ಸರಿದು ಕೂತ. ಅವನ ಎದೆ ಧಡ ಧಡ ಹೊಡೆದುಕೊಳ್ಳತೊಡಗಿತ್ತು.

“ಮಿ. ಶ್ಯುಜೆನ್?-ಅಲ್ಲವೇ?” ಆಕೆ ಮೃದುವಾಗಿ ಕೇಳಿದಳು.

“ಹೌದು, ನೀವು?”.

“ನಾನು ಹುವಾರೂಯಿ. ಹೀಯಾಲಿ ಫ್ಯಾಶನ್ ಸ್ಟೋರ್‌ನ ಒಡತಿ” ಆ ಮಂಕು ದೀಪಗಳ ಬೆಳಕಿನಲ್ಲಿ ಆಕೆ ಸುಂದರವಾಗಿ ಮುಗುಳಕ್ಕಳು.

“ಟಿಕೇಟುಗಳನ್ನು ಕಳುಹಿಸಿದ್ದು ನೀವಾ?”

“ಹೂ

“ಯಾಕೆ?” ಶ್ಯುಜೆನ್ ತುಸು ಅಪ್ರತಿಭನಾಗಿ ಕೇಳಿದ.

“ನಿಮ್ಮನ್ನು ನನ್ನ ಅಂಗಡಿಯಲ್ಲಿ ಕೆಲಸಕ್ಕಾಗಿ ಆಹ್ವಾನಿಸಲು”

“ನನ್ನನ್ನು?”

“ನಿಮ್ಮ ಬೊಂಬೆಗಳು. ನೀವು ಸಿಂಗರಿಸುವ ಬೊಂಬೆಗಳು ಎಷ್ಟು ಚೆನ್ನಾಗಿ ಕಾಣುತ್ತವೆಂದರೆ ಜನರು ಮುಗಿಬಿದ್ದು ಅಲ್ಲಿಗೆ ಖರೀದಿ ಮಾಡಲು ಬರುತ್ತಾರೆ” ಶ್ಯುಜೆನ್ ಆಕೆ ಚೀನೀ ಭಾಷೆಯಲ್ಲಿ ನೀನು ಅಂತ ಇರುವುದನ್ನು ನೀವು ಅಂತ ಬದಲಾಯಿಸಿದ್ದನ್ನು ಸ್ಪಷ್ಟವಾಗಿ ಗಮನಿಸಿದ.

ಅದು ಅವಳು ಅವನ ಕೆಲಸಕ್ಕೆ ಕೊಟ್ಟ ಗೌರವ.

“ಆದರೆ ನಾನು ಸರಕಾರದವರು ನಡೆಸುವ ಫ್ಯಾಶನ್ ಮಳಿಗೆಯಲ್ಲಿ ಕೆಲಸಕ್ಕೆ ಇರೋನು…”

“ಗೊತ್ತು, ಈ ಅಂಗಡಿ ನನ್ನ ಸ್ವಂತದ್ದು. ನಿಮಗೆ ಸರಕಾರ ಕೊಡುವ ಸಂಬಳವನ್ನೇ ಕೊಡುತ್ತೇನೆ. ಅಲ್ಲದೇ ವರ್ಷಕ್ಕೆ ಒಂದು ತಿಂಗಳ ಸಂಬಳದಷ್ಟು ಬೋನಸ್ ಕೂಡಾ ಕೊಡುತ್ತೇನೆ. ಅಷ್ಟೇ ಅಲ್ಲ, ನೀವು ನಿವೃತ್ತಿಯಾಗುವಾಗ ಒಂದು ಲಕ್ಷ ಯುವಾನ್‌ನಷ್ಟು ನಿವೃತ್ತಿ ವೇತನ ಕೊಡುತ್ತೇನೆಂದು ಈಗಲೇ ಮುಚ್ಚಳಿಕೆ ಪತ್ರ ಬರೆದು ಕೊಡುತ್ತೇನೆ. ನಾವಿಬ್ಬರೂ ಒಬ್ಬಂಟಿಗರು. ಇಬ್ಬರೂ ಕೂಡಿ ನಮ್ಮ ಅಂಗಡಿಯ ವ್ಯಾಪಾರವನ್ನು ಬಹಳ ಚೆನ್ನಾಗಿ ಬೆಳೆಸಬಹುದು. ನಾಳೆ ಬೆಳಗ್ಗೆ ಬಂದು ನನ್ನನ್ನು ಭೆಟ್ಟಿಯಾಗಿ, ಅಲ್ಲೇ ಕೂತು ಎಲ್ಲವನ್ನೂ ಮಾತನಾಡೋಣ

ಇಷ್ಟು ಹೇಳಿ ಆಕೆ ಹೊರಟುಹೋದಳು.

Abhijnana excerpt of Aadhunika Cheeni Kathegalu by Kannada Writer translator Gopalkrishna pai

ಆಧುನಿಕ ಚೀನೀ ಕಥೆಗಳು

ಪಕ್ಕದ ಸೀಟು ಖಾಲಿಯಾದಾಗ ಶ್ಯುಜೆನ್‌ಗೆ ಭಣಭಣವೆನ್ನಿಸಿತು. ಆದರೆ ಆ ಹೆಣ್ಣು ಮೈಗೆ ಪೂಸಿಕೊಂಡ ಸುವಾಸನೆ ಇನ್ನೂ ಅವನೊಳಗೆ ಉಳಿದಿತ್ತು. ಆ ಸುವಾಸನೆಯ ನಡುವೆ ಹುವಾರೂಯಿಯ ಜೊತೆ ಕೆಲಸ ಮಾಡುವ ನಿರ್ಧಾರವನ್ನು ಶ್ಯುಜೆನ್ ತೆಗೆದುಕೊಳ್ಳಬೇಕಾಯಿತು. ಆ ಬಗ್ಗೆ ಚಿಂತಿಸಿ ಅವನು ಬಳಲಿದ-ಆಕೆ ಕೊಡುವ ಸಂಬಳದಿಂದಲಾಗಲೀ, ಬೋನಸ್‌ನಿಂದಾಗಲೀ, ಅಥವಾ ನಿವೃತ್ತಿ ವೇತನದ ಮುಚ್ಚಳಿಕೆ ಪತ್ರದಿಂದಾಗಲೀ ಅಲ್ಲ, ಕೇವಲ ಆ ಹೆಣ್ಣಿನಲ್ಲಿದ್ದ ಒಂದು ತೆರನ ನಿಗೂಢತೆ ಅವನನ್ನು ಸಂಪೂರ್ಣ ಕಬಳಿಸಿ ಹಾಕಿತ್ತು.

ಪಾದರಸದ ಹಾಗೆ ಹಗುರವಾಗಿ ತೇಲಿ ಬಂದಂತೆ ಬಂದ ಆ ಹೆಣ್ಣು ಹಾಕಿಕೊಂಡಿದ್ದ ಆ ಸುವಾಸನೆ ಅವನು ತೆಗೆದುಕೊಂಡ ನಿರ್ಧಾರಕ್ಕೆ ಮೂಲ ಕಾರಣವಾಯಿತೆನ್ನಬೇಕು. ಇಂಥ ಕಾರಣಗಳನ್ನೆಲ್ಲ ಒಬ್ಬ ವಿಧುರ ಯಾರಲ್ಲೂ ಚರ್ಚಿಸಲು ಇಚ್ಛಿಸುವುದಿಲ್ಲ. ಹುವಾರೂಯಿ ‘ನಾವಿಬ್ಬರೂ ಒಬ್ಬಂಟಿಗರು’ ಎಂದು ಹೇಳಿದ ಮಾತಿನ ಅರ್ಥವಾದರೂ ಏನು ಎಂದು ಶ್ಯುಜೆನ್ ತನ್ನಲ್ಲೇ ಪ್ರಶ್ನಿಸಿಕೊಂಡ. ಇಲ್ಲಿ ಯೋಚಿಸಬೇಕಾದುದು ತುಂಬ ಮಹತ್ವದ್ದಾಗಿದೆಯೆಂದು ಅವನಿಗನ್ನಿಸಿತು. ಸಿನೆಮಾ ಮುಗಿಯುವ ತನಕ ಅವನು ಥಿಯೇಟರಿನಿಂದ ಹೊರಗೆ ಬರಲಿಲ್ಲ.

(ಸೌಜನ್ಯ : ಭಾಗ್ಯಲಕ್ಷ್ಮೀ ಪ್ರಕಾಶನ, ಬೆಂಗಳೂರು, 080-26695715)

ಇದನ್ನೂ ಓದಿ : Literature : ಅಭಿಜ್ಞಾನ ; ‘ನೆನಪಿಟ್ಟುಕೋ, ಯಾರೇ ಕರೆದ ಹಾಗೆ ಅನಿಸಿದರೂ ತಪ್ಪಿ ಕೂಡ ತಿರುಗಿ ನೋಡಬಾರದು’

Follow us on

Most Read Stories

Click on your DTH Provider to Add TV9 Kannada