Rabindranath Tagore Birth Anniversary : ರವೀಂದ್ರರ ಬದುಕು ಮತ್ತು ಬರಹವನ್ನು ನೋಡಿದಾಗ, ಅವರು ಅಪ್ರಜ್ಞಾಪೂರ್ವಕವಾಗಿ ಹೊಸಭಾರತದ ಸೃಷ್ಟಿಯಲ್ಲಿ ತೊಡಗಿದ್ದರು ಎನ್ನಿಸುತ್ತದೆ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಸಂದರ್ಭದಲ್ಲಿ ಅವರು ಸೃಷ್ಟಿಸಿದ ಆಶಯ ಮತ್ತು ರೂಪಕಗಳು ಸಂಪೂರ್ಣ ಹೊಸತಾಗಿದ್ದವು. ಇವು ಭಾರತೀಯ ಭಾಷೆಗಳಲ್ಲಿ ಹೊಸ ಸಾಹಿತ್ಯದ ಹುಟ್ಟಿಗೆ ಕಾರಣವಾದವು. ಈ ಸಂಗತಿಯನ್ನು ನಾವು ‘ಅನು-ಕಂಪ’ಕ್ಕೆ ಹೋಲಿಸಬಹುದು. ವೀಣೆಯಲ್ಲಿ ಒಂದು ತಂತಿಯನ್ನು ಮೀಟಿದರೆ, ಅದರ ತರಂಗವು ಉಳಿದ ತಂತಿಗಳಲ್ಲಿಯೂ ಕಂಪನವನ್ನು ಉಂಟುಮಾಡುತ್ತದೆ. ಒಂದರ ಮೂಲಕ ಮತ್ತೊಂದು ಅಪ್ರಜ್ಞಾಪೂರ್ವಕವಾಗಿ ಕಂಪಿಸುತ್ತ ಹೊಸತೊಂದು ನಾದ ಸೃಷ್ಟಿಯಾಗುವ ಬೆರಗು ‘ಅನು-ಕಂಪ’. ರವೀಂದ್ರನಾಥ ಠಾಕೂರ್ ಎಂಬ ಕಂಪನವು ನಾಡಿನಾದ್ಯಂತ ಸೃಷ್ಟಿಸಿದ ಅಖಂಡತೆಯ ‘ಅನು-ಕಂಪ’ನವು ಆಧುನಿಕ ಭಾರತದ ವಿಸ್ಮಯವಾಗಿತ್ತು.
ಜ. ನಾ. ತೇಜಶ್ರೀ, ಕವಿ, ಅನುವಾದಕಿ (Ja. Na. Tejashree)
ಕಲ್ಕತ್ತಾ ಮಹಾನಗರ ಬ್ರಿಟಿಷರ ಮುಖ್ಯ ಕಾರ್ಯಸ್ಥಾನ. ಅದು ಭಾರತದ ಬೇರೆ ಪ್ರದೇಶಗಳಿಗಿಂತ ಹೆಚ್ಚಾಗಿ ಹೊರಗಿನ ಪ್ರಭಾವಕ್ಕೆ ಒಳಗಾಗಿದ್ದ ಪ್ರದೇಶ. ಆದರೆ ಭಾರತೀಯ ಚಿಂತನೆಗಳ ಪುನರುಜ್ಜೀವನ ಮತ್ತು ಆ ಸಂಸ್ಕೃತಿಯ ಹೊಸಹುಟ್ಟು ಕೂಡ ಬಂಗಾಳದಲ್ಲಿಯೇ ನಡೆಯಿತು. ಬಂಗಾಳದಂತೆಯೇ ಒಟ್ಟು ಭಾರತದಲ್ಲಿಯೂ ಸಂಪೂರ್ಣವಾಗಿ ಪಾಶ್ಚಾತ್ಯರ ಅನುಕರಣೆಗೆ ತೆತ್ತುಕೊಂಡ ವರ್ಗ ಒಂದು ಕಡೆ; ಯಾವುದೇ ಪ್ರಭಾವವನ್ನೂ ಒಳಬಿಟ್ಟುಕೊಳ್ಳದೆ ತಮ್ಮ ನಾಡಿನ ಪ್ರಾಚೀನ ಪರಂಪರೆಯನ್ನಷ್ಟೇ ನಂಬಿ ಕೂತ ವರ್ಗ ಮತ್ತೊಂದು ಕಡೆ ಇತ್ತು. ಎರಡನ್ನೂ ಸಮನ್ವಯಗೊಳಿಸಿಕೊಳ್ಳಬೇಕಾದ ವೈರುಧ್ಯ ಸ್ಥಿತಿಯ ಈ ನಾಡಿನಲ್ಲಿ, ರವೀಂದ್ರನಾಥ ಠಾಕೂರರು ಕೂಡುಬಿಂದುವಾಗಿ ಮೂಡಿಬಂದರು. ಅವರಿಗೆ ಪೂರಕವಾಗಿ ನಿಂತ ಅವರ ಮನೆತನದ ವಾತಾವರಣವನ್ನು ನಾವು ಮರೆಯುವಂತಿಲ್ಲ. ತನ್ನ ಸಮುದಾಯ, ಸಮಾಜ, ನಾಡನ್ನು ಒಳಗೊಂಡು ಬೆಳೆದ ರವೀಂದ್ರನಾಥರ ಚಿಂತನೆಗಳು ಒಂದು ಜನಾಂಗದ ಕಣ್ಣು ತೆರೆಸಿದ ಮಾದರಿಗಳು. ಕವಿ, ನಾಟಕಕಾರ, ಪ್ರಬಂಧಕಾರ, ಶಿಕ್ಷಣತಜ್ಞ, ಕಾದಂಬರಿಕಾರ, ಸಂಗೀತಗಾರ, ಚಿತ್ರಕಾರ ಎಲ್ಲವೂ ಒಂದರೊಳಗೊಂದು ಹೆಣೆದುಕೊಂಡ ಸಂಕೀರ್ಣ ವ್ಯಕ್ತಿತ್ವದ ದಾರ್ಶನಿಕ ರವೀಂದ್ರನಾಥ ಠಾಕೂರರ ಹೊರತಾದ ಆಧುನಿಕ ಬಂಗಾಳಿ ಮತ್ತು ಭಾರತೀಯ ಸಾಹಿತ್ಯದ ಓದು ಮತ್ತು ಅಧ್ಯಯನವು ಅಪರಿಪೂರ್ಣ ಮತ್ತು ಅಸಮಗ್ರ.
ಭೂಮಾಲಿಕ ಮನೆತನಕ್ಕೆ ಸೇರಿದ ಠಾಕೂರರಿಗೆ ಮಧ್ಯಯುಗದ ‘ದರ್ಬಾರ’ ಸಂಸ್ಕೃತಿ ಮತ್ತದರ ಎಲ್ಲ ಸಂಸ್ಕಾರಗಳು ಆಯಾಚಿತವಾಗಿ ಒದಗಿ ಬಂದಿದ್ದವು. ಪಾಶ್ಚಾತ್ಯ ಶಿಕ್ಷಣಕ್ಕೆ ಮತ್ತು ಜೀವನ ಕ್ರಮಕ್ಕೆ ಠಾಕೂರರ ಅಜ್ಜನಿಂದ ಆದಿಯಾಗಿ ಕುಟುಂಬದ ಪ್ರಮುಖರು ತೆರೆದುಕೊಂಡಿದ್ದು ಅವರ ವ್ಯಕ್ತಿತ್ವಕ್ಕೆ ಬೇರೊಂದು ಆಯಾಮವನ್ನು ತಂದುಕೊಟ್ಟಿತು. ಬ್ರಾಹ್ಮಣ ಕುಟುಂಬದ ಹಿನ್ನೆಲೆಯಿಂದ ಅಪ್ರಜ್ಞಾಪೂರ್ವಕವಾಗಿ ಠಾಕೂರರಿಗೆ ಒದಗಿದ ಸಂಸ್ಕೃತ ಸಾಹಿತ್ಯದ ಓದು ಮತ್ತು ಮಧ್ಯಯುಗೀನ ಸಂಪ್ರದಾಯದ ಸಂಸ್ಕಾರ ಹಾಗೂ ಪ್ರಜ್ಞಾಪೂರ್ವಕವಾಗಿ ಅವರು ಸ್ವೀಕರಿಸಿದ ಪಾಶ್ಚಾತ್ಯ ಪ್ರಭಾವಗಳು -ಠಾಕೂರರ ಒಟ್ಟು ಬದುಕು ಮತ್ತು ಸಾಹಿತ್ಯವನ್ನು ನಿರ್ದೇಶಿಸುವ ಸಂಗತಿಗಳು.
ಭಾರತದ ಪ್ರಾದೇಶಿಕ ಸಂಸ್ಕೃತಿಗಳ ಮೇಲೆ, ರವೀಂದ್ರನಾಥ ಠಾಕೂರರು ಬೀರಿದ ಸಾಂಸ್ಕೃತಿಕ ಪುನರುಜ್ಜೀವನದ ಪ್ರಭಾವವನ್ನು ಅಧ್ಯಯನ ಮಾಡುವುದು ಕುತೂಹಲಕರವಾದ ಕೆಲಸ. ದೇಶದ ರಾಷ್ಟ್ರೀಯ ಪ್ರಜ್ಞೆಯನ್ನು ರೂಪಿಸುವಲ್ಲಿ ಮತ್ತು ಅದು ಸಂಕುಚಿತ ರಾಷ್ಟ್ರೀಯತೆಯಾಗದಂತೆ ಎಚ್ಚರ ವಹಿಸುವುದರಲ್ಲಿ ರವೀಂದ್ರರ ಪಾತ್ರವನ್ನು ಮುಖ್ಯವಾಗಿ ಗಮನಿಸಬೇಕು. ರವೀಂದ್ರನಾಥ ಠಾಕೂರ್, ಗಾಂಧೀಜಿ ಮತ್ತು ಅಂಬೇಡ್ಕರ್‍ರ ಸಮಗ್ರ ದರ್ಶನದ ಸಂಯೋಜನೆಯು ನಮ್ಮ ನಾಡಿಗೆ ಸಂಜೀವಿನಿಯಾಗಬಲ್ಲುದು. ಠಾಕೂರರ ಬರಹಗಳು ಉಂಟುಮಾಡಿದ ನೇರ ಪ್ರಭಾವ ಒಂದು ಕಡೆಯಾದರೆ, ಕಾಲಕಾಲಕ್ಕೆ ಅವರು ತೆಗೆದುಕೊಂಡ ನಿಲುವುಗಳು ಮತ್ತು ‘ಶಾಂತಿನಿಕೇತನ’, ‘ಶ್ರೀನಿಕೇತನ’ದಂತಹ ಸಂಸ್ಥೆಗಳ ಮೂಲಕ ಅವರು ತೆರೆದಿಟ್ಟ ಮಾದರಿಗಳು ಇನ್ನೊಂದು ಕಡೆ, ಕರ್ನಾಟಕವನ್ನೂ ಒಳಗೊಂಡಂತೆ ನಾಡಿನಾದ್ಯಂತ ಹೊಸ ದೃಷ್ಟಿಕೋನವನ್ನು ತೆರೆದಿಟ್ಟವು. ವಿಶ್ವಶಾಂತಿಯ ಪ್ರಸರಣಕ್ಕೆ ರವೀಂದ್ರರು ಕೈಗೊಂಡ ಪ್ರವಾಸಗಳು, ವಿಶ್ವಪ್ರೇಮದ ಆಧಾರದ ಮೇಲೆ ಮಾನವಕುಲದ ಸಂಘಟನೆಗೆ ಅವರು ತಮ್ಮನ್ನು ತೆತ್ತುಕೊಂಡ ರೀತಿಯು ಜಗತ್ತು ಹಿಂದೆಂದೂ ಕಂಡರಿಯದ ಘಟನೆಯಾಗಿದೆ.
ಇದನ್ನೂ ಓದಿ : Ayyappa : ಅಭಿಜ್ಞಾನ ; ಯು. ಆರ್. ಅನಂತಮೂರ್ತಿಯವರ ‘ರಾಮು ಮತ್ತು ಅಯ್ಯಪ್ಪ ವ್ರತ’
ರವೀಂದ್ರರ ಬರಹಗಳನ್ನು ತಮ್ಮತಮ್ಮ ಭಾಷೆಗೆ ಅನುವಾದಿಸಿದ ಹಾಗೆಯೇ, ರವೀಂದ್ರರ ಬರಹಗಳಿಂದ ಪ್ರಭಾವಿತರಾಗಿ ತಮ್ಮದೇ ಸ್ವಂತ ಸೃಜನಶೀಲ ಬರಹಗಳನ್ನು ಮಾಡಿದ ಅನೇಕ ಬರಹಗಾರರು ಭಾರತದ ಎಲ್ಲ ಭಾಷೆಗಳಲ್ಲೂ ಇದ್ದರು. ಕನ್ನಡದಲ್ಲಿ ಕುವೆಂಪು, ಬೇಂದ್ರೆ, ಮಾಸ್ತಿ, ಪುತಿನ ಇತ್ಯಾದಿ ಹಲವರ ಬರಹಗಳನ್ನು ನಾವು ಅಂತಃಪಠ್ಯಗಳಾಗಿ ಓದಿದಾಗ ಠಾಕೂರರ ವಿಚಾರಗಳ ಅನುರಣನವಾಗುತ್ತವೆ. ರವೀಂದ್ರರ ಸ್ತ್ರೀಕೇಂದ್ರಿತ ಬರಹಗಳೂ ಅಂತಹುದೇ ಎಚ್ಚರಕ್ಕೆ ಕಾರಣವಾದವು. ಯಾವ ಭಾಷೆಯೇ ಆದರೂ ಜಗತ್ತಿನ ಅತ್ಯುತ್ತಮವಾದದ್ದನ್ನು ಹೇಳಲು ಅರ್ಹ ಎನ್ನುವ ಭಾರತೀಯರ ನಂಬಿಕೆ ಬಲವಾದದ್ದು ಠಾಕೂರರಿಂದ. ಬಂಗಾಳಿ ಭಾಷೆಯಲ್ಲಿ ಸಾರ್ವತ್ರಿಕವಾದದ್ದನ್ನು ಹೇಳಿದ ಠಾಕೂರರಿಂದ ‘ಸ್ಥಳೀಯ’ವನ್ನೆ ‘ಸಾರ್ವತ್ರಿಕ’ ಮಾಡಬಲ್ಲ ಪ್ರೇರಣೆ ನಮಗೆ ಸಿಕ್ಕಿತು. ಒಂದು ಭಾಷೆಯ ಲೇಖಕ ಎಲ್ಲ ಭಾಷೆಯ ಲೇಖಕನೂ ಆಗಿ ಸ್ವೀಕೃತಗೊಂಡ ಉದಾಹರಣೆ ರವೀಂದ್ರನಾಥ ಠಾಕೂರ್.
(ರವೀಂದ್ರನಾಥ ಠಾಕೂರರ ‘ಕ್ರೆಸೆಂಟ್ ಮೂನ್’ನಿಂದ ಅನುವಾದಿಸಿದ ಕವನಗಳು)
ಕಾಗದದ ದೋಣಿ ಹರಿವ ತೊರೆಯಲ್ಲಿ ಪ್ರತಿದಿನ ಕಾಗದ ದೋಣಿಗಳ ತೇಲಿಬಿಡುತ್ತೇನೆ ಅದರ ಮೇಲೆ ದಪ್ಪ ಕಪ್ಪು ಅಕ್ಷರಗಳಲ್ಲಿ ನನ್ನ ಹೆಸರನ್ನೂ ನನ್ನ ಹಳ್ಳಿಯ ಹೆಸರನ್ನೂ ಬರೆಯುತ್ತೇನೆ ಅಪರಿಚಿತ ನಾಡಿನ ಯಾರಾದರೂ ಅವುಗಳನ್ನು ಕಂಡು ನಾ ಯಾರೆಂದು ತಿಳಿಯುವರೆಂಬ ನಂಬಿಕೆ ನನ್ನದು ನನ್ನ ಪುಟ್ಟ ದೋಣಿಗಳನ್ನು ಹೂದೋಟದ ಹೂಗಳಿಂದ ತುಂಬಿಸುತ್ತೇನೆ, ಮುಂಬೆಳಗಿನ ಈ ಬಿರಿದ ಮೊಗ್ಗುಗಳು ಸುರಕ್ಷವಾಗಿ ಆ ನಾಡನ್ನು ತಲುಪುವವೆಂಬ ಭರವಸೆ ನನಗೆ ಕಾಗದದ ದೋಣಿಗಳ ತೇಲಿಬಿಟ್ಟು ನಾನು ಆಕಾಶಕ್ಕೆ ದೃಷ್ಟಿ ನೆಡುತ್ತೇನೆ ಅಲ್ಲಿ ಪುಟ್ಟಪುಟ್ಟ ಬಿಳಿ ಮೋಡಗಳು ಅದಾಗಲೆ ತಮ್ಮ ಯಾನಕ್ಕೆ ಹೊರಟಿವ ಅದ್ಯಾವ ಗೆಳೆಯ ಆಕಾಶದಲ್ಲಿ ಕುಳಿತು ನನ್ನ ದೋಣಿಗಳ ಜೊತೆ ಓಟಕ್ಕಿಳಿಯಲು ಆ ಮೋಡಗಳನ್ನು ಗಾಳಿಯ ಕೂಡ ತೇಲಿಬಿಡುತ್ತಿದ್ದಾನೋ ಗೊತ್ತಿಲ್ಲ! ರಾತ್ರಿಯಾದಾಗ ನನ್ನ ಮುಖವನ್ನು ತೋಳುಗಳಲ್ಲಿ ಹುದುಗಿಸಿ ಕಾಗದದ ದೋಣಿಗಳು ನಡುರಾತ್ರಿಯ ನಕ್ಷತ್ರಗಳ ಬೆಳಕಿನಲ್ಲಿ ತೇಲಿ ತೇಲಿ ಹೋಗಲೆಂದು ಕನಸು ಕಾಣುತ್ತೇನೆ ನಿದ್ರೆಯ ಕಿನ್ನರರು ಅದರೊಳಗೆ ತೇಲುತ್ತಿದ್ದಾರೆ, ಅದರ ತುಂಬ ಕನಸು ತುಂಬಿದ ಬುಟ್ಟಿಗಳಿವೆ. * ಕಡಲ ದಂಡೆಯ ಮೇಲೆ ಆದಿಅಂತ್ಯಗಳಿಲ್ಲದ ಲೋಕದ ಕಡಲದಂಡೆಯ ಮೇಲೆ ಸೇರಿದ್ದಾರೆ ಮಕ್ಕಳು. ಸ್ಥಬ್ಧವಾಗಿದೆ ಅನಂತ ಆಕಾಶ ನೆತ್ತಿಯ ಮೇಲೆ ಅಬ್ಬರಿಸುತ್ತ ಉಕ್ಕುವ ನೀರು ಕಾಲಕೆಳಗೆ, ಆದಿಅಂತ್ಯಗಳಿಲ್ಲದ ಲೋಕದ ಕಡಲದಂಡೆಯ ಮೇಲೆ ಸೇರಿದ್ದಾರೆ ಮಕ್ಕಳು, ಕೂಗುತ್ತ ಕುಣಿಯುತ್ತ ಕುಪ್ಪಳಿಸುತ್ತ ಅವರು ಮರಳಿನಲ್ಲಿ ಮನೆಗಳ ಕಟ್ಟುವರು ಖಾಲಿ ಕಪ್ಪೆಚಿಪ್ಪುಗಳ ಜೊತೆಗಾಡುವರು, ಒಣಗಿ ಬಿದ್ದ ತರಗೆಲೆಗಳ ಹೆಣೆದು ದೋಣಿ ಮಾಡುವರು ವಿಶಾಲ ಆಳದ ನೀರ ಮೇಲೆ ನಗುನಗುತ್ತ ದೋಣಿಗಳ ತೇಲಿಬಿಡುವರು. ಲೋಕಲೋಕಗಳ ಕಡಲದಂಡೆಯ ಮೇಲೆ ಮಕ್ಕಳೆಲ್ಲ ಆಡುವರು ಈಜುವುದು ಹೇಗೆಂದು ಗೊತ್ತಿಲ್ಲ ಅವರಿಗೆ ಬಲೆಗಳ ಬೀಸುವುದು ತಿಳಿದಿಲ್ಲ ಇವರಿಗೆ, ಮುತ್ತುಗಳಿಗಾಗಿ ಮುಳುಗುತ್ತಾರೆ ನೀರಿನೊಳಗೆ ಬೆಸ್ತರು ತಮ್ಮ ಹಡಗುಗಳ ಹತ್ತಿ ಹೊರಡುತ್ತಾರೆ ವ್ಯಾಪಾರಿಗಳು, ಪುಟ್ಟಪುಟ್ಟ ಕಲ್ಲುಗಳ ಹೆಕ್ಕಿ ಗುಡ್ಡೆಹಾಕುತ್ತಾರೆ ಈ ಮಕ್ಕಳು ರಹಸ್ಯ ನಿಧಿಗಳ ಹುಡುಕುವುದಿಲ್ಲ ಅವರು ಬಲೆಗಳ ಬೀಸುವುದನ್ನೂ ತಿಳಿದಿಲ್ಲ ಇವರು ನಗುತ್ತ ಉಕ್ಕೇರುತ್ತಿದೆ ಕಡಲು ಕಡಲದಂಡೆಯ ನಗುವೋ ಮಸುಕು ಮಿನುಗು. ತೊಟ್ಟಿಲ ಮಗುವನ್ನು ತೂಗುವ ತಾಯಿ ಹಾಡುವ ಜೋಗುಳದ ಹಾಗೆ ಸಾವನ್ನಡಗಿಸಿಕೊಂಡ ಅಗಾಧ ಅಲೆಗಳು ಹಾಡುತ್ತಿವೆ ಮಕ್ಕಳಿಗೆ ಅರ್ಥವಿಲ್ಲದ ಹಾಡುಗಳ ಹೀಗೆ. ಕಡಲದಂಡೆಯ ನಗುವು ಮಸುಕು ಮಿನುಗೆ ಆಡುತ್ತಿದೆ ಕಡಲು ಮಕ್ಕಳ ಜೊತೆಜೊತೆಗೆ ಸೇರಿದ್ದಾರೆ ಮಕ್ಕಳು ಆದಿಅಂತ್ಯವಿಲ್ಲದ ಲೋಕಗಳ ಕಡಲ ದಂಡೆಯ ಮೇಲೆ, ಹಾದಿಗಳಿಲ್ಲದ ಆಕಾಶದಲ್ಲಿ ಅಲೆಯುತ್ತಿದೆ ಬಿರುಗಾಳಿ, ದಾರಿಗುರುತುಗಳಿಲ್ಲದ ಕಡಲಿನಲ್ಲಿ ಒಡೆದು ಮುಳುಗುತ್ತಿವೆ ಹಡಗು, ಸಾವು ಹಡಗೇರಿದೆ ಮಕ್ಕಳ ಆಟ ಕಳೆಯೇರಿದೆ: ತುದಿಮೊದಲಿಲ್ಲದ ಲೋಕಗಳ ಕಡಲ ದಂಡೆಯ ಮೇಲೆ ನಡೆಯುತ್ತಿದೆ ಮಕ್ಕಳ ಮಹಾಗೋಷ್ಠಿ. * ಮೂಲ ಮಗುವಿನ ಕಣ್ಣುಗಳೊಳಗೆ ಸುಳಿದಾಡುವ ನಿದಿರೆ ಎಲ್ಲಿಂದ ಬರುತ್ತದೆಯೆಂದು ಯಾರಿಗಾದರೂ ಗೊತ್ತೇನು? ಹೌದು, ಹೌದು, ಹೇಳುತ್ತಾರೆ ಹೀಗೆಂದು: ಮಾಯಾನಗರಿಯಿದೆ ಅಲ್ಲೊಂದು, ಆ ನಗರಿಯ ಕಾಡಿನ ನೆರಳುಗಳೆಡೆಯಲ್ಲಿ ಮಿಣುಕುತ್ತವೆ ಮಿಣುಕುಹುಳುಗಳು ಮಿಣಿಮಿಣಿಯೆನ್ನುತ ಮಂಕಾಗಿ, ಎರಡು ಕೋಮಲ ಮೊಗ್ಗುಗಳು ತೂಗುತ್ತಿವೆ ಅಲ್ಲಿ ಮೋಹಕವಾಗಿ, ಅಲ್ಲಿಂದ ಬರುತ್ತದೆ ಆ ನಿದಿರೆ ಮುತ್ತಿಡಲು ಮಗುವಿನ ಕಣ್ಣುಗಳ ಎಂದು. ಮಲಗಿದ ಮಗುವಿನ ತುಟಿಮೇಲೆ ಅದುರುವ ನಗು, ಎಲ್ಲಿಂದ ಬಂತೆಂದು ಯಾರಿಗಾದರೂ ಗೊತ್ತೇನು? ಹೌದು, ಹೌದು, ಹೇಳುತ್ತಾರೆ ಹೀಗೆಂದು: ಬಾಲಚಂದಿರನ ಮಸುಕು ಮಸುಕು ಎಳೆಕಿರಣಗಳು ಮರೆಯಾಗುತ್ತಿರುವ ಮಾಗಿಕಾಲದ ಮೋಡಗಳ ಅಂಚನ್ನು ಮುಟ್ಟಿದವಂತೆ, ಇಬ್ಬನಿ ಹನಿಗಳು ತೋಯಿಸಿದ ಬೆಳಗಿನ ಕನಸಲ್ಲಿ ಆಗ ಮೊದಲ ನಗು ಹುಟ್ಟಿತಂತೆ- ಮಲಗಿದ ಮಗುವಿನ ತುಟಿಮೇಲೆ ತೇಲುವ ನಗು ಇದೇ ಎಂದು ಹೇಳುವರಿವರೆಲ್ಲ. ಮಗುವಿನ ಅಂಗಾಂಗಗಳಲ್ಲಿ ಅರಳಿ ನಗುವ ಹಿತ, ಮೃದು ಹೊಸತನ ಎಲ್ಲಿ ಅಡಗಿ ಕುಳಿತಿತ್ತು ಇಷ್ಟು ಕಾಲ ಯಾರಿಗಾದರೂ ಗೊತ್ತೇನು? ಹೌದು, ಹೌದು: ತಾಯಿಯೆಂಬುವವಳು ಹರೆಯದ ಹುಡುಗಿಯಾಗಿದ್ದಾಗ ಹಿಂದೆ, ಹರಡಿತ್ತು ಅದು ಅವಳೆದೆಯ ತುಂಬ ಕೋಮಲ, ಪ್ರೇಮದ ಮೌನ ರಹಸ್ಯವಾಗಿ- ಮಗುವಿನ ಅಂಗಾಂಗಗಳಲ್ಲಿ ಅರಳಿನಗುವ ಹಿತ, ಮೃದು ತಾಜಾತನ ಬಂದಿದೆ ಅಲ್ಲಿಂದ. *
ಪ್ರತಿಕ್ರಿಯೆಗಾಗಿ : tv9kannadadigital@gmail.com
ಇದನ್ನೂ ನೋಡಿ : Rabindranath Tagore birth anniversary 2022: ರವೀಂದ್ರನಾಥ ಟ್ಯಾಗೋರ್ ಅವರ ಅಪರೂಪದ ಫೋಟೋಗಳು ಇಲ್ಲಿವೆ ನೋಡಿ
Published On - 11:57 am, Sat, 7 May 22