ಪ್ರಧಾನಿ ನರೇಂದ್ರ ಮೋದಿಯವರು ಇದೀಗ ಜಲ ಜೀವನ ಮಿಷನ್ (Jal Jeevan Mission) ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಗ್ರಾಮ ಪಂಚಾಯತ್ ಮತ್ತು ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಮಿತಿ, ಪಾನಿ ಸಮಿತಿ (VWSCs)ಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ. ಈ ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ನೀರಿನ ಮಹತ್ವ ತಿಳಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಜಲ ಜೀವನ ಮಿಷನ್ನ ಮೊಬೈಲ್ ಆ್ಯಪ್ ಮತ್ತು ರಾಷ್ಟ್ರೀಯ ಜಲ ಜೀವನ ಕೋಶ್ನ್ನು ಬಿಡುಗಡೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಈ ಯೋಜನೆಗಳ ಉಪಯೋಗದ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಗ್ರಾಮ ಪಂಚಾಯತ್ ಮತ್ತು ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಮಿತಿಗಳಿಗೆ ಅರಿವು ಮೂಡಿಸುತ್ತಿದ್ದಾರೆ. ಹಾಗೇ, ನಮ್ಮ ತಾಯಂದಿರು-ಸಹೋದರಿಯರಿಗೆ ಇನ್ನು ಮುಂದೆ ನೀರಿನ ವಿಚಾರದಲ್ಲಿ ತೊಂದರೆ ಆಗುವುದಿಲ್ಲ ಎಂದೂ ಭರವಸೆ ನೀಡಿದ್ದಾರೆ.
ರಾಷ್ಟ್ರೀಯ ಜಲ ಜೀವನ ಕೋಶ್ ಯೋಜನೆಯಡಿ ಗ್ರಾಮೀಣ ಪ್ರದೇಶಗಳ ಮನೆಗಳು, ಶಾಲೆ, ಅಂಗನವಾಡಿ ಕೇಂದ್ರಗಳಿಗೆ ನೀರಿನ ಪೂರೈಕೆ ಮಾಡುವ ಮಹದುದ್ದೇಶ ಹೊಂದಲಾಗಿದೆ. ಹಾಗೇ, ನಲ್ಲಿಗಳನ್ನು ಅಳವಡಿಸಲಾಗುವುದು ಎಂದು ಈಗಾಗಲೇ ಪ್ರಧಾನಮಂತ್ರಿ ಕಚೇರಿ ತಿಳಿಸಿದೆ. ಹಾಗೇ, ಈ ಕಾರ್ಯಕ್ಕೆ ಯಾವುದೇ ವ್ಯಕ್ತಿ, ಸಂಸ್ಥೆ, ಕಂಪನಿಗಳು ಮತ್ತು ಎನ್ಜಿಒಗಳು ದೇಣಿಗೆ ನೀಡಬಹುದಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2019ರ ಆಗಸ್ಟ್ 15ರಂದು ಈ ಜಲ ಜೀವನ ಮಿಷನ್ನ್ನು ಘೋಷಿಸಿದ್ದರು. ಭಾರತದ ಪ್ರತಿಮನೆಗೂ ಶುದ್ಧ ನೀರಿನ ನಲ್ಲಿಯನ್ನು ಅಳವಡಿಸುವ ಗುರಿ ಹೊಂದಲಾಗಿದೆ. ಈ ಯೋಜನೆ ಪರಿಚಯಿಸುವ ಹೊತ್ತಿಗೆ ಅಂದರೆ 2019ರಲ್ಲಿ ಕೇವಲ 323.23 ಕೋಟಿ ಮನೆಗಳು (ಶೇ.17) ಮಾತ್ರ ನಲ್ಲಿನೀರಿನ ಸೌಲಭ್ಯ ಹೊಂದಿದ್ದವು. ಆದರೆ ಕಳೆದ ಎರಡು ವರ್ಷಗಳಲ್ಲಿ 5 ಕೋಟಿಗೂ ಅಧಿಕ ಮನೆಗಳಿಗೆ ಶುದ್ಧ ನಲ್ಲಿ ನೀರಿನ ಸೌಲಭ್ಯ ಒದಗಿಸಲಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆಯೂ ಯಶಸ್ವಿಯಾಗಿ ಯೋಜನೆಯನ್ನು ಮುನ್ನಡೆಸಲಾಗಿದೆ. ಇದೀಗ ಜಲಜೀವನ ಮಿಷನ್ ಮೊಬೈಲ್ ಆ್ಯಪ್ ಕೂಡ ಬಿಡುಗಡೆ ಮಾಡಿದ್ದಾರೆ. ಅಂದಹಾಗೆ ಈ ಯೋಜನೆಗಾಗಿ ಕೇಂದ್ರ ಸರ್ಕಾರ 3.60 ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡಿದೆ.
ಜಲ ಜೀವನ ಮಿಷನ್ನಿಂದ ಜನಸಂಪರ್ಕ ಈ ಜಲ ಜೀವನ ಮಿಷನ್ ಆ್ಯಪ್ ಬಿಡುಗಡೆಗೂ ಮೊದಲು ಇಂದು ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನದ ನಿಮಿತ್ತ ಗೌರವ ನಮನ ಸಲ್ಲಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ನಾವಿಂದು ಇಬ್ಬರು ಮಹಾನ್ ನಾಯಕರ ಜನ್ಮದಿನ ಆಚರಿಸುತ್ತಿದ್ದೇವೆ. ಅದೇ ಸಮಯದಲ್ಲಿ ಜಲ ಜೀವನ್ ಮಿಷನ್ ಆ್ಯಪ್ ಕೂಡ ಬಿಡುಗಡೆಯಾಗುತ್ತಿದೆ. ಜಲ ಜೀವನ್ ಮಿಷನ್ ಕೇವಲ ನೀರು ನೀಡುವ ಯೋಜನೆಯಲ್ಲ, ಇದು ಜನರನ್ನು ಕೂಡ ಸಂಪರ್ಕಿಸುವ ಚಳವಳಿಯಾಗಿದೆ. ಇಂದು ಬಿಡುಗಡೆಯಾಗಲಿರುವ ಆಪ್ನಿಂದ ಈ ಯೋಜನೆ ಮತ್ತಷ್ಟು ಶಕ್ತಿಯುತ, ಪಾರದರ್ಶಕವಾಗಲಿದೆ. ಹಾಗೇ, ಜಲ ಜೀವನ್ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನೂ ಜನಸಾಮಾನ್ಯರಿಗೆ ಒದಗಿಸಲಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ಜಲ್ ಜೀವನ್ ಮಿಷನ್: ಗ್ರಾಮ ಪಂಚಾಯತ್, ಪಾನಿ ಸಮಿತಿಗಳ ಜತೆ ಪ್ರಧಾನಿ ಮೋದಿ ಸಂವಾದ ನಾಳೆ