ಮುಂಬೈನಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಆಗಿರುವ ಸುದ್ದಿ ಹೊರಬಿದ್ದ ಬೆನ್ನಲ್ಲೇ ತಮಿಳುನಾಡಿನಲ್ಲೂ ಒಂದು ಇಂಥದ್ದೇ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಚೆನ್ನೈನ ಮೆಲ್ಕತಿರ್ಪುರ ಗ್ರಾಮದ ಬಳಿ 20ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಕಾರ್ನಲ್ಲಿ ಈ ರೇಪ್ ನಡೆದಿದ್ದು, ಘಟನೆಗೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರಕ್ಕೆ ಒಳಗಾದ ಯುವತಿಗೆ ಡ್ರಗ್ಸ್ ಕೂಡ ನೀಡಲಾಗಿತ್ತು. ಅವಳು ಅಮಲಿನಲ್ಲಿದ್ದಾಗಲೇ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿ ಖಾಸಗಿ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದ್ದು, ಬಂಧಿತರನ್ನು ಗುಣಶೀಲನ್, ಜೆಬನೇಸನ್, ಗುಣಶೇಖರನ್ ಮತ್ತು ಅಜಿತ್ ಎಂದು ಗುರುತಿಸಲಾಗಿದೆ. ಈ ಯುವತಿ ಮತ್ತು ಗುಣಶೀಲನ್ ಇಬ್ಬರೂ ಆನ್ಲೈನ್ ಆ್ಯಪ್ವೊಂದರ ಮೂಲಕ ಸ್ನೇಹಿತರಾಗಿದ್ದರು. ಬುಧವಾರ ಗುಣಶೀಲನ್ ತನ್ನ ಕಾರಿನಲ್ಲಿ ಆ ಯುವತಿಯನ್ನು ಅಂಗಡಿಯಿಂದ ಪಿಕಪ್ ಮಾಡಿ, ಅಲ್ಲಿಂದ ಕಾಂಚಿಪುರಂನಲ್ಲಿರುವ ಆತನ ಫಾರ್ಮ್ಹೌಸ್ಗೆ ಕರೆದುಕೊಂಡು ಹೊರಟಿದ್ದ. ಯುವತಿಗೆ ನೀಡಿದ್ದ ಲೇಸ್ಗೆ ನಿದ್ರೆ ಬರುವ ಯಾವುದೇ ಒಂದು ಮದ್ದನ್ನು ಸವರಲಾಗಿತ್ತು. ಹಾಗೇ ಒಂದು ಸಾಫ್ಟ್ ಡ್ರಿಂಕ್ನ್ನು ಕುಡಿಯಲು ಕೊಡಲಾಗಿತ್ತು. ಆಕೆ ನಿದ್ರೆಗೆ ಜಾರುತ್ತಿದ್ದಂತೆ ಗುಣಶೀಲನ್ ಮತ್ತು ಆತನ ಸ್ನೇಹಿತರು ಸೇರಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ.
ತನ್ನ ಮೇಲೆ ಅತ್ಯಾಚಾರ ನಡೆಯುತ್ತಿದ್ದಾಗಲೇ ಆ ಯುವತಿಗೆ ಎಚ್ಚರವೇನೋ ಆಗಿದೆ. ಆಕೆ ತಪ್ಪಿಸಿಕೊಳ್ಳಲು ಕಾರಿನ ಕಿಟಕಿ ಒಡೆಯಲು ಯತ್ನಿಸಿದ್ದಾಳೆ. ಆದರೆ ಪ್ರಯೋಜನ ಆಗಲಿಲ್ಲ. ಸ್ಥಳದಲ್ಲಿ ಗಲಾಟೆ ಕೇಳುತ್ತಿದ್ದಂತೆ ಸ್ಥಳೀಯರು ಅಲ್ಲಿಗೆ ಆಗಮಿಸಿದ್ದಾರೆ. ಜನರು ಬರುತ್ತಿರುವುದನ್ನು ನೋಡಿದ ಆರೋಪಿಗಳು ಅಲ್ಲಿಂದ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಬಳಿಕ ಅಸ್ವಸ್ಥಳಾದ ಆ ಯುವತಿಯನ್ನು ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಟ್ಟು ಹೋಗಿದ್ದರು. ಆ ಯುವತಿ ಹೇಗೋ ಸುಧಾರಿಸಿಕೊಂಡು ಸಮೀಪದ ಪೊಲೀಸ್ ಸ್ಟೇಶನ್ಗೆ ಹೋಗಿ, ದೂರು ನೀಡಿದ್ದಳು. ನಂತರ ಅವಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಒಟ್ಟೂ ಐವರು ಅತ್ಯಾಚಾರ ಮಾಡಿದ್ದು, ಅದರಲ್ಲಿ ನಾಲ್ವರನ್ನು ಮಾತ್ರ ಅರೆಸ್ಟ್ ಮಾಡಲಾಗಿದೆ. ಇನ್ನೊಬ್ಬ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ವಿಧಾನ ಪರಿಷತ್ ಸಭಾ ನಾಯಕರಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನಾಮ ನಿರ್ದೇಶನ
ಬದುಕುಳಿಯಲಿಲ್ಲ ಮುಂಬೈ ಅತ್ಯಾಚಾರ ಸಂತ್ರಸ್ತೆ; 33 ತಾಸುಗಳ ಜೀವನ್ಮರಣ ಹೋರಾಟ ಅಂತ್ಯ
(20 year old woman drugged and gang raped in car At Chennai)
Published On - 3:31 pm, Sat, 11 September 21