ಪಾಕಿಸ್ತಾನದಲ್ಲಿ ಸಿಖ್​ ಸಮುದಾಯದ ಯುನಾನಿ ವೈದ್ಯನ ಹತ್ಯೆ; ಕ್ಲಿನಿಕ್​​ಗೇ ನುಗ್ಗಿ ಗುಂಡು ಹೊಡೆದ ಬಂದೂಕುಧಾರಿಗಳು

ಪಾಕಿಸ್ತಾನದಲ್ಲಿ ಹಿಂದೂ ಮತ್ತು ಸಿಖ್​ರ ಜೀವಕ್ಕೆ ಪದೇಪದೆ ಅಪಾಯ ಎದುರಾಗುತ್ತಿರುವ ಬೆನ್ನಲ್ಲೇ ಭಾರತೀಯ ವಿಶ್ವ ವೇದಿಕೆ (Indian World Forum -IWF) ಅಧ್ಯಕ್ಷ  ಪುನೀತ್ ಸಿಂಗ್​ ಚಾಂದೋಕ್​ ಆತಂಕ ವ್ಯಕ್ತಪಡಿಸಿ ಟ್ವೀಟ್​ ಮಾಡಿದ್ದಾರೆ.

ಪಾಕಿಸ್ತಾನದಲ್ಲಿ ಸಿಖ್​ ಸಮುದಾಯದ ಯುನಾನಿ ವೈದ್ಯನ ಹತ್ಯೆ; ಕ್ಲಿನಿಕ್​​ಗೇ ನುಗ್ಗಿ ಗುಂಡು ಹೊಡೆದ ಬಂದೂಕುಧಾರಿಗಳು
ಹತ್ಯೆಗೀಡಾದ ಸಿಖ್​ ನಾಯಕ

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದು ಮತ್ತು ಸಿಖ್​ರ ಜೀವ ಸದಾ ಅಪಾಯದಲ್ಲೇ ಇರುತ್ತದೆ. ಅದಕ್ಕೆ ಸಾಕ್ಷಿಯಾಗಿ ಮತ್ತೊಂದು ಘಟನೆ ನಡೆದಿದೆ. ಪಾಕಿಸ್ತಾನದ ವಾಯುವ್ಯ ನಗರ ಪೇಶಾವರ(Peshawar) ದಲ್ಲಿ ಸಿಖ್​ ಸಮುದಾಯ (Sikh Community)ದ ವೈದ್ಯನೊಬ್ಬನನ್ನು ಅಪರಿಚಿತ ಬಂದೂಕುಧಾರಿಗಳು ಹತ್ಯೆಗೈದಿದ್ದಾರೆ. ಸರ್ದಾರ್​ ಸತ್ನಮ್​ ಸಿಂಗ್ (45) ಎಂಬುವರು ಹತ್ಯೆಗೀಡಾದವರು. ಇವರು ಪ್ರಸಿದ್ಧ ಹಕೀಮ್​ ಆಗಿದ್ದು, ಅವರ ಕ್ಲಿನಿಕ್​​ನಲ್ಲಿಯೇ ಹತ್ಯೆ ಮಾಡಲಾಗಿದೆ. (ಹಕೀಮ್​ ಎಂದರೆ ಪಾಕಿಸ್ತಾನದಲ್ಲಿ ಯುನಾನಿ ವೈದ್ಯಕೀಯವನ್ನು ಅಭ್ಯಾಸ ಮಾಡಿದ ವೈದ್ಯ).

ಸರ್ದಾರ್​ ಸತ್ನಮ್​ ಸಿಂಗ್​​ ಅವರು ಕ್ಲಿನಿಕ್​​ನಲ್ಲಿ ಇದ್ದ ಸಮಯದಲ್ಲಿ ಬಂದೂಕು ಹಿಡಿದ ವ್ಯಕ್ತಿಗಳು ಅಲ್ಲಿಗೆ ನುಗ್ಗಿದರು. ಕ್ಲಿನಿಕ್​ ಕ್ಯಾಬಿನ್​​ನ ಬಾಗಿಲು ತೆಗೆದುಹೋಗಿ ಒಂದೇ ಸಮ ಗುಂಡಿನ ದಾಳಿ ನಡೆಸಿದ್ದಾರೆ. ಸಿಂಗ್​ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ದಾಳಿಕೋರರು ತಪ್ಪಿಸಿಕೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.  ಘಟನೆ ನಡೆದ ಜಾಗದ ಸುತ್ತಮುತ್ತ ಪೊಲೀಸ್ ಭದ್ರತೆ ಕಲ್ಪಿಸಲಾಗಿದ್ದು, ಸ್ಥಳ ಪರಿಶೀಲನೆ ನಡೆಯುತ್ತಿದೆ. ಹತ್ಯೆಯ ಹಿಂದಿನ ಕಾರಣ ಗೊತ್ತಾಗಲಿಲ್ಲ. ಯಾರೊಬ್ಬರೂ ಈ ದಾಳಿಯ ಜವಾಬ್ದಾರಿಯನ್ನು ಇದುವರೆಗೂ ಹೊತ್ತಿಲ್ಲ.

ಸರ್ದಾರ್​ ಸತ್ನಾಮ್​ ಸಿಂಗ್​​ ಸಿಖ್​ ಸಮುದಾಯದ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಪೇಶಾವರ್​​ನ ಚರ್ಸದ್ದ ರಸ್ತೆಯಲ್ಲಿ ಧರ್ಮಂದರ್​ ಫಾರ್ಮಸಿ ಎಂಬ ಹೆಸರಿನ ಕ್ಲಿನಿಕ್​ ನಡೆಸುತ್ತಿದ್ದರು. ಕಳೆದ 20ವರ್ಷಗಳಿಂದಲೂ ಈ ಪೇಶಾವರದಲ್ಲಿಯೇ ವಾಸವಾಗಿದ್ದರು. ಇದೀಗ ಅವರ ಹತ್ಯೆಯ ಹಿಂದಿನ ಕಾರಣವನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಇದು ಉಗ್ರರ ಕೃತ್ಯವೋ ಅಥವಾ ಬೇರೆ ಯಾರಾದರೂ ಮಾಡಿದ್ದಾ? ಎಂಬಿತ್ಯಾದಿ ಆಯಾಮಗಳಿಂದ ತನಿಖೆ ಪ್ರಾರಂಭಿಸಿದ್ದಾರೆ.

ಸರ್ದಾರ್​ ಸತ್ನಮ್​ ಸಿಂಗ್​ ಹತ್ಯೆಯನ್ನು ಖೈ ಬರ್ ಪಖ್ತುಂಖ್ವಾ ಪ್ರಾಂತ್ಯದ ಮುಖ್ಯಮಂತ್ರಿ ಮಹಮ್ಮದ್​ ಖಾನ್​ ತೀವ್ರವಾಗಿ ಖಂಡಿಸಿದ್ದಾರೆ. ಹತ್ಯೆಯ ಬಗ್ಗೆ ಸರಿಯಾಗಿ ತನಿಖೆ ನಡೆಸಿ, ಆದಷ್ಟು ಶೀಘ್ರದಲ್ಲೇ ಕೊಲೆಗಾರನನ್ನು ಹಿಡಿಯಬೇಕು ಎಂದು ಪೊಲೀಸರಿಗೆ ಸೂಚಿಸಿದ್ದಾರೆ.  ಇನ್ನು ಪೇಶಾವರದಲ್ಲಿ ಸುಮಾರು 15000 ಮಂದಿ ಸಿಖ್ಖರು ಇದ್ದು, ಬಹುತೇಕರು ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಇನ್ನೂ ಹಲವರು ಹೀಗೆ ಫಾರ್ಮಸಿ, ಕ್ಲಿನಿಕ್​ಗಳನ್ನು ನಡೆಸುತ್ತಿದ್ದಾರೆ. ಹಾಗೇ, ಪೇಶಾವರದಲ್ಲಿ ಸಿಖ್​ರನ್ನು ಪದೇಪದೆ ಟಾರ್ಗೆಟ್​ ಮಾಡಲಾಗುತ್ತಿದೆ. 2018ರಲ್ಲಿ ಸಿಖ್​ ಪ್ರಮುಖ ನಾಯಕ ಚರಣಜಿತ್​ ಸಿಂಗ್​ ಎಂಬುವರನ್ನು ಅಪರಿಚಿತನೊಬ್ಬ ಹತ್ಯೆ ಮಾಡಿದ್ದ. ಹಾಗೇ, 2016ರಲ್ಲಿ ಪಾಕಿಸ್ತಾನ ತೆಹ್ರೀಕ್​-ಇ-ಇನ್ಸಾಫ್​ ಪಕ್ಷದ ಸದಸ್ಯ ಸೋರೆನ್​ ಸಿಂಗ್​​ರನ್ನು ಪೇಶಾವರದಲ್ಲಿಯೇ ಹತ್ಯೆ ಮಾಡಲಾಗಿತ್ತು. 2020ರಲ್ಲಿ ಸುದ್ದಿವಾಹಿನಿಯೊಂದರ ನಿರೂಪಕ ರವೀಂದರ್​ ಸಿಂಗ್​ರನ್ನು ಭೀಕರವಾಗಿ ಕೊಲ್ಲಲಾಗಿತ್ತು.

ಪ್ರಧಾನಿ ಮೋದಿ ಮಧ್ರಪ್ರವೇಶಕ್ಕೆ ಬೇಡಿಕೆ ಇಟ್ಟ ಭಾರತೀಯ ವಿಶ್ವ ವೇದಿಕೆ ಅಧ್ಯಕ್ಷ
ಪಾಕಿಸ್ತಾನದಲ್ಲಿ ಹಿಂದೂ ಮತ್ತು ಸಿಖ್​ರ ಜೀವಕ್ಕೆ ಪದೇಪದೆ ಅಪಾಯ ಎದುರಾಗುತ್ತಿರುವ ಬೆನ್ನಲ್ಲೇ ಭಾರತೀಯ ವಿಶ್ವ ವೇದಿಕೆ (Indian World Forum -IWF) ಅಧ್ಯಕ್ಷ  ಪುನೀತ್ ಸಿಂಗ್​ ಚಾಂದೋಕ್​ ಆತಂಕ ವ್ಯಕ್ತಪಡಿಸಿ ಟ್ವೀಟ್​ ಮಾಡಿದ್ದಾರೆ. ಪಾಕ್​​ನಲ್ಲಿರುವ ಹಿಂದು-ಸಿಖ್​ ಸಮುದಾಯಗಳ ರಕ್ಷಣೆಗೆ ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಹಾಗೇ, ಈ ಅಲ್ಪಸಂಖ್ಯಾತರಿಗೆ ಸೂಕ್ತ ಭದ್ರತೆ ಒದಗಿಸುತ್ತೇವೆಂದು ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಭರವಸೆ ನೀಡಬೇಕು. ವಿಶ್ವಸಂಸ್ಥೆ ಇನ್ನಷ್ಟು ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Charanjit Singh Channi ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕರನ್ನು ಇಂದು ಸಂಜೆ ಭೇಟಿ ಮಾಡಲಿದ್ದಾರೆ ಚರಣ್​​ಜಿತ್ ಸಿಂಗ್ ಚನ್ನಿ

ಹುಬ್ಬಳ್ಳಿ: ತಂದೆ –ತಾಯಿಯನ್ನು ತಬ್ಬಲಿ ಮಾಡಿದ ಮಗ; ಬಡತನಕ್ಕೆ ಹೆದರಿ ಮನೆ ಬಿಟ್ಟು ಪರಾರಿ

 

Read Full Article

Click on your DTH Provider to Add TV9 Kannada