New Novel : ಅಚ್ಚಿಗೂ ಮೊದಲು ; ಡಾ. ಚಂದ್ರಶೇಖರ ಕಂಬಾರರ ‘ಚಾಂದಬೀ ಸರಕಾರ’ ಬರುತ್ತಿದ್ದಾರೆ!
Dr. Chandrashekhar Kambar : ''ಚಲೊ ಮಾಲ ಅಂದರ ಬೆರಿಕಿ ಮಾಡದೇ ಇರೋದು, ಅಸಲಿ ಮಾಲ ಕೊಡತಾಳ, ಬೇಕಾದಷ್ಟ ಉದ್ದರಿ ಕೊಡತಾಳ. ರೈತರು ಇದ್ದರ ರೊಕ್ಕ ಕೊಡತಾರ, ಇಲ್ಲದಿದ್ದರ ರೊಕ್ಕದ ಬದಲಿ ಗೋದಿ, ಜೋಳ, ರಾಗಿ, ತೊಗರಿ - ತಾವು ಬೆಳೆದದ್ದನ್ನ ಕೊಡತಾರ. ಅಷ್ಟನ್ನೂ ಮೀರಿ ಉದ್ದರಿ ತೀರಿಸಾಕ ಆಗದಿದ್ದರ ಆಕೀದೇ ಒಂದು ಕಲ್ಕೀ ಪದ್ಧತಿ ಐತೆಲ್ಲ...?''
New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.
ಟಿವಿ9 ಕನ್ನಡ ಡಿಜಿಟಲ್ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್ ನಂಬರ್ ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com
ಕೃತಿ : ಚಾಂದಬೀ ಸರ್ಕಾರ (ಕಾದಂಬರಿ) ಲೇಖಕರು : ಡಾ. ಚಂದ್ರಶೇಖರ ಕಂಬಾರ ಪುಟ : 136 ಬೆಲೆ : ರೂ. 150 ಮುಖಪುಟ ವಿನ್ಯಾಸ : ಎಚ್. ಜಿ. ವಾಸುದೇವ್ ಪ್ರಕಾಶನ : ಅಂಕಿತ ಪುಸ್ತಕ, ಬೆಂಗಳೂರು
ಇದೇ ಭಾನುವಾರ (ಅ.10) ಬೆಂಗಳೂರಿನಲ್ಲಿ ಆನ್ಲೈನ್ ಮೂಲಕ ಈ ಕಾದಂಬರಿಯನ್ನು ಹಿರಿಯ ಸಾಹಿತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಬಿಡುಗಡೆ ಮಾಡಲಿದ್ದಾರೆ.
*
ಬಯಲಾಟಗಳಲ್ಲಿ ಕಂಪನಿ ನಾಟಕಗಳಿಗೆ ಸಮಸಮನಾಗಿ ವ್ಯವಹಾರಿಕವಾಗಿ ಯಶಸ್ವಿಯಾದ ಬಯಲಾಟವೆಂದರೆ ಶ್ರೀಕೃಷ್ಣ ಪಾರಿಜಾತ ಒಂದೇ. ಉಳಿದಂತೆ ಯಾವುದೇ ಬಯಲಾಟದ ಪ್ರಕಾರವನ್ನು ಹಳ್ಳಿಯ ಹವ್ಯಾಸೀ ಕಲಾವಿದರು ತಾವೇ ಮುಂದಾಗಿ ಬೇಸಿಗೆಯ ಹುಮ್ಮಸ್ಸಿನೊಂದಿಗೆ ತೋಂಡಿಯಾಗಿ ಕಲಿತು ಆಡಬಹುದು. ಆದರೆ ಪಾರಿಜಾತ ಹಾಗಲ್ಲ, ಕಲಾವಿದರು ನುರಿತ ಉಸ್ತಾದನ ಮೂಲಕವೇ ಹಾಡು ಮಾತುಗಳನ್ನು ಕಲಿಯಬೇಕು. ಕಲಾವಿದರಿಗೆ ಅಕ್ಷರಾಭ್ಯಾಸವಿದ್ದರೆ ಇನ್ನೂ ಒಳ್ಳೆಯದು. ಕೊನೇಪಕ್ಷ ಉಸ್ತಾದನಿಗಾದರೂ ಮಹಾಭಾರತ ಭಗವದ್ಗೀತೆಗಳ ದಟ್ಟ ಪರಿಚಯದೊಂದಿಗೆ ಶಾಸ್ತ್ರ ಮತ್ತು ಶಾಸ್ತ್ರೀಯ ಸಂಗೀತಗಳ ಜ್ಞಾನವೂ ಇರಬೇಕು. ಇಷ್ಟೆಲ್ಲ ಪೂರ್ವ ತಯಾರಿಯೊಂದಿಗೆ ನುರಿತ ಕಲಾವಿದರಿಂದ, ನಾಲ್ಕಾರು ತಿಂಗಳು ತಾಲೀಮು ಮಾಡಿ ಅಟ್ಟ ಏರಬೇಕು. ಹವ್ಯಾಸಿಗಳಿಗಿದು ಸಾಧ್ಯವೇ ಇಲ್ಲ.
ಕರ್ನಾಟಕದಲ್ಲಿಯೂ ಕೃಷ್ಣಾ ತೀರದಲ್ಲಿ ಪಾರಿಜಾತ ಕಲಾವಿದರ ಎರಡು ಮೂರು ತಂಡಗಳಿದ್ದವು ಅಷ್ಟೆ. ಆದರೆ ಈ ಪ್ರಕಾರದಲ್ಲಿ ಹೆಸರು ಮಾಡಿದ ಕಲಾವಿದರಿದ್ದರು. ಅವರಲ್ಲಿ ಚಾಂದಬೀ ಒಬ್ಬಳು. ಆಟ ಪ್ರಯೋಗಿಸುತ್ತಲೇ ಕಥೆಯಾದವಳು. ಆಕೆಯ ಆಟಗಳನ್ನು ಅನೇಕ ಸಲ ನೋಡಿ, ಅವಳ ಹಾಡುಗಾರಿಕೆ, ಕೃಷ್ಣಭಕ್ತಿ, ದೇವರಂತೆ ಭಕ್ತನೂ ಶ್ರೇಷ್ಠನೇ ಎಂಬ ಅವಳ ವಾದಸರಣಿ – ಇತ್ಯಾದಿಗಳಿಂದ ಪ್ರಭಾವಿತನಾದವನು ನಾನು. ಆಕೆಯ ಬಗ್ಗೆ ತಿಳಿದಷ್ಟನ್ನಾದರೂ ಒಂದು ಕತೆ ಮಾಡಿ ಹೇಳಬೇಕೆಂಬ ಬಹುದಿನಗಳ ನನ್ನಾಸೆ ಈಗ ಈಡೇರಿದೆ. ಒಬ್ಬ ದೇವದಾಸಿಯಾಗಿ ಹುಟ್ಟಿ, ಕಲಾವಿದೆಯಾಗಿ, ರಾಣಿಯಾಗಿ ತನ್ನ ಪರಿಸರವನ್ನು ಸಂಸ್ಕರಿಸಿದ್ದು ದೊಡ್ಡ ಸಾಧನೆಯೆಂಬುದು ನನ್ನ ಭಾವನೆ. ಬಹಳ ದಿನಗಳ ಹಿಂದೆ ಅವಳ ಬಗ್ಗೆ ನನ್ನ ಗುರುಗಳಾದ ಪಂಡಿತ್ ರಾಜೀವ ತಾರಾನಾಥರಿಗೆ ಹೇಳಿದ್ದೆ. ಅವರು ಉತ್ಸಾಹದಿಂದ ಇದನ್ನು ಬರೆಯಲು ಹೇಳಿದ್ದರು. ಅದಾಗಿ ವರ್ಷಗಳೇ ಕಳೆದವು. ಇದೀಗ ಈ ರೂಪು ತಳೆದು ಬಂದಿದೆ. ಚಂದ್ರಶೇಖರ ಕಂಬಾರ, ಹಿರಿಯ ಸಾಹಿತಿ
ಚಂದ್ರಶೇಖರ ಕಂಬಾರರು ನಂಬಿಕೆಯಲ್ಲಿ ಆಸ್ತಿಕರು. ಕೊನೆಗೂ ಈ ಲೋಕದಲ್ಲಿ ಕೇಡಿನ, ದುಷ್ಟ ಶಕ್ತಿಗಳ ವಿರುದ್ಧ ಸಾತ್ವಿಕ ಶಕ್ತಿ ಗೆಲ್ಲುತ್ತದೆ ಎಂಬುದು ಅವರ ಪೂರ್ಣ ವಿಶ್ವಾಸ. ಆದರೆ ಈ ವಿಶ್ವಾಸ ಆಧುನಿಕ ಬದುಕಿನ ಸಂಕೀರ್ಣ ಅನುಭವ, ಕೆಡುಕಿನ ಅಪರಿಮಿತ ಸಾಧ್ಯತೆಗಳಿಗೆ ಕುರುಡಾಗುವುದಿಲ್ಲ. ಸಾತ್ವಿಕ ಶಕ್ತಿಗಳು ಕೊನೆಯ ವಿಜಯದ ಮೆಟ್ಟಿಲೇರುವ ಮೊದಲು ಅನುಭವಿಸಬೇಕಾದ ಸೋಲುಗಳನ್ನು ಕಡೆಗಣಿಸುವುದಿಲ್ಲ. ಚರಿತ್ರೆ ಮತ್ತು ವರ್ತಮಾನದ ಮೌಲ್ಯಗಳ ಪರಸ್ಪರ ಸಂಘರ್ಷವನ್ನು ನಿರೂಪಿಸಲು ಇವರು, ಚಾಂದಬೀ ಸರಕಾರದ ಕಥೆಯಾಗಿ ಮುಖ್ಯಮಂತ್ರಿಗಳಾಗಿದ್ದಾಗ ದೇವರಾಜ ಅರಸು ಅವರು ಭೂ ಮಸೂದೆ ಕಾಯಿದೆಯನ್ನು ಜಾರಿಗೆ ತಂದಾಗ ಉಂಟಾದ ಸಾಮಾಜಿಕ ಸ್ಥಿತ್ಯಂತರವನ್ನು ಬಳಸುತ್ತಾರೆ. ಬಲದೇವ ನಾಯಕ ಆ ತನಕ ಬೆಳೆದು ಬಂದ ಜಮೀನ್ದಾರೀ ಪದ್ಧತಿಯ ಕೊನೆಯ ಕೊಂಡಿ ಪ್ರೇಯಸಿಯಂತೆ ಆತನ ಮನಗೆದ್ದು ಪತ್ನಿಯಾದವಳು ಚಾಂದಬೀ. ಎಸ್.ಆರ್. ವಿಜಯಶಂಕರ, ಹಿರಿಯ ವಿಮರ್ಶಕ
*
ಬಡ್ಡಿ ಬಂಗಾರವ್ವ (ಆಯ್ದ ಭಾಗ)
ಚಾಂದಬೀ ಸರಕಾರ್ ಈಗ ಮನೆತನದ ಅಂಗಳ, ಹಿತ್ತಲಗಳಲ್ಲಿ ಸಂಚರಿಸಿ ಎಲ್ಲೆಲ್ಲಿ ಏನೇನಿದೆಯೆಂದು ಗಮನಿಸತೊಡಗಿದಳು. ಕಾರಿನ ಆಳುಗಳ ಮನೆಗಳು, ಕಾರುಬಾರಿಯ ಕಚೇರಿ ಇತ್ಯಾದಿ. ಈ ದಿನ ಗಜನಿಂಗವ್ವನ ಜೊತೆ ವಾಡೆ ನೋಡಿ ಬರಬೇಕೆಂದು ಸಂಜೆ ಹೋಗೋಣವೇ ಎಂದು ಅವಳನ್ನು ಕರೆದು ಕೇಳಿದಳು. ತಕ್ಷಣ ಗಜನಿಂಗವ್ವ,
‘‘ಬ್ಯಾಡ್ರಿ ಸರಕಾರ, ಹೆಣ್ಣುಗಳು ಯಾರೂ ಸುಳಿಯಬಾರದಂಥಾ ಜಾಗ ಅದು. ಊರಿನ ಯಾವ ಹೆಣ್ಣೂ ವಾಡೆಯ ಆಜೂ ಬಾಜೂ ತಪ್ಪಿ ಕೂಡ ಸುತ್ತಾಡೋದಿಲ್ಲ’’.
ಚಾಂದಬೀಗೆ ಹೊಯ್ಕಾಯಿತು.
‘‘ಕಾವೇರಮ್ಮ ಇದ್ದಾಗಲೂ ಹಿಂಗ, ಇತ್ತೇನು?’’
‘‘ಆಗ ವಾಡೇದ ಮುಂದುಗಡೆ ಇರಲಿಲ್ಲ. ಆದರ ವಾಡೇದ ಹಿಂದುಗಡೆ ಒಂದು ಬಾರ್ ಇತ್ತು. ಬಂಗಾರವ್ವ ಬಂದ ಮ್ಯಾಲ, ಹಿಂದ ಮುಂದ ಎರಡೂ ಕಡೆ ಎರಡ ಬಾರ್ ಬಂದುವ್ರಿ.’’
‘‘ಹಾ! ಇನ್ಯಾರೊ ನಿನ್ನೆ ‘ಬಂಗಾರವ್ವ’ ಅಂತಿದ್ದರು. ಯಾರು ಈ ಬಂಗಾರವ್ವ?’’
‘‘ಆಕಿ ಸುದ್ದಿ ನೀವು ತಿಳಕೊಳ್ಳಾಕ, ಬೇಕ್ರ. ಆಕಿ ಅಂತಿಂಥಾ ಹಳ್ಳೀ ಹೆಂಗಸಲ್ಲರಿ. ನಮ್ಮೂರಾಕೀನ… ಆದರೂ ಬಿಎ ಪರೀಕ್ಷೆ ಪಾಸಾದಾಕಿ. ದೇಶ ವಿದೇಶ ಸುತ್ತಾಡಿದಾಕಿ, ನೌಕ್ರಿ ಸಿಗಲಿಲ್ಲ. ನಮ್ಮೂರ ಕುರಣಿ ಈರಪ್ಪನ ಮಗನಿಗೆ ಮದಿವಿ ಮಾಡಿಕೊಟ್ಟರು. ಈರಪ್ಪ ನಿಮ್ಮ ರೈತ. ಬಂಗಾರವ್ವ ಖಾಲಿ ಕುಂತಿದ್ಳಲ್ಲ, ಮನೋಳಿಯ ಕಾರಭಾರಿ ನೋಡಿ ಲಿಕ್ಕರ್ ವ್ಯವಹಾರದೊಳಗ ಸೇರಿಸಿಕೊಂಡ…’’
‘‘ಅಯ್ ಶಿವನ! ಲಿಕ್ಕರ್ ವ್ಯವಹಾರದಾಗ ಆಕಿಗೇನು ಕೆಲಸ?’’
‘‘ಅದಕ್ಕ, ನಾವೆಲ್ಲಾ ಆಕಿಮುಂದ ಧಡ್ಡರಾಗೋದು, ಆಕಿ ಸೇರಿಕೊಂಡ ಒಂದ, ವರ್ಷದಾಗ ಆ ವ್ಯವಹಾರ ನೂರಪಟ್ಟು ಹೆಚ್ಚಾತ್ರಿ!’’
‘‘ಏನಂದಿ? ನೂರ ಪಟ್ಟು?’’
‘‘ಇನ್ನೂ ಹೆಚ್ಚಿಗೇ ಇದ್ದೀತು, ನನಗ ಎಣಿಸಾಕ ಬರೋಣಿಲ್ಲ, ಮನೋಳಿ ಅಯ್ಯಾ ಸರಕಾರ ಆಕಿಗಿ ಚಿನ್ನದ ಬಳಿ, ವಜ್ರದ ಸರ ಆಯಾರ ಮಾಡಿದನಂತವ್ವಾ!’’
ಚಾಂದಬೀ ಆಶ್ಚರ್ಯದಿಂದ ಹುಚ್ಚಿಯಾದಳು…
‘‘ಗಂಡಸರಿಂದ ಆಗದ ಕೆಲಸ ಹೆಣ್ಣು ಹೆಂಗಸು ಅಧೆಂಗ ಮಾಡಿದಳ ಎವ್ವಾ? ಒಂದೀಟು ಬಿಡಿಸಿ ಹೇಳು…’’
‘‘ಅದಕ್ಕ, ಆಕಿಗಿ ಬಡ್ಡೀ ಬಂಗಾರವ್ವ ಅಂತಾರ, ನನ್ನವ್ವಾ! ನಿಮ್ಮ ವಾಡೇದಾಗ ಅಯ್ಯಾ ಸರಕಾರನ ಎರಡು ಬಾರ್ ಅದಾವ, ಒಳಗೊಂದು ಹೊರಗೊಂದು, ಅವೆರಡೂ ಬಾರ್ ನಡೆಸುವಾಕಿ ಈ ಬಡ್ಡೀ ಬಂಗಾರವ್ವ! ಇವನ್ನ ಬಿಟ್ಟರ ರೈತರ ಓಣ್ಯಾಗ ಎರಡು ಬಾರ್ ಅದಾವ!’’
‘‘ಅಲ್ಲ ಗಜನಿಂಗವ್ವಾಯೀ, ಶಿವಾಪುರ ಸಣ್ಣ ಊರು, ಹಳ್ಳೀಗಿಂತ ಸ್ವಲ್ಪ ದೊಡ್ಡದು ಅನ್ನು. ಇಲ್ಲೇನೂ ಒಂದು ಕಾರಕಾನಿ ಇಲ್ಲ, ಫ್ಯಾಕ್ಟರಿ ಇಲ್ಲ. ಬರೀ ಬಡರೈತರನಿಟ್ಟು ಕೊಂಡು ಇಷ್ಟ ಬಾರ್ ನಡೀತಾವ?’’
‘‘ಬಂಗಾರವ್ವನ ಬಾರಂದರ ರೈತರು ಮುಗಿಬೀಳ್ತಾರ ಎವ್ವಾ! ಯಾಕಂತ ಕೇಳು’’.
‘‘ಯಾಕ?’’
‘‘ಚಲೊ ಮಾಲ ಅಂದರ ಬೆರಿಕಿ ಮಾಡದೇ ಇರೋದು, ಅಸಲಿ ಮಾಲ ಕೊಡತಾಳ, ಬೇಕಾದಷ್ಟ ಉದ್ದರಿ ಕೊಡತಾಳ. ರೈತರು ಇದ್ದರ ರೊಕ್ಕ ಕೊಡತಾರ, ಇಲ್ಲದಿದ್ದರ ರೊಕ್ಕದ ಬದಲಿ ಗೋದಿ, ಜೋಳ, ರಾಗಿ, ತೊಗರಿ – ತಾವು ಬೆಳೆದದ್ದನ್ನ ಕೊಡತಾರ. ಅಷ್ಟನ್ನೂ ಮೀರಿ ಉದ್ದರಿ ತೀರಿಸಾಕ ಆಗದಿದ್ದರ ಆಕೀದೇ ಒಂದು ಕಲ್ಕೀ ಪದ್ಧತಿ ಐತೆಲ್ಲ…?’’
‘‘ಕಲ್ಕೀ ಪದ್ಧತಿ ಅಂದರ?’’
‘‘ಕಲ್ಕೀ ಪದ್ಧತಿ ಅಂದರ ಮುದ್ದಾಂ ಉದ್ದರಿ ವಸೂಲಿ ಮಾಡೋದಕ್ಕಂತ, ತಿಗುಳರ ಒಂದ ಹಿಂಡು ಸಾಕ್ಯಾಳ್ರಿ ಆ ಹೆಣ್ಮಗಳು! ‘ಇಂಥವರಿಂದ ಇಷ್ಟು ಹಣ ಬರ ಬೇಕಾಗಿತ್ತು, ಬಂದಿಲ್ಲ, ವಸೂಲ್ ಮಾಡಿಕೊಂಡ ಬರ್ರಿ’ ಅಂತ ಅಡ್ರೆಸ್ ಕೊಡತಾಳ್ರಿ. ನಾಕ ಮಂದಿ ತಿಗುಳರು ಸಂಜೀಹೊತ್ತು, ಒಂದು ಚಾಪಿ, ಕಂದೀಲು, ಹೆಗಲಿಗೊಂದೊಂದು ಕಂಬಳಿ, ಒಂದೊಂದು ಬಡಿಗಿ ತಗೊಂಡು ಆ ಸಾಲದವರ ಮನೀಗಿ ಹೋಗತಾರ. ಮನೆಯವರಿಗೆ ಅವರ ನಾಯಕ ಹೇಳತಾನ, ‘ನೋಡ್ರಿ ನಿಮ್ಮಿಂದ ಬಡ್ಡೀಬಂಗಾರಮ್ಮ ನವರಿಗೆ ಇಂತಿಷ್ಟು ಹಣ ಬರಬೇಕಾಗಿತ್ತು ಬಂದಿಲ್ಲ, ಈಗ ಕೊಟ್ಟರ ತಗೊಂಡು ಹೋಗ್ತೀವಿ. ಇಲ್ಲಾಂದರ ನೀವು ಕೊಡೋತನಕ ನಾವು ನಿಮ್ಮ ಮನೆಯಂಗಳ ಬಿಟ್ಟು ಹೋಗೋದಿಲ್ಲ. ನಾವಿಲ್ಲಿ ಇರೋವಷ್ಟ ದಿವಸ ನಮ್ಮ ಖರ್ಚುವೆಚ್ಚ, ಅಂದರ ಎರಡು ಹೊತ್ತು ಊಟ, ಎರಡು ಸಲ ಚಾಪಾನಿ ನಿಮ್ಮದು’ -ಅಂತ ಹೇಳಿ ಮನೇಮುಂದೆ ಚಾಪೆ ಹಾಸಿ, ಕಂದೀಲ ಬೆಳಕಿನಾಗ ಇಸ್ಪೀಟ್ ಆಡಿಕೊಂಡು ಕೂತಿರತಾರ! ಹಣ ಕೊಡೋತನಕ ಜಾಗಾ ಬಿಟ್ಟು ಕದಲೋದಿಲ್ಲರಿ!’’
‘‘ಭಲೆ! ಏನ ಶಾಣೇತನ ಎವ್ವ! ಮನೀ ಮುಂದ ಆ ತಿಗುಳರನ್ನ ಕೂರಿಸಿ ಕೊಂಡೀಯ?-ಮಾನಗೇಡು! ಕೊಟ್ಟೇನಂದರ ಕೈಯಾಗ ಕಾಸಿಲ್ಲ!..’’
‘‘ಏನ ಸಬೂಬು ಹೇಳಿದರೂ ಅವರು ಆ ಜಾಗಾ ಬಿಟ್ಟು ಕದಲೋದಿಲ್ಲ!’’
‘‘ರೊಕ್ಕ ಇಲ್ಲಂದರ..?’’
‘‘ರೊಕ್ಕ ಇಲ್ಲಂದರ ಜೋಳ ರಾಗಿ ಗೋದಿ ತಿನ್ನೋದು ಬಿಟ್ಟಾದರೂ ಕೊಡಬೇಕು. ಇಷ್ಟ ರೂಪಾಯಿಗಿ ಇಷ್ಟು ಗೋದಿ, ತೊಗರಿ, ಜೋಳ ಹಿಂಗ ಆಕೀದ, ಒಂದು ರೇಟ್ ಇಟ್ಟಾಳ. ಅದರ ಪ್ರಕಾರ ಕೊಡಬೇಕು. ಹಬ್ಬ ಹುಣಿವಿ ಎಲೆಕ್ಶನ್ ಅಂದರ ಆ ರೇಟು ಹೆಚ್ಚು ಕಮ್ಮಿ ಆಗತಾವರಿ!’’
-ಇಷ್ಟು ಹೇಳುವುದರೊಳಗೆ ಗಜನಿಂಗವ್ವನನ್ನು ಕೇಳಿಕೊಂಡು ಹೆಣ್ಣಾಳು ಬಂದುದರಿಂದ ಆಕೆ ಹೊರಗೆ ಹೋದಳು. ಬಾಯಿಗೆ ಕೈ ಹಚ್ಚಿಕೊಂಡು ಚಾಂದಬೀ ಅಲ್ಲೇ ಕುಂತಳು.
ಈ ಬಂಗಾರವ್ವ ನಮ್ಮ ಕತೆಗೆ ಸೇರಿದ್ದು ರೈತರ ನಾತೆಯಿಂದ. ಅವಳ ಮೂಲ ಹೆಸರು ಬಂಗಾರಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಓದಿದವಳು. ಸಹಜ ಚೆಲುವೆಯಾದ, ಹಿಂದೀ ಹಾಡು ಹೇಳಿಕೊಂಡು ತನ್ನ ಹಿಂದೆ ಬಿದ್ದ ಹುಡುಗರನ್ನ ಗೋಳು ಹುಯ್ದುಕೊಂಡವಳೆಂಬ ಖ್ಯಾತಿಯವಳು. ಬಿ.ಎ. ಓದುವಾಗಲೇ ಯಾವುದೋ ವಿದ್ಯಾರ್ಥಿಪ್ರವಾಸದ ಸೌಲಭ್ಯ ಪಡೆದು ಒಂದು ತಿಂಗಳ ಕಾಲ ಅಮೆರಿಕ ಸುತ್ತಿ ಬಂದಿದ್ದಳು, ಬಿ.ಎ ಆದಮೇಲೆ ನೌಕರಿಗಾಗಿ ಬೇಕಾದಷ್ಟು ಅರ್ಜಿಗಳನ್ನು ಹಾಕಿ ನಿರಾಶಳಾಗಿರುವಾಗಲೇ ಶಿವಾಪುರದ ರೈತ ಮನೆತನದ ಅವರ ಸಂಬಂಧಿಕನೇ ಆದೊಬ್ಬ ಹುಡುಗ ಸಿಕ್ಕೊಡನೆ ಮದುವೆ ಮಾಡಿಕೊಟ್ಟರು. ಅಲ್ಲಿಗೆ ಅವಳ ನೌಕರಿಯ ಆಸೆ ಕೊನೆಗೊಂಡಿತು. ಆದರೆ ಗಂಡ ಪುಂಡಲೀಕ ಸೋಮಾರಿ, ಬಲರಾಂ ನಾಯಕನ ಒಕ್ಕಲು. ಇವನ ತಂದೆ ಒಳ್ಳೆಯ ಕೆಲಸಗಾರನೆಂದು ಅವನಿಗೆ ಹತ್ತು ಎಕರೆ ಜಮೀನು ಕೊಟ್ಟಿದ್ದರೆ ಆತ ಕಷ್ಟಪಟ್ಟು ದುಡಿದು ಹೊಲವನ್ನು ಸಮೃದ್ಧ ತೋಟವನ್ನಾಗಿ ಮಾಡಿ ಶ್ರೀಮಂತನಾದ. ಅವನ ಒಬ್ಬನೇ ಮಗ ಪುಂಡಲೀಕ ಎಸ್‍ಎಸ್‍ಎಲ್‍ಸಿ ಆಗಿ ನೌಕರಿ ಸಿಕ್ಕದೆ ಇದ್ದಾಗ ಅವನ ತಂದೆ, ‘‘ನೌಕರಿ ಸಿಕ್ಕದಿದ್ದರೆ ಬೇಡ, ಸಮೃದ್ಧವಾದ ತೋಟವಿದೆ ಬಾ’’ ಎಂದು ಇಂದಿನ ಬಂಗಾರವ್ವನೊಂದಿಗೆ ಮದುವೆ ಮಾಡಿದ, ಆದರೆ ಪುಂಡಲೀಕ ವಿಲಾಸಿ, ಆಳುಗಳಿಂದ ಕೆಲಸ ಮಾಡಿಸುತ್ತ ತಾನು ಮದಿರೆಯ ಭಕ್ತನಾದ. ಒಂದು ಮಗುವಾದರೂ ಅವನಿಗೆ ಬುದ್ಧಿ ಬರಲಿಲ್ಲ. ಕೊನೆಗೆ ಬಂಗಾರವ್ವ ತನಗಾದರೂ ಒಂದು ನೌಕರಿ ಸಿಕ್ಕರೆ ಪರಿಸ್ಥಿತಿ ಸುಧಾರಿಸಬಹುದೆಂದು ಅರ್ಜಿ ಹಾಕತೊಡಗಿದಳು. ಆಗ ಸಿಕ್ಕವನು ಅಯ್ಯಾ ಸರಕಾರನ ಕಾರುಭಾರಿ ನೀಲಕಂಠ.
ಬಂಗಾರವ್ವ ಸ್ವಯಂ ಪ್ರತಿಭೆಯ ವ್ಯವಹಾರ ಚತುರೆ. ಶಿವಾಪುರದ ವಾಡೇದಲ್ಲಿ, ಕಾರುಭಾರಿ ನೀಲಕಂಠ ಕೊಟ್ಟ ಆಫೀಸಿನಲ್ಲಿ ಕೂತು ನೆರೆಹೊರೆ ಅಯ್ಯಾ ಸರಕಾರನ ಎರಡು ಬಾರುಗಳಲ್ಲಿ ನಡೆಯುವ ವ್ಯವಹಾರಗಳನ್ನ ಸೂಕ್ಷ್ಮವಾಗಿ ಗ್ರಹಿಸಿದಳು. ಶಿವಾಪುರದ ಜನ ಮುಖ್ಯವಾಗಿ ರೈತರು, ಯಾವುದಕ್ಕೂ ಗೆಯ್ಮೆಯನ್ನೇ ಅವಲಂಬಿಸಿದವರು. ಊರು ನೋಡಿದರೆ ಕಾರ್ಮಿಕರಿರುವ ಊರಲ್ಲ. ಇಲ್ಲಿರೋದು ಅತೀ ಅಂದರೆ ಕುಲಕಸಬು, ಕೈಕಸಬು ಇತ್ಯಾದಿ. ಅವೂ ಕೆಲವೇ ಕುಟುಂಬಗಳಲ್ಲಿ ಪಾರಂಪರಿಕವಾಗಿ ಬಂದ ಕಸಬುಗಳು. ಅವರು ಶ್ರೀಮಂತರೂ ಅಲ್ಲ. ಹೇಳಿಕೊಳ್ಳುವಂಥ ಕುಡುಕರೂ ಅಲ್ಲ. ಇಂಥಲ್ಲಿ ಒಂದು ಬಾರಿನ ವ್ಯವಹಾರ ನಡೆಯುವುದೇ ಕಷ್ಟವಾಗಿರುವಾಗ ಎರಡು ಬಾರುಗಳೆಂದರೆ ಹ್ಯಾಗೆ? ನೋಡಿದರೆ ಬಾರುಗಳು ಸುರುವಾಗಿ ಒಂದು ವರ್ಷ ಕಳೆದರೂ ಲಾಭ ಇಲ್ಲವೇ ಇಲ್ಲ. ನಿಲ್ಲಿಸಬೇಕೆಂದರೆ ಸದಾ ಜನರ ನೂಕು ನುಗ್ಗಲು ಇರುತ್ತದೆ. ಯಾರೂ ಕುಡಿಯೋದಿಲ್ಲ, ಆದರೆ ಎರಡೂ ಹರಟೆಯ ಕಟ್ಟೆಗಳಾಗಿದ್ದವು.
ಸಾಲದ್ದಕ್ಕೆ ಆಗಾಗ ಬರುವ ಎಲೆಕ್ಶನ್‍ಗಳು, ಆ ಪಕ್ಷ, ಈ ಪಕ್ಷ, ಇತ್ಯಾದಿ ಹೊಸ ರಾಜಕಾರಣವೇ ಅವರ ಹರಟೆಯ ಮುಖ್ಯ ವಿಷಯಗಳು. ಬಂಗಾರವ್ವ ಇದನ್ನೆಲ್ಲ ಗಮನಿಸಿದ್ದೇ ತನ್ನ ತಲೆ ಉಪಯೋಗಿಸಿದಳು ನೋಡು: ಒಂದೇ ವರ್ಷದಲ್ಲಿ ಹಾಕಿದ ಬಂಡವಾಳದ ಹತ್ತು ಪಟ್ಟು ಲಾಭ ತೋರಿಸಿ ಪವಾಡ ಮೆರೆದಳು!
(ಕಾದಂಬರಿಯ ಖರೀದಿಗೆ ಸಂಪರ್ಕಿಸಿ : ಅಂಕಿತ ಪುಸ್ತಕ)
ಇದನ್ನೂ ಓದಿ : New Book : ಅಚ್ಚಿಗೂ ಮೊದಲು ; ‘ಕನ್ನಡ ಸಾಹಿತ್ಯ ಈ ಶತಮಾನದ ನೋಟ ; ಶಿವರಾಮ ಕಾರಂತ’ ಕೃತಿ ಈ ವಾರಾಂತ್ಯ ಬಿಡುಗಡೆ
Published On - 11:52 am, Fri, 8 October 21