ಅದ್ಯಾವ ವೈರಸ್ ವಿಶ್ವಕ್ಕೆ ವಿಶ್ವವನ್ನೇ ನರಕ ಮಾಡ್ತಿದ್ಯೋ.. ಅದ್ಯಾವ ವೈರಸ್ ದೇಶದಿಂದ ದೇಶಕ್ಕೆ ನುಗ್ಗಿ ಬರ್ತಿದ್ಯೋ.. ಅದ್ಯಾವ ವೈರಸ್ ನಮ್ಮ ನೆಲಕ್ಕೂ ಕಾಲಿಟ್ಟಿದ್ಯೋ.. ಅದೇ ಡೆಡ್ಲಿ ವೈರಸ್ ಅಟ್ಟಹಾಸ ಮುಂದುವರಿಸಿದೆ. ಮಹಾಮಾರಿ ವೈರಸ್ ರಣಕೇಕೆಗೆ ಭಾರತದಲ್ಲಿ ಮತ್ತೊಂದು ಬಲಿ ಬಿದ್ದಿದೆ. ಆ ಒಂದು ಸಾವು ಇದೀಗ ಎಲ್ಲರನ್ನೂ ನಡುಗಿಸಿಬಿಟ್ಟಿದೆ.
ಕಿಲ್ಲರ್ ಕೊರೊನಾ ರಣಕೇಕೆಗೆ ದೇಶದಲ್ಲಿ ಎರಡನೇ ಬಲಿ!
ಯೆಸ್.. ಕಿಲ್ಲರ್ ಕೊರೊನಾ.. ಹೆಸರು ಕೇಳಿದ್ರೆ ಉಸಿರೇ ನಿಂತೋದಂಗೆ ಆಗ್ತಿದೆ. ನಮ್ಮೂರಿಗೆ ಬಂದಿದೆ ಅನ್ನೋ ಮಾತು ಭಯ ಹುಟ್ಟಿಸ್ತಿದೆ. ಇಡೀ ಭೂಮಂಡಲವನ್ನೇ ಕಪಿಮುಷ್ಠಿಯಲ್ಲಿಟ್ಕೊಂಡು ಭೂತದ ನಾಡನ್ನಾಗಿ ಮಾಡ್ತಿರೋ ಮಹಾಮಾರಿ ದೇಶದಲ್ಲಿ ಸಾವಿನ ಸಂಚಾರ ಮಾಡ್ತಿದೆ. ಕ್ರೂರಿ ಕೊರೊನಾ ದಾಳಿಗೆ ಕರುನಾಡಿನ ಕಲಬುರಗಿ ಆಯ್ತು.. ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರದಿ.
ಮಹಾಮಾರಿ ವೈರಸ್ ದಾಳಿಗೆ ದೆಹಲಿಯಲ್ಲಿ ವೃದ್ಧೆ ಸಾವು!
ದೆಹಲಿಯಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 69 ವರ್ಷದ ವೃದ್ಧೆ ಆರ್ಎಂಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕಿಗೆ 2ನೇ ಬಲಿಯಾಗಿರೋದು ಎಲ್ಲರನ್ನ ಬೆಚ್ಚಿ ಬೀಳಿಸಿದೆ. ಇಟಲಿಯಿಂದ ಭಾರತಕ್ಕೆ ಬಂದಿದ್ದ ಪುತ್ರನಿಂದ ಆಕೆಗೂ ವೈರಸ್ ದಾಳಿ ಇಟ್ಟಿತ್ತಂತೆ. RML ಆಸ್ಪತ್ರೆಯಲ್ಲಿ ಆತನಿಗೂ ಚಿಕಿತ್ಸೆ ನೀಡಲಾಗ್ತಿದೆ. ವೃದ್ಧೆ ಕೊರೊನಾದಿಂದಲೇ ಮೃತಪಟ್ಟಿರೋ ಬಗ್ಗೆ ಆರೋಗ್ಯ ಸಚಿವಾಲಯ ದೃಢಪಡಿಸಿದೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 84ಕ್ಕೆ ಏರಿಕೆ!
ಕಾಡ್ಗಿಚ್ಚಿನಂತೆ ಕಿಲ್ಲರ್ ಕೊರೊನಾ ಪಕ್ಕದ ರಾಜ್ಯ ಆಂಧ್ರಪ್ರದೇಶಕ್ಕೆ ಕಾಲಿಟ್ಟಿದೆ. ಆಂಧ್ರದಲ್ಲಿ ಕೊರೊನಾ ಸೋಂಕಿತ 2 ಪ್ರಕರಣ ಪತ್ತೆಯಾಗಿದೆ. ಜರ್ಮನಿಯಿಂದ ಬಂದಿದ್ದ ಕೃಷ್ಣಾ ಜಿಲ್ಲೆಯ ವ್ಯಕ್ತಿಯೋರ್ವನಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಇತ್ತ ಅಮೆರಿಕದಿಂದ ವಾಪಾಸಾಗಿದ್ದ ಕರ್ನೂಲ್ ಜಿಲ್ಲೆ ಮಹಿಳೆಯೊಬ್ಬರಿಗೆ ಕೊರೊನಾ ಶಂಕಿತ ಪ್ರಕರಣ ವರದಿಯಾಗಿದೆ. ಅಲ್ಲದೇ, ತೆಲಂಗಾಣದಲ್ಲಿ ಮತ್ತಿಬ್ಬರಲ್ಲಿ ಕೊರೊನಾ ಸೋಂಕು ಪಾಸಿಟೀವ್ ಬಂದಿದೆ. ಶಂಷಾಬಾದ್ ಏರ್ಪೋರ್ಟ್ಗೆ ಇಟಲಿ, ದುಬೈನಿಂದ ಆಗಮಿಸಿದ್ದ ಇಬ್ಬರು ಮಹಿಳೆಯರಿಗೆ ಕೊರೊನಾ ಲಕ್ಷಣಗಳು ಕಂಡು ಬಂದಿದೆ. ಜೊತೆಗೆ ಪುಣೆಯಲ್ಲಿ ಮತ್ತೊಬ್ಬ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಕೊರೊನಾ ಮಟ್ಟಹಾಕಲು ಸಾರ್ಕ್ ದೇಶಗಳಿಗೆ ‘ನಮೋ’ ಕರೆ!
ಕೊರೊನಾ ವೈರಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಸಮರ ಸಾರಿದ್ದಾರೆ. ಪ್ರಪಂಚದಲ್ಲಿ ಅಟ್ಟಹಾಸ ಮೆರೀತಿರೋ ಕೊರೊನಾ ಒದ್ದೋಡಿಸೋಕೆ ನಮೋ ಕರೆ ನೀಡಿದ್ದಾರೆ. ಕೊರೊನಾ ಕಂಟ್ರೋಲ್‌ಗೆ ಜಂಟಿ ಕಾರ್ಯತಂತ್ರ ರೂಪಿಸುವಂತೆ ಸಾರ್ಕ್ ದೇಶಗಳ ನಾಯಕರಿಗೆ ಮೋದಿ ಕರೆ ನೀಡಿದ್ದಾರೆ.
ಸುಪ್ರೀಂಕೋರ್ಟ್ಗೂ ಆವರಿಸಿದ ಕೊರೊನಾ ಕಾರ್ಮೋಡ!
ಕೊರೊನಾ ಕಾರ್ಮೋಡ ಸುಪ್ರೀಂಕೋರ್ಟ್ ಮೇಲೂ ಆವರಿಸಿದೆ. ಕೊರೊನಾ ಸೋಂಕು ಹರಡದಂತೆ ತಡೆಯೋಕೆ ಮಾರ್ಚ್ 16ರಿಂದ ತುರ್ತು ಪ್ರಕರಣಗಳನ್ನ ಮಾತ್ರ ವಿಚಾರಣೆ ನಡೆಸೋಕೆ ಸುಪ್ರೀಂಕೋರ್ಟ್ ನಿರ್ಧರಿಸಿದೆ. ಅಲ್ಲದೆ ಕೋರ್ಟ್ಗೆ ಬರೋ ಪ್ರತಿಯೊಬ್ಬರಿಗೂ ಹಲವು ನಿರ್ಬಂಧಗಳನ್ನ ವಿಧಿಸಲಾಗಿದೆ.
ಕೊರೊನಾ ಕಂಟ್ರೋಲ್‌ಗೆ ಎಲ್ಲಾ ಬಂದ್ ಬಂದ್!
ಇನ್ನು, ಡೆಡ್ಲಿ ವೈರಸ್ ದಾಂಗುಡಿ ಇಟ್ಟಿರೋ ಹೊಡೆತಕ್ಕೆ ಇಡೀ ದೇಶವೇ ಭಯದಲ್ಲಿ ಬೆಂದು ಹೋಗ್ತಿದೆ.. ಕೊರೊನಾ ಕಂಟ್ರೋಲ್‌ಗೆ ಇನ್ನಿಲ್ಲದ ಕ್ರಮ ಕೈಗೊಳ್ಳಲಾಗ್ತಿದೆ. ದೆಹಲಿ, ಹೈದರಾಬಾದ್, ಮುಂಬೈ, ಉತ್ತರಪ್ರದೇಶ ಸೇರಿದಂತೆ ಪ್ರಮುಖ ನಗರಗಳು ಭಯದ ನಾಡಾಗಿವೆ. ಮಾಲ್, ಚಿತ್ರಮಂದಿರ, ಕಾರ್ಯಕ್ರಮಗಳು, ಕ್ರೀಡಾ ಚಟುವಟಿಕಗಳಿಗೆ ಬ್ರೇಕ್ ಹಾಕಲಾಗಿದೆ. ಅಲ್ಲದೆ ಶಾಲಾ-ಕಾಲೇಜ್ಗಳಿಗೂ ರಜೆ ಘೋಷಿಸಲಾಗಿದೆ.
5 ಸಾವಿರ ಗಡಿ ದಾಟಿದ ಕೊರೊನಾ ಸಾವಿನ ಸಂಖ್ಯೆ!
ಕ್ರೂರಿ ಕೊರೊನಾ ಅಟ್ಟಹಾಸಕ್ಕೆ ಜಗತ್ತಿಗೆ ಜಗತ್ತೇ ತಲ್ಲಣಿಸ್ತಿದೆ. ಕೊರೊನಾ ಹೊಡೆತಕ್ಕೆ ಇದುವರೆಗೆ 5397 ಮಂದಿ ಬಲಿಯಾಗಿದ್ದಾರೆ. 1ಲಕ್ಷದ45 ಸಾವಿರದ 114 ಮಂದಿ ಕಿಲ್ಲರ್ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಚೀನಾದಲ್ಲಿ 3177 ಮಂದಿ ಸಾವಿನ ದಾರಿ ಹಿಡಿದಿದ್ದು, ದೈತ್ಯ ರಾಷ್ಟ್ರವೇ ಅಡ್ಡಡ್ಡ ಮಲಗಿದೆ. ಇಟಲಿಯಲ್ಲಿ 1,266 ಮಂದಿ ಕೊರೊನಾ ದಾಳಿಗೆ ಉಸಿರು ನಿಲ್ಲಿಸಿದ್ದಾರೆ. ಹಲವು ರಾಷ್ಟ್ರಗಳೂ ರಕ್ಕಸ ವೈರಸ್ ದಾಳಿಗೆ ಪತರುಗುಟ್ಟಿ ಹೋಗಿವೆ.
ಅಮೆರಿಕದಲ್ಲಿ ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಣೆ!
ಯಮಕಿಂಕರ ವೈರಸ್ ದಾಳಿಗೆ ವಿಶ್ವದ ದೊಡ್ಡಣ್ಣ ಅಮೆರಿಕವೇ ಬಾಯಿ ಬಾಯಿ ಬಿಡ್ತಿದೆ. ಡೆಡ್ಲಿ ವೈರಸ್ ಅಟ್ಟಹಾಸಕ್ಕೆ ಕಂಗೆಟ್ಟಿರೋ ಅಮೆರಿಕದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಕೊರೊನಾ ಕಂಟ್ರೋಲ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಒಟ್ನಲ್ಲಿ ಕೊರೊನಾ ಅನ್ನೋ ಭೂತ ಜಗತ್ತಿನ ಒಂದೊಂದೇ ರಾಷ್ಟ್ರವನ್ನ ತನ್ನ ಕ್ರೂರ ತೆಕ್ಕೆಗೆ ಎಳೆದುಕೊಳ್ತಿದೆ. ಇದೇ ಕೊರೊನಾ ಭಾರತದಲ್ಲಿ ಮತ್ತೊಂದು ಬಲಿ ಪಡೆದಿರೋದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.