ನರೇಂದ್ರ ಮೋದಿ
ಅಹಮದಾಬಾದ್ ಜನವರಿ 10 : ವೈಬ್ರಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯ (VGGS) 10 ನೇ ಆವೃತ್ತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಬುಧವಾರ ವಿಶ್ವ ನಾಯಕರನ್ನು ಉದ್ದೇಶಿಸಿ ಮಾತನಾಡಿದ್ದು ಗುಜರಾತ್ (Gujarat) ಮತ್ತು ಭಾರತವನ್ನು ಅತ್ಯುತ್ತಮ ಹೂಡಿಕೆ ತಾಣವೆಂದು ಹೇಳಿದ್ದಾರೆ. ಪ್ರಕ್ಷುಬ್ಧ ಜಾಗತಿಕ ಸ್ಥಿತಿಯ ನಡುವೆ ಭಾರತೀಯ ಆರ್ಥಿಕತೆಯು ಬಲವಾದ ಪ್ರತಿರೋಧವನ್ನು ಪ್ರದರ್ಶಿಸುತ್ತಿದೆ. ಕಳೆದ 10 ವರ್ಷಗಳಲ್ಲಿ ರಚನಾತ್ಮಕ ಸುಧಾರಣೆಗಳ ಮೇಲೆ ಅವರ ಸರ್ಕಾರವು ಗಮನಹರಿಸಿರುವುದು ಇದರ ಹಿಂದಿನ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯಲ್ಲಿ ಮೋದಿ ಭಾಷಣದ ಮುಖ್ಯಾಂಶಗಳು
- ಭಾರತ ಸ್ವಾತಂತ್ರ್ಯ ಪಡೆದು ಇತ್ತೀಚೆಗಷ್ಟೇ 75 ವರ್ಷ ಪೂರೈಸಿದೆ. ಈಗ ಭಾರತವು ಮುಂದಿನ 25 ವರ್ಷಗಳ ಗುರಿಯನ್ನು ಸಾಧಿಸಲು ಶ್ರಮಿಸುತ್ತಿದೆ. 100ನೇ ಸ್ವಾತಂತ್ರ್ಯೋತ್ಸವ ಆಚರಿಸುವ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಗುರಿ ಹೊಂದಿದ್ದೇವೆ. ಆದ್ದರಿಂದ, ಈ 25 ವರ್ಷಗಳ ಅವಧಿಯು ಭಾರತದ ಅಮೃತ ಕಾಲವಾಗಿದೆ.
- ಈ ಅಮೃತ ಕಾಲದಲ್ಲಿ ಇದು ಮೊದಲ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯಾಗಿದೆ. ಆದ್ದರಿಂದ, ಇದು ಇನ್ನೂ ಹೆಚ್ಚು ಮಹತ್ವದ್ದಾಗಿದೆ. ಈ ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ 100 ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾರತದ ಈ ಅಭಿವೃದ್ಧಿ ಪಯಣದಲ್ಲಿ ನಿರ್ಣಾಯಕ ಪಾಲುದಾರರಾಗಿದ್ದಾರೆ.
- ಈ ಶೃಂಗಸಭೆಯಲ್ಲಿ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಭಾಗವಹಿಸಿರುವುದು ನಮಗೆ ಅತ್ಯಂತ ಸಂತೋಷದ ವಿಷಯವಾಗಿದೆ. ವೈಬ್ರಂಟ್ ಗುಜರಾತ್ ಶೃಂಗಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರ ಉಪಸ್ಥಿತಿಯು ಭಾರತ ಮತ್ತು ಯುಎಇ ನಡುವಿನ ಸದಾ ಗಟ್ಟಿಯಾಗುತ್ತಿರುವ ಸಂಬಂಧಗಳ ಸಂಕೇತವಾಗಿದೆ.
- ಯುಎಇ ಕಂಪನಿಗಳಿಂದ ಭಾರತದ ಬಂದರು ಮೂಲಸೌಕರ್ಯದಲ್ಲಿ ಶತಕೋಟಿ ಡಾಲರ್ ಮೌಲ್ಯದ ಹೊಸ ಹೂಡಿಕೆಗಳಿಗೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
- ನಾನು ಟಿಮೋರ್ ಲೆಸ್ಟೆ ಅಧ್ಯಕ್ಷ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಜೋಸ್ ರಾಮೋಸ್-ಹೊರ್ಟಾ ಅವರನ್ನು ಭಾರತಕ್ಕೆ ಸ್ವಾಗತಿಸುತ್ತೇನೆ. ಭಾರತ-ಆಸಿಯಾನ್ ಸಹಕಾರದಲ್ಲಿ, ಟಿಮೋರ್ ಲೆಸ್ಟೆ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
- ಸುಸ್ಥಿರ ಉದ್ಯಮ ಮತ್ತು ಮೂಲಸೌಕರ್ಯ ಮತ್ತು ಉತ್ಪಾದನೆಯು ಭಾರತದ ಆದ್ಯತೆಯಾಗಿದೆ; AI ಮತ್ತು ನಾವೀನ್ಯತೆಯು ದೇಶಕ್ಕೆ ಆದ್ಯತೆಯಾಗಿದೆ.
- ಭಾರತವು ಸುಸ್ಥಿರ ಶಕ್ತಿ ಮತ್ತು ಸೌರಶಕ್ತಿಯ ಕಡೆಗೆ ಕೆಲಸ ಮಾಡುತ್ತಿದೆ. ಭಾರತದಲ್ಲಿ ಡಿಜಿಟಲ್ ಇಂಡಿಯಾ ಮಿಷನ್ ದೇಶದ ಜೀವನ ಮತ್ತು ವ್ಯವಹಾರಕ್ಕೆ ಸಹಾಯ ಮಾಡಿದೆ.
- ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಳೆದ 10 ವರ್ಷಗಳಲ್ಲಿ 13.5 ಕೋಟಿಗೂ ಹೆಚ್ಚು ಜನರು ಬಡತನ ರೇಖೆಗಿಂತ ಮೇಲಿದ್ದಾರೆ. ಅಭಿವೃದ್ಧಿಯತ್ತ ನಮ್ಮ ಪಯಣದಲ್ಲಿ ನೀವೆಲ್ಲರೂ ಭಾಗಿಗಳಾಗಬೇಕೆಂದು ನಾನು ಕೋರುತ್ತೇನೆ.
- ಇಂದು ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. 10 ವರ್ಷಗಳ ಹಿಂದೆ ಭಾರತ 11ನೇ ಸ್ಥಾನದಲ್ಲಿತ್ತು. ಇಂದು, ಎಲ್ಲಾ ಪ್ರಮುಖ ಏಜೆನ್ಸಿಗಳು ಮುಂಬರುವ ವರ್ಷಗಳಲ್ಲಿ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ಅಂದಾಜಿಸಿದೆ. ಪ್ರಪಂಚದಾದ್ಯಂತ ಜನರು ತಮ್ಮ ವಿಶ್ಲೇಷಣೆಯನ್ನು ಮಾಡಲಿ, ಆದರೆ ಅದು ಸಂಭವಿಸುತ್ತದೆ ಎಂಬುದೇ ನನ್ನ ಗ್ಯಾರಂಟಿ.
- ವೈಬ್ರೆಂಟ್ ಗುಜರಾತ್ ಶೃಂಗಸಭೆಯ ಭಾಗಿಯಾದ ನಿಮಗೆಲ್ಲರಿಗೂ ಧನ್ಯವಾದಗಳು, ನಿಮ್ಮ ಕನಸುಗಳು ನನ್ನ ಪ್ರತಿಜ್ಞೆ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ.
ಇದನ್ನೂ ಓದಿ:Narendra Modi: ಸ್ವಾತಂತ್ರ್ಯ ಶತಮಾನೋತ್ಸವದ ವೇಳೆ ಮುಂದುವರಿದ ದೇಶವನ್ನಾಗಿಸುವ ಗುರಿ: ನರೇಂದ್ರ ಮೋದಿ
ಇದಾದ ನಂತರ ಪ್ರಧಾನಿ ಮೋದಿ ಗಿಫ್ಟ್ ಸಿಟಿಗೆ ಪ್ರಯಾಣಿಸಲಿದ್ದಾರೆ, ಅಲ್ಲಿ ಸಂಜೆ 5.15 ರ ಸುಮಾರಿಗೆ ಅವರು ಗ್ಲೋಬಲ್ ಫಿನ್‌ಟೆಕ್ ಲೀಡರ್‌ಶಿಪ್ ಫೋರಮ್‌ನಲ್ಲಿ ಪ್ರಮುಖ ವ್ಯಾಪಾರ ಮುಖಂಡರೊಂದಿಗೆ ಸಂವಾದ ನಡೆಸಲಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ