ನೆರೆನಾಡ ನುಡಿಯೊಳಗಾಡಿ |NereNaada Nudiyolagaadi : ಒಂದೇ ಒಂದು ಮುತ್ತಿನ ಹಾಗೆ ಎಂದು ಹೆತ್ತು ಮುದ್ದು ಮುದ್ದಾಗಿ ಸಾಕಿದ ಮಗಳು ಬಾಳುಗೆಟ್ಟವಳೆಂಬ ಬಿರುದನ್ನು ಹೊತ್ತುಕೊಂಡು, ಓಡಾಡಬೇಕಲ್ಲವೇ? ಭಾವೋದ್ವೇಗಕ್ಕೆ ಒಳಗಾಗಿ ಕಂಗಳಿಂದ ನೀರು ಚಿಮ್ಮಿತು. ಅಂಗೈಯಲ್ಲಿ ಬೆವರು. “ಆದರೆ ಒಂದು ರೀ..” ರಂಗನಾಥನ್ ಯಾಕೋ, ಪೀಠಿಕೆ ಹಾಕುವಂತೆ ಕಾಣಲು ವೇದಗಿರಿ ನೆಟ್ಟಗೆ ನಿಂತರು. “ತಾನೇ ಹೀಗೆ ಬಲವಂತವಾಗಿ ಹೇಳಿ ಕಳುಹಿಸಿದ ಸಂಗತಿ ಯಾರಿಗೂ ತಿಳಿಯಬಾರದೆಂದು ಸುಂದರ ಅಂದುಕೊಂಡಿದ್ದಾನೆ, ಆದುದರಿಂದ…’ “ಆದುದರಿಂದ ಅಂದ್ರೆ?’’, “ನಾಳೆ ನೀವು ನಿಮ್ಮ ಮನೆಯ ಹಿರಿಯರು ಒಬ್ರನ್ನೊ ಇಬ್ರನ್ನೊ ಕರೆದುಕೊಂಡು ಪಟ್ಟಣಕ್ಕೆ ಬಂದು, ನಡೀಬಾರದು ನಡೆದುಹೋಯಿತು ಇನ್ಮೇಲಾದರೂ ಸೆಲ್ವಿಯನ್ನು ಕರೆದುಕೊಂಡು ಒಟ್ಟಿಗೆ ಬಾಳಿ ಇಬ್ಬರಿಗೂ ಚಿಕ್ಕ ವಯಸ್ಸು. ಹೀಗೇ ಇರೋದು ನ್ಯಾಯವೇ?’’ ಅಂತ ಕೇಳಿದ್ರೆ, ಒಂದೊಳ್ಳೆ ದಿವಸ ನೋಡಿ ಸುಂದರ ನಿಮ್ಮ ಮನೆಗೆ ಬಂದುಬಿಡ್ತಾನೆ. ಅರ್ಥವಾಗ್ತಿದಿಯಾ?’’
ಕಥೆ : ಒಂದು ಮಾತು | ತಮಿಳು ಮೂಲ : ಶಿವಶಂಕರಿ ಚಂದ್ರಶೇಖರನ್ | ಕನ್ನಡಕ್ಕೆ : ಡಾ. ಮಲರ್ ವಿಳಿ ಕೆ.
*
ಭಾಗ 2
ಚೆನ್ನಾಗಿಯೇ ಅರ್ಥವಾಯ್ತು.
ಕಾಲನ್ನು ಹಿಡಿದು ಬೇಡಿದುದರ ಕಡೆಗೆ ಲಕ್ಷ್ಯಗೊಡದೆ ಅಂದು ಆ ನಾಟ್ಯಗಾರ್ತಿಯೇ ದೊಡ್ಡವಳು ಅಂತ ಹೋದ್ರು. ಇಂದು ತಾವಾಗಿಯೇ ಮರಳಿ ಬರೋದು ಆತ್ಮಗೌರವಕ್ಕೆ ಕುಂದು ಎಂದೆಣಿಸಿ, ಮಾವನವರನ್ನು ಬಂದು ಕರೆಯಲು ಹೇಳುತ್ತಿದ್ದಾರೆ ಅಲ್ಲವೇ?
ಅಳಿಯ, ಸಂಬಂಧವನ್ನು ಮನುಷ್ಯರನ್ನು ಹೇಗೆ ಅಲ್ಪವಾಗಿ ಅಳಿಯ ತಿಳ್ಕೊಂಡಿದ್ದಾನೆ! ಕೆರಳಿ ಮೂಗಿನ ಹೊಳ್ಳೆಗಳು ಸೆಟೆದುಕೊಂಡವು.
ಆದರೆ, ಈ ಸ್ಥಿತಿ ಕೆಲವು ಕ್ಷಣಗಳಷ್ಟೆ. ಮಗಳ ನೆಮ್ಮದಿಯಾದ ಜೀವನಕ್ಕಿಂತ ಆತ್ಮಗೌರವ ಮುಖ್ಯವೇ?- ಎಂಬ ಪ್ರಶ್ನೆ ಬಂದಾಗ, ಕೋಪ ಶಮನಗೊಂಡು ವೇದಗಿರಿ ತಕ್ಷಣ ತನ್ನನ್ನು ಸಮಾಧಾನಪಡಿಸಿಕೊಂಡರು.
ಇದರಲ್ಲಿ ತಪ್ಪೇನಿದೆ? ಏನೇ ಆದರೂ ಸುಂದರ ಗಂಡಸು. ಅದೂ ಅಳಿಯ. ತಾನಾಗಿಯೇ ಬರುವುದಕ್ಕಿಂತ ಮಾವನವರು ಹೋಗಿ ಕರೆಯುವುದೇ ಮರ್ಯಾದೆ. ಲೋಕಾರೂಢಿ ಕೂಡ ಎಂದು ಭಾವಿಸುತ್ತಿದ್ದಾನೆ ಇದರಲ್ಲಿ ತಪ್ಪೇನಿದೆ?
“ಏನ್ರೀ?’’
“ಏನಿಲ್ಲ ತಮ್ಮ, ನಾನು ಅಲ್ಲಿಗೆ ಬಂದು ಅಳಿಯನನ್ನು ಕರೆಯಬೇಕೆಂದು ಹೇಳ್ತೀರಿ ತಾನೇ? ಇದೇನು ದೊಡ್ಡ ವಿಷಯ! ನನ್ನ ಸೆಲ್ವಿ ಇನ್ನಾದರೂ ಕಂಗಳಲಿ ನೀರು ಹರಿಸದಿರಲಿ ಅದೇ ಮುಖ್ಯ. ನಾಳೆಯೇ ಬರ್ತೇನೆ.’’
“ಹಾಗಾದ್ರೆ ನಾನು ಹೊರಡಲೇ?’’
“ರಾಮನಿಗೆ ನವ ಚೈತನ್ಯವನ್ನು ನೀಡಿದ ಹನುಮನಂತೆ, ನೊಂದಿದ್ದ ನಮ್ಮ ಮನಗಳಿಗೆ ನವ ಚೈತನ್ಯ ಕೊಟ್ಟಿರುವಿರಿ. ಬಂದಕೂಡಲೇ ಹೊರಟರೆ ಹೇಗೆ? ಊಟ ಮಾಡ್ಕೊಂಡು ಹೋಗಿ ತಮ್ಮ’’
“ಇಲ್ರಿ… ಅದಕ್ಕೆಲ್ಲಾ ಸಮಯ ಇಲ್ಲ. ಕತ್ತಲಾಗಲಿಕ್ಕೆ ಮುಂಚೆ ಬಂದ್ಬಿಡ್ತೀನಿ. ಸುಂದರನ ಬಳಿ ಹೇಳಿಬಿಟ್ಟು ಬಂದಿದ್ದೀನಿ. ಅವನು ಕಾಯ್ತಾ ಇರುತ್ತಾನೆ.’’
“ಅಳಿಯ ಕಾಯ್ತಾ ಇರ‍್ತಾರಂದ್ರೆ, ನೀವು ಹೊರಡಿ. ಅವ್ರಿಗೆ ಕೋಪ ಬರೋಹಾಗೆ ಏನನ್ನೂ ಮಾಡ್ಬೇಡಿ! ಲೇ ಯಾರೋ ಅಲ್ಲಿ? ಓಡಿಹೋಗಿ ತೋಟದಿಂದ ಒಂದು ಕಟ್ಟು ಕಬ್ಬು ಕತ್ತರಿಸಿ ತೆಗೆದುಕೊಂಡು ಬಂದು ಕಾರಲ್ಲಿಟ್ಟು ಕಟ್ಟು, ನೆಲಗಡಲೆ ಅರ್ಧ ಮೂಟೆ, ತೋಟದ ಬಾಳೆ ಒಂದು ತಾರ್, ಪರಂಗಿ, ಕುಂಬಳ, 20 ತೆಂಗಿನಕಾಯಿ ಎಲ್ಲವನ್ನೂ ಡಿಕ್ಕಿಯಲ್ಲಿ ತೆಗೆದುಕೊಂಡು ಬಂದು ಇಡು. ನಮ್ಮ ಮನೆಗೆ ಬಂದ್ಬಿಟ್ಟು ಹೋಗೋ ವ್ಯಕ್ತಿಯನ್ನು ಬರಿಗೈಯಲ್ಲಿ ಕಳುಹಿಸೋದೇ! ಒಂದು ನಿಮಿಷ ತಾಳಿ ತಮ್ಮಾ..!
ಇದನ್ನೂ ಓದಿ : Yashwant Chittal: ವಿಲಂಬಿತ ಲಯ ತಂತ್ರಮಾಂತ್ರಿಕ ಯಶವಂತರ ‘ಚಿತ್ತಾಲತನ’
ಒಳಗೆ ಹೋದ ವೇದಗಿರಿ ಐದು ನಿಮಿಷಗಳಲ್ಲಿ ಒಂದು ತಟ್ಟೆಯಲ್ಲಿ ವೀಳೆದೆಲೆ ಅಡಿಕೆ, ಝರಿ ಅಂಚಿನ ಪಂಚೆ, ಶಲ್ಯ, ಇತ್ಯಾದಿಗಳೊಂದಿಗೆ ಒಂದು ಸವರನ್‌ನನ್ನು ಇಟ್ಟು ಭವ್ಯವಾಗಿ ರಂಗನಾಥನ್ನ ಮುಂದೆ ಹಿಡಿದರು.
“ಯಾತಕ್ಕೆ ?”
“ಇರಲಿ ಬರುತ್ತೆ ಬರುತ್ತೆ ಅಂತ ಕಾಯುತ್ತಿದ್ದ ಸುದ್ದಿಯನ್ನು ತಿಳಿಸಲು ಬಂದುದಕ್ಕೆ ಸಣ್ಣ ಗೌರವ ನೀಡದೆ ಇದ್ರೆ ಹೇಗೆ? ಈಗ ಇದನ್ನು ಇಟ್ಕೊಳ್ಳಿ.. ಅಳಿಯ ಇಲ್ಲಿಗೆ ಬರುವಾಗ ಮಜಾ ಮಾಡೋಣಾ’’
ಕೈ ಹಾಗೂ ಕಾರಿನಲ್ಲಿ ಹಿಡಿಸದಷ್ಟು ಸಾಮಾನುಗಳೊಂದಿಗೆ ರಂಗನಾಥನು ಹೊರಟು ಹೋದ ಮೇಲೆ ನವನೀತಾ.. ಅಮ್ಮಾ.. ಮಗಳೇ.. ನವನೀತಾ..” ಎಂದು ಏರುದನಿಯಿಂದ ಕೂಗುತ್ತಾ, ದಾಪುಗಾಲಿಟ್ಟು ಒಳಗೆ ವೇದಗಿರಿ ಹೋಗುವಾಗ ಆ ಕ್ಷಣದವರೆಗೂ ಅಡಗಿಸಿಟ್ಟಿದ್ದ ಕಣ್ಣೀರು ತುಂಬಿ ಮೆಲ್ಲನೆ ಕೆನ್ನೆಯ ಮೇಲೆ ಹರಿಯಿತು.ವೇದಗಿರಿ ಶ್ರೀಮಂತ ಪರಂಪರೆಯಿಂದ ಬಂದವರು. ಕಣ್ಣಿಗೆಟುಕುವವರೆಗೂ ಹೊಲ, ಗದ್ದೆ, ಕೊಟ್ಟಿಗೆಯ ತುಂಬ ಹಸುಗಳು ಪೆಟ್ಟಿಗೆ ತುಂಬ ಹಣ-ಒಡವೆ- ಲಕ್ಷ್ಮೀ ಕಟಾಕ್ಷವನ್ನು ಇಂದಿನವರೆಗೂ ಪೂರ್ತಿ ಅನುಭವಿಸುವವರು ನಿಜ.
ನನಗೇನಪ್ಪಾ ಕೊರತೆ ? – ಎಂದು ದರ್ಪದಿಂದಿದ್ದ ವೇದಗಿರಿಯ ಕುಟುಂಬದ ಮೇಲೆ ಆಕಾಶವೇ ಕಳಚಿಬಿದ್ದಂತೆ ಮೂರು ವರ್ಷಗಳ ಹಿಂದೆ ಆ ಘಟನೆ ನಡೆದುದನ್ನು ನೆನಪಿಸಿಕೊಂಡು ನಡುಗಿಹೋದರು.
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಭಾಗ 1 : Literature: ನೆರೆನಾಡ ನುಡಿಯೊಳಗಾಡಿ; ತಮಿಳಿನ ಖ್ಯಾತ ಲೇಖಕಿ ಶಿವಶಂಕರಿ ಚಂದ್ರಶೇಖರನ್ ಅವರ ಕಥೆ ‘ಒಂದು ಮಾತು’