ಈ ಬಾರಿ ಉತ್ತರಪ್ರದೇಶ ವಿಧಾನಸಭೆ ಚುನಾವಣೆ (Uttar Pradesh Assembly Election 2022)ಯಲ್ಲಿ ಶೇ.40ರಷ್ಟು ಟಿಕೆಟ್ಗಳು ಮಹಿಳೆಯರಿಗೇ ಮೀಸಲು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಈಗಾಗಲೇ ಘೋಷಿಸಿಬಿಟ್ಟಿದ್ದಾರೆ. ಇದೀಗ ಇನ್ನೊಂದು ಮಹತ್ವದ ಘೋಷಣೆಯನ್ನು ಪ್ರಿಯಾಂಕಾ ಗಾಂಧಿ ಮಾಡಿದ್ದಾರೆ. 2017ರಲ್ಲಿ ಉನ್ನಾವೋದಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ತಾಯಿ ಕೂಡ ಈ ಬಾರಿ ಕಾಂಗ್ರೆಸ್ನಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಅವರಿಗೆ ಟಿಕೆಟ್ ನೀಡಲಾಗುವುದು ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಹೇಳಿದ್ದಾರೆ. ಅಂದಹಾಗೇ, ಈ ಉನ್ನಾವೋ ಅತ್ಯಾಚಾರ ಪ್ರಕರಣ ಪ್ರಮುಖ ಆರೋಪಿ ಕುಲದೀಪ್ ಸಿಂಗ್ ಸೇಂಗರ್. ಈತ ಬಿಜೆಪಿಯ ಶಾಸಕನೇ ಆಗಿದ್ದ. ನಂತರ ಅತ್ಯಾಚಾರ ಆರೋಪ ಕೇಳಿಬರುತ್ತಿದ್ದಂತೆ ಅವನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು.
ಅಂದಾಹಾಗೆ, ಉನ್ನಾವೋದಲ್ಲಿ ಅತ್ಯಾಚಾರಕ್ಕೆ ಒಳಗಾದ ಯುವತಿಯ ತಾಯಿಯ ಹೆಸರು ಆಶಾ ಸಿಂಗ್. ಇವರನ್ನು ಉನ್ನಾವೋದ ಬಂಗಾರ್ಮೌದಿಂದ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ಇವರ ಮಗಳನ್ನು ಅತ್ಯಾಚಾರ ಮಾಡಿ, ಉಚ್ಚಾಟಿತಗೊಂಡ ಕುಲ್ದೀಪ್ ಸಿಂಗ್ 2017ರಲ್ಲಿ ಸ್ಪರ್ಧಿಸಿ ಗೆದ್ದಿದ್ದ ಕ್ಷೇತ್ರ ಇದು. ಈತನನ್ನು ಉಚ್ಚಾಟನೆ ಮಾಡಿದ ಬೆನ್ನಲ್ಲೇ ಆ ಕ್ಷೇತ್ರಕ್ಕೆ ಉಪಚುನಾವಣೆ ನಡೆಸಲಾಗಿತ್ತು. ಅದರಲ್ಲಿ ಕೂಡ ಬಿಜೆಪಿಯೇ ಗೆದ್ದಿತ್ತು. ಇಂದು ಆಶಾ ಸಿಂಗ್ ಹೆಸರನ್ನು ಪ್ರಕಟಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ, ಯಾರೇ ಚಿತ್ರಹಿಂಸೆಗೆ ಒಳಗಾಗಿದ್ದರೂ, ಅವರಿಗೆ ಕಾಂಗ್ರೆಸ್ ನ್ಯಾಯ ಒದಗಿಸುತ್ತದೆ ಎಂಬ ಸಂದೇಶವನ್ನು ಕಾಂಗ್ರೆಸ್ ತನ್ನ ಚುನಾವಣಾ ಅಭ್ಯರ್ಥಿಗಳ ಪಟ್ಟಿಯ ಮೂಲಕ ನೀಡಲು ಬಯಸುತ್ತದೆ ಎಂದು ಹೇಳಿದ್ದಾರೆ. ಇನ್ನು ಪ್ರಿಯಾಂಕಾ ಗಾಂಧಿ ಉತ್ತರಪ್ರದೇಶದಲ್ಲಿ ನಾನು ಮಹಿಳೆ..ನಾನೂ ಹೋರಾಡಬಲ್ಲೆ ಎಂಬ ಘೋಷಣೆಯ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಚುನಾವಣೆ ಮೂಲಕ ಶೋಷಿತ ಮಹಿಳೆಯರಿಗೆ ನ್ಯಾಯ ಒದಗಿಸುವುದು ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದ್ದಾರೆ.
ನಮ್ಮ ಪಕ್ಷವನ್ನು ಬಲಪಡಿಸುವುದು ಮತ್ತು ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡುವ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ನಾವು ಯಾವುದೇ ನೆಗೆಟಿವ್ ಪ್ರಚಾರವನ್ನೂ ನಡೆಸುವುದಿಲ್ಲ. ನಮ್ಮದೇನಿದ್ದರೂ ದಲಿತರು ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ, ಬೆಳವಣಿಗೆ ಆಧಾರಿತ ಪ್ರಚಾರ. ನಾನು ಉತ್ತರಪ್ರದೇಶದಲ್ಲಿ ಏನನ್ನು ಶುರು ಮಾಡಿದ್ದೇನೋ, ಅದನ್ನು ಮುಂದುವರಿಸುತ್ತೇನೆ. ಚುನಾವಣೆ ಮುಗಿದ ಮೇಲೆ ಕೂಡ ಈ ರಾಜ್ಯದಲ್ಲಿ ನಾನಿರುತ್ತೇನೆ. ನಮ್ಮ ಪಕ್ಷವನ್ನು ಇಲ್ಲಿ ಬಲಗೊಳಿಸುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.
ರಾಹುಲ್ ಗಾಂಧಿ ಟ್ವೀಟ್
ಇನ್ನು ಅತ್ಯಾಚಾರ ಸಂತ್ರಸ್ತೆಯ ತಾಯಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಉನ್ನಾವೋದಲ್ಲಿ ಬಿಜೆಪಿಯಿಂದ ಯಾರ ಮಗಳಿಗೆ ಅನ್ಯಾಯವಾಯಿತೋ, ಆ ತಾಯಿ ಈಗ ನ್ಯಾಯದತ್ತ ಮುಖಮಾಡಿ ನಿಂತಿದ್ದಾರೆ. ಅವರು ಹೋರಾಡುತ್ತಾರೆ..ಗೆಲ್ಲುತ್ತಾರೆ ಎಂದು ಹೇಳಿದ್ದಾರೆ.
उन्नाव में जिनकी बेटी के साथ भाजपा ने अन्याय किया, अब वे न्याय का चेहरा बनेंगी- लड़ेंगी, जीतेंगी!#Election2022
— Rahul Gandhi (@RahulGandhi) January 13, 2022
ದೇಶವನ್ನು ನಡುಗಿಸಿದ್ದ ರೇಪ್ ಕೇಸ್
2017ರಲ್ಲಿ ಉನ್ನಾವೋದಲ್ಲಿ ನಡೆದಿದ್ದ ಅತ್ಯಾಚಾರಕ್ಕೆ ಇಡೀ ದೇಶವೇ ಮರುಗಿದೆ. ಹೀಗೊಂದು ಅತ್ಯಾಚಾರ ಆಗಿದೆ ಎಂದು ಗೊತ್ತಾಗಿದ್ದು, ಸಂತ್ರಸ್ತೆ ಯೋಗಿ ಆದಿತ್ಯನಾಥ್ ಅವರ ನಿವಾಸದ ಎದುರು ಬಂದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದಾಗ. ಅತ್ಯಾಚಾರ ಸಂತ್ರಸ್ತೆಯ 55ವರ್ಷದ ತಂದೆಯನ್ನು ಕುಲದೀಪ್ ಸಿಂಗ್ ಸೇಂಗರ್ನ ಸಹೋದರ ಮನಬಂದಂತೆ ಥಳಿಸಿದ್ದ. ಅದಾದ ಮರುದಿನವೇ ಅವರು ಮೃತಪಟ್ಟಿದ್ದರು. ಇದು ದೇಶಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಆರೋಪಿಗಳ ಕ್ರೌರ್ಯಕ್ಕೆ ದೇಶವೇ ನಡುಗಿತ್ತು. ಅತ್ಯಾಚಾರ ನಡೆಯುವಾಗ ಯುವತಿ ಇನ್ನೂ ಅಪ್ರಾಪ್ತೆಯಾಗಿದ್ದಳು. ಇದರಲ್ಲಿ ಪ್ರಮುಖ ಆರೋಪಿ ಕುಲದೀಪ್ ಸಿಂಗ್ ಯಾದವ್ ಎಂಬುದು 2019ರಲ್ಲಿ ಸಾಬೀತಾಗಿದ್ದು, ಅಲ್ಲಿಂದಲೂ ಆತ ಜೈಲಿನಲ್ಲಿಯೇ ಇದ್ದಾನೆ.
ಇದನ್ನೂ ಓದಿ: ಅದಿತಿ ಪ್ರಭುದೇವಗೆ ಹುಟ್ಟುಹಬ್ಬದ ಸಂಭ್ರಮ; ಸ್ಯಾಂಡಲ್ವುಡ್ ಸುಂದರಿಯ ಕ್ಯೂಟ್ ಫೋಟೋ ಆಲ್ಬಂ
Published On - 1:23 pm, Thu, 13 January 22