Forest Stories: ಕಾಡೇ ಕಾಡತಾವ ಕಾಡ; ಮೋರಿ ಕೆಳಗೆ ಕುಳಿತು ಕಾಯ್ದು ಕಾಯ್ದು ಬೇಸರವಾದರೂ…

|

Updated on: Feb 26, 2022 | 12:29 PM

Story : ಗಂಟೆ ಹನ್ನೊಂದು ಕಳೀತಿದ್ದಂತೇ, ಮುಖ್ಯ ರಸ್ತೆಯಲ್ಲಿ ವಾಹನಗಳ ಓಡಾಟ ಕಡಿಮೆಯಾಯ್ತು. ಫಾರೆಸ್ಟರ್ ಮೊಬೈಲಿಗೆ ಒಂದ್ ಮಿಸ್ ಕಾಲ್ ಬಂತು. ತಕ್ಷಣ ರೆಡಿಯಾದ ಅವ್ರು, ಅಲರ್ಟ್, ಗಾಡಿ ಬರ್ತಿದೆ! ಅಂದರು.

Forest Stories: ಕಾಡೇ ಕಾಡತಾವ ಕಾಡ; ಮೋರಿ ಕೆಳಗೆ ಕುಳಿತು ಕಾಯ್ದು ಕಾಯ್ದು ಬೇಸರವಾದರೂ...
ಫೋಟೋ : ವಿ. ಕೆ. ವಿನೋದ್​ಕುಮಾರ್
Follow us on

ಕಾಡೇ ಕಾಡತಾವ ಕಾಡ | Kaade Kaadataava Kaada : ಕುಳಿತು ಎರಡು ನಿಮಿಷ ಕಳೆದಿರಬಹುದು. ದಿನೇಶ, ಸಾರ್ ಏನೋ ವಾಸ್ನೆ ಸಾ, ಕೂರಕ್ಕಾಯ್ತಿಲ್ಲ ಥೂ ಅನ್ನುತ್ತಾ ಮುಖ ಕಿವುಚಿದ. ಬಾಯಿಂದ ಬೀಡಾದ ರಸವನ್ನು ಪಿಚಕ್ಕನೇ ಉಗುಳಿದ ಅವರು, ಏನು? ಅನ್ನುತ್ತಾ ದಿನೇಶನ ಕಡೆ ನೋಡಿದರು. ಥೂ ವ್ಯಾಕ್ ಅನ್ನುತ್ತಾ ಡ್ರೈವರ್ ಸತೀಶ ಕುಳಿತ ಜಾಗದಿಂದ ಎದ್ದು ಬಂದವನೇ, ಯಾರೋ ಹೇತ್ಬಿಟ್ ಹೋಗಿದಾರೆ ಸಾ… ವಾಸ್ನೆ ಅನ್ನುತ್ತಾ ಈ ಕಡೆ ಬಂದ. ಎಲ್ಲರೂ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬೇರೆಬೇರೆ ಕಡೆ ಕುಳಿತರು. ಯೂನಿಫಾರ್ಮ್ ಕಂಡ್ರೆ ಸಾಕು ಕೆಲಸ ಕೆಟ್ಟುಹೋಗತ್ತೆ ಎಂದೂ ಫಾರೆಸ್ಟರ್ ಎಚ್ಚರಿಸಿದರು. ದಿನೇಶನ ಮೊಬೈಲು ರಿಂಗಾಯಿತು. ರಿಸೀವ್ ಮಾಡಿ, ಆಯ್ತು ಬರ್ತೀನಿ ಬರ್ತೀನಿ ಅನ್ನುತ್ತಿದ್ದಂತೆ, ಫಾರೆಸ್ಟರ್ ಅದೇನೋ ನಿನ್ ಹೆಂಡ್ತಿ ಅರ್ಜೆಂಟು ಅನ್ನುತ್ತಾ ಕಿಚಾಯಿಸಿದರು. ಎಲ್ಲರೂ ಫೋನ್ ಆಫ್ ಮಾಡಿದರು. 8.30ಕ್ಕೆಲ್ಲಾ ಈ ಕಡೆ ದಾಟಬಹುದು ಅಂದಿದಾನೆ ನಮ್ಮ ಇನ್​ಫಾರ್ಮರ್​ ಎಂದರು ಫಾರೆಸ್ಟರ್.
ವಿ.ಕೆ. ವಿನೋದ್​ಕುಮಾರ್ (V.K. Vinod Kumar)

*

(ಕಥೆ: 4, ಭಾಗ: 3)

ಸಾರ್ ಗಾಡಿ ಯಾವ್ದು? ನಂಬರ್ ಏನು? ಯಾವ್ಕಡೆಯಿಂದ ಬರೋದು? ದಿನೇಶ್ ಕೇಳಿದ. ಅದೆಲ್ಲಾ ರೆಡೀ ಇದೆ ನಾವು ಕಾಯ್ಬೇಕಷ್ಟೇ. ನಾನ್ ಹೇಳೋ ತನಕ ನೀವ್ ಸುಮ್ನಿರಿ ಅಷ್ಟೇ ಅಂದರು. ಹಾಗೇ ಕಾದು ಕಾದು ಗಂಟೆ ಹತ್ತು ಕಳೆಯಿತು, ನೂರಾರು ಗಾಡಿಗಳು ಓಡಾಡಿದರೂ ಫಾರೆಸ್ಟರ್ ಮಾತ್ರ ಯಾವುದೇ ಸೂಚನೆ ಕೊಡದೆ ಸುಮ್ಮನಿದ್ದರು. ದಿನೇಶನಿಗೆ ಮನೆಕಡೆ ಯೋಚನೆ, ಹಸಿವು, ಟೆನ್ಷನ್ ಹೆಚ್ಚಾಗತೊಡಗಿತು. ಸಾರ್, ಅನ್ನುತ್ತಾ ರಾಗ ಎಳೆದ. ಕಾಯ್ಬೇಕು ಇರಪ್ಪಾ, ಕಳ್ರನ್ನು ಹಿಡಿಯೋದು ಅಂದ್ರೆ ಸುಮ್ಮೇನಾ? ಅನ್ನುತ್ತಾ ಗಂಭೀರವಾದರು. ಮೋರಿ ಕೆಳಗೆ ದಿನೇಶನ ಜೊತೆ ಕುಳಿತಿದ್ದ ಡ್ರೈವರ್ ಸತೀಶನಿಗೂ ಕಾದು ಕಾದು ಬೇಸರವಾದರೂ, ಈ ಸಲ ಕಳ್ಳರನ್ನು ಹಿಡಿಯಲೇಬೇಕು ಅನ್ನುವ ಹಠದಿಂದ ಕಾದು ಕುಳಿತಿದ್ದ.

ಗಂಟೆ ಹನ್ನೊಂದು ಕಳೀತಿದ್ದಂತೇ, ಮುಖ್ಯ ರಸ್ತೆಯಲ್ಲಿ ವಾಹನಗಳ ಓಡಾಟ ಕಡಿಮೆಯಾಯ್ತು. ಫಾರೆಸ್ಟರ್ ಮೊಬೈಲಿಗೆ ಒಂದ್ ಮಿಸ್ ಕಾಲ್ ಬಂತು. ತಕ್ಷಣ ರೆಡಿಯಾದ ಅವ್ರು, ಅಲರ್ಟ್, ಗಾಡಿ ಬರ್ತಿದೆ! ಅಂದರು.
ದಿನೇಶ ಕೈಲಿ ಕೋಲಿಡಿದು ಕುಳಿತ ಜಾಗದಿಂದ ಎದ್ದ ಓಡುವ ಸಿದ್ದತೆ ಮಾಡಿಕೊಂಡ, ಡ್ರೈವರ್ ಸತೀಶ ಕೂಡಾ ರೆಡಿಯಾದ.

ಇದನ್ನೂ ಓದಿ : ಅಮಾರೈಟ್ : ‘ಇದು ಗೆಳೆತನದ ಗಣಿತ ಸಾಹೇಬ್‌, ಇಲ್ಲಿ ಎರಡರಲ್ಲಿ ಒಂದು ಕಳೆದರೆ ಏನೂ ಉಳಿಯುವುದಿಲ್ಲ’

ಅಷ್ಟರಲ್ಲಿ ಫಾರೆಸ್ಟರ್​ಗೆ ಮತ್ತೊಂದ್ ಮಿಸ್ ಕಾಲ್ ಬಂತು. ನಿಧಾನವಾಗಿ ಕೆಳಗಿನಿಂದ ಎದ್ದು ನಿಂತು ರಸ್ತೆ ಕಡೆ ನೋಡಿದರು. ದೂರದಲ್ಲಿ ರಸ್ತೆ ಬದಿಯ ಮರದ ಮೇಲಿಂದ ಒಂದು ಟಾರ್ಚ್ ಬೆಳಕಿನ ಕಿರಣ ಇವರಿದ್ದ ಕಡೆಗೆ ಬಂತು. ತಕ್ಷಣ ಫಾರೆಸ್ಟರ್, ಬನ್ರೋ ಅನ್ನುತ್ತಾ ಕೋವಿ ಕೈಗೆತ್ತಿಕೊಂಡು ಮುಖ್ಯರಸ್ತೆಗೆ ನಡೆದರು.

ಮುಖ್ಯ ರಸ್ತೆಯಲ್ಲಿ ವೇಗವಾಗಿ ಬರುತ್ತಿದ್ದ ಲಾರಿಯೊಂದು ಇವರು ಮುಖ್ಯ ರಸ್ತೆಗೆ ತಲುಪುತ್ತಿದ್ದಂತೆ, ವೇಗ ತಗ್ಗಿಸಿತು, ಜೊತೆಗೆ ಮತ್ತೊಂದು ಹೈಪವರ್ ಹೆಡ್​ಲೈಟ್ ಆನ್ ಆಯ್ತು. ನೋಡುತ್ತಿದ್ದಂತೇ ಆ ಹೆಡ್​ಲೈಟಿನ ಬೆಳಕು ಇವರ ಮುಖದ ಮೇಲೇ ಬಂತು. ಮುಖಕ್ಕೆ ಕೈ ಅಡ್ಡವಿಟ್ಟುಕೊಂಡು, ಇದೇ ಗಾಡಿ ಕಣ್ರೋ ಅನ್ನುತ್ತಾ ಕೂಗಿಕೊಂಡರು.
ದಿನೇಶ ರಸ್ತೆಯ ಪಕ್ಕ ಓಡಿದವನೇ ಮೊದಲೇ ತಂದಿರಿಸಿಕೊಂಡಿದ್ದ ಬ್ಯಾರಿಕೇಡ್ ಅನ್ನು ರಸ್ತೆಗೆ ಅಡ್ಡಲಾಗಿ ತಳ್ಳಿದ
ಫಾರೆಸ್ಟರ್ ಕೋವಿ ಎತ್ತಿ ಲಾರಿಯ ಕಡೆ ಹಿಡಿದರು. ವೇಗವಾಗಿ ಬರುತ್ತಿದ್ದ ಲಾರಿ, ವೇಗ ತಗ್ಗಿಸಿತು. ಲಾರಿ ನಿಲ್ಲುತ್ತಿದ್ದಂತೇ ಅಟ್ಯಾಕ್ ಮಾಡಬೇಕು ಅಂದರು ಫಾರೆಸ್ಟರ್.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 2 : Forest Stories: ಕಾಡೇ ಕಾಡತಾವ ಕಾಡ; ‘ಈಗಾಗಲೇ ಎರಡಸಲ ತಪ್ಪಿಸ್ಕೊಂಡಿದಾನೆ, ಈ ಸಲ ಹಿಡಿದೇ ತೀರಬೇಕು’