Shivaramu: ಮರಣ ಕಾದಿದೆ ಸಾವಿಗೆ; ಕನ್ನಡದಲ್ಲಿ ವೀರ ಸಾವರ್ಕರ್ ಬದುಕು ಕಟ್ಟಿಕೊಟ್ಟ ಧ್ಯೇಯವಾದಿ ಸಾಹಿತಿ ಶಿವರಾಮು ನೆನಪು

| Updated By: ರಶ್ಮಿ ಕಲ್ಲಕಟ್ಟ

Updated on: Aug 21, 2022 | 3:46 PM

Veer Sawarkar: ಸಾವರ್ಕರ್ ಅವರ ಜೀವನ ಚರಿತ್ರೆಯನ್ನು ಸಾಹಿತ್ಯಕ ನಿರೂಪಣೆಯೊಂದಿಗೆ ಕಟ್ಟಿಕೊಡುವ ಸವಾಲು ನಿರ್ವಹಿಸಿದ್ದವರು ಸಾಹಿತಿ ಶಿವರಾಮು.

Shivaramu: ಮರಣ ಕಾದಿದೆ ಸಾವಿಗೆ; ಕನ್ನಡದಲ್ಲಿ ವೀರ ಸಾವರ್ಕರ್ ಬದುಕು ಕಟ್ಟಿಕೊಟ್ಟ ಧ್ಯೇಯವಾದಿ ಸಾಹಿತಿ ಶಿವರಾಮು ನೆನಪು
ಆತ್ಮಾಹುತಿ ಕೃತಿ ಮತ್ತು ಲೇಖಕ ಶಿವರಾಮು
Follow us on

ಯಾವ್ಯಾವುದೋ ಕಾರಣಗಳಿಗಾಗಿ ಇಂದು ವಿನಾಯಕ ದಾಮೋದರ ಸಾವರ್ಕರ್ ಅವರ ಹೆಸರು ಮತ್ತು ಅವರ ನಡೆ ವಿವಾದಕ್ಕೀಡಾಗಿದೆ. ಸಾವರ್ಕರ್ ಹೆಸರನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವ ಕಾರ್ಯಕರ್ತರಿಗೂ ಸಾವರ್ಕರ್ ಅವರ ಬದುಕು ಮತ್ತು ಚಿಂತನೆಗಳ ಸರಿಯಾದ ಪರಿಚಯವಿಲ್ಲ. ಕನ್ನಡದಲ್ಲಿ ಸಾವರ್ಕರ್ ಬಗ್ಗೆ 50 ವರ್ಷಗಳ ಹಿಂದೆಯೇ ಮಹತ್ವದ ಕೃತಿಯೊಂದು ಪ್ರಕಟವಾಗಿತ್ತು. ಸಾವರ್ಕರ್ ಅವರ ಜೀವನ ಚರಿತ್ರೆಯನ್ನು ಸಾಹಿತ್ಯಕ ನಿರೂಪಣೆಯೊಂದಿಗೆ ಕಟ್ಟಿಕೊಡುವ ಸವಾಲು ನಿರ್ವಹಿಸಿದ್ದವರು ಸಾಹಿತಿ ಶಿವರಾಮು. ಇಂದು ಶಿವರಾಮು ಅವರಿಗೆ ಮರಣೋತ್ತರವಾಗಿ ‘ವೀರ ಸಾವರ್ಕರ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ’ ಮಾಡಲಾಗಿದೆ. ಸುಚಿತ್ರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವರಾಮು ಅವರ ಪತ್ನಿ ಶಾರದಾ ಪ್ರಶಸ್ತಿ ಸ್ವೀಕರಿಸಿದರು. ಈ ನೆಪದಲ್ಲಿ ಶಿವರಾಮು ಅವರ ಬದುಕು ಸಾಗಿಬಂದ ಹಾದಿಯನ್ನು ನೆನಪಿಸಿಕೊಂಡಿದ್ದಾರೆ ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ್.

***

ಕನ್ನಡದ ಅಜ್ಞಾತ ಸಾಹಿತಿ ಎಂದು ಯಾರನ್ನಾದರೂ ಹೆಸರಿಸಬಹುದಾದರೆ ಅದು ಹಿರಿಯ ಸಾಹಿತಿ, ಕವಿಯಾಗಿದ್ದ ಸ್ವರ್ಗೀಯ ಶ್ರೀ ಶಿವರಾಮು ಅವರನ್ನು. ಕನಕಪುರ ಮೂಲದ ಶಿವರಾಮು ಹುಟ್ಟಿದ್ದು 1934ರ ಜುಲೈ 8ರಂದು. ಬಿಇ ಪದವಿಗೆ ಸೇರಿದರೂ ಅದನ್ನು ಅವರಿಗೆ ಪೂರ್ಣಗೊಳಿಸಲು ಆಗಲಿಲ್ಲ. ಆದರೇನು? ಕವಿಯಾಗಿ, ಸಾಹಿತಿಯಾಗಿ ಶಿವರಾಮು ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದು, ಅವರೆಲ್ಲರ ಪ್ರೀತಿ, ವಿಶ್ವಾಸ ಸಂಪಾದಿಸಿದರು. ಅದೇನೂ ಕಡಿಮೆ ಸಾಧನೆಯಲ್ಲ.

ತಮ್ಮ 16ನೇ ವಯಸ್ಸಿಗೇ ಕಥೆ, ಕವನ ರಚನೆಯಲ್ಲಿ ತೊಡಗಿದ ಶಿವರಾಮು ಮತ್ತೆ ಹಿಂದಿರುಗಿ ನೋಡಿದ್ದೇ ಇಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದ ಬಳಿಕ, ಸಂಘ ಪ್ರತಿಪಾದಿಸುವ ಹಿಂದುತ್ವ, ರಾಷ್ಟ್ರೀಯತೆಗಳಿಗೆ ಮಾರುಹೋಗಿ ತಮ್ಮ ಇಡೀ ಬದುಕನ್ನು ಸಂಘಕಾರ್ಯಕ್ಕೆ ಮುಡಿಪಾಗಿಟ್ಟರು. 1955ರಿಂದ 1983ರವರೆಗೆ 28 ವರ್ಷಗಳ ಕಾಲ ಸಂಘದ ಪ್ರಚಾರಕರಾಗಿ ಕಾರ್ಯ ನಿರ್ವಹಿಸಿದರು. ರಾಷ್ಟ್ರೋತ್ಥಾನ ಪರಿಷತ್, ವಿಕ್ರಮ ವಾರಪತ್ರಿಕೆ, ಭಾರತ-ಭಾರತಿ ಪುಸ್ತಕ ಸಂಪದ, ಉತ್ಥಾನ ಮಾಸ ಪತ್ರಿಕೆ, ತುರ್ತುಪರಿಸ್ಥಿತಿಯಲ್ಲಿ ಭೂಗತ ಸಾಹಿತ್ಯ… ಹೀಗೆ ಹತ್ತುಹಲವು ಬಗೆಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದರು.

ಶಿವರಾಮು ರಚಿಸಿದ ಕೃತಿಗಳೆಲ್ಲವೂ ಸಾವಿರಾರು ಯುವಕರಿಗೆ ಪ್ರೇರಣೆ ನೀಡುವಂಥವು. ರಣವೀಳ್ಯ (1965), ಯವನ ವಿಜೇತ ಚಂದ್ರಗುಪ್ತ (ಅನುವಾದ-1966), ಕನ್ನಡದ ಕಡುಗಲಿಗಳು (1967), ಒಂದು ಕಥೆ ಒಂದು ವ್ಯಥೆ (1968), ಅಕ್ಕ ನಿವೇದಿತಾ (1969), ಆತ್ಮಾಹುತಿ (1970), ನೆತ್ತರು ತಾವರೆ (1973), ಚಿನ್ನದ ಕತ್ತಿ (1982), ಐಎನ್​ಎ ನೆನಪು (1987), ಪ್ರೇಮಧಾರೆ (1997), ಸ್ಫೂರ್ತಿ ಕಿರಣ (1997), ನನ್ನ ಜನ ನನ್ನ ಮನ (1980), ತಾಯೇ ವಂದಿಸುವೆ (1984) ಹೀಗೆ ಅವರು ರಚಿಸಿದ ಕೃತಿಗಳು ಹಲವು.

ಜೊತೆಗೆ ರಾಷ್ಟ್ರಪ್ರೇಮ ಉದ್ದೀಪಿಸುವ, ಮೈಮನಗಳನ್ನು ಬಡಿದೆಬ್ಬಿಸುವ ನೂರಾರು ದೇಶಭಕ್ತಿ ಗೀತೆಗಳು, ಸಾಂದರ್ಭಿಕ ಕವನಗಳು ಅವರ ಲೇಖನಿಯಿಂದ ಮೂಡಿಬಂತು. ‘ರಾಷ್ಟ್ರ ದೇವಗೆ ಪ್ರಾಣ ದೀವಿಗೆ ಸೇವೆಯಾಗಲಿ ನಾಡಿಗೆ, ಮೃತ್ಯುಭೃತ್ಯದು ಹಿಂದೂ ಭೂಮಿಗೆ ಮರಣ ಕಾದಿದೆ ಸಾವಿಗೆ’ ಎಂಬ ಅವರ ದೇಶಭಕ್ತಿ ಗೀತೆಯಂತೂ ಅತ್ಯಂತ ಹಿಟ್ ಸಾಂಗ್. ಸಾವಿಗೂ ಮರಣ ಕಾದಿದೆ ಎಂಬ ಕವಿಕಲ್ಪನೆಯೇ ಅದೆಷ್ಟು ಮನೋಹರ, ಅದ್ಭುತ ಎಂದು ಆ ಗೀತೆಯನ್ನು ಓದಿದ ಕವಿ ಬೇಂದ್ರೆಯವರೇ ಉದ್ಗಾರ ತೆಗೆದಿದ್ದರಂತೆ!

ಶಿವರಾಮು ಅವರ ಕೃತಿಗಳಲ್ಲೇ ಮೇರು ಕೃತಿ ಎಂದರೆ ‘ಆತ್ಮಾಹುತಿ’. ಅದು ಸ್ವಾತಂತ್ರ್ಯವೀರ ಸಾವರ್ಕರ್ ಅವರ ಆತ್ಮ ಚರಿತ್ರೆ. ಆದರೆ ಸ್ವತಂತ್ರ ಕೃತಿ. ನೈಜ ಘಟನೆಗಳಿಂದ ಕುಡಿದ ಒಂದು ರಮ್ಯ, ಅದ್ಭುತ, ಸುರಸ, ಕಾದಂಬರಿ. ಭಾಷೆಯ ಶೈಲಿ ಅತ್ಯಂತ ಮನೋಜ್ಞ. ವರ್ಣರಂಜಿತ ಸನ್ನಿವೇಶಗಳು, ಜೀವಂತ ಕಣ್ಣಿಗೆ ಕಟ್ಟುವ ಪಾತ್ರಗಳು, ಜೀವನದ ಏರುಪೇರಿನ ರಸ ನಿಮಿಷಗಳು… ಇಷ್ಟಾದರೂ ಇದು ಕಲ್ಪನೆಯಲ್ಲ. ಆಧಾರ ಸಂಪನ್ನವಾದ ಐತಿಹಾಸಿಕ ಸತ್ಯ ಘಟನಾವಳಿ. ಹೊಸ ಪೀಳಿಗೆಯ ಅಗಣಿತ ಹೃದಯಗಳನ್ನು ಅರಳಿಸಿದ, ಬೆಳಗಿಸಿದ, ಸ್ಪೂರ್ತಿಗೊಳಿಸಿ ಪರಿವರ್ತಿಸಿದ, ಸದೃಢ ಸಂಕಲ್ಪಗಳಿಗೆ ಪ್ರೇರೇಪಿಸಿದ ಅಪರೂಪದ ಅಮೋಘ ಕೃತಿ ಆತ್ಮಾಹುತಿ.

ಇದನ್ನು ನೂರಾರು ಓದುಗರು ಸ್ವತಃ ಶಿವರಾಮು ಅವರ ಬಳಿ ಬಂದು ನಿವೇದಿಸಿಕೊಂಡಿದ್ದಾರೆ. ಅದನ್ನವರು ಕೃತಿಯ 5ನೇ ಆವೃತ್ತಿಯ ‘ಮರುಮಾತು’ ಬರೆಯುವಾಗ ನೆನಪಿಸಿಕೊಂಡಿದ್ದಾರೆ. ‘ಸಾವರ್ಕರರ ಜೊತೆಗೆ ನನ್ನನ್ನೂ ಸಾವಿರಾರು ಯುವಕರು ಸ್ಮರಿಸುವಂತಾದಾಗ ನನ್ನ ಈ ಇಳಿವಯಸ್ಸಿನಲ್ಲೂ ಕೃತಜ್ಞತೆಯ ನೋಟಗಳು ನನ್ನ ಅಂತರಂಗವನ್ನು ಮೀಟುತ್ತವೆ. ನನ್ನ ಬಾಳಿಗೆ ಧನ್ಯತಾಭಾವದ ಅಗಾಧ ಆಸ್ತಿ ಒದಗಿಸುತ್ತದೆ. ಅದಕ್ಕಿಂತ ದೊಡ್ಡದು ಇನ್ನಾವುದು’ ಎಂದು ಶಿವರಾಮು ಅವರೇ ಹೇಳಿದ್ದಾರೆ.

ಆತ್ಮಾಹುತಿ ಶುರುವಾಗುವ ಪರಿಯೇ ಅತ್ಯಂತ ಮನೋಜ್ಞ ಹಾಗೂ ಆಹ್ಲಾದಕರ. ‘ನಿಜ ಹೇಳಬೇಕೆಂದರೆ ನಾನು ಹುಟ್ಟಿದ್ದು ನನಗೆ ಕಿಂಚಿತ್ತು ನೆನಪಿಲ್ಲ. 1883ರ ಮೇ28 ಸೋಮವಾರದಂದು ಈ ಜಗತ್ತಿಗೆ ಬಂದೆನಂತೆ…’ ಎಂದು ಈ ಪುಸ್ತಕ ಆರಂಭವಾಗುತ್ತದೆ. ಕಾದಂಬರಿಯ ಅಂತ್ಯ ಕೂಡ ಅಷ್ಟೇ ಸೊಗಸು. ‘ನಿಜ ಹೇಳಬೇಕು ಅಂದರೆ ನಾನು ಸತ್ತಿದ್ದು ನನಗೆ ಕಿಂಚಿತ್ತೂ ನೆನಪಿಲ್ಲ! 1966ರ ಫೆ.26ರಂದು ಬೆಳಿಗ್ಗೆ 11 ಗಂಟೆ 10 ನಿಮಿಷಕ್ಕೆ ಈ ಜಗತ್ತು ಬಿಟ್ಟೆನಂತೆ!’ ಎಂದು ಕೃತಿ ಮುಕ್ತಾಯವಾಗುತ್ತದೆ.

ಆತ್ಮಾಹುತಿ ಕೃತಿಯ ಬಗ್ಗೆ ವಿಮರ್ಶಿಸುತ್ತಾ ಡಾ. ಹಾ.ಮಾ.ನಾಯಕ ಅವರು ಸುಧಾ ಪತ್ರಿಕೆಯಲ್ಲಿ ‘ಸೋಜಿಗ, ಆದರೂ ಸಾಹಸದ ಕೃತಿ’ ಎಂದು ಪ್ರಶಂಸಿಸಿದ್ದರು. ಹೀಗಿದ್ದರೂ ಸಾಹಿತ್ಯ ಅಕಾಡೆಮಿಯಾಗಲಿ, ಸರ್ಕಾರವಾಗಲಿ ಆ ಮಹೋನ್ನತ ಕೃತಿಗೆ ಯಾವುದೇ ಪುರಸ್ಕಾರ ನೀಡುವ ಸೌಜನ್ಯ ತೋರಲಿಲ್ಲ. ಏಕೆಂದರೆ ಅದು ಸಾವರ್ಕರ್ ಕೃತಿ. ಹಿಂದುತ್ವ ಪ್ರತಿಪಾದಿಸಿದ ಕೋಮು ವ್ಯಕ್ತಿಯೊಬ್ಬನ ಜೀವನ ಚರಿತ್ರೆ ಅದು ಎನ್ನುವುದು ಹಲವರ ಧೋರಣೆಯಾಗಿತ್ತು.

ಅನೇಕ ವರ್ಷಗಳ ಬಳಿಕ ಈಗಲಾದರೂ ಸಾವರ್ಕರ್ ಸಾಹಿತ್ಯ ಸಂಘ ಶಿವರಾಮು ಅವರಿಗೆ ಮರಣೋತ್ತರ ವೀರ ಸಾವರ್ಕರ್ ಪುರಸ್ಕಾರ ನೀಡುತ್ತಿದೆ. ಇದು ಸಮಾಧಾನಕರ ಸಂಗತಿ. ಶಿವರಾಮು ಅವರ ಸಾಹಿತ್ಯ ಕೃತಿಗಳನ್ನು ಯುವ ಪೀಳಿಗೆ ಇನ್ನಷ್ಟು ಹೆಚ್ಚು ಓದುವಂತಾದರೆ ಅದೇ ಆ ಮಹಾನ್ ಸಾಹಿತಿಗೆ ನಾವೆಲ್ಲರೂ ಸಲ್ಲಿಸಬಹುದಾದ ಕಿಂಚಿತ್ ಗೌರವ ಆದೀತು.

***

ಆತ್ಮಾಹುತಿ ಪುಸ್ತಕವನ್ನು ಆನ್​ಲೈನ್​ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:25 pm, Sun, 21 August 22