ಚೆನ್ನೈ: ಯುವತಿಯೊಬ್ಬಳು ತನ್ನನ್ನು ಅತ್ಯಾಚಾರ ಮಾಡಲು ಬಂದವನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ತಮಿಳುನಾಡಿನಲ್ಲಿ ತಿರುವಲ್ಲೂರ್ ಜಿಲ್ಲೆಯಲ್ಲಿ ನಡೆದಿದೆ.
ಅಜಿತ್ (25) ಕೊಲೆಯಾದ ವ್ಯಕ್ತಿ. ಈತ ಯುವತಿಯ ಸಂಬಂಧಿಯೇ ಆಗಿದ್ದು, ಇಬ್ಬರೂ ಒಂದೇ ಗ್ರಾಮದ ನಿವಾಸಿಗಳೇ ಆಗಿದ್ದಾರೆ. ನಿರುದ್ಯೋಗಿ ಆಗಿದ್ದ ಅಜಿತ್, ಕುಡಿತಕ್ಕೆ ದಾಸನಾಗಿದ್ದ. ಮದುವೆಯಾಗಿದ್ದರೂ ಪತ್ನಿಯಿಂದ ದೂರವಾಗಿದ್ದ. ಹಾಗೇ, ಈತನಿಗೆ ಎರಡು ವರ್ಷ ಹಾಗೂ ಆರು ತಿಂಗಳು ವಯಸ್ಸಿನ ಇಬ್ಬರು ಮಕ್ಕಳಿದ್ದಾರೆ. ಅಷ್ಟೆಲ್ಲ ಆದರೂ ತನ್ನ ಸಂಬಂಧಿಯೇ ಆಗಿದ್ದ ಯುವತಿಯ ತಂಟೆಗೆ ಹೋಗಿ, ಹತ್ಯೆಗೀಡಾಗಿದ್ದಾನೆ.
ಯುವತಿ ಶೋಲಾವರಂನಲ್ಲಿರುವ ತನ್ನ ಚಿಕ್ಕಮ್ಮನನ್ನು ನೋಡಲು ಆಗಮಿಸಿದ್ದಳು. ಈ ವೇಳೆ ಆಕೆಯನ್ನು ಅಜಿತ್ ಹಿಂಬಾಲಿಸಿಕೊಂಡು ಬಂದಿದ್ದ. ಯುವತಿ ಚಿಕ್ಕಮ್ಮನ ಮನೆಯ ಬಳಿಯಿರುವ ಕುದುರೆ ಲಾಯದ ಪಕ್ಕದ ಶೌಚಗೃಹಕ್ಕೆ ಹೊರಟಾಗ, ಆಕೆಯನ್ನು ತಡೆದು ಅತ್ಯಾಚಾರ ಮಾಡಲು ಯತ್ನಿಸಿದ. ಮೊದಲು ಯುವತಿ ತನ್ನನ್ನು ಬಿಟ್ಟುಬಿಡುವಂತೆ ಆತನಲ್ಲಿ ಮನವಿ ಮಾಡಿದಳು. ಆಗಲೇ ಕಂಠಪೂರ್ತಿ ಕುಡಿದು ಅಮಲೇರಿಸಿಕೊಂಡಿದ್ದ ಅಜಿತ್ ಆಕೆಯನ್ನು ಬಿಡಲಿಲ್ಲ. ಆಗ ಯುವತಿ ಬೇರೆ ದಾರಿ ಕಾಣದೆ ಆತನನ್ನು ತಳ್ಳಿದಳು. ಅಷ್ಟಕ್ಕೇ ಸುಮ್ಮನಾಗದೆ, ಕೆಳಗೆ ಬಿದ್ದಿದ್ದ ಅವನ ಮೇಲೆ ಚಾಕುವಿನಿಂದ ಹಲ್ಲೆಯನ್ನೂ ಮಾಡಿ, ಓಡಿಹೋಗಿದ್ದಾಳೆ. ಆತ ಅಲ್ಲಿಯೇ ಸಾವನ್ನಪ್ಪಿದ್ದಾನೆ.
ಯುವತಿ ಅಲ್ಲಿಂದ ಪೊಲೀಸ್ ಠಾಣೆಗೆ ಹೋಗಿ ಘಟನೆಯನ್ನು ವಿವರಿಸಿದ್ದಾಳೆ. ನನ್ನನ್ನು ನಾನು ಕಾಪಾಡಿಕೊಳ್ಳುವ ಸಲುವಾಗಿ ಹೀಗೆ ಮಾಡಿದೆ ಎಂದು ಒಪ್ಪಿಕೊಂಡಿದ್ದಾಳೆ. ನಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಇದುವರೆಗೂ ಯುವತಿಯನ್ನು ಬಂಧಿಸಿಲ್ಲ ಎಂದು ಶೋಲಾವರಂ ಠಾಣೆ ಪೊಲಿಸರು ಮಾಹಿತಿ ನೀಡಿದ್ದಾರೆ.
ಭಾರತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಕೊವಿಶೀಲ್ಡ್ ಲಸಿಕೆ.. DCGI ಮಾರ್ಗಸೂಚಿ