ನೆರೆನಾಡ ನುಡಿಯೊಳಗಾಡಿ |NereNaada Nudiyolagaadi : ವೇದಗಿರಿ, ನವನೀದಂ ದಂಪತಿಗಳಿಗೆ ಹುಟ್ಟಿದ್ದು ನಾಲ್ಕೈದು ಮಕ್ಕಳಾದರೂ, ಕೊನೆಯವರೆಗೂ ಉಳಿದುದು ಸೆಲ್ವಿ ಒಬ್ಬಳೇ. ಅತಿ ಮುದ್ದು ಅತಿ ಪ್ರೀತಿ. ಅಷ್ಟು ಆಸ್ತಿಗೂ ಏಕವಾರಸುದಾರಿಣಿ ಮಾತ್ರವಲ್ಲ, ಸ್ವಾಭಾವಿಕವಾಗಿಯೇ ಲಕ್ಷಣವಾಗಿ, ಸಭ್ಯತೆ, ವಿನಯಗಳಿಂದ ಕೂಡಿದ ಹೆಣ್ಣುಮಗಳು. ಹಾಗಾಗಿ ಮನೆಗೆ ಮಾತ್ರವಲ್ಲ ಊರಿಗೇ ಈಕೆ ಗೌರವಯುತಳಾಗಿದ್ದಳು. ಓದಿನಲ್ಲೂ ಮಗಳಿಗೆ ಆಸಕ್ತಿ ಇರುವುದನ್ನು ಅರ್ಥ ಮಾಡಿಕೊಂಡ ತಂದೆತಾಯಿ, ಮೈನೆರೆದ ಕೂಡಲೇ ಕುಲಪದ್ಧತಿಯಂತೆ ಮನೆಯಲ್ಲಿ ಇರಿಸಿಕೊಳ್ಳದೆ, ಧೈರ್ಯವಾಗಿ ಶಾಲೆಯ ಕೊನೆಯ ಘಟ್ಟದತನಕ ಕಳಿಸಿದರು. ನಂತರ ಕಣ್ಣಿಗೆ ಹರಳೆಣ್ಣೆ ಹಚ್ಚಿಕೊಂಡು ಎರಡು ಮೂರು ವರ್ಷಗಳಿಂದ ಹುಡುಕಿ ಹುಡುಕಿ ವೇದಗಿರಿ ಕಂಡುಹಿಡಿದ ಅಳಿಯನೇ ಸುಂದರ. ಇವತ್ತಿಗೂ ಸೆಲ್ವಿಯ ಮದುವೆಯ ಬಗ್ಗೆ ಊರ ಜನರು ಮಾತನಾಡಲು ತೊಡಗಿದರೆ, ಖಂಡಿತ ಅರ್ಧ ಗಂಟೆಯಾದರೂ ಬೇಕು. ಹಾಗಿತ್ತು ಅದ್ದೂರಿ ಮದುವೆ!
ಕಥೆ : ಒಂದು ಮಾತು | ತಮಿಳು ಮೂಲ : ಶಿವಶಂಕರಿ ಚಂದ್ರಶೇಖರನ್ | ಕನ್ನಡಕ್ಕೆ : ಡಾ. ಮಲರ್ ವಿಳಿ ಕೆ.
*
ಭಾಗ 3
ರಸ್ತೆಗೆ ಅಡ್ಡವಾಗಿ ಚಪ್ಪರ, ಜೋಡಿ ನಾದಸ್ವರ ಬ್ಯಾಂಡ್, ಸಂಜೆ ಸುಗಮ ಸಂಗೀತ ತಿಳಿದವರು ಅಷ್ಟು ಜನರಿಗೂ ಪಂಚೆ, ಸೀರೆ… ಊರಲ್ಲಿ ಯಾರ ಮನೆಯಲ್ಲೂ ಒಲೆ ಉರಿಯಲು ಬಿಡದಂತೆ ಗಂಟಲವರೆಗೂ ನಾಲ್ಕು ದಿನವೂ ಆತಿಥ್ಯ – ಉಪಚಾರ.
ಸುಂದರ ಹಣ, ಸೌಂದರ್ಯ ಅಂತಸ್ತು ಹೀಗೆ ಎಲ್ಲ ಬಗೆಯಿಂದಲೂ ಸೆಲ್ವಿಗೆ ತಕ್ಕವನಾಗಿದ್ದನು. ಆದರೆ ಗುಣ ಮಾತ್ರ ಸ್ವಲ್ಪ ಕೊರತೆಯಾಗಿತ್ತು. ವಿವಾಹಕ್ಕೆ ಮುಂಚೆ ಅಲ್ಲೂ ಇಲ್ಲೂ ವಿಚಾರಿಸಿದಾಗ ಸ್ಫುಟವಾದ ಸಂಗತಿಗಳು ಕಿವಿಗೆ ಬೀಳದೆ ಸ್ವಭಾವ, ನಡತೆ ಅಷ್ಟು ಸರಿಯಿಲ್ಲ ಎಂಬ ಸುದ್ದಿಯಂತೂ ವೇದಗಿರಿಗೆ ಕಿಂಚಿತ್ತು ತಿಳಿದುಬಂದಿತ್ತು.
ದೊಡ್ಡ ಮನೆಯ ಮಗ, ವಿದ್ಯಾವಂತ, ನಾಗರಿಕತೆ ತಿಳಿದವನು, ಹಣ, ಕಾಸಿಗೆ ಕೊರತೆಯಿಲ್ಲ. ಆದರೂ ?
ಬಿಸಿರಕ್ತ, ಅದಕ್ಕೇ ಲವಲವಿಕೆಯಿಂದ ಇದ್ದಾನೆ. ಮದುವೆ ಎಂಬ ಗಂಟು ಹಾಕಿದರೆ, ಸರಿಯಾಗಿಬಿಡುತ್ತಾನೆ. ಏನೇನನ್ನೋ ಯೋಚಿಸಿ ಈ ಸಂಬಂಧವನ್ನು ಬಿಟ್ಟುಬಿಡುವುದು ಮೂಢತನ – ಎಂದು ಹತ್ತಾರು ಮಂದಿ ಹೇಳಲು, ಅದೇ ಸರಿ ಎಂದು ವೇದಗಿರಿಯೂ ಸಮ್ಮತಿಸಿ, ವಿಜೃಂಭಣೆಯಿಂದ ನಡೆಸಿದರು.
ಮೊದಲ ಎರಡು ತಿಂಗಳವರೆಗೂ ಯಾವ ತೊಂದರೆಯೂ ಇರಲಿಲ್ಲ. ಆ ನಂತರ ತಕರಾರುಗಳು ತೊಡಗಿ ಮೆಲ್ಲಮೆಲ್ಲನೆ ಬೆಳೆದು ವಿಶ್ವರೂಪ ಪಡೆಯುತ್ತಾ ನಂತರ ಕೆಲವು ತಿಂಗಳು ಕಳೆಯುವುದರೊಳಗೆ, ಅಂದರೆ ಕೊರಳಲ್ಲಿ ತಾಳಿ ಕಟ್ಟಿ ಸರಿಯಾಗಿ ಒಂದು ವರ್ಷ ಆಗುವುದರೊಳಗೆ ನಿನ್ನೊಡನೆ ಬಾಳಲು ನನಗೆ ಇಷ್ಟವಿಲ್ಲ ಎಂದು ಮುಚ್ಚುಮರೆಯಿಲ್ಲದೆ ಸುಂದರ ಹೇಳಲು, ಬಾಳುಗೆಟ್ಟವಳು ಎಂಬ ಬಿರುದಿನೊಡನೆ ತಂದೆಯ ಮನೆಗೆ ಬಂದಂತಹ ಸೆಲ್ವಿಗೆ ಇಂದಷ್ಟೇ ಬೆಳಕು ಚೆಲ್ಲಿದೆ.
ವೇದಗಿರಿ ಉಯ್ಯಾಲೆಯಲ್ಲಿ ಕುಳಿತಿದ್ದರು.
ಎದುರಿಗೆ ನವನೀದಂ,
ಒಳಗಿನ ಕೋಣೆಯಲ್ಲಿ ಸೆಲ್ವಿ.
“ಸ್ವಲ್ಪ ದಿನಗಳಿಂದ ನಾನು ಕೇಳಿದಂತಹ ಸಂಗತಿಯೇ. ಆದರೆ ಇಷ್ಟು ಚಿಕ್ಕ ಸಂಗತಿ ಮಾಗುವುದೆಂದು ನಿರೀಕ್ಷಿಸಿರಲಿಲ್ಲ. ಆ ನಾಟ್ಯಗಾರ್ತಿ ಸಿಂಗಪೂರದವನೊಬ್ಬನನ್ನು ಸೇರಿಸಿಕೊಂಡು ಅಳಿಯನನ್ನು ಅಲಕ್ಷ್ಯಪಡಿಸುತ್ತಿದ್ದಾರೆಂದು ಆರ‍್ಮುಗಂ ಹೇಳಿದರು.
‘‘ಲೋ, ಚಿಂತೆ ಮಾಡಬೇಡ. ಆದಷ್ಟು ಬೇಗ ನಿನ್ನ ಅಳಿಯ ಹಿಂತಿರುಗುತ್ತಾನೆ. ಬೇತಾಳ ಮತ್ತೆ ಮರಹತ್ತಿ ಕುಳಿತುಬಿಡ್ತು’’ ಅಂತ ಅವರು ಹೇಳಿದಾಗ, ಸುಮ್ಮನೆ ನಮ್ಮನ್ನು ಸಮಾಧಾನಪಡಿಸಲು ಮಾತನಾಡುತ್ತಾರೆಂದು ಅಂದುಕೊಂಡೆನು. ಇಲ್ಲ… ಮಾರಿಯಮ್ಮ ಕಣ್ಣನ್ನು ತೆರೆದಳು (ಕೃಪೆ ನೀಡಿದಳು).
ಭಾಗ 1 : Literature: ನೆರೆನಾಡ ನುಡಿಯೊಳಗಾಡಿ; ತಮಿಳಿನ ಖ್ಯಾತ ಲೇಖಕಿ ಶಿವಶಂಕರಿ ಚಂದ್ರಶೇಖರನ್ ಅವರ ಕಥೆ ‘ಒಂದು ಮಾತು’
“ಅಳಿಯ ಈಗ ಎಲ್ಲಿದ್ದಾರಂತೆ? ಅವರ ಹೆತ್ತವರ ಮನೇಲಾ?”
“ಇಲ್ವಂತೆ… ರಂಗನಾಥನ್ ಅವರನ್ನು ರಹಸ್ಯವಾಗಿ ವಿಚಾರಿಸಿದೆನು. ಹೋಟೆಲಲ್ಲಿ ರೂಂ ತೆಗೆದುಕೊಂಡಿದ್ದಾರೆ ಅಲ್ಲೇ ಬಂದು ನೋಡಿ ಅಂತ ಹೇಳಿದರು. ಸೊಸೆಯನ್ನು ಸೇರಿಸಿಕೊಳ್ಳದೆ ಮನೆ ಹೊಸ್ತಿಲನ್ನು ತುಳಿಯಬಾರದೂಂತ ಬೀಗರು ಹೇಳಿಬಿಟ್ರಲ್ಲ. ಅದಕ್ಕೇ ಅಳಿಯ ಪಟ್ಟಣದಲ್ಲೇ ತಂಗಿದ್ದಾರೆ.’’
“ಮನಸ್ಸು ಬದಲಾಗಿ ಮತ್ತೆ ಆ ರಾಕ್ಷಸಿಯ ಬಳಿ ಅವರು ಹೋಗುವುದಕ್ಕೆ ಮುಂಚಿತವಾಗಿ ನೀವು ಹೋಗಿ ಇಲ್ಲಿಗೆ ಕರ‍್ಕೊಂಡು ಬಂದ್ಬಿಡಿ. ನಾವು ಬೆಟ್ಟದಂತೆ ನಂಬಿದ ಮುರುಗನ್ ಕೈಬಿಡಲಿಲ್ಲ. ಉರಿಯುತ್ತಿದ್ದ ನನ್ನ ಹೊಟ್ಟೆ ಈಗ ತಾನೇ ತಣ್ಣಗಾಯಿತು. ಯಾರಿಗೆ ಯಾವ ಜನ್ಮದಲ್ಲಿ ಏನು ಕೆಡುಕನ್ನು ಮಾಡಿದೆವೊ, ನಮ್ಮ ಮಗುವಿಗೆ ಸಂಕಟಕ್ಕೀಡು ಮಾಡಿತು. ಇನ್ನು ಕಳೆದು ಹೋದುದನ್ನು ಒಂದು ಕನಸೂಂತ ಒಟ್ಟಿಗೆ ಮರೆತುಬಿಡೋಣ. ಮೊದಲಿಗೆ ಜ್ಯೋತಿಷಿಗಳ ಮನೆಗೆ ಹೋಗಿ ಒಳ್ಳೆ ದಿವಸವನ್ನು ಕೇಳಿಕೊಂಡು ಬನ್ನಿ. ನಿಮ್ಮ ಮಾವ, ಅತ್ತೆಯ ಬಳಿಯೂ ಮಾತನಾಡಿ, ಅಳಿಯನನ್ನು ಭೇಟಿ ಮಾಡಿ, ನೀವು ದೊಡ್ಡ ಮನಸ್ಸು ಮಾಡಿ ಊರಿಗೆ ಬರಬೇಕು. ಸೆಲ್ವಿ ಏನಾದರೂ ತಪ್ಪು ಮಾಡಿದ್ರೆ ಮನ್ನಿಸಿ ಸ್ವೀಕರಿಸಬೇಕು ಅಂತ ಕೇಳಿಬಿಟ್ಟು ಒಂದು ಒಳ್ಳೆ ದಿನವನ್ನು ಸೂಚಿಸಿ ಹೇಳಿಬಿಟ್ಟು ಬನ್ನಿ.’’
ನಗು ಮತ್ತು ಅಳುವಿನೊಡನೆ ಉದ್ದಕ್ಕೆ ಮಾತನಾಡಿದ್ದನ್ನು ನೆನೆಪಿಸಿಕೊಂಡು ದೇವರ ಕೋಣೆಗೆ ಹೋಗಿ ಬಿದ್ದು ನಮಸ್ಕರಿಸಿದಳು. ‘ಮುರುಗ ! ನನ್ನ ಸಂಕಟವ ಪರಿಹರಿಸಿದ ದೇವನೇ’ ಎಂದು ಹೇಳುತ್ತಾ ಮತ್ತೆ ಮತ್ತೆ ನಮಸ್ಕರಿಸಿದಳು.
ಆ ಶುಕ್ರವಾರ ಅಪರೂಪವಾದ ಅದ್ಭುತ ಶುಭ ದಿನ. ಅಗಲಿದವರು ಕೂಡಿ ತಮ್ಮ ನೂತನ ಬಾಳನ್ನು ಪ್ರಾರಂಭಿಸಲು ಪ್ರಶಸ್ತವಾದ ದಿನ – ಎಂದು ಜ್ಯೋತಿಷಿಗಳು ಸೂಚಿಸಲು, ಹಿರಿಯರಿಬ್ಬರು ತಾಂಬೂಲ ಸಹಿತ ವರನನ್ನು ಕರೆಯಲು ಅಂದು ಮಧ್ಯಾಹ್ನವೇ ವೇದಗಿರಿ ಹೊರಟ ಸುದ್ದಿ ಹರಡಿ, ಊರ ಹೆಣ್ಣುಮಕ್ಕಳು ಮೆಟ್ಟಿಲೇರಿ ಬಂದು, ನವನೀದಂಳನ್ನು ಸುತ್ತುವರಿದರು.
ಏನ್ ನವನೀದಂ, ಅಳಿಯ ಬರೋಂಗೆ ಕಾಣಿಸ್ತದೆ?
ಸೆಲ್ವಿಯ ತಾಳಿಗೆ ಬಲ ಹೆಚ್ಚು ನಿಜ. ಅವಳ ತಾಳ್ಮೆಯೂ, ದೈವಭಕ್ತಿಯೂ ಕೈ ಬಿಡಲಿಲ್ಲ. ನೋಡಿದೆಯಾ?
ಶುಕ್ರವಾರ ಬೆಳಿಗ್ಗೆ ಮಾರಿಯಮ್ಮನ ದೇವಾಲಯದಲ್ಲಿ ವಿಶೇಷ ಪೂಜೆಗೆ ಏರ್ಪಾಡು ಮಾಡು ನವನೀದಂ
ದೊಡ್ಡದಾಗಿ ಒಂದು ಕುಂಬಳಕಾಯಿ ತೆಗೆದುಕೊಂಡು ಬಂದು ನಿನ್ನ ಮಗಳಿಗೂ ಮನೆಗೂ ಸುತ್ತಿ ದೃಷ್ಟಿ ಕಳೆಯಿತು ಎಂದು ನಡುರಸ್ತೆಯಲ್ಲಿ ಹಾಕಿ ಒಡೆಯಲು ಹೇಳು.
ಹೌದು, ಸೆಲ್ವಿ ಎಲ್ಲಿ ಕಾಣ್ತಾನೇ ಇಲ್ಲ?
ಗಂಡ ಬರುವ ಸಂತೋಷದಲ್ಲಿ ಒಂಟಿಯಾಗಿ ಕುಳಿತು ಏನಾದ್ರೂ ಕಲ್ಪನೆ ಮಾಡ್ತಾ ಇರಬೇಕು. ಅಳಿಯ ಸಮ್ಮತಿಸಿದ ಸುದ್ದಿಯೊಡನೆ ಅಂದಿನ ರಾತ್ರಿ ಪಟ್ಟಣದಿಂದ ವೇದಗಿರಿ ಹಿಂತಿರುಗಿದ ಕೂಡಲೆ, ಮನೆಗೆ ಮದುವೆಮನೆ ಸಡಗರ ಬಂದುಬಿಡ್ತು.
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಭಾಗ 2 : Literature: ನೆರೆನಾಡ ನುಡಿಯೊಳಗಾಡಿ; ಮಗಳ ನೆಮ್ಮದಿಗಿಂತ ಆತ್ಮಗೌರವ ಮುಖ್ಯವೇ? ತಮಿಳಿನ ‘ಒಂದು ಮಾತು’ ಕಥೆ