ನಳಂದಾ, ಜುಲೈ 23: ಬಿಹಾರ (Bihar) ರಾಜ್ಯದ ನಳಂದಾ ಜಿಲ್ಲೆಯಲ್ಲಿ 40 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದ ಮೂರು ವರ್ಷದ ಬಾಲಕ ಶಿವಂ ಕುಮಾರ್ನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸತತ 10 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಬೋರ್ವೆಲ್ನಿಂದ ಹೊರತೆಗೆಯುತ್ತಿದ್ದಂತೆ ವೈದ್ಯರ ತಂಡ ಶಿವಂನನ್ನು ತಪಾಸಣೆ ನಡೆಸಿ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.
ಬಾಲಕನನ್ನು ರಕ್ಷಿಸಿದ ನಂತರ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಶಿವಂನನ್ನು ಸದಾರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕೆಲವು ಗಂಟೆಗಳ ಕಾಲ ವೈದ್ಯರ ಮೇಲ್ವಿಚಾರಣೆಯಲ್ಲಿ ಇರಲಿದ್ದಾನೆ. ಹಲವು ಗಂಟೆಗಳ ಕಾಲ ಬೋರ್ವೆಲ್ನಲ್ಲಿನ ಕೆಸರಿನಲ್ಲಿ ಸಿಲುಕಿದ್ದ ಹಿನ್ನೆಲೆ ಪ್ರಥಮ ಚಿಕಿತ್ಸೆ ಬಹಳ ಮುಖ್ಯ ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾದ 110 ಹಳ್ಳಿಗಳಿಗೆ ನೀರಿನ ಕೊರತೆ; ಸಮಸ್ಯೆ ಪರಿಹಾರಕ್ಕೆ 100 ಕೊಳವೆಬಾವಿ ಕೊರೆಯಲು ಪ್ಲ್ಯಾನ್
ದೋಮನ್ ಮಾಂಝಿ ಅವರ ಮೂರು ವರ್ಷದ ಮಗ ಶಿವಂ ಭಾನುವಾರ ಬೆಳಗ್ಗೆ 9 ಗಂಟೆಗೆ ತನ್ನ ತಾಯಿಯೊಂದಿಗೆ ಜಮೀನಿಗೆ ಹೋಗುತ್ತಿದ್ದ. ಈ ವೇಳೆ ಆಟವಾಡುತ್ತಾ ಬೋರ್‌ವೆಲ್‌ನಲ್ಲಿ ಬಿದ್ದಿದ್ದಾನೆ. ಇದನ್ನು ನೋಡಿದ ತಾಯಿ ಕೂಗಾಡಿದ್ದಾರೆ. ಕ್ಷಣಾರ್ಧದಲ್ಲೇ ವಿಷಯ ಹಬ್ಬಿತು. ಜಿಲ್ಲಾಡಳಿತದಿಂದ ಜೆಸಿಬಿ ಯಂತ್ರ ಅಳವಡಿಸಿ ಮಣ್ಣು ಅಗೆಯುವ ಕಾರ್ಯ ಆರಂಭಿಸಲಾಯಿತು. ಕಾರ್ಯಾಚರಣೆಯ ಉದ್ದಕ್ಕೂ ಬಾಲಕನಿಗೆ ಆಮ್ಲಜನಕವನ್ನು ಸರಬರಾಜು ಮಾಡಲಾಗಿತ್ತು. ಇದನ್ನು ಸಿಸಿ ಕ್ಯಾಮೆರಾದ ಮೂಲಕ ಮೇಲ್ವಿಚಾರಣೆ ಮಾಡಲಾಗಿತ್ತು. ಈ ವೇಳೆ ಸ್ಥಳಕ್ಕೆ ಆಗಮಿಸಿದ NDRF ತಂಡ ಬಾಲಕನನ್ನು ಸುರಕ್ಷಿತವಾಗಿ ಹೊರತೆಗೆದಿದೆ.
ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡಗಳು ಆರೇಳು ಜೆಸಿಬಿಗಳ ಸಹಾಯದಿಂದ ಭೂಮಿ ಕೊರೆದು ಬಾಲಕನನ್ನು ರಕ್ಷಿಸಿವೆ. ಸದ್ಯ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಶಾಂಕ್ ಶುಭಂಕರ್ ಹೇಳಿದ್ದಾರೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:20 pm, Sun, 23 July 23