ಪ್ರತಿಯೊಬ್ಬರೂ ಜಲ ಸಂರಕ್ಷಣೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಕರೆ ನೀಡಿದ್ದಾರೆ. ಜಲ ಜೀವನ್ ಮಿಷನ್ ಆ್ಯಪ್ (Jal Jeevan Mission App) ಬಿಡುಗಡೆ ಮಾಡಿದ ಬಳಿಕ, ಗ್ರಾಮ ಪಂಚಾಯತ್, ಗ್ರಾಮೀಣ ನೀರು ಮತ್ತು ನೈರ್ಮಲ್ಯಗಳ ಸಮಿತಿಯೊಂದಿಗೆ ಸಂವಾದ ನಡೆಸಿದ ಅವರು, 2019ರಲ್ಲಿ ಜಲ ಜೀವನ್ ಮಿಷನ್ ಉದ್ಘಾಟನೆಗೊಂಡಾಗಿನಿಂದ ಇದುವರೆಗೆ ಸುಮಾರು 80 ಜಿಲ್ಲೆಗಳ 1.25 ಲಕ್ಷ ಹಳ್ಳಿಗಳ 5 ಕೋಟಿ ಕುಟುಂಬಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದ್ದು, ನಲ್ಲಿ ಮೂಲಕ ನೀರು ಪೂರೈಕೆಯಾಗುತ್ತಿದೆ ಎಂದು ತಿಳಿಸಿದರು.
ಭಾರತದಲ್ಲಿ ನೀರು ಪೂರೈಕೆಗೆ ಸಂಬಂಧಪಟ್ಟರು ಈ ಹಿಂದೆ ಏಳು ದಶಕಗಳಲ್ಲಿ ಮಾಡಿದ್ದಕ್ಕಿಂತ ಹೆಚ್ಚಿನ ಕೆಲಸವನ್ನು ಕಳೆದ ಎರಡು ವರ್ಷಗಳಲ್ಲಿ ಮಾಡಲಾಗಿದೆ ಎಂದು ಹೇಳಿದ ಪ್ರಧಾನಿ, ಜಲ ಜೀವನ್ ಮಿಷನ್ ಕೇವಲ ಜನರಿಗೆ ನೀರು ಸರಬರಾಜು ಮಾಡುವ ಯೋಜನೆಯಲ್ಲ, ಇದೊಂದು ಹಳ್ಳಿಗಳ ಜನರು ಮತ್ತು ಮಹಿಳೆಯರಿಂದ ನಡೆಸಲ್ಪಡುವ ವಿಕೇಂದ್ರೀಕರಣ ಚಳವಳಿ ಎಂದು ಹೇಳಿದರು. ಹಾಗೇ, ಕೊಳವೆ ನೀರಿನ ಸಂಪರ್ಕ 31 ಲಕ್ಷದಿಂದ 1.6 ಕೋಟಿಗೆ ಏರಿಕೆಯಾಗಿದೆ. ಅಗತ್ಯ ಇರುವ ಜಿಲ್ಲೆಗಳಿಗೆ ಇದನ್ನು ಕಲ್ಪಿಸಲಾಗಿದೆ. ದೇಶದ ಯಾವುದೇ ಭಾಗಕ್ಕೆ ಟ್ಯಾಂಕರ್ ಅಥವಾ ರೈಲುಗಳ ಮೂಲಕ ನೀರು ಸರಬರಾಜು ಮಾಡುವ ಸನ್ನಿವೇಶ ಬಾರದಂತೆ ನೋಡಿಕೊಳ್ಳುವುದು ನಮ್ಮ ಕೇಂದ್ರ ಸರ್ಕಾರದ ಆದ್ಯತೆಯಾಗಿದೆ ಎಂದು ತಿಳಿಸಿದರು.
ಹಿಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ ಪ್ರಧಾನಿ ಮೋದಿ, ಅವರಿಗೆಲ್ಲ ತಮ್ಮ ಮನೆಯಲ್ಲಿ ಸಾಕಷ್ಟು ನೀರಿತ್ತು. ಮನೆಯಲ್ಲೇ ಸ್ವಿಮ್ಮಿಂಗ್ ಪೂಲ್ ಇದ್ದು, ಅದರಲ್ಲೂ ಹೇರಳವಾಗಿ ನೀರಿತ್ತು. ಅವರೆಂದೂ ಬಡತನ ನೋಡಿದವರಲ್ಲ. ಬಡತನವೆಂಬುದು ಅವರ ಪಾಲಿಗೆ ಒಂದು ಆಕರ್ಷಣೆಯಾಗಿತ್ತು. ಹಳ್ಳಿಗಳಲ್ಲಿನ ನ್ಯೂನತೆಯನ್ನು ಇಷ್ಟಪಡುತ್ತಿದ್ದರು. ಹಾಗಾಗಿ ಆದರ್ಶ ಗ್ರಾಮ ನಿರ್ಮಾಣಕ್ಕೆ ಎಂದಿಗೂ ಶ್ರಮಿಸಲಿಲ್ಲ ಎಂದು ಹೇಳಿದರು.
ರಾಷ್ಟ್ರೀಯ ಜಲ ಜೀವನ ಕೋಶ್
ಇಂದು ಜಲ ಜೀವನ್ ಮೊಬೈಲ್ ಆ್ಯಪ್ನೊಂದಿಗೆ ರಾಷ್ಟ್ರೀಯ ಜಲ ಜೀವನ ಕೋಶ್ನ್ನೂ ಕೂಡ ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದಾರೆ. ಇದರಡಿಯಲ್ಲಿ ಭಾರತದ ಪ್ರತಿ ಮನೆ, ಶಾಲೆ, ಅಂಗನವಾಡಿ ಕೇಂದ್ರಗಳು, ಆಶ್ರಮಶಾಲೆಗಳು ಸೇರಿ ಇನ್ನಿತರ ಸರ್ಕಾರಿ ಸಂಸ್ಥೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲು ಸಾರ್ವಜನಿಕರು ದೇಣಿಗೆ ನೀಡಬಹುದಾಗಿದೆ. ಯಾವುದೇ ವ್ಯಕ್ತಿ, ಸಂಸ್ಥೆಗಳು, ಎನ್ಜಿಒಗಳು ರಾಷ್ಟ್ರೀಯ ಜಲ ಜೀವನ ಕೋಶ್ ನಿಧಿಗೆ ದೇಣಿಗೆ ಕೊಡಬಹುದು. ವಿದೇಶದಲ್ಲಿದ್ದವರೂ ನೀಡಬಹುದಾಗಿದೆ.
Published On - 4:14 pm, Sat, 2 October 21