Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 7ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 7ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಈ ದಿನ ಹಲವು ವಿಚಾರಗಳಲ್ಲಿ ಹಿತಕರವಾದ ಅನುಭವ ಆಗಲಿದೆ. ನೀವು ಇಷ್ಟ ಪಡುವಂಥ ಊಟ- ತಿಂಡಿ, ಬಟ್ಟೆ, ಸಿಹಿ ತಿನಿಸುಗಳು ಇವೆಲ್ಲವೂ ದೊರೆಯುವಂಥ ಯೋಗವು ನಿಮ್ಮ ಪಾಲಿಗೆ ಒದಗಿ ಬರಲಿದೆ. ಈ ಹಿಂದೆ ನಿಮ್ಮಿಂದ ಸಹಾಯ ಪಡೆದವರು ಉಡುಗೊರೆಗಳನ್ನು ನೀಡುವಂಥ ಸಾಧ್ಯತೆಗಳಿವೆ. ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುವಂಥವರಿಗೆ ದೊಡ್ಡ ಪ್ರಾಜೆಕ್ಟ್ ದೊರೆಯುವಂಥ ಯೋಗ ಇದೆ. ಲೋಕಾಭಿರಾಮಕ್ಕೆ ಮಾತು ಆರಂಭವಾದರೂ ಅದು ಕಾರ್ಯರೂಪಕ್ಕೆ ಬರುವ ಸಾಧ್ಯತೆಗಳು ಹೆಚ್ಚಿವೆ. ಮನೆ ನಿರ್ಮಾಣ, ನೀರಿನ ಸಲಕರಣೆಗಳು ರಿಪೇರಿ ಕೆಲಸ, ಸೋಲಾರ್ ಗೆ ಸಂಬಂಧಿಸಿದ ಸಲಕರಣೆಗಳ ವ್ಯವಹಾರದಲ್ಲಿ ತೊಡಗಿಕೊಂಡವರಿಗೆ ದೊಡ್ಡ ಆರ್ಡರ್ ಸಿಗಬಹುದು. ನಿಮ್ಮ ಸ್ನೇಹಿತರು ಅಥವಾ ಸಂಬಂಧಿಗಳ ರೆಫರೆನ್ಸ್ ಮೂಲಕ ಜನರು ನಿಮ್ಮ ಬಳಿ ಬರಲಿದ್ದಾರೆ. ಅದೆಂಥ ಸಣ್ಣ ಪ್ರಮಾಣದ ಕೆಲಸವೇ ಬಂದರೂ ಅದನ್ನು ಮಾಡಿದಲ್ಲಿ ಭವಿಷ್ಯದಲ್ಲಿ ಅನುಕೂಲ ಆಗುವ ಯೋಗವಿದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ನಿಮ್ಮ ಎದುರಿಗೆ ಇರುವವರು ಏನು ಮಾತನಾಡುತ್ತಿದ್ದಾರೆ ಎಂಬುದನ್ನು ಗಮನವಿಟ್ಟು ಮೊದಲಿಗೆ ಕೇಳಿಸಿಕೊಳ್ಳಿ. ಅದನ್ನು ಬಿಟ್ಟು ಅವರು ವಿಷಯದ ಪ್ರಸ್ತಾವ ಮಾಡುತ್ತಿದ್ದಂತೆಯೇ ನಿಮ್ಮ ಮನಸ್ಸಿನಲ್ಲಿ ಅದಾಗಲೇ ಸಿದ್ಧವಿರುವ ಉತ್ತರವನ್ನು ಹೇಳುವುದಕ್ಕೆ ಮುಂದಾಗಬೇಡಿ. ಪ್ರೀತಿಯಲ್ಲಿ ಇರುವಂಥವರಿಗೆ ತಮ್ಮ ಪ್ರಿಯತಮ ಅಥವಾ ಪ್ರೇಯಸಿ ನಿರ್ಲಕ್ಷಿಸುತ್ತಿದ್ದಾರೆ ಎಂಬ ಭಾವನೆ ಮೂಡಲಿದೆ. ಅದರಲ್ಲೂ ಹಣಕಾಸಿನ ವಿಚಾರದಲ್ಲಿ ಕೈಗೊಂಡ ಮುಖ್ಯ ತೀರ್ಮಾನವೊಂದರ ಬಗ್ಗೆ ನಿಮ್ಮ ಬಳಿ ಏನನ್ನೂ ಹೇಳಿಲ್ಲ ಎಂಬುದು ದೊಡ್ಡ ವಿಚಾರವಾಗಿ ಮಾರ್ಪಡಲಿದೆ. ಇನ್ನು ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ನಿಮ್ಮ ನಿರೀಕ್ಷೆಯಂತೆ ಬೆಳವಣಿಗೆಗಳು ಆಗುವುದಿಲ್ಲ ಎಂಬುದು ಗಮನಕ್ಕೆ ಬರಲಿದೆ. ಹೋಟೆಲ್ ವ್ಯವಹಾರ ಅಥವಾ ಚಾಟ್ಸ್- ಚೈನೀಸ್ ತಿನಿಸುಗಳ ಮಾರಾಟ ವ್ಯವಹಾರದಲ್ಲಿ ಈಗಾಗಲೇ ತೊಡಗಿಕೊಂಡವರು ವಿಸ್ತರಣೆಗೆ ಆಲೋಚನೆ ಮಾಡಲಿದ್ದೀರಿ ಹಾಗೂ ಅದಕ್ಕಾಗಿ ಹಣಕಾಸಿನ ಹೊಂದಾಣಿಕೆ ಮಾಡಿಕೊಳ್ಳಲಿದ್ದೀರಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಸ್ನೇಹಿತರು- ಸಂಬಂಧಿಗಳ ಆಹ್ವಾನದ ಮೇಲೆ ಅವರ ಮನೆಗಳಿಗೆ ಊಟ ಅಥವಾ ತಿಂಡಿಗೋ ಅಥವಾ ಗೆಟ್- ಟು- ಗೆದರ್ ಗೆ ತೆರಳುವಂಥ ಯೋಗ ಇದೆ. ನಿಮ್ಮಲ್ಲಿ ಕೆಲವರು ಈ ದಿನ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವ ಸಾಧ್ಯತೆಗಳಿವೆ. ಅದೇ ರೀತಿ ಕೆಲವರು ರೆಸಾರ್ಟ್ ಅಥವಾ ಹೋಮ್ ಸ್ಟೇಗಳಿಗೆ ತೆರಳುವಂಥ ಯೋಗ ಇದೆ. ಅನಿರೀಕ್ಷಿತವಾಗಿ ಹಣದ ಹರಿವು ಉತ್ತಮಗೊಳ್ಳಲಿದೆ. ಬಹಳ ಸಮಯದಿಂದ ಮಾರಾಟ ಆಗದೆ ಉಳಿದಿದ್ದ ವಸ್ತುಗಳು ವ್ಯಾಪಾರಿಗಳಿಗೆ ಮಾರಾಟ ಆಗುವ ಸಾಧ್ಯತೆಗಳಿವೆ. ಹೊಸದಾಗಿ ಗ್ರಾಹಕರು ದೊರೆಯಲಿದ್ದಾರೆ. ಸ್ವಭಾವತಃ ಸಿಟ್ಟಿನವರಾಗಿದ್ದರೆ ಈ ದಿನ ಸಾಧ್ಯವಾದಷ್ಟೂ ಸಮಾಧಾನದಿಂದ ಇರುವುದು ಉತ್ತಮ. ಹೀಗೆ ಇರುವುದರಿಂದ ಹಲವು ಬಗೆಯಲ್ಲಿ ಅನುಕೂಲಗಳು ಆಗಬಹುದು. ಒಂದೇ ವಿಚಾರಕ್ಕೆ ಸಂಬಂಧಿಸಿದಂತೆ ನಿಮ್ಮ ಆಪ್ತರಿಂದ ಎರಡು ವಿಭಿನ್ನ ಅಭಿಪ್ರಾಯ, ದೃಷ್ಟಿಕೋನಗಳು ವ್ಯಕ್ತ ಆಗಬಹುದು. ಈ ಬಗ್ಗೆ ವಿಪರೀತ ತಲೆ ಕೆಡಿಸಿಕೊಳ್ಳದಿರುವುದು ಉತ್ತಮ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನಿಮ್ಮದೇ ತಪ್ಪಿದ್ದರೂ ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಇರುವುದಿಲ್ಲ. ವಿತಂಡ ವಾದವನ್ನು ಹೂಡಲಿದ್ದೀರಿ. ಹೇಗಿದ್ದರೂ ಸಾಲ ದೊರೆಯುತ್ತದೆ ಎಂಬ ಕಾರಣಕ್ಕೋ ಅಥವಾ ಬಡ್ಡಿ ಇಲ್ಲದ ಆಫರ್ ಏನೋ ಇದೆ ಎಂಬ ಕಾರಣಕ್ಕೋ ಅಗತ್ಯ ಇಲ್ಲದಿದ್ದರೂ ಕೆಲವು ವಸ್ತುಗಳನ್ನು ಖರೀದಿಸುವುದಕ್ಕೆ ಮುಂದಾಗಲಿದ್ದೀರಿ. ಆಪ್ತ ಸ್ನೇಹಿತರೊಬ್ಬರ ಜತೆಗೆ ಮಾತನಾಡುವಾಗ ಬಳಸುವಂಥ ಪದಗಳಿಂದ ಅವರಿಗೆ ಬಹಳ ಬೇಸರ ಆಗಬಹುದು ಅಥವಾ ಕೆಲ ದಿನಗಳ ಮಟ್ಟಿಗೆ ಮಾತನ್ನೇ ಬಿಡುವ ಹಂತಕ್ಕೂ ಹೋಗಬಹುದು. ಮೂವತ್ತು ವರ್ಷಕ್ಕಿಂತ ಹೆಚ್ಚಿನ ವಯಸ್ಸು ಮಕ್ಕಳು ಯಾರಿಗೆ ಇದ್ದಾರೋ ಅಂಥವರು ಮಕ್ಕಳ ಜತೆಗೆ ಮಾತನಾಡುವಾಗ ಕೋಪ ಮಾಡಿಕೊಳ್ಳದೇ ಇರುವುದು ತುಂಬ ಮುಖ್ಯ. ಮನೆ- ಆಸ್ತಿ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರವೇ ಇರಬಹುದು ಅಥವಾ ಮದುವೆ ಮತ್ಯಾವುದೇ ವಿಷಯ ಇರಬಹುದು, ಅದರ ಬಗ್ಗೆ ನಿಮಗೆ ಸಮ್ಮತಿ ಇಲ್ಲದಿದ್ದರೆ ಸುಮ್ಮನಿದ್ದು ಬಿಡಿ, ಬದಲಿಗೆ ವಾದ- ವಾಗ್ವಾದಗಳನ್ನು ಮಾಡಿಕೊಳ್ಳಬೇಡಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಪರಿಚಿತರು ದಿಢೀರನೇ ನಿಮಗೆ ಕೆಲವು ವಸ್ತುಗಳನ್ನು ಉಚಿತವಾಗಿ ನೀಡಬಹುದು ಅಥವಾ ತಾವು ಕೆಲವು ಕಾಲ ದೂರದ ಊರಿಗೆ ಹೋಗುತ್ತಿದ್ದೇವೆ, ನಮ್ಮ ಕಾರು ಅಥವಾ ಬೈಕ್/ ಸ್ಕೂಟರ್ ಅನ್ನು ನೀವು ಬಳಸಿಕೊಳ್ಳಿ ಅಂತ ಹೇಳಬಹುದು. ಸಂಗಾತಿಯು ನಿಮ್ಮ ಬಳಿ ಕೆಲವು ಬೇಡಿಕೆಗಳನ್ನು ಇಡುವ ಸಾಧ್ಯತೆಗಳಿವೆ. ತವರು ಮನೆಯಿಂದ ಹೆಣ್ಣುಮಕ್ಕಳಿಗೆ ಬರಬೇಕಾದ ಆಸ್ತಿಯ ಪಾಲು ಏನಾದರೂ ಇದ್ದಲ್ಲಿ ಅದರ ಬಗ್ಗೆ ಒಂದು ತೀರ್ಮಾನ ಆಗುವಂಥ ಸುಳಿವು ದೊರೆಯಲಿದೆ. ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಬಹಳ ಉತ್ತಮವಾದ ಮಾರ್ಗದರ್ಶನ ದೊರೆಯುವ ಸಾಧ್ಯತೆಗಳು ಹೆಚ್ಚಿವೆ. ಅದೇ ರೀತಿ ಸರ್ಕಾರದಿಂದ ಸಿಗಬೇಕಾದ ಕಾಗದ- ಪತ್ರಗಳಿಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಅದನ್ನು ಪಡೆದುಕೊಳ್ಳಲು ಅನುಸರಿಸಬೇಕಾದ ವಿಧಾನದ ಬಗ್ಗೆ ತಿಳಿದುಬರಲಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗೀ ಆಗುವುದರಿಂದ ನಿಮ್ಮ ಮನಸ್ಸಿಗೆ ತೃಪ್ತಿ- ಸಮಾಧಾನ ದೊರೆಯಲಿದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ನೀವಾಗಿಯೇ ವಹಿಸಿಕೊಂಡ ಜವಾಬ್ದಾರಿಗಳು ವಿಪರೀತ ಭಾರವಾಗಿ ಕಾಡುವುದಕ್ಕೆ ಆರಂಭಿಸುತ್ತದೆ. ಇಷ್ಟು ಸಮಯದಲ್ಲಿ ಹಣ ನೀಡುತ್ತೇನೆ ಎಂದು ನೀವು ಯಾರಿಗಾದರೂ ಮಾತು ನೀಡಿದ್ದಲ್ಲಿ ಅದು ನೀಡುವುದಕ್ಕೆ ಸಾಧ್ಯವಾಗದೆ ಅವರಿಂದ ನಿಂದೆ- ಆರೋಪಗಳನ್ನು ಕೇಳಿಸಿಕೊಳ್ಳಬೇಕಾಗಲಿದೆ. ಇನ್ನು ನಿಮ್ಮಲ್ಲಿ ಕೆಲವರಿಗೆ ನಿದ್ದೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು. ಕೆಟ್ಟ ಕನಸುಗಳು ಬೀಳಬಹುದು ಅಥವಾ ಪದೇಪದೇ ಎಚ್ಚರವಾಗಿ, ಪೂರ್ಣ ಪ್ರಮಾಣದಲ್ಲಿ ನಿದ್ದೆ ಮಾಡುವುದಕ್ಕೆ ಸಾಧ್ಯವಾಗದಿರಬಹುದು. ಸಲೂನ್ ಹೊಸದಾಗಿ ಶುರು ಮಾಡಬೇಕು ಎಂದುಕೊಳ್ಳುತ್ತಿರುವವರಿಗೆ ಹಣಕಾಸಿನ ಅನುಕೂಲಗಳು ಒದಗಿ ಬರಲಿವೆ. ಮನೆಯ ಮಟ್ಟಿಗೆ ಮಾಡಬೇಕು ಎಂದುಕೊಂಡಿದ್ದ ಕಾರ್ಯಕ್ರಮವನ್ನು ದೊಡ್ಡ ಪ್ರಮಾಣದಲ್ಲಿ ಮಾಡುವ ಸನ್ನಿವೇಶ ಸೃಷ್ಟಿ ಆಗಲಿದೆ. ಉದ್ಯೋಗ ಬದಲಾವಣೆಗೆ ಕೆಲವು ಅವಕಾಶಗಳು ಇವೆ ಎಂಬ ಬಗ್ಗೆ ಸ್ನೇಹಿತರು ಗಮನಕ್ಕೆ ತರಲಿದ್ದಾರೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಸಂಗಾತಿಯ ಅನಾರೋಗ್ಯ ಸಮಸ್ಯೆಗಳು ಆತಂಕಕ್ಕೆ ಕಾರಣ ಆಗಬಹುದು. ಒಂದು ವೇಳೆ ಈಗಾಗಲೇ ವೈದ್ಯರ ಬಳಿ ತೋರಿಸಿಕೊಂಡಿದ್ದರೂ ಸಮಸ್ಯೆ ಉಲ್ಬಣ ಆಗಿ, ಆತಂಕ ಸೃಷ್ಟಿ ಆಗಬಹುದು. ನಿರಾಂತಕವಾಗಿ ಆಗಬಹುದು ಎಂದುಕೊಂಡಿದ್ದ ಕೆಲವು ಕೆಲಸಗಳಿಗೆ ಅಡೆತಡೆಗಳು ಕಾಣಿಸಿಕೊಳ್ಳಬಹುದು. ಇಷ್ಟು ಸಮಯ ನಿಮ್ಮ ಜತೆಗೂಡಿ ವ್ಯವಹಾರ ಮಾಡುವುದಾಗಿ ಭರವಸೆ ನೀಡಿದ್ದ ವ್ಯಕ್ತಿಯು ತನ್ನ ತೀರ್ಮಾನವನ್ನು ಬದಲಿಸಿಕೊಂಡಿರುವುದಾಗಿ ಹೇಳಬಹುದು ಅಥವಾ ಅವರ ನಡವಳಿಕೆಗಳಿಂದ ಆ ಸೂಕ್ಷ್ಮ ಸಂಗತಿ ಗೊತ್ತಾಗಲಿದೆ. ಪ್ರಾಪಂಚಿಕ ವಿಚಾರಗಳ ಪೈಕಿ ಕೆಲವಷ್ಟರ ಬಗ್ಗೆ ನಿಮಗೆ ವೈರಾಗ್ಯ ಬರಲಿದೆ. ಇದು ಏನು ಮಾಡಿದರೂ- ಎಷ್ಟು ಮಾಡಿದರೂ ಇಷ್ಟೇ ಹಣೆಬರಹ ಎಂಬ ಧೋರಣೆ ಅದಾಗಿರಲಿದೆ. ಮಾನಸಿಕವಾಗಿ ನೀವಿನ್ನೂ ಸಿದ್ಧರಿರದ ಕೆಲವು ವಿಷಯಗಳಲ್ಲಿ ನಿರ್ಧಾರ ಮಾಡಲೇಬೇಕಾದ ಸ್ಥಿತಿಗೆ ದೂಡಲ್ಪಡುತ್ತೀರಿ. ನಿಮ್ಮ ಸಿಟ್ಟನ್ನು ಯಾರ್ಯಾರ ಮೇಲೋ ತೋರಿಸಬೇಡಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಕುಟುಂಬದ ಜತೆಗೂಡಿ ಪ್ರಯಾಣ ಮಾಡುವಂಥ ಯೋಗ ನಿಮ್ಮ ಪಾಲಿಗೆ ಇದೆ. ಸ್ವಲ್ಪ ಮಟ್ಟಿಗೆ ಹಣ ನಿಮ್ಮಿಂದ ಕೈ ಬಿಟ್ಟರೂ ನೆಮ್ಮದಿಯಂತೂ ಇರಲಿದೆ. ಪ್ರೀತಿಪಾತ್ರರು – ಆಪ್ತರ ಜತೆಗೆ ಸಮಯ ಕಳೆದು, ಊಟ- ತಿಂಡಿ ಮಾಡುವುದು ಇವೆಲ್ಲ ತೃಪ್ತಿಯನ್ನು ತರಲಿವೆ. ಆಹಾರ- ನೀರು ಸೇವನೆ ವಿಚಾರವಾಗಿ ಮುಂಜಾಗ್ರತೆಯನ್ನು ವಹಿಸಬೇಕಾಗುತ್ತದೆ. ಇನ್ನು ಯಾರಿಗೆ ಈಗಾಗಲೇ ತೀವ್ರತರವಾದ ಬೆನ್ನು ನೋವು ಕಾಡುತ್ತಿದೆ ಅಂಥವರಿಗೆ ಸಮಸ್ಯೆ ಉಲ್ಬಣಿಸಲಿದೆ. ಹೆಣ್ಣುಮಕ್ಕಳಿಗೆ ತವರು ಮನೆಯಿಂದ ಉಡುಗೊರೆಗಳನ್ನು ಪಡೆಯುವಂಥ ಯೋಗವಿದೆ. ಹಳೇ ಮನಸ್ತಾಪಗಳನ್ನು ಮರೆಯುವುದಕ್ಕೆ ಬೇಕಾದ ವೇದಿಕೆ ದೊರೆಯಲಿದೆ. ಇನ್ನು ನಿಮ್ಮಲ್ಲಿ ಕೆಲವರು ಮನೆಗೆ ಟೀವಿ, ಹೋಮ್ ಥಿಯೇಟರ್ ಸಿಸ್ಟಮ್ ಅನ್ನು ಖರೀದಿಸುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಸೆಕೆಂಡ್ ಹ್ಯಾಂಡ್ ವಾಹನ ಖರೀದಿ ಮಾಡಬೇಕು ಎಂದು ಆಲೋಚಿಸುತ್ತಿರುವವರಿಗೆ ಸಹ ಮನಸ್ಸಿಗೆ ಒಪ್ಪುವಂಥದ್ದು ದೊರೆಯಲಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಸ್ಥಿರತೆ ಕಾಯ್ದುಕೊಳ್ಳುವುದು ಮುಖ್ಯವಾಗುತ್ತದೆ. ನಿಮ್ಮ ನಿರ್ಧಾರ- ತೀರ್ಮಾನಗಳನ್ನು ಪದೇಪದೇ ಬದಲಾಯಿಸುವುದರಿಂದ ನಿಮ್ಮ ಮೇಲಿನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುವಂತೆ ಆಗುತ್ತದೆ. ಮೊದಲಿನ ಉತ್ಸಾಹದಲ್ಲಿ ಎಲ್ಲರ ಜೊತೆಗೂ ಬೆರೆಯುವುದು, ಮಾತನಾಡುವುದು ನಿಮಗೆ ಕಷ್ಟವಾಗಲಿದೆ. ನಿಮಗೆ ಯಾರ ಬಗ್ಗೆಯಾದರೂ ಸಿಟ್ಟು ಇದ್ದರೆ ಅದನ್ನು ಬಹಿರಂಗವಾಗಿ ವ್ಯಕ್ತಪಡಿಸುವುದಕ್ಕೆ ಹೋಗಬೇಡಿ. ಭವಿಷ್ಯದಲ್ಲಿ ನಿಮಗೆ ಆಗಬಹುದಾದ ಅನುಕೂಲವೊಂದನ್ನು ಕೈಯಾರೆ ಹಾಳು ಮಾಡಿಕೊಂಡಂತೆ ಆಗಲಿದೆ. ನಿಮಗೆ ಬಹಳ ಹತ್ತಿರವಾದವರು ತಮ್ಮ ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿ, ತರುವುದಕ್ಕೆ ನಿಮ್ಮನ್ನೂ ಕರೆಯಬಹುದು. ಹಾಗೊಮ್ಮೆ ಹೋದಲ್ಲಿ ಅಭಿಪ್ರಾಯವನ್ನು ತಿಳಿಸಿ, ಆದರೆ ಅದರಂತೆಯೇ ನಡೆದುಕೊಳ್ಳಬೇಕು ಎಂದು ಒತ್ತಡ ಹಾಕುವುದಕ್ಕೆ ಹೋಗಬೇಡಿ. ಕಣ್ಣಿಗೆ ಸಂಬಂಧಿಸಿದ ಅಲರ್ಜಿಗಳು ಏನಾದರೂ ಕಾಡಿದಲ್ಲಿ ಕೂಡಲೇ ವೈದ್ಯರ ಬಳಿ ಚಿಕಿತ್ಸೆಯನ್ನು ಪಡೆದುಕೊಳ್ಳಿ.
ಲೇಖನ- ಎನ್.ಕೆ.ಸ್ವಾತಿ