ಚೆನ್ನೈ: ನಿವಾರ್ ಮತ್ತು ಬುವೇರಿ ಚಂಡಮಾರುತಗಳಿಗೆ ನಲುಗಿರುವ ತಮಿಳುನಾಡಿನ ಜನರಿಗೆ ‘ಅಮ್ಮಾ ಕ್ಯಾಂಟೀನ್’ ವರದಾನವಾಗಿ ಪರಿಣಮಿಸಿದೆ. ಒಂದರ ಹಿಂದೊಂದರಂತೆ ಅಬ್ಬರಿಸಿದ ಚಂಡಮಾರುತಗಳು ತಮಿಳುನಾಡಿನಲ್ಲಿ ಅಪಾರ ಹಾನಿ ಉಂಟುಮಾಡಿದ್ದವು.
ಪ್ರವಾಹ ಪೀಡಿತ ಪ್ರದೇಶಗಳಲ್ಲಿರುವ ಅಮ್ಮಾ ಕ್ಯಾಂಟೀನ್ಗಳಲ್ಲಿ ಉಚಿತ ಆಹಾರ ವಿತರಿಸುವುದಾಗಿ ತಮಿಳುನಾಡು ಸರ್ಕಾರ ಘೋಷಿಸಿತ್ತು. ಘೋಷಿಸಿದ 12 ಘಂಟೆಗಳಲ್ಲಿ ಚೆನ್ನೈನಲ್ಲಿ ಇಂದು ಬೆಳಿಗ್ಗೆ 11 ಲಕ್ಷ ಜನರು ಉಪಹಾರ ಮಾಡಿರುವುದಾಗಿ ಸಚಿವ ಡಿ.ಜಯಕುಮಾರ್ ತಿಳಿಸಿದ್ದಾರೆ.
ನಿವಾರ್ ಮತ್ತು ಬುವೇರಿ ಚಂಡಮಾರುತಗಳು ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಹಾನಿಯುಂಟು ಮಾಡಿವೆ. ನಿವಾರ್ ಚಂಡಮಾರುತದ ವೇಳೆ 2.50 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹ ಪೀಡಿತ ಪ್ರದೇಶಗಳಿಂದ ಸ್ಥಳಾಂತರವಾಗಿದ್ದರು. 100ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದವು. ಚಂಡಮಾರುತದಿಂದ ಆದ ಹಾನಿಯ ಬಗ್ಗೆ ಪ್ರಧಾನಿ ಮೋದಿ ತಮಿಳುನಾಡು ಸಿಎಂ ಕೆ ಪಳನಿಸ್ವಾಮಿಯರಿಗೆ ಕರೆ ಮಾಡಿ ವಿವರ ಪಡೆದಿದ್ದರು.
ಅಲ್ಲದೇ ಬುವೇರಿ ಚಂಡಮಾರುತವೂ ತಮಿಳುನಾಡನ್ನು ಹೈರಾಣು ಮಾಡಿತ್ತು. ದಕ್ಷಿಣ ತಮಿಳುನಾಡಿನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿತ್ತು. 217 ಪುನರ್ವಸತಿ ಕೇಂದ್ರಗಳಲ್ಲಿ 15,840 ಜನರಿಗೆ ವಸತಿ ಕಲ್ಪಿಸಲಾಗಿತ್ತು.
ಅಮ್ಮಾ ಕ್ಯಾಂಟೀನ್ನಲ್ಲಿ ಕೊರೊನಾ ಲಾಕ್ಡೌನ್ ಸಮಯದಲ್ಲೂ ಉಚಿತ ಆಹಾರ ವಿತರಿಸಲಾಗಿತ್ತು ಎಂದು ಇಲ್ಲಿ ಸ್ಮರಿಸಬಹುದು.