Delhi Chalo: ಕೇಂದ್ರದ ವಿರುದ್ಧ ವಿಪಕ್ಷಗಳ ಒಗ್ಗಟ್ಟು ಮಂತ್ರ, NDA ಮೈತ್ರಿಯಲ್ಲಿ ಬಿರುಕು?

| Updated By: ganapathi bhat

Updated on: Dec 07, 2020 | 5:00 PM

ಸತತ ಹನ್ನೆರಡನೇ ದಿನಕ್ಕೆ ಕಾಲಿಟ್ಟಿರುವ ದೆಹಲಿ ಚಲೋಗೆ ಪ್ರತಿಪಕ್ಷಗಳು ಬೆಂಬಲ ಘೋಷಿಸಿವೆ. ಕಾಂಗ್ರೆಸ್, ಡಿಎಂಕೆ,ಆರ್​ಜೆಡಿ,ಸಮಾಜವಾದಿ ಪಕ್ಷ, ಆರ್​ಎಸ್​ಪಿ,ಸಿಪಿಐ,ಸಿಪಿಐ(ಎಂ), ಸಿಪಿಐ(ಎಂಎಲ್), ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಮತ್ತು ಗುಫ್ಕಾರ್ ಮೈತ್ರಿಕೂಟದ ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್ ಮುಂತಾದ 11 ಪಕ್ಷಗಳು ಪಂಜಾಬ್ ರೈತರ ಪ್ರತಿಭಟನೆಗೆ ಬೆಂಬಲ ನೀಡಿವೆ.

Delhi Chalo: ಕೇಂದ್ರದ ವಿರುದ್ಧ ವಿಪಕ್ಷಗಳ ಒಗ್ಗಟ್ಟು ಮಂತ್ರ, NDA ಮೈತ್ರಿಯಲ್ಲಿ ಬಿರುಕು?
ದೆಹಲಿ ಚಲೋವಿನ 12ನೇ ದಿನದ ಬೆಳಿಗ್ಗೆ ಪೊಲೀಸರು ರಸ್ತೆ ತಡೆದಿರುವುದು
Follow us on

ದೆಹಲಿ: ಸತತ 12ನೇ ದಿನಕ್ಕೆ ಕಾಲಿಟ್ಟಿರುವ ದೆಹಲಿ ಚಲೋಗೆ ಪ್ರತಿಪಕ್ಷಗಳು ಬೆಂಬಲ ಘೋಷಿಸಿವೆ. ಸೋನಿಯಾ ಗಾಂಧಿ, ಎಂ ಕೆ ಸ್ಟಾಲಿನ್, ಎನ್​ಸಿಪಿ ಅಧ್ಯಕ್ಷ ಶರದ್ ಪವಾರ್, ಆರ್​ಜೆಡಿಯ ತೇಜಸ್ವಿ ಯಾದವ್ ಮುಂತಾದ ವಿವಿಧ ಪಕ್ಷಗಳ ನಾಯಕರು ಬೆಂಬಲ ಪತ್ರಕ್ಕೆ ಸಹಿ ಹಾಕಿದ್ದಾರೆ.

ಯಾವ ಪಕ್ಷಗಳ ಬೆಂಬಲ?
ಕಾಂಗ್ರೆಸ್, ಡಿಎಂಕೆ, ಆರ್​ಜೆಡಿ, ಸಮಾಜವಾದಿ ಪಕ್ಷ, ಆರ್​ಎಸ್​ಪಿ, ಸಿಪಿಐ, ಸಿಪಿಐ(ಎಂ), ಸಿಪಿಐ(ಎಂಎಲ್), ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಮತ್ತು ಗುಫ್ಕಾರ್ ಮೈತ್ರಿಕೂಟದ ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್ ಮುಂತಾದ 11 ಪಕ್ಷಗಳು ಪಂಜಾಬ್ ರೈತರ ಪ್ರತಿಭಟನೆಗೆ ಬೆಂಬಲ ನೀಡಿವೆ. ಈಗಾಗಲೇ ಆಮ್ ಆದ್ಮಿ ಪಾರ್ಟಿ, ತೃಣಮೂಲ ಕಾಂಗ್ರೆಸ್, ಟಿಆರ್‌ಎಸ್, ಶಿವಸೇನಾ, ಅಕಾಲಿದಳಗಳೂ ಬೆಂಬಲ ನೀಡಿವೆ. ಡಿ. 8ರಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಕಾಂಗ್ರೆಸ್ ಘೋಷಿಸಿದೆ.

ಎನ್​ಡಿಎ ಮೈತ್ರಿಕೂಟದ ಪಕ್ಷದಿಂದಲೂ ಬೆಂಬಲ!
ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟದ ಭಾಗವಾಗಿರು ರಾಷ್ಟ್ರೀಯ ಲೋಕತಾಂತ್ರಿಕ ಪಾರ್ಟಿ (ಆರ್​ಎಲ್​ಪಿ) ಸಹ ದೆಹಲಿ ಚಲೋಗೆ ಬೆಂಬಲ ನೀಡಿದೆ. ಟ್ವಿಟ್ಟರ್​ನಲ್ಲಿ ಬೆಂಬಲ ವ್ಯಕ್ತಪಡಿಸಿ ವಿಡಿಯೋ ಪ್ರಕಟಿಸಿರುವ ಆರ್​ಎಲ್​ಪಿ ಸಂಸದ ಹನುಮಾನ್ ಬೇನಿವಾಲ್, ನೂತನ ಕೃಷಿ ಕಾಯ್ದೆಗಳನ್ನು ‘ಕಪ್ಪು ಕಾನೂನುಗಳು’ ಎಂದು ಸಂಬೋಧಿಸಿದ್ದಾರೆ. ಅಲ್ಲದೇ ಎನ್​ಡಿಎ ಮೈತ್ರಿಕೂಟಕ್ಕೆ ಬೆಂಬಲ ಮುಂದುವರಿಕೆಯ ಕುರಿತು ನಿರ್ಧಾರ ಕೈಗೊಳ್ಳಲು ಡಿಸೆಂಬರ್ 8ರಂದು ಪಕ್ಷದ ಸಭೆ ಕರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಎನ್​ಡಿಎಯಲ್ಲಿ ಒಡಕು ಹುಟ್ಟಿಸುತ್ತಾ ದೆಹಲಿ ಚಲೋ?
ಈ ಮುನ್ನವೇ ಹನುಮಾನ್ ಬೇನಿವಾಲ್ ಅವರು ಕೇಂದ್ರ ಸರ್ಕಾರದ ಬಳಿ ನೂತನ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿತ್ತು.ಮಾಜಿ ಬಿಜೆಪಿ ನಾಯಕರೂ ಆಗಿರುವ ಹನುಮಾನ್ ಬೇನಿವಾಲ್, 2018ರಲ್ಲಿ ರಾಷ್ಟ್ರೀಯ ಜನತಾಂತ್ರಿಕ ಪಾರ್ಟಿಯನ್ನು ಸ್ಥಾಪಿಸಿದ್ದರು.ರಾಜಸ್ಥಾನ ಮೂಲದ ಆರ್​ಜೆಪಿಯನ್ನು ಲೋಕಸಭೆಯಲ್ಲಿ ಹನುಮಾನ್ ಅವರೇ ಪ್ರತಿನಿಧಿಸುತ್ತಾರೆ. ರಾಜಸ್ಥಾನ ವಿಧಾನಸಭೆಗೆ ಮೂವರು ಶಾಸಕರು ಈ ಪಕ್ಷದಿಂದ ಆಯ್ಕೆಯಾಗಿದ್ದಾರೆ.ತಮ್ಮ ಪಕ್ಷದ ಕಾರ್ಯಕರ್ತರ ಬಳಿ ದೆಹಲಿ ಚಲೋದಲ್ಲಿ ಶಾಂತಿಯುತವಾಗಿ ಪಾಲ್ಗೊಳ್ಳುವಂತೆ ಬೇನಿವಾಲ್ ಮನವಿ ಮಾಡಿದ್ದಾರೆ.

ಈಗಾಗಲೇ ದೋಸ್ತಿ ಬಿಟ್ಟಿರುವ ಪಂಜಾಬಿನ ಶಿರೋಮಣಿ ಅಕಾಲಿದಳ
ನೂತನ ಕೃಷಿ ಕಾಯ್ದೆ ಮಂಡನೆಯ ನಂತರ ಎನ್​ಡಿಎ ಮೈತ್ರಿಕೂಟಕ್ಕೆ ಟಾಟಾ ಹೇಳಿತ್ತು. ಕೇಂದ್ರ ಸಚಿವ ಸಂಪುಟದಲ್ಲಿ ಆಹಾರ ಸಂಸ್ಕರಣ ಖಾತೆಯ ಸಚಿವರಾಗಿದ್ದ ಅಕಾಲಿದಳದ ಹರ್​ಸಿಮ್ರತ್ ಕೌರ್ ಬಾದಲ್ ಅವರು ಸೆಪ್ಟೆಂಬರ್17ರಂದು ರಾಜೀನಾಮೆ ಸಲ್ಲಿಸಿದ್ದರು.

ಬಂದ್​ ಬೆಂಬಲಿಸುವುದಾಗಿ ರಾಹುಲ್ ಗಾಂಧಿ ಟ್ವೀಟ್
ಭಾರತ್ ಬಂದ್​ಗೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ. ಅನ್ನದಾತರ ಮೇಲೆ ದಬ್ಬಾಳಿಕೆ, ಅನ್ಯಾಯ ಹೆಚ್ಚಾಗಿದೆ. ಅದಾನಿ, ಅಂಬಾನಿ ಕೃಷಿ ಕಾನೂನು ಹಿಂಪಡೆಯಿರಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟ್ಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ನೂತನ ಕೃಷಿ ಕಾಯ್ದೆಗಳು ನಿಧಾನವಾಗಿ ಎನ್​ಡಿಎ ಮೈತ್ರಿಕೂಟದಲ್ಲೇ ಒಡಕು ಹುಟ್ಟಿಸುವ ಲಕ್ಷಣ ಸ್ಪಷ್ಟವಾಗುತ್ತಿದೆ.

Published On - 12:33 pm, Mon, 7 December 20