ಮುಂಗಾರು ಅಧಿವೇಶನದಲ್ಲಿ ಅಶಿಸ್ತು ತೋರಿದ್ದ ವಿಪಕ್ಷದ 12 ಸಂಸದರು ರಾಜ್ಯಸಭೆಯಿಂದ ಅಮಾನತು

| Updated By: ರಶ್ಮಿ ಕಲ್ಲಕಟ್ಟ

Updated on: Nov 29, 2021 | 5:41 PM

ಪ್ರಸ್ತುತ ಅಧಿವೇಶನದ ಉಳಿದ ಅವಧಿಗೆ ಸದಸ್ಯರು ಅಮಾನತುಗೊಂಡಿರುತ್ತಾರೆ. ಆಗಸ್ಟ್‌ನಲ್ಲಿ ನಡೆದ ಮುಂಗಾರು ಅಧಿವೇಶನದಲ್ಲಿ ಸಂಸದರ "ಅಶಿಸ್ತಿನ" ನಡವಳಿಕೆಯಿಂದಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ಮುಂಗಾರು ಅಧಿವೇಶನದಲ್ಲಿ ಅಶಿಸ್ತು ತೋರಿದ್ದ ವಿಪಕ್ಷದ 12 ಸಂಸದರು ರಾಜ್ಯಸಭೆಯಿಂದ ಅಮಾನತು
ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್
Follow us on

ದೆಹಲಿ: ಸಂಸತ್​​ನ ಚಳಿಗಾಲದ ಅಧಿವೇಶನದ (Winter Session of the Parliament)ಮೊದಲ ದಿನವೇ  ಪ್ರತಿಪಕ್ಷದ 12 ಸಂಸದರನ್ನು ಸರ್ಕಾರವು ತಂದ ನಿರ್ಣಯದ ಮೂಲಕ ರಾಜ್ಯಸಭೆಯಿಂದ (Rajya Sabha) ಅಮಾನತುಗೊಳಿಸಲಾಯಿತು. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ (Prahlad Joshi )ಅವರು ಈ ನಿರ್ಣಯ ಮಂಡಿಸಿದ್ದು ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದಾಗಲೂ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಪ್ರಸ್ತುತ ಅಧಿವೇಶನದ ಉಳಿದ ಅವಧಿಗೆ ಸದಸ್ಯರು ಅಮಾನತುಗೊಂಡಿರುತ್ತಾರೆ. ಆಗಸ್ಟ್‌ನಲ್ಲಿ ನಡೆದ ಮುಂಗಾರು ಅಧಿವೇಶನದಲ್ಲಿ ಸಂಸದರ “ಅಶಿಸ್ತಿನ” ನಡವಳಿಕೆಯಿಂದಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಕಾಂಗ್ರೆಸ್‌ನಿಂದ 6, ತೃಣಮೂಲ ಕಾಂಗ್ರೆಸ್ ಮತ್ತು ಶಿವಸೇನೆಯಿಂದ ತಲಾ ಇಬ್ಬರು, ಮತ್ತು ಸಿಪಿಐ ಮತ್ತು ಸಿಪಿಎಂನಿಂದ ತಲಾ ಒಬ್ಬರು ಸಂಸದರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಫೂಲೋ ದೇವಿ ನೇತಮ್, ಛಾಯಾ ವರ್ಮಾ, ರಿಪುನ್ ಬೋರಾ, ರಾಜಮಣಿ ಪಟೇಲ್, ಸೈಯದ್ ನಾಸಿರ್ ಹುಸೇನ್ ಮತ್ತು ಕಾಂಗ್ರೆಸ್‌ನ ಅಖಿಲೇಶ್ ಪ್ರಸಾದ್ ಸಿಂಗ್, ದೋಲಾ ಸೇನ್, ತೃಣಮೂಲ ಕಾಂಗ್ರೆಸ್‌ನ ಶಾಂತಾ ಛೆಟ್ರಿ, ಪ್ರಿಯಾಂಕಾ ಚತುರ್ವೇದಿ, ಶಿವಸೇನೆಯ ಅನಿಲ್ ದೇಸಾಯಿ,ಸಿಪಿಎಂನ ಎಳಮರಮ್ ಕರೀಂ, ಮತ್ತು ಸಿಪಿಐನ ಬಿನೋಯ್ ವಿಶ್ವಂ ಅಮಾನುತುಗೊಂಡ ಸಂಸದರು.

“ಸಭಾಪತಿಯ ಅಧಿಕಾರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದು, ಸದನದ ನಿಯಮಗಳ ಸಂಪೂರ್ಣ ದುರುಪಯೋಗವನ್ನು ಈ ಸದನವು ಗಮನಕ್ಕೆ ತೆಗೆದುಕೊಳ್ಳುತ್ತದೆ ಮತ್ತು ಬಲವಾಗಿ ಖಂಡಿಸುತ್ತದೆ. ಈ ಮೂಲಕ ತಮ್ಮ ದುಷ್ಕೃತ್ಯಗಳ ಮೂಲಕ ಸದನದ ವ್ಯವಹಾರಕ್ಕೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುತ್ತದೆ. ಅವಹೇಳನಕಾರಿ, ಅಶಿಸ್ತಿನ ಮತ್ತು ಹಿಂಸಾತ್ಮಕ ನಡವಳಿಕೆ ಮತ್ತು ಆಗಸ್ಟ್ ತಿಂಗಳಲ್ಲಿ 254 ನೇ ಅಧಿವೇಶನದ ಕೊನೆಯ ದಿನದಂದು ಭದ್ರತಾ ಸಿಬ್ಬಂದಿಯ ಮೇಲೆ ಉದ್ದೇಶಪೂರ್ವಕ ದಾಳಿಗಳು ಸದನಕಕ್ಕೆ ಅಪಖ್ಯಾತಿ ತಂದಿದ್ದು ಘನತೆಯನ್ನು ಕಡಿಮೆ ಮಾಡಿವೆ ಎಂದು ನಿರ್ಣಯದಲ್ಲಿ ಜೋಶಿ ಹೇಳಿದ್ದಾರೆ.

ರಾಜ್ಯಸಭೆಯಲ್ಲಿನ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳ ನಿಯಮ 256 ರ ಅಡಿಯಲ್ಲಿ ಸದಸ್ಯರನ್ನು ಅಮಾನತುಗೊಳಿಸಲಾಗಿದೆ. ರಾಜ್ಯಸಭಾ ಉಪ ಸಭಾಪತಿ ಹರಿವಂಶ ನಾರಾಯಣ ಸಿಂಗ್ ಅವರು ಸದಸ್ಯರ ಅಮಾನತು ಘೋಷಿಸಿ ಸದನವನ್ನು ನವೆಂಬರ್ 30ಕ್ಕೆ ಮುಂದೂಡಿದರು.

ಮುಂಗಾರು ಅಧಿವೇಶನದ ಕೊನೆಯ ದಿನ ವಿವಿಧ ವಿಷಯಗಳ ಕುರಿತು ವಿರೋಧ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದ್ದರಿಂದ ಮಾರ್ಷಲ್‌ಗಳನ್ನು ಕರೆಸಿ ಎಳೆದಾಡುವ ದೃಶ್ಯಗಳು ಕಂಡುಬಂದವು. ಪ್ರತಿಪಕ್ಷಗಳು ಸದನದ ಅಂಗಳದಲ್ಲಿ ಅಶಿಸ್ತಿನ ವರ್ತನೆ ತೋರಿದ್ದು ಮಾತ್ರವಲ್ಲದೆ ಕೆಲವರು ಸದನದಲ್ಲಿ ಮಹಿಳಾ ಮಾರ್ಷಲ್ ಜತೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಸರ್ಕಾರ ಆರೋಪಿಸಿದೆ.

ಹೆಚ್ಚುವರಿ ಜನರನ್ನು ಕರೆಸಿ ಕೆಲ ಮುಖಂಡರು ಹಲ್ಲೆ ನಡೆಸಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.
ಆಗಸ್ಟ್ 11 ರಂದು ಅಧಿವೇಶನವನ್ನು ಮುಂದೂಡಿದ ತಕ್ಷಣ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ನಾಯಕರ ವಿರುದ್ಧ ಕ್ರಮ ಕೈಗೊಳ್ಳಲು ಹಲವು ಆಯ್ಕೆಗಳನ್ನು ಪರಿಗಣಿಸಿದ್ದರು. “ಸದನದಲ್ಲಿ ಗಂಭೀರ, ತೀವ್ರವಾದ ಮತ್ತು ಹಿಂಸಾತ್ಮಕ ಕೃತ್ಯಗಳಿಗಾಗಿ” ಕೆಲವು ವಿರೋಧ ಪಕ್ಷದ ಸದಸ್ಯರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಏಳು ಸಚಿವರ ನಿಯೋಗವು ಅವರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದೆ. ನಿಯೋಗದಲ್ಲಿ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಪ್ರಲ್ಹಾದ್ ಜೋಶಿ, ಮುಖ್ತಾರ್ ಅಬ್ಬಾಸ್ ನಖ್ವಿ, ಧರ್ಮೇಂದ್ರ ಪ್ರಧಾನ್, ಭೂಪೇಂದರ್ ಯಾದವ್, ಅರ್ಜುನ್ ರಾಮ್ ಮೇಘವಾಲ್ ಮತ್ತು ವಿ ಮುರಳೀಧರನ್ ಇದ್ದರು.

ನಾಯ್ಡು ಅವರು ಪರಿಗಣಿಸಿದ ಆಯ್ಕೆಗಳಲ್ಲಿ ಘಟನೆಯನ್ನು ಪರಿಶೀಲಿಸಲು ವಿಶೇಷ ಸಮಿತಿಯನ್ನು ರಚಿಸುವುದು ಮತ್ತು ಕ್ರಮವನ್ನು ಶಿಫಾರಸು ಮಾಡುವುದು, ವಿಶೇಷಾಧಿಕಾರಗಳ ಸಮಿತಿ ಅಥವಾ ರಾಜ್ಯಸಭೆಯ ನೀತಿಶಾಸ್ತ್ರ ಸಮಿತಿಯು ವಿಷಯವನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡುತ್ತದೆ. ಉಪರಾಷ್ಟ್ರಪತಿಯವರು ರಾಜ್ಯಸಭಾ ಸೆಕ್ರೆಟರಿಯೇಟ್‌ನ ಮಾಜಿ ಮತ್ತು ಸೇವೆಯಲ್ಲಿರುವ ಹಿರಿಯ ಅಧಿಕಾರಿಗಳೊಂದಿಗೆ ಪೂರ್ವನಿದರ್ಶನವು ಏನನ್ನು ಅನುಮತಿಸುತ್ತದೆ ಮತ್ತು ಯಾವ ರೀತಿಯ ಸಮಿತಿಯು ಕ್ರಮವನ್ನು ಶಿಫಾರಸು ಮಾಡಬಹುದು ಎಂಬುದನ್ನು ನೋಡಲು ಸಲಹೆ ನೀಡಿದ್ದರು. ಆಗಸ್ಟ್ 11 ರಂದು ರಾಜ್ಯಸಭೆಯಲ್ಲಿ ಆಪಾದಿತ ಘಟನೆಗಳು ನಡೆದಾಗ ಅಧ್ಯಕ್ಷರಾಗಿದ್ದ ಬಿಜೆಡಿಯ ಸಮಿತಿಯ ಉಪಾಧ್ಯಕ್ಷ ಸಸ್ಮಿತ್ ಪಾತ್ರ ಅವರನ್ನೂ ನಾಯ್ಡು ಭೇಟಿ ಮಾಡಿದ್ದರು.

ಸಿಪಿಐ ನಾಯಕ ಬಿನೋಯ್ ವಿಶ್ವಂ ಅವರು ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಸರ್ಕಾರವು ರಾಜ್ಯಸಭೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಯ್ಕೆ ಮಾಡಿ ಸೋರಿಕೆ ಮಾಡಿದೆ. ಇದು ಸದನದ ವಿಶೇಷ ಆಸ್ತಿಯಾಗಿದೆ ಎಂದು ತಿಳಿಸಿದ್ದಾರೆ. ಹೊರಗಿನವರನ್ನು ಸದನದೊಳಗೆ ಕರೆತಂದು ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದು, ಈ ಬಗ್ಗೆ ನ್ಯಾಯಯುತ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು.

ರಾಜ್ಯಸಭೆಯ 12 ಸದಸ್ಯರನ್ನ ಅಮಾನತುಗೊಳಿಸಿದ ವಿಚಾರದಲ್ಲಿ ದೆಹಲಿಯಲ್ಲಿ ನಾಳೆ ವಿಪಕ್ಷ ನಾಯಕರ ಮಹತ್ವದ ಸಭೆ ನಡೆಸಲಿದ್ದು, ಸರ್ಕಾರದ ವಿರುದ್ಧ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲಾಗುವುದು ಎಂದು ಮೂಲಗಳು ವರದಿ ಮಾಡಿವೆ.

ಇದನ್ನೂ ಓದಿ: Farm Laws Repeal Bill 2021 ಕೃಷಿ ಕಾನೂನುಗಳ ರದ್ದತಿ ಮಸೂದೆ 2021ಗೆ ರಾಜ್ಯಸಭೆ ಅಂಗೀಕಾರ

ಇದನ್ನೂ ಓದಿ: Farm Laws Repeal Bill 2021 ಲೋಕಸಭೆಯಲ್ಲಿ ವಿಪಕ್ಷಗಳ ಗದ್ದಲದ ನಡುವೆ ಕೃಷಿ ಕಾನೂನುಗಳ ರದ್ದತಿ ಮಸೂದೆ 2021ಗೆ ಅಂಗೀಕಾರ

Published On - 5:35 pm, Mon, 29 November 21