
ನವದೆಹಲಿ, ಅಕ್ಟೋಬರ್ 7: ಈಶಾನ್ಯ ದೆಹಲಿಯ ಸೀಮಾಪುರಿ ಪ್ರದೇಶದಲ್ಲಿ ಇಂದು ಸಂಭವಿಸಿದ ಭೀಕರ ಕಟ್ಟಡ ದುರಂತದಲ್ಲಿ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. 4 ಮಹಡಿಯ ಕಟ್ಟಡದ ಮುಂಭಾಗದ ಭಾಗವು ದಿಢೀರ್ ಕುಸಿದುಬಿದ್ದ ಪರಿಣಾಮವಾಗಿ ಇಬ್ಬರು ಮಕ್ಕಳು ಹಾಗೂ 4 ತಿಂಗಳ ಗರ್ಭಿಣಿ ಮಹಿಳೆ ಮೃತಪಟ್ಟಿದ್ದಾರೆ. ರಕ್ಷಣಾ ಸಿಬ್ಬಂದಿ ಹಾಗೂ ಸ್ಥಳೀಯರು ಶ್ರಮಿಸಿ ಇದುವರೆಗೆ 11 ಜನರನ್ನು ಅವಶೇಷಗಳ ಅಡಿಯಿಂದ ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಈ ಘಟನೆಯಲ್ಲಿ ಪಕ್ಕದಲ್ಲಿದ್ದ ಎರಡು ಮನೆಗಳಿಗೂ ಭಾಗಶಃ ಹಾನಿಯಾಗಿದೆ.
ಮಂಗಳವಾರ ಸಂಜೆ ಉತ್ತರಾಖಂಡದಲ್ಲಿ ಸಂಭವಿಸಿದ ಭೂಕಂಪದ ಆಘಾತದಿಂದಾಗಿ ಈ ಕಟ್ಟಡದಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದವು ಎಂದು ದೆಹಲಿ ಮಹಾನಗರ ಪಾಲಿಕೆ (MCD) ಹಾಗೂ ಸ್ಥಳೀಯರು ಶಂಕಿಸಿದ್ದಾರೆ. ಕಟ್ಟಡದ ಮಾಲೀಕರು ಮನೆ ಖಾಲಿ ಮಾಡಿಸುವ ಪ್ರಕ್ರಿಯೆಯಲ್ಲಿದ್ದಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಈದ್ಗಾ ಮಚ್ಲಿ ಮಂಡಿ ಬಳಿಯ ದುಸಿಬ್ ವ್ಯಾಪ್ತಿಯಲ್ಲಿದ್ದ ಸುಮಾರು 225 ಚದರ ಅಡಿ ವಿಸ್ತೀರ್ಣದ ಈ ಕಟ್ಟಡ ಕುಸಿದ ತಕ್ಷಣವೇ ಸ್ಥಳೀಯರು ಕೈಯಿಂದಲೇ ಶಿಥಿಲಾವಶೇಷಗಳನ್ನು ತೆರವುಗೊಳಿಸಿ ರಕ್ಷಣಾ ಕಾರ್ಯಕ್ಕೆ ನೆರವಾದರು.
#WATCH | Delhi: A residential building collapsed near Idgah Machhli Mandi, New Seemapuri, this afternoon. Visuals from the spot. More details awaited. https://t.co/jNJcq8xisT
— ANI (@ANI) October 7, 2026
ಇದನ್ನೂ ಓದಿ: ದೆಹಲಿಯ ಸೀಮಾಪುರಿಯಲ್ಲಿ 4 ಮಹಡಿ ಕಟ್ಟಡ ಕುಸಿತ, ಹಲವರು ಸಿಲುಕಿರುವ ಶಂಕೆ, ರಕ್ಷಣಾ ಕಾರ್ಯಾಚರಣೆ ಶುರು
ನಂತರ ದೆಹಲಿ ಅಗ್ನಿಶಾಮಕ ದಳ, ದೆಹಲಿ ಪೊಲೀಸ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ಡಿಡಿಎಂಎ ಪಡೆಗಳು ಸ್ಥಳಕ್ಕಾಗಮಿಸಿ ಜೆಸಿಬಿ ಮೂಲಕ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿವೆ. ದೆಹಲಿಯ ಸತ್ಯ ನಿಕೇತನ ದುರಂತ ನಡೆದ ಕೇವಲ ಒಂದು ತಿಂಗಳ ಅಂತರದಲ್ಲೇ, ಈಶಾನ್ಯ ದೆಹಲಿಯ ಸೀಮಾಪುರಿಯಲ್ಲಿ ಈ ಭೀಕರ ದುರಂತ ಸಂಭವಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ