ನೆರೆನಾಡ ನುಡಿಯೊಳಗಾಡಿ |NereNaada Nudiyolagaadi : “ನಾಳೆೆ ಬೀಗರ ಮನೆಗೆ ಹೋಗಿ ಅವರನ್ನು ‘ಖಂಡಿತ ಶುಕ್ರವಾರ ಬನ್ನಿ’ ಎಂದು ಕರೆದುಬರಬೇಕು. ಇನ್ನು ಸರಿಯಾಗಿ ನಾಲ್ಕು ದಿವಸವಷ್ಟೇ ಇದೆ. ಮಹಡಿಯ ಕೊಠಡಿಯಲ್ಲಿರೋದನ್ನು ಹೊರತೆಗೆದು ಕಂದಪ್ಪನನ್ನು ಕರೆಸಿ ಸುಣ್ಣ ಬಳಿಯಲು ಹೇಳಬೇಕು. ಪೆರುಮಾಳ್, ಅಮ್ಮನನ್ನು ಕೇಳಿ ದಿನಸಿ ಪದಾರ್ಥಗಳೆಲ್ಲ ಲಿಸ್ಟ್ ಹಾಕಿ ತೆಗೆದುಕೊ. ಹೊತ್ತಿಗೊಂದು ಸ್ವೀಟ್, ಖಾರ ಅಡುಗೆ ಚೆನ್ನಾಗಿರಬೇಕು ಆಚಾರಿಯ ಬಳಿ ಹೇಳಿ ಹೊಸದಾಗಿ ಒಡವೆ ಮಾಡಲು ಸಮಯವಿಲ್ಲ. ಆದುದರಿಂದ ನಾಳೆ ಬೀಗರನ್ನು ಕರೆಯಲು ಹೋಗುವಾಗ, ಸಿಟಿಗೆ ಹೋಗಿ ಅಳಿಯನಿಗೆ ಒಂದು ಚೆನ್ನಾದ ಸರ, ಸೆಲ್ವಿಗೆ ಮುತ್ತಿನ ಸರ ಕೊಂಡುಕೊಳ್ಳೋಣವೇ? ಏನ್ ಹೇಳ್ತೀಯಾ ನವನೀದಂ?’’ ವೇದಗಿರಿ ಮತ್ತು ನವನೀದಂ ಮತ್ತುಳಿದವರು ಅಪಾರ ಸಂತೋಷದಿಂದ ಸಡಗರದಲ್ಲಿದ್ದ ಹೊತ್ತಲ್ಲಿ ಸಮಾರಂಭದ ಕಥಾನಾಯಕಿಯಾದ ಸೆಲ್ವಿ ಮಾತ್ರ ತನ್ನ ರೂಢಿಗತವಾದ ಸಮಚಿತ್ತತೆಯನ್ನು ಕೈಬಿಡದೆ ನಡೆಯುತ್ತಿರುವುದಕ್ಕೂ ತನಗೂ ಏನೂ ಸಂಬಂಧವೇ ಇಲ್ಲದಂತೆ ದೂರ ಸರಿದು ಇದ್ದಳು.
ಕಥೆ : ಒಂದು ಮಾತು | ತಮಿಳು ಮೂಲ : ಶಿವಶಂಕರಿ ಚಂದ್ರಶೇಖರನ್ | ಕನ್ನಡಕ್ಕೆ : ಡಾ. ಮಲರ್ ವಿಳಿ ಕೆ.
*
ಭಾಗ 4
‘ಸೆಲ್ವಿ ನಾಚಿಕೊಳ್ತಿದಾಳೆ; ಗಂಡನನ್ನು ಮತ್ತೆ ಭೇಟಿಯಾಗುವ ಉತ್ಸಾಹದಲ್ಲಿ ಇದ್ದಾಳೆ’ ಎಂದೆಲ್ಲಾ ಉಳಿದವರು ಹೇಳಿದುದಕ್ಕೆ ಪ್ರತಿಕ್ರಿಯಿಸದೆ, ಮಹಡಿಗೆ ಹೋಗಿ ತನ್ನ ಕೋಣೆಯ ಕಿಟಕಿಯ ಬಳಿ ಕುಳಿತು ತೋಟವನ್ನು ಶೂನ್ಯ ದೃಷ್ಟಿಯಿಂದ ದಿಟ್ಟಿಸುತ್ತಿರುವಾಗ ಮೂರು ವರ್ಷಗಳ ಹಿಂದೆ, ಆರು ತಿಂಗಳಗಳ ಕಾಲ ಸುಂದರನೊಡನೆ ನಡೆಸಿದ ದಾಂಪತ್ಯ ಮನದೊಳಗೆ ಹೊಗೆಯೇಳುತ್ತಿತ್ತು. ಮದುವೆಯಾಗಿ ನಾಲ್ಕೇ ದಿನಗಳಾದ ಸಮಯ ಅದು.
‘ಊಟಕ್ಕೆ ಬರ‍್ತೀರಾ?’ – ಎಂದು ಕೇಳಲು ಮಹಡಿಗೆ ಬಂದ ಸೆಲ್ವಿ ದಿಗ್ಭ್ರಮಿತಳಾದಳು.
ಸುಂದರನ ಪಕ್ಕದಲ್ಲಿ ತೆಳು ಅರಿಶಿನ ಬಣ್ಣದ ದ್ರವದ ಬಾಟಲು, ಕೈಯಲ್ಲಿ ಬಟ್ಟಲು. ತವರಿನ ಮನೆಯಲ್ಲಿ ಯಾರೊಬ್ಬರಿಗೂ ಕುಡಿಯುವ ಅಭ್ಯಾಸ ಇಲ್ಲದಿದ್ದರೂ, ಸಿನಿಮಾಗಳಲ್ಲಿ ನೋಡಿದ್ದು, ಪತ್ರಿಕೆಗಳಲ್ಲಿ ಓದಿದ್ದುದರ ಕಾರಣ ಅದರ ಬಗ್ಗೆ ಹೆಚ್ಚಿಗೆ ತಿಳಿದುಕೊಂಡಿದ್ದರಿದ ಸಣ್ಣಗೆ ಎದೆಬಡಿತ.
“ಏನ್ರೀ ಇದು ?”
“ಯಾವುದು ?”
“ಕೈಯಲ್ಲಿ ಏನೋ ಇಟ್ಕೊಂಡಿದ್ದೀರಲ್ಲಾ ?”
“ಓ! ಇದಾ? ಊಟಕ್ಕೆ ಮುಂಚಿತವಾಗಿ ಒಂದು ಸಲ ಹಾಕ್ಕೊಂಡ್ರೆ’’ ಜಂ ಅಂತಾ ಇರುತ್ತೆ. ದೇಹಕ್ಕೆ ಒಳ್ಳೆಯದು, ಟಾನಿಕ್ ರೀತಿ ಸೇವಿಸಬೇಕೂಂತಾ ಡಾಕ್ಟ್ರೇ ಹೇಳಿದ್ದಾರೆ. ನೀನೂ ಸಹ ಸ್ವಲ್ಪ ಸೇವಿಸು.’’
ಅನಂತರ ಒಂದು ವಾರ ಮುಗಿಯುವಷ್ಟರಲ್ಲಿ ನಾಲ್ವರು ಗೆಳೆಯರನ್ನು ಕರೆತಂದು ಕುಡಿಯಲು ಮುಂದಾದಾಗ ನಿಜವಾಗಿಯೂ ಸೆಲ್ವಿ ತುಂಬಾ ಗಾಬರಿಗೊಳಗಾದಳು.
“ಬೇಡ್ರಿ… ಕೆಳಗೆ ಅತ್ತೆ, ಮಾವ ಇದ್ದಾರೆ. ಎಂಥ ಅಭ್ಯಾಸವಿದು? ದಯವಿಟ್ಟು ಬಿಟ್ಟುಬಿಡ್ರಿ.’’
ಸುಂದರ ಪ್ರತ್ಯುತ್ತರ ನೀಡದೆ ನಗುತ್ತಾ ಅಲಮಾರಿಯಿಂದ ಹೊಸ ಬಾಟಲನ್ನು ತೆಗೆದುಕೊಂಡು ಸ್ನೇಹಿತರಿದ್ದ ಕೋಣೆಗೆ ಹೋದನು. ಮದುವೆ ಮಾಡಿದರೆ ಸರಿ ಹೋಗ್ತಾನೇಂತ ನಂಬಿದೆವು. ಹತ್ತು ದಿನಗಳಲ್ಲಿ ಹಳೆಯ ಕುಡಿತದ ಚಟ ಅಂಟಿಕೊಂಡಿದೆ. ನೀನಾದರೂ ಒಳ್ಳೆಯ ಮಾತಿನಿಂದ ಹೇಳಿ ನೋಡಮ್ಮಾ.’’
ಕಂಗಳಲಿ ನೀರು ತುಂಬಿ ಸುಂದರನ ಹೆತ್ತವರು ಬೇಡಿಕೊಂಡಾಗ, ಇದು ಹೊಸ ಅಭ್ಯಾಸ ಅಲ್ಲ. ಬಹಳ ದಿನಗಳಿಂದ ಇದೆ ಎಂಬುದು ಅರ್ಥವಾದುದರಿಂದ ಏನೂ ತೋಚದೆ ಅಸಹಾಯಕಳಾಗಿ ಅತ್ತೆಯೊಡನೆ ಸೇರಿ ಕಣ್ಣೀರು ಹರಿಸಿದಳು.
ಒಂದು ತಿಂಗಳೊಳಗೆ ಗಂಡನ ಗುಣ ಖಚಿತವಾಗಿ ತಿಳಿದುಬಿಟ್ಟಿತು.
ತಾನು, ತನ್ನ ಸುಖ ಇವೇ ಮುಖ್ಯ. ಉಳಿದಂತೆ ಹೆತ್ತವರು, ತಾಳಿ ಕಟ್ಟಿಸಿಕೊಂಡವಳು ಎಷ್ಟು ತೊಂದರೆ ಅನುಭವಿಸಿದರೂ ಚಿಂತೆ ಇಲ್ಲ.
ಭಾಗ 2 : Literature: ನೆರೆನಾಡ ನುಡಿಯೊಳಗಾಡಿ; ಮಗಳ ನೆಮ್ಮದಿಗಿಂತ ಆತ್ಮಗೌರವ ಮುಖ್ಯವೇ? ತಮಿಳಿನ ‘ಒಂದು ಮಾತು’ ಕಥೆ
ಊಟಕ್ಕೆ ಮನೆಗೆ ಬರದೆ ಸರಿಯಾಗಿ ಕುಡಿದು ಮಜಾ ಮಾಡುತ್ತಿದ್ದ. ಕುಡಿದದ್ದು ತಲೆಗೇರಿದ್ದರೆ ವಿನಾಕಾರಣ ಕಿರುಚಾಡಿ ಜಗಳ ಮಾಡಿ ಗೆಳೆಯರೊಡನೆ ಎಲ್ಲಾದರೂ ಹೋಗಿಬಿಡುತ್ತಿದ್ದ. ಆದರೆ, ಅಮಾವಾಸ್ಯೆಗೋ ಹುಣ್ಣಿಮೆಗೋ ಕುಡಿದ ಅಮಲು ಕಡಿಮೆ ಇರುವ ದಿವಸಗಳಲ್ಲಿನ ತೊಂದರೆ ಬೇರೆ ರೀತಿಯದೇ ಆಗಿರುತ್ತಿತ್ತು.
“ಏಯ್, ಇಲ್ಲಿ ಬಾ…’’ ಎನ್ನುವನು. ಹತ್ತಿರದಲ್ಲಿ ಬಂದು ನಿಂತವಳನ್ನು ದಿಟ್ಟಿಸಿ ನೋಡಿ ಮುಖ ಸಿಂಡರಿಸಿಕೊಳ್ಳುತ್ತಿದ್ದನು.
“ಹೆಂಗೆ ಸೀರೆ ಉಟ್ಟುಕೊಂಡಿದ್ದೀಯಾ ನೋಡು, ಬೆಡ್‌ಶೀಟ್ ಥರ. ಸ್ವಲ್ಪ ಕೂಡ ನಯ ನಾಜೂಕು ತಿಳಿಯೋದಿಲ್ಲವಲ್ಲ. ಬಿಚ್ಚು ಮೊದಲು, ಈ ಅಸಹ್ಯವನ್ನು ಬಿಚ್ಚಿ ಮದರಾಸಿಂದ ಕೊಂಡುಕೊಂಡು ಬಂದ ಸೀರೆ, ಉಡು ಬ್ಲೌಸ್ ಹಾಕ್ಕೋ ..ಅ..ಮ್..ಮು..’’
ಒಂದೆರಡು ಬಾರಿ ಅವನನ್ನು ತೃಪ್ತಿಪಡಿಸಲಿಕ್ಕಾಗಿ ಅವುಗಳನ್ನು ಉಟ್ಟದ್ದೂ ಉಂಟು. ತೋಳಿಲ್ಲದ ಸ್ಲೀವ್‌ಲೆಸ್ ರವಿಕೆ. ಕನ್ನಡಿಯನ್ನು ಉಟ್ಟಂತೆ ದೇಹವನ್ನು ಪಾರದರ್ಶಕವಾಗಿ ಕಾಣಿಸುವಂತಹ ತೆಳು ಶಿಫಾನ್ ಸೀರೆ. ಇಷ್ಟಕ್ಕೆ ಬಿಡಲೊಲ್ಲನು.
“ಇಗೋ ಈ ಲಿಪ್‌ಸ್ಟಿಕ್ ಹಚ್ಚು. ಇಲ್ಬಾ… ಹೀಗೆ ಸೆರಗು ಜಾರುವ ಹಾಗೆ ಬಿಡು. ತಿರುಗು.. ನಡೆ.. ಬಾಗು.. ಆ..ಆ.. ಹೀಗೆ ನೋಡು’’
ಪಾರದರ್ಶಕ ಸೀರೆಯ ಮೂಲಕ ಸೊಂಟ, ನಡು, ಎದೆ, ಅತ್ಯಾಕರ್ಷಕವಾಗಿ ಕಾಣಲು, ಕನ್ನಡಿಯಲ್ಲಿ ತನ್ನ ಬಿಂಬವನ್ನು ನೋಡಲು ಸಹ ಸೆಲ್ವಿ ಸಂಕೋಚಪಡುತ್ತಿದ್ದಳು.
ಈ ಶೃಂಗಾರಗಳೊಡನೆ ಹೊರಗೆ ಬರಲಾರೆ ಎಂದು ಅವಳು ಹೇಳಿದರೆ ಅವನಿಗೆ ಕೋಪೋದ್ರಿಕ್ತನಾಗುತ್ತಿದ್ದ.
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಭಾಗ 3 : Literature: ನೆರೆನಾಡ ನುಡಿಯೊಳಗಾಡಿ; ಬೇತಾಳ ಮತ್ತೆ ಮರ ಹತ್ತಿ ಕುಳಿತುಬಿಟ್ಟಿತೋ, ಮಾರಿಯಮ್ಮ ಕಣ್ಣು ತೆರೆದಳೋ