ಡಿವೈಎಸ್​ಪಿ ಮಗಳಿಗೆ ಸೆಲ್ಯೂಟ್ ಹೊಡೆದ ಸರ್ಕಲ್ ಇನ್​ಸ್ಪೆಕ್ಟರ್ ಅಪ್ಪ; ಫೋಟೊ ವೈರಲ್

ಆಂಧ್ರಪ್ರದೇಶ ರಾಜ್ಯ ಪೊಲೀಸರ ಡ್ಯೂಟಿ ಮೀಟ್ 'ಇಗ್ನೈಟ್' ಕಾರ್ಯಕ್ರಮದ ವೇಳೆ ಡಿವೈಎಸ್​ಪಿ ಹುದ್ದೆಯಲ್ಲಿರುವ ಮಗಳಿಗೆ ಸರ್ಕಲ್ ಇನ್​ಸ್ಪೆಕ್ಟರ್ ಅಪ್ಪ ಸೆಲ್ಯೂಟ್ ಹೊಡೆಯುತ್ತಿರುವ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಡಿವೈಎಸ್​ಪಿ ಮಗಳಿಗೆ ಸೆಲ್ಯೂಟ್ ಹೊಡೆದ ಸರ್ಕಲ್ ಇನ್​ಸ್ಪೆಕ್ಟರ್ ಅಪ್ಪ; ಫೋಟೊ ವೈರಲ್
Rashmi Kallakatta

| Edited By: Ghanashyam D M | ಡಿ.ಎಂ.ಘನಶ್ಯಾಮ

Jan 04, 2021 | 6:18 PM

ತಿರುಪತಿ: ಸರ್ಕಲ್ ಇನ್​ಸ್ಪೆಕ್ಟರ್ ವೈ. ಶ್ಯಾಮ್ ಸುಂದರ್ ಅವರಿಗೆ ಅದು ಅಭಿಮಾನದ ಕ್ಷಣ. ಡಿವೈಎಸ್​ಪಿಯಾಗಿರುವ ಮಗಳು ಯೆಂದುಲುರು ಜೆಸ್ಸಿ ಪ್ರಶಾಂತಿ ಮುಂದೆ ಸೆಲ್ಯೂಟ್ ಹೊಡೆದು ನಿಂತಾಗ ಮಗಳಿಗೆ ಕಸಿವಿಸಿ. ನಾವು ಕರ್ತವ್ಯದಲ್ಲಿರುವಾಗ ಭೇಟಿಯಾಗಿದ್ದು ಇದೇ ಮೊದಲು. ನನಗೆ ಅವರು ಸೆಲ್ಯೂಟ್ ಹೊಡೆಯುವುದು ಸರಿ ಅನಿಸುತ್ತಿರಲಿಲ್ಲ. ಅವರು ನನ್ನ ಅಪ್ಪ. ನನಗೆ ಸೆಲ್ಯೂಟ್ ಮಾಡಬೇಡಿ ಎಂದು ನಾನು ಹೇಳಿದ್ದೆ. ಆದರೆ ಅದು ನಡೆದೇ ಹೋಯ್ತು, ನಾನೂ ಅವರಿಗೆ ಪ್ರತಿಯಾಗಿ ಸೆಲ್ಯೂಟ್ ಮಾಡಿದೆ ಅಂತಾರೆ ಗುಂಟೂರ್ ಡಿವೈಎಸ್​ಪಿ ಪ್ರಶಾಂತಿ.

ತಿರುಪತಿಯಲ್ಲಿ ಜನವರಿ 4 ರಿಂದ 7ರವರೆಗೆ ಆಂಧ್ರಪ್ರದೇಶ ರಾಜ್ಯ ಪೊಲೀಸರ ಡ್ಯೂಟಿ ಮೀಟ್ ‘ಇಗ್ನೈಟ್’ ಆಯೋಜಿಸಲಾಗಿದೆ. ಭಾನುವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಾಂತಿ ಮತ್ತು ಅಪ್ಪ ಶ್ಯಾಮ್ ಸುಂದರ್ ಪರಸ್ಪರ ಭೇಟಿಯಾಗಿದ್ದಾರೆ. 2018ರ ಬ್ಯಾಚ್​ ಐಪಿಎಸ್ ಅಧಿಕಾರಿ ಜೆಸ್ಸಿ ಪ್ರಶಾಂತಿ ಪೊಲೀಸ್ ಇಲಾಖೆಗೆ ಸೇರಿದ ಮೇಲೆ ಇದೇ ಮೊದಲ ಬಾರಿ ಕರ್ತವ್ಯದಲ್ಲಿರುವಾಗಲೇ ಅಪ್ಪನನ್ನು ಭೇಟಿಯಾಗಿದ್ದು.

ಈ ಬಗ್ಗೆ ‘ದಿ ನ್ಯೂಸ್ ಮಿನಿಟ್’ ಜತೆ ಮಾತನಾಡಿದ ಅವರು, ‘ನನ್ನ ಅಪ್ಪ ನನಗೆ ಸ್ಫೂರ್ತಿ, ಜನರ ಸೇವೆ ಮಾಡುತ್ತಿರುವ ಅಪ್ಪನನ್ನು ನೋಡಿಯೇ ನಾನು ಬೆಳೆದದ್ದು. ಅವರು ಜನರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದರು. ಹಾಗಾಗಿಯೇ ನಾನು ಈ ಇಲಾಖೆಯಲ್ಲಿ ಕೆಲಸ ಮಾಡಲು ಆಯ್ಕೆ ಮಾಡಿಕೊಂಡೆ. ಇಲಾಖೆ ಬಗ್ಗೆ ನನಗೆ ಪಾಸಿಟಿವ್ ನಿಲುವು ಇದೆ’ ಎಂದಿದ್ದಾರೆ.

ಮಗಳಿಗೆ ಅಪ್ಪ ಸೆಲ್ಯೂಟ್ ಮಾಡುತ್ತಿರುವ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಹಲವರನ್ನು ಭಾವುಕರನ್ನಾಗಿಸಿದೆ.

2018ರಲ್ಲಿ ತೆಲಂಗಾಣದಲ್ಲಿ ಪೊಲೀಸ್ ಇಲಾಖೆಯ ಮಾಜಿ ಡಿಸಿಪಿ ಎ.ಆರ್.ಉಮಾ ಮಹೇಶ್ವರ ಶರ್ಮಾ ಅವರ ಮಗಳು ಸಿಂಧೂ ಶರ್ಮಾ ತೆಲಂಗಾಣದ ಜಗತಿಯಲ್ ಜಿಲ್ಲೆಯಲ್ಲಿ ಎಸ್​ಐ ಆಗಿ ನೇಮಕವಾದಾಗ ಸೆಲ್ಯೂಟ್ ಹೊಡೆದಿದ್ದರು. 2014ರ ಐಪಿಎಸ್ ಬ್ಯಾಚ್ ಅಧಿಕಾರಿಯಾಗಿದ್ದರು ಸಿಂಧೂ ಶರ್ಮಾ. ಹೈದರಾಬಾದ್ ಹೊರವಲಯದಲ್ಲಿ ಟಿಆರ್​ಎಸ್ ಆಯೋಜಿಸಿದ್ದ ಸಾರ್ವಜನಿಕ ಸಭೆಯೊಂದರ ವೇಳೆ ಅಪ್ಪ-ಮಗಳು ಮುಖಾಮುಖಿಯಾಗಿದ್ದರು. ಮಗಳಿಗೆ ಅಪ್ಪ ಸೆಲ್ಯೂಟ್ ಹೊಡೆದಿದ್ದ ಆ ಫೋಟೊ ಕೂಡಾ ವೈರಲ್ ಆಗಿತ್ತು.

ಈ ಪೊಲೀಸ್ ಕಾನ್ಸ್‌ಟೇಬಲ್ ವಿವಾಹ ಆಮಂತ್ರಣ ಪತ್ರಿಕೆ ಎಲ್ಲರಿಗೂ ಮಾದರಿ! ಹೇಗೆ ಗೊತ್ತಾ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada