AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದಲ್ಲೇ ಹೆಚ್ಚು ಟ್ರಾಫಿಕ್ ಇರುವ ನಗರ: ಬೆಂಗಳೂರಿಗೆ 2ನೇ ಸ್ಥಾನ!

Bangalore Traffic: ಬೆಂಗಳೂರು ಟ್ರಾಫಿಕ್ ಸಮಸ್ಯೆ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಆದರೆ ಇದೀಗ ಸಿಲಿಕಾನ್ ಸಿಟಿ ಸಂಚಾರ ದಟ್ಟಣೆಯ ಕಾರಣಕ್ಕಾಗಿ ವಿಶ್ವಮಟ್ಟದಲ್ಲಿ ಮತ್ತೆ ಸದ್ದು ಮಾಡಿದೆ. ಟ್ರಾಫಿಕ್ ಸಮಸ್ಯೆಯಲ್ಲಿ ಬೆಂಗಳೂರು ವಿಶ್ವದಲ್ಲೇ ಟಾಪ್ 2 ನಗರವಾಗಿ ಹೊರಹೊಮ್ಮಿದೆ. ಪುಣೆ, ಮುಂಬೈ ಕೂಡ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ.

ವಿಶ್ವದಲ್ಲೇ ಹೆಚ್ಚು ಟ್ರಾಫಿಕ್ ಇರುವ ನಗರ: ಬೆಂಗಳೂರಿಗೆ 2ನೇ ಸ್ಥಾನ!
ಸಾಂದರ್ಭಿಕ ಚಿತ್ರ
Shivaprasad B
| Edited By: |

Updated on: Jan 23, 2026 | 9:12 AM

Share

ಬೆಂಗಳೂರು, ಜನವರಿ 23: ವಿಶ್ವದ ಅತಿಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು (Bangalore Traffic) ಎರಡನೇ ಸ್ಥಾನ ಪಡೆದಿದೆ. ನೆದರ್ಲೆಂಡ್ಸ್ ಮೂಲದ ‘ಟಾಮ್‌ಟಾಮ್’ ಸಂಸ್ಥೆ ಬಿಡುಗಡೆ ಮಾಡಿರುವ 2025ರ ಸಂಚಾರ ಸೂಚ್ಯಂಕ (Traffic Index) ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ. ಸಂಚಾರ ದಟ್ಟಣೆ ಪಟ್ಟಿಯಲ್ಲಿ ಮೆಕ್ಸಿಕೊ ನಗರ ಮೊದಲ ಸ್ಥಾನದಲ್ಲಿದ್ದರೆ, ಭಾರತದ ಸಿಲಿಕಾನ್ ಸಿಟಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ.

ವರದಿ ಪ್ರಕಾರ, 2025ರಲ್ಲಿ ಬೆಂಗಳೂರಿನ ಸರಾಸರಿ ಸಂಚಾರ ದಟ್ಟಣೆ ಶೇ 74.4ಕ್ಕೆ ತಲುಪಿದೆ. 2024ರಲ್ಲಿ ಇದು ಶೇ 72.7 ಆಗಿದ್ದು, ಒಂದೇ ವರ್ಷದಲ್ಲಿ ಶೇ 1.7ರಷ್ಟು ದಟ್ಟಣೆ ಹೆಚ್ಚಾಗಿದೆ.

ಬೆಂಗಳೂರು ಟ್ರಾಫಿಕ್ ಸಮಸ್ಯೆ ಹೆಚ್ಚಳಕ್ಕೆ ಕಾರಣವೇನು?

ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ, ರಸ್ತೆ ಮೂಲಸೌಕರ್ಯದ ಒತ್ತಡ ಹಾಗೂ ನಿರಂತರ ಕಾಮಗಾರಿಗಳು ಸಂಚಾರ ಸಮಸ್ಯೆ ಮತ್ತಷ್ಟು ತೀವ್ರಗೊಳಿಸುತ್ತಿವೆ ಎನ್ನಲಾಗಿದೆ.

ವಾಹನ ಸಂಚಾರದ ಸರಾಸರಿ ವೇಗದಲ್ಲೂ ಸ್ವಲ್ಪ ಬದಲಾವಣೆ ಕಂಡುಬಂದಿದೆ. 2024ರಲ್ಲಿ ಗಂಟೆಗೆ 16.6 ಕಿಲೋಮೀಟರ್ ಇದ್ದ ಸರಾಸರಿ ವೇಗ, 2025ರಲ್ಲಿ 17.6 ಕಿಲೋಮೀಟರ್‌ಗೆ ಏರಿಕೆಯಾಗಿದೆ. ಆದರೂ ಸಂಚಾರದ ಒತ್ತಡ ಕಡಿಮೆಯಾಗಿಲ್ಲ. 2025ರಲ್ಲಿ 15 ನಿಮಿಷಗಳಲ್ಲಿ ಸರಾಸರಿ 4.4 ಕಿಲೋಮೀಟರ್ ಸಂಚರಿಸಬಹುದಾಗಿದ್ದು, 2024ರಲ್ಲಿ ಇದು 4.2 ಕಿಲೋಮೀಟರ್ ಆಗಿತ್ತು.

10 ಕಿಲೋಮೀಟರ್ ಪ್ರಯಾಣಕ್ಕೆ 36 ನಿಮಿಷ!

ಬೆಂಗಳೂರು ನಗರದಲ್ಲಿ 10 ಕಿಲೋಮೀಟರ್ ದೂರ ಕ್ರಮಿಸಲು ಸರಾಸರಿ 36 ನಿಮಿಷ 9 ಸೆಕೆಂಡ್ ಸಮಯ ಬೇಕಾಗುತ್ತಿದೆ ಎಂದು ವರದಿ ತಿಳಿಸಿದೆ. ಇದು ದಿನನಿತ್ಯದ ಪ್ರಯಾಣಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಸಂಚಾರ ದಟ್ಟಣೆ ಪಟ್ಟಿಯಲ್ಲಿ ದುಬೈ ಮೂರನೇ ಸ್ಥಾನದಲ್ಲಿದ್ದು, ಪೊಲ್ಯಾಂಡ್‌ನ ಲೊಡ್ಜ್ ನಗರ ನಾಲ್ಕನೇ ಸ್ಥಾನ ಪಡೆದಿದೆ. ಭಾರತದ ಪುಣೆ ನಗರ ಐದನೇ ಸ್ಥಾನದಲ್ಲಿದ್ದರೆ, ಮುಂಬೈ 18ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಮ್ಯಾಪಲ್ಸ್ ಆ್ಯಪ್​ನಲ್ಲಿ ಸಿಗುತ್ತೆ ಬೆಂಗಳೂರು ಟ್ರಾಫಿಕ್ ಸಿಗ್ನಲ್ ಟೈಮಿಂಗ್ಸ್ ಲೈವ್ ಮಾಹಿತಿ! ದೇಶದಲ್ಲೇ ಮೊದಲು

ಬೆಂಗಳೂರು ವಿಶ್ವದ ಪ್ರಮುಖ ಐಟಿ ನಗರವಾಗಿರುವುದರ ಜೊತೆಗೆ, ಸಂಚಾರ ದಟ್ಟಣೆಯಲ್ಲೂ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ನಗರಾಭಿವೃದ್ಧಿ ಹಾಗೂ ಸಂಚಾರ ನಿರ್ವಹಣೆಯ ಕುರಿತು ಹೊಸ ಪ್ರಶ್ನೆಗಳನ್ನು ಎತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ