Short Stories : ಅಚ್ಚಿಗೂ ಮೊದಲು ; ಚಿದಾನಂದ ಸಾಲಿಯವರ ‘ಹೊಗೆಯ ಹೊಳೆಯಿದು ತಿಳಿಯದು’ ಇಂದು ಸಂಜೆ ನಿಮ್ಮ ಓದಿಗೆ
Short Story Of Chidanand Sali : ಅಪ್ಪ ಗೆಲುವಾಗಿದ್ದ. ನಾನು ಸೋತು ಸುಣ್ಣವಾಗಿದ್ದೆ. ನಾಚಿಕೆಗೇಡಿನ ಜನ್ಮ. ಊರಲ್ಲಿಯೇ ಉಳಿದುಕೊಂಡು ಅಮ್ಮನ ಮೇಲೆ ರುಬಾಬು ತೋರಿಸುತ್ತಿದ್ದೆ. ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ. ಈ ಶಿಕ್ಷಣ ಪದ್ಧತಿ ನಮಗೆ ಕಲಿಸಿಕೊಡೋದೇ ಇಂಥ ಅರ್ಥಹೀನ ಹುಸಿ ಅಹಂಕಾರಗಳನ್ನೇನೋ.
Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.
ಟಿವಿ9 ಕನ್ನಡ ಡಿಜಿಟಲ್ – ‘ಅಚ್ಚಿಗೂ ಮೊದಲು’ ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್ ನಂಬರ್ ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com
*
ಕೃತಿ : ಹೊಗೆಯ ಹೊಳೆಯಿದು ತಿಳಿಯದು (ಕಥಾಸಂಕಲನ) ಲೇಖಕರು : ಚಿದಾನಂದ ಸಾಲಿ ಪುಟ : 180 ಬೆಲೆ : ರೂ. 175 ಮುಖಪುಟ ವಿನ್ಯಾಸ : ಡಿ. ಕೆ. ರಮೇಶ ಪ್ರಕಾಶನ : ಅಂಕಿತ ಪುಸ್ತಕ, ಬೆಂಗಳೂರು
*
2007ರಲ್ಲಿ ಬರೆದ ‘ಕಾಗೆಯೊಂದಗುಳ ಕಂಡರೆ’ ಕಥೆಗೆ 2008ರ ಕನ್ನಡ ಪ್ರಭ ಸಂಕ್ರಾಂತಿ ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ ಬಂದು ಅದೇ ವರ್ಷ ‘ಧರೆಗೆ ನಿದ್ರೆಯು ಇಲ್ಲ’ ಕಥಾಸಂಕಲನ ಪ್ರಕಟವಾದ ನಂತರ, ಈ ಹದಿನಾಲ್ಕು ವರ್ಷಗಳಲ್ಲಿ ನನಗೆ ಬರೆಯಲು ಸಾಧ್ಯವಾಗಿದ್ದು ಕೇವಲ ಐದೇ ಕಥೆಗಳನ್ನು ಎಂದು ಹೇಳುವಾಗ ನಾಚಿಕೆಯೆನಿಸುತ್ತದೆ. ಈ ಅವಧಿಯಲ್ಲಿ ಪ್ರಬಂಧ, ಸಂಪಾದನೆ, ಅನುವಾದ, ನಾಟಕ, ಕಾದಂಬರಿ ಮುಂತಾದ ಪ್ರಕಾರಗಳಲ್ಲಿ ಕೃತಿಗಳೇನೋ ಬಂದವು. ಆದರೆ ಕಥಾಸಂಕಲನ ತರಲಾಗದ ಕೊರಗು ಒಳಗೆ ಕೊರೆಯುತ್ತಲೇ ಇತ್ತು. ಈಗ ಹದಿನಾಲ್ಕು ವರ್ಷಗಳ ಸುದೀರ್ಘ ವನವಾಸದ ನಂತರ ಈ ‘ಹೊಗೆಯ ಹೊಳೆಯಿದು ತಿಳಿಯದು’ ಬರುತ್ತಿದೆ.
ಚಿದಾನಂದ ಸಾಲಿ, ಲೇಖಕ, ಅನುವಾದಕ
*
ಇಂದು ಸಂಜೆ (ಜ.27) ಆನ್ಲೈನ್ ಮೂಲಕ ಬಿಡುಗಡೆಯಾಗುತ್ತಿರುವ ಈ ಸಂಕಲನದ ‘ಜಡ್ಡು’ ಕಥೆಯ ಆಯ್ದ ಭಾಗ.
*
ಅಪ್ಪ ಗೆಲುವಾಗಿದ್ದ. ನಾನು ಸೋತು ಸುಣ್ಣವಾಗಿದ್ದೆ. ನಾಚಿಕೆಗೇಡಿನ ಜನ್ಮ. ಊರಲ್ಲಿಯೇ ಉಳಿದುಕೊಂಡು ಅಮ್ಮನ ಮೇಲೆ ರುಬಾಬು ತೋರಿಸುತ್ತಿದ್ದೆ. ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ. ಈ ಶಿಕ್ಷಣ ಪದ್ಧತಿ ನಮಗೆ ಕಲಿಸಿಕೊಡೋದೇ ಇಂಥ ಅರ್ಥಹೀನ ಹುಸಿ ಅಹಂಕಾರಗಳನ್ನೇನೋ. ಶಾಲೆಯ ಮುಖವನ್ನೇ ನೋಡದಿದ್ದರೂ, ಯಾವನೋ ಒಬ್ಬ ಹೆಡ್ಮಾಸ್ತರ ಮೂರನೇ ಕ್ಲಾಸು ಪಾಸು ಅಂತ ಸುಳ್ಳು ಟೀಸಿ-ಮಾರ್ಕ್ಸ್ ಕಾರ್ಡ್ ಬರೆದುಕೊಟ್ಟಿದ್ದನೆಂದು, ಅಪ್ಪ ನೌಕರನಾಗಿದ್ದ. ಅಮ್ಮನೂ ಅಂಗೂಟಾ ಛಾಪೇ. ಆದರೆ ಅವರಿಬ್ಬರಿಗೆ ನನ್ನನ್ನು ಹೋಲಿಸುವಂತೆಯೇ ಇಲ್ಲ. ಮಾಡಿದ ಪ್ರತಿ ಸಣ್ಣ ತಪ್ಪಿಗೂ ಮನದಾಳದಿಂದ ಅವರು ಪರಸ್ಪರ ಹೇಳಿಕೊಳ್ಳುತ್ತಿದ್ದ ಕ್ಷಮಾಪಣೆಗಳು, ಪಡೆದ ಪ್ರತಿ ಸಣ್ಣ ಸಹಾಯಕ್ಕೂ ಮನಃಪೂರ್ವಕ ವಾಗಿ ಪ್ರಕಟಿಸುತ್ತಿದ್ದ ಧನ್ಯತಾ ಭಾವಗಳು ಬಹುಶಃ ಶಾಲೆಯ ಮೆಟ್ಟಿಲು ತುಳಿಯದಿರುತ್ತಿದ್ದರೆ ನನಗೂ ಬಳುವಳಿಯಾಗಿ ಬರುತ್ತಿದ್ದವೇನೋ? ಅಕ್ಷರ ನನಗೆ ಅಹಂಕಾರ ಕಲಿಸಿತೇ ಹೊರತು ಲೋಕ ಜ್ಞಾನ ಕಲಿಸಲಿಲ್ಲ. ನನ್ನ ಸಹಪಾಠಿಗಳೂ ಹುಬೇಹೂಬು ನನ್ನಂಥವರೇ.
ಪಡೆದ ಸಹಾಯಕ್ಕೆ ಥ್ಯಾಂಕ್ಸ್ ಹೇಳದೆ ‘ಅವನೇನು ಪುಗಸೆಟ್ಟೆ ಮಾಡಿದನಾ’ ಎಂದು ಕೊಂಕು ನುಡಿಯುವುದು. ಮಾಡಿದ ತಪ್ಪಿಗೆ ಸಾರಿ ಹೇಳದೆ ‘ಜಗತ್ತಿನ್ಯಾಗ ತಪ್ಪು ಮಾಡಲಾರದವರು ಯಾರದಾರ?’ ಅಂತ ಸಮರ್ಥಿಸಿಕೊಳ್ಳೋದು ಇವೇ ಘನಂದಾರಿ ಗುಣಗಳು. ಇಂಥ ನಡೆಗಳಿಂದಾಗಿ ಹೀಗೆ ಅರ್ಧಕ್ಕೇ ಫೇಲಾದ ನನ್ನಂಥವರು ಅಲ್ಲಿಯೂ ಸಲ್ಲದೆ ಇಲ್ಲಿಯೂ ಸಲ್ಲದೆ ಹಾಳಾಗಿಹೋಗುತ್ತೇವೆ. ಇನ್ನು ಗೆದ್ದವನ ಕಥೆಯಂತೂ ಹೇಳುವಂತೆಯೇ ಇಲ್ಲ. ಉಪವಾಸ ವನವಾಸ ಅನುಭವಿಸಿ ಈ ಹಂತಕ್ಕೆ ತಂದ ಅಪ್ಪ-ಅಮ್ಮಂದಿರೇ ಅವನಿಗೆ ಸಣ್ಣವರಾಗಿ ಕಾಣಿಸುತ್ತಾರೆ. ಪುಸ್ತಕದ ಓದಿಗಿಂತ ಲೋಕ ಸಮಸ್ತರ ಮಸ್ತಕದ ಓದೇ ಮುಖ್ಯ ಅಂತ ಅನಕ್ಷರರಿಗೆ ತಿಳಿದಷ್ಟು ಸ್ಪಷ್ಟವಾಗಿ ಅಕ್ಷರಸ್ಥರಿಗೆ ತಿಳಿಯೋದೇ ಇಲ್ಲ. ಹೀಗೆ ನನ್ನ ಲಹರಿ ಲಗಾಮಿಲ್ಲದ ಕುದುರೆಯಂತೆ ದಿಕ್ಕಾಪಾಲಾಗಿ ಓಡುತ್ತಿತ್ತು. ಮೆಳ್ಳೀಗಟ್ಟಿ ಡಾಕ್ಟರು ಬಂದಿದ್ದೇ ಗೊತ್ತಾಗಲಿಲ್ಲ.
ಎಫ್‌ಎನ್‌ಟಿ ಟೆಸ್ಟಿನ ರಿಸಲ್ಟ್ ಬಂದ ಮೇಲೆ ಊರಲ್ಲಿನ ಆಸ್ಪತ್ರೆಯ ಡಾಕ್ಟರು ಬರಹೇಳಿ “ಇಟ್ ಈಸ್ ಕ್ಲೀರ‍್ಲೀ ಎ ಸಿಎ ಸಸ್ಪೆನ್ಷನ್” ಎಂದು ಹೇಳಿದಾಗ ಏನೊಂದೂ ಅರ್ಥವಾಗದೆ ಮಿಕಿಮಿಕಿ ನೋಡಿದ್ದೆ. ಆಗ ಅವರು ವೈದ್ಯಕೀಯ ಪರಿಭಾಷೆಯಲ್ಲಿ ಕ್ಯಾನ್ಸರ್‌ಗೆ ಸಿಎ ಎನ್ನುತ್ತಾರೆಂದೂ; ಈ ಕೇಸು ಕ್ಯಾನ್ಸರ್ ಎಂಬ ಅನುಮಾನ ಸ್ಪಷ್ಟವಾಗಿದೆ ಎಂದೂ; ಇನ್ನೂ ಹೆಚ್ಚಿನ ಸ್ಪಷ್ಟತೆಗಾಗಿ ರಾಯಚೂರಿಗೆ ಹೋಗಿ ಇಎನ್‌ಟಿ ಸ್ಪೆಷಲಿಸ್ಟ್ ಡಾ. ಮೆಳ್ಳೀಗಟ್ಟಿ ಅವರ ಹತ್ತಿರ ಬಯಾಪ್ಸಿ ಮಾಡಿಸಬಹುದೆಂದೂ ಸೂಚಿಸಿದ್ದಲ್ಲದೆ ಪತ್ರವೊಂದನ್ನು ಬರೆದುಕೊಟ್ಟ ಮೇಲೆ ಇವತ್ತು ಇಲ್ಲಿಗೆ ಬಂದಿದ್ದೆವು. ರೂಟೀನ್ ಪೇಶಂಟ್ಗಳನ್ನು ನೋಡಲು ಹೋಗಿದ್ದ ಡಾಕ್ಟರರ ಬರವಿಗಾಗಿ ಕಾಯುತ್ತ ಕುಳಿತಿದ್ದೆವು. ನಾಳೆ ಮೂರನೇ ಸಲ ರಂಗಪ್ಪ ನಾಯಕನಲ್ಲಿಗೆ ಹೋಗಬೇಕಿತ್ತು. ಇವತ್ತು ರಾತ್ರಿ ರಾಯಚೂರಿಗೆ ಬಂದಿದ್ದರೂ, ರಾತ್ರಿ ಇಲ್ಲಿಯೇ ಉಳಿಯಬೇಕಾಗುತ್ತದೆಂದು ಡಾಕ್ಟರು ಹೇಳಿದ್ದರೂ, ಬೆಳಿಗ್ಗೆ ಈ ಬಯಾಪ್ಸಿಯ ರಿಸಲ್ಟ್ ತೆಗೆದುಕೊಂಡು ಇಲ್ಲಿಂದ ಒಂದೇ ಗಂಟೆಯ ಹಾದಿಯಿರುವ ಎಂಎ ದೊಡ್ಡಿಗೆ ಹೋಗುವುದಕ್ಕೇನೂ ತೊಂದರೆಯಿರಲಿಲ್ಲ. ಆ ಅಭಯ ಕೊಟ್ಟ ಮೇಲೇ ಅಪ್ಪ ಇಲ್ಲಿಗೆ ಬರಲು ಒಪ್ಪಿದ್ದ.
ಡಾಕ್ಟರ್ ಮೆಳ್ಳೀಗಟ್ಟಿಯವರು ಬೌಲ್, ಕತ್ತರಿ, ಬ್ಯಾಂಡೇಜ್ ಇತ್ಯಾದಿ ಆಯುಧ ಗಳೊಂದಿಗೆ ಸಹಾಯಕನ ಜೊತೆಗೆ ಸಿದ್ಧವಾಗೇ ಬಂದಿದ್ದರು. ಕುಶಾಲಿ ಸ್ವಭಾವದ ಅವರು ಅಪ್ಪನ ಕಿವಿಗಳನ್ನೊಮ್ಮೆ ಚೆಕ್ ಮಾಡಿ ಗುಗ್ಗೆ ತೆಗೆದು- “ಕಿಂವ್ಯಾಗಿನ ಕೂಕಣಿ ಆವಾಗಿಂದಾವಾಗ ತಕ್ಕೋತಿರಬೇಕೆನಪ. ಇಲ್ಲಾಂದ್ರ ಹೆಂಡ್ತಿ ಬೈದಿದ್ದು ಸರಿಯಾಗಿ ಕೇಳಸೂದೇ ಇಲ್ಲ” ಅಂದು ನಗಿಸಿದರು.
“ಕೇಳಸಲಿಕ್ರೇ ಚೊಲೋ ಅಲ್ರೀ ಸಾಬರೇ. ಚಿಂತಿನೇ ಇರದಿಲ್ಲ” ಅಂದ ಅಪ್ಪ ವಿಷಯವನ್ನು ಇಎನ್‌ಟಿ ವ್ಯಾಪ್ತಿಯಿಂದ ದಾಟಿಸಿ ಸೈಕಿಯಾಟ್ರಿಯ ಕಡೆಗೆ ಒಯ್ದ.
“ಅದಕ ಬೇಕಂತಲೇ ತಕ್ಕೊಂಡಿಲ್ಲನು ಹಂಗಾರ. ನನಗಿದು ಗೊತ್ತೇ ಆಗ್ಲಿಲ್ಲ ನೋಡಪ. ಸುಮ್ನೆ ಎಲ್ಲ ಕೇಳಿಸ್ಕೋಂತ ಚಿಂತಿ ಮಾಡಿ ಸಣ್ಣಾದೆ” ಅಂದರು ಡಾಕ್ಟರು. ಸ್ವತಃ ಚತುರ ಮಾತುಗಾರನಾದ ಅಪ್ಪ ಆ ಮಾತಿಗೆ ಮತ್ತೊಂದು ಮಾತು ಜೋಡಿಸಿ ಬೆಳೆಸುವ ಅವಕಾಶವಿದ್ದರೂ ಹಾಗೆ ಮಾಡದೆ, ಡಾಕ್ಟರರ ಮೇಲಿನ ಗೌರವಾರ್ಥ ನಕ್ಕು ಸುಮ್ಮನಾದ. ಆತನ ತಲೆ ತುಂಬ ತನ್ನ ಪ್ರಾಣಪ್ರಿಯವಾದ ಬೀಡಿಯ ಹವ್ಯಾಸದ ಪುನರಾರಂಭದ ಗಳಿಗೆಗಳ ಹೊಗೆಮೋಡಗಳು ದಟ್ಟೈಸಿಕೊಂಡಿರಬಹುದು.
ಈಗ ಡಾಕ್ಟರು ಗಂಟಲು, ಮೂಗುಗಳಲ್ಲಿ ಕತ್ತರಿ, ಚಮಚೆಗಳನ್ನಾಡಿಸಿ ಸ್ವಲ್ಪ ನೋವುಂಟು ಮಾಡಿದರು. ನಂತರ ಸಹಾಯಕ ಅಲ್ಲಿಯೇ ಇದ್ದ ಬೆಡ್ ಮೇಲೆ ಮಲಗಿಸಿ ಮಿಸುಕಾಡದಂತೆ ತಲೆಯನ್ನು ಒತ್ತಿ ಹಿಡಿದ. ಡಾಕ್ಟರು ಆ ಕತ್ತಿನ ಮೇಲೆ ಈಗಾಗಲೇ ಅರ್ಧ ಬತ್ತಿಹೋಗಿದ್ದ ಗಡ್ಡೆಯನ್ನು ಹತ್ತಿಗೆ ಏನೋ ದ್ರವ ಸವರಿಕೊಂಡು ಒರೆಸಿ, ಮಿದುವಾಗಿಸಿ, ಲೋಕಲ್ ಅನಸ್ತೇಶಿಯಾ ಕೊಟ್ಟು ಅದರಿಂದ ಒಂದಷ್ಟು ಮಾಂಸಲ ಭಾಗವನ್ನು ಕತ್ತರಿಸಿ ತೆಗೆದು ಬೌಲಲ್ಲಿ ಹಾಕಿ ಬೆಳಿಗ್ಗೆ ರಿಸಲ್ಟ್ ಹೇಳುವೆನೆಂದು ಕೆಳಗಿಳಿದು ಹೋದರು. ಸಹಾಯಕ ಕತ್ತರಿಸಿದ ಭಾಗಕ್ಕೆ ಹತ್ತಿ ತುರುಕಿ, ಬ್ಯಾಂಡೇಜ್ ಸುತ್ತಿ, ಮೇಲೆ ಟೇಪ್ ಮೆತ್ತಿ ಇಷ್ಟೆತ್ತರ ಕಾಣುವಂತೆ ಮಾಡಿದ.
ಮೇಲಿನ ಆ ರೂಮು ಅಪರೂಪಕ್ಕೆ ಬಳಕೆಯಾಗುತ್ತಿತ್ತೆಂದು ಕಾಣುತ್ತದೆ. ಸಿಂಕಿನಲ್ಲಿ ನೀರು, ಟಾಯ್ಲೆಟ್ಟಿನಲ್ಲಿ ಬಕೆಟ್ಟು, ಮೂಲೆಯಲ್ಲಿ ಪೊರಕೆ ಇಂಥ ಯಾವ ಲಕ್ಷುರಿಗಳೂ ಇರಲಿಲ್ಲ. ಕೊಳೆಯಾದದ್ದಾದರೂ ಪರವಾಗಿಲ್ಲ, ಅಪ್ಪನಿಗೆ ಹಳೇ ಕಾಲದ ಪುರಾತನ ಮಂಚವಾದರೂ ಇತ್ತು. ನನಗೆ ಅದೂ ಇಲ್ಲ. ಎಲ್ಲರೂ ಚಪ್ಪಲಿಯಲ್ಲೇ ಓಡಾಡಿದ್ದರಿಂದ ನೆಲದ ಮೇಲೆ ಪೇರಿಕೊಂಡಿದ್ದ ಧೂಳು ನಮ್ಮ ಗಮನಕ್ಕೇ ಬಂದಿರಲಿಲ್ಲ. ಮೂಲೆಯಲ್ಲಿದ್ದ ಮೊಂಡು ಬಾರಿಗೆಯಿಂದ ಕಸ ಗುಡಿಸಿ, ಮನೆಯಿದ ತಂದಿದ್ದ ತೆಳು ಹಾಸಿಗೆಯನ್ನು ಹಾಸಿ ಲುಂಗಿ ಹೊದ್ದು ಮಲಗಿದೆ. ಸುಯ್ಯೆಂದು ಬೀಸುತ್ತಿದ್ದ ಗಾಳಿ ತಣ್ಣಗೆ ಕೊರೆಯುತ್ತಿತ್ತು. ಅಪ್ಪ ಮಲಗಿದ್ದ ಮಂಚಕ್ಕೆ ತಾಕಿಕೊಂಡಿದ್ದ ಕಿಟಕಿಯೊಂದೇ ಅಲ್ಲಿದ್ದ ಏಕೈಕ ಗಾಳಿಯ ಮೂಲ. ಕಿಟಕಿಯ ಎರಡೂ ಪಕ್ಕೆಗಳಿಗಿದ್ದ ಗಾಜುಗಳು ಒಡೆದುಹೋದದ್ದರಿಂದ ರ‍್ರೋ ಎಂದು ಬೀಸುತ್ತಿದ್ದ ಗಾಳಿ. ಕಿಟಕಿಗಳು ಗೋಡೆಗೆ ಧಬಾರೆಂದು ಒಡೆದುಕೊಳ್ಳುತ್ತಿದ್ದ ರಭಸಕ್ಕೆ ಕ್ಷಣಕ್ಷಣಕ್ಕೂ ಕದಡುತ್ತಿದ್ದ ಮನಃಶಾಂತಿ.
ಎದ್ದು ಅಲ್ಲೇ ಡಸ್ಟ್ ಬಿನ್‌ನಲ್ಲಿ ಬಿದ್ದಿದ್ದ ದಾರದಿಂದ ಅವುಗಳನ್ನು ಮೊಳೆಯೊಂದಕ್ಕೆ ಬಿಗಿಯಾಗಿ ಕಟ್ಟಿದೆ. ನಿದ್ದೆಯೇ ಬಂದಿರಲಿಲ್ಲವೋ, ನೋವೇ ಆಗುತ್ತಿತ್ತೋ ಗೊತ್ತಿಲ್ಲ ಅಪ್ಪ ಇನ್ನೂ ಎದ್ದೇ ಇದ್ದ. ಆರಾಮಿದ್ದಾಗ ಒಂದು ಕಟ್ಟು ಬೀಡಿಯ ಜೊತೆ ಇದ್ದರೆ ಸಾಕು ಇಂಥ ರಾತ್ರಿಗಳನ್ನು ಸುಟ್ಟು ಬೂದಿ ಮಾಡಿಬಿಡುತ್ತಿದ್ದ. ನನಗೆ ಆ ಕೆಲಸ ಈ ಕೆಲಸ ಮಾಡಿ ದಣಿವಾಗಿತ್ತು. ನೆಲಕ್ಕೆ ಬಿದ್ದೊಡನೆ ಕಣ್ಣುಗಳು ಹಗ್ಗ ಕಟ್ಟಿ ಎಳೆದಂತೆ.
ನಡುರಾತ್ರಿಯಲ್ಲಿ ಎದ್ದು ಕೂತ ಅಪ್ಪ ಕುತ್ತಿಗೆ ವಿಪರೀತ ನೋಯುತ್ತಿದೆ ಅಂದ. ಏನು ಮಾಡಬೇಕೋ ತೋಚದೆ ದಿಗಿಲಾಯಿತು. ಇನ್ನೂ ಹಸಿಯಿದ್ದ ಗಾಯಕ್ಕೆ ಕಿಟಕಿಯಿಂದ ತೂರಿ ಬರುತ್ತಿದ್ದ ತಣ್ಣನೆಯ ಗಾಳಿ ತಾಕಿ ತಾಕಿ ನೋವು ಹೆಚ್ಚಾಗಿರ ಬಹುದೆಂದು ತರ್ಕಿಸಿದೆ. ಬಾಧೆಗಳನ್ನು ಅವುಡುಗಚ್ಚಿ ನುಂಗುವುದರಲ್ಲಿ ಅಪ್ಪನದು ಎತ್ತಿದ ಕೈ. ಆತನ ಬದುಕಿನ ಬುಟ್ಟಿಯ ತುಂಬ ಇದ್ದುದು ಬರೀ ನೋವುಗಳೇ.
ಈ ಕಾದಂಬರಿಯ ಖರೀದಿಗೆ ಸಂಪರ್ಕಿಸಿ : 9019190502
*
ಚಿದಾನಂದ ಸಾಲಿ : ಮೂಲ ರಾಯಚೂರು ಜಿಲ್ಲೆ. ಎಂ.ಎಸ್ಸಿ (ಗಣಿತಶಾಸ್ತ) ; ಎಂ.ಎ (ಪತ್ರಿಕೋದ್ಯಮ); ಎಂ.ಎ (ಇಂಗ್ಲಿಷ್); ಎಂ.ಎ (ಕನ್ನಡ); ಎಂ.ಎಡ್ ; ಎಂ.ಫಿಲ್; ಪಿ.ಜಿ.ಡಿ.ಎಚ್.ಇ ಮತ್ತು ಪಿ.ಜಿ.ಡಿ.ಎಚ್.ಆರ್.ಎಂ ಪದವೀಧರ. ಪ್ರಸ್ತುತ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಪಿಎಚ್.ಡಿ ವ್ಯಾಸಂಗ ನಿರತ. ..ರೆ (ಕವಿತೆ); ಮೌನ (ಕನ್ನಡ ಗಜಲ್); ಧರೆಗೆ ನಿದ್ರೆಯು ಇಲ್ಲ, ಹೊಗೆಯ ಹೊಳೆಯಿದು ತಿಳಿಯದು (ಕಥೆ); ಚೌಕಟ್ಟಿನಾಚೆ (ಕಲಾವಿಮರ್ಶೆ); ಶಿಕ್ಷಣ ಮತ್ತು ಜೀವನಶೈಲಿ (ಸಂಶೋಧನೆ); ಕಾಲಕನ್ನಡಿ (ಸಂದರ್ಶನ); ಕರುಳ ತೆಪ್ಪದ ಮೇಲೆ (ನಾಟಕ); ಮೂರನೇ ಕಣ್ಣು (ಪ್ರಬಂಧ); ಒಂದು ಬೊಗಸೆ ಬಿಸಿಲು (ಲೇಖನ); ಮರದ ಹನಿ ಮಣ್ಣಿಗೆ (ತುಂಬುಗ); ಸಕಾರಣ (ವಿಮರ್ಶೆ); ಮಳೆ (ಕಾದಂಬರಿ); ಕಡಲಹಕ್ಕಿಯ ರೆಕ್ಕೆ, ಕನ್ನಡ ಗಜಲ್, ಗಾಳಿಗೆ ಬಳುಕಿದ ಬಳುಕು (ಸಂಪಾದನೆ); ಎಲೆಯುದುರೂ ಕಾಲ, ಕಾಲಸಾಕ್ಷಿಯಾಗಿ, ಯಜ್ಞ, ಮೋಹನಾ ಓ ಮೋಹನಾ! ಸ್ವಪ್ನಲಿಪಿ (ಅನುವಾದ, ತೆಲುಗಿನಿಂದ); ನೀಲಿ ಸರೋವರ; ಲೀಲಾಳ ಚಮತ್ಕಾರ (ಅನುವಾದ, ಹಿಂದಿಯಿಂದ); ಇಂದ್ರಸಭಾ (ಸಹ ಅನುವಾದ, ಉರ್ದುವಿನಿಂದ); ಪದ್ಯಪರದೇಶ, ಕಥನಾವಕಾಶ (ಅನುವಾದ, ವಿವಿಧ ಭಾಷೆಗಳಿಂದ); ಟ್ರೇನ್ ಟು ಪಾಕಿಸ್ತಾನ್ (ರೂಪಾಂತರ) ಕೃತಿಗಳು ಪ್ರಕಟ.
ಎರಡು ಸಲ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ; ಎರಡು ಸಲ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀವಿಜಯ ಪ್ರಶಸ್ತಿ, ಕಣವಿ ಕಾವ್ಯ ಪ್ರಶಸ್ತಿ, ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ, ಪ್ರೊ. ಎಸ್. ವಿ. ಪರಮೇಶ್ವರಭಟ್ಟ ಪ್ರಶಸ್ತಿ, ಬೇಂದ್ರೆ ಗ್ರಂಥ ಬಹುಮಾನ, ಸೋಮೇಶ್ವರ ಕಥಾಪ್ರಶಸ್ತಿ, ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ, ಪ್ರೊ. ತೇಜಸ್ವಿ ಕಟ್ಟೀಮನಿ ಯುವ ಸಾಹಿತ್ಯ ಪ್ರಶಸ್ತಿ, ಚುಕ್ಕಿ ಸಾಹಿತ್ಯ ಪ್ರತಿಷ್ಠಾನದ ಪುಸ್ತಕ ಬಹುಮಾನ, ಗುಲ್ಬರ್ಗಾ ವಿ.ವಿ ರಾಜ್ಯೋತ್ಸವ ಪುಸ್ತಕ ಬಹುಮಾನ ಹಾಗೂ ಡಾ. ನರಹಳ್ಳಿ ಪ್ರತಿಷ್ಠಾನದ ಪ್ರಶಸ್ತಿ ಹಾಗೂ ಬಿ.ಎಂ.ಶ್ರೀ. ಪ್ರತಿಷ್ಠಾನದ ವಿಮರ್ಶಾ ಪ್ರಶಸ್ತಿಗಳಿಗೆ ಭಾಜನ. ಕರ್ನಾಟಕ ಸರ್ಕಾರದ ಆರನೇ ತರಗತಿ ದ್ವಿತೀಯ ಭಾಷೆ ಕನ್ನಡ, ಗುಲ್ಬರ್ಗಾ ವಿಶ್ವವಿದ್ಯಾಲಯದ ಎಂಎ ನಾಲ್ಕನೇ ಸೆಮಿಸ್ಟರ್, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಬಿಬಿಎಂ ದ್ವಿತೀಯ ಸೆಮಿಸ್ಟರ್, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಎಂಎ ಮೂರನೇ ಸೆಮಿಸ್ಟರ್ ಹಾಗೂ ಕ.ಸಾ.ಪ ರತ್ನ ಪರೀಕ್ಷೆಯ ಪಠ್ಯಗಳಲ್ಲಿ ಬಿಡಿಬರೆಹಗಳು ಸೇರ್ಪಡೆ. ದಾವಣಗೆರೆ ವಿಶ್ವವಿದ್ಯಾಲಯದ ಎಂಎ ಮೂರನೇ ಸೆಮಿಸ್ಟರ್‌ಗೆ ‘ಮೂರನೇ ಕಣ್ಣು’ ಪ್ರಬಂಧ ಸಂಕಲನ ಪಠ್ಯವಾಗಿ ನಿಗದಿ. ಕನ್ನಡ ವಿಶ್ವವಿದ್ಯಾಲಯ, ಕುವೆಂಪು ಭಾಷಾಭಾರತಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾದೆಮಿ, ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಸಂಸ್ಥೆಗಳಿಂದ ಪುಸ್ತಕಗಳು ಪ್ರಕಟ. ಕೆಲವು ಬಿಡಿ ಕತೆ-ಕವಿತೆಗಳು ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲೀಷಿಗೆ ಅನುವಾದಿತ. ಕೆಲ ಕಾಲ ಪತ್ರಕರ್ತ. ಪ್ರಸ್ತುತ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ರಾಯಚೂರಿನ ಮೌಲಾನಾ ಆಜಾದ್ ಮಾದರಿ ಶಾಲೆಯ ಮುಖ್ಯೋಪಾಧ್ಯಾಯ.
*
ಇದೇ ಸಂದರ್ಭದಲ್ಲಿ ಬಿಡುಗಡೆಯಾಗುತ್ತಿರುವ ಇನ್ನೊಂದು ಕೃತಿ : New Novel : ಅಚ್ಚಿಗೂ ಮೊದಲು ; ಉಷಾ ನರಸಿಂಹನ್ ಅವರ ‘ಕೆಂಡದ ರೊಟ್ಟಿ’ಗಾಗಿ ಗುರುವಾರದ ತನಕ ಕಾಯಲೇಬೇಕು
Published On - 2:42 pm, Thu, 27 January 22