ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?
‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಲೇಖಕರು, ಕವಿಗಳು, ಕಲಾವಿದರು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಪ್ರಾಧ್ಯಾಪಕ, ಲೇಖಕ ಡಾ. ಪುರುಷೋತ್ತಮ ಬಿಳಿಮಲೆ ಅವರ ಆಯ್ಕೆಗಳು ಇಲ್ಲಿವೆ.
ಕೃ: ಮುಟ್ಟು- ಏನಿದರ ಗುಟ್ಟು?
ಸಂ: ಜ್ಯೋತಿ ಇಟ್ನಾಳ್
ಪ್ರ: ಅಂಗಳ ಪ್ರಕಾಶನ
ಅಜ್ಜಿ, ಅಮ್ಮ, ಅತ್ತೆ, ಚಿಕ್ಕಮ್ಮ, ಅತ್ತಿಗೆ, ತಂಗಿ, ಹೆಂಡತಿ ಹೀಗೆ ಪ್ರತಿ ತಿಂಗಳೂ ಮುಟ್ಟಿಗೆ ಒಳಗಾಗುವವರ ಜೊತೆಯೇ ಬೆಳೆದರೂ ಮುಟ್ಟಿನ ಬಗ್ಗೆಏನೂ ಗೊತ್ತಿರದ ನನ್ನ ಬಗ್ಗೆ ನಾನೇ ನಾಚಿಕೊಂಡು ಓದಿದ ಪುಸ್ತಕವಿದು. ಪುಸ್ತಕದಲ್ಲಿಒಟ್ಟು 52 ಲೇಖನಗಳಿವೆ. ಕನ್ನಡದ ಹಿರಿಯ ಮತ್ತು ಕಿರಿಯ ಲೇಖಕರು ಮುಟ್ಟಿಗೆ ಸಂಬಂಧಿಸಿದಂತೆ ತಮ್ಮ ಅನುಭವಗಳನ್ನು ಪ್ರಾಮಾಣಿಕವಾಗಿ ಮತ್ತು ದಿಟ್ಟವಾಗಿ ಇಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜೀವನದಲ್ಲಿ ನಾವು ಕಟ್ಟಿಕೊಂಡಿರುವ ಧರ್ಮ, ಜಾತಿ, ಮೊದಲಾದುವುಗಳೆಲ್ಲ ಮುಟ್ಟಿನ ಇದಿರು ಯಾವ ಪ್ರಯೋಜನಕ್ಕೂ ಬರುವುದಿಲ್ಲ ಎಂಬುದನ್ನು ಇಲ್ಲಿನ ಲೇಖನಗಳು ಖಚಿತಪಡಿಸುತ್ತವೆ. ಮುಟ್ಟಾದ ಹೆಣ್ಣನ್ನು ಮೈಲಿಗೆಯೆಂದು ಭಾವಿಸಿ ಮನೆಯಿಂದ ಹೊರಗಿಡುವ ಪ್ರಕ್ರಿಯೆಯಲ್ಲಿ ಎಲ್ಲರೂ ಸಮಭಾಗಿಗಳೇ ಹೌದು.
ಫ್ರೆಂಚ್ ವಿದ್ವಾಂಸ ಲೂಯಿಸ್ ಡ್ಯೂಮೋ (Louis Dumon ) ಭಾರತೀಯ ಜಾತಿ ಸಮಾಜವು ಹೇಗೆ ‘ಮಡಿ ಮತ್ತು ಮೈಲಿಗೆ’ ಯ ಆಧಾರದಲ್ಲಿ ಕ್ರಿಯಾಶೀಲವಾಗಿದೆ ಎಂಬುದನ್ನು ಪುಸ್ತಕವೊಂದರಲ್ಲಿ ಸೂಕ್ಷ್ಮವಾಗಿ ವಿವರಿಸಿದ್ದಾರೆ. ಪ್ರಸ್ತುತ ಪುಸ್ತಕವು ಅದನ್ನು ಇನ್ನಷ್ಟು ವಿಸ್ತರಿಸುತ್ತದೆ, ಭಾರತೀಯ ಪುರುಷರ ಮಡಿ ಮತ್ತು ಮೈಲಿಗೆಯ ಪರಿಕಲ್ಪನೆಯನ್ನು ಮುಖಕ್ಕೆ ರಾಚುವಂತೆ ವಿವರಿಸುತ್ತದೆ. ಈ ಹಂತದಲ್ಲಿ ಇದಕ್ಕೆ ಬಲಿಯಾದ ಮಹಿಳೆಯ ಆತಂಕ, ನಾಚಿಕೆ, ಅಜ್ಞಾನ ಮತ್ತು ಭಯಗಳನ್ನೂ ನವಿರಾಗಿ ತೆರೆದಿಡುತ್ತದೆ. ಕನ್ನಡದಲ್ಲಿಇಷ್ಟೊಂದು ಒಳ್ಳೆಯ, ಹೊಸ ಬಗೆಯ ಪುಸ್ತಕ ಪ್ರಕಟವಾಗಿದ್ದಕ್ಕೆ ಹೆಮ್ಮೆಯಾಗುತ್ತಿದೆ.
ಕೃ: ಪದಕುಸಿಯೆ ನೆಲವಿಲ್ಲ
ಆಂಗ್ಲಮೂಲ: ನಿಯಾಝ್ ಫಾರೂಕಿ
ಕನ್ನಡಕ್ಕೆ: ಡಿ. ಉಮಾಪತಿ.
ಪ್ರ: ಅಹರ್ನಿಶಿ ಪ್ರಕಾಶನ
ಕಳೆದ ಕೆಲವು ವರ್ಷಗಳಿಂದ ಭಾರತೀಯ ಸಮಾಜವು ಬಹಳ ವೇಗವಾಗಿ ಬದಲಾಗುತ್ತಿದೆ. ಕೋಮುವಾದೀ ರಾಜಕಾರಣವು ನಮ್ಮ ಬದುಕಿನಲ್ಲಿಆಳವಾದ ಗಾಯಗಳನ್ನುಉಂಟುಮಾಡಿದೆ. ದ್ವೇಷಿಸುವವರೂ, ದ್ವೇಷಿಸಿಕೊಂಡವರೂ ಒಟ್ಟಾಗಿಯೇ ನಾಶವಾಗುತ್ತಿದ್ದಾರೆ. ಗಾಂಧೀಜಿಯ ನಾಡಿನಲ್ಲಿ ಹಿಂಸೆಯ ಬಗ್ಗೆ ಹೆಮ್ಮೆಪಟ್ಟುಕೊಳ್ಳುವಂತೆ ಮಾತಾಡಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಜೊತೆಯಾಗಿ ಬದುಕುವವರು ಒಬ್ಬರು ಇನ್ನೊಬ್ಬರನ್ನು ಆಳವಾಗಿ ತಿಳಿದುಕೊಳ್ಳಲು ಪ್ರೇರೇಪಿಸುವ ಪುಸ್ತಕವೊಂದು ನನ್ನನ್ನುಆಳವಾಗಿ ಪ್ರಭಾವಿಸಿದೆ.
ಈ ಪುಸ್ತಕವು 2008ರ ಸೆಪ್ಟಂಬರ 19ರಂದು ದೆಹಲಿಯ ಜಾಮಿಯಾಮಿಲಿಯಾ ವಿಶ್ವವಿದ್ಯಾಲಯದ ಹತ್ತಿರದ ಬಾಟ್ಲಾ ಹೌಸ್ನಲ್ಲಿ ನಡೆದ ಎನ್ಕೌಂಟರ್ನ ಸುತ್ತ ಬೆಳೆಯುತ್ತದೆ. ಪುಸ್ತಕದ ನಿರೂಪಕ ನಿಯಾಝ್ ಬಿಹಾರದಿಂದ ವಿದ್ಯೆ ಕಲಿತು ಉದ್ಯೋಗ ಹಿಡಿಯಲು ದೆಹಲಿಗೆ ಬಂದ ಅಸಂಖ್ಯ ವಿದ್ಯಾರ್ಥಿಗಳಲ್ಲಿಒಬ್ಬ. ಜಾಮಿಯಾದ ಸುತ್ತ ಹರಡಿಕೊಂಡಿರುವ ಚಹಾದಂಗಡಿಗಳಲ್ಲಿ ಗೆಳೆಯರ ಜೊತೆ ಚಹಾ ಕುಡಿಯುತ್ತಾ, ಪಟ್ಟಾಂಗ ಹೊಡೆಯುತ್ತಾ, ಎಲ್ಲ ವಿದ್ಯಾರ್ಥಿಗಳಂತೆ ಬದುಕಿದವನು.
ಹತ್ತಿರದ ಮಸೀದಿ ಬಿಟ್ಟು ದೂರದ ಮಸೀದಿಗೆ ನಡೆದು ಹೋಗಿ ನಮಾಜು ಮಾಡುವವನು. ನನ್ನ ಮಗನೂ ಮಾಡುವ ಹಾಗೆ, ರಾತ್ರಿ ಬೇಗ ನಿದ್ದೆ ಮಾಡುವ ಬದಲು ತಡ ರಾತ್ರಿವರೆಗೆ ಕುಳಿತುಕೊಂಡು ಕೊನೆಗೆ ಬೆಳಗ್ಗೆ ಬೇಗನೇ ಏಳಲಾರದೆ ಎದ್ದು ಕಣ್ಣುಜ್ಜಿಕೊಂಡು ಯೂನಿವರ್ಸಿಟಿಗೆ ಓಡುವವನು. ಅವನ ಕಣ್ಣೆದುರೇ ಬಾಟ್ಲಾ ಹೌಸ್ ಎನ್ಕೌಂಟರ್ ನಡೆಯುತ್ತದೆ. ಅಲ್ಲಿನ ಸಾವುಗಳು ನಿಯಾಝನ ಬದುಕಲ್ಲಿ ಬಗೆಬಗೆಯ ಬಿಕ್ಕಟ್ಟುಗಳನ್ನು ಹುಟ್ಟುಹಾಕುತ್ತವೆ. ಆ ಪ್ರದೇಶದ ಅಮಾಯಕ ಜನರು ಇದ್ದಕ್ಕಿದ್ದಂತೆ ಬಗೆಬಗೆಯ ಸಂಶಯಗಳಿಗೆಒಳಗಾಗುತ್ತಾರೆ. ಇದಕ್ಕೆ ಬೆದರಿದ ಹಲವು ವಿದ್ಯಾರ್ಥಿಗಳು ಓದು ತ್ಯಜಿಸಿ ತಮ್ಮ ರಾಜ್ಯಗಳಿಗೆ ಹಿಂದಿರುಗಿ ಬದುಕನ್ನು ಕಳೆದುಕೊಳ್ಳುತ್ತಾರೆ.
ಎಲ್ಲೆಂದರಲ್ಲಿ ಅಳವಡಿಸಲಾದ ಸಿಸಿಟಿವಿಗಳು ಚಹಾದಂಗಡಿಗಳ ಹರಟೆಗಳನ್ನು ಮಾಯಮಾಡುತ್ತವೆ. ಪೋಲೀಸರು ಮತ್ತು ಮಾಧ್ಯಮಗಳು ಪ್ರತಿದಿನ ಕಟ್ಟುವಕತೆಗಳು, ಜಾಮಿಯಾದ ಸುತ್ತೆಲ್ಲ ಪಸರಿಸಿ ಸ್ಥಳೀಯರನ್ನು ದಿಗ್ಭ್ರಮೆಗೆ ಒಳಗಾಗಿಸುತ್ತವೆ. ಹೀಗೆ ಕ್ಷಿಪ್ರವಾಗಿ ಪಲ್ಲಟಗೊಂಡ ಜಾಮಿಯಾ ಬದುಕಿನ ಸೂಕ್ಷ್ಮಗಳನ್ನು ಈ ಕೃತಿಯು ಅತ್ಯಂತ ಮಾರ್ಮಿಕವಾಗಿ ಕಟ್ಟಿಕೊಡುತ್ತದೆ. ಭಾರತದ ರಾಷ್ಟ್ರೀಯ ಚಳುವಳಿಗೆ ಮಹತ್ವದ ಕೊಡುಗೆಗಳನ್ನು ನೀಡಿ, ಭಾರತ ವಿಭಜನೆಗೆ ವಿರೋಧವನ್ನೂ ಪ್ರಕಟಿಸಿದ, ಜಾಮಿಯಾಮಿಲಿಯಾ ಇಸ್ಲಾಮಿಯಾವು ಕತ್ತಲು ಬೆಳಗಾಗುವುದರೊಳಗೆ ದೇಶದ್ರೋಹಿಯಾದಾಗ ಮುಗ್ಧ ಮುಸ್ಲಿಮರಲ್ಲಿ ಹುಟ್ಟುವ ತಲ್ಲಣ ಮತ್ತು ಆತಂಕಗಳಿಗೆ ಈ ಪುಸ್ತಕ ಭಾಷ್ಯ ಬರೆಯುತ್ತದೆ.
ನಮ್ಮಡನೆಯೇ ಇದ್ದಾಗಲೂ ( ಮಹಿಳೆಯರು ಮತ್ತು ಮುಸ್ಲಿಮರು) ಅವರ ಬಗ್ಗೆ ಏನೂ ತಿಳಿದುಕೊಳ್ಳದ ನಮ್ಮ ಅಜ್ಞಾನಕ್ಕೆ ಬೆಳಕು ಚೆಲ್ಲುವ ಕೃತಿಗಳಿವು.
Published On - 4:05 pm, Tue, 29 December 20