Literature : ಅಭಿಜ್ಞಾನ ; ‘ಬರೋ ವರ್ಷ ಈ ಹೊತ್ತಿಗೆ ಗುಡೀಗೆ ನೂರಾರು ಜನ ಬರೋ ಅಂಗೆ ಮಾಡದಿದ್ದರೆ ನಾ ಸತ್ತೆ ಅಂತ ತಿಳುಕ’
Raghunatha Cha. Ha. : ಇರುಳು ಕನಸುನಾಗೂನು ಹಾಳುಬಿದ್ದ ಗುಡಿ, ಗುಡಿಯಾಗೆ ಅಳುತ ಕುಂತ ದೇವುರು ಕಾಣುಸಿ ಕಲ್ಲಯ್ಯಗೆ ಗುಡೀನ ರೂಢುಸೋ ಹಂಬುಲವ ಹೆಚ್ಚುಸುತಿದ್ದವು. ಮೊದಲು ಗುಡಿ ಸುತ್ತಮುತ್ತಲಿರೊ ಕಾಂಗ್ರೆಸ್ಸು ಗಿಡಗಳು, ಮುಳ್ಳಿನ ಗಿಡಗಳನು ಕಿಲೀನು ಮಾಡಬೇಕಿತ್ತು.
Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ನಾಡು-ನುಡಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡವರ ಬದುಕಿನ ಸಂದರ್ಭಗಳು, ಪ್ರಸಂಗಗಳು, ಕಥೆ-ಕಾದಂಬರಿ-ನಾಟಕ- ಪ್ರಬಂಧಗಳ ಆಯ್ದ ಭಾಗ್ಗ ಕಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ : tv9kannadadigital@gmail.com
*
ಪತ್ರಕರ್ತ, ಕಥೆಗಾರ ರಘುನಾಥ ಚ.ಹ ಅವರ ‘ಹೊರಗೂ ಮಳೆ ಒಳಗೂ ಮಳೆ’ ಕಥಾ ಸಂಕಲನದಿಂದ ‘ಬಯಲು ಆಲಯದೊಳಗೆ’ ಕಥೆಯ ಆಯ್ದಭಾಗ.
*
ಊರುಕೇರಿಯಲ್ಲಿ ಅಮಾಸೆಯ ಗಂವ್ ಅನ್ನೊ ಕತ್ತಲಾಗೆ ಕಲುತು ಮಲಕ್ಕಂಡಿದ್ದರೂ ಕಲ್ಲಗೆ ನಿದ್ದಿ ಅಂಬೋದು ಸುಳುವಿಲ್ಲದಂಗಾಗಿತ್ತು. ಈಚೀಚೆಗೆ ಕಲ್ಲಗೆ ನಿದ್ದಿ ಕಡುಮೆಯ ಆದರೂ ಈ ಅಮಾಸೆ ಹುಣ್ಣುಮೆ ದಿನಗಳಾಗೆ ಈ ಕಡುಮೆ ನಿದ್ದಿಯೂ ಇಲ್ಲದಂಗಾಗ್ತಿತ್ತು. ಗುಡಿಯಿಂದ ಮನೆಗೆ ಬಂದವನು ಈಟೊತ್ತಿಗೆ ಒಂದು ಕಟ್ಟು ಬೀಡಿಗಳ ಬೂದಿ ಮಾಡಿದ್ದರೂ ತಲೆ ಧಿಂಮ್ ಅಂತಿತ್ತು. ತನ್ನ ಕಣ್ಣೆದುರುನಾಗೇನೆ ಗುಡಿಯಾಗೆ ನಡೀತಿರೊ ಘಟನೆಗಳ ಕಂಡು ಕಲ್ಲಗೆ ಸಂಕಟವಾಗ್ತಿತ್ತು. ನಡೀತಾ ಇರಾದರಾಗೆಲ್ಲ ತನ್ನದೂ ಪಾಲಯ್ತೆ ಅಂಬೊ ಸಂಗತಿಯೇ ಅವುನ್ನ ಚುಚ್ಚಿ ಚುಚ್ಚಿ ಹಣ್ಣು ಮಾಡ್ತಿತ್ತು. ಈ ಎಲ್ಲದಕ್ಕೂ ಒಂದು ದಾರಿ ಕಾಣುಸಬೇಕುಂತ ತಲೆನೇಟು ಬೆಚ್ಚುಗೆ ಮಾಡುಕಂಡರು ದಿಕ್ಕೇ ತೋಚದಂಗೆ ಕತ್ತಲು ಕವುಕಂತಿತ್ತು. ಗುಡಿ ವಿಷ್ಯದ ಜತೆಗೆ ಮಗನ ವಿಷಯವೂ ಕಲ್ಲಜ್ಜನ ನಿದ್ದೆಗೆ ಮುಳ್ಳಾಗಿತ್ತು.
ನಾಲಕ್ಕು ವರುಷಗಳ ಕೆಳಗೆ ಮನಸ್ತಾಪ ಮಾಡುಕಂಡು ಮನೆಬಿಟ್ಟು ಪ್ಯಾಟೆ ಸೇರುದ ರಾಘವೇಂದ್ರ ಮೊನ್ನೆ ಮತ್ತೆ ಹಳ್ಳಿ ಕಡೆ ಮೊಕ ಹಾಕಲಿಕ್ಕೆ ಕಾರಣ ‘ನಿಮ್ಮಪ್ಪ ಇವತ್ತೋ ನಾಳೆಯೋ ಅನ್ನೂವಂಗವನೆ, ಅಪ್ಪ ಅಂಬೊ ಅಭಿಮಾನ ರವಷ್ಟಾದರೂ ಉಳುಕಂಡಿದ್ದರೆ ಒಂದು ಕೆ. ಮೊಕ ತೋರುಸಿ ಹೋಗು’ ಅಂತ ಕಲ್ಲಪ್ಪ ಬರುಸಿದ ಕಾಗದವೆ ಕಾರಣವಾಗಿತ್ತು. ‘ನಿನ್ನ ಪಾಲುಗೆ ಇವತ್ತಿಂದ ನಿನ್ಮಗ ಸತ್ತಾಂತ ತಿಳುಕ’ ಅಂತಂದು ಸಂಬಂಧವ ಹರುಕಂಡು ಹೋಗಿದ್ದವನು ಅಪ್ಪನ ಕಾಗದಕೆ ಕರುಗಿ ಬಂದಾಗ ಕಲ್ಲಗೆ ಹೋದ ಜೀವ ಮತ ಬಂದಂಗನ್ನಿಸಿದರೂ ಆ ಖುಷಿ ಭಾಳಾ ಹೊತ್ತು ಉಳೀಲಿಲ್ಲ ಮಗ ಸಂಸಾರೊಂದಿಗನಾಗಲಿಕ್ಕೆ ಜಪ್ಪಯ್ಯ ಅಂದರೂ ‘ಹೂ’ ಅನ್ನಲಿಲ್ಲ. ಒಂದೇ ಮಾತು ಅವುಂದು, ‘ನಿನ್ನಿಂದಲೇ ನನ್ನ ಬಾಳು ಇಂಗಾಗಿದ್ದು, ಈ ಜನ್ಮದಾಗೆ ಮದುವೆ ಅನ್ಸಾದು ಮರತಂಗೆಯಾ’, ಕಲ್ಲಜ್ಜ ಎಷ್ಟು ಆತು ಕರೆದರೂ ಮಗರಾಯ ಕರಗಲಿಲ್ಲ. ಬಂದವನು ಎರಡು ದಿನವಿದ್ದು ವಾಪಸ್ಸು ಪ್ಯಾಟೆಗೆ ಹೋದ.
ನಾಗಲಕ್ಷ್ಮಿ ಸತ್ತಾಗ ರಾಘವೇಂದ್ರನಿಗೆ ನಾಲಕ್ಕೂ ತುಂಬಿರಲಿಲ್ಲ, ಮನೆಗೆ ಮಾಲಕ್ಷ್ಮಿಯಂಗಿದ್ದವಳಿಗೆ ಬಡುದ ಕೆಂಡದಂಥ ಜ್ವರ ಎಂಥ ಮದ್ದಿಗೂ ಬಗ್ಗದೆ ಮೂರೇ ದಿನಕ್ಕೆ ಮನೇನ ಸ್ಮಶಾನವಾಗಿತ್ತು. ಗೋಕುಲದಂಗಿದ್ದ ಮನೆಗೆ ಗರ ಬಡುದಂಗಾಯ್ತು. ಜೀವಕ್ಕೆ ಜೀವಾಗಿದ್ದವಳು ಕಣ್ಣೆದುರೇ ಮಣ್ಣಾದುದ್ದನ್ನ ಕಂಡ ಕಲ್ಲಯ್ಯನಿಗೆ ಬದುಕು ಇಷ್ಟೇನೆ ಅನ್ನುಸ್ತು. ಚಿಕ್ಕಂದಿನಾಗೆ ಅವ್ವ ಅಪ್ಪನ್ನ ಕಳಕೊಂಡು ಬದುಕಿನುದ್ದಕ್ಕೂ ನೋವುಗಳನೆ ಉಣ್ಣುತ ಬಂದವನು, ನಾಗಲಕ್ಷ್ಮಿ ಮನೆತುಂಬುದಾಗ ‘ನನ್ನ ಬಾಳೂ ಬೆಳಕಾಯ್ತು’ ಅಂಥ ಖುಷಿಪಟ್ಟಿದ್ದ.
ರಾಘವೇಂದ್ರ ಹುಟ್ಟುದ ಮ್ಯಾಲೆ ಅವುನ ಸಂಭ್ರಮಕ್ಕೆ ಪಾರವೇ ಇಲ್ಲವಾಗಿತ್ತು. ಎಲ್ಲ ಸುಖವನ್ನೇ ಹೊತ್ತುನಾಗೆ ಜರುಗಿದ ಈ ಸಾವು ಕಲ್ಲಯ್ಯಂಗೆ ತಡಕಳ್ಳಕ್ಕಾಗದ ಪೆಟ್ಟಾಗಿತ್ತು. ಇಂಥಾ ಬಲವಾದ ಪೆಟ್ಟು ತಿಂದ ಕಲ್ಲಯ್ಯ ದಿನ ಕಳುದಂಗೆ ಮತ್ತೆ ಚೇತರಿಸಿಕಂಡಿದ್ದಕ್ಕೆ ಮಗರಾಯ ರಾಘವೇಂದ್ರನೆ ಕಾರಣ. ನಾಗಲಕ್ಷ್ಮಿಯ ಕಣ್ಣಕುಡಿಯಾಗಿದ್ದ ರಾಘವೇಂದ್ರನೆ ಇವಾಗ ಕಲ್ಲಯ್ಯನ ಪಾಲಿಗೆ ನಾಗಲಕ್ಷ್ಮಿಯ ಪಡಿಪಾಗಿದ್ದ, ಅವುನ್ನ ಸಲುಹಿ ಇದ್ಯಾವಂತನನ್ನಾಗಿಸೊ ನಾಗಲಕ್ಷ್ಮಿಯ ಕಣಸನ್ನ ನನಸು ಮಾಡೊ ಸಂಕಲ್ಪ ಮಾಡುದ ಕಲ್ಲಯ್ಯ ಅದಕ್ಕಾಗಿ ತನ್ನ ಬಾಳನ್ನೆ ಮುಡುಪಾಗಿಟ್ಟ ಮಲತಾಯಿ ತಂದ್ರೆ ಮಗನಿಗೆ ಕಿರುಕುಳವಾದೀತೆಂದು ಅಂಜಿ ಎರಡನೆ ಲಗ್ನಕ್ಕೆ ಒಲ್ಲೆ ಅಂದ. ಕುಡಿಯಾಗಿದ್ದ ಕೂಸುನ ಮರವಾಗಿಸಲಿಕ್ಕೆ ಕಲ್ಲಯ್ಯ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಕೂಸುಗೆ ಅವ್ವನ ನೆಪ್ಪೇ ಆಗದಂಗೆ ಎಷ್ಟೇ ಮುಚ್ಚಟೆಯಾಗಿ ನೋಡುಕಂಡರೂ ಒಂದೊಂದು ಕಿತ ಕೂಸು ‘ಅವ್ವ ಬೇಕು’ ಅಂದಾಗ ಕಲ್ಲಯ್ಯನ ಕಳ್ಳುಗೆ ಕೊಳ್ಳಿ ಇಟ್ಟಂಗಾಗಿತ್ತು. ‘ನಾಯಷ್ಟೆ ಮುಚ್ಚಟೆ ಮಾಡಿದ್ರೂ ಕೂಸುಗೆ ಅವ್ವನ ಪಿರುತಿ ಕೊಡಕಾಯ್ತದ’ ಅಂತಾ ಹಲುಬುತಿದ್ದ, ಕೆಮ್ಮು, ನೆಗಡಿ, ಥಂಡಿ ಅಂತಾ ಕೂಸು ಒದ್ದಾಡುತಿದ್ದರಂತೂ ಕಲ್ಲಯ್ಯನ ಸಂಕಟ ಮುಗಿಲು ಮುಟ್ಟುತ್ತಿತ್ತು. ಒಂದು ಸಲವಂತೂ ಕೂಸುಗೆ ಜ್ವರವಾಗಿ ವಾರಕಾಲ ಮಲಗಿದಾಗ, ‘ಈ ಕೂಸೂ ಅವುಳ ದಾರಿ ಹಿಡೀತದೇನೆ’ ಅಂಬೊ ದಿಗುಲು ಕವುದು ಕಂಡಕಂಡ ದೇವುರಗೆಲ್ಲ ಮುಡುಪು ಕಟ್ಟಿದ್ದು ಯಾವ ದೇವರ ಬಲವೋ ಅಂತೂ ಕೂಸು ಗೆಲುವಾಗಿತ್ತು. ಕಲ್ಲಯ್ಯ ಉಳುಕಂಡಿದ್ದ.
ಕೂಸಾಗಿದ್ದ ರಾಘವೇಂದ್ರನ ಮೊಕದಾಗೆ ಮೀಸೆ ಚಿಗುರು ಕಾಣುತಿದ್ದಂಗೆ, ಅದೇ ಮೊಕದಾಗೆ ಪ್ಯಾಟೆಯ ಕಾಲೇಜು ಮೆಟ್ಟಿಲು ಹತ್ತುದ ಕಳೆ ಲಕಲಕ ಅಂತಿರುವಾಗ್ಗೆ ಕಲ್ಲಯ್ಯಗೆ ತುಸು ಖುಷಿ ಅನ್ನಿಸ್ತು. ಮಗ ಬುದ್ದುವಂತ, ತನ್ನಂಥವ್ರಿಗೆಲ್ಲ ದಾರಿ ತೋರುಸುವಷ್ಟು ದೊಡ್ಡವನಾಗವನೆಂಬೊ ಇಚಾರಗಳಿಂದ ಮೈ ಹಗೂರಾಗ್ತಿತ್ತು. ಇದೇ ಹೊತ್ತುನಾಗೆ ಕಲ್ಲಯ್ಯಗೆ ನಾಗಲಕ್ಷ್ಮಿಯ ನೆಪ್ಪು ಮತ್ತೆ ಮತ್ತೆ ಕಾಡತೊಡಗಿತು. ತನ್ನ ಅವುಳ ಏರುತಿ, ಸುಖದ ದಿನಗಳು ನೆಪ್ಪಾಗಿ ಎದಿ ಹಿಂಡುತಿದ್ದವು. ‘ನಾಗೂ ನಿನ್ನ ಆಸೆಯಂಗೆ ಎಲ್ಲ ನಡೀತೈತೆ. ಅದನ್ನ ನೋಡಾಕೆ ನೀನೇ ಇಲ್ಲವಲ್ಲ ಅಂಥಾ ಅಂದುಕೋತಿದ್ದ ಮಗ ಕಾಲೇಜು ನೆವದಾಗೆ ಪಟ್ಟಣ ಸೇರುದ ಮ್ಯಾಗೆ ಕಲ್ಲಯ್ಯಗೆ ಹೊತ್ತು ಕಳಿಯಾದೆ ಕಷ್ಟ ಅನ್ನುಸ್ತಿಸ್ತು. ಬೆಳೆಯ ದಿನಗಳಾದರೆ ಕೆಲಸ ಬೊಗಸೆ ಅಂತಾ ಹೊತ್ತು ಸರೀತಿತ್ತು. ಉಳುದ ದಿನಗಳಾಗೆ ಹಗಲು ಎಷ್ಟು ದೊಡ್ಡದೂಂತಾ ಕಲ್ಲಯ್ಯಗೆ ಅನುಸಾದು.
ಇದೇ ದಿನಗಳಾಗೆ ಊರ ಹೊರಗಿನ ಭಾಳಾ ದಿನಗಳಿಂದ ಪಾಳು ಬಿದ್ದಿದ್ದ ದೇವುರ ಗುಡಿಯೊಂದು ಅದೆಂಗೊ ಏನೋ ಕಲ್ಲಯ್ಯನ ಗಮನ ಸೆಳೀತು. ಒಂದು ಕಾಲದಾಗೆ ಪೂಜೆ ಪುನಸ್ಕಾರಗಳು ಘನವಾಗಿ ಜರುಗುತ ಚಂದಾಗಿದ್ದ ಗುಡಿಯೀಗ ಕಳೆದ ದಿನಗಳ ನೆನೆಸುಕೋತಾ ಕುಂತ ಮುಂಡೆಯಂಗೆ ಪಾಳು ಬಿದ್ದಿತ್ತು. ಉಂಡಾಡಿ ಐಕಳಿಗೆ ಚೌಕಾಭಾರ ಕಾಸಿನಾಟ ಆಡಲಿಕ್ಕೆ, ತುಂಡು ದನಗಳು ಮಯ್ಯುಜ್ಜಲಿಕ್ಕೆ, ಕತ್ತಲಾಯೂಂದ್ರೆ ಎಂತೆಂಥವರೋ ಬಂದು ಹೋಗಲಿಕ್ಕೆ ಉಪಯೋಗವಾಗುತ್ತಿದ್ದ ಗುಡಿಯ ಕಂಡು ಕಲ್ಲಯ್ಯಗೆ ದುಕ್ಕವಾತು.
ಎಂಗಾದ್ರು ಮಾಡಿ ಈ ಗುಡಿಗೊಂದು ಗತಿ ಕಾಣಿಸ್ಟೇಕು ಅಂಬೋ ಹಂಬುಲ ಪ್ರತಿಸಲ ಗುಡಿ ಹತ್ತರಕ್ಕೆ ಬಂದಾಗಲೂ ಬಲವಾಗ್ತಿತ್ತು. ಇರುಳು ಕನಸುನಾಗೂನು ಹಾಳುಬಿದ್ದ ಗುಡಿ, ಗುಡಿಯಾಗೆ ಅಳುತ ಕುಂತ ದೇವುರು ಕಾಣುಸಿ ಕಲ್ಲಯ್ಯಗೆ ಗುಡೀನ ರೂಢುಸೋ ಹಂಬುಲವ ಹೆಚ್ಚುಸುತಿದ್ದವು. ಮೊದಲು ಗುಡಿ ಸುತ್ತಮುತ್ತಲಿರೊ ಕಾಂಗ್ರೆಸ್ಸು ಗಿಡಗಳು, ಮುಳ್ಳಿನ ಗಿಡಗಳನು ಕಿಲೀನು ಮಾಡಬೇಕಿತ್ತು. ಗುಡಿ ಹತ್ತರಕ್ಕೆ ಕುರಿಗಳ ದನಗಳ ಕಾಯಲಿಕ್ಕೆ ಬರೋ ಚಿಕ್ಕೋರಿಗೆ ಕಾಫಿತಿಂಡಿ ಆಸೆ ತೋರುಸಿದ ಕಲ್ಲಯ್ಯ ಕೆಲಸಕ್ಕೆ ತಾನೂನು ಅವರ ಜತೆ ಕೂಡ್ಕಂಡ. ಎರಡು ದಿನಕ್ಕೇನೆ ಗುಡಿ ಸುತ್ತಮುತ್ತಲ ಜಾಗ ಕಿಲೀನಾಗಿ ಗುಡಿ ಎದ್ದುಬರೂವಂಗೆ ಕಾಣುಸತೊಡಗಿತು. ಹೊರಗೇನೂ ಗುಡಿ ಕಿಲೀನಾಯ್ತು. ಆದುರೆ ಒಳಭಾಗದಾಗೆ ಭಲೇ ಗಲೀಜಿತ್ತು. ಗೋಡೆಗಳ ತುಂಬಾ ತಂಬುಲದ ಕೆಂಪು ಕರೆಗಳಿದ್ದರೆ, ನೆಲದ ಮ್ಯಾಗೆ ಇಂಚುಮಂದದ ಧೂಳು ತುಂಬುಕಂಡಿತ್ತು. ಧೂಳು ಜೇಡಗಳನು ಬಳಿದು ತೆಗದು ಕಿಲೀನು ಮಾಡೊ ಹೊತ್ತಿಗೆ ಕಲ್ಲಯ್ಯಗೆ ಸಾಕುಸಾಕಾಯ್ತು. ಪರಲಾಂಗು ದೂರದ ಬಾವಿಯಿಂದ ನೀರುನ ಕೊಡದಾಗೆ ಹೊತ್ತುತಂದು ಒಂದುಕಿತ ಗುಡಿ ಪೂರಾ ತೊಳುದ. ವಾರ ಕಳೆಯುವಷ್ಟರಾಗೆ ಗುಡೀಗೆ ರವಷ್ಟು ಕಳೆ ಬರತೊಡಗಿತು.
ಗುಡಿ ಒಂದು ಹದ್ದಿಗೆ ಬಂದ ಮ್ಯಾಲೆ ಕಲ್ಲಯ್ಯ ದೇವುರಿಗೆ ನಿತ್ಯವೂ ಹುವ್ವನೀರು ತೋರುಸಾಕೆ ಶುರುಮಾಡುದ, ಹುವ್ವನೀರು ಕಂಡು ಗೆಲುವಾದ ದೇವುರನ ಕಂಡು ಕುರಿದನಗಳ ಕಾಯೊ ಐಕಳಿಗೆ ತುಸು ಭಕುತಿ ಹುಟ್ಟುತು. ಅವು ತಮ್ಮ ದನಕರುಗಳು ಗುಡಿ ಹತ್ತರ ಗಲೀಜು ಮಾಡದಂಗೆ ನೋಡಿಕಳ್ಳಾದು, ಅಲ್ಲಿ ಇಲ್ಲಿ ಅರಳಿಕಂಡಿದ್ದ ಹುಟ್ಟುಗಳ ಕಿತ್ತುತಂದು ಕಲ್ಲಯ್ಯಗೆ ಕೊಡಾದು ಮಾಡುತಿದ್ದವು. ಇಷ್ಟಾದರೂ ಕಲ್ಲಯ್ಯಂಗೆ ನಿರಾಳನ್ನಿಸಲಿಲ್ಲ, ಈ ಮೊದಲು ಕತ್ತಲಾಗೆ ಬಂದುಹೋಗುತಿದ್ದ ಜನಗಳು ಈಗಲೂ ಬಂದು ಹೋಗುತಾನೇ ಇದ್ದರು. ವತ್ತಾರೆ ಗುಡೀತಾಕೆ ಬಂದರೆ ಗುಡಿತುಂಬ ಎಂತೆಂಥವೋ ಪಾಕೀಟುಗಳು, ಗಬ್ಬುನಾತದ ಗಲೀಜು ಕಂಡು ಕಲ್ಲಯ್ಯಗೆ ಚಿಂತಿಯಾಗ್ತಿತ್ತು. ಜೊತೆಗೆ ಗುಡಿಯ ಬದಲಾವಣೆ ಊರ ಜನಗಳ ಗಮನಕ್ಕೆ ಬಂದಂಗೆ ಕಾಣುಸಲಿಲ್ಲ, ಗುಡೀನೊಂದು ಚಂದ ಕಾಣುಸಿ ತಿಂಗಳು ಕಳೆದರೂ ದನಗಳ ಕಾಯೊ ಐಕಳ ವಿನಾ ಒಂದು ನರಪಿಳ್ಳೆಯೂ ಬಂದು ದ್ಯಾವರಿಗೆ ಕೈಮುಗೀಲಿಲ್ಲ , ಕಾಯೊಡಸಲಿಲ್ಲ, ಇಂಗೇ ಉದಾಸೀನ ಮಾಡುದರೆ ಗುಡಿ ರೂಢುಸುದಕ್ಕೆ ಬದಲು ಮತ್ತಷ್ಟು ಅಧ್ವಾನವೆದ್ದೋಗ್ತದನ್ನಾದು ಕಲ್ಲಯ್ಯಗೆ ಖಚಿತವಾಯ್ತು. ಇಷ್ಟು ಕಷ್ಟಪಟ್ಟು ಹದ್ದಿಗೆ ತಂದ ಗುಡೀಗೆ ಏನಾದರೂ ಮಾಡಲೆಬೇಕೂಂತ ಹಗಲೂ ಇರುಳೂ ತಲೆ ಕೆರಕಂಡ.
ಈ ಹೊತ್ತಿನಾಗೆ ಕಲ್ಲಯ್ಯಗೆ ಗಂಟುಬಿದ್ದವನು ಚಲುವಯ್ಯ, ‘ಗುಡೀ ಚಿಂತೆಯ ನಂಗೆ ಬುಡು. ಬರೋ ವರ್ಷ ಈ ಹೊತ್ತಿಗೆ ಗುಡೀಗೆ ನೂರಾರು ಜನ ಬರೋ ಅಂಗೆ ಮಾಡದಿದ್ದರೆ ನಾ ಸತ್ತೆ ಅಂತ ತಿಳುಕ’ ಎಂದು ಕಲ್ಲಯ್ಯನ ಹತ್ತರ ಚಲುವಯ್ಯ ಶಪಥ ಮಾಡುದ, ಈ ಮಾತಿನಿಂದ ಖುಷಿಯಾದ ಕಲ್ಲಯ್ಯ ಚಲುವಯ್ಯನಿಗೆ ಬೇಕುಬೇಕಾದ ಅನುಕೂಲಗಳೆಲ್ಲವನ್ನು ಒದಗಿಸಿಕೊಟ್ಟ.
(ಸೌಜನ್ಯ : ಸಂಚಯ, ಬೆಂಗಳೂರು, 9844063514)
ಇದನ್ನೂ ಓದಿ : Literature : ಅಭಿಜ್ಞಾನ ; ಪಾದರಸದಂತೆ ಹಗೂರ ತೇಲಿ ಬಂದ ಆ ಹೆಣ್ಣು, ಆ ಸುವಾಸನೆ ಅವನ ನಿರ್ಧಾರಕ್ಕೆ ಮೂಲ ಕಾರಣವಾಯಿತು