ಓದು ಮಗು ಓದು: ಶಿವಮೊಗ್ಗದ ಹದಿನಾರರ ಹುಡುಗ 33 ಪುಸ್ತಕಗಳನ್ನು ಬರೆದದ್ದು ಹೀಗೆ…
‘ಬೇರೆ ಲೇಖಕ/ಲೇಖಕಿಯರು ಸೃಷ್ಟಿಸಿದ ಮಾಯಾಲೋಕಗಳನ್ನು ನೋಡಿದಾಗ ನಮಗೆ ನಮ್ಮದೇ ಒಂದು ಲೋಕವನ್ನು ಸೃಷ್ಟಿಸಬೇಕು ಎನ್ನುವ ಭಾವನೆ ಬರುತ್ತದೆ. ಅದನ್ನು ನಾವು ಕಾರ್ಯರೂಪಕ್ಕೆ ತಂದರೆ ಅದೇ ಕಥನ-ಸಾಹಿತ್ಯವಾಗುತ್ತದೆ ಎಂಬುದು ನನ್ನ ಸದ್ಯದ ಅಭಿಪ್ರಾಯ.‘ ಅಂತಃಕರಣ
ಈಗಂತೂ ಮಕ್ಕಳ ಇಸ್ಕೂಲ್ ಮನೇಲಲ್ವೇ? ಹಾಗಿದ್ದರೆ ಪಠ್ಯಪುಸ್ತಕ ಬಿಟ್ಟು ಬೇರೇನು ಓದುತ್ತಿವೆ ನಮ್ಮ ಮಕ್ಕಳು ಎನ್ನುವ ಕುತೂಹಲ ಟಿವಿ9 ಕನ್ನಡ ಡಿಜಿಟಲ್ಗೆ ಉಂಟಾಯಿತು. ತಡಮಾಡದೆ ಒಂದಿಷ್ಟು ಮಕ್ಕಳಿಗೆ, ಈ ತನಕ ನಿಮಗೆ ಇಷ್ಟವಾದ ಐದು ಪುಸ್ತಕಗಳು ಮತ್ತವುಗಳ ಬಗ್ಗೆ ದೊಡ್ಡವರ ಸಹಾಯ ಪಡೆದುಕೊಂಡೇ ಬರೆದು ಕಳಿಸಿ ಎಂದು ಕೇಳಲಾಯಿತು. ಮೆಲ್ಲಮೆಲ್ಲಗೆ ‘ಕನ್ನಡ’ದಲ್ಲಿ ಬಂದು ನಮ್ಮನ್ನು ತಲುಪಿದ ಮೇಲ್ಗಳಲ್ಲಿ ಕೆಲವೊಂದಿಷ್ಟನ್ನು ಆಯ್ಕೆ ಮಾಡಲಾಯಿತು. ಈ ಓದು ಮಗು ಓದು ಸರಣಿಯಲ್ಲಿ ಪ್ರಜ್ಞಾವಂತ ಪೋಷಕರ, ಲೇಖಕರ, ಶಿಕ್ಷಕರ ಮತ್ತು ಓದುಬರಹವನ್ನೇ ಬದುಕಿನ ಭಾಗವಾಗಿಸಿಕೊಂಡ ದೊಡ್ಡಮಕ್ಕಳ ಅನುಭವಾಧಾರಿತ ಕಥನಗಳು, ವಿಶ್ಲೇಷಣಾತ್ಮಕ ಮತ್ತು ಮುನ್ನೋಟದಿಂದ ಕೂಡಿದ ಲೇಖನಗಳೂ ಇರುತ್ತವೆ. ಇಷ್ಟೇ ಅಲ್ಲ, ಇಲ್ಲಿ ನೀವೂ ನಿಮ್ಮ ಮಕ್ಕಳೊಂದಿಗೆ ಪಾಲ್ಗೊಳ್ಳಬಹುದು ಹಾಗೆಯೇ ಪ್ರತಿಕ್ರಿಯೆಗಳನ್ನೂ ಹಂಚಿಕೊಳ್ಳಬಹುದು. ಇ-ಮೇಲ್: tv9kannadadigital@gmail.com
ಶಿವಮೊಗ್ಗದ ಡಿ.ವಿ.ಎಸ್. ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ಅಂತಃಕರಣ ಈತನಕ ತನಗೆ 33 ಪುಸ್ತಕಗಳನ್ನು ಬರೆಯಲು ಸಾಧ್ಯವಾಗಿದ್ದು ಹೇಗೆ ಎಂಬುದನ್ನು ಹಂಚಿಕೊಂಡಿದ್ದಾನೆ.
ಓದು ಬರಹದ ಮೂಲ ಎಂಬ ಹಳೆಯ ಮಾತಿದೆ. ನನ್ನ ವಿಷಯದಲ್ಲಿ ಇದು ನಿಜ ಎಂದು ಹೇಳಬಹುದು. ನಾನು ಬರೆಯುವುದಕ್ಕೆ ಶುರು ಮಾಡಿದ್ದೇ ತುಂಬಾ ಓದುತ್ತಿದ್ದುದರಿಂದ. ನಾನು ಬಹಳ ಚಿಕ್ಕವನಾಗಿದ್ದಾಗಿಂದ ಹಿಡಿದು ಈಗಿನವರೆಗೂ ಎಂದಿಗೂ ನನಗೆ ಪುಸ್ತಕಗಳಿಗೆ ಅಪ್ಪ ಅಮ್ಮ ಎಂದೂ ಕೂಡ ಕಮ್ಮಿ ಮಾಡಿಲ್ಲ. ಸುಮಾರು ಒಂದು ವರ್ಷದವನಿದ್ದಾಗಿನಿಂದಲೇ ಹಾಸಿಗೆಯ ಮೇಲೆ ಸಣ್ಣಮಕ್ಕಳ ಚಿಕ್ಕ ಚಿಕ್ಕ ವಾಕ್ಯಗಳ ಪುಸ್ತಕ, ಚಿತ್ರಪುಸ್ತಕಗಳನ್ನು ತಂದಿಡುತ್ತಿದ್ದರು. ನಾನು ಮಲಗುವಾಗ ಹಾಗೆಯೇ ಒಮ್ಮೆ ಅವುಗಳನ್ನು ತೆಗೆದು ನೋಡಿ ಮಲಗುತ್ತಿದ್ದೆನಂತೆ. ಆಗ ಬರೀ ಚಿತ್ರಗಳನ್ನು ನೋಡುತ್ತಿದ್ದವನು ಹಾಗೆಯೇ ಚಿಕ್ಕ ಚಿಕ್ಕ ಪದಗಳನ್ನು ಓದಲು ಪ್ರಯತ್ನಿಸಲು ಶುರುಮಾಡಿದೆನಂತೆ. ನಂತರ ಚಿಕ್ಕಚಿಕ್ಕ ವಾಕ್ಯಗಳು, ಹೀಗೆ ನನ್ನ ಓದುವ ಪಯಣ ಶುರುವಾಯಿತು. ಒಂದನೇ ತರಗತಿಯ ಮುಂಚೆಯೇ ಎಳೆಯರ ರಾಮಾಯಣ ಹಾಗೂ ಮಹಾಭಾರತಗಳನ್ನು ನಾನು ಓದಿ ಮುಗಿಸಿದ್ದೆ. ಹೀಗೆ ಹೆಚ್ಚು ಓದುತ್ತಿದ್ದ ಕಾರಣ ನನಗೂ ನನ್ನ ವಿಚಾರಗಳನ್ನು ಬರೆಯಬೇಕು ಎನ್ನಿಸುತ್ತಾ ಹೋಯಿತು.
ಯುಕೆಜಿಯಲ್ಲಿದ್ದಾಗಲೇ ಕಥೆಗಳನ್ನು ಕವಿತೆಗಳನ್ನು ಬರೆಯಲು ಶುರು ಮಾಡಿದೆ. ನಾನು ನಾಲ್ಕನೇ ತರಗತಿಯಲ್ಲಿರಬೇಕಾದರೆ ನನ್ನ ಅಪ್ಪನಿಗೆ ಮೈಸೂರಿನ ‘ಬಾರುಕೋಲು’ ಪತ್ರಿಕೆಯವರು ಭಗತ್ ಸಿಂಗ್ ಹುತಾತ್ಮರಾದ ದಿನದ ಸ್ಮರಣೆಗಾಗಿ ಮಾಡುತ್ತಿದ್ದ ವಿಶೇಷ ಸಂಚಿಕೆಯಲ್ಲಿ ಒಂದು ಲೇಖನವನ್ನು ಬರೆದು ಕೊಡಲು ಕೇಳಿದ್ದರು. ಅಪ್ಪ ಆ ಸಮಯದಲ್ಲಿ ಪಿ.ಎಚ್.ಡಿ ಮಾಡುತ್ತಿದ್ದ ಕಾರಣ ಅವರಿಗೆ ಬರೆಯಲು ಸಮಯವಿರಲಿಲ್ಲ. ಹಾಗಾಗಿ ಅವರು ಪತ್ರಿಕೆಯ ಸಂಪಾದಕರಿಗೆ ‘ನನಗಾಗುವುದಿಲ್ಲ, ನನ್ನ ಮಗನಿಗೆ ಕೇಳುತ್ತೇನೆ’ ಅಂದಿದ್ದರು. ಆ ಸಮಯದಲ್ಲಿ ನಾನು ಭಗತ್ ಸಿಂಗ್ ಬಗ್ಗೆ ಓದಿದ್ದರಿಂದ ಲೇಖನ ಬರೆಯಲು ಒಪ್ಪಿಕೊಂಡೆ. ಅದು ಪ್ರಕಟವಾಯಿತು. ನಂತರ ‘ಎಚ್ಚರಿಕೆ’ ಪತ್ರಿಕೆಗೆ ಅಂಕಣ ಬರೆಯಲು ಕೇಳಿದರು. ನಾನು ಕೂಡಲೇ ಒಪ್ಪಿಕೊಂಡೆ. ಆದರೆ, ಆ ತನಕ ನಾನು ಏನೂ ಬರೆಯದ ಕಾರಣ ಅಪ್ಪ ನನಗೆ ಮೂರ್ನಾಲ್ಕು ಲೇಖನಗಳನ್ನು ಮೊದಲು ಬರೆದು ತೋರಿಸು, ಆಮೇಲೆ ನಿರ್ಧರಿಸೋಣ ಎಂದರು. ಹೀಗೆ ನನ್ನ ಅಂಕಣ ಬರಹದ ಪಯಣ ಶುರುವಾಯಿತು. ನಂತರ ‘ವಿಶ್ವಕನ್ನಡಿಗ ನ್ಯೂಸ್’ ವೆಬ್ಪತ್ರಿಕೆಯಿಂದಲೂ ಅಂಕಣಕ್ಕೆ ಆಹ್ವಾನ ಬಂದಾಗ ಕ್ರೀಡೆಯ ಬಗ್ಗೆ ಬರೆಯಲು ಶುರು ಮಾಡಿದೆ.
ಕಾದಂಬರಿಯನ್ನು ಮೊದಲ ಬಾರಿಗೆ ಬರೆದಿದ್ದು ಬೇರೊಂದು ಕಾದಂಬರಿ ಓದಿ ಪ್ರೇರಿತನಾಗಿ. ಹ.ಸ ಬ್ಯಾಕೋಡ ಅವರ ‘ಕೋಟೆಯಾದವರು’ ಕಾದಂಬರಿ ಓದಿ ‘ರಾಮಪುರದ ಗೆಳೆಯರು ಮತ್ತು ಆಜಾದ್ನಗರದ ಆಟಗಾರರು’ ಬರೆದೆ. ಬೇರೆ ಲೇಖಕರ ಲೋಕವನ್ನು ಜಾಲಾಡಿದಾಗ ನನಗೆ ನನ್ನದೇ ಲೋಕವನ್ನು ಸೃಷ್ಟಿಸಬೇಕು ಎಂದು ಅನ್ನಿಸಿದಾಗ ಹುಟ್ಟಿದ ಪ್ರಕಾರವೇ ಕಾದಂಬರಿ. ಹಾಗೆಯೇ ನಾನು ಬರೆಯುವ ಈ ಪಯಣದಲ್ಲಿ ನನಗೆ ನನ್ನ ಕುಟುಂಬದವರ ಶಾಲಾ ಸ್ನೇಹಿತರ ಮತ್ತು ಮುಖ್ಯವಾಗಿ ಶಿಕ್ಷಕ-ಶಿಕ್ಷಕಿಯರ ಬೆಂಬಲ ಯಾವತ್ತೂ ಎಲ್ಲದಕ್ಕೂ ಇರುತ್ತದೆ. ನನ್ನ ಪ್ರತಿ ಹೆಜ್ಜೆಯಲ್ಲಿಯೂ ಕೂಡ ಎಲ್ಲರೂ ನನಗೆ ಬೆಂಬಲ ನೀಡುತ್ತಾರೆ, ನನ್ನ ಯಶಸ್ಸಿನಲ್ಲಿ ಅವರ ಪಾತ್ರ ಬಹಳ ದೊಡ್ಡದಾಗಿದೆ.
ಇನ್ನು ನನ್ನ ದಿನದ ವೇಳಾಪಟ್ಟಿ ಅಂಥದ್ದೇನೂ ರೂಢಿಸಿಕೊಂಡಿಲ್ಲ. ಶಾಲೆಯ ಕೆಲಸವನ್ನು ನಿಗದಿತವಾಗಿ ಮಾಡುತ್ತೇನೆ. ಉಳಿದಂತೆ ಬೇರೆ ಪುಸ್ತಕಗಳನ್ನು ಓದಲು, ಬರೆಯಲು ನಿರ್ದಿಷ್ಟ ಸಮಯವಿಲ್ಲ. ಯಾವುದಾದರೂ ಪುಸ್ತಕವನ್ನು ಓದಬೇಕೆನ್ನಿಸಿದಾಗ ತೆಗೆದುಕೊಂಡು ಓದುತ್ತೇನೆ. ಮೊದಲೇ ಹೇಳಿದ ಹಾಗೆ ಆ ವಿಷಯದಲ್ಲಿ ಎಂದೂ ಕೂಡ ಅಪ್ಪ ಅಮ್ಮ ಇಂಥ ಪುಸ್ತಕವನ್ನು ಓದಬೇಡ ಎಂದು ಹೇಳಿಯೇ ಇಲ್ಲ. ಬರೆವಣಿಗೆಯ ವಿಷಯವಾಗಿಯೂ ಅಷ್ಟೇ. ಅಂದಹಾಗೆ ನನ್ನ ಸಾಹಿತ್ಯದ ಓದು ಬರಹ ನನ್ನ ಪಠ್ಯದ ಓದಿಗೆ ಎಂದೂ ಅಡ್ಡಿ ಮಾಡಿಲ್ಲ. ಸಮಯ ನಿರ್ವಹಣೆಯಿಂದ ಎಲ್ಲವನ್ನೂ ನಿಭಾಯಿಸಬಹುದು ಎಂದು ನಾನು ಭಾವಿಸಿದ್ದೇನೆ.
ನನ್ನಿಷ್ಟದ ಕಾದಂಬರಿಕಾರರು ನಾ.ಡಿಸೋಜ, ಆನಂದ ಪಾಟೀಲ, ತಮ್ಮಣ್ಣ ಬೀಗಾರ, ಹ.ಸ ಬ್ಯಾಕೋಡ. ಇಂಗ್ಲಿಷಿನಲ್ಲಿ ರಸ್ಕಿನ್ ಬಾಂಡ್ ಪುಸ್ತಕಗಳು ನನಗಿಷ್ಟ. ನನಗೆ ಕ್ರೀಡೆ ಬಹಳ ಇಷ್ಟವಿರುವುದರಿಂದ ಕ್ರಿಸ್ ಗೇಲ್, ಸಚಿನ್ ತೆಂಡುಲ್ಕರ್, ಉಸೇನ್ ಬೋಲ್ಟ್ ಸೇರಿದಂತೆ ಒಂದಿಷ್ಟು ಕ್ರೀಡಾಪಟುಗಳ ಆತ್ಮಚರಿತ್ರೆಗಳನ್ನು ಓದಿದ್ದೇನೆ. ಹೆಚ್ಚು ಇಷ್ಟವಾಗಿದ್ದು ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎ ಬಿ ಡಿ ವಿಲಿಯರ್ಸ್ ಅವರ ‘ಎಬಿ – ದ ಆಟೋಬಯಾಗ್ರಫಿʼ. ನಾನು ಅವರ ಆಟದ ಅಭಿಮಾನಿ ಕೂಡ ಆಗಿದ್ದು, ಆ ಪುಸ್ತಕದ ನಿರೂಪಣಾ ಶೈಲಿ ನನಗೆ ಬಹಳ ಹಿಡಿಸಿತು.
ಈ ಮೂಲಕ ನಾನು ಎಲ್ಲಾ ಪೋಷಕರಲ್ಲಿಯೂ ಕೇಳಿಕೊಳ್ಳಬಯಸುವುದೇನೆಂದರೆ ‘ದಯವಿಟ್ಟು ನಿಮ್ಮ ಮಕ್ಕಳಿಗೆ ಆಸಕ್ತಿಯಿರುವ ಕ್ಷೇತ್ರದಲ್ಲಿ ಮುಂದುವರೆಯಲು ಪ್ರೋತ್ಸಾಹ ನೀಡಿ. ಹಲವು ಬಾರಿ ಪೋಷಕರು ತಮ್ಮ ಕನಸುಗಳನ್ನು ಮಕ್ಕಳ ಮೇಲೆ ಹೇರುತ್ತಾರೆ. ಹಾಗೆ ಮಾಡದೆಯೇ ಅವರಿಗೆ ನಿಜವಾಗಿಯೂ ಆಸಕ್ತಿಯಿರುವ ಕ್ಷೇತ್ರವನ್ನು ಗುರುತಿಸಿ ಅದರಲ್ಲಿ ಎಷ್ಟು ಪ್ರೋತ್ಸಾಹಿಸಲು ಆಗುತ್ತದೆಯೋ ಅಷ್ಟು ಪ್ರೋತ್ಸಾಹಿಸಿ.’
ಪರಿಚಯ: ಅಂತಃಕರಣ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಬರೆಯಬಲ್ಲ ಪ್ರತಿಭಾವಂತ ಲೇಖಕ. ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 500 ಅಂಕಣ ಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ ಮತ್ತು 1 ನಾಟಕ ಪ್ರಕಟವಾಗಿವೆ. 10ನೇ ತರಗತಿ ಮುಗಿಸುವುದರೊಳಗೆ ಒಟ್ಟು 33 ಕೃತಿಗಳು ಹೊರಬಂದಿವೆ. ರಸಪ್ರಶ್ನೆ, ಫುಟ್ಬಾಲ್, ಕಬಡ್ಡಿ, ಡಿಸ್ಕಸ್ ಥ್ರೋ, ಕರಾಟೆ, ಚೆಸ್ನಲ್ಲಿ ಭಾಗಿ ಮತ್ತು ಜಿಲ್ಲಾಮಟ್ಟದ ಹಲವು ಬಹುಮಾನಗಳು ಸಂದಿವೆ. ಎಸ್.ಎಸ್.ಎಲ್.ಸಿಯಲ್ಲಿ (2019-2020) 99.20% ಅಂಕ ಗಳಿಕೆ. ಮೈಸೂರಿನಲ್ಲಿ ನಡೆದ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡನೆಗೆ ಆಹ್ವಾನಿಸಲ್ಪಟ್ಟ ಅತಿ ಕಿರಿಯ ಸಾಹಿತಿ.
Published On - 5:08 pm, Sun, 17 January 21