ಅವಿತಕವಿತೆ: ಜೀವರಸ ಕುಡಿದು ಮತ್ತೇರಿ ಹುಟ್ಟಬೇಕು ಮತ್ತೆ ಮತ್ತೆ…

ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ’ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಕಥೆಗಾರ್ತಿ, ಪ್ರಾಧ್ಯಾಪಕಿ ಡಾ. ಗೀತಾ ವಸಂತ ಅವರ ಎರಡು ಕವಿತೆಗಳು ನಿಮಗಾಗಿ...

ಅವಿತಕವಿತೆ: ಜೀವರಸ ಕುಡಿದು ಮತ್ತೇರಿ ಹುಟ್ಟಬೇಕು ಮತ್ತೆ ಮತ್ತೆ...
Follow us
ಶ್ರೀದೇವಿ ಕಳಸದ
|

Updated on:Jan 17, 2021 | 11:41 AM

‘ಕಾವ್ಯ ಸೃಷ್ಟಿಯ ಬಗ್ಗೆ ಅಪಾರ ಗೌರವ ಮತ್ತು ಕುತೂಹಲಗಳಿಂದ ಕೂಡಿದ ಪ್ರಕೃತಿಯಿಂದ ಕವಿತೆಯ ಪಾಠ ಕಲಿಯುತ್ತಾ ಬೆಳೆದ ಮೌನಿ ಗೀತಾ ವಸಂತ. ಒಲೆಯ ಬೆಂಕಿ, ಗೋಡೆಯ ಮೇಲೆ ಬರೆದ ಚಿತ್ರದಲ್ಲಿ ಹೆಣ್ಣಿನ ರೂಪ ಕಂಡು ಬೆಂಕಿಯೊಳಗೆ ಹೆಣ್ಣೋ ಹೆಣ್ಣಿನೊಳಗೆ ಬೆಂಕಿಯೋ ಎಂಬ ಆಸೆಯಲ್ಲಿ ಬರೆಯುತ್ತ ಬರೆಯುತ್ತ ಬೆಳೆದ ಗೀತಾ ಪರಿಮಳದ ಬೀಜವನ್ನು ಬಿತ್ತುತ್ತ ಬಂದವರು.

ಅಡುಗೆ ಮನೆಯ ನಿರ್ಮಾಲ್ಯದ ಗೆಳೆತನದ ಕನ್ನಡಿಯನ್ನು ತೊರೆದು ಹೊಸರೂಪದ ಕನ್ನಡಿಯ ಹೊಸಮುಖವನ್ನು ಕನಸುವ ಬಯಕೆ. ಕಾಯುವ ಕೊಲ್ಲುವ ಧರ್ಮಸಂಸ್ಕೃತಿಯಲ್ಲಿ ಹೊಳೆಯೇ ನಮ್ಮನ್ನು ಉಳಿಸು ಎಂಬ ಮೊರೆ ಅವರದು. ಬಯಲಲ್ಲಿ ಬೆರೆತವನ ಕುರುಹು ಹುಡುಕುತ್ತಾ, ದೇಗುಲದ ಹಂಗು ತೊರೆಯಲಿಕ್ಕೋ, ಕರುಳ ಬಳ್ಳಿಯ ಕುಸುರಿಯಲ್ಲಿ ವಸಂತದ ಗೀತೆಯನ್ನವರು ಬರೆಯುತ್ತಾರೆ. ಇಹದ ಕುರಿತ ಅಳಿಯದ ಪ್ರೀತಿ, ಪರದ ಕುರಿತ ಮುಗಿಯದ ಬೆರಗು, ಭಾಷೆಯನ್ನು ಕವಿತೆಯೆಂಬ ಮಾಯೆಯಲ್ಲಿ ಎರಕ ಹೊಯ್ಯುವ ಜೀವಯಾನ ಅವರ ಕವಿತೆ.’ –ಸ ಉಷಾ. 

ಈ ಕವಿತೆ ಸೂಕ್ಷ್ಮ, ಮೋಹಕ. ಗಂಡು ಹೆಣ್ಣಿನ ಪ್ರೇಮದ ರಹಸ್ಯಮಯತೆ ಇದು. ಇಂಥ ನಿಗೂಢ ಲೋಕಕ್ಕೆ ಲಗ್ಗೆ ಇಟ್ಟಂತಿದೆ ಗೀತಾ ಅವರ ಕವಿತೆ. ಅಕ್ಕ, ಮೀರಾ ಎಲ್ಲರೂ ಜೀವನದ ಈ ನೈಜ ತಂತುಗಳನ್ನು ಇಳೆಗೆ ತಂದವರೇ. ವಾಸ್ತವ ಸುಳ್ಳು, ಕಲ್ಪನೆ ನೈಜ ಎನಿಸುವುದು ಇಂತಹ ಕವಿತೆಗಳಿಂದಲೇ. ದೇಹವನ್ನು ಬಳಸಿ, ದೇಹವನ್ನು ಮೀರಿ ಪ್ಲೆಟಾನಿಕ್ ಆಗಿ ಕಾಡುವ ಕವಿತೆಯಿದು. ಒಂದು ಸುಂದರ ಸ್ವರವಾಗಿ ಅನುರಣಿಸುತ್ತಲೇ ಇದೆ. -ವಿಕ್ರಮ ವಿಸಾಜಿ

ಬೀಜ

ಈ ಬೋಳುಗುಡ್ಡಗಳ ನಿಟ್ಟುಸಿರ ಊರಿನಲಿ ಉರಿವಸೂರ್ಯನ ಅವಚಿಕೊಂಡ ಮಂಕು ಬೂದಿಯಂಥ ಮೋಡ ಮಳೆಗೂ ಕೊಚ್ಚಿಹೋಗುವ ಕಸುವಿಲ್ಲ ಪಾಂಡುವಿನಂತೆ ನಿರ್ವೀರ್ಯ.

ಕುಂತಿಯಂತೆ ಕುಂತ ಭೂಮಿ ಕಳ್ಳಬಸಿರಿನ ಕರ್ಣರಕೂಡ ನಡುರಾತ್ರಿಯಲಿ ಪಿಸುಮಾತು ಹಗಲಿಡೀ ಹರಗಿಟ್ಟ ಮಾನ ಗರ್ಭದೊಳಗೆ ಮೊಳೆತೇಳದ ಜೊಳ್ಳುಬೀಜ.

ಒಳಗೆ ತಿದಿಯೊತ್ತುತ್ತ ಮಾರ್ದನಿಗೊಳ್ಳುತಿದೆ ಗುಡ್ಡಗಳ ನಿಟ್ಟುಸಿರು ಗುಹೆಗರ್ಭದ ನಗ್ನಸಾಧಕನ ದಗ್ಧಭಾವ ಸೋಕುತಿದೆ ಝಳವಾಗಿ ಮೂಡುತಿದೆ ಕಣ್ಣ ಪಾಪೆಯಲಿ ಭಗ್ನಪ್ರತಿಮೆಯ ಭಂಗಿ.

ಇದೆಯಂತೆ ಇದೇ ಗುಡ್ಡಗಳಲಿ ಉಜ್ಜೀವಿಸುವ ಸಂಜೀವಿನಿ ಪೊದೆಗಳಲಿ ಕತ್ತೆತ್ತಿ ಬುಸುಗುಡುವ ಹಾವಿನ ನೆತ್ತಿ ಸವರಿ ಸಾವಿನ ಕತ್ತಿ ಯಿಂದ ಪಾರಾಗಬೇಕು ಜೀವರಸಕುಡಿದು ಮತ್ತೇರಿ ಹುಟ್ಟಬೇಕು ಮತ್ತೆಮತ್ತೆ.

ಕಂಪಿಸುತಿದೆ ಸಂತನ ತಂಬೂರಿದನಿಗೆ ಪರಾಗ ಸ್ಪರ್ಷಕೆಕಾದ ಪುಷ್ಪಗರ್ಭ. ಸ್ಖಲಿಸುತಿವೆ ಗುಡ್ಡಗುಡ್ಡಗಳೆ ಮೀಟಿದಂತೆ ನರನಾಡಿ ವಿರಾಗದೆದೆಯಲಿ ಸಂಚರಿಸಿದೆ ಹೊಸತೊಂದು ರಾಗ.

ತಂಬೂರಿಯ ಸೋರೆಬುರುಡೆಯೆ ಮೊಳೆತು ಚಿಗಿತೇಳುತಿದೆ ಬಳ್ಳಿಬಳ್ಳಿಯಲಿ ಹಸಿರುಕ್ಕಿ ಹೂತು ಗೆಣ್ಣುಗೆಣ್ಣಿಗೆ ಮಿಡಿಗಾಯಿಜೋತು ಹಣ್ಣಾಗುವುದನೆ ಕಾದಿದೆ ಹಕ್ಕಿ ಸೃಷ್ಟಿಬೀಜವ ಆಯಲಿಕ್ಕೆ.

ಕೈಬರಹದೊಂದಿಗೆ ಕವಿ ಡಾ. ಗೀತಾ ವಸಂತ.

ಕವಿತೆಯೆಂದರೆ ನನಗೆ ಹೊರಗನ್ನು ಕಾಣುವ ಕಿಟಕಿ, ಒಳಗನ್ನು ಕಾಣುವ ಬೆಳಕು. ಒಳಹೊರಗನ್ನು ತನ್ನ ಮಾಯಕ ಕ್ಷಣದಲ್ಲಿ ಛಕ್ಕನೆ ಬೆಸೆದುಬಿಡುವ ಬೆರಗು. ಯಾವುದೋ ಸಂಗತಿ ಅಥವಾ ಭಾವವು ತೀವ್ರವಾಗಿ ನಮ್ಮನ್ನೇ ಅಲುಗಾಡಿಸದಿದ್ದರೆ ಕವಿತೆ ಮೊಳೆಯದು ನನ್ನಲ್ಲಿ. ಕವಿತೆ ಬರೀ ಕಟ್ಟುವಿಕೆಯಲ್ಲ. ಅದು ಭೂಮಿಯನ್ನು ಸೀಳಿ ಹೊರಬರುವ ಬೀಜದ ಸಂಕಟಕರ ಅನುಭವವೂ ಹೌದು. ಮುಂದೆ ಚಿಗುರುವ ಸಂಭ್ರಮದ ಅನುಭೂತಿಯೂ ಹೌದು. ಬೆಂಕಿಯಲ್ಲೇ ಬೆಳಕು ಬೆರೆತಿರುವಂತೆ ಉರಿಯುತ್ತ ಉರಿಯುತ್ತಲೇ ಬೆಗುವ, ಹೊಸದಾರಿಗಳನ್ನು ಕಾಣಿಸುವ ಕವಿತೆ ಜೀವವನ್ನು ಮಾಗಿಸುವ ಅದ್ಭುತ ಪ್ರಕ್ರಿಯೆ. -ಗೀತಾ ವಸಂತ

ದಿಗಂಬರ

ಕನಸಲ್ಲಿ ಸುಳಿದವನು ಗೊಮ್ಮಟನಿರಬಹುದೆ ಗೆಳತಿ ವಿಶಾಲಭುಜ ಹರವಾದಎದೆ ಪ್ರಮಾಣಬದ್ಧ ಪುರುಷಶಿಲ್ಪ ತೊಡೆಗಳಿಗೆ ತಳುಕುಹಾಕಿದ ಬಳ್ಳಿ ಚಿಗಿತು ಹಸಿ ಹಸಿರಾಗಿ ಬೆಟ್ಟದ ಬೋಳು ನೆತ್ತಿಯಲಿ ಅರಳಿದ ಜೀವಪುಷ್ಪ

ಕೈಯಲ್ಲಿ ಕೊಳಲಿತ್ತೆ ಕೊರಳಲ್ಲಿ ಹಾವಿತ್ತೆ ಮುಖತುಂಬ ಹುಣ್ಣಿಮೆ ಸೂಸುವ ಬುದ್ಧನ ಮಂದಸ್ಮಿತವಿತ್ತೆ ಕಣ್ಣೊಳಗೆ ತುಳುಕುವ ಮಹಾವೀರನ ಕಾರುಣ್ಯವಿತ್ತೆ ಅಥವಾ ಹಾವುಗೊಲ್ಲನ ಹಸೀ ತುಂಟತನವಿತ್ತೆ ಯಾರಿರಬಹುದೆ ಅವನು ಅಕ್ಕಾ?

ನಿನ್ನ ಕನಸಿನ ಗೊರವ ನನ್ನ ಕನಸಿಗಿಳಿದನೆ ಮತ್ತೆ? ನೀಟಾದ ಮಾಟ ಮೂಗಿನ ಮೇಲೆ ಕೊನರಿದ ಕುಡಿಹುಬ್ಬು ಕಣ್ಣಕಣಿವೆಯ ನಿಗೂಢ ಆಳ ರೆಪ್ಪೆಗಳ ಸರ್ಪಗಾವಲಿನ ಒಳಗೆ ಬೆಳಕಿನ ಮಣಿ ಮಣಿತೊಲಗೆ ಮಿಡುಕುವ ಮಾಯಾಜಗತ್ತು.

ಇದೇನು ಮುಖವೊ ಮಂಡಲವೋ ಯಾವ ಶುಭದರುಶನದ ಸೂಚನೆಯೊ ಕಾಣೆ ಕೆಳದಿ

ಬಾಯೊಳಗೆ ಬ್ರಹ್ಮಾಂಡ ಅನ್ನಯಜ್ಞಕ್ಕೆ ಉಸಿರ ಆಜ್ಯ ಹಾವುಏಣಿಯಾಟದ ಉನ್ಮತ್ತನೋಟದಲಿ ಅರಳಿದ ನಂದನದ ತೋಟ ಬಾಲಹಿಡಿದು ಸರಕ್ಕನೆ ಮೇಲೇರಿದರೆ ಹೆಡೆಯ ನೆರಳಲ್ಲಿ ಸಮಾಧಿ

ಹಣೆಯ ಶಿಖರದ ತುತ್ತತುದಿಯಲಿ ನೆತ್ತಿ ಮೀರಿ ಹಾರಲಾಗದ ಪ್ರಾಣಪಕ್ಷಿ ಮನದ ಹುದುಲಲಿ ಸಿಕ್ಕಿ ಸುಳಿಯುತಿದೆ ಸುತ್ತಿಸುತ್ತಿ ಕತ್ತೆತ್ತಿ ಕರೆಯುತಿದೆ ಕೋಟಿಸೂರ್ಯರ ಲೋಕ ಬೆಟ್ಟದ ಹಂಗುಹರಿದು ಹಾರಿಬಿಡುವನೆ ಆ ಜಂಗಮ ಸೂತ್ರಕಳಚಿದ ಪಟದಂತೆ ಮೇಲೇರಿ ಚಿಕ್ಕೆಯಾಗುವನೆ

ಮೊದಲೇ ದಿಗಂಬರನೀಗ ಪೊರೆಕಳಚುತ್ತಿದ್ದಾನೆ ಕರಗುತಿದೆ ಪುರುಷ ಶಿಲ್ಪ ಅದು ಅವನೋ ಅವಳೋ ಮನುಜನೋ ಪಕ್ಷಿಯೋ ಅಕ್ಷಿಪಟಲದಾಚೆ ಮಾಟವಿಲ್ಲದ ನೋಟ ಹಾರಿಹೋಗುವ ಮುನ್ನ ಅರೆಘಳಿಗೆ ತಾಳುವಂತೆ ಹೇಳಬೇಕು ಅವಗೆ ಕುಂಭ ಬೇಯುವವರೆ

ಅವಿತಕವಿತೆ: ಜಿಂಕೆಯ ನೆನಪಿನೊಂದಿಗೆ ಸಂಧ್ಯಾದೇವಿ

Published On - 11:33 am, Sun, 17 January 21

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ