ದೆಹಲಿ: ಪೊಲೀಸ್ ಅಧಿಕಾರಿ ಸಚಿನ್ ವಾಜೆ ಮೇಲೆ ಗೃಹ ಸಚಿವ ಅನಿಲ್ ದೇಶ್ಮುಖ್ ₹ 100 ಕೋಟಿ ವಸೂಲಿ ಮಾಡುವಂತೆ ಒತ್ತಡ ಹೇರಿರಲು ಸಾಧ್ಯವೇ ಇಲ್ಲ. ಏಕೆಂದರೆ ಪರಮ್ವೀರ್ ಸಿಂಗ್ ಆರೋಪಿಸಿದ ಅವಧಿಯಲ್ಲಿ ಫೆಬ್ರವರಿ 15ರಿಂದ 27 ರವರೆಗೆ ಅನಿಲ್ ದೇಶ್ಮುಖ್ ಕೊರೊನಾ ಸೋಂಕಿಗೆ ತುತ್ತಾಗಿ ಹೋಂ ಕ್ವಾರಂಟೈನ್ನಲ್ಲಿದ್ದರು. ಎಂದು ಎನ್ಸಿಪಿ ವರಿಷ್ಠ ಶರದ್ ಪವಾರ್ ಹೇಳಿದ್ದಾರೆ. ಅಲ್ಲದೇ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧದ ಆರೋಪಗಳಿಗೆ ಸಾಕ್ಷ್ಯ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ. ಮುಕೇಶ್ ಅಂಬಾನಿ ಮನೆ ಮುಂದೆ ಪತ್ತೆಯಾದ ಸ್ಫೋಟಕಗಳ (Mukesh Ambani Threat case) ಕುರಿತು ನಡೆಯುತ್ತಿರುವ ತನಿಖೆಯ ದಾರಿ ತಪ್ಪಿಸಲು ಎಂದು ಅನಿಲ್ ದೇಶ್ಮುಖ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ಮುನ್ನೆಲೆಗೆ ತರಲಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ತಮ್ಮ ಪಕ್ಷದ ಸಚಿವ ಅನಿಲ್ ದೇಶ್ಮುಖ್ರನ್ನು ಸಮರ್ಥಿಸಿಕೊಂಡಿರುವ ಶರದ್ ಪವಾರ್, ಫೆಬ್ರವರಿ ತಿಂಗಳಲ್ಲಿ ಸಚಿನ್ ವಾಜೆ ಮತ್ತು ಅನಿಲ್ ದೇಶ್ಮುಖ್ ಭೇಟಿಯೇ ಆಗಿಲ್ಲ. ಅನಿಲ್ ದೇಶ್ಮುಖ್ ವಿರುದ್ಧದ ಆರೋಪದಲ್ಲಿ ಯಾವುದೇ ಸತ್ಯಾಂಶ ಇಲ್ಲ. ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ನಡೆಸುತ್ತಿದ್ದ ತನಿಖೆಯ ದಾರಿ ತಪ್ಪಿಸಲು ಪರಮ್ವೀರ್ ಸಿಂಗ್ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಗೃಹ ಸಚಿವ ಅನಿಲ್ ದೇಶ್ಮುಖ್ರಿಂದ ರಾಜೀನಾಮೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದಿರುವ ಶರದ್ ಪವಾರ್, ಪರಮ್ವೀರ್ ಸಿಂಗ್ ಆರೋಪದಿಂದ ಮಹಾರಾಷ್ಟ್ರದ ಮೈತ್ರಿ ಸರ್ಕಾರಕ್ಕೆ ಯಾವುದೇ ಭಂಗ ಬರುವುದಿಲ್ಲ ಎಂದು ಖಚಿತಪಡಿಸಿದ್ದಾರೆ. ಮುಂಬೈ ಮಾಜಿ ಪೊಲೀಸ್ ಕಮಿಷನರ್ ಪರಮ್ವೀರ್ ಸಿಂಗ್ ಬರೆದಿರುವ ಪತ್ರದಲ್ಲಿರು ಕೆಲ ವಿಷಯಗಳ ಬಗ್ಗೆ ಖಚಿತತೆ ಇಲ್ಲ ಎಂದು ಅವರು ಆರೋಪಿಸಿದ್ದಾರೆ.
ಈ ಮಧ್ಯೆ ವಿಪಕ್ಷ ನಾಯಕ ದೇವೇಂದ್ರ ಫಡ್ನವೀಸ್ ಮಾಡಿರುವ ಸಾಕ್ಷ್ಯರೂಪದ ಆರೋಪವನ್ನು ಶರದ್ ಪವಾರ್ ತಳ್ಳಿಹಾಕಿದ್ದಾರೆ. ಅನಿಲ್ ದೇಶ್ಮುಖ್ ಫೆಬ್ರವರಿ 15ರಂದು ಪತ್ರಿಕಾಗೋಷ್ಠಿ ನಡೆಸಿದ್ದರರು ಎಂದು ದೇವೇಂದ್ರ ಫಡ್ನಾವೀಸ್ ವಿಡಿಯೋವೊಂದನ್ನು ಬಿಡುಗಡೆಗೊಳಿಸಿದ್ದರು. ಈ ವಿಡಿಯೋ ನಕಲಿ ಎಂದು ದೂರಿರುವ ಶರತ್ ಪವಾರ್, ಕೊರೊನಾದಿಂದ ಕ್ವಾರಂಟೈನ್ನಲ್ಲಿದ್ದ ಅನಿಲ್ ದೇಶ್ಮುಖ್ ಹೇಗೆ ತಾನೇ ಪತ್ರಿಕಾಗೋಷ್ಠಿ ನಡೆಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ರೋಚಕ ತಿರುವು ಪಡೆದ ಪ್ರಕರಣ
ಮುಕೇಶ್ ಅಂಬಾನಿ ಮನೆ ಮುಂದೆ ಸ್ಪೋಟಕ ಹೊತ್ತಿದ್ದ ಕಾರು ಪತ್ತೆ ಪ್ರಕರಣ ರೋಚಕ ತಿರುವು ಪಡೆದಿದೆ. ಸಸ್ಪೆಂಡ್ ಆಗಿರುವ ಎಎಸ್ಐ ಸಚಿನ್ ವಾಜೆ ಬಳಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್, ಬಾರ್ ಮತ್ತು ರೆಸ್ಟೊರೆಂಟ್ಗಳಿಂದ ಪ್ರತಿ ತಿಂಗಳು 100 ಕೋಟಿ ಹಣ ವಸೂಲಿ ಮಾಡುವಂತೆ ಒತ್ತಡ ಹೇರಿದ್ದರು ಎಂದು ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ವೀರ್ ಸಿಂಗ್ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದರು. ಈ ಗಂಭೀರ ಆರೋಪದಿಂದ ಮಹಾರಾಷ್ಟ್ರ ಶಿವಸೇನೆ-ಎನ್ಸಿಪಿ ಮೈತ್ರಿಕೂಟದ ಸರ್ಕಾರಕ್ಕೆ ಭಾರೀ ಮುಖಭಂಗ ಎದುರಾಗಿದೆ.
ಶಿವಸೇನೆಯ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾದರೂ ಮೈತ್ರಿಕೂಟದ ಎನ್ಸಿಪಿ ಪಕ್ಷದ ಅನಿಲ್ ದೇಶ್ಮುಖ್ ಗೃಹ ಸಚಿವರಾಗಿದ್ದಾರೆ. ಸರ್ಕಾರದ ಚುಕ್ಕಾಣಿಯಲ್ಲಿ ಕುಳಿತಿರುವ ಇಬ್ಬರ ನಡುವೆ ಅಭಿಪ್ರಾಯ ಬೇಧ, ಸಣ್ಣಪುಟ್ಟ ವೈಮನಸ್ಸು ಉದ್ಭವಿಸಿದ ಉದಾಹರಣೆಗಳಿವೆ. ಗೃಹ ಸಚಿವ ಅನಿಲ್ ದೇಶ್ಮುಖ್ ಮೇಲೆ ಪರಮ್ವೀರ್ ಸಿಂಗ್ ಮಾಡಿರುವ ಪ್ರತಿ ತಿಂಗಳು 100 ಕೋಟಿ ಸಂಗ್ರಹಿಸುವ ಆರೋಪ ಮಹಾರಾಷ್ಟ್ರ ಸರ್ಕಾರಕ್ಕೆ ಕುತ್ತು ತರುವ ಶಕ್ತಿ ಹೊಂದಿದೆ. ಪರಮ್ವೀರ್ ಸಿಂಗ್ ಗೃಹ ಸಚಿವರ ಮೇಲೇ ಆರೋಪ ಮಾಡಿರುವುದು ಶಿವಸೇನೆ-ಎನ್ಸಿಪಿಯ ದೋಸ್ತಿ ಸರ್ಕಾರದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ.
ಗೃಹ ಸಚಿವ ಅನಿಲ್ ದೇಶ್ಮುಖ್ ಅವರ ಮೇಲೆ ಇನ್ನೂ ಗಂಭೀರ ಆರೋಪ ಮಾಡಿದ್ದಾರೆ. ಮುಂಬೈನ ಖಾಸಗಿ ಹೊಟೇಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸಂಸದ ಮೋಹನ್ ದೇಲ್ಕರ್ ಸಾವಿಗೂ ಅನಿಲ್ ದೇಶ್ಮುಖ್ ಹೆಸರು ಥಳುಕುಹಾಕಿಕೊಂಡಿದೆ. ‘ಹಿರಿಯ ಅಧಿಕಾರಿಗಳ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದೇನೆ’ ಎಂದು ಆತ್ಮಹತ್ಯಾ ಪತ್ರ ಬರೆದಿದ್ದ ಸಂಸದ ಮೋಹನ್ ದೇಲ್ಕರ್ ಬರೆದುಕೊಂಡಿದ್ದರಂತೆ. ಆದರೆ ಮೋಹನ್ ದೇಲ್ಕರ್ ಅವರ ಸಾವನ್ನು ಆತ್ಮಹತ್ಯೆ ಎಂದೇ ಪ್ರಕರಣ ದಾಖಲಿಸುವಂತೆ ಗೃಹ ಸಚಿವ ಅನಿಲ್ ದೇಶ್ಮುಖ್ ಒತ್ತಡ ಹೇರಿದ್ದರು ಎಂದು ಪರಮ್ವೀರ್ ಸಿಂಗ್ ಆರೋಪಿಸಿದ್ದಾರೆ.
ಅನಿಲ ದೇಶ್ಮುಖ್ಗೆ ನನ್ನ ಮೇಲೆ ಅತ್ಯಂತ ಸಿಟ್ಟಿತ್ತು. ಮೋಹನ್ ದೇಲ್ಕರ್ ಸಾವನ್ನು SIT ಗೆ ನಿಡುವುದಾಗಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ದೇಶ್ಮುಖ್ ತಿಳಿಸಿದ್ದರು ಎಂದು ಪರಮ್ವೀರ್ ಸಿಂಗ್ ಪತ್ರದಲ್ಲಿ ದೂರಿದ್ದಾರೆ.
ಇದನ್ನೂ ಓದಿ: ಮುಂಬೈ ಪೊಲೀಸ್ ಕಮಿಷನರ್ ಹುದ್ದೆ ಕಳೆದುಕೊಂಡ ಪರಮ್ವೀರ್ ಸಿಂಗ್ ಮೈಮೇಲೆ ಎಳೆದುಕೊಂಡಿದ್ದ ವಿವಾದಗಳು ಒಂದೆರೆಡಲ್ಲ..