Poetry : ಅವಿತಕವಿತೆ ; ಈ ಕೊಡದಿಂದ ಆ ಕೊಡಕ್ಕ ಜಿಗಿ ಅಂತೀ ಅದನ ಕ್ರಾಂತಿ ಅಂತ ಹ್ಯಾಂಗ್ ನಂಬಲಿ?
Poem : ‘ನಾನು ನನ್ನ ಸುಖದುಃಖಗಳನ್ನೆಲ್ಲ ಕಾಗದಕ್ಕೆ ಹೇಳಿಬಿಟ್ಟಿರುವೆ. ಗದ್ಯ ಬರವಣಿಗೆಯೇ ಹೆಚ್ಚು ನಡೆದರೂ ಎಲ್ಲವನ್ನು ಗದ್ಯದಲ್ಲಿ ಹೇಳಲಾಗದು ಎನಿಸಿದಾಗ ಪದ್ಯ ಹುಟ್ಟಿದೆ. ಹೆಚ್ಚೆಚ್ಚು ಸಾರ್ವಜನಿಕವಾಗಿ ತೆರೆದುಕೊಳ್ಳುತ್ತ ಹೋದಹಾಗೆ ಇದ್ದಕ್ಕಿದ್ದಂತೆ ಏಕಾಂತ, ಬಿಡುವು ಬೇಕೆನಿಸಿದಾಗ ಕವಿತೆ ಹುಟ್ಟಿದೆ’ ಡಾ. ಎಚ್.ಎಸ್. ಅನುಪಮಾ
Kannada Poetry : ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’ (AvithaKavithe) ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಲೇಖಕಿ, ಹೋರಾಟಗಾರ್ತಿ, ಅನುವಾದಕಿ ಡಾ. ಎಚ್. ಎಸ್. ಅನುಪಮಾ (Dr. H.S. Anupama) ಅವರ ಕವಿತೆಗಳು ನಿಮ್ಮ ಓದಿಗೆ.
*
‘ಕಾವ್ಯ’ ಅನುಪಮಾ ಅವರ ಪ್ರೀತಿಯ ಪ್ರಕಾರ. ಸಾಹಿತ್ಯ ಕ್ಷೇತ್ರಕ್ಕೆ ಕಾವ್ಯಪ್ರಕಾರದ ಮೂಲಕವೇ ಇವರು ಪಾದಾರ್ಪಣೆ ಮಾಡಿದರು. ‘ಕಾಡುಹಕ್ಕಿಯ ಹಾಡು’ ಇವರ ಮೊದಲ ಕವನಸಂಕಲನ. ಎಲ್ಲೋ ತನ್ನ ಪಾಡಿಗೆ ತಾನು ಹಾಡಿಕೊಂಡಿದ್ದ ಈ ಹಕ್ಕಿಯ ಹಾಡು-ಪಾಡನ್ನು ಸಾಹಿತ್ಯ ವಲಯ ಕೇಳುವಂತಾದುದು ಅನುಪಮಾ ಅವರ ಮೇಷ್ಟ್ರು ಶಿವಮೊಗ್ಗ ಮುನೀರ್ ಬಾಷಾ ಅವರಿಂದ! ಬದುಕು ಮತ್ತು ಬರಹಗಳಲ್ಲಿ ಒಬ್ಬೊಬ್ಬರಿಗೆ ಒಂದೊಂದು ಬಗೆಯಲ್ಲಿ ತಿರುವು ಸಿಗುತ್ತಿರುತ್ತದೆ ಎಂಬುದಕ್ಕೆ ಇದು ಸಾಕ್ಷಿ. ಮೊದಲ ಕವನಸಂಕಲನ ಪ್ರಕಟವಾದ ಏಳೆಂಟು ವರ್ಷಗಳಲ್ಲಿ ‘ಸಹಗಮನ’ ಬಂದಿದೆ. ಅದಾದ ಮೇಲೆ ‘ಬುದ್ಧ ಚರಿತೆ’. ಬಳಿಕ ‘ನೆಗೆವ ಪಾದದ ಜಿಗಿತ’, ‘ಸಬರಮತಿ’ ಪ್ರಕಟಗೊಂಡಿವೆ. ಈ ನಡುವಿನ ಅವಧಿಯಲ್ಲಿ ಕಾವ್ಯಕಲೆಯಲ್ಲಿ ಅನುಪಮಾ ಸಾಕಷ್ಟು ಪ್ರಬುದ್ಧತೆಯನ್ನು ಸಾಧಿಸಿರುವುದು ತಕ್ಷಣ ಗಮನಕ್ಕೆ ಬರುತ್ತದೆ. ಕಾವ್ಯದ ಚೌಕಟ್ಟಿಗೆ ಸಮಕಾಲೀನ ಸಾಮಾಜಿಕ, ರಾಜಕೀಯ ವಿದ್ಯಮಾನಗಳನ್ನು ಎಳೆದು ತರುವ ಕವಯಿತ್ರಿಯ ಉತ್ಸಾಹ ಮತ್ತು ಅವುಗಳನ್ನು ಕವಿತೆಯ ಲಕ್ಷಣಗಳಿಗೆ ಒಗ್ಗಿಸುವ ಕ್ರಮ ಮೆಚ್ಚುಗೆಗೆ ಪಾತ್ರವಾಗುತ್ತದೆ.’
ಪ್ರೊ. ಸಬಿಹಾ ಭೂಮಿಗೌಡ, ಲೇಖಕಿ
ಅನುಪಮಾ ಅವರು ಕವಿತೆಯನ್ನು ಬರೆಯುವಾಗ ಲೋಕ ಎಂದರೆ ಯಾವುದು? ಅಲ್ಲಿರುವುದು ಏನು? ಎಂಬ ನುಡಿಗಳನ್ನು ಕೇಳಿಕೊಳ್ಳುತ್ತಾರೆ. ಅವರ ಕವಿತೆ ಮನುಷ್ಯನ ಪ್ರೇಮವನ್ನು ಇರುವ ಹಾಗೆಯೇ ದಾಟಿಸುವುದಿಲ್ಲ. ಪ್ರೇಮವು ಲೋಕದಲ್ಲಿ ಅನುಭವಿಸುತ್ತಿರುವ ತಲ್ಲಣಗಳ ಕುರಿತು ಮಾತನಾಡುತ್ತದೆ. ಎಲ್ಲಕ್ಕಿಂತ ಪ್ರಧಾನವಾಗಿ ಇವರು ವೈದ್ಯೆ. ಆ ಮೂಲಕವೇ ಲೋಕದ ತಾಯ್ತನದ ಅಂತರಂಗವನ್ನು ಸೂಲಗಿತ್ತಿಯಾಗಿಯೇ ಗ್ರಹಿಸಬಲ್ಲರು. ಹಾಗಾಗಿಯೇ ಇವರ ಕವಿತೆಗೆ ತಾಳ್ಮೆ ಮತ್ತು ಸಹಜ ನಡಿಗೆ ದಕ್ಕಿದೆ. ಆ್ಯಕ್ಟಿವಿಸ್ಟ್ ಆದವರ ವಿಚಾರಗಳು, ಲೋಕವನ್ನು ಸ್ಪಂದಿಸುವ ಬಗೆಯನ್ನು ಸೂಕ್ಷ್ಮವಾಗಿ ಅವಲೋಕಿಸುವಾಗ ಅಂತಹವರ ಕವಿತೆ ಕೆಲವೊಮ್ಮೆ ಅತಿಯಾದ ಸಿಟ್ಟಿನಿಂದ ಕಾವ್ಯದ ಅಂಗಗಳನ್ನು ಕಳೆದುಕೊಳ್ಳುವ ಅಪಾಯವಿರುತ್ತದೆ. ಕವಿತೆ, ಕವಿತೆಯಾಗದೆ, ಹೇಳಿಕೆಗಳ ಸರಮಾಲೆಯಾಗಿ ಮಾತ್ರ ಕಾಣಲಾರಂಭಿಸುತ್ತದೆ. ಅನುಪಮಾ ಅವರಿಗೆ ಕವಿತೆಯಲ್ಲಿ ಎಲ್ಲಿ ಕಥನ ಗುಣ ಇರಬೇಕು, ಎಲ್ಲಿ ಕಾವ್ಯಾಂಗಗಳು ಬರಬೇಕು ಎಂಬುದರ ಬಗ್ಗೆ ಅರಿವಿದೆ. ಆ್ಯಕ್ಟಿವಿಸ್ಟ್ ಮಾದರಿಗಳು ಇವರ ಕಾವ್ಯವನ್ನು ಅಪ್ಪಿಕೊಂಡರೂ, ನೆಲದ ಅಂತಃಕರಣ ಮತ್ತು ಜೀವಕಾರುಣ್ಯಗಳ ಸಂಗಡಗಳಿಂದ ವಿಮುಖವಾಗದೇ, ಬದುಕಿನ ಸಂಕಟಗಳ ಕಾರಣ ಹುಡುಕುತ್ತಿವೆ. ಹಾಗೆಂದು ಅವರ ಕವಿತೆ ಪ್ರಜಾಪ್ರಭುತ್ವದ ನೆಲೆಗಳನ್ನು, ಎಡಪಂಥೀಯ ಎನ್ನಬಹುದಾದ ವಿಚಾರಗಳನ್ನು ಏಕಪಕ್ಷೀಯವಾಗಿ ವಕೀಲಿ ಮಾಡುವುದಿಲ್ಲ. ಈ ನಿಟ್ಟಿನಲ್ಲಿ ಕವಿತೆ ವಕ್ತಾರಿಕೆಯ ಅಪಾಯದಿಂದ ಪಾರಾಗುವಲ್ಲಿ ಯಶಸ್ವಿಯಾಗಿದೆ.
ಡಾ. ಸುರೇಶ್ ನಾಗಲಮಡಿಕೆ, ಲೇಖಕರು
*
ದೇವರಿಗೆ
ಮುಂಜಾನೆ ಮುಸ್ಸಂಜೆ ಅಮ್ಮನ ಅನುದಿನದ ಸಲಹೆ ‘ದೇವ್ರಿಗೊಂದ್ ದೀಪನಾರು ಹಚ್ಚೆ’ ಎನ್ನುವುದು. ಸೋತೆನೆಂದುಕೊಳ್ಳದಿರಲಿ ಹೆತ್ತೊಡಲು ಎಂದು ತುಪ್ಪದ ದೀಪ ಹಚ್ಚಿಟ್ಟು ಬಂದೆ ಅಂದು.
ಹಾಸಿಗೆ ಹಿಡಿದರೂ ಸೀತಮ್ಮನ ಮಗಳು ಬಲೇ ಸೂಕ್ಷ್ಮದ ಮೂಗಿನವಳು ಎಂದೋ ಕಾಸಿಟ್ಟ ತುಪ್ಪದ ಜಂಬು ಗುಂ ಎಂದು ಮನೆಯೆಲ್ಲ ಪಸರಿಸಲು ಮೆಲುವಾಗಿ ಕರೆದಳು: ‘ಇದೆಂತ ತುಪ್ಪನೇ ಇದು? ಯಾವಾಗಿಂದು? ಪಾಪ, ಅದು ಆ ದೇವರೆಂಬೋದು ಗೂಡೊಳಗಿಟ್ಟ ಮೂರ್ತಿಯಾದರೇನು ಕೂತಿರುತ್ತೆ ಕಣೆ ನೆಲದ ಪರಿಮಳಕೆ ಕಾದು. ಮಕ್ಕಳಿಗೆ ಕಮಟು ತುಪ್ಪ ಬಡಿಸ್ತೀಯಾ? ಜಂಬು ತುಪ್ಪದ ದೀಪ ಯಾಕೆ ಹಚ್ತೀಯ? ದೀಪ ಹಚ್ಚಿ ಕಮಟು ನಾತ ಹರಡಕ್ಕಿಂತ ಬೆಳಕೇ ಇಲ್ದ ಶುದ್ಧ ಕತ್ತಲೆನೇ ಇರಲಿ ತಗ ಮರೆತೇ ಬಿಟ್ಯಾ ತುಪ್ಪ ಕಾಸೋ ಹದ?’
ಕಲಿತ ಹದ ಹೇಗೆ ಮರೆಯಲಿ ಅಮ್ಮಾ? ಹದಿ ಬರುವಂತೆ ಹಾಲು ಕಾಸಿ ಉಗುರು ಬೆಚ್ಚಗಿರುವಾಗ ಹೆಪ್ಪು ಹಾಕಿ ಮೊಸರು ಸಿಹಿಯಿರುವಾಗಲೇ ಕಡೆದು ಹೆಚ್ಚಿಲ್ಲ ಕಮ್ಮಿಯಿಲ್ಲ ಕಡೆಗೋಲ ಅಂಡೆಗೆ ಹೆಪ್ಪಳಿಕೆ ಬೆಣ್ಣೆ ತಾಗಬೇಕು, ತಾಗಿಯೂ ಅಂಟದಂತಿರಬೇಕು ಅಕಾ ಆಗ ತೇಲುವ ನವನೀತವ ನೀರಲದ್ದಿ ತಂಪಾಗಿಸಿಕೊಂಡ ಒದ್ದೆ ಕೈಗಳಲ್ಲಿ ಉಂಡೆ ಕಟ್ಟಿ ಹಿಂಡಿ ಒಳಗಣ ಮಜ್ಜಿಗೆ ಹನಿಗಳ ದಬ್ಬಿ ನೀರಲಿ ಮುಳುಗಿಸಿಡಬೇಕು ದಿನಕ್ಕೊಮ್ಮೆ ನೀರು ಬದಲಿಸುತ್ತಾ ದಿನದಿನದ ಬೆಣ್ಣೆ ಸೇರಿಸುತ್ತಾ ವಾರಕೊಮ್ಮೆ ಕುದಿಸಿ, ಕಾಯಿಸಬೇಕು. ಬಂಗಾರ ಬಣ್ಣ ಕೊತಗುಟ್ಟಿ ಚೊರಚೊರ ಸದ್ದು ನಿಂತು ಘಮ್ಮೆನುವ ಪರಿಮಳ ಮನೆ ತುಂಬಿದಾಗ ಚಣ ತಡೆದು ಚರಟವುಳಿಸಿ ಸೋಸಬೇಕು ಮರೆತಿಲ್ಲ ಮಹರಾಯ್ತಿ ಹದದ ಪಾಠ ಸವುಡಿಲ್ಲ ಅಷ್ಟೇ ಯಾವುದಕ್ಕೂ ಈಗ
‘ಶ್, ಇಲ್ಬಾ..’ ಮಗಳು ಕರೆಯುತ್ತಿದ್ದಾಳೆ ‘ಮಾಮ್, ನೀನಿದ್ದರೂ ನಿನ್ನ ಭಕ್ತಿ ಬದಲಾದ ಹಾಗೆ ಬೆಳಕು ಇದೆ, ಈಗ ದೀಪ ಬದಲಾಗಿದೆ. ಅಪ್‌ಡೇಟಾಗು, ಕಾಲ ಓಡುತ್ತಲಿದೆ ಬಿಟ್ಟಾಕು ಅಜ್ಜಿಯ ಇಂಪ್ರಾಕ್ಟಿಕಲ್ ಮೀಮಾಂಸೆ ಹಚ್ಚು, ಪರಿಮಳ ಜಂಬಿರದ ಮೇಣದ ಹಣತೆ ಇಲೆಕ್ಟ್ರಿಕ್ ಲೈಟು ಬೇಕೆಂದಷ್ಟು ಬೇಕೆಂದಲ್ಲಿ ಉರಿಯುತ್ತೆ ‘ನಾನೇ ಕಾಸಿದ ಘಮ್ಮನೆ ತುಪ್ಪದ ದೀಪ’ ಎಂದೇಕೆ ದೇವರೆದುರು ತೋರುವಿರಿ ಅಹಮು? ಕಡೆದು ಕಾಸಿ ಸೋಸಿ ಹದವೆಂದೇಕೆ ವೇಸ್ಟು ಟೈಮು? ಈಸಿ, ಇಕೋ ಫ್ರೆಂಡ್ಲಿ ಆಗಿರಬೇಕಾದ ಜಮಾನ ಇದು’
ಅತ್ತ ಅಮ್ಮ ಹೇಳುತ್ತಲೇ ಇದ್ದಳು, ‘ದೀಪವೆಂದರೆ ಏನೆಂದುಕೊಂಡೆಯೆ? ಬತ್ತಿ ಸುಡಬೇಕು ತುಪ್ಪ ಆವಿಯಾಗಬೇಕು ಬೆಂಕಿಯುರಿದರಷ್ಟೇ ಬೆಳಕು ಇಂಗಿ ಆವಿಯಾದರಷ್ಟೇ ಘಮಲು ಲಯವಾದರಷ್ಟೇ ಹುಟ್ಟೀತು ಹೊಸತು’
ಮುಸ್ಸಂಜೆಯ ಮನೆ ಒಳಕೋಣೆಯಲಿ ಅಮ್ಮ ಪಡಸಾಲೆಯಲಿ ಮಗಳು ಹೊಸಿಲು ದಾಟಿದ ಮಿಂಚುಹುಳು ಮಿನುಮಿನುಗಿ ಸುಳಿಸುಳಿದು ನಡುಮನೆಯ ಬುದ್ಧನ ಹೆಗಲ ಮೇಲೆ ಕುಳಿತುಕೊಂಡಿತು.
*
ನಾನು ನನ್ನ ಸುಖದುಃಖಗಳನ್ನೆಲ್ಲ ಕಾಗದಕ್ಕೆ ಹೇಳಿಬಿಟ್ಟಿರುವೆ. ಗದ್ಯ ಬರವಣಿಗೆಯೇ ಹೆಚ್ಚು ನಡೆದರೂ ಎಲ್ಲವನ್ನು ಗದ್ಯದಲ್ಲಿ ಹೇಳಲಾಗದು ಎನಿಸಿದಾಗ ಪದ್ಯ ಹುಟ್ಟಿದೆ. ಹೆಚ್ಚೆಚ್ಚು ಸಾರ್ವಜನಿಕವಾಗಿ ತೆರೆದುಕೊಳ್ಳುತ್ತ ಹೋದಹಾಗೆ ಇದ್ದಕ್ಕಿದ್ದಂತೆ ಏಕಾಂತ, ಬಿಡುವು ಬೇಕೆನಿಸಿದಾಗ ಕವಿತೆ ಹುಟ್ಟಿದೆ. ‘ಮೈಯ ಗಾಯವನರಿಯಬಹುದಲ್ಲದೆ ಕಣ್ಣಗಾಯವನರಿಯಲುಬಾರದು’ ಎನ್ನುವನು ಅಲ್ಲಮ. ಕಣ್ಣಗಾಯ ಅರಿವಿಗೆ ಸಿಕ್ಕಾಗ ಕವಿತೆಗಳು ಹುಟ್ಟಿವೆ.
ಕಾಲವು ಫಲದೊಳಗೆ ಕರಗಬೇಕು. ಆಗಷ್ಟೇ ಕಾಯಿ ಗಳಿತು ಸಿಹಿ ಹಣ್ಣಾಗುತ್ತದೆ. ಹಾಗೆ ನನ್ನೊಳಗೆ ಕರಗಿದ ಕಾಲಸತ್ವ ಕಾವ್ಯವಾಗಿದೆ. ಪ್ರೀತಿ, ನೋವು, ದುಃಖ, ಹಸಿವೆ, ನೆಮ್ಮದಿಗಳು ನರನಾಡಿಗಳಲ್ಲಿ ತುಂಬಿರುವಾಗಲೂ ಅವು ಕಟ್ಟಿಕೊಳ್ಳದೇ ತುಂಬಿ ಹರಿಯುವಂತೆ ಮಾಡುವ ನೀರಗಂಟಿ ಕವಿತೆ. ಇದುವರೆಗೆ ನನ್ನ ನಾನು ಅರ್ಥ ಮಾಡಿಕೊಂಡ ಬಗೆಯನ್ನು ನಾಶಗೊಳಿಸಿ ಹೊಸ ನನ್ನನ್ನು ಕಟ್ಟಿಕೊಳ್ಳಲು ನೆರವಾಗಿದೆ. ಜಗಹೃದಯ ಪ್ರೇಮಮಯ ಎನ್ನುವ ಸತ್ಯವನ್ನು ತಿಳಿಸಿಕೊಟ್ಟಿದೆ. ಧನ್ಯವಾದ ಕವಿತೆ. ಕವಿತೆಯೇ ನನ್ನೆದೆಯ ಆಗಸವಾಗು. ಕಗ್ಗತ್ತಲಲೂ ಬೆಳಗುವ ಹಣತೆಯ ಬೆಳಕಾಗು.
*
ಪಕ್ಷಿ ದಾರಿ
ನೀಲಿ ಮುಗಿಲು ಕಡು ಕೆಂಪಾದ ಹೊತ್ತು ಮಾಗಿ ಮಂಜು ಕಣಿವೆಗಿಳಿಯೋ ಹೊತ್ತು ದೀಪ ದೇಹದೊಳಗೆ ಲೀನವಾಗೋ ಹೊತ್ತು ಸಕಲ ಚರಾಚರಗಳ ಹೆತ್ತ ಕರಿ ಕಾನ ಅವ್ವ ಕತ್ತಾಲ ಹೊದಿಸಿ ಜೀವ ಪೊರೆಯೋ ಹೊತ್ತು ಗುರು ಕರುಣದ ಅವತರಣವೋ ಎನುವಂತೆ ನೆಲಮುಗಿಲ ಹರಹಿಗೆ ಸರಿಮಿಗಿಲು ಎನುವಂತೆ ಇರುಳನಪ್ಪಿದ ಜಗಕೆ ಕೈ ದೀಪವೆಂಬಂತೆ ಕಣಿವೆಯ ಮೌನಕೆ ಕಾಯ ಮೂಡಿದಂತೆ ಆದಿಮ ಲೋಕದ ಗೂಡಿನಿಂದೆಂಬಂತೆ ಹಾರಿ ಬಂತು ಪಕ್ಷಿಯೊಂದು ನನ್ನ ಕಡೆಗೆ
ಏರಲಾಗದ ಬೆಟ್ಟ ಏರಿ ಬಂದಿತು ಪಕ್ಷಿ ಮೀರಲಾಗದ ಗಡಿಯ ಮುಟ್ಟ ಬಂತು ಕರಗಲಾಗದ ಬರಫ ಬಾಷ್ಪವಾಗಿರುವಲ್ಲಿ ಉಸಿರ ತಿದಿಯನೊತ್ತುತ್ತ ಬಂತು ಅದು ಹರಿಗೋಲ ಕೊಕ್ಕಿನ ಪಕ್ಷಿ ಮೈತ್ರಿ ಬಿಳಿಯ ಬಣ್ಣದ ಪಕ್ಷಿ ಕರಿಮಾಯ ಬೊಟ್ಟೆ ಕಣ್ಣಾದ ಪಕ್ಷಿ ಕರಿಕಾನ ಹರಹು ನೋಟವಾದ ಪಕ್ಷಿ
ಬೆಟ್ಟಸಾಲಳೆಯುತ್ತ ಕಣಿವೆಯಾಳ ನಿರುಕಿಸುತ ಭರಭರನೆ ಏರುತ್ತ ತೇಲುತ್ತ ತುಯ್ಯುತ್ತ ನೆತ್ತಿ ಮೇಲಿಳಿಯುತಿದೆ ಕಾಲ ಪಕ್ಷಿ ಹಾರಲಾರದವಳಿಗೆ ರೆಕ್ಕೆಯಂಟಿಸುವಂತೆ ಎದೆಯ ಗೂಡಿನ ದುಗುಡ ಕೇಳುವಂತೆ ಲೋಕ ಸತ್ಯವ ಕಿವಿಯಲುಸುರುವಂತೆ ಅಂಟುನಂಟಿನ ಬಂಧ ಬಿಡಿಸುವಂತೆ ಇಳಿದಿಳಿದು ಬರುತಿದೆ ನನ್ನ ಕಡೆಗೆ
ಹಾರುತಿದೆ ಹಕ್ಕಿ ದಿನರಾತ್ರಿಗಳ ನಡುವೆ ಹಾರುತಿದೆ ಬಂಧನ ಬಿಡುಗಡೆಯ ನಡುವೆ ಅಲ್ಲಿ ಇಲ್ಲಿಗಳೆಂಬ ನಿಜಗಳ ನಡುವೆ ಹೌದು ಅಲ್ಲಗಳೆಂಬ ಹುಸಿಗಳ ನಡುವೆ ಮಾತು ಮೌನಗಳೆಂಬ ದ್ವೀಪಗಳ ನಡುವೆ ದುಗುಡ ಸಂಭ್ರಮವೆಂಬ ಸಹಜಗಳ ನಡುವೆ ಹುಟ್ಟು ಸಾವುಗಳೆಂಬ ದಂಡೆಗಳ ನಡುವೆ ಹಾರುತ್ತ ಬರುತಿದೆ ತನ್ನ ನನ್ನ ನಡುವೆ
ಅಹಹ ಪಕ್ಷಿಯೇ, ಚೆಲ್ಲಬಾರದೆ ಬೀಜವಾಗಿಸಿ ನನ್ನ, ನಿನ್ನ ಕಣಿವೆಯ ಮೂಲೆಯಲಿ? ಎತ್ತೊಯ್ಯಬಾರದೆ ನನ್ನ, ನಿನ್ನ ಬಲಿಷ್ಠ ಪಾದಗಳಲಿ? ಕುಕ್ಕಿ ಹಿಸಿಯಬಾರದೆ ನನ್ನ, ನಿನ್ನ ಹರಿಗೋಲ ಕೊಕ್ಕಿನಲಿ? ತೇಲಿಸಬಾರದೆ ನನ್ನ, ನಿನ್ನ ರೆಕ್ಕೆಗಳ ಕಂಪನದಲಿ? ಹಾರಿಸಬಾರದೆ ನನ್ನ, ನಿನ್ನ ಮಿದುಗರಿಯ ಹಗುರದಲಿ? ತೋರಿಸಬಾರದೇ ಮಣ್ಣ ಕಣ್ಣ ಬಡವಿ ನಾ, ಬಾನ್‌ಬಯಲ ಹಾದಿ?
ಕರಿಕಾನ ಅವ್ವಾ, ಒಂದು ಹಕ್ಕಿಯಾಗಿಸು ನನ್ನನು ಹಕ್ಕಿ ಉಲಿಯಾಗಿಸು ನನ್ನನು
*
ನನ್ನೊಳಗಿನ ದೇವತೆಯರು
ನನ್ನೊಳಗಿದ್ದಾರೆ ಹಲವು ದೇವತೆಯರು ತ್ಯಾಗಮಯಿ ನಿಸ್ವಾರ್ಥಿ ಪರಮಸಾಧ್ವಿಯರು ಹೊರಲಾಗದ ಕಿರೀಟ ಹೊತ್ತ ಅಗೋಚರ ಹೆಗಲಾಳ್ತಿಯರು
ಮನೆಯೆಂಬುದು ಪಾರದರ್ಶಕ ಜೈಲು ಕಣ್ಣಿಗೇ ಕಾಣಿಸವು ಗೋಡೆಗಳು ಗಾಜು ಗುದ್ದಿ ಒಡೆಯದಂಥದಲ್ಲ, ಆದರೂ ಗೋಡೆಯಿದೆಯೆಂದೇ ಮನಸು ನಂಬಲಾರದು ಇದ್ದಾಳಲ್ಲ, ನನ್ನೊಳಗಿನ ಸತಿ ಸಾವಿತ್ರಿ ಅವಳಿರುವ ತನಕ ಗೋಡೆ ಕಾಣಲಾರದು ಕಂಡರೂ ಒಡೆದು ದಾಟಲಾಗದು.
ಎರಡು ಉದ್ದ ಜಡೆ, ಎರಡೂ ಮುಂದೆ ತೊನೆಯಬೇಕು ಆಚೀಚೆ ಗುಮ್ಮಟಗಳ ಮೇಲೆ ಸಡಿಲ ಬ್ಲೌಸು, ಮುಂಬಾಗಿದ ನಡಿಗೆ ಕಟ್ಟಿದ ಕೈ, ಪುಸ್ತಕ ಅವಚಿದ ಎದೆ ಸೆರಗು ವಲ್ಲಿ ದುಪಟಿ ಹಿಜಬು ಎಕ್ಸ್ಎಕ್ಸ್ ಕ್ರೋಮೋಸೋಮಿನ ಠಸ್ಸೆಗಳ ಹತ್ತಿಕ್ಕಬೇಕು, ಒತ್ತಾಯದಿ ಮುಚ್ಚಿಡಬೇಕು ಸೋಕಿದರೆಂದು ನೋಡಿದರೆಂದು ಕಲ್ಲಾಗಬೇಕು ಅವಳಿದ್ದಾಳಲ್ಲ, ನನ್ನೊಳಗಿನ ಅಹಲ್ಯೆ ಅವಳಿರುವ ತನಕ ಕಣ್ಕಟ್ಟು ನಿಲುವುದಿಲ್ಲ.
ಬಯಲಲಿ ಅವ ಎಳೆದಿದ್ದಷ್ಟೇ ಅಲ್ಲ ಕಣ್ಣಲೇ ಇದೆ ಅದೃಶ್ಯ ಲಕ್ಷ್ಮಣರೇಖೆ ಕನಸಿನಲೂ ದಾಟಬಾರದ ರೇಖೆ ಯೋಚನೆಯಲೂ ಮೀರಬಾರದ ರೇಖೆ ಆಡುವಲ್ಲಿ ಹಾಡುವಲ್ಲಿ ಹಂಬಲಿಸುವಲ್ಲಿ ಕೈಯಾರ ಎಳಕೊಂಡ ಸಾವಿರದ ರೇಖೆ ಅವಳಿದ್ದಾಳಲ್ಲ, ನನ್ನೊಳಗಿನ ಸೀತಾಮಾತೆ ಅವಳಿರುವ ತನಕ ಈ ಗೆರೆಗೆ ಅಳಿವು ಇಲ್ಲ.
ಸಾವಿತ್ರಿ, ಸೀತೆ, ಅಹಲ್ಯೆ .. ಸಂತೆಯಲಿದ್ದೂ ಒಂಟಿಯಾದಾಗ ಹುಟ್ಟಿದವರು ನಗ್ನತೆಯಲೂ ಲಜ್ಜೆಯುದಿಸಿ ಬೆಳೆದು ನಿಂತರು
ಅನು, ದೈವತ್ವದ ದುಗುಡಕ್ಕೆ ಹೊಂದಿಕೊಳ್ಳುವ ಮೊದಲು ನಿನ್ನೆದೆಯ ಗುಡಿಗಳ ಕೆಡವಿ ಹಾಕು ನಿನ್ನೊಳಗಿನ ದೇವತೆಯರ ಸುಲಿದು ಹಾಕು ಅವರ ಮನುಷ್ಯರಾಗಿಸು ನೀ ಮಾನವಿಯಾಗು
*
ಎಲ್ಲಿ ಅಮೃತ?
ಬಡಿಯಿತು ರಾತ್ರಿ ಹನ್ನೆರೆಡು ಬಂದಿದೆ ಪಂದ್ರಾ ಆಗಸ್ಟು ನಲವತ್ತೇಳರ ಅನಾದಿ ಕತೆಯಲಿ ಬಂದಿದೆಯೆಂಬರು ಸ್ವಾತಂತ್ರ್ಯ ನೆತ್ತರು ಬಸಿದ ಹಿರಿಕಿರಿ ಜೀವರು ತಂದಿಹರೆಂಬರು ಸ್ವಾತಂತ್ರ್ಯ
ಬಂದುದು ಹೌದೇ ಸ್ವಾತಂತ್ರ್ಯ ಎಲ್ಲಿದೆ ಅಮೃತ ಸ್ವಾತಂತ್ರ್ಯ
ನರ ವಾನರಗಳಿಗೆ ಬಂದಿರುವಂತಿದೆ ಮತ ಕಸಿದೋಡಲು ಸ್ವಾತಂತ್ರ್ಯ ಸದ್ದೇ ಮಾಡದೆ ನಿದ್ದೆ ಹೊಡೆಯಲು ಮಂತ್ರಿ ಮದ್ದಾನೆಗೆ ಸ್ವಾತಂತ್ರ್ಯ
ಕೆಟ್ಟು ಹೋಗುವ ಸ್ವಾತಂತ್ರ್ಯ ತುತ್ತು ಕಸಿಯುವ ಸ್ವಾತಂತ್ರ್ಯ ಕಳ್ಳಕಾಕರ ರಾಜರ ಮಾಡಲು ನಿರ್ಲಜ್ಜೆಗು ಬಂದಿದೆ ಸ್ವಾತಂತ್ರ್ಯ
ಬೆಟ್ಟ ಹೆರೆಯುವ ಬಯಲು ನುಂಗುವ ನದಿನದ ಒಣಗಿಸೊ ಸ್ವಾತಂತ್ರ್ಯ ಲಸಿಕೆ ಮಾಸ್ಕು ಅಂತರ ಒಲ್ಲದೆ ಮಕ ಮಸಿ ಮಾಡುವ ಸ್ವಾತಂತ್ರ್ಯ
ಬಂದರೂ ಬಳಿಕ ಫರಕೇನೀಗ ಇದೆಂತಹುದಿದು ಸ್ವಾತಂತ್ರ್ಯ ಉತ್ತುಬಿತ್ತರು ಕುತ್ತಲಿ ಬದುಕಿಹ ರೈತಿಣಿಗೆಲ್ಲಿದೆ ಸ್ವಾತಂತ್ರ್ಯ ಹೆರು ಹೊರು ಸಲಹುವ ಕೂಪದಿ ತೊಳಲುವ ಹೆಂಡತಿಗೆಲ್ಲಿದೆ ಸ್ವಾತಂತ್ರ್ಯ ದುಡಿದು ದಣಿದು ಬವಳಿ ಬಂದರೂ ಕೂಲಿಗೆ ಬಂತೆ ಸ್ವಾತಂತ್ರ್ಯ
ಕೇಳೇ ಯಕ್ಕಾ ಕೇಳೋ ತಮ್ಮಾ ಕೇಳೇ ತಂಗೀ ಕೇಳೋ ಯಣ್ಣಾ ಒಮ್ಮೆಗೆ ಬರದದು ಸ್ವಾತಂತ್ರ್ಯ ಕೊಡುತ ಪಡೆಯುವ ಸ್ವಾತಂತ್ರ್ಯ ಬಾಬಾರ ನೆನೆದು ಬಾಪುವ ನೆನೆದು ಪಡೆದುಕೊಳ್ಳುವ ಸ್ವಾತಂತ್ರ್ಯ ಬಸವ ಶರೀಫ ಅಕ್ಕ ಕಬೀರರ ಬದುಕುತ ಪಡೆಯುವ ಸ್ವಾತಂತ್ರ್ಯ ನೀಲಿಬಾನಿನ ಕೆಂಪುಸೂರ್ಯನ ಕೆಂಪು ಸಂಜೆಯ ಬಿಳಿಯ ಚಂದ್ರನ ಕಪ್ಪು ಇರುಳಿನ ಬೆಳ್ಳಿ ಚಿಕ್ಕೆಗಳ ಹಾಡುತ ಕರೆಯುವ ಸ್ವಾತಂತ್ರ್ಯ ಹೊಸನಾಳೆಗಳ ಕನಸು ಕಾಣುತ ಘಟ್ಟಿಸಿ ಕೇಳುವಾ ಸ್ವಾತಂತ್ರ್ಯ ಜೋರಲಿ ಕೇಳುವಾ ಬಂದುದು ಎಲ್ಲಿ ಆಗಮೃತವದು ಸ್ವಾತಂತ್ರ್ಯ *
ಸುಖದ ಹೂ
ಜಿಂಕೆ ಹೆಣ್ಣಿಗೆ ಕಣ್ಣು ತುರಿಸಿದರೆ ಗಂಡಿನ ಕೊಂಬಿಗೆ ತಾಗಿಸಿ ಕೆರೆದುಕೊಳುವುದು
ಪುಕ್ಕ ಉದುರಿದ ಬಸುರಿ ಹೆಣ್ಣು ಮಂಗಟೆ ಹಕ್ಕಿಗೆ ತುತ್ತರಸಿ ಉಣಿಸಿ ಗಂಡು ಪೊರೆಯುವುದು
ಕಪ್ಪೆ ಹೆಣ್ಣುದುರಿಸಿದ ಫಲಿತ ಮೊಟ್ಟೆಗಳ ಹಿಂಗಾಲ ನಡುವಿಟ್ಟು ಗಂಡು ಸಲಹುವುದು
ಕುತ್ತಿಗೆ ಕಚ್ಚಿ ಹಿಡಿದ ಮಾಳನ ಗದರಿಸುತ್ತ ನೊಂದು ಅರಚಿ ಹೆಣ್ಣು ಗರ್ಭ ಕಟ್ಟುವುದು
ಅನು, ಮಳೆ ಬಿಸಿಲು ಹದವಾಗಿ ಬೆರೆತರಷ್ಟೇ ಕಾಮನ ಬಿಲ್ಲು ಭೀತಿನೀತಿ ಬೇಗೆಯಲಿ ಸುಖದ ಹೂ ಹೇಗರಳುವುದು?
*
ಮೀಟೂ: ಹೆಣ್ಣು ಕೋಲಿನ ಏಟು
ಇಂದೇಕೆ? ಹೇಳಬೇಕಿತ್ತು ಅಂದೇ ಎಂದೆಯಾ ತಂದೆ ಅಂದು ಹೇಳಿದ್ದರೆ, ಹನ್ನೆರೆಡು ವರುಷದ ನನ್ನ ನೀನು ಮೂಲೆ ಕೋಣೆಯ ಒಳಗೆ ಕೂಡಿ ಹಾಕುತ್ತಿದ್ದೆ ಹೇಳಿದರೆ ಕೊಲುವೆನೆಂದಿದ್ದನವ, ನನಗೆ ಬದುಕುವ ಆಸೆ ಚೆಲುವೆಯಾಗಿರುವುದೇ ತಪ್ಪೆಂದವರು ತಿಳಿಸಿದ್ದರು ತಂದೆ
ಅಂದು ಪಕ್ಕ ಮಲಗಿದ್ದೆ, ಇಂದೇಕೆ ರಾಗವೆಂದೆಯಾ ಅವರು ಪ್ರೇಮಿಸುವೆನೆಂದು ಆಣೆ ಮಾಡಿದ್ದರು ಭಯದೊಡನೆ ಕಾತರ, ಸಂಭ್ರಮಗಳೂ ಇದ್ದವು ಒಳಗೆ ಪಾಯಸ ಮಾಡಿಸುತ್ತಿದ್ದರಲ್ಲವೆ ನೀವು ಅವರು ಬಂದರೆ ಮನೆಗೆ? ಹೇಗೆ ಹೇಳುವುದೆಂದು ತಿಳಿಯದೇ ಸುಮ್ಮನಾದೆ
ಇಂದೇಕೆ, ಅಂದೇ ಹೇಳಬೇಕಿತ್ತು ಎಂದೆಯಾ ಕಠುವಾದ ದೇವತೆ ಪೊರೆವಳೆಂದೇ ನಂಬಿದ್ದೆ ಇಗರ್ಜಿಯ ಗೋಡೆಯೂ ಕರುಣಾಳುವೆಂದೇ ಬಗೆದಿದ್ದೆ ಅಂದು ಹೇಳಿದ್ದರೂ ಚಿಕ್ಕೆ ಆಗಸದಿಂದಿಳಿದು ಬರುತಿತ್ತೆ? ಬೆಂಕಿ ಬೆಳಕು ಫರಕು ತಿಳಿಸುವವರಿರಲಿಲ್ಲ ನನಗೆ
ಅಂದಾಗಲಿಲ್ಲವೆಂದೇ ಇಂದು ಹೇಳುತ್ತಿರುವೆ ಕೇಳು ಲೋಕವೇ, ಮೆಟ್ಟುವವರೆದುರೇ ತಲೆಯೆತ್ತಿ ಬೆಳೆಯಬೇಕು ಗರುಕೆ ಧನ್ಯವಾದ ನಿಮಗೆ ನಿಮ್ಮ ನಿಜ ಮುಖವ ಇಂದಾದರೂ ತೋರಿಸಿದ್ದಕ್ಕೆ ಧನ್ಯವಾದ ನಿಮಗೆ ನಮ್ಮ ದಾರಿಯೇನೆಂದು ನಮಗೆ ನೆನಪಿಸಿದ್ದಕ್ಕೆ
ಮುಟ್ಟಿನ ರಕ್ತ
ಎಲಾ ಮುಟ್ಟಿನ ರಕ್ತವೇ, ಭಲಾ ತೊಗಲ ಚೀಲವೇ!
ಕಾಯ ಐದಡಿ ಪಾದದ ಹರಹು ಮೂರಡಿ ಮುಟ್ಟಿನ ಮೂಲಸೆಲೆ ಮೂರಿಂಚಿನ ಅಚ್ಚರಿ ಚಂದ್ರಿಗಿಲ್ಲದ ಮುಟ್ಟು ಸೂರಮ್ಮನಿಗಿರದ ಮುಟ್ಟು ಭೂದೇವಿಗಿರದ ಮುಟ್ಟು ಕಡಲಮ್ಮನಿಗಿರದ ಮುಟ್ಟು ನನ್ನ ಮುಟ್ಟಿಗೆ ಮುನಿ ಹಾರುವನು, ಶನಿ ದೂರ ನಿಲುವನು!
ಗುಡಿಯನೇ ಅಶುಚಿಗೊಳಿಸುವುದಂತೆ ನನ್ನ ಮುಟ್ಟಿನ ರಕ್ತ ಮನೆಯನೇ ಮೈಲಿಗೆಯಾಗಿಸುವುದಂತೆ ನನ್ನ ಮುಟ್ಟಿನ ರಕ್ತ ಕಡಲ ಕದಡಿ ಕೆಂಪಾಗಿಸುವುದAತೆ ನನ್ನ ಮುಟ್ಟಿನ ರಕ್ತ ನಾಕಕೇರಿಸಿದಂತೇ ನರಕಕೂ ಕೆಡವುವುದಂತೆ ಮುಟ್ಟಿನ ರಕ್ತ! ಎಲಾ ಮುಟ್ಟಿನ ರಕ್ತವೇ, ಭಲಾ ತೊಗಲ ಚೀಲವೇ!
ಅಯ್ಯಪ್ಪ ತಿಮ್ಮಪ್ಪ ಅಣ್ಣಪ್ಪ ಮಾದಪ್ಪ ಹೇಳಿರೋ ಅಪ್ಪಗಳಿರಾ ಲಕುಮಮ್ಮ ದುರುಗಮ್ಮ ಮಾರಮ್ಮ ಕಾಳಮ್ಮ ಹೇಳಿರೇ ಅಮ್ಮಗಳಿರಾ ಮುಟ್ಟುವ ಶಕ್ತಿ ಮಿಗಿಲೋ ಮುಟ್ಟದ ದೂರ ಮಿಗಿಲೋ? ಮುಟ್ಟು ಗಟ್ಟಿಯಾಗಿಸಿ ಹುಟ್ಟಿಬಂದ ಮುಠ್ಠಾಳರೇ ಹೇಳಿ, ಮುಟ್ಟು ಕಂಡು ಬೆಚ್ಚುವ ದೇವರು ಮಿಗಿಲೋ ಮುಟ್ಟಿ ಮೈದುಂಬುವ ಜೀವಶಕ್ತಿ ಮಿಗಿಲೋ?!
ಎಲಾ ಮುಟ್ಟಿನ ರಕ್ತವೇ, ಭಲಾ ತೊಗಲ ಚೀಲವೇ! ಉಧೋಉಧೋ ಮುಟ್ಟಿನಮ್ಮ ಉಧೋಉಧೋ
*
ಎರಡಳಿದು
ಈ ಕೊಡದಿಂದ ಆ ಕೊಡಕ್ಕ ಜಿಗಿ ಅಂತೀ ಅದನ ಕ್ರಾಂತಿ ಅಂತ ಹ್ಯಾಂಗ್ ನಂಬಲಿ?
ಕೊಡಪಾನ ಒಲ್ಲಾದರ ಹೊಂಡಕ ಸುರಕೋ ಅಂತೀ ಗುಂಡಿ ನೀರಾಗ ಈಸೋದ್ರಲ್ಲಿ ಹೊಸಾದೇನೈತಿ?
ಈ ಮಗ್ಗಲ ನೂಸ್ತದಂದ್ರ ಆಚಿ ಮಗ್ಗಲಾ ತಿರುಗಂತಿ ಆಕಾಶದ ಕನಸಿನಾಕಿ ಅಂಗಾತ ಮಲಗದೆ ಹ್ಯಾಂಗಿರಲಿ?
ಇಟ್ಟಲ್ಲಿಂದ ಒಂದರೆ ಹೆಜ್ಜಿ ಹಂದಬೇಕು ಇಲ್ಲಂದ್ರ ನಡೆಯೂ ಹುಕಿ ಹೆಂಗ್ ಹುಟ್ಟತತಿ?
ಗೂಟದಂತ ಕಾಲಿನ್ಯಾಗ ಕಂಪನ ಮೂಡಬೇಕಂದ್ರ ನೀ ಮೀಟಬೇಕು ಫರಕ ಅಳಿಸೋ ತಂಬೂರಿ ತಂತಿ
ಆವಾಗ್ ನೋಡು ಜೀಂವಾ, ಅನುದಿನದ ತನು ಕಳಚಿ ನಿನ ಬಲ್ಲಿ ನೀನ ಆಗಿ ಬರತೇನಿ ಎರಡಳಿದು ನಿನ ಬಲ್ಲಿ ನೀನ ಆಗಿ ಇರತೇನಿ
*
ಡಾ. ಎಚ್.ಎಸ್. ಅನುಪಮಾ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ವೈದ್ಯವೃತ್ತಿಯಲ್ಲಿದ್ದಾರೆ. ‘ಹೂ ಅರಳಿದ್ದಕ್ಕೆ ಯಾಕೆ ಸಾಕ್ಷಿ’. ಜೀವಕೋಶ, ಮಹಿಳಾ ಆರೋಗ್ಯ, ಅಸಮಾನ ಭಾರತ, ಮಹಿಳೆ: ದಲಿತತ್ವ ಮತ್ತು ರಾಜಕೀಯ ಪ್ರಜ್ಞೆ, ಭೀಮಯಾನ, ಉರಿಯ ಪದವು (ನಾಮದೇವ ಢಸಾಳ್ ಅನುವಾದ), ಅಂಬೇಡ್ಕರ್ ಮತ್ತು ಕಾರ್ಟೂನ್ ವಿವಾದ, ಚೆಗೆವಾರನ ನೆಲದಲ್ಲಿ, ಕೋವಿಡ್ ಡಾಕ್ಟರ್ ಡೈರಿ, ಒಡನಾಡಿ ಸಬಿಹಾ, ಹೆಣ್ಣು ಹೆಜ್ಜೆ, ಸಬರಮತಿ, ಮುಟ್ಟು, ಹೆಣ್ಣು, ನಾನು ಕಸ್ತೂರ್, ಹದಿಮೂರು ವರ್ಷಗಳು, ವಿಮೋಚಕನ ಹೆಜ್ಜೆಗಳು, ನೆಗೆವ ಪಾದದ ಜಿಗಿತ, ಮುಳ್ಳ ಮೇಲಿನ ಸೆರಗು, ಮರಗುದುರೆ, ಮೋಟಾರ್ ಸೈಕಲ್ ಡೈರಿ, ಉರಿಯ ಕುಡಿಯ ನಟ್ಟನಡುವೆ, ನೋಯುವ ಹಲ್ಲಿಗೆ ಹೊರಳುವ ನಾಲಿಗೆ, ಜೀವಕೋಶ, ಛತ್ರಪತಿ ಶಾಹೂ, ಅಂಬೇಡ್ಕರ್ ಬಿಕ್ಕಟ್ಟು ಮತ್ತು ಭವಿಷ್ಯದ ಸವಾಲುಗಳು.
ಅನುಪಮಾ ಅವರ ಕಲವಕ್ಕಿ ಮೇಲ್ ಓದಿ : ಕವಲಕ್ಕಿ ಮೇಲ್ ; ‘ನಾನೆಂಬ ಸೂತ್ರಧಾರಿಣಿ ಇಲ್ಲದೇ ನೀವೇ ನಿಮ್ಮದನ್ನು ಹೇಳಿಕೊಳ್ಳುವ ಕಾಲವೂ ಬರಲಿದೆ’
ಅವರ ಇನ್ನೊಂದು ಬರಹ : Women Empowerment; ನಾನೆಂಬ ಪರಿಮಳದ ಹಾದಿಯಲಿ: ಇನ್ನಾದರೂ ನಿಲ್ಲಿಸುವಿರೇ ಹೂ ಅರಳಿದ್ದಕ್ಕೆ ಸಾಕ್ಷಿ ಹುಡುಕುವುದನ್ನು
ಇದನ್ನೂ ಓದಿ : Poetry ; ಅವಿತಕವಿತೆ ; ಅಮ್ಮಾ, ನನ್ನನ್ನು ತಿಂದು ಮತ್ತೊಮ್ಮೆ ಜನ್ಮನೀಡು, ಈ ಸಲ ನಿರಾಸೆಗೊಳಿಸುವುದಿಲ್ಲ