ಹೊಟ್ಟೆಪಾಡಿಗಾಗಿ ಟ್ರಾಫಿಕ್‌ ಸಿಗ್ನಲ್‌ನಲ್ಲಿ ಹೂ ಮಾರುತ್ತಿದ್ದ ಬಾಲಕಿಯನ್ನ ಅಪಹರಿಸಿ ಅತ್ಯಾಚಾರ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದೆ. ಹೊಟ್ಟೆಪಾಡಿಗಾಗಿ ಟ್ರಾಫಿಕ್​​ ಸಿಗ್ನಲ್​​ನಲ್ಲಿ ಹೂ ಮಾರುತ್ತಿದ್ದ ಪುಟ್ಟ ಬಾಲಕಿ ಮೇಲೆ ಆಟೋ ಚಾಲಕನ ಕಾಮದ ಕಣ್ಣು ಬಿದ್ದಿದ್ದು, ಆಕೆಯನ್ನು ಪುಸಲಾಯಿಸಿ ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಪೊಲೀಸರು ಬರೋಬ್ಬರಿ 300 ಸಿಸಿಟಿವಿಗಳನ್ನು ಪರಿಶೀಲಿಸಿ ಕಾಮುಕ ಆಟೋ ಡ್ರೈವರ್​​​ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಟ್ಟೆಪಾಡಿಗಾಗಿ ಟ್ರಾಫಿಕ್‌ ಸಿಗ್ನಲ್‌ನಲ್ಲಿ ಹೂ ಮಾರುತ್ತಿದ್ದ ಬಾಲಕಿಯನ್ನ ಅಪಹರಿಸಿ ಅತ್ಯಾಚಾರ
ಪ್ರಾತಿನಿಧಿಕ ಚಿತ್ರ

Updated on: Jan 22, 2026 | 10:21 PM

ನವದೆಹಲಿ, (ಜನವರಿ 22): ಹೊಟ್ಟೆಪಾಡಿಗಾಗಿ ಟ್ರಾಫಿಕ್ ಸಿಗ್ನಲ್‌ನಲ್ಲಿ ಹೂವು ಮಾರುತ್ತಿದ್ದ  ಪುಟ್ಟ ಬಾಲಕಿಯನ್ನು (Girl) ಕಾಮುಕನೋರ್ವ ಅಪಹರಿಸಿ ಅತ್ಯಾಚಾರವೆಸಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.  ಜನವರಿ 11ರಂದು ಕೇಂದ್ರ ದೆಹಲಿ(New Delhi) ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಗುಲಾಬಿ ಹೂ ಮಾರುತ್ತಿದ್ದ 11 ವರ್ಷದ ಬಾಲಕಿಯನ್ನು ಆಟೋ ಚಾಲಕನೋರ್ವ ಅಪಹರಿಸಿ ಅತ್ಯಾಚಾರ ಎಸಗಿದ್ದಾನೆ.  ಬಳಿಕ ಬಾಲಕಿಗೆ ಪ್ರಜ್ಞೆ ತಪ್ಪುತ್ತಿದ್ದಂತೆ ಆಕೆಯನ್ನು ಅರಣ್ಯ ಪ್ರದೇಶದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಬಿಟ್ಟು ಪರಾರಿಯಾಗಿದ್ದ. ಬಳಿಕ ಪೊಲೀಸರು 300 ಸಿಸಿಟಿವಿ ಪರಿಶೀಲಿಸಿ ಕಾಮುಕನ ಹೆಡೆಮುರಿ ಕಟ್ಟುವಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 40 ವರ್ಷದ ದುರ್ಗೇಶ್ ಬಂಧಿತ ಕಾಮುಕ.

ಹೂ ಮಾರುವ ಬಾಲಕಿ ಮೇಲೆ ಬಿದ್ದಿತ್ತು ಕಾಮುಕನ ಕಣ್ಣು

ಜನವರಿ 11 ರಂದು ದೆಹಲಿ ಪ್ರಸಾದ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪುಟ್ಟ ಹುಡುಗಿ ಗುಲಾಬಿ ಹೂ ಮಾರುತ್ತಾ ಸಿಗ್ನಲ್ ಬಳಿ ನಿಂತಿರುವುದನ್ನು ಆರೋಪಿ ದುರ್ಗೇಶ್ ನೋಡಿದ್ದಾನೆ. ಬಳಿಕ ತನ್ನ ಆಟೋದಲ್ಲಿದ್ದ ಪ್ರಯಾಣಿಕರನ್ನು ಇಳಿಸಿ ಬಾಲಕಿ ಬಳಿ ಹೋಗಿದ್ದು, ಎಲ್ಲಾ ಹೂವುಗಳನ್ನು ಮಾರಲು ಸಹಾಯ ಮಾಡುವುದಾಗಿ ನಂಬಿಸಿ ಬಾಲಕಿಯನ್ನು ಆಟೋದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಮುಸ್ಲಿಂ ಯುವಕನ ಪ್ರೀತಿಸಿದ್ದಕ್ಕೆ ತಂಗಿಯೆಂದೂ ನೋಡದೆ ಇಬ್ಬರನ್ನೂ ಬರ್ಬರವಾಗಿ ಹತ್ಯೆಗೈದ ಸಹೋದರರು

ವಿಚಾರಣೆ ವೇಳೆ ಆರೋಪಿ ದುರ್ಗೇಶ್ , ಈ ಹಿಂದೆ ಟ್ರಾಫಿಕ್ ಸಿಗ್ನಲ್‌ನಲ್ಲಿ ಹುಡುಗಿಯನ್ನು ಗಮನಿಸಿ ಅಪಹರಣಕ್ಕೆ ಪ್ಲ್ಯಾನ್ ರೂಪಿಸಿದ್ದಾಗಿ ಬಾಯ್ಬಿಟ್ಟಿದ್ದಾನೆ. ಕಾಮುಕ ತಪ್ಪೊಪ್ಪಿಗೆಯ ಬಳಿಕ ಪೊಲೀಸರು ರಕ್ತದ ಕಲೆಗಳಿರುವ ಬಟ್ಟೆಗಳು ಮತ್ತು ಇತರೆ ಸಾಕ್ಷಿಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆಯಿಂದ ಆಘಾತಕ್ಕೊಳಗಾದ ಮಗುವಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲಾಗುತ್ತಿದೆ.

300 ಸಿಸಿಟಿವಿ ಕ್ಯಾಮೆರಾ ಜಾಲಾಡಿದ ಖಾಕಿ

ಆರೋಪಿಯ ಪತ್ತೆಗಾಗಿ ಪೊಲೀಸರು ಸುಮಾರು 15 ಮಾರ್ಗಗಳಲ್ಲಿ ಅಳವಡಿಸಲಾದ ಸುಮಾರು 300 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಒಂದು ದೃಶ್ಯದಲ್ಲಿ ಹುಡುಗಿ ಆಟೋ ಹತ್ತುತ್ತಿರುವುದು ಕಂಡುಬಂದಿದೆ. ನಂತರ ಆ ವಾಹನದ ನೋಂದಣಿ ಸಂಖ್ಯೆಯನ್ನು ಪತ್ತೆಹಚ್ಚಲಾಯಿತು. ಇದು ಅದೇ ದಿನ ಆರೋಪಿಯನ್ನು ಗುರುತಿಸಿ ಬಂಧಿಸಲು ಸಹಾಯವಾಗಯ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಪೊಲೀಸರು ಅಪಹರಣ ಮತ್ತು ಅತ್ಯಾಚಾರ, ಪೋಕ್ಸೊ ಕಾಯ್ದೆ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ