Forest Stories: ಕಾಡೇ ಕಾಡತಾವ ಕಾಡ; ‘ನಿಮ್ಮ ಕೆಲಸ ಈ ಥರಾ ಅಂತ ಗೊತ್ತಿದ್ರೆ ಮದುವೆಗೇ ಒಪ್ಕೋತಿರಲಿಲ್ಲ’

|

Updated on: Feb 26, 2022 | 11:31 AM

Story : ದಾರಿ ಮಧ್ಯದಲ್ಲಿ ಬೇಕರಿ ಹತ್ತಿರ ಹೋಗಿ, ಸಾರ್‌ ಬೆಳಿಗ್ಗೆ ಹೇಳಿದ್ನಲಾ ಕೇಕು, ಆಯ್ತಾ ಸಾ ಅಂದ. ಒಂದ್ನಿಮಿಷ ನೋಡ್ತೀನಿ ಇರಿ ಅನ್ನುತ್ತಾ ಒಳ ಹೋದ ಅಂಗಡಿಯವ. ಅಷ್ಟರಲ್ಲಾಗಲೇ, ಫಾರೆಸ್ಟರ್‌ ಫೋನ್‌ ಬಂತು.

Forest Stories: ಕಾಡೇ ಕಾಡತಾವ ಕಾಡ; ‘ನಿಮ್ಮ ಕೆಲಸ ಈ ಥರಾ ಅಂತ ಗೊತ್ತಿದ್ರೆ ಮದುವೆಗೇ ಒಪ್ಕೋತಿರಲಿಲ್ಲ’
ಫೋಟೋ : ವಿ. ಕೆ. ವಿನೋದ್ ಕುಮಾರ್
Follow us on

ಕಾಡೇ ಕಾಡತಾವ ಕಾಡ | Kaade Kaadataava Kaada : ಲೇಯ್‌, ಬೇಗ್‌ ತಿಂಡಿ ತಗಬಾರೆ, ಟೈಮಾಯ್ತು ಅಂತ ಬಡ್ಕೊಂಡ್ರೂ ತಿಂಡಿ ಕೊಡೋದ್‌ ಲೇಟ್‌ ಮಾಡ್ತಿಯಲ್ಲಾ ನೀನು? ಅನ್ನುತ್ತಾ ಅಸಮಾಧಾನ ತೋರಿದ ದಿನೇಶ್‌. ಆಯ್ತು ರೀ, ದೋಸೆ ಬೇಯೋದ್‌ ಬೇಡ್ವಾ? ಯಾವಾಗ್ಲೂ ಅರ್ಜೆಂಟೇ ನಿಮ್ಗೆ, ಆಫೀಸ್‌ ಟೈಮಿರದೇ ಹತ್ತರಿಂದ ಆರಲ್ವಾ? ನಿಮ್ದೇನು ಎಂಟ್‌ ಗಂಟೆಗೇ ಅರ್ಜೆಂಟೂ! ರಾಗ ಎಳೆದಳು ಹೆಂಡತಿ. ಇವತ್ತು ಅದೆನೋ ಅರ್ಜೆಂಟ್ ಕೆಲ್ಸ ಇದೆ, ಬೇಗ ಬಾ ಅಂದಿದಾರೆ ಫಾರೆಸ್ಟ್ರು, ಅದಿಕ್ಕೆ ಕಣೇ ಬೇಗ ಹೊರಟೆ ಅಂದ. ನಿಮ್‌ ಫಾರೆಸ್ಟ್ರಿಗೆ ಅದೇ ತಾನೆ? ಯಾವಾಗ್ಲೂ ಅರ್ಜೆಂಟೇ, ಬೇಗ್‌ ಬಾ ಬೇಗ್‌ ಬಾ, ಸಂಜೆ ಮಾತ್ರ ಲೇಟಾಗ್‌ ಬರೋದು. ನಿಮ್‌ ಕೆಲ್ಸ ಈ ತರಾ ಅಂತ ಗೊತ್ತಿದ್ದಿದ್ರೆ ನಾನ್‌ ಮದ್ವೆಗೆ ಓಪ್ಕೋತಾನೆ ಇರ್ಲಿಲ್ಲ, ಒಬ್ಬ ಎಸ್ಐ ನನ್ನ ನೋಡಿ ಒಪ್ಕಂಡಿದ್ದ ಗೊತ್ತಾ? ಅಂದ್ಳು ಹೆಂಡ್ತಿ. ಎಸ್ಐನೇನಾರ ಆಗಿದ್ದಿದ್ರೆ, ಇಷ್ಟೊತ್ಗೆ ನಿನ್‌ ಢಂ ಅನ್ಸಿರೋನು, ನೀನ್‌ ಕೊಡೋ ಟಾರ್ಚರ್​ಗೆ ಅಂದ ದಿನೇಶ.
ವಿ.ಕೆ. ವಿನೋದಕುಮಾರ್ (V.K. VinodKumar)

(ಕಥೆ: 4, ಭಾಗ: 1)

*

ಹೌದೌದು, ಮೂರೊತ್ತೂ ನಿಮಗ್‌ ಬೇಯ್ಸಾಕ್ತಿನಲ್ಲ, ಅದೇ ತಪ್ಪು ನಂದು, ಕರ್ಮ ಅನ್ನುತ್ತಾ ಮತ್ತೊಂದು ದೋಸೆ ತಂದು ಪ್ಲೇಟಿಗೆ ಹಾಕಿದಳು. ಸಂಜೆ ಬೇಗ ಬನ್ನಿ ಮನೆಗೆ, ಮ್ಯಾಟ್ರು ಗೊತ್ತು ತಾನೇ? ಅನ್ನುತ್ತಾ ಅವನ ಕಡೆಗೆ ದುರುಗುಟ್ಟಿ ನೋಡಿದಳು. ಗೊತ್ತು ಕಣೇ, ಎಲ್ಲಾ ಅರೇಂಜ್‌ ಮಾಡಿದೀನಿ, ಇಲ್ಲಿದೆಲ್ಲಾ ನೀನ್‌ ನೋಡ್ಕೋ, ನಾನ್‌ ಬರ್ತೀನಿ ಬೇಗ ಅಂದ. ದೋಸೆ ತಿಂದು ಮುಗಿದಿರಲಿಲ್ಲ, ಅಷ್ಟರಲ್ಲೇ ಫೋನು ಬಂತು. ಥೋ ಲೇಟಾಯ್ತು ಕಣೇ, ಫಾರೆಸ್ಟ್ರು ಫೋನು ಅನ್ನುತ್ತಾ. ಹಲೋ ಸಾ ನಾನ್‌ ರೆಡಿ ಸಾ ಶೂ ಹಾಕ್ತಿದಿನಿ…

ಎಷ್ಟೊತ್ತು ಮಾರಾಯ, ನಿನ್ನೇನೇ ಹೇಳಿರ್ಲಿಲ್ವಾ? ನಾನು ಹೊರಟು ಮನೆ ಮುಂದೆ ಬಂದ್ರೂ ನಿಂದಿನ್ನೂ ಆಗಿಲ್ಲ, ಶಿಸ್ತಿಲ್ಲ ನಿಮ್ಗೆಲ್ಲಾ, ಬಾ ಬೇಗ ಅನ್ನುತ್ತಾ ಫೋನಿನಲ್ಲೇ ಅಬ್ಬರಿಸಿದರು. ಗಡಿಬಿಡಿಯಲ್ಲಿ ಎದ್ದವನೇ, ಶೂ ಹಾಕಲು ಶುರು ಮಾಡಿದ. ಅಯ್ಯೋ ದೋಸೆ ತಿಂದ್‌ ಮುಗಿಸ್ರೀ ಅನ್ನುತ್ತಾ ತಟ್ಟೆ ಅವನ ಮುಂದೆ ಹಿಡಿದಳು. ಸುಮ್ನಿರೇ, ಲೇಟಾದ್ರೆ ಬಾಯಿಗ್‌ ಬಂದಂಗ್‌ ಬೈತಾರೆ, ಇಡೀ ದಿನ ಮೂಡ್‌ ಆಫಾಗುತ್ತೆ ಅಂದ. ತಿನ್ನಿ ಅನ್ನುತ್ತಾ, ಒಂದು ತುಂಡು ಬಾಯಿಗೆ ತುರುಕಿದಳು. ಹೊರಗಡೆ ಹಾರ್ನ್‌ ಶಬ್ದ.

ಇದನ್ನೂ ಓದಿ : ಋತುವಿಲಾಸಿನಿ; ‘ಇನ್ನಷ್ಟು ನೋವು, ಕಾವು ಹೊಳೆಯಿಸಬೇಕಿದೆ’ ಇಂದಿನಿಂದ ಕವಿ ನಂದಿನಿ ಹೆದ್ದುರ್ಗ ಅಂಕಣ

ಯಾವನೋ ಇವ್ನು, ತಿಂದು ಬಾಯಿ ತೊಳ್ಕಂಡ್‌ ಬರದಲ್ವಾ? ಅನ್ನುತ್ತಾ ಗದರಿದರು ಫಾರೆಸ್ಟ್ರು. ಅರ್ಧನೇ  ದೋಸೆ ತಿಂದೆ ಸಾ ಅನ್ನುತ್ತಾ ಮುಖ ಸಣ್ಣದು ಮಾಡಿಕೊಂಡ ದಿನೇಶ. ಸರಿಬುಡು, ಹನ್ನೊಂದ್‌ ಗಂಟೆಗೆ ಟೀ ಕೊಡುಸ್ತೀನಿ  ಅನ್ನುತ್ತಾ ಡ್ರೈವರ್​ಗೆ ಜೀಪ್‌ ಸ್ಟಾರ್ಟ್‌ ಮಾಡಲು ಹೇಳಿದರು. ದಾರೀಲಿ ಹೋಗ್ತಾ, ನಿನ್ನೆ ರಮೇಶನ್‌ ಮಗಳ್‌ ಬರ್ತಡೇ ಇತ್ತು ಕಣೊ, ನೀನ್ಯಾಕ್‌ ಬಂದಿಲ್ಲಾ ಅಂದರು. ನಿನ್ನೆ ದೇವಸ್ಥಾನಕ್ಕೋಗಿದ್ವಿ ಫ್ಯಾಮಿಲಿ ಸಮೇತ, ಹಾಗಾಗಿ ಬರ್ಲಿಲ್ಲಾ ಅಂದ. ಸಕತ್ತಾಗಿತ್ತು ಪಾರ್ಟಿ, ಒಳ್ಳೇ ಎಣ್ಣೇ, ಸೈಡ್ಸೂ, ಸೂಪರ್‌ ಊಟ, ಬೀಡಾ, ಬಾಳೆ ಹಣ್ಣು, ಎಲ್ಲಾ ಇತ್ತು ಕಣಾ, ಸಕತ್ತಾಗಿ ಅರೇಂಜ್‌ ಮಾಡಿದ್ದ. ಪಾರ್ಟಿ ಮಾಡಿದ್ರೆ ಹಂಗ್‌ ಮಾಡ್ಬೇಕು ಅಂದರು ಫಾರೆಸ್ಟರು.

ದಿನೇಶನಿಗೆ ಅರಣ್ಯ ಇಲಾಖೇಲಿ ವಾಚರ್‌ ಕೆಲ್ಸ. ಎಸ್.ಎಸ್.ಎಲ್.ಸಿ. ಫೇಲಾಗಿದ್ದ ಅವನಿಗೆ ಆ ಕೆಲ್ಸ ಸಿಕ್ಕಿದ್ದೇ ದೊಡ್ಡ ವಿಷಯವಾಗಿತ್ತು ಅವನ ಮನೇಲಿ. ಸರ್ಕಾರಿ ಕೆಲ್ಸದ ಪ್ರಭಾವ. ಡಿಗ್ರೀ ಓದಿದ್ದ ಅವನ ಮಾವನ ಮಗಳೇ ಹೆಂಡತಿಯಾದಳು. ಮಗಳೂ ಹುಟ್ಟಿದಳು.

ಅವತ್ತಿನ ದಿನದ ಕೆಲಸ ಮುಗಿಸಿ, ಸುಸ್ತಾಗಿ ಮನೆ ಕಡೆ ಹೊರಟಾಗಲೇ ಸೂರ್ಯ ಮುಳುಗಿದ್ದ, ಲೇಟಾಯ್ತಲ್ಲಾ ಅನ್ನುತ್ತಾ ಗಾಡಿಯ ವೇಗ ಹೆಚ್ಚಿಸಿದ. ದಾರಿ ಮಧ್ಯದಲ್ಲಿ ಬೇಕರಿ ಹತ್ತಿರ ಹೋಗಿ, ಸಾರ್‌ ಬೆಳಿಗ್ಗೆ ಹೇಳಿದ್ನಲಾ ಕೇಕು, ಆಯ್ತಾ ಸಾ ಅಂದ. ಒಂದ್ನಿಮಿಷ ನೋಡ್ತೀನಿ ಇರಿ ಸಾ ಅನ್ನುತ್ತಾ ಒಳ ಹೋದ ಅಂಗಡಿಯವ. ಅಷ್ಟರಲ್ಲಾಗಲೇ, ಫಾರೆಸ್ಟರ್‌ ಫೋನ್‌ ಬಂತು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಹಿಂದಿನ ಕಥೆ : Forest Stories: ಕಾಡೇ ಕಾಡತಾವ ಕಾಡ; ‘ಖುದಾ ಕೀ ಕಸಮ್ ಸಾ ಈ ಸಾವು ಸುಳ್ಳ ಹೇಳಾಕಿಲ್ಲ, ಬರ್ಕಳಿ ಲಾರಿ ನಂಬರ್ 7434’