ಜೈಸಲ್ಮೇರ್: ಭಾರತೀಯ ಸೇನೆಯು ಗುಂಡಿನ ಅಭ್ಯಾಸ ನಡೆಸುತ್ತಿದ್ದ ವೇಳೆ ಮೂರು ಕ್ಷಿಪಣಿಗಳು ನಿಯಂತ್ರಣ ತಪ್ಪಿ ಫೈರಿಂಗ್ ಆಗಿರುವ ಘಟನೆ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ನಡೆದಿದೆ. ಪೋಖ್ರಾನ್ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ಫೈರಿಂಗ್ ಅಭ್ಯಾಸ ನಡೆಯುತ್ತಿದ್ದಾಗ ಮೇಲ್ಮೈಯಿಂದ ಆಕಾಶಕ್ಕೆ ಹಾರುವ ಕ್ಷಿಪಣಿಗಳು ತಾಂತ್ರಿಕ ದೋಷದಿಂದ ಮಿಸ್‌ಫೈರ್ ಆಗಿದ್ದವು. ಮೂರು ಕ್ಷಿಪಣಿಗಳು ವ್ಯಾಪ್ತಿಯಿಂದ ಹೊರಗೆ ಹೋಗಿ ಬೇರೆ ಬೇರೆ ಗ್ರಾಮಗಳ ಹೊಲಗಳಿಗೆ ಅಪ್ಪಳಿಸಿ, ದೊಡ್ಡ ಸ್ಫೋಟಗಳನ್ನು ಉಂಟುಮಾಡಿದವು. ಆದರೆ, ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ.
ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಅಮಿತಾಭ್ ಶರ್ಮಾ ಅವರು ಮಿಲಿಟರಿ ವ್ಯಾಯಾಮದ ಸಮಯದಲ್ಲಿ ಕ್ಷಿಪಣಿಗಳು ತಪ್ಪಾಗಿ ಫೈರಿಂಗ್ ಆಗಿದೆ ಎಂದು ಹೇಳಿದರು. ತನಿಖೆ ಆರಂಭಿಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮಿಸ್‌ಫೈರ್ ಆದ ಎರಡು ಕ್ಷಿಪಣಿಗಳ ಅವಶೇಷಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಇನ್ನೊಂದು ಕ್ಷಿಪಣಿಯ ಅವಶೇಷ ಕಂಡು ಬಂದಿಲ್ಲ, ಈ ಬಗ್ಗೆ ಪೊಲೀಸರು ಮತ್ತು ಸೇನಾ ತಂಡಗಳು ಪ್ರಸ್ತುತ ಮೂರನೇ ಕ್ಷಿಪಣಿಗಾಗಿ ಶೋಧ ನಡೆಸುತ್ತಿವೆ.
ಇದನ್ನೂ ಓದಿ: Indian Army trains kites: ಶತ್ರು ರಾಷ್ಟ್ರಗಳ ಡ್ರೋನ್ ಹೊಡೆದುರುಳಿಸಲು ‘ಅರ್ಜುನ್’ಗೆ ತರಬೇತಿ
10 ರಿಂದ 25 ಕಿಲೋಮೀಟರ್ ವ್ಯಾಪ್ತಿಯ ಕ್ಷಿಪಣಿಗಳನ್ನು ಸೇನೆಯ ತಜ್ಞರು ಪರೀಕ್ಷೆಗೆ ಒಳಪಡಿಸುತ್ತಿದ್ದರು ಆದರೆ ತಾಂತ್ರಿಕ ದೋಷದಿಂದಾಗಿ ಅದರ ಪ್ರಮುಖದಿಂದ ಮಾರ್ಗದಿಂದ ವಿಮುಖವಾಗಿ ಚಲಿಸಿದೆ ಎಂದು ಹೇಳಿದ್ದಾರೆ. ನಚನಾ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಕೈಲಾಶ್ ವಿಷ್ಣೋಯ್ ಘಟನೆಯನ್ನು ದೃಢಪಡಿಸಿದರು ಮತ್ತು ಅಜಸರ್ ಗ್ರಾಮದ ಹೊಲವೊಂದರಲ್ಲಿ ಕ್ಷಿಪಣಿ ಪತ್ತೆಯಾಗಿದೆ ಎಂದು ಹೇಳಿದರು.
Published On - 10:56 am, Sat, 25 March 23